ಗೋಪಿ ಕಾಮತ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರ್ನಾಟಕ ಕಲಾಪರಂಪರೆಯ ಅನೇಕ ಪ್ರತಿಭಾವಂತ ಚಿತ್ರಕಾರರು, ಪತ್ರಿಕೆಗಳಲ್ಲಿ ಪ್ರಕಟವಾಗುವ ಕಥೆ ಕಾದಂಬರಿಗಳಿಗೆ ತಕ್ಕ ಚಿತ್ರಗಳನ್ನು ರಚಿಸಿ ಪ್ರಕಾಶಕರಿಗೆ ಒದಗಿಸುವಮೂಲಕ, ಮನೆ ಮನೆಗಳಲ್ಲಿ ಹೆಸರಾಗಿದ್ದರು. ಇಂತಹ ಒಂದು ವಿದ್ವತ್ ವಲಯವನ್ನು ಸೇರಿ ವಿಜೃಂಭಿಸಿದ ಹೆಸರಾಂತ ಚಿತ್ರಕಲಾವಿದರಲ್ಲಿ ಗೋಪಿ ಕಾಮತ್ ಒಬ್ಬರು. ಅವರು, ಸೌಜನ್ಯ, ಸರಳತೆಗೆ ಹೆಸರಾದವರು; ಮತ್ತು ತಮ್ಮ ಯಶಸ್ಸಿನ ಹೊಳಪಿಗೆ ಎಂದೂ ಅಹಂಕಾರಪಟ್ಟವರಲ್ಲ. ಪ್ರಚಾರ ಬಯಸಲಿಲ್ಲ. ತಮ್ಮ ಪಾಡಿಗೆ ನಿರಂತರ ಅಭ್ಯಾಸ ಪ್ರಯೋಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಹಿರಿಯ ಕಲಾವಿದರ ಮಾರ್ಗದರ್ಶನ ಪಡೆಯಲು ಸದಾ ಕಾತುರರು. ಹೆಚ್ಚಿಗೆ ಏನನ್ನೂ ಬಯಸದ ಸ್ವಭಾವ ಅವರದು. ಅತ್ಯಂತ ಮರೆಯಲಾರದ ಉತ್ತಮ ಚಿತ್ರಗಳನ್ನು ಅವರು ಮಯೂರ ಪತ್ರಿಕೆಯ 'ಮುಖಪುಟ'ಕ್ಕಾಗಿಯೇ ವಿಶೇಷವಾಗಿ ಬರೆದುಕೊಟ್ಟಿದ್ದರು. ಅವುಗಳ ವಿವರ ಹೀಗಿದೆ.

 • ’ಕಾಶ್ಮೀರಿ ಚೆಲುವೆ,’
 • 'ಮೋಹನ ಮುರಲಿ',
 • ’ರಾಧಾಮಾಧವ’,
 • ’ಯಮುನೆ ದಾರಿತೋರಿಸಿದಳು,’
 • ’ನರ್ತಿಸುವ ಗಣೇಶ’, ಮೊದಲಾದವುಗಳು.

ಜನನ ಮತ್ತು ಪರಿವಾರ[ಬದಲಾಯಿಸಿ]

'ಗೋಪಿ ಕಾಮತ್, ಉಡುಪಿ ಸಮೀಪದ ಮುಲ್ಕಿಯಲ್ಲಿ ಸನ್,೧೯೧೭ ರಲ್ಲಿ ಜನಿಸಿದರು. ಅವರ ಬಾಲ್ಯದ ತೊಟ್ಟಿಲ ಹೆಸರು, ರಾಜಗೋಪಾಲ ನೆಂದು. ತಂದೆ ಉತ್ತಮ ಕಾಮತ್, ಮತ್ತು ತಾಯಿ, ಕಮಲಾ ಬಾಲಕ, ಗೋಪಿ ಕಾಮತ್ ರವರ ಪರಿವಾರವೆಲ್ಲಾ ಸನ್, ೧೯೨೪ ರಲ್ಲಿ ಮದ್ರಾಸ್ ನಗರಕ್ಕೆ ಹೋಗಿ,ಅಲ್ಲಿ ಮದ್ರಾಸ್ ಬಂದರಿನಲ್ಲಿ ತಂದೆಯವರು, ಉದ್ಯೋಗ ಗಳಿಸಿದರು. ಗೋಪಿಯವರು, ಸೇಂಟ್ ಗೇಬ್ರಿಯೆಲ್ ಶಾಲೆ, ೮ ನೆಯ ತರಗತಿಯವರೆಗೆ ಶಿಕ್ಷಣ ಪಡೆದರು. ಮುಂದೆ ಅವರಿಗೆ ಕಲೆಯಲ್ಲಿ ಉತ್ಸಾಹವಿರುವುದನ್ನು ಉತ್ತಮ ಕಾಮತ್ ಗಮನಿಸಿ, ಮದ್ರಾಸ್ ಸ್ಕೂಲ್ ಆಫ್ ಆರ್ಟ್ಸ್ನಲ್ಲಿ ಪ್ರವೇಶ ಕೊಡಿಸಿದರು. ಅಲ್ಲಿನ ಖ್ಯಾತ ಕಲಾವಿದ ಚೌಧರಿಯವರ ಶಿಷ್ಯತ್ವದಲ್ಲಿ ಶಿಷ್ಯ ಕಾಮತ್ ರವರು, ಕಲಿತದ್ದು ಅಪಾರ.

ವೃತ್ತಿ ಜೀವನ[ಬದಲಾಯಿಸಿ]

'ಗೋಪಿ ಕಾಮತ್'ರವರ ಭಾವ, 'ಎಂ.ಎಸ್.ಕಾಮತ್' ರವರು ನಡೆಸುತ್ತಿದ್ದ ಸಂಡೇ ಟೈಮ್ಸ್ ನಲ್ಲಿ 'ಸಂಜೆ ಪತ್ರಿಕೆ ವಿಭಾಗ'ದಲ್ಲಿ ಸೇವೆ ಸಲ್ಲಿಸುವುದರ ಮೂಲಕ ಅವರು ಪತ್ರಿಕೋದ್ಯಮಕ್ಕೆ ಪಾದಾರ್ಪಣೆಮಾಡಿದರು. ಮುಂದೆ ಭಾವನವರು, ಹಿಂದೂಸ್ಥಾನ್ ಟೈಮ್ಸ್ ಎಂಬ ಮಕ್ಕಳ ಪತ್ರಿಕೆ ಸ್ಥಾಪಿಸಿದರು. ಅದರಲ್ಲೂ ಗೋಪಿ ಕಾಮತ್, ಕತೆ,ಕವನ ಪ್ರಸಂಗಗಳಿಗೆ ಚಿತ್ರಗಳನ್ನು ಹೊಂದಿಕೆಯಾಗುವಂತೆ ರಚಿಸತೊಡಗಿದರು. ಮದ್ರಾಸ್ ನಲ್ಲಿದ್ದಾಗ 'ಕುಟ್ಟಿ'ಯವರ ಪರಿಚಯವಾದದ್ದು ಕಾಮತ್ ರಿಗೆ, ಬಹಳ ಪ್ರಚಾರದೊರೆಯಿತು. ಕುಟ್ಟಿಯವರು ಆಗಿನ ಕಾಲದ ಅತ್ಯಂತ ಯಶಸ್ವಿ ಪತ್ರಿಕೆ ಶಂಕರ್ಸ್ ವೀಕ್ಲಿಗೆ ತಮ್ಮ ವ್ಯಂಗ್ಯಚಿತ್ರಗಳನ್ನು ಕೊಡುತ್ತಿದ್ದರು. ಅವರಿಬ್ಬರ ಗೆಳೆತನ ಚೆನ್ನಾಗಿ ಬೆಳೆದು ಇಬ್ಬರೂ ಮೆರೀನಾ ಕಡಲ ತೀರದಲ್ಲಿ ಕುಳಿತು ತಮ್ಮ ವೃತ್ತಿಯ ಬಗ್ಗೆ ಮುಕ್ತವಾಗಿ ಚರ್ಚಿಸುತ್ತಿದ್ದರು. 'ಎರಡನೆಯ ವಿಶ್ವ ಸಮರ' ಶುರುವಾದ ಸಮಯದಲ್ಲಿ ಈ ಚಿತ್ರಕಾರರ ಮೂಲಕ ಭಾರತೀಯ ಯುವಕರನ್ನು ವಿಶ್ವಯುದ್ಧದಲ್ಲಿ ಭಾಗವಹಿಸಲು ಮನಒಲಿಸಲು ಬ್ರಿಟಿಷ್ ಅಧಿಕಾರಿಗಳು ಹಣದ ಆಶೆ ತೋರಿಸಿದಾಗ 'ಗೋಪಿ ಕಾಮತ್' ಮತ್ತು 'ಕುಟ್ಟಿ'ಯವರು ಜಗ್ಗದೆ ತಿರಸ್ಕರಿಸಿದರು. ಹೀಗೆಯೇ ನಿಧಾನವಾಗಿ ಇಂಗ್ಲೀಷ್ ಪತ್ರಿಕೆಗಳಲ್ಲಿ ಬರೆಯುವ ಸುಯೋಗ ಅವರಿಗೆ ದೊರೆಯಿತು. ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿ ಸೇರಿ ಚೆನ್ನೈ, ಕಲ್ಕತ್ತಾ, ಆವೃತ್ತಿಗಳಲ್ಲಿ ದುಡಿದರು. ಕಲ್ಕತ್ತಾದಿಂದ ವಾಪಸ್ ಬಂದಮೇಲೆ, ಮದ್ರಾಸ್ ನಲ್ಲಿ ಚಂದಮಾಮ ಪತ್ರಿಕೆಯಲ್ಲಿ ನೌಕರಿದೊರೆಯಿತು. ಸಂಸಾರ ನಿರ್ವಹಣೆಗೆ ಹಣ ಸಾಲದ್ದಕ್ಕಾಗಿ ವಾಲ್ಟರ್ ಥಾಂಸನ್ ಜಾಹಿರಾತು ಸಂಸ್ಥೆಗೆ ಸೇರಿದರು. ಅಲ್ಲಿ ಕೇವಲ ೩ ತಿಂಗಳು ಮಾತ್ರ ಕೆಲಸಮಾಡಿ, ಬ್ರಿಟಿಷ್ ಸರಕಾರ ಖಾದಿತೊಡಲು ಆಕ್ಷೇಪಿಸಿದ್ದಕ್ಕೆ ವಿರೋಧಿಸಿ, ಕೆಲಸಕ್ಕೆ ರಾಜೀನಾಮೆ ಸಲ್ಲಿಸಿದರು.

ತಮಿಳು ಪತ್ರಿಕೆಗಳಲ್ಲಿ[ಬದಲಾಯಿಸಿ]

ದಿನಮಣಿ ಕದಿರ್, ಕಲ್ಕಿ, ಮುಂತಾದ ತಮಿಳು ಪತ್ರಿಕೆಗಳಲ್ಲಿ ವ್ಯಂಗ್ಯ ಚಿತ್ರಗಳನ್ನು ಬರೆಯಲು ಪ್ರಾರಂಭಿಸಿದರು. ತಮಿಳುನಾಡಿನ ಮಾಜೀ ಮುಖ್ಯಮಂತ್ರಿ ಅಣ್ಣಾ ದೊರೈ ನಿಧನರಾದಾಗ, ಇಲ್ಲುಸ್ಟ್ರೇಟೆಡ್ ವೀಕ್ಲಿ ಪತ್ರಿಕೆಯ ಮೇಲ್ವಿಚಾರಕರ ಕೋರಿಕೆಯ ಮೇರೆಗೆ ಎಂ. ಕರುಣಾ ನಿಧಿಯವರು ಒಂದು ಲೇಖನ ಬರೆದರು. ಆ ಸಂಪುಟದ ಮುಖಪುಟದ ಚಿತ್ರವನ್ನು ಬರೆದು ಅತ್ಯಂತ ಖ್ಯಾತಿಗಳಿಸಿದರು. ವರ್ಣಚಿತ್ರಗಳಲ್ಲಿ ಹೆಸರುಮಾಡಿದರು. ಅರವತ್ತರ ದಶಕದಲ್ಲಿ ’ಸುಧಾ’, ’ಮಯೂರ’ ಪತ್ರಿಕೆಗಳ ಮುಖಪುಟದ ವಿನ್ಯಾಸವನ್ನು ರಾಜ್ಯದ ವಿವಿಧ ನೆಲೆಗಳಲ್ಲಿ ಬೀಡುಮಾಡಿದ್ದ

 • ’ಅಪ್ಪುಕುಟ್ಟನ್ ಆಚಾರಿ,’
 • ’ವಿ.ಕೆ.ಬರಾಸ್ಕರ್’,
 • ’ಜಿ.ಎಲ್.ಎನ್.ಸಿಂಹ’,
 • ’ಪಿ.ಆರ್. ತಿಪ್ಪೇಸ್ವಾಮಿ’,
 • ’ಗೋಪಿ ಕಾಮತ್,
 • ’ಧನು’(ಅಂಚನ್),
 • ’ಎನ್.ಸಿ.ಪಾಟೀಲ’,

ಮುಂತಾದ ಅನೇಕ ಪ್ರತಿಭಾವಂತ ಕಲಾವಿದರು ಕೆಲಸದಲ್ಲಿದ್ದರು. ಅವರು ರಚಿಸಿದ ಕೃತಿಗಳು ಬೆಳಕುಕಂಡು ಒಮ್ಮೆಲೇ ಜನಪ್ರಿಯತೆಯ ಮೆಟ್ಟಿಲೇರಿದವು. ಆಗಲೇ 'ಮಯೂರಪತ್ರಿಕೆ'ಯಲ್ಲಿ ಕೆ ಲಸಮಾಡುತ್ತಿದ್ದ, ’ರಮೇಶ್’, ’ಚಂದ್ರನಾಥ್’, ’ಹುಬ್ಳೀಕರ್’, ’ಜಿ.ಕೆ.ಸತ್ಯ’,’ಶ್ರೀನಿವಾಸಮೂರ್ತಿ’ ಮುಂತಾದವರು ಕಥೆಗಳಿಗಾಗಿಯೇ ಸಂದರ್ಭಕ್ಕೆ ತಕ್ಕ ಹಾಗೆ ರಚಿಸಿ ಪ್ರಕಟಿಸುತ್ತಿದ್ದ, ಮುಖಪುಟದ ಚಿತ್ರಗಳನ್ನು ಅಂದಿನ ದಿನಗಳಲ್ಲಿ ಜನರು, ಚಿತ್ರಗಳಿಗೆ ಹೊಳಪಿನ ಕಟ್ಟುಹಾಕಿಸಿ ತಮ್ಮ ಮನೆಗಳಲ್ಲಿ ತೂಗುಹಾಕುತ್ತಿದ್ದರು. ಗಣೇಶ ಚತುರ್ಥಿ, ಸ್ವಾತಂತ್ರ್ಯದಿನೋತ್ಸವ, ಗಣರಾಜ್ಯೋತ್ಸವ, ಯುಗಾದಿ, ದೀಪಾವಳಿಯ ಚಿತ್ರಗಳು ಅಂಗಡಿ, ಹೋಟೆಲ್ ಮುಂತಾದ ಕಡೆ ಪ್ರದರ್ಶನಗೊಂಡವು.

ನಿಧನ[ಬದಲಾಯಿಸಿ]

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಿಸಿ ತಮ್ಮ ಜೀವನದ ಬಹುಪಾಲನ್ನು ಮದ್ರಾಸ್ ನಲ್ಲೇ ಕಳೆದ 'ಗೋಪಿ ಕಾಮತ್', ಸನ್ ೨೦೦೦ ರಲ್ಲಿ, ಒಂದು ಮದುವೆಯ ಸಮಾರಂಭಕ್ಕೆ 'ಕುಂದಾಪುರ'ಕ್ಕೆ ಬಂದ ಸಮಯದಲ್ಲಿ ದುರ್ಘಟನೆಯೊಂದರಲ್ಲಿ ಮೃತರಾದರು.


 • ಸ್ಮರಣೆ : 'ಅಪರೂಪದ ಕಲಾವಿದ-ಗೋಪಿ ಕಾಮತ್'-ಶ್ರೀ. ಪಿ. ಶ್ರೀಧರ ನಾಯಕ್, ಪು.೫೬, ಮಯೂರ, ಜನವರಿ, ೨೦೧೨