ಜಯದೇವಿತಾಯಿ ಲಿಗಾಡೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಯದೇವಿತಾಯಿ ಲಿಗಾಡೆ
ಜನನಜಯದೇವಿ
ಜೂನ್ ೨೩, ೧೯೧೨
ಸೊಲ್ಲಾಪುರ
ಮರಣಜುಲೈ ೨೬, ೧೯೮೬
ವೃತ್ತಿಬರಹಗಾರ್ತಿ, ಸಮಾಜಸೇವಕಿ

ಜಯದೇವಿತಾಯಿ ಲಿಗಾಡೆ -ಕನ್ನಡದ ಹಾಗುಮರಾಠಿ ಭಾಷೆಯ ಸಾಹಿತಿಗಳು, ಆಧ್ಯಾತ್ಮ ಚಿಂತನಕಾರರು. ಕುಟುಂಬವತ್ಸಲೆ, ಸಾಹಿತ್ಯಸಾಧಕಿ, ಸಮಾಜಸೇವಕಿ ಹೀಗೆ ತ್ರಿವೇಣಿ ಸಂಗಮವಾಗಿದ್ದ ಈ ಜಂಗಮತಾಯಿ ತಾಯ್ನುಡಿಯ ಸೇವೆಗಾಗಿ ಶ್ರಮಿಸಿ ದವರು. ಕನ್ನಡ ನುಡಿಗೆ, ಕನ್ನಡ ನಾಡಿಗೆ ತನ್ನನ್ನು ಅರ್ಪಿಸಿಕೊಂಡು ಅಜರಾಮರ ಕೀರ್ತಿಪಾತ್ರರಾದ ಶ್ರೀಮತಿ ಜಯದೇವಿ ತಾಯಿ ಲಿಗಾಡೆ ಅವರ ಜೀವನ ದರ್ಶನವೆಂದರೆ ಅದೊಂದು ಯಶೋಗಾಥೆ. ಹೆಣ್ಣುಮಕ್ಕಳ ಕುರಿತಾದ ಕಾಳಜಿ ಅವರಿಗೆ ಸಹಜವಾಗಿ ರಕ್ತಗತವಾಗಿತ್ತು. ಜಯದೇವಿತಾಯಿ ಲಿಗಾಡೆ ಅವರೆಂದರೆ ಧವಳವಸ್ತ್ರದ ನಿರಾಡಂಬರ ವೇಷ, ಗಂಭೀರ ವರ್ಚಸ್ಸು, ಅಸ್ಖಲಿತವಾಗಿ ರೂಪುಗೊಂಡ ಒಬ್ಬ ತಪಸ್ವಿನಿಯ ಚಿತ್ರ ಕಣ್ಮುಂದೆ ನಿಂತಂತಾಗುತ್ತದೆ.

ಜನನ, ಜೀವನ[ಬದಲಾಯಿಸಿ]

  • ಜಯದೇವಿ ತಾಯಿ ಲಿಗಾಡೆಯವರು ಜನಿಸಿದ್ದು ಜೂನ್ ೨೩, ೧೯೧೨ರಲ್ಲಿ. ಜಯದೇವಿ ತಾಯಿ ಲಿಗಾಡೆ ಅವರ ಅಜ್ಜ ಶ್ರೀವಾರದಮಲ್ಲಪ್ಪನವರು ಧಾನಧರ್ಮಗಳ ಮಹಾನ್ ವ್ಯಕ್ತಿ. ಅವರು ‘ಮಹಿಳಾ ಜ್ಞಾನಮಂದಿರವನ್ನು’ ಸ್ಥಾಪಿಸಿ ಮಹಿಳಾ ವ್ಯಾಸಂಗಕ್ಕೆ ಅಗತ್ಯವಾದ ವಾತಾವರಣ ನಿರ್ಮಿಸಿದ್ದರು. ಈ ಸಾಮಾಜಿಕ-ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಬಾಲ್ಯದಿಂದಲೇ ಜಯದೇವಿ ತಾಯಿಯವರನ್ನು ಪ್ರಭಾವಿತಗೊಳಿಸಿ ಅವರ ವ್ಯಕ್ತಿತ್ವ ವಿಕಾಸನಕ್ಕೆ ಬುನಾದಿಯಾದವು.
  • ಜಯದೇವಿಯವರ ತಂದೆ ಚನ್ನಮಲ್ಲಪ್ಪ. ತಾಯಿ ಸಂಗವ್ವ ಸ್ವತಃ ಹಾಡುಗಾರ್ತಿ, ಒಳ್ಳೆಯವಾಗ್ಮಿ, ಸೇವಾಕಾಂಕ್ಷಿ, ಪ್ರಶಾಂತ ಸ್ವಭಾವಿ. ವಾರದವರ ಮಹಿಳಾ ಜ್ಞಾನಮಂದಿರಕ್ಕೆ ಯಾವಾಗಲೂ ಹೋಗುತ್ತಿದ್ದ ಸಂಗವ್ವನಲ್ಲಿ ಒಂದು ಸುಸಂಸ್ಕೃತ ನಡವಳಿಕೆ ಇತ್ತು. ಇವೆಲ್ಲದರ ಕೆನೆಗಟ್ಟಿದಂತೆ ಮಗಳು ಜಯದೇವಿ ಬೆಳೆದಳು. ಜಯದೇವಿಯವರ ತವರು ಮನೆಯ ಹೆಸರು ಮಡಕಿ.
  • ಮಡಕಿ ಚೆನ್ನಬಸಪ್ಪನವರದು ವೈಭವದ ಶ್ರೀಮಂತ ಜೀವನವಾದರೂ ಮಗಳದು ನಿರಾಡಂಬರ ಜೀವನ. ಸೊಲ್ಲಾಪುರದಲ್ಲಿ ಕನ್ನಡ ಶಾಲೆಗಳು ಇರಲಿಲ್ಲವಾದ್ದರಿಂದ ಮರಾಠಿ ಶಾಲೆಯಲ್ಲಿ ಓದಬೇಕಾಯಿತು. ಆದರೆ ಮನೆಯಲ್ಲಿ ತಾಯಿಯ ಕೀರ್ತನೆ, ಬಡಜನ ಸೇವೆ ಮತ್ತು ಶರಣಭಾವದ ಭಕ್ತಿಶ್ರದ್ಧೆಗಳಲ್ಲಿ ಜಯದೇವಿ ಕನ್ನಡದ ಹೃದ್ಭಾವ ಮತ್ತು ಸಾಂಸ್ಕೃತಿಕ ಮನೋಭಾವಗಳನ್ನು ಮೈಗೂಡಿಸಿಕೊಂಡರು.
  • ಜಯದೇವಿಯವರ ಮದುವೆ ಅವರಿಗೆ ಹದಿನಾಲ್ಕು ವರ್ಷ ವಯಸ್ಸಾಗಿದ್ದಾಗ ಹದಿನಾರು ವರ್ಷದ ಮದುಮಗನೊಂದಿಗೆ ವೈಭವದಿಂದ ನಡೆಯಿತು. ಮದುವೆಯಾಗಿ ಗಂಡನ ಮನೆಗೆ ಹೋದಾಗ ಗಂಡನಮನೆ ಹಲವು ಹಿಂಸೆ ಸಂಕೋಲೆಗಳ ಸೆರೆಯಂತಿತ್ತು. ಆದರೆ ಜಯದೇವಿಯವರ ಸಹನ ಶೀಲತೆ – ಶಾಂತಸ್ವಭಾವಗಳು ಮನೆಯವರನ್ನು ಗೆಲ್ಲುತ್ತಾ ಬಂದವು. ಮರಾಠಿಯಲ್ಲಿ ಆರನೆಯ ವರ್ಗದವರೆಗೆ ಕಲಿತಿದ್ದ ಜಯದೇವಿಯವರು ಇಬ್ಬರು ಮಕ್ಕಳಾದ ನಂತರ ಕನ್ನಡ ಕಲಿತು ವಚನಸಾಹಿತ್ಯವನ್ನು ಅಧ್ಯಯನ ಮಾಡಿದರು.
  • ಮುಂದೆ ಅದೇ ಅವರ ಸಾಹಿತ್ಯ ರಚನೆಗೆ ದಾರಿದೀಪವಾಯಿತು. ಮನೆಯವರ ಪ್ರೋತ್ಸಾಹದಿಂದ ವೀರಶೈವ ಮಹಾಸಭೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಲ್ಲದೆ ಅನೇಕ ಸಲ ಅಧ್ಯಕ್ಷೆಯೂ ಆಗಿದ್ದರು. ದಾಂಪತ್ಯವು ಐದು ಮಕ್ಕಳಿಂದ ಮಧುರವಾಯಿತು. ದೇಶಪ್ರೇಮ, ಶರಣನಿಷ್ಠೆ, ಗಾಂಧೀವಾದಗಳು ಅವರ ಬದುಕಿನ ಹೆಗ್ಗುರಿಗಳಾದವು. ಸೊಲ್ಲಾಪುರದ ಸಿದ್ದರಾಮೇಶ್ವರನ ಗುಡಿಗೆ ಹೋಗಿ ಬಂದ ಮೇಲೆಯೇ ಅವರ ಊಟ. ಎಷ್ಟು ತಡವಾದರೂ ಸರಿ. ಆಕಸ್ಮಿಕವಾಗಿ ೧೯೪೬ರಲ್ಲಿ ಅವರು ತಮ್ಮ ಪತಿಯನ್ನು ಕಳೆದುಕೊಂಡರು.

ಎಲ್ಲರಿಗೂ ತಾಯಿಯಾದ ಜಯದೇವಿ[ಬದಲಾಯಿಸಿ]

  • ವೀರಶೈವ ಮಹಾಸಭೆಗಳಲ್ಲಿ ಜಯದೇವಿಯವರ ಭಾಷಣಗಳನ್ನು ಕೇಳಿದ ಬ್ರಿಟಿಷರು ‘ಲಿಂಗಾಯತ ಬಟಾಲಿಯನ್’ಗಾಗಿ ಭಾಷಣಮಾಡಲು ಕೇಳಿಕೊಂಡಾಗ ತಾಯಿಯವರು ನಿರಾಕರಿಸಿದರು. ಇದರಿಂದ ಮನೆಯಲ್ಲಿ ವಿರಸವುಂಟಾದರೂ ಅವರು ಒಪ್ಪಲಿಲ್ಲ. ಬರಬರುತ್ತಾ ‘ಮಹಿಳಾ ಜ್ಞಾನಮಂದಿರ’ಕ್ಕೆ ಅನಿವಾರ್ಯವೆನಿಸುವಷ್ಟು ಅದರ ಕಾರ್ಯ ಕಲಾಪಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು.
  • ಹೈದರಾಬಾದಿನಲ್ಲಿ ರಜಾಕಾರರ ಆಕ್ರಮಣದಿಂದ ಅನಾಥರಾದವರಿಗೆ ನಿರಾಶ್ರಿತರಾದವರಿಗೆ ಪ್ರೀತಿಯ ಆಶ್ರಯ ನೀಡಿದ ಜಯದೇವಿಯವರು ತಮ್ಮ ಸೇವಾ ಕಾರ್ಯದಿಂದಲೇ ‘ತಾಯಿ’ ಎನಿಸಿಕೊಂಡು ಆಗಿನಿಂದ ಜಯದೇವಿತಾಯಿಯಾದರು. ಅವರ ಸಮಾಜಸೇವೆ, ಹಲವಾರು ಕ್ಷೇತ್ರಗಳಲ್ಲಿ ಅವರ ದುಡಿಮೆಯನ್ನು ಗರಿಮೆಯನ್ನು ಗೌರವಿಸುವಂತಾಯಿತು.
  • ಸೊಲ್ಲಾಪುರದಲ್ಲಿ ಒಮ್ಮೆ ಕಾಲರಾ ದಾಳಿ ಮಾಡಿದಾಗ ಜಯದೇವಿ ತಾಯಿಯವರು ಅಲ್ಲಲ್ಲಿ ನಾಗರಿಕರ ಸಭೆ ಕರೆದು ಭಾಷಣಗಳ ಮೂಲಕ ಜನರಲ್ಲಿ ಧೈರ್ಯತುಂಬಿ ಅಗತ್ಯಸೇವೆಯನ್ನು ಒದಗಿಸಿದರು. ಗಾಂಧೀಜಿಯವರ ತತ್ವಗಳಿಗೆ ಮಾರುಹೋಗಿ ನೂಲುವ, ಸ್ವದೇಶಿ ಬಟ್ಟೆಯನ್ನು ತೊಡುವ ವ್ರತತೊಟ್ಟು ಜ್ಞಾನಮಂದಿರದಲ್ಲೂ ಅದನ್ನು ಕಾರ್ಯರೂಪಕ್ಕೆ ತಂದರು. ಹಿಂದೂ ಮುಸಲ್ಮಾನ ಬಂಧುಗಳನ್ನೆಲ್ಲಾ ಒಂದೇ ರೀತಿಯಲ್ಲಿ ಕಾಣುತ್ತಿದ್ದ ಹೃದಯವಂತಿಗೆ ಮೆರೆದರು.

ಸ್ತ್ರೀ ಶಿಕ್ಷಣ ಕ್ಷೇತ್ರದಲ್ಲಿ[ಬದಲಾಯಿಸಿ]

  • ಸ್ತ್ರೀ ಶಿಕ್ಷಣದ ಕುರಿತು ಜಯದೇವಿ ತಾಯಿಯವರು ಅಪಾರ ಆಸಕ್ತಿ ಕಾಳಜಿ ಹೊಂದಿದ್ದರು. “ಸುವ್ಯವಸ್ಥಿತ ಸಮಾಜರಚನೆಗೆ ಸುಸಂಸ್ಕೃತ ಜನಾಂಗಬೇಕು. ಸುಸಂಸ್ಕೃತಿ ಸ್ತ್ರೀಶಿಕ್ಷಣದ ತವರು ಮನೆ. ಸುಖ – ಶಾಂತಿ ನೆಲೆಸುವಂತೆ ಮಾಡುವುದು ಧರ್ಮದ ಗುರಿ. ದುಃಖಕ್ಕೆ ಅಜ್ಞಾನ, ಬಡತನ ವರ್ಗಕಲಹ ಕಾರಣ. ಇವೆಲ್ಲ ಇಲ್ಲದಂತೆ ಸಮಾಜ ರಚನೆಯಾಗಲು ಶಿಕ್ಷಣ ಹೆಚ್ಚು ಮುಖ್ಯ” ಎಂದು ಜಯದೇವ ತಾಯಿಯವರು ತಮ್ಮ ಭಾಷಣಗಳಲ್ಲಿ ಯಾವಾಗಲೂ ಪ್ರಸ್ತಾಪಿಸುತ್ತಿದ್ದರು.
  • ‘ಮಹಿಳಾ ಜ್ಞಾನಮಂದಿರದ ಜಯದೇವಿ ಕನ್ಯಾಶಾಲಾ’ ಸ್ಥಾಪಿತವಾಗಿ ಅಲ್ಲಿ ಮರಾಠಿ ಬದಲು ಕನ್ನಡ ಕಲಿಯಲು ಹೆಣ್ಣುಮಕ್ಕಳಿಗೆ ಸಾಧ್ಯವಾದದ್ದು ತಾಯಿಯವರ ಪ್ರಯತ್ನದಿಂದ. ವಿದ್ಯಾರ್ಥಿನಿಯರನ್ನು ಪ್ರೋತ್ಸಾಹಿಸಲು ಶಾಲೆ-ಕಾಲೇಜುಗಳಲ್ಲಿ ನಗದು ಬಹುಮಾನ, ಪರ್ಯಾಯ ಫಲಕ ಗಳನ್ನು ಕೂಡಾ ಮಾಡಿದ್ದರು. ಅವರ ಧನಸಹಾಯದಿಂದ ಧಾರವಾಡದ ಜಯದೇವಿತಾಯಿ ಮಾಧ್ಯಮಿಕ ಶಾಲೆ ಮತ್ತು ಹುಬ್ಬಳ್ಳಿಯ ಭಾರತಿ ಹೈಸ್ಕೂಲುಗಳು ಈಗಲೂ ಇವೆ.
  • ಔದ್ಯೋಗಿಕ ಕೇಂದ್ರ ಸಂಸ್ಥೆಗಳಲ್ಲಿ ಸಾಕ್ಷರತಾ ಕೇಂದ್ರಗಳನ್ನು ಸ್ಥಾಪಿಸುವಲ್ಲಿ ಜಯದೇವಿ ತಾಯಿಯವರು ನೇತ್ರತ್ವ ವಹಿಸಿದ್ದರು. ಸುಮಾರು ಇನ್ನೂರಕ್ಕೂ ಹೆಚ್ಚು ಅಂತಹ ಕೇಂದ್ರಗಳ ಸ್ಥಾಪನೆಗಳಾಗಿದ್ದವು ಎಂದರೆ ಅದರ ವ್ಯಾಪ್ತಿಯ ಮಹತ್ವ ತಿಳಿಯುತ್ತದೆ. ಕನ್ನಡದ ಈ ಅಭಿವೃದ್ಧಿಯ ಬಗ್ಗೆ ವಿಚಲಿತರಾದ ಮರಾಠಿ ಪರ ಆಡಳಿತಗಾರರು ಕನ್ನಡ ಸಾಕ್ಷರತಾ ಕೇಂದ್ರಗಳಿಗೆ ಬೆಂಬಲವಾಗಿದ್ದ ಅಧಿಕಾರಿಗಳನ್ನು ಎತ್ತಂಗಡಿ ಮಾಡಿಸಿ ಕಿರುಕುಳ ಕೊಡುತ್ತಿದ್ದರು.
  • ಆದರೂ ಜಯದೇವಿ ತಾಯಿಯವರು ತಮ್ಮ ಪ್ರಯತ್ನ ಮುಂದುವರೆಸಿದರು. ಕಾರ್ಮಿಕರಲ್ಲದ ವ್ಯಾಪಾರಸ್ಥರಿಗೆ ಓದುವ ಆಸಕ್ತಿ ಬೆಳೆಸಲು ತಮ್ಮ ಸ್ವಂತ ಖರ್ಚಿನಲ್ಲಿ ಪುಸ್ತಕ – ಪತ್ರಿಕೆಗಳನ್ನು ತರಿಸಿಕೊಡುತ್ತಿದ್ದರು. ವರದಕ್ಷಿಣೆ ಪದ್ಧತಿಯನ್ನು ಅವರು ಪ್ರತಿಭಟಿಸಿಸುತ್ತಿದ್ದರು. ಜಾಹಿರಾತು ಗಳಲ್ಲಿ ಅಸಭ್ಯತೆಯ ಬಗೆಗೆ ಧ್ವನಿಯೆತ್ತಿದ್ದರು.

ಅಸ್ಪೃಶ್ಯತೆ ನಿವಾರಣೆ[ಬದಲಾಯಿಸಿ]

ಬಸವ ಮತ್ತು ಗಾಂಧೀತತ್ವಗಳ ಅನುಸರಣೆಯಾಗಿ ಅಸ್ಪೃಶ್ಯರ ಸೇವೆಯನ್ನು ತಾಯಿ ಮನಮುಟ್ಟಿಮಾಡಿದ್ದಾರೆ. ಸೊಲ್ಲಾಪುರ ಮತ್ತು ಬಾರ್ಶಿಗಳಲ್ಲಿದ್ದ ರಿಮ್ಯಾಂಡ್ ಹೋಂ, ಹರಿಜನಸಂಘ, ಗಾಂಧೀ ವಸ್ತ್ರಾಲಯಗಳಿಗೆ ಜಯದೇವಿತಾಯಿಯವರ ಪ್ರೇರಣೆ – ಬೆಂಬಲಗಳು ಮುಖ್ಯವಾಗಿದ್ದವು. ಯಾವ ಊರಿಗೇ ಹೋಗಲಿ ಹರಿಜನ ಕೇರಿಯನ್ನು ಭೇಟಿಯಾಗಿ ಬರುತ್ತಿದ್ದರು. ಅಸ್ಪ್ರಶ್ಯತೆ ನಿವಾರಣೆಗಾಗಿ ‘ಶರಣ ಸಮಾಜ’ವೆಂಬ ಸಂಘವನ್ನು ಸ್ಥಾಪಿಸಿದರು. ಅಂತರ್ಜಾತೀಯ ವಿವಾಹಗಳನ್ನು ಪ್ರೋತ್ಸಾಹಿಸಿದರು.

ನಿರಾಶ್ರಿತರಿಗಾಗಿ ಕಾರ್ಯ[ಬದಲಾಯಿಸಿ]

ರಜಾಕಾರರ ದೌರ್ಜನ್ಯದ ದಿನಗಳಲ್ಲಿ ನಿರಾಶ್ರಿತರಿಗಾಗಿ ಅವರು ತಮ್ಮ ನಲವತ್ತು ಎಕರೆಯ ಹೊಲದಲ್ಲಿ ಶಿಬಿರಗಳನ್ನು ಹಾಕಿಕೊಟ್ಟರು. ಮಕ್ಕಳ ವಿದ್ಯಾಭ್ಯಾಸಕ್ಕೆಂದು ಶಾಲೆ ಪ್ರಾರಂಭಿಸಿದರು. ಡಾ. ಮೋದಿಯವರನ್ನು ಕರೆಸಿ ಸಾಮೂಹಿಕ ಶಸ್ತ್ರಕ್ರಿಯೆಗಳ ಸಂದರ್ಭದಲ್ಲಿ ರೋಗಿಗಳ ಮತ್ತು ಅವರ ಸಹಾಯಕರಿಗಾಗಿ ಸಕಲ ವಸತಿ ವ್ಯವಸ್ಥೆಗಳನ್ನೂ ತಾವೇ ಮಾಡಿದರು. ಸಹಕಾರ ಆಂದೋಲನದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.

ಕನ್ನಡಕ್ಕಾಗಿ ಕೈಂಕರ್ಯ[ಬದಲಾಯಿಸಿ]

  • ಕನ್ನಡಿಗರು ಎಲ್ಲಾ ರೀತಿಯಲ್ಲೂ ಹೆಚ್ಚಾಗಿದ್ದಾರೆ ಎಂದು ಸರ್ವವೇದ್ಯವಾಗಿದ್ದರೂ ಸೊಲ್ಲಾಪುರ ಕರ್ನಾಟಕಕ್ಕೇ ಸೇರಬೇಕೆಂಬ ಜಯದೇವಿ ತಾಯಿಯವರ ನಿರಂತರ ಯತ್ನಗಳು ಮರಾಠಿಗರ ಕುತಂತ್ರದಿಂದ ಮತ್ತು ಕನ್ನಡಿಗರ ನಿಷ್ಕ್ರಿಯತೆಯಿಂದ ಫಲಕೊಡಲಿಲ್ಲ. ಈ ಕಾಯಕ್ಕಾಗಿ ಅವರು ಎಲ್ಲಾ ಮಂತ್ರಿಗಳು, ಕಡೆಗೆ ಇಂದಿರಾಗಾಂಧಿಯವರನ್ನು ಭೇಟಿ ಮಾಡಿ ಮಹಾಜನ ಆಯೋಗದ ಶಿಫಾರಸ್ಸು ಅನ್ವಯಿಸಿ ಸೊಲ್ಲಾಪುರ ಕರ್ನಾಟಕದ ಭಾಗವಾಗಬೇಕೆಂದು ಮನವಿಸಲ್ಲಿಸಿ ಅವರಿಂದ ಆಶ್ವಾಸನೆ ಪಡೆದುಕೊಂಡರೂ ಕನ್ನಡದ ಮಂತ್ರಿಗಳ ಮತ್ತು ಶಾಸಕರ ಔದಾಸೀನ್ಯ ಅದನ್ನು ಆಗಗೊಡ ಲಿಲ್ಲ.
  • ಹೈದರಾಬಾದ್ ಪ್ರಾಂತ್ಯದ ಅನೇಕ ಭಾಗಗಳಲ್ಲಿ ಕನ್ನಡಿಗರು ವಲಸೆಹೊಗಿದ್ದರು. ಅವರೆಲ್ಲರಿಗೆ ಬೆಂಬಲವಾಗಿ ಕನ್ನಡತನವನ್ನು ಅಲ್ಲಿ ಉಳಿಸಿದರು, ಅಲ್ಲಲ್ಲಿ ಕನ್ನಡ ಶಾಲೆಗಳನ್ನು ಪ್ರಾರಂಭಿಸಿದರು. ಸ್ವಯಂಸೇವಾ ಶಿಕ್ಷಕರನ್ನು ಕಳಿಸಿದರು. ಆಗಿನ ಮುಖ್ಯಮಂತ್ರಿಗಳು ‘ಕನ್ನಡ ಶಾಲೆಗಳಿಗೆ ಕನ್ನಡ ಶಿಕ್ಷಕರೇ ಸಿಗುವುದಿಲ್ಲ’ ಎಂಬ ಕಾರಣ ಮುಂದೊಡಿದಾಗ ತಾಯಿಯವರು ಸ್ವಂತ ಖರ್ಚಿನಿಂದ ನಾಲ್ಕುನೂರು ಜನ ಶಿಕ್ಷಕರನ್ನು ನೇಮಿಸಿದ್ದು ಅವರ ಕನ್ನಡ ಪ್ರೇಮಕ್ಕೆ ಸಾಕ್ಷಿಯಾಗಿದೆ.

ಅಪರೂಪವಾದ ಸಾಧನೆ[ಬದಲಾಯಿಸಿ]

ಒಬ್ಬಳು ಹೆಣ್ಣುಮಗಳು, ಒಂದು ಜೀವಮಾನದಲ್ಲಿ ಅದೂ ತನ್ನ ಇತಿಮಿತಿಗಳಲ್ಲಿ ಇಷ್ಟೊಂದು ಬಗೆಯ ಸಾಧನೆಗಳನ್ನು ಸಾಧಿಸಿದ್ದು ಇತಿಹಾಸದಲ್ಲೇ ಅಪರೂಪವೆನ್ನಬಹುದು. ಅವರ ಶ್ರಮಕ್ಕೆ ತಕ್ಕ ಫಲವನ್ನು ಅವರು ಕಾಣಲಿಲ್ಲ. ಯಾವ ಅಧಿಕಾರವನ್ನೂ ಬಯಸಲಿಲ್ಲ. ಒಂದು ಕ್ಷಣವನ್ನೂ ವ್ಯರ್ಥವಾಗಿ ಕಳೆಯಲಿಲ್ಲ. ನಾಡಿಗಾಗಿ – ನುಡಿಗಾಗಿ – ಮಹಿಳೆಯರಿಗಾಗಿ – ಕಾರ್ಮಿಕರಿಗಾಗಿ – ಅಸ್ಪೃಶ್ಯರಿಗಾಗಿ ಮಾಡಿದ ಅವರ ಸೇವೆ – ಚಿಂತನೆಗಳು ಸ್ಮರಣೀಯವಾಗಿವೆ. ತಾಯಿಯವರು ಜುಲೈ ೨೫, ೧೯೮೬ರಲ್ಲಿ ನಿಧನರಾದರು.

ಸಾಹಿತ್ಯ ರಚನೆ[ಬದಲಾಯಿಸಿ]

ಜಯದೇವಿತಾಯಿಯವರ ಚೈತನ್ಯ ಅವರನ್ನು ಸಾಹಿತ್ಯ ರಚನೆಗೂ ಪ್ರೇರೇಪಿಸಿತು. ಕನ್ನಡ – ಮರಾಠಿಗಳೆರಡರಲ್ಲೂ ಅವರು ಸಿದ್ಧಹಸ್ತರು. ಅವರು ಒಟ್ಟು ಹದಿನಾಲ್ಕು ಕೃತಿಗಳನ್ನು ಪ್ರಕಟಿಸಿದ್ದಾರೆ.

ಕನ್ನಡ ಕೃತಿಗಳು[ಬದಲಾಯಿಸಿ]

  1. ಜಯಗೀತೆ,
  2. ತಾಯಿಯ ಪದಗಳು,
  3. ಶ್ರೀ ಸಿದ್ಧರಾಮ ಪುರಾಣ,
  4. ತಾರಕ ತಂಬೂರಿ,
  5. ಬಂದೇವು ಕಲ್ಯಾಣಕೆ,
  6. ಸಾವಿರದ ಪದಗಳು,
  7. ಅರುವಿನಾಗರದಲ್ಲಿ.

ಮರಾಠಿ ಕೃತಿಗಳು[ಬದಲಾಯಿಸಿ]

  1. ಸಿದ್ಧವಾಣಿ,
  2. ಬಸವದರ್ಶನ,
  3. ಸಮೃದ್ಧ ಕರ್ನಾಟಕಾಂಬೆ ರೂಪರೇಷೆ,
  4. ಮಹಾಯೋಗಿನಿ,
  5. ಸಿದ್ಧರಾಮಾಂ ಚಿ ತ್ರಿವಧಿ,
  6. ಬಸವವಚನಾಮೃತ,
  7. ಶೂನ್ಯ ಸಂಪಾದನೆ.

ಜಯಗೀತೆ ೪೦ ಸುಂದರ ಸುಮಧುರ ಗೀತೆಗಳ ಗೊಂಚಲು. ‘ಮಂಗಳದ ಮಹಿಮೆ’ ಎಂಬ ಕವಿತೆಯಲ್ಲಿ –

ಮನದ ಮದವೆಲ್ಲ
ಮುರಿದು ತಾ ಎಲ್ಲ ಪೃಥಿವಿಯಲ್ಲಿ ಅಣುವಿನೊಳು ಒಂದು ಅಣುವು
ಗೂಡಿ ತಿರುಗುತಿದೆ ಶಕ್ತಿರೂಪ
ಅಳಿಸಿ ಜೀವವ್ಯಾಪ ತನ್ನ ತಾಪಲೋಪ

ಅಣು ಅಣುವಿನೊಡಗೂಡಿ ಒಂದಾಗಿ ಹೊಸೆದ ಮಹತ್ತು ಭಕ್ತಿಯಾಗಿ ಪರಿಣಮಿಸುವಂತೆ ಅವರ ಭಾವ ಭಕ್ತಿಮಯವಾಗಿದೆ ಎನ್ನುತ್ತಾರೆ.

ತಾರಕ್ಕ ತಂಬೂರಿಯ, ನಾನದಕೆ ನುಡಿಸುವೆ. ತಾರ ತಂಬೂರಿಯ
ಗುರುವಿನ ಅಗಣಿತ ಮಹಿಮೆಯ ಸಾರುವೆ. ತಾರ ತಂಬೂರಿಯ

ಎಂದು ಹಾಡಿದ ತಾಯಿಯವರ ‘ತಾರಕ ತಂಬೂರಿ’ ಕೃತಿಯು ‘ಜಯಸಿದ್ಧರಾಮಾ’ ಅಂಕಿತದಲ್ಲಿ ಪಲ್ಲವಿಸಿದ ಅನುಭವಜನ್ಯ ಕವನಗಳ ಭಾವತೀವ್ರತೆಯ ಸಂಕಲನವಾಗಿದೆ.

ನಿತ್ಯದಾಸೋಹದ ಮನೆಯ ತೊತ್ತು ಕೆಲಸದಿ ಮನವ
ಅತ್ತಿತ್ತ ಸುಳಿಯದಂತೆ ಸಲವು ಸಿದ್ಧರಾಮ.
ಕುಲಭೇದವ ಬಿಡಿಸಿ ಛಲ ಸತ್ಯಾಚಾರದ ಹಿಡಿಸಿ
ಶೀಲದ ಮರ್ಮವ ತಿಳಿಸಿ ಸಲವು ಸಿದ್ಧರಾಮ.

ಇಲ್ಲಿ ತಾಯಿಯವರ ಅಂತರಾಳದ ಆರ್ತಭಕ್ತಿಯ ಪರಾಕಾಷ್ಟೆಯನ್ನು ಕಾಣಬಹುದಾಗಿದೆ.

೧೯೮೬ರಲ್ಲಿ ‘ಸಾವಿರದ ಪದಗಳು’ ಸಂಕಲನದ ರೂಪದಲ್ಲಿ ಪ್ರಕಟಗೊಂಡಿದೆ. ತಾಯಿಯವರು ರಚಿಸಿದ ನಾಲ್ಕುಸಾವಿರ ಪದ್ಯಗಳಲ್ಲಿ ಸಾವಿರ ಪದ್ಯಗಳನ್ನು ಆಯ್ಕೆ ಮಾಡಿಕೊಂಡು ಈ ಸಂಕಲನವನ್ನು ರೂಪಿಸಲಾಗಿದೆ. ಇಲ್ಲಿ ದೈವದ ಕುರಿತಾಗಿ ಭಕ್ತಿಗೀತೆಗಳು, ಶಿವಶರಣ-ಶರಣೆಯಾರ ಕುರಿತು ಭಾವಗೌರವ ನುಡಿಗಳು ಮತ್ತು ಶ್ರೇಷ್ಠ ಜೀವಿಗಳ ಪುಣ್ಯಸ್ಮರಣೆಗಳು ಹೀಗೆ ಮೂರುವಿಧದಲ್ಲಿ ಇದು ಮುಪ್ಪುಗೊಂಡಿದೆ. ಶಿವಶರಣ – ಶರಣೆಯರ ಬಗ್ಗೆ ಹೇಳುವಾಗ ಬಸವಣ್ಣನವರಿಗೆ ಯಾವಾಗಲೂ ತಾಯಿಯವರು ಪ್ರಥಮ ಸ್ಥಾನ ನೀಡಿದ್ದಾರೆ.

ಬಸವ ತುಳಿದ ದಾರಿ
ವಸುಧೀಗೆ ಉಪಕಾರಿ
ದೆಸೆದಿಕ್ಕುಗಳಲ್ಲಿ ಕೀರುತಿ ಹರಡಿತ್ತು
ಶಶಿಧರನ ಹೊತ್ತ ಬಸವಣ್ಣ

ಎಂದು ಮನದುಂಬಿ ಬಸವಣ್ಣನವರನ್ನು ತಾಯಿ ಕೊಂಡಾಡುತ್ತಾರೆ. ತಾಯಿಯವರ ವ್ಯಕ್ತಿತ್ವದ ಅನೇಕ ಆಯಾಮಗಳಲ್ಲಿ ಅವರ ಮಾತೃಭಾಷೆಯ ಅಭಿಮಾನವು ಒಂದು. ಸೊಲ್ಲಾಪುರವನ್ನು ಕರ್ನಾಟಕಕ್ಕೆ ಸೇರಿಸುವಲ್ಲಿ ಅವರು ಬದುಕನ್ನೇ ಮುಡಿಪಾಗಿಟ್ಟರು.

ಸೊಲ್ಲಾಪುರದೊಳಗ ಸೊಲ್ಲಾ ಅಡಗಿಸಬ್ಯಾಡೋ
ನಿಲ್ಲೆಂದು ತಾಯಿನುಡಿ ನಿಲ್ಲಿಸು. ಸಿದ್ಧರಾಮ
ಅಲ್ಲಗಳೆದವರಿಗೆ ತಿಳಿಹೇಳು.

ಇನ್ನೊಂದು ಕಡೆ

ಕನ್ನಡತಾಯಿ ನುಡಿ, ಮನ್ನಿಸಿ ಮಾತನಾಡು
ಅನ್ಯಕ್ಕೆ ಮರುಳಾಗದಿರು, ಮರುಳೇ ನೀ
ಕನ್ನಡಿಗನೆಂದು ಮರೀಬೇಡ.

ಎಂದು ಕನ್ನಡತನದ ಬಗ್ಗೆ ಕನ್ನಡಿಗನ ಬಗ್ಗೆ ಎಚ್ಚರದ ಮಾತುಗಳನ್ನು ಬಹಳ ಕಳಕಳಿಯಿಂದ ಹೇಳಿದ್ದಾರೆ. ತಾಯಿಯವರು ತಮ್ಮ ‘ಸಿದ್ಧರಾಮ ಪುರಾಣ’ದ ತ್ರಿಪದಿ ಮಾಧ್ಯಮಕ್ಕೆ ಸರ್ವಜ್ಞನೇ ಕಾರಣ ಎನ್ನುತ್ತಾರೆ. ಒಂದು ಭಾಗದಲ್ಲಿ ಅವನನ್ನು ಕುರಿತು

ತಾಯಿಯ ಪದಗಳು, ರಾಯಸಿದ್ಧನ ಕಾವ್ಯ
ಹಾಯಾಗಿ ನಿನ್ನ ಧಾಟಿ ನಡೆಸಿದೆ, ಸರ್ವಜ್ಞ
ಛಾಯೆ ಇರಲಿ ನಿನ್ನ ಕಡೆತನಕ.

‘ತಾಯಿಯ ಪದಗಳು’ ತಾಯ್ತನದ ಹಿರಿಮೆಯಿಂದ ಕೂಡಿದ ಈ ಪದಗಳು ಮಾನವ ಕುಲಕ್ಕೆ ನೀಡಿದ ಸಂಹಿತೆಗಳು. ‘ತಾಯಿಯ ಪದಗಳು’ ರಚನೆಯ ಸಾರಸಂಗ್ರಹವನ್ನೇ ಡಾ. ಚೆನ್ನಾಂಬಿಕ ಪಾವಟೆಯವರ ಮಾತುಗಳು ಹೇಳುತ್ತವೆ:

ವರವಾದ ಪರಸಾದ ಕರೆದು ನಾ ನೀಡುವೆ
ವರಭಕ್ತೀಲಿ ನೀವು ಉಣಬೇಕು. ಅದು ನಿಮಗ
ಪರತರ ಸುಖವ ಕೊಟ್ಟೀತ.

‘ಶ್ರೀಸಿದ್ಧರಾಮ ಪುರಾಣ’ದಲ್ಲಿ ತಾಯಿಯವರು

‘ಎಲ್ಲ ಬಲ್ಲವಳೆಂಬ ಇಲ್ಲವದು ಭ್ರಮೆ ಎನಗೆ
ಬಲ್ಲವರ ಪಾದ ಹಿಡಿಯುವೆ – ಬಲ್ಲಿದರು
ಕಲಿಸಿರಿ ಮತ್ತೆ ನುಡಿಸಿರಿ’.

ಎಂದು ತಮ್ಮ ವಿನೀತಭಾವವನ್ನೇ ಮೆರೆದಿದ್ದರೂ ಶ್ರೀ ಸಿದ್ಧರಾಮ ಪುರಾಣವು ಕನ್ನಡದ ಅಪರೂಪ ಕೃತಿಗಳಲ್ಲಿ ಒಂದು ಎಂಬುದರಲ್ಲಿ ಅನುಮಾನವಿಲ್ಲ.

ಹಿರಿಯರ ಪ್ರಶಂಸೆ[ಬದಲಾಯಿಸಿ]

  1. ಡಾ. ವಿ.ಕೃ. ಗೋಕಾಕರು ಈ ಕೃತಿಯನ್ನು ಕುರಿತು “ಮಹಿಳಾ ಹೃದಯದ ರಸಾನುಭವ ತನ್ನ ಸಂಪತ್ತನ್ನೆಲ್ಲಾ ಈ ಕೃತಿಯಲ್ಲಿ ಸೂರೆಮಾಡಿಕೊಂಡಿದೆ. ಹಿಂದೆ ಅನಾಮಧೇಯವಾಗಿ ತನ್ನ ದುಃಖ ಸುಖ, ಭಕ್ತಿಗಳನ್ನು ಜಾನಪದ ತ್ರಿಪದಿಯಲಿ ತೋಡಿಕೊಂಡ ತಾಯಿಯ ಹೃದಯ ಇಂದು ಪ್ರಜ್ಞಾಪೂರ್ವಕವಾಗಿ ಅದೇ ಸೊಗಸಿನ ಹಾಡನ್ನು ಹಾಡಿದೆ. ಜಯದೇವಿ ತಾಯಿಯವರ ಈ ಕೃತಿ ಘನವಾದುದು. ಅದಕ್ಕೂ ಘನತರವಾಗಿ ಹಿಂದೆ ಚಾರಿತ್ರ್ಯ ನಿಂತಿದೆ” ಎಂದಿದ್ದಾರೆ.
  2. ಡಾ. ಜಿ. ಪಿ. ರಾಜರತ್ನಂ ಅವರು “ತಾಯಿ ಜಯದೇವಿಯವರು ಹತ್ತು ವರ್ಷಗಳ ತಪಸ್ಸಿನಿಂದ ಆರುನೂರು ಪುಟಗಳ ಈ ಬೃಹತ್ ಕೃತಿಯನ್ನು ರಚಿಸಿದ್ದಾರೆ. ಇಂಥ ಕಾವ್ಯಗಳಲ್ಲಿ ಮೊದಲನೆಯದು ಮಾಸ್ತಿಯವರ ‘ನವರಾತ್ರಿ’, ಎರಡನೆಯದು ಕುವೆಂಪು ಅವರ ‘ಶ್ರೀ ರಾಮಾಯಣ ದರ್ಶನಂ’, ಮೂರನೆಯದು ‘ಶ್ರೀ ಸಿದ್ಧರಾಮ ಪುರಾಣ’, ಕವಯತ್ರಿ ಸೊಲ್ಲಾಪುರದ ಕನ್ನಡ ಕೋಟೆಯ ತಾಯಿ ಜಯದೇವಿ, ಇವರು ಸಂಚಿಯ ಹೊನ್ನಮ್ಮನ ನಂತರ ಕಾವ್ಯರಚನೆಯಲ್ಲಿ ಯಶಸ್ಸು ಸಾಧಿಸಿದವರು. ಇನ್ನೂ ಒಂದು ವಿಶೇಷವೆಂದರೆ ಸರ್ವಜ್ಞ ಕವಿಯ ತ್ರಿಪದಿ ಛಂದಸ್ಸಿನಲ್ಲಿ ನಾಲ್ಕು ಸಾವಿರ ಪದ್ಯಗಳ ಮಹಾಕಾವ್ಯ ರಚಿಸಿದವರು ಎಂಬುದರಲ್ಲಿ ಸಂದೇಹವಿಲ್ಲ” ಎಂದು ಮನಸಾರೆ ಮೆಚ್ಚಿಕೊಂಡಾಡಿದ್ದಾರೆ.

ವಿವಿಧ ಕ್ಷೇತ್ರಗಳಲ್ಲಿ ಸೇವೆ[ಬದಲಾಯಿಸಿ]

ತಾಯಿಯವರು ಹಲವು ಕ್ಷೇತ್ರಗಳಲ್ಲಿ ಆಸಕ್ತಿ ವಹಿಸಿ ಕಾರ್ಯ ನಿರತರಾಗಿದ್ದರು. ಅವರ ಸಾಧನೆಯ ಹೆಗ್ಗುರುತು -

  1. ಸಾಹಿತ್ಯ ಕ್ಷೇತ್ರ.
  2. ಮಹಿಳಾ ಸಂಘಟನೆಗಳು,
  3. ಸೇವಾದಳ,
  4. ಲಿಂಗಾಯತ ಪರಿಷತ್ತು,
  5. ಸಾಕ್ಷರತಾ ಮಂಡಲಿ,
  6. ಕರ್ನಾಟಕದ ವಿದ್ಯಾವರ್ಧಕ ಸಂಘ,
  7. ವಿಶ್ವವಿದ್ಯಾಲಯಗಳಲ್ಲಿ ಒಂದಲ್ಲ ಒಂದು ಬಗೆಯಲ್ಲಿ ಕ್ರಿಯಾಶೀಲರಾಗಿದ್ದರು.

ಪ್ರಶಸ್ತಿ ಗೌರವಗಳು[ಬದಲಾಯಿಸಿ]

  1. ರಾಜ್ಯ ಸಾಹಿತ್ಯ ಮತ್ತು ಲಲಿತಕಲಾ ಅಕಾಡೆಮಿಗಳ ಪ್ರಶಸ್ತಿ,
  2. ೧೯೭೪ರಲ್ಲಿ ಮಂಡ್ಯದಲ್ಲಿ ನಡೆಸಿದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ,
  3. ಕರ್ನಾಟಕದ ವಿಶ್ವವಿದ್ಯಾಲಯದ ಜಾನಪದ ಸಮ್ಮೇಳನದ ಅಧ್ಯಕ್ಷತೆ,
  4. ಕರ್ನಾಟ ವಿಶ್ವವಿದ್ಯಾಲಯದ ಡಿ.ಲಿಟ್ ಪದವಿ ಮೊದಲಾದ ಪ್ರಶಸ್ತಿ ಗೌರವಗಳು ತಾಯಿಯವರಿಗೆ ಸಂದಿವೆ.

ಮಾಹಿತಿ ಕೃಪೆ[ಬದಲಾಯಿಸಿ]

ಶಶಿಕಲಾ ವೀರಯ್ಯಸ್ವಾಮಿ ಅವರ ಡಾ. ಜಯದೇವಿತಾಯಿ ಲಿಗಾಡೆ ಅವರ ಕುರಿತ 'ಸಾಲು ದೀಪಗಳು' ಕೃತಿಯಲ್ಲಿ ಬರಹ.