ವಿಷಯಕ್ಕೆ ಹೋಗು

ಗ್ಯಾಬ್ರೊ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
A gabbro landscape on the main ridge of the Cuillin, Isle of Skye, Scotland.
Photomicrograph of a thin section of gabbro

ಕಪ್ಪು ಇಲ್ಲವೇ ನೇರಳೆ ಬಣ್ಣಮಿಶ್ರಿತ ಅಗ್ನಿಶಿಲೆ.

ಶಿಲಾರಸ ಭೂತಳದಲ್ಲಿರುವ ಬಿರುಕುಗಳಿಗೆ ನುಗ್ಗಿ, ನಿಧಾನವಾಗಿ ಘನೀಭವಿಸಿದಾಗ ಇದು ಉಂಟಾಗುತ್ತದೆ. ಹೀಗಾಗಿ ಇದರ ಖನಿಜಗಳಿಗೆ ವಿಶೇಷತಃ ಪೂರ್ಣಸ್ಫಟಿಕತ್ವದ, ಪೂರ್ಣಾಕಾರದ ಮತ್ತು ಗಾತ್ರದಲ್ಲಿ ಉರುಟಾದ ಖನಿಜ ಸಂಯೋಜನೆ ಉಂಟು. ಭೂಮಿಯ ಅಂತರಾಳದಲ್ಲೇ ಶಿಲೆಯಾಗುವ ಅಗ್ನಿಶಿಲೆಗಳನ್ನು ಅಂತರಾಗ್ನಿಶಿಲೆಗಳೆಂದು ಕರೆಯುವುದರಿಂದ ಗ್ಯಾಬ್ರೊಶಿಲೆಯನ್ನು ಈ ಗುಂಪಿಗೆ ಸೇರಿಸುತ್ತಾರೆ. ಈ ಗುಂಪಿನ ಶಿಲೆಗಳು ಹೆಚ್ಚಾಗಿ ಲೊಪೊಲಿತ್ ಅಥವಾ ಡೈಕ್ ಆಕೃತಿಯಲ್ಲಿ ಇರುತ್ತವೆ. ಆರುತ್ತಿರುವ ಶಿಲಾರಸದಿಂದ ಮೊದಲು ಬೇರ್ಪಟ್ಟು ಘನೀಭವಿಸುತ್ತಿರುವ ಶಿಲೆಗಳಲ್ಲಿ ಸಿಲಿಕಾಂಶ ಕಡಿಮೆ ಇರುತ್ತದೆ. ಆಮೇಲೆ ಘನೀಭವಿಸುವ ಶಿಲೆಗಳಲ್ಲಿ ಕ್ರಮೇಣ ಆ ಅಂಶ ಜಾಸ್ತಿಯಾಗುತ್ತದೆ. ಸಿಲಿಕಾಂಶದ ಆಧಾರದ ಮೇಲೆ ಶಿಲೆಗಳನ್ನು ಅತಿಪರ್ಯಾಪ್ತ (ಸಿಲಿಕಾಂಶ ಶೇ.80 - ಶೇ.60), ಪರ್ಯಾಪ್ತ (ಸಿಲಿಕಾಂಶ ಶೇ.50- ಶೇ.48) ಮತ್ತು ಅಪರ್ಯಾಪ್ತ (ಸಿಲಿಕಾಂಶ ಶೇ.54.5 - ಶೇ.41) ಶಿಲೆಗಳೆಂದು ವಿಂಗಡಿಸುವುದು ವಾಡಿಕೆ. ಇದರ ಪ್ರಕಾರ ಗ್ಯಾಬ್ರೊಶಿಲೆ ಪರ್ಯಾಪ್ತ ಶಿಲಾಪಂಗಡಕ್ಕೆ ಸೇರುತ್ತದೆ.

ಪರ್ಯಾಪ್ತ ಅಂತರಾಗ್ನಿ ಶಿಲೆಗಳನ್ನು ಗ್ಯಾಬ್ರೊ, ಅನಾರ್ತೊಸೈಟ್, ಪೆರಿಡೊಟೈಟ್ ಮುಂತಾಗಿ ಅವುಗಳ ಖನಿಜಸಂಯೋಜನೆಗೆ ಅನುಗುಣವಾಗಿ ಕರೆಯುತ್ತಾರೆ.

ಒಳಗಿನ ಖನಿಜಗಳು

[ಬದಲಾಯಿಸಿ]

ಗ್ಯಾಬ್ರೊ ಶಿಲೆಯಲ್ಲಿ ಪ್ಲೇಜಿಯೋಕ್ಲೀನ್ ಮತ್ತು ಪೈರಾಕ್ಸೀಸ್ ಮುಖ್ಯ ಖನಿಜಗಳು. ಇವುಗಳಲ್ಲದೆ ಬಯೋಟೈಟ್, ಹಾರನ್ಬ್ಲಂಡ್, ಇಲ್ಮನೈಟ್, ಮ್ಯಾಗ್ನಟೈಟ್ ಮುಂತಾದ ಖನಿಜಗಳು ಆನುಷಂಗಿಕವಾಗಿ ಇರಬಹುದು. ಕೆಲವು ವೇಳೆ ಗ್ಯಾಬ್ರೊಶಿಲೆಯಲ್ಲಿ ಬೆಣಚುಕಲ್ಲು ಅಥವಾ ಆಲಿವೀನ್ ಖನಿಜಗಳು ಬೆರೆತಿರುವ ಸಾಧ್ಯತೆ ಉಂಟು. ಇಂಥವುಗಳಿಗೆ ಬೆಣಚುಕಲ್ಲು ಗ್ಯಾಬ್ರೊ ಅಥವಾ ಆಲಿವೀನ್ ಗ್ಯಾಬ್ರೊ ಎಂದು ಹೆಸರು.

ಎಲ್ಲೆಲ್ಲಿ

[ಬದಲಾಯಿಸಿ]

ಗ್ಯಾಬ್ರೊ ಮತ್ತು ಇದರ ಗುಂಪಿಗೆ ಸೇರಿದ ಇತರ ಶಿಲೆಗಳು ವಿಶೇಷವಾಗಿ ಇಂಗ್ಲೆಂಡಿನ ಲೇಕ್ ಡಿಸ್ಟ್ರಿಕ್ಟ್‌, ಕೆನಡದ ನಡ್ಬೆರಿ, ಗ್ರೀನ್ಲೆಂಡಿನ ಸ್ಕೇಲ್ಗಾರ್ಡ್, ದಕ್ಷಿಣ ಆಫ್ರಿಕದ ಬುಷ್ವೆಲ್ಡ್‌ ಹಾಗೂ ಭಾರತದ ಗಿರ್ನಾರ್ ಗುಡ್ಡಗಳು ಮತ್ತು ಸೇಲಮ್ ಜಿಲ್ಲೆ ಪ್ರದೇಶಗಳಲ್ಲಿ ದೊರೆಯುತ್ತವೆ.

ಉಪಯೋಗ

[ಬದಲಾಯಿಸಿ]

ಈ ಶಿಲೆಗಳಲ್ಲಿರುವ ಪ್ಲೇಜಿಯೋಕ್ಲೀನ್ (ಲ್ಯಾಬ್ರೊಡರೈಟ್) ಖನಿಜದಿಂದಾಗಿ ಅವುಗಳಿಗೆಲ್ಲ ಒಂದು ಬಗೆಯ ನೇರಳೆಬಣ್ಣ ಬರುವುದುಂಟು. ಇದಲ್ಲದೆ ಈ ಖನಿಜದಿಂದಾಗಿ ಗ್ಯಾಬ್ರೊ ಶಿಲೆಯನ್ನು ಬೇರೆ ಬೇರೆ ಕೋನದಿಂದ ನೋಡಿದಾಗ ಬೇರೆ ಬೇರೆ ಬಣ್ಣ ಕಾಣುವುದೂ ಉಂಟು. ಹೀಗಾಗಿ ಗ್ಯಾಬ್ರೊಶಿಲೆಯನ್ನು ದೊಡ್ಡ ದೊಡ್ಡ ಕಟ್ಟಡಗಳಲ್ಲಿ ಅಲಂಕಾರ ಶಿಲೆಯಾಗಿ ಉಪಯೋಗಿಸುತ್ತಾರೆ.

ಉಲ್ಲೇಖಗಳು

[ಬದಲಾಯಿಸಿ]


A gabbro landscape on the main ridge of the Cuillin, Isle of Skye, Scotland.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: