ಜಾನ್ ಗಾಲ್ಸ್‌ವರ್ದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಾನ್ ಗಾಲ್ಸ್‌ವರ್ದಿ
 • ಜನನ :14 ರ ಆಗಸ್ಟ್ 1867
 • ಕಿಂಗ್ಸ್ಟನ್ ಥೇಮ್ಸ್, ಮೇಲೆ ಸರ್ರೆ, ಇಂಗ್ಲೆಂಡ್, ಯುಕೆ
 • ಮರಣ :ಜನವರಿ 31, 1933 (65 ನೇ ವಯಸ್ಸಿನಲ್ಲಿ)
 • ಲಂಡನ್, ಇಂಗ್ಲೆಂಡ್, ಯುಕೆ
 • ಉದ್ಯೋಗ : ಲೇಖಕ (ರೈಟರ್)
 • ನಾಗರಿಕತ್ವ : ಬ್ರಿಟಿಷ್
 • ಪ್ರಮುಖ ಪ್ರಶಸ್ತಿಗಳು: ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ
1932

ಜಾನ್ ಗಾಲ್ಸ್‌ವರ್ದಿ (1867-1933)ಯು ಇಂಗ್ಲಿಷ್ ಸಾಹಿತ್ಯದ ಅತ್ಯಂತ ಪ್ರಭಾವಶಾಲಿ ಬರಹಗಾರ, ನಾಟಕಕಾರ ಜಾನ್ ಗಾಲ್ಸ್‌ವರ್ದಿ[[೧]] ೧೯೩೨ರ ನೊಬೆಲ್ ಸಾಹಿತ್ಯ[[೨]] ಪುರಸ್ಕಾರ ದೊರೆಯಿತು.

ಬದುಕು[ಬದಲಾಯಿಸಿ]

ಈತ ಇಂಗ್ಲೆಂಡಿನ ಸರ್ರೆ ಕೌಂಟಿಯ ಕಿಂಗ್ಸ್‍ಟನ್ ಹಿಲ್‍ನಲ್ಲಿ 1867ರಲ್ಲಿ ಹುಟ್ಟಿದ. ತಂದೆ ಜಾನ್ ಗಾಲ್ಸ್‍ವರ್ದಿ ಶ್ರೀಮಂತ ವಕೀಲ, ಹಲವಾರು ಕಂಪನಿಗಳ ನಿರ್ದೇಶಕ. ಅವನ ನಾಲ್ಕು ಜನ ಮಕ್ಕಳಲ್ಲಿ ಈತ ಎರಡನೆಯವ. ಹ್ಯಾರೊ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ, ಆಕ್ಸ್‍ಫರ್ಡಿನಲ್ಲಿ ಲಾ ಪರೀಕ್ಷೆ ತೆಗೆದುಕೊಂಡು ವಕೀಲನಾಗಿ ಲಿಂಕನ್ಸ್‍ಇನ್‍ಗೆ ಸೇರಿದ. ಶಾಲೆಯಲ್ಲಾಗಲಿ ಕಾಲೇಜಿನಲ್ಲಾಗಲಿ ಮುಂದೆ ಪ್ರತಿಭಾವಂತ ಸಾಹಿತಿಯಾಗುವನೆಂಬ ಯಾವ ಲಕ್ಷಣಗಳಾಗಲಿ ಸೂಚನೆಯಾಗಲಿ ಈತನಲ್ಲಿ ಕಂಡಿರಲಿಲ್ಲ. ಅಧ್ಯಯನಕ್ಕಿಂತ ಈತನಿಗೆ ಕ್ರೀಡೆಯ ಆಕರ್ಷಣೆಯೇ ಹೆಚ್ಚಾಗಿತ್ತು. ಫುಟ್‍ಬಾಲ್ ಟೀಮಿನ ಕ್ಯಾಪ್ಟನ್ ಆಗಿದ್ದ. ವಕೀಲಿ ವೃತ್ತಿಯನ್ನು ಆರಂಭಮಾಡಿದ್ದೆಷ್ಟೋ ಅಷ್ಟೆ. ಅದರಲ್ಲಿ ಆಸಕ್ತಿಯಿಲ್ಲದ್ದರಿಂದಲೂ ಮನೆಯ ಕಡೆ ಅನುಕೂಲವಾಗಿದ್ದುದರಿಂದಲೂ ದೂರಪ್ರಾಚ್ಯ ದೇಶಗಳನ್ನು ನೋಡಲು ವ್ಯಾಪಾರಿ ಹಡಗುಗಳಲ್ಲಿ ದೀರ್ಘಪ್ರವಾಸ ಕೈಕೊಂಡ. ಈ ಪರ್ಯಟನ ಕಾಲದಲ್ಲೇ ಜೋಸೆಫ್ ಕಾನ್ರಾಡನ ಸ್ನೇಹವಾಯಿತು. ಈ ಆತ್ಮೀಯತೆ ಗಾಲ್ಸ್ ವರ್ದಿಯ ಬದುಕಿನುದ್ದಕ್ಕೂ ಉಳಿದುಬಂತು.

ಗಾಲ್ಸ್‍ವರ್ದಿ ತುಂಬಾ ರೂಪವತಿಯೂ ಜಾಣೆಯೂ ಆಗಿದ್ದ ಆಡಾ ಎಂಬಾಕೆಯನ್ನು ಮದುವೆ ಆದ. ಈಕೆ ಗಾಲ್ಸ್‍ವರ್ದಿಯ ದಾಯಾದಿ ಆರ್ಥರ್ ಎಂಬುವವನ ಹೆಂಡತಿ. ವಿಕ್ಟೋರಿಯ ಸಮಾಜದ ಸಾಂಪ್ರದಾಯಿಕ ಕಟ್ಟಳೆಯ ಇರುಕಿನಲ್ಲಿ ಸಿಕ್ಕು ಬಲವಂತದ ಮದುವೆಗೆ ಈಡಾಗಿದ್ದವಳು. ಅದೊಂದು ವಿಷಮ ದಾಂಪತ್ಯ ಎಂದು ಗಂಡನ ಕಡೆಯವರೇ ಕಂಡುಕೊಂಡಿದ್ದರು. ತೀವ್ರ ಜುಗುಪ್ಸೆ, ನಿರಾಸೆಗಳಿಗೆ ಗುರಿಯಾಗಿದ್ದ ಈಕೆಯ ಬಗ್ಗೆ ಜಾನ್‍ಗೆ ಹುಟ್ಟಿದ ಕನಿಕರ ಕ್ರಮೇಣ ಅನುರಾಗಕ್ಕೆ ತಿರುಗಿತು. ಅನಂತರ 1905ರಲ್ಲಿ ಆಡಾ ತನ್ನ ಪತಿಯೊಡನೆ ವಿವಾಹವಿಚ್ಛೇದ ಮಾಡಿಕೊಂಡ ಮೇಲೆ ಜಾನ್ ಆಕೆಯನ್ನು ಮದುವೆಯಾದ ಆಕೆ ತುಂಬಾ ಬುದ್ಧಿವಂತೆ. ಸಾಹಿತ್ಯದಲ್ಲಿ ಅಭಿರುಚಿ ಉಳ್ಳವಳು. ಅವಳೇ ಗಾಲ್ಸ್‍ವರ್ದಿಯಲ್ಲಿ ಹುದುಗಿದ್ದ ಸಾಹಿತ್ಯ ಪ್ರತಿಭೆಯನ್ನು ಜಾಗ್ರತಗೊಳಿಸಿ ಆತ ಪುಸ್ತಕಗಳ ಮೇಲೆ ಪುಸ್ತಕ ಬರೆಯುವಂತೆ ಬಾಳಿನುದ್ದಕ್ಕೂ ಸ್ಫೂರ್ತಿ ಕೊಡುತ್ತ ಬಂದಳು. ಅವರ ದಾಂಪತ್ಯ ಪರಸ್ಪರ ಪ್ರೇಮ, ತಿಳಿವಳಿಕೆಗಳಿಂತ ಸುಖಮಯವಾಗಿತ್ತು. ಗಾಲ್ಸ್‍ವರ್ದಿಯ ನಿರ್ವಿಕಾರವಾದ ಸಮಚಿತ್ತದ ಬರೆವಣಿಗೆಗೆ ಈ ಹಿನ್ನೆಲೆ ಬಹುಮಟ್ಟಿಗೆ ಕಾರಣವಾಗಿರಬೇಕು.

ಸಾಹಿತ್ಯ[ಬದಲಾಯಿಸಿ]

ನಾಲ್ಕು ಕಾದಂಬರಿಗಳನ್ನು 'ಜಾನ್ ಸನ್ ಜಾನ್' ಎಂಬ ಗುಪ್ತನಾಮದಲ್ಲಿ ಬರೆದರಉ. ಅವರಿಗೆ ಕೀರ್ತಿ ತಂದುಕೊಟ್ಟ ಕಾದಂಬರಿ 'ಫಾರ್ಸೈಟ್ ಸಾಗಾ' (The Forsyte Saga). ಮೂರು ತಲೆಮಾರಿನ ಈ ಕೃತಿ ಇಂಗ್ಲೆಂಡಿನ ಮಧ್ಯಮವರ್ಗದ ಜೀವನವನ್ನು ವಿವರವಾಗಿ ನಿರೂಪಿಸುತ್ತದೆ.

ಗಾಲ್ಸ್‍ವರ್ದಿಯ ಮೊಟ್ಟಮೊದಲ ಕೃತಿ 1897ರಲ್ಲಿ ಪ್ರಕಟವಾದ ಫೋರ್ ವಿಂಡ್ಸ್ ಎಂಬ ಸಣ್ಣ ಕತೆಗಳ ಸಂಕಲನ. ಅನಂತರ 1898ರಲ್ಲಿ ಜೋಸೆಲಿನ್, 1900ರಲ್ಲಿ ವಿಲ್ಲಾ ರೂಬೆನ್ ಎಂಬ ಎರಡು ಕಾದಂಬರಿಗಳನ್ನು ಈತ ಬರೆದ. ಜಾನ್ ಸಿಂಜಾನ್ ಎಂಬ ಕಾವ್ಯನಾಮದಲ್ಲಿ ಪ್ರಕಟವಾದ ಈ ಕೃತಿಗಳು ಯಾರ ಗಮನವನ್ನೂ ಸೆಳೆಯಲಿಲ್ಲ. ತುಗ್ರ್ಯನೆಫ್‍ನನ್ನು ಮೆಚ್ಚಿದ್ದ ಗಾಲ್ಸ್‍ವರ್ದಿಗೆ ರಷ್ಯದ ಬೃಹತ್ ಕಾದಂಬರಿಗಳ ಮಾದರಿಯಲ್ಲಿ ಬರೆಯಬೇಕೆಂಬ ಆಕಾಂಕ್ಷೆ ಪ್ರಬಲವಾಗಿತ್ತು.

1906ರಲ್ಲಿ ಗಾಲ್ಸ್‍ವರ್ದಿ ದಿ ಮ್ಯಾನ್ ಆಫ್ ಪ್ರಾಪರ್ಟಿ ಎಂಬ ಕಾದಂಬರಿಯನ್ನು ಬರೆದ. ಇದು ಪ್ರಕಟವಾದ ಕೂಡಲೆ ವಿಖ್ಯಾತವಾಯಿತು. ಅದೇ ವರ್ಷ ಈತನ ದಿ ಸಿಲ್ವರ್ ಬಾಕ್ಸ್ ಎಂಬ ಸಾಮಾಜಿಕ ನಾಟಕ ರಂಗದ ಮೇಲೆ ಅತ್ಯಂತ ಯಶಸ್ವಿಯಾಯಿತು.

ಗಾಲ್ಸ್‍ವರ್ದಿಯ ಪ್ರತಿಭೆ ಸಹಜವಾಗಿ ಉಕ್ಕಿಬಂದ ಚಿಲುಮೆಯಲ್ಲ; ಪ್ರಜ್ಞಾಪೂರ್ವಕವಾದ ಸಾಧನೆಯಿಂದ ಆತ ಗಳಿಸಿಕೊಂಡದ್ದು. ಕೃತಿಯ ವಸ್ತುವಿನ ಬಗ್ಗೆ ತುಂಬಾ ಆಲೋಚನೆ ಮಾಡಿ, ನಿಧಾನವಾಗಿ ಕೂತು ಬರೆದು, ಅನಂತರ ಅದನ್ನು ಕಲಾತ್ಮಕ ದೃಷ್ಟಿಯಿಂದ ಪರಾಮರ್ಶಿಸಿ ಕಡೆದು ಮೆರುಗು ಕೊಡುವ ಕಲೆಗಾರಿಕೆ ಆತನದು. ಹೀಗಾದುದರಿಂದಲೇ ಗಾಲ್ಸ್ವರ್ದಿಗೆ ಮಧ್ಯ ವಯಸ್ಸು ಮೀರಿದ ಮೇಲೆಯೇ ಸಾಹಿತ್ಯದ ಸಿದ್ಧಿ ಮತ್ತು ಕೀರ್ತಿ ಲಭಿಸಿದ್ದು. ದಿ ಮ್ಯಾನ್ ಆಫ್ ಪ್ರಾಪರ್ಟಿಯನ್ನು ಬರೆದಾಗ ಅದೊಂದು ಸ್ವಸಂಪೂರ್ಣವಾದ ಕೃತಿ ಎಂದೇ ಭಾವಿಸಿದ್ದ ಗ್ರಂಥಕರ್ತನಿಗೆ ಅನಂತರ ಅದು ಮಹಾ ಕಾದಂಬರಿಯೊಂದರ ಮೊದಲ ಭಾಗವಾಗಲು ತಕ್ಕುದೆಂದು ತೋರಿತು. ಕಾಲ್ಪನಿಕವಾದ ಫಾರ್‍ಸೈಟ್ ಮನೆತನದ ಮೂರು ತಲೆಮಾರಿನ ಕತೆಯನ್ನು ಸವಿಸ್ತಾರವಾಗಿ ಬೆಳೆಸಿಕೊಂಡು 1906 ರಿಂದ 1933 ವರೆಗೂ ಸುಮಾರು 26 ವರ್ಷಗಳ ಕಾಲ ಗಾಲ್ಸ್‍ವರ್ದಿ ಈ ಮಹಾಕಾದಂಬರಿಯನ್ನು ಮುಂದುವರಿಸಿ ಬರೆದ. ಈ ಸುದೀರ್ಘವಾದ ಕೃತಿ ಮೊದಲು ಒಂದೊಂದೇ ಸಂಪುಟವಾಗಿ ಪ್ರಕಟವಾದರೂ ಮೊದಲ ಐದು ಸಂಪುಟ ಸೇರಿದ ಫಾರ್‍ಸೈಟ್ ಸಾಗಾ ಎಂಬ ಹೆಸರಿನಲ್ಲಿ ಒಂದನೆಯ ಭಾಗವಾಯಿತು. ಅನಂತರ ಮತ್ತೆ ಮೂರು ಸಂಪುಟಗಳು ಪ್ರತ್ಯೇಕವಾಗಿ ಬಂದುದಲ್ಲದೆ 1929ರಲ್ಲಿ ಅವನ್ನು ಒಟ್ಟಾಗಿ ಸೇರಿಸಿ ಎ ಮಾಡರ್ನ್ ಕಾಮಿಡಿ ಎಂಬ ಹೆಸರಿನಲ್ಲಿ ಎರಡನೆಯ ಭಾಗವಾಗಿ ಪ್ರಕಟಿಸಲಾಯಿತು. 1931ರಿಂದ 1933ರ ವರೆಗೆ ಬರೆಯಲ್ಪಟ್ಟ ಇನ್ನೂ ಮೂರು ಸಂಪುಟಗಳನ್ನು ಗಾಲ್ಸ್‍ವರ್ದಿಯ ಮರಣಾನಂತರ 1934ರಲ್ಲಿ ಎಂಡ್ ಆಫ್ ದಿ ಚಾಪ್ಟರ್ ಎಂಬ ಶಿರೋನಾಮೆಯಲ್ಲಿ ಮೂರನೆಯ ಭಾಗವಾಗಿ ಪ್ರಕಟಗೊಳಿಸಲಾಯಿತು. ಫಾರ್‍ಸೈಟ್ ಮನೆತನದ ತಲೆಮಾರಿನ ಕತೆಯಾಗಿದ್ದು ಮೇಲಿನ ಮಧ್ಯಮವರ್ಗಕ್ಕೆ ಸೇರಿದ ಇಂಗ್ಲಿಷ್ ಸಿರಿವಂತರ ಕೌಟುಂಬಿಕ ಜೀವನದ ತದ್ವತ್ ಜೀವಂತಪೂರ್ಣವಾದ ಚಿತ್ರವಾಗಿ ಮೂಡಿರುವ ಈ ಮಹಾಕಾದಂಬರಿ ಜಗತ್ತಿನ ಮಹತ್ಕøತಿಗಳಲ್ಲಿ ಒಂದೆಂದು ಪರಿಗಣಿತವಾಗಿದೆ. ಪಾತ್ರ ಸೃಷ್ಟಿಯಲ್ಲಿ, ಚಿತ್ರಣದಲ್ಲಿ ಗಾಲ್ಸ್‍ವರ್ದಿಯ ಅಸಾಧಾರಣವಾದ ಪ್ರತಿಭೆ, ವಿಶೇಷವಾದ ಪರಿಣತಿ ಚೆನ್ನಾಗಿ ವ್ಯಕ್ತವಾಗುತ್ತವೆ. ಇದರಲ್ಲಿ ಬರುವ ಹಿರಿಯ ಫಾರ್‍ಸೈಟ್, ಸೋಮ್ಸ್, ಐರೀನ್ ಮೊದಲಾದ ವ್ಯಕ್ತಿಗಳು ಬಹುಕಾಲ ನೆನಪಿನಲ್ಲಿ ಉಳಿಯುತ್ತಾರೆ. ಈ ಬೃಹತ್ ಕಾದಂಬರಿಯ ಒಂದೊಂದು ಭಾಗವೂ ಒಂದೊಂದು ಸ್ವತಂತ್ರವಾದ ಕಾದಂಬರಿ ಇದ್ದ ಹಾಗೆಯೇ ಇದೆ. ಇವಲ್ಲದೆ ಇತರೆ ಏಳು ಕಾದಂಬರಿಗಳನ್ನು ಗಾಲ್ಸ್‍ವರ್ದಿ ಅನಂತರ ಬರೆದ. ಎಲ್ಲ ಸೇರಿದರೆ ಸುಮಾರು 20 ಕಾದಂಬರಿಗಳಾಗುತ್ತವೆ. ಜೊತೆಗೆ 9 ನಾಟಕಗಳನ್ನೂ, 9 ಪ್ರಬಂಧ ಸಂಕಲನಗಳನ್ನೂ, 7 ಸಣ್ಣ ಕತೆಗಳ ಸಂಕಲನಗಳನ್ನೂ, ಒಂದು ಪತ್ರಗುಚ್ಛವನ್ನೂ ಈ ಸಾಹಿತಿ ರಚಿಸಿದ್ದಾನೆ. ಮರಣಾನಂತರದ ಪ್ರಕಟಣೆಯಾಗಿ ಬಂದ ಈತನ ಒಂದು ಕವನ ಸಂಕಲನ ಗಣನೀಯ ಕಾವ್ಯಗುಣದಿಂದ ಕೂಡಿದ್ದರೂ ಕಾದಂಬರಿ ಮತ್ತು ನಾಟಕಗಳ ಉಜ್ಜ್ವಲತೆಯಲ್ಲಿ ಮರೆಯಾಗಿದೆ.

1921ರಲ್ಲಿ ಸ್ಥಾಪಿತವಾದ ಪಿ.ಇ.ಎನ್. ಕ್ಲಬ್ಬಿನ ಪ್ರಥಮ ಅಧ್ಯಕ್ಷನಾಗಿ ಗಾಲ್ಸ್‍ವರ್ದಿ ಆಯ್ಕೆಯಾದ. ಈ ಮನ್ನಣೆಗೆ ಆತ ಸರ್ವ ವಿಧದಲ್ಲೂ ಯೋಗ್ಯನಾಗಿದ್ದ. ಈ ಸ್ಥಾನದ ಫಲವಾಗಿ ದೂರದ ಅನೇಕ ಸಾಹಿತಿಗಳು ಈತನಿಗೆ ಮಿತ್ರರಾದರು. 1918ರಲ್ಲಿ ತಾನಾಗಿ ಬಂದ ನೈಟ್‍ಹುಟ್ ಗೌರವವನ್ನು ನಿರಾಕರಿಸಿದನಾದರೂ 1929ರಲ್ಲಿ ಆರ್ಡರ್ ಆಫ್ ಮೆರಿಟ್ ಪ್ರಶಸ್ತಿಯನ್ನು ಈತ ತಪ್ಪಿಸಿಕೊಳ್ಳಲಾಗಲಿಲ್ಲ. 1932ರಲ್ಲಿ ವಿಶ್ವದ ಶ್ರೇಷ್ಠಸಾಹಿತ್ಯಕ್ಕೆ ಸಲ್ಲುವ ನೊಬೆಲ್ ಬಹುಮಾನ ಈತನಿಗೆ ಲಭಿಸಿತು. ಆಕ್ಸ್‍ಫರ್ಡ್, ಕೇಂಬ್ರಿಜ್ ಮುಂತಾದ ಹಲವಾರು ವಿಶ್ವವಿದ್ಯಾನಿಲಯಗಳು ಈತನಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನಿತ್ತು ಸನ್ಮಾನಿಸಿದವು.

ಗಾಲ್ಸ್‍ವರ್ದಿ ಶ್ರೇಷ್ಠದರ್ಜೆಯ ಸಾಹಿತಿಯಾಗಿ ಮಾತ್ರವಲ್ಲ. ದಯಾದ್ರ್ರ ಹೃದಯ, ಮಾನವೀಯ ಅನುಕಂಪೆ, ದಾನಶೀಲ ಔದಾರ್ಯ ಮುಂತಾದ ಗುಣ ಸಂಪನ್ನನೂ ಸುಸಂಸ್ಕøತನೂ ಆದ ವ್ಯಕ್ತಿಯಾಗಿ ಪರಿಚಿತರೆಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದ. ತನಗೆ ಬಂದ ನೊಬೆಲ್ ಬಹುಮಾನದ ಹಣವನ್ನೆಲ್ಲ ಪಿ.ಇ.ಎನ್. ಕ್ಲಬ್ಬಿನ ಅಭಿವೃದ್ಧಿಗಾಗಿ ದಾನಮಾಡಿಬಿಟ್ಟ. ಮೊದಲ ಮಹಾಸಮರ ಕಾಲದಲ್ಲಿ ತನ್ನ ಪುಸ್ತಕಗಳಿಂದ ಬರುತ್ತಿದ್ದ ವರಮಾನವೆಲ್ಲ ಯೋಧರ ಪರಿಹಾರನಿಧಿಗೆ ಸೇರುವ ಹಾಗೆ ಏರ್ಪಾಟು ಮಾಡಿದ.

ಸಮಾಜದ ಕ್ರೌರ್ಯ, ತಿರಸ್ಕಾರ, ಶೋಷಣೆಗಳಿಗೆ ಗುರಿಯಾಗಿ ಪರಿತಪಿಸುವ ದೀನ ದಲಿತರ ಕರುಣಾಜನಕ ಪರಿಸ್ಥಿತಿಯನ್ನು ಚಿತ್ರಿಸುವ ಕತೆಗಳೇ ಇವನ ನಾಟಕಗಳ ವಸ್ತು. ಬರೆದುದು ಕೆಲವೇ ನಾಟಕಗಳಾದರೂ ಒಂದೊಂದೂ ಬಹು ಪರಿಣಾಮಕಾರಿಯಾಗಿ ಸಮಾಜದ ಮೇಲೆ ಪ್ರಭಾವವನ್ನು ಬೀರಿತು. ಶ್ರೀಮಂತರಿಗೇ ಒಂದು ರೀತಿ ಬಡವರಿಗೇ ಮತ್ತೊಂದು ರೀತಿಯಾಗಿ ಕಾನೂನನ್ನು ಅನ್ವಯಿಸುವ ನ್ಯಾಯಾಲಯಗಳ ಪಕ್ಷಪಾತವನ್ನು ಕುರಿತ ವಿಡಂಬನೆಯೇ ದಿ ಸಿಲ್ವರ್ ಬಾಕ್ಸ್ ಎಂಬ ನಾಟಕ. ಕಾರ್ಮಿಕರ ಸಮಸ್ಯೆಯನ್ನು ವಿಸ್ಲೇಷಿಸುವ ದಿ ಸ್ಟ್ರೈಫ್ ಎಂಬ ನಾಟಕ ಮತ್ತು ನರಕಗಳಂತಿದ್ದ ಕಾರಾಗೃಹಗಳ ಘೋರಸ್ಥಿತಿಯನ್ನು ಚಿತ್ರಿಸುವ ಜಸ್ಟಿಸ್ ಎಂಬ ನಾಟಕ ಸರ್ಕಾರದ ಗಮನವನ್ನೂ ಸೆಳೆದವು. ಕಾರಾಗೃಹಗಳ ಸ್ಥಿತಿಯನ್ನು ಸುಧಾರಿಸುವ ಅನೇಕ ಕ್ರಮಗಳನ್ನು ಸರ್ಕಾರ ಕೈಕೊಂಡಿತು.

ಗಾಲ್ಸ್‍ವರ್ದಿಗೆ ಕಪಟತನ, ಗೊಡ್ಡು ಸಂಪ್ರದಾಯ ಮತ್ತು ಹೇಡಿತನಗಳನ್ನು ಕಂಡರೆ ಆಗುತ್ತಿರಲಿಲ್ಲ. ಸಮಾಜದ ಹಲವಾರು ಸಮಸ್ಯೆಗಳನ್ನು ಕುರಿತ ಸಮರ್ಪಕವಾದ ವಿಶ್ಲೇಷಣೆಯನ್ನು ಈತನ ಕೃತಿಗಳಲ್ಲಿ ಕಾಣಬಹುದು. ಈ ಸಮಸ್ಯೆಗಳನ್ನು ಮಾನವೀಯ ದೃಷ್ಟಿಯಿಂದ ನೋಡುತ್ತ ನಿಷ್ಪಕ್ಷಪಾತವಾಗಿ ಸಮಾಜದ ವಿಚಾರವಂತರ ಮುಂದಿಡುವುದಷ್ಟೇ ಗಾಲ್ಸ್‍ವರ್ದಿಯ ಉದ್ದೇಶ. ಈತ ಯಾವ ಸಮಸ್ಯೆಗೂ ಪರಿಹಾರವನ್ನು ಸೂಚಿಸುವುದಿಲ್ಲ. ಏಕೆಂದರೆ ಈ ಸಮಸ್ಯೆಗಳಿಗೆ ಪರಿಹಾರ ಅಷ್ಟು ಸರಳವಲ್ಲ, ಸುಲಭವಲ್ಲ ಎಂದು ಈತ ಚೆನ್ನಾಗಿ ವಿಚಾರ ಮಾಡಿ ಮನಗಂಡಿದ್ದ. ಯಾವ ಸಮಸ್ಯೆಗಾದರೂ ಯಾವ ಸಾಮಾಜಿಕ ಅನ್ಯಾಯಕ್ಕಾದರೂ ಯಾವ ಒಬ್ಬ ವ್ಯಕ್ತಿಯಾಗಲಿ ಯಾವ ಒಂದು ವರ್ಗವಾಗಲಿ ಸಂಪೂರ್ಣವಾಗಿ ಹೊಣೆಯಲ್ಲ ಎಂದು ಈತನ ಅಭಿಮತ. ಇದಕ್ಕೇ ಈತ ಯಾರ ಮೇಲೂ ತಪ್ಪು ಹೊರಿಸುವುದಿಲ್ಲ. ಯಾರನ್ನೂ ದೂರುವುದಿಲ್ಲ. ಸಮಾಜದ ವ್ಯವಸ್ಥೆಯಲ್ಲೇ ಕ್ರಾಂತಿಕಾರಕವಾದ ಕೆಲವು ಮೂಲಭೂತ ಬದಲಾವಣೆಗಳಾಗುವುದು ಅಗತ್ಯ. ಸಾಮಾಜಿಕ ಜೀವನ ವ್ಯವಸ್ಥೆಯಾದರೂ ತುಂಬ ಜಟಿಲವಾದುದು. ಯಾವೊಂದು ಆದರ್ಶದ ಸರಳೀಕರಣಕ್ಕೂ ಅದು ಒಳಪಡುವಂಥದಲ್ಲ. ಭಾಗ್ಯಹೀನರು ನಿರಂತರವಾಗಿ ಹೀನಸ್ಥಿತಿಯಲ್ಲೇ ಇರುವಂಥ ಪರಿಸ್ಥಿತಿಗೆ ಇರುವ ಹಲವಾರು ಕಾರಣಗಳು ಇಡೀ ಸಮಾಜದ ರಚನೆಯಲ್ಲಿ ಒಂದಕ್ಕೊಂದು ಜಟಿಲವಾಗಿ ಹೆಣೆದುಕೊಂಡಿರುತ್ತವೆ. ಒಂದು ಕಡೆ ಸಿಕ್ಕು ಬಿಡಿಸಲೆತ್ನಿಸಿದರೆ ಇನ್ನೊಂದು ಕಡೆ ಸಿಕ್ಕುಸಿಕ್ಕಾಗುತ್ತದೆ. ಇದು ಸಾಮಾನ್ಯವಾಗಿ ಗಾಲ್ಸ್‍ವರ್ದಿಯ ವಿಚಾರಸರಣಿ. ಈತ ನಿರಾಶಾವಾದಿಯೇನೊ ಎಂಬ ಸಂಶಯ ಬರಬಹುದು. ಆದರೆ ಅದು ನಿಜವಲ್ಲ. ಈತನಿಗೆ ಮಾನವೀಯತೆಯಲ್ಲಿ ಅಪಾರವಾದ ಶ್ರದ್ಧೆ. ಸದ್ಗುಣ ಸಂಪನ್ನ ಮನುಷ್ಯತ್ವದಲ್ಲಿ ನಂಬಿಕೆ. ಈ ವಿಶ್ವಾಸವಿದ್ದುದರಿಂದಲೇ ಗಾಲ್ಸ್‍ವರ್ದಿ ಸಾಮಾಜಿಕ ಅನ್ಯಾಯದ ವಿರುದ್ಧ ಸೆಣಸುವಂತೆ ಜನರಲ್ಲಿ ಜಾಗೃತಿಯುಂಟು ಮಾಡಿದ.

20ನೆಯ ಶತಮಾನದ ಪೂರ್ವಾರ್ಧ ಅವಧಿ ವಿಚಾರಪ್ರಧಾನವಾದ ಸಾಮಾಜಿಕ ಸಮಸ್ಯಾ ನಾಟಕಗಳ ಯುಗ ಎಂದು ಹೆಸರಾಗಿದೆ. ಈ ಕಾಲದ ಶ್ರೇಷ್ಠ ನಾಟಕಕಾರರಲ್ಲಿ ಗಾಲ್ಸ್‍ವರ್ದಿಯೂ ಒಬ್ಬನಾಗಿದ್ದಾನೆ. ಬರ್ನಾರ್ಡ್ ಷಾನ ನಾಟಕಗಳಲ್ಲಿ ಕಂಡುಬರುವ ಸಂಭಾಷಣಾ ಚಾತುರ್ಯವಾಗಲಿ, ಹಾಸ್ಯದ ಹೊನಲಾಗಲಿ ಈತನ ನಾಟಕಗಳಲ್ಲಿ ಇಲ್ಲ. ತುಂಬ ಗಂಭೀರವೂ ಉದ್ವೇಗರಹಿತವೂ ಆದ ವಸ್ತುನಿಷ್ಠ ಪ್ರತಿಪಾದನೆ ಈತನ ನಾಟಕಗಳ ಲಕ್ಷಣ. ಪಾತ್ರಗಳೂ ಸಂಭಾಷಣೆಯೂ ತೀರ ಸಾಧಾರಣ ಎನ್ನುವಂಥವು. ಆದರೆ ನಾಟಕ ಸಂವಿಧಾನದಲ್ಲಿ ಕಾಣುವ ಅಪೂರ್ವವಾದ ಶಿಲ್ಪಕೌಶಲದಲ್ಲಿ ಗಾಲ್ಸ್‍ವರ್ದಿ. ಸುಸ್ಥಿರವಾದ ಅಸ್ತಿವಾರದ ಮೇಲೆ ತುಂಬ ಕಲಾತ್ಮಕವಾಗಿ ನಿರ್ಮಿಸಿದ ಗೋಪುರದ ಮಾದರಿ ಈತನ ನಾಟಕಗಳ ರಚನಾಶೈಲಿ. ಸಾಹಿತ್ಯಕ್ಕೆ ಇದು ಗಾಲ್ಸ್‍ವರ್ದಿಯ ವಿಶಿಷ್ಟ ಕಾಣಿಕೆ. ಈತನನ್ನು ಸಮಾಜ ಸುಧಾರಕ ಎನ್ನುವುದಕ್ಕಿಂತ ಹೆಚ್ಚಾಗಿ ಶ್ರೇಷ್ಠ ಕಲಾವಿದ ಎನ್ನಬಹುದು. ಸಾಹಿತ್ಯಕ್ಕಿಂತ, ಕಲೆಗಿಂತ ಜೀವನ ದೊಡ್ಡದು ಎಂಬುದಕ್ಕೆ ಗಾಲ್ಸ್‍ವರ್ದಿಯ ವ್ಯಕ್ತಿತ್ವವೇ ತುಂಬಾ ಹಿರಿದಾದುದು. ಈತನ ಸರಸಸಜ್ಜನಿಕೆಗಳಿಂದ ಕೂಡಿದ ಸುಸಂಸ್ಕøತ ನಡವಳಿಕೆ, ಉದಾತ್ತವಾದ ಸ್ವಭಾವ, ತನಗೆ ಬರುತ್ತಿದ್ದ ವರಮಾನದಲ್ಲಿ ಅರ್ಧ ಭಾಗವನ್ನು ದಾನಧರ್ಮಗಳಿಗೆ ವಿನಿಯೋಗಿಸಿ ಉಳಿದರ್ಧ ಭಾಗದಲ್ಲಿ ಸಂತುಷ್ಟ, ಸಂತೃಪ್ತ ಜೀವನವನ್ನು ನಡೆಸುತ್ತಿದ್ದ ಗುಣಸಂಪನ್ನತೆ ಪ್ರಸಿದ್ಧವಾಗಿದೆ.

ಪ್ರಶಸ್ತಿ[ಬದಲಾಯಿಸಿ]

೧೯೧೭ರಲ್ಲಿ ಬ್ರಿಟಿಷ್ ಸರಕಾರ ನೀಡಿದ ನೈಟ್ಹುಡ್ಡ್ [[೩]]ಪದವಿಯನ್ನು ತಿರಸ್ಕರಿಸಿದರು. ನೊಬೆಲ್ ಬಹುಮಾನದಿಂದ ಬಂದ ಹಣವನ್ನು ತಾನು ಸ್ಥಾಪಿಸಿದ್ಧ ಹಾಗೂ ಅದ್ಯಕ್ಷನಾಗಿದ್ದ 'ಪೆನ್'[[೪]] ಸಂಸ್ಥೆಯಯ ದತ್ತಿನಿಧಿಗೆ ಕಾಣಿಕೆಯಾಗಿ ನೀಡಿದರು.

ಉಲ್ಲೇಖ[ಬದಲಾಯಿಸಿ]

 1. https://en.wikipedia.org/wiki/John_Galsworthy
 2. https://www.nobelprize.org/nobel_prizes/literature/laureates/
 3. https://en.wikipedia.org/wiki/Wikipedia:Please_clarify
 4. https://en.wikipedia.org/wiki/PEN_International
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: