ಗೋಂಡ್ವಾನ ಖಂಡ
ಗೋಂಡ್ವಾನ ಖಂಡ- ದಕ್ಷಿಣ ಅಮೆರಿಕ, ಆಫ್ರಿಕ, ಇಂಡಿಯ, ಆಸ್ಟ್ರೇಲಿಯ, ಅಂಟಾರ್ಕ್‍ಟಿಕ್ ಮೊದಲಾದ ಖಂಡಗಳೆಲ್ಲವೂ ದಕ್ಷಿಣಾರ್ಧಗೋಳದಲ್ಲಿ ಒಂದೇ ಭೂಭಾಗವಾಗಿ ಒಗ್ಗೂಡಿದ್ದುವೆಂದು ಭಾವಿಸಿಕೊಂಡು ಆ ಭೂಭಾಗಕ್ಕೆ ಕೊಟ್ಟ ಹೆಸರು.
ಖಂಡಗಳ ಅಲೆತ
[ಬದಲಾಯಿಸಿ]ಪೇಲಿಯೋಝೋಯಿಕ್ ಯುಗದ ಕೊನೆಯಲ್ಲಿ (225 ದಶಲಕ್ಷ ವರ್ಷ ಪ್ರಾಚೀನ) ಗೋಂಡ್ವಾನ ಖಂಡ ಒಡೆಯಲು ತೊಡಗಿ ಭಿನ್ನ ಖಂಡಗಳು ರೂಪಗೊಂಡು ಕ್ರಮೇಣ ಅವು ದೂರ ದೂರ ಸರಿದು ಈಗಿರುವ ಸ್ಥಳದಲ್ಲಿ ನಿಂತಿವೆ ಎಂದು ಭೂವಿಜ್ಞಾನಿ ತತ್ತ್ವವೊಂದು ಪ್ರತಿಪಾದಿಸುತ್ತದೆ. (ನೋಡಿ- ಖಂಡಗಳ-ಅಲೆತ)
ಈ ಖಂಡಗಳೆಲ್ಲವೂ ಹಿಂದೊಮ್ಮೆ ಒಟ್ಟುಗೂಡಿದ್ದುವು ಎನ್ನುವುದಕ್ಕೆ ಹಲವಾರು ಸಾಕ್ಷ್ಯಗಳಿವೆ. ಗೋಂಡ್ವಾನ ಖಂಡದ ಭಾಗಗಳಾದ ದಕ್ಷಿಣ ಇಂಡಿಯ, ದಕ್ಷಿಣ ಆಫ್ರಿಕ, ದಕ್ಷಿಣ ಅಮೆರಿಕ ಮತ್ತು ಆಸ್ಟ್ರೇಲಿಯ ಖಂಡಗಳ ಬಹುಭಾಗ ಹಿಮ ಗಡ್ಡೆಗಳಿಂದ ಮುಚ್ಚಿ ಹೋಗಿದ್ದ ಸೂಚನೆಗಳು ಕಂಡು ಬಂದಿವೆ. ಈಗಿರುವ ಸಾಪೇಕ್ಷ ವಿನ್ಯಾಸದಲ್ಲಿಯೇ ಹಿಂದೆಯೂ ಈ ಖಂಡಗಳು ಇದ್ದಿದ್ದರೆ ಈ ವಲಯದಲ್ಲಿ ಹಿಮ ದಟ್ಟವಾಗಿ ಕವಿಯುವುದಕ್ಕೆ ಅವಕಾಶವೇ ಇರುತ್ತಿರಲಿಲ್ಲ. ಏಕೆಂದರೆ ಈ ಪ್ರದೇಶಗಳಲ್ಲಿನ ಬಹುಭಾಗ ಇಂದು ಉಷ್ಣವಲಯಕ್ಕೆ ಸೇರಿವೆ. ಇವೆಲ್ಲ ಖಂಡಗಳಲ್ಲಿಯೂ ಒಂದು ಕಾಲದಲ್ಲಿ ಅತಿ ಶೀತದ ವಾತಾವರಣ ಇದ್ದುದಕ್ಕೆ ಕುರುಹುಗಳು ಕಾಣಸಿಗುವುದರಿಂದ ಇವು ಹಿಂದೆ ಸಮಭಾಜಕ ವೃತ್ತದ ದಕ್ಷಿಣಕ್ಕಿದ್ದುವೆಂದೂ ದಕ್ಷಿಣ ಮೇರುವಿನ ಬಳಿ ಒಂದುಗೂಡಿದ್ದುವೆಂದೂ ಊಹಿಸಲಾಗಿದೆ.
ಜರ್ಮನ್ ಭೂ ವಿಜ್ಞಾನಿ ವೆಗ್‍ನರ್ ಎಂಬಾತ ಖಂಡಗಳ ಅಲೆತದ ಪರಿಕಲ್ಪನೆಯನ್ನು ಮಂಡಿಸಿದ, ಇದರ ಪ್ರಕಾರ ಭೂಖಂಡಗಳು ದಕ್ಷಿಣ ಮೇರುವಿನ ಬಳಿ ಒಂದುಗೂಡಿದ್ದುವೆಂದೂ ಕ್ರಮೇಣ ಈ ಕೂಟ ಒಡೆದು ಖಂಡಗಳು ದೂರ ದೂರ ಸರಿದುವೆಂದೂ ಇದೆ. ದಕ್ಷಿಣದಲ್ಲಿನ ಖಂಡಗಳೆಲ್ಲವೂ ಒಟ್ಟುಗೂಡಿ ಯಾವ ರೀತಿ ಗೋಂಡ್ವಾನ ಖಂಡವೆಂದು ಪರಿಗಣಿಸ್ಪಟ್ಟವೋ ಅದೇ ರೀತಿ ಉತ್ತರದ ಖಂಡಗಳನ್ನು ಲಾರೇಷಿಯ ಎಂಬ ಕೂಟದಲ್ಲಿ ಗುರುತಿಸಲಾಗಿದೆ. ಈ ಬೃಹತ್ ಖಂಡಗಳೆರಡರ ನಡುವೆ ಇದ್ದ ಸಾಗರಕ್ಕೆ ಟೆತಿಸ್ ಮಹಾಸಾಗರ ಎಂದು ಹೆಸರು. ದಕ್ಷಿಣ ಇಂಡಿಯ ಉತ್ತರದ ಕಡೆ ಜರುಗುತ್ತ ಹೋದಂತೆ ಟೆತಿಸ್ ಸಾಗರದಲ್ಲಿ ನಿಕ್ಷೇಪಗೊಂಡ ಶಿಲಾಸ್ತರಗಳು ಮಡಿಕೆ ಬಿದ್ದು ನೀರಿನಿಂದ ಮೇಲೆದ್ದು ಉನ್ನತವಾದ ಹಿಮಾಲಯ ಶ್ರೇಣಿಯಾಗಿ ನಿಂತವು. ದಕ್ಷಿಣ ಖಂಡಗಳು (ಗೋಂಡ್ವಾನ ಖಂಡದ ಭಾಗಗಳು) ಉತ್ತರದ ಕಡೆ ಧಾವಿಸಿದಾಗ ಶಿಲೆಗಳು ಮಡಿಕೆ ಬಿದ್ದು ಆಲ್ಪ್ಸ್ , ಹಿಮಾಲಯ ಪರ್ವತ ಪಂಕ್ತಿಯಾಗಿ ನಿಂತವು.
ಬಹು ಪ್ರಾಚೀನವಾದ ಈ ಗೋಂಡ್ವಾನ ಖಂಡದ ಭಾಗಗಳನ್ನು ಈಗ ಇಂಡಿಯ ಆಸ್ಟ್ರೇಲಿಯ, ದಕ್ಷಿಣ ಆಫ್ರಿಕ, ದಕ್ಷಿಣ ಅಮೆರಿಕಗಳಲ್ಲಿ ಗುರುತಿಸಬಹುದು. ಈ ಎಲ್ಲ ಖಂಡಗಳಲ್ಲಿನ ಒಳನಾಡಿನ ಸರೋವರಗಳಲ್ಲಿ ನಿಕ್ಷೇಪಗೊಂಡಿರುವ ಶಿಲಾಪ್ರಸ್ತರಗಳಲ್ಲಿ ಸಸ್ಯಾವಶೇಷಗಳು ಕಾಣಸಿಗುತ್ತವೆ. ಇಲ್ಲಿ ಶಿಲೆಗಳೂ ಅವುಗಳಲ್ಲಿನ ಜೀವ್ಯವಶೇಷಗಳೂ ಸಮಸಮವಾದ ಹೋಲಿಕೆಯನ್ನು ತೋರಿಸುತ್ತವೆ. ಎಲ್ಲ ಕಡೆಗಳಲ್ಲಿಯೂ ಯುಗದ ಪ್ರಾರಂಭದಲ್ಲಿ ಹಿಮಗಡ್ಡೆಗಳಿಂದ ಆಚ್ಛಾದಿತವಾದ ಭೂಭಾಗದ ಚಿಹ್ನೆ ಕಾಣುತ್ತದೆ. ಶೀತವಾತಾವರಣ ಕ್ರಮೇಣವಾಗಿ ಕಡಿಮೆಯಾಗುತ್ತ ಉಷ್ಣ ಹೆಚ್ಚಿ ಉಷ್ಣವಲಯವಾಗಿ ಪರಿಣಮಿಸುವುದುನ್ನು ಶಿಲೆಗಳಲ್ಲಿ ಗುರುತಿಸಬಹುದಾಗಿದೆ. ದೂರ ದೂರವಿರುವ ಖಂಡ ಭಾಗಗಳೆಲ್ಲದರಲ್ಲಿಯೂ ಈ ಕಾಲದ ಪೆಡಂಭೂತಗಳ ಚಿಹ್ನೆಗಳು ತೋರುತ್ತವೆ. ಯುಗ ಕೊನೆಯಾಗುವ ಹೊತ್ತಿಗೆ ಬೃಹತ್ ಖಂಡ ಛಿದ್ರ ಹೊಂದಿ ದೂರ ದೂರ ಸರಿದು ಹೋಗಿದ್ದುದೇ ಅಲ್ಲದೆ ಅತ್ಯಂತ ಅಗಾಧ ಮೊತ್ತದಲ್ಲಿ ಶಿಲಾರಸ ಉಕ್ಕಿ ಬಂದು ಖಂಡದ ಬಹುಭಾಗವನ್ನು ಆಕ್ರಮಿಸಿರುವುದೂ ಕಾಣುತ್ತದೆ. ಈಗ ಬೇರೆ ಬೇರೆಯಾಗಿ ತೋರುವ ಭೂಖಂಡದ ಭಾಗಗಳು ಹಿಂದೆ ಒಟ್ಟುಗೂಡಿ ಗೋಂಡ್ವಾನ ಖಂಡ ಎಂಬ ಬೃಹ್ ಖಂಡವಾಗಿ ಕೂಡಿಕೊಂಡಿದ್ದುವೆನ್ನುವ ತತ್ತ್ವವನ್ನು ಎಲ್ಲರೂ ಒಪ್ಪುವರಾದರೂ ಈ ಖಂಡ ಯಾವ ರೀತಿ ಒಡೆಯಿತು. ಒಡೆದ ಮೇಲೆ ಹೇಗೆ ಜರುಗುತ್ತ ಹೋಗಿ ಈಗಿರುವಲ್ಲಿ ನಿಂತವು ಎನ್ನುವ ವಿಷಯವಾಗಿ ಕ್ಲುಪ್ತವಾದ ಸರ್ವಜನಸಮ್ಮತವಾದ ಅಭಿಪ್ರಾಯ ಇನ್ನೂ ರೂಪುಗೊಂಡಿಲ್ಲ. ಭೂವಿಜ್ಞಾನ ಅಧ್ಯಯನದಲ್ಲಿ ಇದು ಜೀವಂತ ಪ್ರಶ್ನೆಯಾಗಿ ಉಳಿದಿದೆ.