ಜರಿಮಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜರಿಮಲೆ ಗ್ರಾಮ ಪಾಳೆಗಾರರ ಗತವೈಭವದ ಸ್ಥಳ. ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯಿಂದ ಸುಮಾರು ೧೪ ಕಿ.ಮೀ ದೂರವಿರುವ ಜರಿಮಲೆ ಗುಡ್ಡಗಾಡುಗಳಿಂದ ಆವೃತವಾದ ಪುಟ್ಟ ಗ್ರಾಮ. ಈ ಗ್ರಾಮ ಪಾಳೆಯಗಾರರ ಸ್ಥಳವೆನ್ನುವುದರ ಜೊತೆಗೆ, ಸಿಹಿಯಾದ ಸೀತಾಫಲ ಹೊಂದಿರುವ ಗ್ರಾಮವೆಂದೂ ಖ್ಯಾತಿ ಪಡೆದಿದೆ. ಜರಿಮಲೆಯನ್ನು ಆಳಿದ ಮೂಲ ವಂಶಜರ ಮಾಹಿತಿ ದೊರೆಯುವುದಿಲ್ಲ. ಆದರೆ ನಂತರದ ಇತಿಹಾಸದ ಪುಟಗಳು ವಿವಿಧ ಮೂಲಗಳಿಂದ ಲಭ್ಯವಾಗುತ್ತವೆ. ಸಂಶೋಧಕ ಡಾ.ವಿರುಪಾಕ್ಷಿ ಪೂಜಾರಹಳ್ಳಿಯವರ ಅಭಿಮತದಂತೆ ಭೂಮರಾಜನೆಂಬ ನಾಯಕ ಬೇಟೆಗೆ ಹೋದಾಗ ಉಜ್ಜಯಿನಿಯ ಸಿದ್ಧೇಶ್ವರ ಸ್ವಾಮಿಗಳ ಕೃಪಾಶೀರ್ವಾದದೊಂದಿಗೆ ಜರಿಮಲೆ ಸಂಸ್ಥಾನವನ್ನು ಸ್ಥಾಪಿಸಿದ ಎಂದು ಹೇಳುತ್ತಾರೆ. ಜರಿಮಲೆ ನಾಯಕರ ಪೂರ್ವಿಕರು ಆಂಧ್ರದ ಕಂಚಿ, ಕದ್ರಿಯಿಂದ ಬಂದವರೆಂದೂ, ಮತ್ತೊಂದು ಮೂಲದಂತೆ ಕುಮಾರರಾಮನ ವಂಶಜರೆಂದೂ ತಿಳಿದುಬರುತ್ತದೆ. ಏನೇ ಇರಲಿ ಜರಿಮಲೆ ನಾಯಕರು ಹರಪನಹಳ್ಳಿ, ಚಿತ್ರದುರ್ಗ, ಗುಡೇಕೋಟೆ ಪಾಳೆಯಗಾರರ ಜೊತೆಗೂಡಿ ಆಳ್ವಿಕೆ ನಡೆಸಿದ್ಧರೆಂದು ತಿಳಿದುಬರುತ್ತದೆ. ೧೬ನೇ ಶತಮಾನದಿಂದಲೇ ಜರಿಮಲೆಯನ್ನು ನಾಯಕರು ಆಳುತ್ತಿದ್ದರೆಂದು ಸಂಶೋಧಕರಿಂದ ತಿಳಿದುಬರುವ ವಿಚಾರ. ಚಿತ್ರದುರ್ಗದ ನಾಯಕರು ಜರಿಮಲೆ ನಾಯಕರೊಂದಿಗೆ ವೈವಾಹಿಕ ಸಂಬಂಧವನ್ನು ಬೆಳೆಸಿದ್ದರೆಂದೂ ಇತಿಹಾಸದಿಂದ ತಿಳಿದುಬರುತ್ತದೆ. ಡಾ.ವಿರುಪಾಕ್ಷಿ ಪೂಜಾರಹಳ್ಳಿಯವರು ತಿಳಿಸುವಂತೆ, ಜರಿಮಲೆಯನ್ನು ಆಳಿದ ಅರಸರೆಂದರೆ, ಪಾಪಣ್ಣನಾಯಕ, ಬಸವಂತರಾಜ, ಭೂಮಿರಾಜ, ಬೂದಿಸಿದ್ದರಾಜ, ಬೊಮ್ಮಂತರಾಜ, ಇಮ್ಮಡಿನಾಯಕ ಈತನ ಮಕ್ಕಳಾದ ಬೊಮ್ಮಣ್ಣನಾಯಕ, ಮ್ಲಲಿಕಾರ್ಜುನನಾಯಕ, ಇಮ್ಮಡಿನಾಯಕ. ಇವರೆಲ್ಲ ಜರಿಮಲೆ ಬೆಟ್ಟ ಪ್ರದೇಶದಲ್ಲಿ ಕೋಟೆಯನ್ನು ಕಟ್ಟಿಕೊಂಡು, ಪ್ರಜೆಗಳಿಗೆ ವಾಸಕ್ಕೆ ಮನೆ, ಕೆರೆ, ಬಾವಿಗಳನ್ನು ನಿರ್ಮಿಸಿದರು. ಬೆಟ್ಟದ ತುದಿಯಲ್ಲಿ ಪಾಳೆಯಗಾರರ ಕುರುಹುಗಳಾದ ಅರಮನೆಯ ಅಡಿಪಾಯ, ಜನ ವಸತಿಯ ಕುರುಹುಗಳು, ನೀರಿನ ಹೊಂಡ, ಕೋಟೆ ಆವರಿಸಿರುವ ಶಿಥಿಲ ಗೋಡೆಗಳು ಇಂದಿಗೂ ಕಾಣಸಿಗುತ್ತವೆ. ಅಲ್ಲದೆ ಪಾಳೆಯಗಾರರು ಪೂಜಿಸುತ್ತಿದ್ದ ಶಿವ ದೇವಾಲಯವಿದೆ. ಜರಿಮಲೆ ನಾಯಕರಿಗೂ ಉಜ್ಜಯಿನಿಯ ಪೀಠಕ್ಕೂ ಮೊದಲಿನಿಂದಲೂ ಅವಿನಾಭಾವ ಸಂಬಂಧವಿದೆ. ಜರಿಮಲೆ ಸಂಸ್ಥಾನ ಸ್ಥಾಪನೆಗೆ ಉಜ್ಜಯಿನಿಯ ಸ್ವಾಮಿಗಳು ಹೇಗೆ ಕಾರಣಕರ್ತರಾದರೋ, ಅಂತೆಯೇ ಸ್ವಾಮಿಗಳ ಶಾಪದಿಂದಾಗಿ ಇಂದಿಗೂ ಜರಿಮಲೆ ನಾಯಕರ ವಂಶಸ್ಥರು ಉಜ್ಜಯಿನಿಯ ದೇವಸ್ಥಾನಕ್ಕೆ ಬಂದು ದರ್ಶನ ಪಡೆಯುವಂತಿಲ್ಲ. ಇದು ಇಂದಿಗೂ ಅನೂಚಾನವಾಗಿ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. ನಾಯಕರ ವಂಶಸ್ಥರು ದರ್ಶನ ಪಡೆದರೆ ಕೇಡಾಗುವುದೆಂಬ ಭಯವೂ ಇದೆ. ಮತ್ತೊಂದು ಆಸಕ್ತಿಕರ ವಿಷಯವೆಂದರೆ, ಜರಿಮಲೆ ವಂಶದ ನಾಯಕರು ಬೇಟೆಗೆ ಹೋದಾಗ, ಉಜ್ಜಯಿನಿ ಸಿದ್ಧೇಶ್ವರ ಸ್ವಾಮಿಗಳಿಗೆ ತಿಳಿಯದೆ ಬಾಣ ಬಿಟ್ಟುದರಿಂದ, ಸ್ವಾಮಿಗಳ ತಲೆಗೆ ಪೆಟ್ಟಾಯಿತು. ವಿಷಯ ತಿಳಿದ ನಾಯಕರು ನೊಂದು ಸ್ವಾಮಿಗಳ ತಲೆಗೆ ತೈಲವನ್ನು ಹಚ್ಚಿ ಉಪಚರಿಸುತ್ತಾರೆ. ಇದರ ಸಂಕೇತವಾಗಿ ಇಂದಿಗೂ ಪ್ರತಿವರ್ಷ ವೈಶಾಖ ಶುದ್ಧ ೬ರಂದು ಸಿದ್ಧೇಶ್ವರ ಸ್ವಾಮಿಯ ಜಾತ್ರೆಯ ದಿನದಂದು ದೇವಸ್ಥಾನದ ಶಿಖರಕ್ಕೆ ತೈಲವನ್ನೆರೆಯುವ ಸಂಪ್ರದಾಯವಿದೆ. ದಕ್ಷಿಣ ಭಾರತದಲ್ಲಿಯೇ ದೇವಸ್ಥಾನದ ಗೋಪುರಕ್ಕೆ ಎಣ್ಣೆಯನ್ನು ಎರೆಯುವ ಸಂಪ್ರದಾಯವಿರುವುದು ಉಜ್ಜಯಿನಿಯ ದೇವಸ್ಥಾನದ್ಲಲಿ ಮಾತ್ರ. ವಿಶೇಷವೆಂದರೆ, ಪ್ರತಿವರ್ಷವೂ ಜರಿಮಲೆ ನಾಯಕರ ವಂಶಸ್ಥರು ಒಂದು ದಡಿ ಎಣ್ಣೆಯನ್ನು ದೇವಸ್ಥಾನದ ಶಿಖರಕ್ಕೆ ಎರೆಯಲು ಕಳಿಸುತ್ತಾರೆ. ಪ್ರಥಮವಾಗಿ ನಾಯಕರು ಕಳಿಸಿದ ಎಣ್ಣೆಯನ್ನು ಶಿಖರಕ್ಕೆ ಎರೆದ ನಂತರವೇ ಮುಂದಿನ ಕಾರ್ಯಕ್ರಮ. ಹೀಗೆ ಉಜ್ಜಯಿನಿ ಹಾಗೂ ಜರಿಮಲೆಯ ವಂಶಸ್ಥರಿಗೂ ಅವಿನಾಭಾವ ಸಂಬಂಧವಿರುವುದೂ ವಿಶೇಷವಾಗಿದೆ. ಜರಿಮಲೆಯ ನಾಯಕರ ಕೊನೆಯ ಕೊಂಡಿಯಾಗಿ ಗ್ರಾಮದಲ್ಲಿ ಸಿದ್ದಪ್ಪನಾಯಕರು ಇದ್ದಾರೆ. ಹೆಸರಿಗಷ್ಟೇ ಜರಿಮಲೆ ಪಾಳೆಯಗಾರರ ವಂಶಸ್ಥರು. ಉಳಿದಂತೆ ಇವರದು ಗ್ರಾಮದ ಒಂದು ಬಡಕುಟುಂಬ. ಸರ್ಕಾರದಿಂದ ಯಾವುದೇ ರೀತಿಯ ಸೌಲಭ್ಯಗಳನ್ನು ಪಡೆಯದ ಬಡ ರಾಜರಿವರು. ಆರ್ಥಿಕ ಮುಗ್ಗಟ್ಟಿನಿಂದ ಬಳಲುವ ಸಿದ್ದಪ್ಪನಾಯಕರು ಇಂದಿಗೂ ಗ್ರಾಮಸ್ಥರಿಂದ ರಾಜರೆಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಒಂದೆಡೆ ಪಾಳೆಯಗಾರರ ಅಳಿದುಹೋದ ವೈಭವದ ಪಳೆಯುಳಿಕೆಗಳು ಕಂಡರೆ, ಗ್ರಾಮದಲ್ಲಿ ಮತ್ತೊಂದೆಡೆ ಅಳಿದುಹೋದ ವೈಭವದ ಸಂಕೇತವಾಗಿ ನಾಯಕರ ಸಂತತಿಯ ಸಿದ್ದಪ್ಪನಾಯಕರು ಕಾಣಸಿಗುತ್ತಾರೆ.

"https://kn.wikipedia.org/w/index.php?title=ಜರಿಮಲೆ&oldid=637880" ಇಂದ ಪಡೆಯಲ್ಪಟ್ಟಿದೆ