ಚಿಕ್ಕಹೊಸಹಳ್ಳಿ
ಚಿಕ್ಕಹೊಸಹಳ್ಳಿ ಎಂಬ ಈ ಗ್ರಾಮವು ಕರ್ನಾಟಕ ರಾಜ್ಯದ ರಾಜಧಾನಿಯಾದ ಬೆಂಗಳೂರಿನ ಆನೇಕಲ್ ತಾಲ್ಲೂಕಿನಲ್ಲಿದೆ.ಆನೇಕಲ್ ಪಟ್ಟಣದಿಂದ ಕನಕಪುರ ಮಾರ್ಗದಲ್ಲಿ ಸಾಗಿದಾಗ ನಾವು ಈ ಗ್ರಾಮವನ್ನು ಕಾಣಬಹುದು.ಮಾರ್ಗ ಮಧ್ಯದಲ್ಲಿ ನಾವು ಸುಮಾರು ನಾಲ್ಕು ಹಳ್ಳಿಗಳ್ಳನ್ನು ದಾಟಬೇಕಾಗುತ್ತದೆ.ಈ ಹಳ್ಳಿಯ ಒಂದು ಭಾಗವು ಕಾಡಿನಿಂದ ಸುತ್ತುವರೆದಿದೆ.ಈ ಹಳ್ಳಿಯಿಂದ ಸುಮಾರು ಒಂದು ಕಿಲೋಮೀಟರ್ ಕ್ರಮಿಸಿದರೆ ಅರಣ್ಯಪ್ರದೇಶ ದೊರಕುತ್ತದೆ. ಈ ಹಳ್ಳಿ ತಮಿಳುನಾಡಿನ ಗಡಿಯಿಂದ ಕೇವಲ ಹತ್ತು ಕಿಲೋಮೀಟರ್ ದೂರದಲ್ಲಿದೆ.ಈ ಹಳ್ಳಿಯಲ್ಲಿ ಅಂದಾಜು ನೂರ ಐವತ್ತರಿಂದ ನೂರ ಎಂಬತ್ತು ಮನೆಗಳಿವೆ.ಹಳ್ಳಿಯನ್ನು ಮೇಲಿನ ಬೀದಿ, ಕೆಳ ಬೀದಿ ಹಾಗು ಹೊರವಲಯ ಎಂದು ಮೂರು ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ.ಊರಿನಲ್ಲಿ ಸುಮಾರು ಏಳುನೂರು ಜನರಿದ್ದಾರೆ. ಗ್ರಾಮದಲ್ಲಿ ಒಕ್ಕಲಿಗ,ಬಲಜಿಗ,ಗೌಡ,ರೆಡ್ಡಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರಿದ್ದಾರೆ. ಈ ಗ್ರಾಮದಲ್ಲಿ ಸುಮಾರು ಐವತ್ತು ವರ್ಷಗಳ ಹಿಂದೆ ಜಾತಿಪದ್ದತಿಯ ಕ್ರೂರತ್ವವನ್ನು ನೋಡಬಹುದಿತ್ತು.ಆದರೆ ಈಗ ಜಾತಿ ವ್ಯವಸ್ಥೆಯು ಹೇಳಿಕೊಳ್ಳುವಷ್ಟೇನು ಸದ್ದುಮಾಡುತ್ತಿಲ್ಲ,ಕಾಲ ಕ್ರಮಿಸಿದ ಹಾಗೆ ಕ್ಷೀಣಿಸುತ್ತಿದೆ.
ನೈಸರ್ಗಿಕ ಸ೦ಪನ್ಮೂಲ
[ಬದಲಾಯಿಸಿ]ಗ್ರಾಮದಲ್ಲಿ ಮೂರು ಕೆರೆಗಳಿವೆ.೧.ಹುಚ್ಚಮ್ಮನ ಕೆರೆ ೨.ಈಶೆಟ್ಟಿ ಕೆರೆ ೩.ಊರು ಮುಂದಿನ ಕೆರೆ. ಮಳೆಗಾಲದಲ್ಲಿ ಈ ಕೆರೆಗಳು ತುಂಬಿದರೆ ಬೇಸಿಗೆಕಾಲದ ಅಂತ್ಯದವರೆಗೂ ಬತ್ತುವುದಿಲ್ಲ.ಊರಿನ ರೈತರು ಕೆಲವು ಸಂದರ್ಭಗಳಲ್ಲಿ ವ್ಯವಸಾಯಕ್ಕಾಗಿ ಇದೇ ನೀರಿನ ಮೇಲೆ ಅವಲಂಬಿತರಾಗಿರುತ್ತಾರೆ. ಹಾಗು ಕೆರೆಗಳಲ್ಲಿ ಮೀನು ಸಾಕಾಣಿಕೆಯನ್ನು ಮಾಡುತ್ತಾರೆ. ಹುಚ್ಚಮ್ಮನ ಕೆರೆಯಲ್ಲಿ ವಿಶೇಷವಾಗಿ ಸಾಕಷ್ಟು ಸಂಖ್ಯೆಯಲ್ಲಿ ತಾವರೆ ಹೂಗಳು ಬೆಳೆಯುತ್ತವೆ. ಕೆರೆಯು ಅರಣ್ಯಕ್ಕೆ ಹತ್ತಿರದಲ್ಲೇ ಇರುವುದರಿಂದ ಇಲ್ಲಿಗೆ ಹಲವಾರು ಕಾಡು ಪ್ರಾಣಿಗಳು ನೀರು ಕುಡಿಯಲು ಬಂದು ಹೋಗುತ್ತವೆ. ಇಲ್ಲಿಯ ಮತ್ತೊಂದು ವಿಶೇಷತೆ ಏನೆಂದರೆ ನೂರ ಇಪ್ಪತ್ತು ವರ್ಷಗಳ ಹಿಂದಿನ ಆಂಜನೇಯ ಸ್ವಾಮಿಯ ವಿಗ್ರಹವೊಂದು ಕೆರೆಯಲ್ಲಿ ಹೂಳೆತ್ತುವಾಗ ದೊರಕಿದಾಗ,ಕೆರೆಯ ಬದಿಯಲ್ಲಿ ದೇವಾಲಯವನ್ನು ನಿರ್ಮಿಸಿ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ಈಶೆಟ್ಟಿ ಕೆರೆಯು ಹೊಲ ಗದ್ದೆಗಳಿಂದ ಸುತ್ತುವರೆದಿದೆ.ಆದ್ದರಿಂದ ಈ ಕೆರೆಯು ಕೃಷಿಗೆ ಸಹಕಾರಿಯಾಗಿದೆ.ಹಾಗೇ ಜಾನುವಾರುಗಳನ್ನು ತೊಳೆಯಲು ಕೂಡ ಇದೇ ನೀರನ್ನು ಬಳಸುತ್ತಾರೆ. ಮಳೆಗಾಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಏಡಿಕಾಯಿ ದೊರಕುವುದು ಇಲ್ಲಿನ ವಿಶೇಷತೆ. ಊರಿನ ಮುಂಭಾಗದಲ್ಲಿರುವುದರಿಂದ ಮತ್ತೊಂದು ಕೆರೆಗೆ ಊರು ಮುಂದಿನ ಕೆರೆ ಎಂದೇ ಹೆಸರು ಬಂದಿದೆ.ಊರಿನಲ್ಲಿ ಬೀಳುವ ನೀರೆಲ್ಲಾ ಮೊದಲು ಇದೇ ಕೆರೆಯನ್ನು ಸೇರುತ್ತದೆ. ಈ ಕೆರೆ ತುಂಬಿ ಕೋಡಿ ಹರಿದಾಗ ನೀರು ಈಶೆಟ್ಟಿ ಕೆರೆಯನ್ನು ಸೇರುವಂತೆ ವ್ಯವಸ್ಥೆ ಮಾಡಲಾಗಿದೆ.ಈ ರೀತಿ ಕೆರೆಗಳು ಊರಿನ ಸಮೀಪದಲ್ಲಿದ್ದು ಊರಿನ ಜನರಿಗೆ ಸಹಾಯಕವಾಗಿದೆ.
ಶಿಕ್ಷಣ ಮತ್ತು ಧಾರ್ಮಿಕ ಆಚರಣೆಗಳು
[ಬದಲಾಯಿಸಿ] ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಈ ಊರಿನಲ್ಲಿ ಸರ್ಕಾರಿ ಪ್ರಾಥಮಿಕ ಹಿರಿಯ ಪಾಠಶಾಲೆಯಿದೆ.ಶಾಲೆಯಲ್ಲಿ ಒಂದರಿಂದ ಎಂಟನೆಯ ತರಗತಿಯವರೆಗೆ ವ್ಯಾಸಂಗ ಮಾಡಬಹುದು.ಶಾಲೆಯ ಮುಂದೆ ಕೈತೋಟವಿದೆ.ಹಾಗೆಯೇ ಶಾಲೆಯ ಆವರಣದಲ್ಲಿ ಅಂಗನವಾಡಿ ಕೇಂದ್ರವಿದೆ ಮತ್ತು ಕಾಶಿಯಿಂದ ಅಮೃತಶಿಲೆಯ ಶಿವಲಿಂಗವನ್ನು ತಂದು ಪ್ರತಿಷ್ಠಾಪಿಸಿರುವ ನೂರ ಐವತ್ತು ವರ್ಷಗಳ ಇತಿಹಾಸವಿರುವ ದೇವಾಲಯ ಕೂಡ ಇದೆ. ಆದ್ದರಿಂದ ಇದು "ಕಾಶಿ ವಿಶ್ವನಾಥ ದೇವಾಲಯ" ಎಂದೇ ಹೆಸರುವಾಸಿಯಾಗಿದೆ. ಕಡೇ ಕಾರ್ತಿಕ ಸೋಮವಾರ ಹಾಗು ಶಿವರಾತ್ರಿ ದಿನಗಳಲ್ಲಿ ವಿಶೇಷ ಪೂಜೆಯಿರುತ್ತದೆ. ಈ ದೇವಾಲಯದಿಂದ ನೂರು ಅಡಿ ಸಾಗಿದಾಗ ಅಶ್ವತ್ಥ ಕಟ್ಟೆಯೊಂದು ಸಿಗುತ್ತದೆ. ಇದು ತುಂಬಾ ಪುರಾತನದ್ದಾಗಿದ್ದು ಎರಡು ಬೃಹತಾಕಾರದ ಅರಳಿಮರಗಳಿವೆ. ಈ ಕಟ್ಟೆ ಶಿಥಿಲಗೊಂಡಿದ್ದರಿಂದ ಇದೇ ಊರಿನಲ್ಲಿ ಹುಟ್ಟಿಬೆಳೆದು ವಿಧಾನಪರಿಷತ್ ಸದಸ್ಯೆಯಾಗಿರುವ ಶ್ರೀಮತಿ ತಾರಾ ಅನುರಾಧರವರು ಹಣವನ್ನು ಮಂಜೂರು ಮಾಡಿಸಿ ಹಳ್ಲಿಕಟ್ಟೆಯನ್ನು ೨೦೧೪ರಲ್ಲಿ ಪುನರ್ ಪ್ರತಿಷ್ಠಾಪಿಸಿದರು. ಊರಿನ ಮಧ್ಯಭಾಗದಲ್ಲಿ ಗ್ರಾಮದೇವತೆ ಮಾರಮ್ಮನ ದೇವಾಲಯವಿದೆ.ಮಂಗಳವಾರ ಮತ್ತು ಶುಕ್ರವಾರದಂದು ಪೂಜೆಗಳು ನಡೆಯುತ್ತವೆ. ಊರಿನ ಮತ್ತೊಂದು ಹೆಸರುವಾಸಿ ದೇಗುಲವೆಂದರೆ ಶ್ರೀ ಮಹದೇಶ್ವರ ಸ್ವಾಮಿ ದೇವಾಲಯ. ಹಬ್ಬಹರಿದಿನಗಳಲ್ಲಿ ಈ ದೇವಾಲಯದಲ್ಲಿ ವಿಶೇಷ ಪೂಜೆಗಳಿರುತ್ತವೆ.ಪ್ರತಿವರ್ಷ ಜೂನ್ ತಿಂಗಳಲ್ಲಿ ಮಹದೇಶ್ವರ ಸ್ವಾಮಿಯ ಜಾತ್ರೆಯನ್ನು ವಿಜೃಂಭಣೆಯಿಂದ ನಡೆಸುತ್ತಾರೆ. ಊರನ್ನು ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಿರುತ್ತಾರೆ.ದೇವಾಲಯದಿಂದ ಅಗ್ನಿಕೊಂಡವು ಸಿದ್ಧಗೊಂಡಿರುತ್ತದೆ.ದೇವರು ಹಾಗೂ ಭಕ್ತರು ಅಗ್ನಿಕೊಂಡ ಪ್ರವೇಶ ಮಾಡಿದ ಬಳಿಕ ಅನ್ನದಾನ ಮಾಡುತ್ತಾರೆ. ನಂತರ ರಾತ್ರಿಯಲ್ಲಿ ಪಲ್ಲಕ್ಕಿ ಹಾಗು ಕರಗ ಉತ್ಸವಗಳು ನಡೆಯುತ್ತವೆ. ಮಾರನೇ ದಿನ ಬೆಳಿಗ್ಗೆ ಗ್ರಾಮ ದೇವತೆಗೆ ವಿಶೇಷವಾದ ಪೂಜೆ ಇರುತ್ತದೆ.ಊರಿನ ಮಹಿಳೆಯರು ದೀಪದ ಆರತಿಗಳನ್ನು ಸಿದ್ಧಪಡಿಸಿ ಮೆರವಣಿಗೆ ಮಾಡಿ ಎಲ್ಲಾ ದೇವಾಲಯಗಳಿಗೂ ಭೇಟಿ ನೀಡಿ ಪೂ ಜೆ ಸಲ್ಲಿಸುತ್ತಾರೆ.ವಿಶೇಷವಾಗಿ ಮಾಂಸಾಹಾರದ ಊಟ ಏರ್ಪಡಿಸಿ ಊರ ಹಬ್ಬವನ್ನು ಆಚರಿಸುತ್ತಾರೆ.
ಸಾರಿಗೆ ಮತ್ತು ಸಾರ್ವಜನಿಕ ಅನುಕೂಲಗಳು
[ಬದಲಾಯಿಸಿ]ಈ ಹಳ್ಳಿಯಿಂದ ಕಾಡಿನ ಕಡೆ ನಡೆದುಕೊಂಡು ಹೋದರೆ ಬಂಡೆ ಕೊರೆಯುವ ಪ್ರದೇಶವೊ೦ದಿದೆ.ಇಲ್ಲಿನ ವಿಶೇಷತೆ ಏನೆಂದರೆ ಕಲ್ಲು ಕೊರೆಯುವ ಸಂದರ್ಭದಲ್ಲಿ ನೀರು ದೊರಕಿದೆ.ಇಲ್ಲಿ ನೀರು ತುಂಬಾ ಶುದ್ಧವಾಗಿದ್ದು ಪಟ್ಟಣದಿಂದೆಲ್ಲಾ ಅನೇಕರು ಈಜಲು ಇಲ್ಲಿಗೆ ಬರುತ್ತಾರೆ. ಇಲ್ಲಿಂದ ಕಾಡಿನಲ್ಲಿರುವ ಮುತ್ತರಾಯ ದೇವಾಲಯ ಹೆಚ್ಚು ದೂರವೇನಿಲ್ಲ.ಪ್ರತಿವರ್ಷ ಶ್ರಾವಣ ಮಾಸದಲ್ಲಿ ಇಲ್ಲಿಗೆ ಭೇಟಿ ನೀಡಿ ಪೂಜೆ ಸಲ್ಲಿಸಲಾಗುತ್ತದೆ.ಹಾಗೆ ಈ ಹಳ್ಳಿಯಿಂದ ಸುಮಾರು ಹದಿನೈದು ಕಿಲೋಮೀಟರ್ ಸಾಗಿದರೆ ಸಿಡಿಲುಕಲ್ಲು ಎಂಬ ಬೆಟ್ಟ ಕಾಡಿನ ನಡುವೆ ಸಿಗುತ್ತದೆ.ಇಲ್ಲಿಗೂ ಪ್ರತಿವರ್ಷ ಭೇಟಿ ನೀಡಲಾಗುತ್ತದೆ. ಈ ಹಳ್ಳಿಯಲ್ಲಿ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ ಒಂದಿದೆ. ಹಾಗೂ ನ್ಯಾಯಬೆಲೆ ಅಂಗಡಿ ಕೂಡ ಇದೆ. ಊರಿನಲ್ಲಿ ಪಡಿತರ ಚೀಟಿ ಹೊಂದಿರುವವರಿಗೆ ಕಡಿಮೆ ದರದಲ್ಲಿ ಧಾನ್ಯಗಳನ್ನು ಹಾಗೂ ಸೀಮೆಎಣ್ಣೆಯನ್ನು ವಿತರಿಸುವರು.ಈ ಹಳ್ಳಿಯು ಇಂಡ್ಲವಾಡಿ ಗ್ರಾಮ ಪಂಚಾಯತಿಯ ಸರಹದ್ದಿನಲ್ಲಿದೆ.ಈ ಹಳ್ಳಿ ಮತ್ತೆ ಇತರೆ ಎರಡು ಹಳ್ಳಿಗಳನ್ನು ಒಡಗೂಡಿಸಿ ಒಂದು ಚುನಾವಣಾ ಕ್ಷೇತ್ರವೆಂದು ಪರಿಗಣಿಸಲಾಗಿದೆ. ಯಾವುದೇ ಚುನಾವಣೆಯಿದ್ದರೂ ಈ ಊರಿನ ಶಾಲೆಯಲ್ಲಿ ನಡೆಯುತ್ತದೆ.ಈ ಹಳ್ಳಿಯಲ್ಲಿ ನೀರಿನ ವಿತರಣೆ ತುಂಬಾ ಸೌಕರ್ಯವಾಗಿದೆ. ಈ ಹಳ್ಳಿಗೆ ಸಾರಿಗೆ ವ್ಯವಸ್ಥೆ ಹೇಳಿಕೊಳ್ಳುವಷ್ಟು ಸಹಾಯಕವಾಗಿಲ್ಲ.ಕೆ.ಆರ್.ಮಾರ್ಕೆಟ್ ಹಾಗೂ ಕೆಂಪೇಗೌಡ ಬಸ್ ನಿಲ್ದಾಣದಿಂದ ಎರಡು ಬಸ್ ದಿನಕ್ಕೆ ಮೂರು ಬಾರಿ ಬರುತ್ತದೆ. ಇನ್ನು ಆನೇಕಲ್ ಪಟ್ಟಣದಿಂದ ಸುಮಾರು ಎರಡು ಗಂಟೆಗೆ ಒಂದು ಬಸ್ ಬರುತ್ತದೆ. ಹಳ್ಳಿಯ ಜನರು ಗರಿಷ್ಟ ಸಂಖ್ಯೆಯಲ್ಲಿ ಕೃಷಿಯ ಮೇಲೆ ಅವಲಂಬಿಸಿದ್ದಾರೆ. ಕೆಲವರು ಉದ್ಯೋಗಕ್ಕಾಗಿ ಪಟ್ಟಣಕ್ಕೆ ಹೋಗುತ್ತಾರೆ.ಈ ಹಳ್ಳಿಯಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.ಇಲ್ಲಿನ ವಾತಾವರಣಕ್ಕೂ ಪಟ್ಟಣದ ವಾತಾವರಣಕ್ಕೂ ಸಾಕಷ್ಟು ವ್ಯತ್ಯಾಸವಿದೆ.