ಗೌಜಲು ಹಕ್ಕಿ
ಗೌಜಲು ಹಕ್ಕಿ | |
---|---|
Grey partridge (Perdix perdix) | |
Scientific classification | |
ಸಾಮ್ರಾಜ್ಯ: | Animalia
|
ವಿಭಾಗ: | Chordata
|
ವರ್ಗ: | |
ಗಣ: | |
ಕುಟುಂಬ: | Horsfield, 1821
|
ಉಪಕುಟುಂಬ: | Horsfield, 1821
|
Genus | |
Alectoris |
ಗೌಜಲು ಹಕ್ಕಿಗ್ಯಾಲಿಫಾರ್ಮೀಸ್ ಗಣದ ಟೆಟ್ರವೋನಿಡೀ ಕುಟುಂಬಕ್ಕೆ ಸೇರಿದ ಫ್ರಾಂಕೋಲೈನಸ್ ಎಂಬ ಜಾತಿಯ ವನ್ಯಪಕ್ಷಿ (ಪಾರ್ಟ್‌ರಿಜ್). ಇದರಲ್ಲಿ 3 ಮುಖ್ಯ ಬಗೆಗಳಿವೆ; ಫ್ರಾ. ಫ್ರಾಂಕೋಲೈನಸ್ (ಬ್ಲ್ಯಾಕ್ ಪಾರ್ಟ್‌ರಿಜ್), ಫ್ರಾ. ಪಿಕ್ಟಸ್ (ಪೇಂಟೆಡ್ ಪಾರ್ಟ್‌ರಿಜ್) ಮತ್ತು ಫ್ರಾ. ಪಾಂಡಿ ಸೆರಿಯೇನಸ್ (ಗ್ರೇ ಪಾರ್ಟ್‌ರಿಜ್). ಮೊದಲನೆಯದು ಉತ್ತರಭಾರತ ಮತ್ತು ಅಸ್ಸಾಮ್ ಗಳಲ್ಲೂ ಎರಡನೆಯದು ದಕ್ಷಿಣ ಭಾರತದಲ್ಲೂ ಮೂರನೆಯದು ಅಸ್ಸಾಂ ಬಿಟ್ಟು ಭಾರತಾದ್ಯಂತವೂ ಕಾಣದೊರೆಯುತ್ತವೆ. ಎಲ್ಲ ಬಗೆಗಳೂ ಹುಲ್ಲುಗಾವಲುಗಳಲ್ಲಿ, ಕುರುಚಲು ಕಾಡುಗಳಲ್ಲಿ, ಕೆಲವೊಮ್ಮೆ ಹಳ್ಳಿಗಳ ಸನಿಹದಲ್ಲಿ ಕಬ್ಬು ಮತ್ತು ಧಾನ್ಯ ಬೆಳೆಗಳ ಕೃಷಿಭೂಮಿಗಳ ಬಳಿ ವಾಸಿಸುತ್ತವೆ.
ಲಕ್ಷಣಗಳು
[ಬದಲಾಯಿಸಿ]ಗೌಜಲು ಹಕ್ಕಿಗಳು ಮುಖ್ಯವಾಗಿ ಭೂವಾಸಿಗಳು. ಕಾಳು, ವಿವಿಧ ರೀತಿಯ ಬೀಜಗಳು, ಗೆದ್ದಲು, ಜೀರುಂಡೆಯ ಡಿಂಭಗಳು ಇವುಗಳ ಪ್ರಧಾನ ಆಹಾರ. ಗುಂಡನೆಯ ಮತ್ತು ಹೃಷ್ಟಪುಷ್ಟವಾದ ದೇಹ, ಮೋಟು ಬಾಲ, ಕಾಳುಕಡ್ಡಿ ತಿನ್ನಲು ಸಹಾಯಕವಾದ ಕೋಳಿ ಕೊಕ್ಕಿನಂಥ ಕೊಕ್ಕು, ಬಲವಾದ ಕಾಲುಗಳು, ಮೋಟು ಕತ್ತು-ಇವು ಗೌಜಲು ಹಕ್ಕಿಗಳ ಪ್ರಧಾನ ಲಕ್ಷಣಗಳು. ದೇಹದ ಬಣ್ಣ ಕಪ್ಪು ಇಲ್ಲವೇ ಬೂದುಮಿಶ್ರಿತ ಕಂದು. ದೇಹದ ಮೇಲೆ ಬಿಳಿ, ಕಂದು, ಕಗ್ಗಂದು ಬಣ್ಣದ ಮಚ್ಚೆಗಳು ಮತ್ತು ಪಟ್ಟೆಗಳು ಇವೆ. ಗಂಡು ಹಕ್ಕಿಯ ಬಣ್ಣ ಹೆಣ್ಣಿನದಕ್ಕಿಂತ ಹೆಚ್ಚು ಗಾಢವಾದ್ದು.
ಚಟುವಟಿಕೆಗಳು
[ಬದಲಾಯಿಸಿ]ಗೌಜಲು ಹಕ್ಕಿಗಳ ಚಟುವಟಿಕೆ ಸಂಜೆ ಹಾಗೂ ಬೆಳಗ್ಗೆ ಹೆಚ್ಚಾಗಿರುತ್ತದೆ. ಕತೀತರ್ - ಕತೀತರ್ ಇಲ್ಲವೆ ಚಿಕ್‍ಚೀಕ್‍ಚೀಕ್‍ಕೆರೇ ಎಂಬಂತೆ, ಸಿಳ್ಳು ಹೊಡೆದಂತೆ ಕೂಗಿಕೊಂಡು ಇವು ತಿರುಗಾಡುತ್ತಿರುತ್ತವೆ. ನೆಲದ ಮೇಲೆ ಇವು ಬಲು ಚೆನ್ನಾಗಿ ಓಡಬಲ್ಲವು; ಇವುಗಳ ಚಲನೆಯೆಲ್ಲ ಸಾಮಾನ್ಯವಾಗಿ ಕಾಲುಗಳಿಂದಲೆ. ಆದರೆ ಅನಿರೀಕ್ಷಿತ ಅಪಾಯವೊದಗಿ ಬಂದಾಗ ಮಾತ್ರ ಭರ್ರನೆ ಕೆಳಮಟ್ಟದಲ್ಲಿ ಹಾರುತ್ತವೆ. ಹಾರುವುದಾದರೂ ಕೇವಲ ಕೆಲವೇ ಮೀಟರುಗಳು ಮಾತ್ರ. ಮತ್ತೆ ನೆಲಕ್ಕಿಳಿದು ಓಡಿ ಪೊದೆಯೊಳಗೆ ಅವಿತುಕೊಂಡುಬಿಡುತ್ತವೆ.
ಸಂತಾನೋತ್ಪತ್ತಿ
[ಬದಲಾಯಿಸಿ]ಇವುಗಳ ಸಂತಾನಾಭಿವೃದ್ಧಿಯ ಕಾಲ ಜೂನ್- ಸೆಪ್ಟೆಂಬರ್. ಹುಲ್ಲು ಇಲ್ಲವೆ ಕಬ್ಬಿನ ಗದ್ದೆಗಳಲ್ಲಿ ಗೂಡು ಕಟ್ಟಿ ಮೊಟ್ಟೆಯಿಡುತ್ತವೆ. ಮೊಟ್ಟೆಗಳ ಸಂಖ್ಯೆ 4-8. ಗೌಜಲು ಹಕ್ಕಿಗಳು ಒಳ್ಳೆಯ ಬೇಟೆಯ ಹಕ್ಕಿಗಳೆನಿಸಿವೆ. ಬೂದುಗೌಜಲು ಹಕ್ಕಿಯ ಗಂಡುಗಳನ್ನು ಹಿಡಿದು ಅವುಗಳ ನಡುವೆ ಕಾಳಗವನ್ನೇರ್ಪಡಿಸುವುದುಂಟು. ಗೌಜಲು ಹಕ್ಕಿಗಳ ಮಾಂಸಕ್ಕೆ ವಿಶಿಷ್ಟವಾದ ರುಚಿ ಹಾಗೂ ವಾಸನೆಯಿರುವುದರಿಂದ ಇವನ್ನು ಆಹಾರಕ್ಕಾಗಿ ಜನ ಬೇಟೆಯಾಡುತ್ತಾರೆ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Videos, photos and sounds Archived 2016-06-01 ವೇಬ್ಯಾಕ್ ಮೆಷಿನ್ ನಲ್ಲಿ. - Internet Bird Collection