ಗೋರ್ಡನ್, ಚಾರ್ಲ್ಸ್ ಜಾರ್ಜ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಗೋರ್ಡನ್, ಚಾರ್ಲ್ಸ್ ಜಾರ್ಜ್

1833-85. ಬ್ರಿಟಿಷ್ ಸೇನಾಧಿಕಾರಿ ಮತ್ತು ಸಮಾಜಸೇವಕ.

ಸಾಧನೆ[ಬದಲಾಯಿಸಿ]

ಬ್ರಿಟಿಷ್ ಸೈನ್ಯದ ಅಧಿಕಾರಿಯಾಗಿ ಕ್ರಿಮಿಯ, ತುರ್ಕಿ, ಅರ್ಮೇನಿಯ, ಚೀನ, ಭಾರತ, ಆಫ್ರಿಕ ಮುಂತಾದ ದೇಶಗಳಲ್ಲಿ ಉತ್ತಮ ಸೇವೆ ಸಲ್ಲಿಸಿದ. 1859ರಲ್ಲಿ ಚೀನದ ಮೇಲೆ ದಂಡೆತ್ತಿಹೋದ ಸೈನ್ಯದ ನಾಯಕನಾಗಿ ಗಳಿಸಿದ ಜಯದಿಂದ ಈತ ಚೀನಿ ಗೋರ್ಡನ್ ಎಂದು ಕರೆಯಲ್ಪಟ್ಟ. ಆಫ್ರಿಕದಲ್ಲಿ ಈಜಿಪ್ಟಿನ ಖೆಡಿವ್ ಸರ್ಕಾರದ ಪರವಾಗಿ ಸಮಭಾಜಕೀಯ ಪ್ರಾಂತಗಳ ಗವರ್ನರಾಗಿದ್ದಾಗ ಗುಲಾಮರ ವ್ಯಾಪಾರ, ಲಂಚಗುಳಿತನ, ಬಡತನ ಮತ್ತು ಅನಾರೋಗ್ಯಗಳ ನಿರ್ಮೂಲಕ್ಕಾಗಿ ಶ್ರಮಿಸಿದ. ದಕ್ಷಿಣ ಆಫ್ರಿಕದಲ್ಲಿ ಬಸೂಟೊ ಜನರ ದಂಗೆಯನ್ನು ಸೈನ್ಯವನ್ನು ಉಪಯೋಗಿಸದೆ ಹತ್ತಿಕ್ಕಿದ ಯಶಸ್ಸು ಈತನದಾಯಿತು. ಸೂಡಾನಿನಲ್ಲಿ ಅಬ್ದುಲ್ಲಾ ಎಲ್ ಮಹ್ದಿ ಅಧಿಕಾರಕ್ಕೆ ಬಂದಾಗ ಅಲ್ಲಿದ್ದ ಐರೋಪ್ಯರನ್ನೂ ಈಜಿಪ್ಟಿನವರನ್ನೂ ಹೊರಗೆ ಸಾಗಿಸುವ ಹೊಣೆಯನ್ನು ಬ್ರಿಟಿಷ್ ಸರ್ಕಾರ ಗೋರ್ಡನನಿಗೆ ವಹಿಸಿತು. ಈ ಕಾರ್ಯದಲ್ಲಿ ನಿರತನಾಗಿದ್ದಾಗ ಖಾರ್ಟೂಮ್ ನಗರದ ಅರಮನೆಯ ಮೆಟ್ಟಲುಗಳ ಮೇಲೆ ಈತನನ್ನು ಇರಿದು ಕೊಲ್ಲಲಾಯಿತು. ಗೋರ್ಡನ್ ತನ್ನ ಜೀವನಪರ್ಯಂತ ಅನಾಥ ಬಾಲಕರ ಹಿತರಕ್ಷಣೆಗಾಗಿ ಶ್ರಮಿಸಿದ. ಆದ್ದರಿಂದ ಈತನ ಸ್ಮಾರಕವಾಗಿ ಅನಾಥ ಬಾಲಕರಿಗೆ ವೃತ್ತಿಶಿಕ್ಷಣ ಕೊಡಲು ವೋಕಿಂಗ್ ಎಂಬಲ್ಲಿ ಗೋರ್ಡನ್ ಬಾಯ್ಸ್‌ಸ್ಕೂಲ್ ಅನ್ನು ಸ್ಥಾಪಿಸಲಾಗಿದೆ. ಇಂಗ್ಲೆಂಡಿನಲ್ಲಿ ಅನೇಕ ಕಡೆ ಈತನ ಸ್ಮಾರಕಗಳಿವೆ.