ಗ್ರ್ಯಾಂಡ್ ಕ್ಯಾನ್ಯನ್
ಗ್ರ್ಯಾಂಡ್ ಕ್ಯಾನ್ಯನ್ ಅಮೇರಿಕಾದ ಅರಿಜೊನ ಪ್ರಾಂತ್ಯದಲ್ಲಿದ್ದು, ಇದು ಕೊಲೆರಾಡೋ ನದಿಯ ಕೊರೆತದಿಂದ ಉಂಟಾದ ಕಂದರಗಳನ್ನು ಒಳಗೊಂಡಿದೆ.ಇದು ಪ್ರಪಂಚದ ಏಳು ಪ್ರಾಕೃತಿಕ ಅದ್ಭುತಗಳಲ್ಲಿ ಒಂದಾಗಿದೆ.[೧] ಗ್ರಾಂಡ್ ಕ್ಯಾನ್ಯನ್ ೪೪೬ ಕಿ.ಮೀ.ಉದ್ದವಾಗಿದ್ದು ,೨೯ ಕಿ.ಮೀ ಆಗಲವಾಗಿದೆ. ಇದರ ಆಳ ಕೆಲವು ಕಡೆಗಳಲ್ಲಿ ೧೮೦೦ ಮೀಟರ್‍ಗಳಷ್ಟು ಇದೆ.[೨]
ಗ್ರ್ಯಾಂಡ್ ಕ್ಯಾನ್ಯನ್- ಅಮೆರಿಕ ಸಂಯುಕ್ತ ಸಂಸ್ಥಾನಗಳ ಆರಿಜೋನ ರಾಜ್ಯದ ಉತ್ತರ ಭಾಗದ ಕೊಲೆರಾಡೋ ಪ್ರಸ್ಥಭೂಮಿಯಲ್ಲಿ ಕಾಲೊರಾಡೋ ನದಿಯ ಕೊರೆತದಿಂದ ಸಂಭವಿಸಿರುವ ಆಳವಾದ ಕಮರಿಯಾಗಿದೆ. ಇದರ ಹೊರಗೋಡೆಗಳ ನಡುವೆ ಹಲವು ವರ್ಣರಂಜಿತ ಶಿಖರಗಳಿವೆ. ಕಮರಿಯೊಳಗೆ ಕಮರಿಗಳು ಕವಲುಕವಲಾಗಿ ಸಾಲು ಸಾಲಾಗಿ ಗುಂಪು ಗುಂಪಾಗಿ ವಿಚಿತ್ರ ವಿನ್ಯಾಸ ಮೆರೆದಿವೆ. ಇದರ ಅಗಲ 4 - 18 ಮೈಲಿ. ಕೆಲವು ಕಡೆ ಒಂದು ಮೈಲಿಗೂ ಹೆಚ್ಚು ಆಳವಾಗಿದೆ. ಆರಿಜೋನ ರಾಜ್ಯದ ಉತ್ತರ ಅಂಚಿನಿಂದ ನೆವಾಡದ ಬಳಿಯ ಗ್ರ್ಯಾಂಡ್ ವಾಷ್ ಗುಡ್ಡ2ಗಳ ಸಾಲಿನವರೆಗೆ ಸು. 280 ಮೈ. ಸಾಗಿದೆ. ಕಾಲೊರಾಡೋ ನದಿ ಈ ಕಮರಿಯಲ್ಲಿ 105 ಮೈ. ದೂರ ಸುತ್ತಿ ಬಳಸಿ ಹರಿಯುತ್ತದೆ. ಕಮರಿಯ ಗುಡ್ಡಗಳ ಬಣ್ಣ ಮಾಸಲು ಕೆಂಪು. ಆದರೆ ಒಂದೊಂದು ಪದರಕ್ಕೂ ಪದರಗಳ ಸಮೂಹಕ್ಕೂ ವಿಶಿಷ್ಟ ಬಣ್ಣವುಂಟು. ಮಾಸಲು ಹಳದಿ. ಸಾಧಾರಣ ಹಸುರು, ಎಳೆಗಂಪು - ಇಂಥ ಬಣ್ಣಗಳಿಂದ ಇದರ ಗುಡ್ಡಗಳು ಮನಮೋಹಕವಾಗಿವೆ. ಗ್ರ್ಯಾಂಡ್ ಕ್ಯಾನ್ಯನಗೆ ಸಾಟಿಯಾದ ಕಮರಿ ವಿಶ್ವದಲ್ಲಿ ಮತ್ತೊಂದಿಲ್ಲ.
ಕ್ಯಾನ್ಯನ್ ಕಮರಿಯ ಗೋಡೆಗಳು ಸಮುದ್ರ ಸುಣ್ಣಗಲ್ಲು, ನದೀಜೇಡಿ ಪದರಗಲ್ಲು, ಆದಿಭೂಯುಗದ ಮರಳುಗಲ್ಲು, ಸುಣ್ಣದ ಮಣ್ಣು ಹಾಗೂ ಮರಳುಗಳ ಮಿಶ್ರಣದಿಂದ ಯುಗಯುಗಗಳಲ್ಲಿ ರೂಪುಗೊಂಡ ಬಂಡೆಗಳು - ಇವುಗಳಿಂದ ಕೂಡಿವೆ. ಕಮರಿಯ ಒಳಭಾಗದಲ್ಲಿ ತಿರುಚಿಕೊಂಡಿರುವ ಸ್ಫಟಿಕ ಶಿಲೆಗಳು ಆರ್ಕಿಯನ್ ಪ್ರಾಕ್ ಹಾಗೂ ಕೇಂಬ್ರಿಯನ್ ಯುಗದ ಶಿಲೆಗಳು ; ಬೆಣಚುಕಲ್ಲು ಮತ್ತು ಪದರಗಲ್ಲುಗಳಿಂದ ಆಗಿವೆ. ಬಂಡೆಗಳ ಮೇಲೆ ಎರಡನೆಯ ಭೂಯುಗದ ಚಪ್ಪಟೆಯ ಗುಡ್ಡಗಳು ಕುಂಕುಮ, ಎಳೆಗೆಂಪು ಹಾಗೂ ಬಿಳಿಯ ಬಣ್ಣಗಳಿಂದ ಕೂಡಿದ ಪ್ರಪಾತಗಳು ಮತ್ತು ಇಳಿಮೇಡುಗಳು ಇವೆ. ಕ್ಯಾನ್ಯನ್ ಬಯಲಿನ ಕೆಲವು ಭಾಗಗಳಲ್ಲಿ ಅಗ್ನಿಪರ್ವತಗಳಿಂದ ಹೊರಬಿದ್ದ ಕರಿಯ ಶಿಲಾಪ್ರವಾಹ ಹರಡಿದೆ. ಈ ಅಗ್ನಿಪರ್ವತಗಳು 1,000 ವರ್ಷಗಳಿಂದ ಜೀವಂತವಾಗಿವೆ. ಕಾಲೊರಾಡೋ ನದಿ ಕ್ಯಾನ್ಯನ್ ಕಮರಿಯಲ್ಲಿ ಪ್ರತಿದಿನವೂ ಸರಾಸರಿ 5,00,000ಟನ್ನುಗಳಷ್ಟು ಮಣ್ಣು, ಮರಳು ಮತ್ತು ಕಂಕರನ್ನು ಸಾಗಿಸುತ್ತದೆ. ಕ್ಯಾನ್ಯನ್ ಕಮರಿಯ ಆಳ ರಭಸವಾಗಿ ಹರಿಯುವ ನದಿಯ ಕೊರೆತದಿಂದಾದ್ದು. ಪ್ರವಾಹ, ಗಾಳಿ, ಉಷ್ಣತೆ, ರಾಸಾಯನಿಕ ಕ್ರಿಯೆ - ಇವೆಲ್ಲವುಗಳಿಂದ ಮೆತುಬಂಡೆಗಳು ಕರಗಿ ನದಿಯ ಅಗಲ ವಿಸ್ತರಿಸಿದೆ. ಕ್ಯಾನ್ಯನ್ ಕಮರಿಯ ಸೃಷ್ಟಿಗೆ ನದಿಯ ಹಿಂಪ್ರವಾಹ ಕಾರಣ. ನದಿಯ ಹರಿವಿಗೆ ಅಡಚಣೆಯಾಗಿ ಭೂಮಿ ಏಳಲಾರಂಭಿಸಿದಾಗ ನದಿ ಅದರ ಮೇಲೆ ಹರಿದು ಕಮರಿಯನ್ನು ಕೊರೆಯಿತು. ದಕ್ಷಿಣದ ಕಡೆಯ ಇಳಕಲು ಭೂಮಿಗೆ ಅಡ್ಡಲಾಗಿರುವ ಕಮರಿಯ ಪೂರ್ವ ಪಶ್ಚಿಮ ಭಾಗಗಳು ಈ ಪ್ರಕ್ರಿಯೆಗೆ ನಿದರ್ಶನವಾಗಿವೆ. ಕಲ್ನಾರು, ತಾಮ್ರ, ಸೀಸ ಮತ್ತು ಯುರೇನಿಯಂ ಇಲ್ಲಿ ಸಿಗುವ ಖನಿಜಗಳು. ಇಲ್ಲಿ ಹಳೆಯ ಯುಗದ ಬಂಡೆಗಳೂ ಸಸ್ಯ ಮತ್ತು ಪ್ರಾಣಿಗಳ ಫಾಸಿಲುಗಳೂ ಹೇರಳವಾಗಿವೆ. ಕಮರಿಯ ಕೆಳಗಿನ ಸ್ತರಗಳಲ್ಲಿಯ ಪ್ರಾಚೀನ ಸಮುದ್ರ ಚಿಪ್ಪುಗಳು ; ಟ್ರೆರೋಬೈಟ್, ಸಮುದ್ರ ಸಂಧಿಪದಿಗಳು, ಒಂಟೆ ಆನೆ, ಕುದುರೆ, ಡಿನೊಸಾರ್ (ಮೂಳೆ ಮತ್ತು ಹೆಜ್ಜೆ ಗುರುತು) ; ನೆಲದ ಸ್ಲಾತ್ ಮುಂತಾದ ವಿವಿಧ ಜೀವಿಗಳ ಫಾಸಿಲುಗಳು ಇಲ್ಲಿವೆ. ಇವುಗಳಿಂದ ಇಲ್ಲಿ ಹಿಂದೆ ಇದ್ದ ಜೀವಿಗಳ ಪರಿಚಯ ದೊರಕುತ್ತದೆ.
ಶೋಧ
[ಬದಲಾಯಿಸಿ]ಗ್ರ್ಯಾಂಡ್ ಕ್ಯಾನ್ಯನ್ ಕಮರಿಯನ್ನು 1554ರಲ್ಲಿ ಕೊರೊನಾಡೋ ಪರಿಶೋಧನ ತಂಡ ಕಂಡುಹಿಡಿಯಿತು. ಫ್ರಾನ್ಸಿಸ್ಕೊ ಗಾರ್ನಿಸ್, ಸಿಲ್ವೆಸ್ಟ್ರೆ ವೆಲೇಜ್ ïದ ಎಸ್ಕಲಾಂಟಿ ಎಂಬ ಇಬ್ಬರು ಸ್ಪ್ಯಾನಿಷ್ ಪಾದ್ರಿಗಳು ಅದರ ಇರವನ್ನು ಮತ್ತೆ ಕಂಡರು (1776). ಈ ಪ್ರದೇಶದ ಭೌಗೋಳಿಕ, ಭೂವೈಜ್ಞಾನಿಕ ಹಾಗೂ ಮಾನವ ಕುಲ ಶಾಸ್ತ್ರಕ ಸಂಶೋಧನೆಗಳು 869 ಮತ್ತು 1870 ರಲ್ಲಿ ನಡೆದಿವೆ.
ಸಸ್ಯಪ್ರಾಣಿ ಜೀವನ
[ಬದಲಾಯಿಸಿ]ಭೂಗುಣ, ವಾಯುಗುಣ, ಭೂಮಿಯ ಮಟ್ಟಕ್ಕೆ ಇವಕ್ಕೆ ಅನುಗುಣವಾಗಿ ಕ್ಯಾನ್ಯನ್ ಪ್ರದೇಶವನ್ನು ಐದು ಜೀವವಲಯಗಳನ್ನಾಗಿ ವಿಭಜಿಸಿದೆ. ಆದರೆ ಇಲ್ಲಿ ಉಷ್ಣವಲಯದ ಸಸ್ಯಗಳಿಲ್ಲ. ಕಮರಿಯ ಮಧ್ಯಭಾಗ ಸಸ್ಯರಹಿತವಾಗಿ ಮರುಭೂಮಿಯ ಲಕ್ಷಣ ಹೊಂದಿದೆ. ಪ್ರಸ್ಥಭೂಮಿಯ ಭಾಗಗಳಲ್ಲಿ ಪೈನ್, ಫರ್ ಮತ್ತು ಆಸ್ಟಿನ್ ಮರಗಳು ಬೆಳೆಯುತ್ತವೆ. ನೂರು ಬಗೆಯ ಪಕ್ಷಿಗಳೂ 60 ಬಗೆಯ ಸಸ್ತನಿ ಪ್ರಾಣಿಗಳೂ 25 ಬಗೆಯ ಸರ್ಪಗಳೂ ಇಲ್ಲಿವೆ. ಪ್ರಾಕೃತಿಕ ತಡೆಗಳಿಂದಾಗಿ ಕಮರಿಯ ವಿವಿಧ ಅಂಚುಗಳಲ್ಲಿಯ ಪ್ರಾಣಿಗಳಲ್ಲಿ ವ್ಯತ್ಯಾಸಗಳು ಕಂಡುಬರುತ್ತವೆ. ಕಮರಿಯ ಕೆಲವು ಭಾಗಗಳಲ್ಲಿ ಪ್ರಾಗೈತಿಹಾಸಿಕ ಜನಜೀವನದ ಕುರುಹುಗಳುಂಟು.
ಪ್ರವಾಸ ಸೌಲಭ್ಯಗಳು
[ಬದಲಾಯಿಸಿ]1919 ರಲ್ಲಿ 6,45,296ಎಕರೆ ವಿಸ್ತೀರ್ಣ ಗ್ರ್ಯಾಂಡ್ ಕ್ಯಾನ್ಯನ್ ನ್ಯಾಷನಲ್ ಪಾರ್ಕ್ ಪ್ರವಾಸ ಕ್ಷೇತ್ರ ಸ್ಥಾಪಿತವಾಯಿತು. ಕ್ಯಾನ್ಯನಿನ ಉತ್ತರದ ಮತ್ತು ದಕ್ಷಿಣದ ಅಂಚುಗಳ ನಡುವೆ ಸಂಬಂಧ ಕಲ್ಪಿಸಲು 217 ಮೈ. ರಸ್ತೆಯನ್ನೂ 21 ಮೈ. ರೈಲು ಮಾರ್ಗವನ್ನೂ ಹಾಕಿದ್ದಾರೆ. ರಮ್ಯವಾದ ಈ ಭಾಗದ ಕಮರಿಯ ಎರಡು ಅಂಚುಗಳಲ್ಲೂ ಪ್ರವಾಸಿಗಳಿಗಾಗಿ ವಸತಿಗಳಿವೆ. ಪ್ರಪಾತದೊಳಗೆ ಹೇಸರಗತ್ತೆಯ ಸವಾರಿ ಮಾಡುವುದೂ ನದಿಯ ಮೇಲೆ ಮೋಟಾರ್ ದೋಣಿ ಅಥವಾ ಗಾಳಿ ತುಂಬಿದ ತೆಪ್ಪದ ಮೇಲೆ ಪ್ರಯಾಣ ಮಾಡುವುದೂ ರೋಮಾಂಚಕಾರಿ ಅನುಭವಗಳು. ಕಮರಿಯ ದಕ್ಷಿಣದ ಅಂಚು ಇಡೀ ವರ್ಷ ಪ್ರವಾಸಿಗಳಿಗೆ ತೆರೆದಿರುತ್ತದೆ. ಉತ್ತರದ ಅಂಚಿನ ಪ್ರವಾಸಿಮಂದಿರಗಳನ್ನು ಚಳಿಗಾಲದಲ್ಲಿ ಮುಚ್ಚಿರುತ್ತಾರೆ. ಕ್ಯಾನ್ಯನ್ ಭಾಗಕ್ಕೆ ಪ್ರಯಾಣ ಮಾಡಲು ರೈಲು ಮತ್ತು ರಸ್ತೆ ಸೌಲಭ್ಯಗಳುಂಟು.
ಉಲ್ಲೇಖಗಳು
[ಬದಲಾಯಿಸಿ]- ↑ "Grand Canyon". Seven Natural Wonders. 2011-12-07. Retrieved 2011-12-26.
- ↑ Kiver, E.P.; Harris, D.V. (1999). Geology of US Parklands. Wiley. p. 902.