ಜರ್ಬರ್ ಪರೀಕ್ಷೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜರ್ಬರ್ ಪರೀಕ್ಷೆ - ಹಾಲಿನಲ್ಲಿರುವ ಕೊಬ್ಬಿನ ಪ್ರಮಾಣವನ್ನೂ ಅದು ಸಾಮಾನ್ಯವಾಗಿರಬೇಕಾದ ಪರಿಮಾಣದಲ್ಲಿದೆಯೇ ಅಥವಾ ಕಡಿಮೆಯಾಗಿದೆಯೇ ಎಂಬುದನ್ನೂ ಕಂಡುಹಿಡಿಯಲು ಉಪಯೋಗಿಸುವ ಪ್ರಯೋಗಗಳಲ್ಲಿ ಒಂದು. ಹಾಲಿನಲ್ಲಿ ಸೇರಿಸಿರಬಹುದಾದ ನೀರಿನ ಮೊತ್ತವನ್ನು ಈ ಪರೀಕ್ಷೆಯಿಂದ ಪತ್ತೆ ಹಚ್ಚಬಹುದು.

ತತ್ವ[ಬದಲಾಯಿಸಿ]

ಜರ್ಬರ್ ಪರೀಕ್ಷೆಯ ಸಾಮಾನ್ಯ ತತ್ತ್ವವೇನೆಂದರೆ ಅಪಕೇಂದ್ರ ಬಲದ ಸಹಾಯದಿಂದ ಕ್ಷೀರಲಸದಿಂದ ಕೊಬ್ಬನ್ನು ಸಲ್ಛ್ಯೂರಿಕ್ ಆಮ್ಲವನ್ನು ಉಪಯೋಗಿಸಿ ಪ್ರತ್ಯೇಕಿಸುವುದು. ಲಸದಲ್ಲಿರುವ ಇತರ ಕ್ಷೀರಸತ್ವಗಳಿಂದಲೂ ಕೊಬ್ಬನ್ನು ಪ್ರತ್ಯೇಕಿಸಲು ಅದಕ್ಕೆ ಅಲ್ಪ ಪ್ರಮಾಣದಲ್ಲಿ ಅಮೈಲ್ ಆಲ್ಕೊಹಾಲ್ ಎಂಬ ದ್ರವವನ್ನು ಸೇರಿಸುತ್ತಾರೆ. ಹೀಗೆ ಬೇರೆ ಮಾಡಲ್ಪಟ್ಟ ಕೊಬ್ಬು ಈ ಕೆಲಸಕ್ಕೆಂದೇ ಇರುವ ಅಪಕೇಂದ್ರಕದಲ್ಲಿ ಪರಿಭ್ರಮಿತವಾದ ಮೇಲೆ ಟೆಸ್ಟ್ ಬಾಟಲಿನ (ಬ್ಯೂಟಿಕೋಮೀಟರ್) ನಾಳದಲ್ಲಿ ಸಂಗ್ರಹವಾಗುತ್ತದೆ. ಬ್ಯೂಟಿಕೋಮೀಟರಿನ ನಾಳದಲ್ಲಿ ನಿಲ್ಲುವ ಕೊಬ್ಬಿನ ಮಟ್ಟವನ್ನು ಅಳೆಯುವುದರಿಂದ ಕೊಬ್ಬಿನ ಸೇಕಡಾವಾರು ಮೊತ್ತವನ್ನು ಗೊತ್ತುಪಡಿಸಬಹುದು.

ವಿಧಾನ[ಬದಲಾಯಿಸಿ]

0.815ರಷ್ಟು ಅಪೇಕ್ಷಿತ ಸಾರತೆ ಇರುವ 10 mI ಸಲ್ಛ್ಯೂರಿಕ್ ಆಮ್ಲವನ್ನು ಪಿಪೆಟ್ಟಿನಲ್ಲಿ ಅಳೆದು ಶುದ್ಧವಾದ ಬ್ಯೂಟಿಕೋಮೀಟರಿನೊಳಕ್ಕೆ ಹಾಕಬೇಕು. ಹಾಲಿನ ಸೀಸೆಯನ್ನು ಕುಲುಕಿ ಪರೀಕ್ಷಿಸಬೇಕಾದ ಹಾಲನ್ನು ಚೆನ್ನಾಗಿ ಬೆರೆಸಬೇಕು. ವಿಶಿಷ್ಟ ರಚನೆಯ ಇನ್ನೊಂದು ಪಿಪೆಟ್ಟಿನ ಮೂಲಕ 11 mI. ಹಾಲನ್ನು ಅದೇ ಮೀಟರಿಗೆ ಸುರಿಯಬೇಕು. ಬಳಿಕ ಮೂರನೆಯ ಪಿಪೆಟ್ಟಿನ ಮೂಲಕ 1mI. ಅಮೈಲ್ ಆಲ್ಕೊಹಾಲನ್ನು ತೆಗೆದುಕೊಂಡು ಎಚ್ಚರಿಕೆಯಿಂದ ಮೀಟರಿಗೆ ವರ್ಗಾಯಿಸಬೇಕು. ಆಮ್ಲವನ್ನಾಗಲಿ ಹಾಲನ್ನಾಗಲಿ ಅಮೈಲ್ ಆಲ್ಕೊಹಾಲನ್ನಾಗಲಿ ಬ್ಯೂಟಿಕೋಮೀಟರಿಗೆ ವರ್ಗಾಯಿಸುವಾಗ ಅದರ ಕೊರಳಿನ ಒಳಭಾಗ ತೇವವಾಗಕೂಡದು. ಬ್ಯೂಟಿಕೋಮೀಟರಿನ ರಬ್ಬರ್ ಮುಚ್ಚಳವನ್ನು ಗಟ್ಟಿಯಾಗಿ ತಿರುವಬೇಕು. ಆಮ್ಲದಿಂದ ಉಂಟಾದ ಗರಣಿಯೆಲ್ಲ ಸಂಪೂರ್ಣವಾಗಿ ಕರಗಿ, ಆ ದ್ರವದಲ್ಲಿನ ಯಾವ ಬಿಳಿ ಕಣವೂ ಇಲ್ಲದಿರುವವರೆಗೂ ಅದನ್ನು ಕುಲುಕಬೇಕು. ಬಳಿಕ ಅದನ್ನು ಅಪಕೇಂದ್ರಕದಲ್ಲಿ ರಬ್ಬರ್ ತಿರುಪು ಹೊರಗಿರುವಂತೆ ಇಟ್ಟು ಮಿನಿಟಿಗೆ 1100 ಸುತ್ತುಗಳ ದರದಲ್ಲಿ ನಾಲ್ಕೈದು ಮಿನಿಟುಗಳವರೆಗೆ ಅಪಕೇಂದ್ರಕವನ್ನು ಸುತ್ತಿಸಬೇಕು. ಬಳಿಕ ಮೀಟರುಗಳನ್ನು ಅಲುಗಾಡಿಸದೆ 68ºಈ. ಉಷ್ಣತೆಯುಳ್ಳ ನೀರಿನಲ್ಲಿ ಬಿರಟೆಗಳು ಕೆಳಮೊಗವಾಗಿರುವಂತೆ ಎರಡು ಮಿನಿಟುವರೆಗಾದರೂ ಮುಳುಗಿಸಿಡಬೇಕು. ಅನಂತರ ನೀರಿನಿಂದ ಮೇಲಕ್ಕೆ ತೆಗೆದು ಬ್ಯೂಟಿಕೋಮೀಟರಿನ ನಾಳದಲ್ಲಿ ಸಂಗ್ರಹವಾಗಿರುವ ಕೊಬ್ಬಿನ ಮೊತ್ತವನ್ನು ಗೊತ್ತುಮಾಡಬೇಕು. ಇದರಿಂದ ಪರೀಕ್ಷೆಗೆ ತೆಗೆದುಕೊಂಡ ಹಾಲಿನಲ್ಲಿ ಸೇಕಡ ಎಷ್ಟು ಕೊಬ್ಬು ಇದೆ ಎಂಬುದು ಗೊತ್ತಾಗುತ್ತದೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: