ಜಪ್ತಿ
ಜಪ್ತಿ (ಮುಟ್ಟುಗೋಲು) ಎಂದರೆ ಯಾವೊಂದು ಸ್ವತ್ತು ಅಥವಾ ವ್ಯಕ್ತಿಯನ್ನು ಕಾನೂನಿನ ಅಭಿರಕ್ಷೆಗೆ ಅಥವಾ ಹಿಡಿತಕ್ಕೆ ಒಳಪಡಿಸುವುದು (ಅಟ್ಯಾಚ್‍ಮೆಂಟ್). ಸ್ವತ್ತನ್ನು ಹಿಡಿಯುವುದಕ್ಕೆ ಸಂಬಂಧಿಸಿದಂತೆ ಮಾತ್ರ ಸಾಮಾನ್ಯವಾಗಿ ಈ ಪದವನ್ನು ಬಳಸಲಾಗುತ್ತಿದೆ.[೧] ಯಾವೊಬ್ಬ ವ್ಯಕ್ತಿಯ ಸ್ವತ್ತನ್ನು ಜಪ್ತಿ ಮಾಡಬೇಕಾದರೆ, ತತ್ಸಂಬಂಧದಲ್ಲಿ ನ್ಯಾಯಾಲಯದ ಆಜ್ಞೆ ಇರುವುದು ಅವಶ್ಯ. ಯಾವೊಂದು ಸ್ವತ್ತನ್ನು ಜಪ್ತಿ ಮಾಡಬೇಕೆಂದು ಹೊರಡಿಸಿದ ಆಜ್ಞೆಯಲ್ಲಿ ಜಪ್ತಿಯನ್ನು ಏಕೆ ಮಾಡಲಾಗುತ್ತದೆಯೆಂಬುದನ್ನು ನ್ಯಾಯಾಲಯ ವಿಶದಪಡಿಸಿರುತ್ತದೆ. ಸಂದಾಯ ಮಾಡಬೇಕಾಗಿದ್ದ ಸಾಲದ ಹಣ ಕಂದಾಯ, ಬಾಡಿಗೆ ಮುಂತಾದವನ್ನು ಪಾವತಿಮಾಡಿಲ್ಲ ಅಥವಾ ಆ ಬಗ್ಗೆ ಕಾನೂನಿನ ಉಲ್ಲಂಘನೆ ಆಗಿದೆ ಎಂಬ ಕಾರಣಗಳ ಮೇಲೆ ಸಾಮಾನ್ಯವಾಗಿ ಜಪ್ತಿ ಮಾಡಲಾಗುವುದು. ಕೆಲವು ಸಂದರ್ಭಗಳಲ್ಲಿ ಜಪ್ತಿಗೆ ಮುಂಚೆ ಅದಕ್ಕೆ ಕಾರಣವಾದ ತೀರ್ಪನ್ನು ಕಾರ್ಯಗತಗೊಳಿಸಲು ನಿರ್ದಿಷ್ಟ ಸಮಯದ ಅವಕಾಶವನ್ನೂ ಕೊಡಲಾಗುತ್ತದೆ. ಭಾರತದಲ್ಲಿ ನ್ಯಾಯಾಲಯಗಳು ಜಪ್ತಿಯನ್ನು ಕುರಿತ ಆಜ್ಞೆಯನ್ನು 1908ರ ದಿವಾಣೀ ಪ್ರಕ್ರಿಯಾಸಂಹಿತೆಯಲ್ಲಿ ಅಡಕವಾಗಿರುವ ನಿಯಮಾವಳಿಗಳ ಮೇರೆಗೆ ಹೊರಡಿಸಬೇಕಾಗುತ್ತದೆ. ಈ ಸಂಬಂಧದಲ್ಲಿ ಹೆಚ್ಚಿನ ವಿವರಗಳು 1908ರ ದಿವಾಣೀ ಪ್ರಕ್ರಿಯಾ ಸಂಹಿತೆಯಲ್ಲಿ 46,51,52,53,60,61,63,64,81,94 ಮತ್ತು 95ನೆಯ ಪ್ರಕರಣಗಳಲ್ಲಿ ಹಾಗೂ ಅದರಲ್ಲಿಯ 16,21 ಮತ್ತು 38ನೆಯ ಆದೇಶಗಳಲ್ಲಿ ಇವೆ. ಭಾರತದ ಅನೇಕ ರಾಜ್ಯಗಳು 1908ರ ದಿವಾಣೀ ಪ್ರಕ್ರಿಯಾ ಸಂಹಿತೆಯಲ್ಲಿ ಮಾರ್ಪಾಡುಗಳನ್ನು ಮಾಡಿಕೊಂಡಿದ್ದರೂ ಜಪ್ತಿಗೆ ಸಂಬಂಧಿಸಿದ ನಿಯಮಗಳಲ್ಲಿ ಮತ್ತು ಜಪ್ತಿಯನ್ನು ಮಾಡುವ ಪ್ರಕ್ರಿಯಾ ವಿಧಾನಗಳಲ್ಲಿ ಹೆಚ್ಚಿನ ಬದಲಾವಣೆಗಳು ಇಲ್ಲ. ಅವನ್ನು ಸಂಕ್ಷಿಪ್ತವಾಗಿ ಹೀಗೆ ಹೇಳಬಹುದು :
ನಿಯಮಗಳು
[ಬದಲಾಯಿಸಿ]ಡಿಕ್ರಿಯನ್ನು (ಆಜ್ಞಪ್ತಿ) ಪಡೆದವನು ತನಗೆ ಡಿಕ್ರಿ ದೊರೆತ ನ್ಯಾಯಾಲಯದಲ್ಲಿ ಡಿಕ್ರಿಯನ್ವಯ ಸಾಲಗಾರನಾದವನ ಸ್ವತ್ತನ್ನು, ಅದು ಬೇರೊಂದು ನ್ಯಾಯಾಲಯದ ಅಧಿಕಾರವ್ಯಾಪ್ತಿಗೊಳಪಟ್ಟಿದಲ್ಲಿ, ಅಂಥ ನ್ಯಾಯಾಲಯ ಆ ಸ್ವತ್ತನ್ನು ಜಪ್ತಿ ಮಾಡಬೇಕೆಂದು ಆದೇಶಿಕೆ ಹೊರಡಿಸುವಂತೆ ಅರ್ಜಿ ಹಾಕಿಕೊಳ್ಳಬಹುದು, ಮತ್ತು ಡಿಕ್ರಿಯನ್ನು ಹೊರಡಿಸಿದ ನ್ಯಾಯಾಲಯ ಸಂಬಂಧಪಟ್ಟ ನ್ಯಾಯಾಲಯಕ್ಕೆ ಆದೇಶಿಕೆ ನೀಡಬಹುದು. ಇಂಥ ಸಂದರ್ಭಗಳಲ್ಲಿ ಜಪ್ತಿ ಕೇವಲ ಎರಡು ತಿಂಗಳ ಅವಧಿಗೆ ಇರುತ್ತದೆ. ಈ ಅವಧಿಯಲ್ಲಿ ಜಪ್ತಿ ಮಾಡಿದ ನ್ಯಾಯಾಲಯಕ್ಕೆ ಆದೇಶಿಕೆ ನೀಡಬಹುದು. ಇಂಥ ಸಂದರ್ಭಗಳಲ್ಲಿ ಜಪ್ತಿ ಮಾಡಿದ ನ್ಯಾಯಾಲಯಕ್ಕೆ ಡಿಕ್ರಿ ವರ್ಗಾಯಿಸಲ್ಪಡಬೇಕು ಇಲ್ಲವೆ ಜಪ್ತಿಯ ಅವಧಿಯನ್ನು ವಿಸ್ತರಿಸುವ ಆಜ್ಞೆಯಾಗಬೇಕು. ಡಿಕ್ರಿಯನ್ನು ಕಾರ್ಯಗತಗೊಳಿಸುವ ವಿಧಾನಗಳಲ್ಲಿ ಸ್ವತ್ತನ್ನು ಜಪ್ತಿಮಾಡುವುದು ಮತ್ತು ಅದನ್ನು ಮಾರುವುದು ಸೇರಿದ್ದು, ಹಾಗೆ ಮಾಡಲು ನ್ಯಾಯಾಲಯಗಳಿಗೆ ಅಧಿಕಾರವಿರುತ್ತದೆ. ಹಣದ ಸಂದಾಯ ಕುರಿತ ಡಿಕ್ರಿಯಾಗಿದ್ದು ಅದು ಮೃತನ ಸ್ವತ್ತಿಗೆ ಸಂಬಂಧಿಸಿದ್ದರೆ, ಅಂಥ ಆಸ್ತಿಯನ್ನು ಜಪ್ತಿಮಾಡಿ, ಅದನ್ನು ಮಾರುವುದರ ಮೂಲಕ ಡಿಕ್ರಿಯನ್ನು ಕಾರ್ಯಗತಗೊಳಿಸಬಹುದು. ಹಾಗೆ ಮಾಡುವುದಕ್ಕೆ ಮುಂಚಿತವಾಗಿ ಮೃತನ ನ್ಯಾಯಿಕ ಪ್ರತಿನಿಧಿಯ ವಿರುದ್ಧ ಅಂಥ ಡಿಕ್ರಿಯನ್ನು ಪಡಿದಿರಬೇಕು.
1908ರ ದಿವಾಣೀ ಪ್ರಕ್ರಿಯಾ ಸಂಹಿತೆಯ 60ನೆಯ ಪ್ರಕರಣದಲ್ಲಿ ಯಾವ ಯಾವ ತರಹದ ಸ್ವತ್ತನ್ನು ಜಪ್ತಿ ಮಾಡಬಹುದು ಎಂಬುದನ್ನು ಕುರಿತಂತೆ ವಿಧಿನಿಷೇಧಗಳನ್ನು ಹೇಳಲಾಗಿದೆ. ಒಟ್ಟಾರೆ ಜೀವನೋಪಾಯಕ್ಕೆ ಅಗತ್ಯವಾದಷ್ಟು ಬಟ್ಟೆ ಹಾಗೂ ಅಡುಗೆಯ ಪಾತ್ರೆಗಳು, ಧಾರ್ಮಿಕ ರೂಢಿಗನುಸಾರವಾಗಿ ಮಹಿಳೆಯರು ಬಿಟ್ಟುಕೊಡಲು ಬಾರದಂಥ ವ್ಯಕ್ತಿಗತ ಆಭರಣಗಳು, ಕೃಷಿಕನ ಕೆಲಸದ ಅಗತ್ಯದ ಸಾಮಾನುಗಳು, ಕಾನೂನಿನನ್ವಯ ನಿಗದಿಗೊಳಿಸಿದಂತೆ ಧಾನ್ಯ ಹಾಗೂ ಸಂಬಳದ ಮೊತ್ತ ಮುಂತಾದವನ್ನು ಜಪ್ತಿಮಾಡಲು ಬರುವುದಿಲ್ಲ.
ಸಾಕ್ಷಿಯಾದವನು ನ್ಯಾಯಾಲಯದ ಮುಂದೆ ಆದೇಶದಂತೆ ಹಾಜರಾಗಲು ತಪ್ಪಿದರೆ ಆತನ ಸ್ವತ್ತನೂ ಜಪ್ತಿ ಮಾಡಬಹುದು. ನ್ಯಾಯಾಲಯದ ಮುಂದೆ ಯಾವೊಂದು ವಿವಾದ ಇದ್ದಾಗ ಜಪ್ತಿ ಮಾಡಬೇಕಾದಂಥ ಮತ್ತು ವಿವಾದ ಇತ್ಯರ್ಥವಾದ ಮೇಲೆ ತತ್ಸಂಬಂಧದಲ್ಲಿ ಜಪ್ತಿ ಮಾಡಬೇಕಾದಂಥ ಸಂದರ್ಭಗಳನ್ನೂ ಜಪ್ತಿ ಮಾಡುವ ಪ್ರಕ್ರಿಯಾ ವಿಧಾನಗಳನ್ನೂ ದಿವಾಣೀ ಪ್ರಕ್ರಿಯಾ ಸಂಹಿತೆಯಲ್ಲಿ ವಿವರಿಸಲಾಗಿದೆ.
ವಿವಾದ ಇತ್ಯರ್ಥವಾಗದಿದ್ದು, ತೀರ್ಪಿಗೆ ಮುಂಚಿತವಾಗಿ ಜಪ್ತಿ ಮಾಡಬೇಕೆಂದು ಮನವಿ ಸಲ್ಲಿಸಿದ್ದರೆ ಅಥವಾ ಜಪ್ತಿಯನ್ನು ಮಾಡಿಸಿದ್ದರೆ ಮತ್ತು ಅನಂತರದಲ್ಲಿ ಹಾಗೆ ಮಾಡಿರುವುದಕ್ಕೆ ಸರಿಯಾದ ಅಥವಾ ಸಾಕಷ್ಟು ಕಾರಣಗಳಿಲ್ಲದಿದ್ದ ಪಕ್ಷದಲ್ಲಿ, ಮನವಿದಾರ ಅಥವಾ ಜಪ್ತಿಮಾಡಿಸಿದವನು ತತ್ಸಂಬಂಧವಾಗಿ ಪ್ರತಿವಾದಿಗೆ ಅಥವಾ ಜಪ್ತಿಯಾಗಿದ್ದ ಸ್ವತ್ತಿಗೆ ಉಂಟಾದ ಹಾನಿಯನ್ನು ತುಂಬಿಕೊಡಲು ಹೊಣೆಯಾಗುತ್ತಾನೆ.
ಜಪ್ತಿಗೆ ಸಂಬಂಧಿಸಿದಂತೆ ಈ ಬಗೆಯ ಸಾಮಾನ್ಯ ನಿಯಮಗಳು ಪ್ರಪಂಚದ ಅನೇಕ ರಾಷ್ಟ್ರಗಳ ಕಾನೂನುಗಳಲ್ಲಿ ಇವೆ.
ಉಲ್ಲೇಖಗಳು
[ಬದಲಾಯಿಸಿ]- ↑ Chisholm, Hugh, ed. (1911). Encyclopædia Britannica (Eleventh ed.). Cambridge University Press – via Wikisource. .