ವಿಷಯಕ್ಕೆ ಹೋಗು

ಜಾಕೋಬ್ ಐರೆರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಐರೆರ್, ಜಾಕೋಬ್: ೧೫೪೩-೧೬೦೫.[೧]) ಜರ್ಮನಿನ್ಯೂರೆಂಬರ್ಗ್ನಲ್ಲಿ ಹುಟ್ಟಿದ ಈತ ನಾಟಕಕಾರ. 1570ರಲ್ಲಿ ಬ್ಯಾಂಬರ್ಗ್ ಪಟ್ಟಣಕ್ಕೆ ತೆರಳಿ 1593ರಲ್ಲಿ ನೂರೆಂಬರ್ಗಿಗೆ ಹಿಂದಿರುಗಿದ. ವೃತ್ತಿಯಲ್ಲಿ ವಕೀಲ. ಪುರಸಭಾ ಸದಸ್ಯ ಹಾಗೂ ಸರ್ಕಾರ ವಕೀಲ.

ಕೃತಿಗಳು[ಬದಲಾಯಿಸಿ]

ಸಂಪ್ರದಾಯದ ರೀತಿಯಲ್ಲಿ ಬರೆದ ಬ್ಯಾಂಬರ್ಗ್ ಚರಿತ್ರೆ ಮತ್ತು ಚರ್ಚ್ ಪ್ರಾರ್ಥನಾಗೀತೆಗಳನ್ನು ಬಿಟ್ಟರೆ ಈತ ನೂರಕ್ಕೂ ಹೆಚ್ಚು ನಾಟಕಗಳನ್ನು ರಚಿಸಿದ್ದಾನೆ. ಇವುಗಳಲ್ಲಿ 30 ದುಃಖಾಂತ ಹಾಗೂ ಸುಖಾಂತ ನಾಟಕಗಳು, 36 ಪ್ರಹಸನಗಳು ಮತ್ತಿತರವು ಗೀತನೃತ್ಯಗಳು.

ಶೈಲಿ[ಬದಲಾಯಿಸಿ]

ಪದ್ಯರಚನೆ, ಶೈಲಿಗಳಲ್ಲಿ, ಪಾತ್ರಗಳ ಸರಳ ನಿರೂಪಣೆಯಲ್ಲಿ, ನೀತಿಬೋಧಕ ಪ್ರವೃತ್ತಿಯಲ್ಲಿ, ಸಂಭಾಷಣೆಯ ಅನಾಟಕೀಯತೆಯಲ್ಲಿ, ಕಥೆ ಹೇಳುವ ರೀತಿಯಲ್ಲಿ ನಾಟಕಕಾರ ಹ್ಯಾನ್ಸ್‌ಸ್ಯಾಕ್ಸ್‌ನನ್ನು ಈತ ಹೋಲುತ್ತಾನೆ. ಆದರೆ ಕಥಾನಕಗಳಲ್ಲಿ ಸಣ್ಣಪಟ್ಟ ವಿವರಗಳು ಹೆಚ್ಚಾಗಿ ಅವು ಸಪ್ಪೆಯಾಗಿವೆ. ಎಲಿಜ಼ಬೆತ್ ಕಾಲದ ನಾಟಕಗಳನ್ನು, ಜರ್ಮನಿಯಲ್ಲಿ 16ನೆಯ ಶತಮಾನದ ಉತ್ತರಾರ್ಧ ಹಾಗೂ 17ನೆಯ ಶತಮಾನದ ಆದಿಯಲ್ಲಿ, ಇಂಗ್ಲಿಷ್ ನಟರು ಪ್ರದರ್ಶಿಸುತ್ತಿದ್ದರು. ಈ ಪ್ರದರ್ಶನಗಳಲ್ಲಿ ನಾಜೂಕಿಲ್ಲದಿದ್ದರೂ ರಂಗದ ಮೇಲೆ ಇವು ಪ್ರಭಾವಯುತವಾಗಿದ್ದುವು. ರಂಗದ ಮೇಲೆ ಹೊರ ಚಲನವಲನಗಳಿಗೆ, ಉದ್ರಿಕ್ತ ಘಟನೆಗಳಿಗೆ, ಪ್ರದರ್ಶನಯುಕ್ತ ಪ್ರಭಾವಗಳಿಗೆ ಹೆಚ್ಚು ಗಮನವೀಯುವುದನ್ನು ಐರೆರ್ ಇಂಗ್ಲಿಷ್ ನಾಟಕಗಳಿಂದ ಕಲಿತ. ಸಾಂಪ್ರದಾಯಿಕವಾಗಿ ದುಃಖಾಂತ ನಾಟಕಗಳಲ್ಲೂ ಕಾಣಿಸಿಕೊಳ್ಳುತ್ತಿದ್ದ ಹಾಸ್ಯನಟ. ಇಂಗ್ಲಿಷ್ ನಾಟಕಗಳಲ್ಲಿರುವಂತೆ ವಿದೂಷಕನಾಗಿ ಮಾರ್ಪಾಡಾದ.

ಪ್ರಭಾವ[ಬದಲಾಯಿಸಿ]

ಗ್ರೀಕ್ ನಾಟಕದ ಮೇಳದವರ ಹಾಡಿನ ಲಯದಂತೆ ಸಾಂಪ್ರದಾಯಿಕ ರಾಗಗಳನ್ನೊಳಗೊಂಡ ಗೀತನೃತ್ಯಗಳನ್ನು ಇಂಗ್ಲಿಷ್ ನೃತ್ಯಗಳ ರೀತಿಯಲ್ಲಿ ರಚಿಸಿದ. ಇದಕ್ಕೆ ಇಂಗ್ಲಿಷ್ ನೃತ್ಯಗಳಿಂದ ಸಮೃದ್ಧಿಯಾಗಿ ಕಥಾವಸ್ತು ದೊರೆಯಿತು. ಜರ್ಮನಿಯ ಕಥೆಗಳು, ಲಿಪಿ, ಬೊಕ್ಯಾಚಿಯೊರವರ ಕೃತಿಗಳು, ನಿತ್ಯ ಜೀವನದ ಹಾಸ್ಯ ಸನ್ನಿವೇಶಗಳೂ ಐರೆರ್ಗೆ ಸ್ಫೂರ್ತಿಯನ್ನಿತ್ತವು. ಹಲವು ನೂತನ ಲಕ್ಷಣಗಳಿದ್ದರೂ ಈತ ಹಳೆಯ ಸಂಪ್ರದಾಯದ ಕೊನೆಯ ಕವಿಯಾದ.ಷೇಕ್ಸ್‌ಪಿಯರನ ನಾಟಕಗಳು ಐರೆರ್ಗೆ ಸ್ಫೂರ್ತಿಯನ್ನಿತ್ತುವು. ಅವುಗಳಂತೆ ತನ್ನ ನಾಟಕಗಳಲ್ಲೂ ಅನೇಕ ಕಥಾನಕಗಳನ್ನು ಹಾಸುಹೊಕ್ಕಾಗಿ ಬಳಸಿದರೂ ಕೃತಿ ರಚನೆಯಲ್ಲಿ ಷೇಕ್ಸ್‌ಪಿಯರನ್ನು ಮೀರಿಸಲಾಗಲಿಲ್ಲ.

ಈತನ 69 ನಾಟಕಗಳನ್ನು 1618ರಲ್ಲಿ ಒಟ್ಟಿಗೆ ಪ್ರಕಟಿಸಲಾಯಿತು. ಜರ್ಮನ್ ನಾಟಕದ ಕಥೆ ಹೇಳುವ ದಾಟಿಯನ್ನು, ಅದರ ದ್ವಿಪದಿಪ್ರಾಸ ರೀತಿಯನ್ನು ಇಂಗ್ಲಿಷ್ ಸುಖಾಂತ ನಾಟಕದ ತಂತ್ರ ಹಾಗೂ ಉದ್ವಿಗ್ನತೆಯನ್ನು ಐರೆರ್ ಬೆರೆಸಲು ಯತ್ನಿಸಿದ. ಹ್ಯಾನ್ಸ್‌ ಸ್ಯಾಕ್ಸ್‌ನನ್ನು ಅನುಕರಣ ಮಾಡಲು ಯತ್ನಿಸಿದರೂ ಆತನ ಸ್ವೋಪಜ್ಞತೆ, ಚತುರೋಕ್ತಿ, ಅಲಂಕಾರಿಕ ಶೈಲಿ ಐರೆರ್ಗೆ ಲಭಿಸಲಿಲ್ಲ

ಉಲ್ಲೇಖಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
  1. "Ayrer, Jakob der Jüngere". Deutsche Bibliographie. Retrieved 2 October 2016.