ಗೋಲ್ಡ್‌ಸ್ಮಿತ್, ಆಲಿವರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗೋಲ್ಡ್‌ಸ್ಮಿತ್, ಆಲಿವರ್

ಆಲಿವರ್ ಗೋಲ್ಡ್‌ಸ್ಮಿತ್ ( 1728-74) - ಈತನು ಆಂಗ್ಲಕವಿ, ನಾಟಕಕಾರ, ಪ್ರಬಂಧಕಾರ, ಕಾದಂಬರಿಕಾರ.

ಆರಂಭಿಕ ಬದುಕು[ಬದಲಾಯಿಸಿ]

ಐರ್ಲೆಂಡಿನ ಲಾಂಗ್ಫರ್ಡಿನಲ್ಲಿ ಪ್ರಾಟೆಸ್ಟಂಟ್ ಕುಟುಂಬದಲ್ಲಿ ಜನಿಸಿದ. ತಂದೆ ಚಾರ್ಲ್ಸ್ ಗೋಲ್ಡ್‌ಸ್ಮಿತ್ ಕ್ರೈಸ್ತ ಪುರೋಹಿತ ಹಾಗೂ ಕೃಷಿಕ. ಮಕ್ಕಳಲ್ಲಿ ಆಲಿವರ್ ಐದನೆಯವ. ಈತನ ಪ್ರಾಥಮಿಕ ವಿದ್ಯಾಭ್ಯಾಸ ಎಲ್ಫಿನ್, ಅತ್ಲೋನ್ ಮತ್ತು ಎಜ್ವತ್ರ್ಸ್‌ಟೌನುಗಳಲ್ಲಿ ನಡೆಯಿತು. ಎಂಟನೆಯ ವಯಸ್ಸಿನಲ್ಲಿ ಸಿಡುಬು ಅಂಟಿತಾಗಿ ದೇಹವೆಲ್ಲ ಕುರೂಪವಾಯಿತು[೧]. ಡಬ್ಲಿನಿನ ಟ್ರಿನಿಟಿ ಕಾಲೇಜು ಸೇರಿ ಬಡತನದಿಂದಾಗಿ ಪಡಚಾಕರಿಗಳನ್ನು ಮಾಡಿ ವ್ಯಾಸಂಗವನ್ನು ಮುಂದುವರಿಸಿದ. ವರ್ಗದಲ್ಲಿ ಕೊನೆಯವನಾಗಿ ತುಂಟತನದಲ್ಲಿ ಮೊದಲಿಗನಾಗಿ ವಿದ್ಯಾರ್ಥಿಜೀವನದ ಸದುಪಯೋಗ ಪಡೆಯಲಿಲ್ಲ. ಉಪಾಧ್ಯಾಯರೊಂದಿಗೆ ಜಗಳ ಮಾಡಿಕೊಂಡು ಕಾಲೇಜಿನಿಂದ ಪರಾರಿಯಾದ (1746). ಮತ್ತೆ ಹಿಂತಿರುಗಿ 1749ರಲ್ಲಿ ಬಿ.ಎ. ಪದವಿ ಗಳಿಸಿದ[೨]. ಅನಿವಾರ್ಯವಾಗಿ ವೃತ್ತಿಯನ್ನು ಹುಡುಕುವ ಪ್ರಸಂಗ ಬಂದಾಗ ವಿಚಿತ್ರವಾದ ಉಡುಗೆಗಳ ಹವ್ಯಾಸ, ದೆವ್ವದ ಕಥೆಗಳಲ್ಲಿ ಪ್ರಾವೀಣ್ಯ, ವೇಣುವಾದನದ ವ್ಯಾಮೋಹ ಗಳನ್ನು ಬೆಳೆಸಿಕೊಂಡಿದ್ದ ಗೋಲ್ಡ್‌ಸ್ಮಿತ್‍ನಿಗೆ ಅಪಾಯಕಾದಿತ್ತು. ಚರ್ಚು, ಶಾಲೆ, ನ್ಯಾಯಾಲಯಗಳಲ್ಲಿ ಜೀವನೋಪಾಯವನ್ನು ಕಾಣಲು ಯತ್ನಿಸಿ ವಿಫಲನಾದ. ಎಡಿನ್ಬರೋ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ಸೇರಿದನಾದರೂ (1752-54) ಹೆಚ್ಚಿನ ಜ್ಞಾನ ಗಳಿಸದೆ ಹಿಂತಿರುಗಿದ. ಅನಂತರ ಪ್ರವಾಸಪ್ರಿಯನಾದ ಈತ ವೇಣುವಾದನ ಕೌಶಲ ಮತ್ತು ವಾಗ್ಮಿತೆಗಳ ಸಂದಾಯದಿಂದಲೇ ಸಂಚಾರದ ವೆಚ್ಚವನ್ನು ಹೊಂದಿಸಿಕೊಳ್ಳುತ್ತ ಕಾಲ್ನಡಿಗೆಯಲ್ಲಿ ಯುರೋಪಿನ ಬಹುಭಾಗದಲ್ಲಿ-ಅಂದರೆ ಫ್ರಾನ್ಸ್‌, ಜರ್ಮನಿ, ಸ್ವಿಟ್ಜರ್ಲೆಂಡ್ ಮತ್ತು ಇಟಲಿಗಳಲ್ಲಿ ಸುತ್ತಾಡಿದ. 1756ರಲ್ಲಿ ಸ್ವದೇಶಕ್ಕೆ ಹಿಂದಿರುಗಿದಾಗ ರಿಕ್ತಹಸ್ತನೂ ವೃತ್ತಿವಿಹೀನನೂ ಆದ ಇವನಿಗೆ ಮುಂದೇನು ಎನ್ನುವ ಸಮಸ್ಯೆ ಒದಗಿತು.[೩][೪][೫][೬]

ಸಾಹಿತ್ಯ ರಂಗದಲ್ಲಿನ ಕೊಡುಗೆ[ಬದಲಾಯಿಸಿ]

ಜೀವನದ ವಿವಿಧ ರಂಗಗಳಲ್ಲಿ ಸೋಲನ್ನು ಅಪ್ಪಿದ ಗೋಲ್ಡ್‌ಸ್ಮಿತ್ ಕೊನೆಗೆ ಸಾಹಿತ್ಯ ಕೃಷಿಯಿಂದ ಜೀವನ ನಡೆಸಲು ನಿರ್ಧರಿಸಿದ. ತನ್ನ ಮೂವತ್ತರ ಪ್ರಾಯದಲ್ಲಿ ಗುಡ್ಗೇಟ್ ಬೀದಿಯಲ್ಲಿ ಅಸ್ತವ್ಯಸ್ತ ವಾಸ್ತವ್ಯವನ್ನು ಹೊಂದಿದ್ದ ಈತ ಪತ್ರಿಕೆಗಳ ಆದೇಶದಂತೆ ಧಾರ್ಮಿಕ, ಐತಿಹಾಸಿಕ, ರಾಜಕೀಯ ಹಾಗೂ ಶಿಶುಸಾಹಿತ್ಯಕ್ಕೆ ಸಂಬಂಧಿಸಿದ ಲೇಖನಗಳನ್ನೂ ಅನುವಾದಗಳನ್ನೂ ಒಂದೇ ಸಮನೆ ಬರೆಯತೊಡಗಿದ. 1757ರ ಸುಮಾರಿಗೆ ಈತನ ಲೇಖನಗಳು ಮಂತ್ಲಿರಿವ್ಯೂ ಎಂಬ ಪತ್ರಿಕೆಯಲ್ಲಿ ಪ್ರಕಟವಾಗತೊಡಗಿದವು. ಮಾರನೆಯ ವರ್ಷ ಭಾರತದಲ್ಲಿ ವೈದ್ಯವೃತ್ತಿಯೊಂದನ್ನು ಪಡೆಯಲು ಪ್ರಯತ್ನಿಸಿ ವಿಫಲನಾದ. 1759ರಲ್ಲಿ ಈತನ ಮೊದಲ ಸಾಹಿತ್ಯಕೃತಿ- ಎನ್ ಇನ್ಕ್ವಯರಿ ಇನ್ ಟು ದಿ ಸ್ಟೇಟ್ ಆಫ್ ಪೊಲಿಟಿಕಲ್ ಲರ್ನಿಂಗ್ ಇನ್ ಯುರೋಪ್ ಪ್ರಕಟವಾಯಿತು. ಅದೇ ವರ್ಷ ಈತನ ಪ್ರಬಂಧ ಸಂಕಲನ ದಿ ಬೀ ಎಂಬುದು ಬೆಳಕು ಕಂಡಿತು. 1761ರಲ್ಲಿ ಗೋಲ್ಡ್‌ಸ್ಮಿತ್‍ನಿಗೆ ಜಾನ್ಸನ್ನನ ಸ್ನೇಹವಾಯಿತಲ್ಲದೆ ಲಿಟರರಿ ಕ್ಲಬ್ಬಿನ ಸದಸ್ಯತ್ವವೂ ದೊರೆಯಿತು. ದಿ ಸಿಟಿಜನ್ ಆಫ್ ದಿ ವರ್ಲ್ಡ್‌ ಎಂಬ ಹೆಸರಿನಲ್ಲಿ ಪುಸ್ತಕರೂಪದಲ್ಲಿ ಪ್ರಕಟವಾದ ಪತ್ರಗಳ ಮಾಲೆ ದಿ ಪಬ್ಲಿಕ್ ಲೆಡ್ಜರ್ ಎಂಬ ಪತ್ರಿಕೆಯಲ್ಲಿ ಮೊದಲು ಪ್ರಕಟವಾದದ್ದು 1762ರಲ್ಲಿ. ಬಾಲ್ಯದಿಂದಲೇ ಕವಿತೆಗಳನ್ನು ಬರೆಯಲು ಯತ್ನಿಸಿದ್ದ ಗೋಲ್ಡ್‌ಸ್ಮಿತ್ ಆ ಕೆಲವು ವರ್ಷ ಪತ್ರಿಕೆಗಳಲ್ಲಿ ಕಾವ್ಯನಾಮದಿಂದ ಹಲವಾರು ಕವನಗಳನ್ನು ಪ್ರಕಟಿಸಿದ. ಈತನ ನೀಳ್ಗವನಗಳಲ್ಲಿ ಮುಖ್ಯವೆನಿಸಿರುವ ದಿ ಟ್ರ್ಯಾವಲರ್ ಎಂಬುದು ಪ್ರಸಿದ್ಧವಾದ್ದು 1764ರಲ್ಲಿ. ಕೂಡಲೆ ಜನಮನವನ್ನು ಸೆಳೆದ ಈ ಕವಿತೆ ಗೋಲ್ಡ್‌ಸ್ಮಿತನ ಜನಪ್ರಿಯತೆ ಹಾಗೂ ಯಶಸ್ಸಿಗೆ ನಾಂದಿಯಾಯಿತು. ಈ ಕವಿತೆಯ ಕಲ್ಪನೆ ಹಾಗೂ ರಚನಾಕ್ರಮ ತುಂಬ ಸರಳ ಹಾಗೂ ಉದಾತ್ತವಾಗಿದೆ. ಆಂಗ್ಲಪ್ರವಾಸಿಯೊಬ್ಬ ಆಲ್ಪ್ಸ್ ಪರ್ವತದ ಶಿಲೆಯೊಂದರ ಮೇಲೆ ಕುಳಿತು ಅದರ ತಳದಲ್ಲಿ ಕೂಡುತ್ತಿರುವ ಮೂರು ದೇಶಗಳ ಸಂಸ್ಕೃತಿಯನ್ನು ವೀಕ್ಷಿಸುತ್ತ ತನ್ನ ಪ್ರಯಾಣದ ಗುಂಟ ನೋಡಿದ ರಾಜಕೀಯ, ಧಾರ್ಮಿಕ ಹಾಗೂ ಸಾಮಾಜಿಕ ವೈವಿಧ್ಯಗಳನ್ನು ಮೆಲಕುಹಾಕುತ್ತ ಮಾನವನ ಸುಖ ಬಹಿಃಸ್ಥಿತವಲ್ಲ, ಅಂತಃಸ್ಥಿತ- ಎನ್ನುವ ನಿರ್ಧಾರಕ್ಕೆ ಬರುವುದನ್ನು ಚಿತ್ರಿಸುವುದು ಈ ಕಾವ್ಯದ ಮುಖ್ಯೋದ್ದೇಶ. ಇದರಲ್ಲಿ ಬರುವ ವರ್ಣನೆಗಳು ಸೊಗಸಾಗಿವೆಯಲ್ಲದೆ ಶೈಲಿ ಸರಳವಾಗಿದೆ.

ದಿ ವಿಕಾರ್ ಆಫ್ ವೇಕ್ಫೀಲ್ಡ್‌ ಎನ್ನುವ ಪ್ರಸಿದ್ಧ ಕಾದಂಬರಿ 1766ರಲ್ಲಿ ಪ್ರಕಟವಾಯಿತು. ಸಂವಿಧಾನದಲ್ಲಿ ಶೈಥಿಲ್ಯವಿದ್ದು ಅಸಂಭಾವ್ಯ ಹಾಗೂ ಅಸಂಬದ್ಧ ಘಟನೆಗಳಿಂದ ಕೂಡಿದ್ದರೂ ಇದು ಪ್ರಕಟವಾದಂದಿನಿಂದ ಇಲ್ಲಿಯವರೆಗೆ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿದೆ. ಗೋಲ್ಡ್‌ಸ್ಮಿತನ ಜೀವನದ ಹಲವಾರು ಘಟನೆ, ಅನುಭವಗಳನ್ನು ಚಿತ್ರಿಸುವ ಇದು ಒಂದು ಕೌಟುಂಬಿಕ ಕತೆ. ಹಳ್ಳಿಯ ಜೀವನದ ಮಾಧುರ್ಯ ಹಾಗೂ ರಸಮಯ ಸನ್ನಿವೇಶಗಳ ಚಿತ್ರದಿಂದ ಪರಿಪ್ಲುತವಾಗಿರುವ ಇದರ ಪೂರ್ವಾರ್ಧ ತುಂಬ ಆಕರ್ಷಣೀಯವಾಗಿದೆ. ಕನ್ನಡಕದ ವ್ಯಾಪಾರದಲ್ಲಿ ಮೋಸಗೊಂಡ ಮೋಸೆಸ್, ಏಕಪತ್ನಿತ್ವದ ಬಗೆಗೆ ವ್ಯಾಖ್ಯಾನ ಮಾಡುವ ಪ್ರಿಮ್ರೋಸ್, ಅರಿಸ್ಟಾಟಲನ ಸಹಾಯದಿಂದ ಸಂಬಂಧಿಕರ ನಡುವೆ ಸಂಬಂಧವಿದೆಯೆಂದು ತೋರಿಸುವ ಜಮೀನುದಾರ, ತನ್ನ ಪೋಕರಿ ಪ್ರಿಯನನ್ನು ಬದಲಾಯಿಸಲು ಹವಣಿಸುವ ಅಲಿವೀಯ, ದೊಡ್ಡಸ್ತಿಕೆಯನ್ನು ಅವಹೇಳನ ಮಾಡುವ ಮಹಿಳೆಯರು-ಇಂಥ ಪಾತ್ರಚಿತ್ರಣಗಳು ಈ ಕಾದಂಬರಿಯ ರಸದ ಮಡುವುಗಳಾಗಿವೆ. ಕೊನೆಕೊನೆಯಲ್ಲಿ ನಿಸ್ಸತ್ತ್ವವೆನಿಸಿದರೂ ಹಾಸ್ಯಮಯ ಶೈಲಿ, ಕುತೂಹಲಕಾರಿ ಘಟನೆಗಳ ಸಂಕಲನ ಹಾಗೂ ಸುಂದರವರ್ಣನೆಗಳಿಂದಾಗಿ ಈ ಕೃತಿ ಬಹು ಆಕರ್ಷಕವಾಗಿದೆ.


ದಿ ಗುಡ್ ನೇಚರ್ಡ್ ಮ್ಯಾನ್ ಎಂಬ ತನ್ನ ನಾಟಕದಲ್ಲಿ (1768) ಗೋಲ್ಡ್‌ಸ್ಮಿತ್ ಸ್ವಾಭಾವಿಕ ಹಾಸ್ಯವನ್ನು ರಂಗದ ಮೇಲೆ ತರಲು ಮಾಡಿದ ಮೊದಲ ಪ್ರಯತ್ನವನ್ನು ಕಾಣಬಹುದು. ತಾರತಮ್ಯವಿಲ್ಲದ ಅತಿ ಔದಾರ್ಯವನ್ನು ಗೇಲಿ ಮಾಡುವುದು ಈ ರೂಪಕದ ಉದ್ದೇಶ. ಅತಿಭಾವುಕತೆ ಹಾಗೂ ಅದರ ಖಂಡನೆ ಎರಡನ್ನೂ ಇದರಲ್ಲಿ ಕಾಣಬಹುದು. ಕಥಾನಾಯಕ ಹನಿವುಡ್ನ ಸುಸ್ವಭಾವ ಹಾಗೂ ಮುಗ್ಧತೆಯೇ ಅವನನ್ನು ನಗೆಪಾಟಲಿಗೆ ಈಡುಮಾಡಿ ಕೊನೆಗೆ ಹೇಗೆ ಅವನ ಕಣ್ಣು ತೆರೆಸುತ್ತದೆಂಬುದನ್ನು ಚಿತ್ರಿಸುವ ಈ ನಾಟಕ ಅಂದಿನ ಭಾವುಕತೆಯ ರಂಗಭೂಮಿಯಲ್ಲಿ ಹೊಸಗಾಳಿಯಂತೆ ಸುಳಿಯಿತು.


1770ರಲ್ಲಿ ಗೋಲ್ಡ್‌ಸ್ಮಿತನ ದಿ ಡೆಸರ್ಟೆಡ್ ವಿಲೆಜ್ ಎನ್ನುವ ಕವನ ಪ್ರಕಟವಾಯಿತು. ಪ್ರಯೋಗ ಹಾಗೂ ತಾಂತ್ರಿಕ ದೃಷ್ಟಿಯಿಂದ ಇದೊಂದು ಸಫಲಕಾವ್ಯ. ಮಾನವೀಯ ವ್ಯಕ್ತಿಚಿತ್ರಣ, ಗ್ರಾಮಜೀವನದ ಸೌಂದರ್ಯ ನಿರೂಪಣೆ, ಕವಿತೆಯುದ್ದಕ್ಕೂ ಹಾಸುಹೊಕ್ಕಾದ ಶೋಕರಸ-ಇವು ಈ ಕೃತಿಯ ಜೀವಾಳ. ಆದರೆ ಕಾವ್ಯದಲ್ಲಿ ಸಮಗ್ರ ಕಂಡುಬರುವ ನ್ಯೂನತೆಯೊಂದನ್ನು ವಿಮರ್ಶಕರು ಎತ್ತಿ ತೋರಿಸಿದ್ದಾರೆ. ತನ್ನ ವೈಭವದ ಕಾಲದಲ್ಲಿ ಆಂಗ್ಲ ಹಳ್ಳಿಯಂತೆ ತೋರುತ್ತಿದ್ದ ಇದು ತನ್ನ ವಿನಾಶ ಕಾಲದ ಚಿತ್ರಣದಲ್ಲಿ ಐರ್ಲೆಂಡಿನ ಹಳ್ಳಿಯಂತೆ ಇದೆ. ಹೀಗೆ ಎರಡು ಭಿನ್ನ ಸಂಸ್ಕೃತಿಗಳನ್ನು ಒಂದೆಡೆ ತೋರಿಸಿರುವುದರಿಂದ ಅನೌಚಿತ್ಯ ಉಂಟಾಗಿದೆ. 1773ರಲ್ಲಿ ಷಿ ಸ್ಟೂಪ್ಸ್‌ ಟು ಕಾನ್ಕರ್ ಎನ್ನುವ ಪ್ರಥಮ ನಾಟಕ ಪ್ರಕಟವಾಯಿತು. ಆಂಗ್ಲ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿದ ಇದು ಪ್ರಥಮ ಪ್ರದರ್ಶನದಿಂದಲೇ ಜನಪ್ರಿಯವಾಯಿತು. ಮಾವನ ಮನೆಯನ್ನೇ ಹೋಟೆಲೆಂದು ಭಾವಿಸಿದ ಭಾವೀ ಅಳಿಯ ಹಾಗೂ ಅವನ ಸ್ನೇಹಿತರ ರಾದ್ಧಾಂತವನ್ನು ಹಾಸ್ಯದ ನೇಯ್ಗೆಯಲ್ಲಿ ಹೆಣೆದ ಈ ನಾಟಕ ಅಸಂಭಾವ್ಯ ಘಟನೆ ಹಾಗೂ ಅವಾಸ್ತವಿಕತೆಯಿಂದ ತುಂಬಿದ್ದರೂ ರಂಗಭೂಮಿಯಲ್ಲಿ ಅದ್ಭುತ ಯಶಸ್ಸನ್ನು ಪಡೆಯಿತು. ತಿಳಿಯಾದ ಭಾಷೆಯಲ್ಲಿ ನಿರೂಪಿತವಾದ ಸಂಭಾಷಣೆ ಹಾಗೂ ಜೀವಂತ ಪಾತ್ರಚಿತ್ರಣ ಇವು ಇದರ ಎದ್ದು ಕಾಣುವ ಅಂಶಗಳು.


ಗೋಲ್ಡ್‌ಸ್ಮಿತ್ ಕಷ್ಟಕಾರ್ಪಣ್ಯಗಳಲ್ಲಿ ಜೀವನವನ್ನು ನೂಕಬೇಕಾಯಿತು. ಮೃದು ಮನಸ್ಸು, ದುಂದುಗಾರಿಕೆ ಮತ್ತು ಔದಾರ್ಯಗಳ ಮೂಲಕ ಕೊನೆಯವರೆಗೂ ಆರ್ಥಿಕ ಮುಗ್ಗಟ್ಟಿನಲ್ಲಿದ್ದು ಅಧಿಕ ಶ್ರಮದಿಂದ ಆರೋಗ್ಯವನ್ನು ಕೆಡಿಸಿಕೊಂಡು ಸಾವನ್ನಪ್ಪಿದನಾದರೂ ತನ್ನ ವಿಚಿತ್ರ ಕಲ್ಪನೆ, ಮೃದು ಮಾನವೀಯತೆ, ಕಣ್ಣನ್ನು ಅರಳಿಸುವ ಹಾಸ್ಯ, ಸುಂದರ ಶೈಲಿ-ಇವುಗಳಿಂದಾಗಿ ಗೋಲ್ಡ್‌ಸ್ಮಿತ್ ಚಿರಸ್ಮರಣೀಯನಾಗಿದ್ದಾನೆ. ಈತನ ಸುಹೃತ್ಪರಂಪರೆಯಲ್ಲಿ ಜಾನ್ಸನ್, ಬರ್ಕ್ ಮತ್ತು ಕಲಾವಿದ ರೇನಲ್ಡ್ಸ್ ಮೊದಲಾದವರು ಬರುತ್ತಾರೆ. ಅವರೆಲ್ಲ ಇವನನ್ನು ಕಂಡು ಗೇಲಿ ಮಾಡಿದರಾದರೂ ಎಲ್ಲರೂ ಮನಸಾರೆ ಮೆಚ್ಚಿದ್ದರು. ಆಂತರ್ಯದಲ್ಲಿ ಅಪಾರವಾಗಿ ಪ್ರೀತಿಸಿದರು. ಈತನ ಸಾವಿನ ಸುದ್ದಿ ಮುಟ್ಟಿದೊಡನೆ ಬರ್ಕ್ ಬಿಕ್ಕಿಬಿಕ್ಕಿ ಅತ್ತನಂತೆ. ರೇನಲ್ಡ್‌್ಸ ಆ ದಿನವೆಲ್ಲ ತನ್ನ ಕುಂಚವನ್ನು ಎತ್ತಲಿಲ್ಲವಂತೆ. ಜಾನ್ಸನ್ ‘ಈತ ಮುಟ್ಟಿದ್ದನ್ನೆಲ್ಲ ಚಿನ್ನವಾಗಿಸಿದ’ ಎಂಬ ಅರ್ಥಬರುವ ಚರಮ ವಾಕ್ಯವೊಂದನ್ನು ಲ್ಯಾಟಿನಿನಲ್ಲಿ ಬರೆದನಂತೆ. ಬಡವರು, ರೋಗಗ್ರಸ್ತರು, ದೀನದಲಿತರು ಇವನ ಮನೆಯ ಮುಂದೆ ನೆರೆದು, ತನ್ನ ಬಡತನದಲ್ಲೂ ತಮ್ಮನ್ನು ಕೈಬಿಡದೆ ನಡೆಸಿದ ಅನ್ನದಾತ ಸತ್ತುದಕ್ಕಾಗಿ ಕಣ್ಣೀರಿಟ್ಟರಂತೆ. ಬಡತನವನ್ನು ನೀಗಿಸಿಕೊಳ್ಳಲೆಂದು ಗೋಲ್ಡ್‌ಸ್ಮಿತ್ ಬರೆದ ಎಲ್ಲ ಬರೆಹಗಳೂ ಶಾಶ್ವತ ಮೌಲ್ಯವನ್ನು ಪಡೆಯಲಿಲ್ಲವಾದರೂ ದಿ ಟ್ರ್ಯಾವಲರ್, ದಿ ಡೆಸರ್ಟೆಡ್ ವಿಲೆಜ್, ಷಿ ಸ್ಟೂಪ್ಸ್‌ ಟು ಕಾನ್ಕರ್, ಎಲ್ಲಕ್ಕಿಂತ ಮಿಗಿಲಾಗಿ ದಿ ವಿಕಾರ್ ಆಫ್ ವೇಕ್ಫೀಲ್ಡ್‌ ಕಾದಂಬರಿ-ಇವು ಇಂಗ್ಲಿಷ್ ಸಾಹಿತ್ಯದಲ್ಲಿ ಅಮರವಾಗಿ ನಿಂತಿವೆ.

ಉಲ್ಲೇಖಗಳು[ಬದಲಾಯಿಸಿ]

  1. "History". Sligo Grammar School.
  2. Craig, Maurice (1952). Dublin 1650–1860. Allen Figgis & Co. Ltd. p. 184.
  3. "Brothers of the Quill: Oliver Goldsmith in Grub Street by Norma Clarke review". irishtimes.com. Retrieved 25 March 2018.
  4. Mullan, John (11 February 2017). "Brothers of the Quill: Oliver Goldsmith in Grub Street by Norma Clarke – review". the Guardian. Retrieved 25 March 2018.
  5. "Oliver Goldsmith: the most fascinating bore in literature - The Spectator". spectator.co.uk. 7 May 2016. Retrieved 25 March 2018.
  6. Dublin, Trinity Writers, Trinity College. "Oliver Goldsmith - Trinity Writers : Trinity College Dublin". www.tcd.ie. Retrieved 25 March 2018. {{cite web}}: horizontal tab character in |title= at position 7 (help)CS1 maint: multiple names: authors list (link)