ವಿಷಯಕ್ಕೆ ಹೋಗು

ಗೊದ್ದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗೊದ್ದ
Scientific classification
ಸಾಮ್ರಾಜ್ಯ:
Animalia
ವಿಭಾಗ:
ವರ್ಗ:
ಗಣ:
ಕುಟುಂಬ:
ಕುಲ:
ಪ್ರಜಾತಿ:
C. vagus
Binomial name
Camponotus vagus
(Scopoli, 1763)

ಗೊದ್ದ ಇನ್ಸೆಕ್ಟ ವರ್ಗದ ಫಾರ್ಮಿಸಿಡೀ ಕುಟುಂಬಕ್ಕೆ ಸೇರಿದ ಒಂದು ಕೀಟ. ಇರುವೆಗಳಿಗೆ ಹತ್ತಿರ ಸಂಬಂಧಿ.

ಇದು ಸಾಮಾನ್ಯವಾಗಿ ಮರದ ತುಂಡು ಮತ್ತು ದಿಮ್ಮಿಗಳ ಪೊಟರೆಗಳಲ್ಲಿ ಗೂಡುಮಾಡಿಕೊಂಡು ದೊಡ್ಡ ಗುಂಪುಗಳಲ್ಲಿ ವಾಸಿಸುತ್ತದೆ. ಕೆಲವೊಮ್ಮೆ ಹಸಿ ಮರಗಳಲ್ಲಿ ಇರಬಹುದಾದ ಗಾಯಗಳ ಮೂಲಕ ಮರದೊಳಕ್ಕೆ ಪ್ರವೇಶಿಸಿ ವಾಸಮಾಡತೊಡಗುವುದುಂಟು.

ಸತ್ತ ಇತರ ಕೀಟಗಳು ಮತ್ತು ಕೆಲವು ಗಿಡಗಳ ಎಲೆಗಳ ಮೇಲೆ ಗಿಡಹೇನುಗಳು ಸ್ರವಿಸುವ ಸಿಹಿಯಾದ ಅಂಟು ಪದಾರ್ಥ- ಇವೇ ಗೊದ್ದದ ಆಹಾರ. ಅನೇಕ ವೇಳೆ ಮನೆಗಳೊಳಕ್ಕೆ ಬಂದು ಸಕ್ಕರೆಗೂ ಮುತ್ತುವುದುಂಟು.

Camponotus vagus – Lateral view

ಗೊದ್ದಗಳ ಒಂದು ಹಿಂಡಿನಲ್ಲಿ ಸಾಮಾನ್ಯವಾಗಿ ಒಂದು ರಾಣಿ, ಹಲವಾರು ದೊಡ್ಡ ಹಾಗೂ ಚಿಕ್ಕ ಕೆಲಸಗಾರ ಗೊದ್ದಗಳು ಮತ್ತು ಅನಿಷೇಚನ ರೀತಿಯಲ್ಲಿ ಬೆಳೆದ ಗಂಡು ಗೊದ್ದಗಳು ಇರುತ್ತವೆ. ದೊಡ್ಡ ಗುಂಪುಗಳಲ್ಲಿ ನಿಯಮಿತ ಲೈಂಗಿಕ ಕಾರ್ಯ ನಿರ್ವಹಿಸುವ ಮತ್ತು ರೆಕ್ಕೆಯುಳ್ಳ ಗಂಡು ಹಾಗೂ ಹೆಣ್ಣು ಗೊದ್ದಗಳು ಕಾಣಸಿಗುತ್ತವೆ. ಆದರೆ ಇವು ಅನುಕೂಲ ಪರಿಸ್ಥಿತಿಯಲ್ಲಿ ಮಾತ್ರ ಕೊಂಚ ಕಾಲ ಹಾರಾಡುತ್ತಿದ್ದು ಕೊನೆಗೆ ಸಂಭೋಗ ಕ್ರಿಯೆಯಲ್ಲಿ ತೊಡಗುತ್ತವೆ. ಗರ್ಭ ಧರಿಸಿದ ಹೆಣ್ಣು ಗೊದ್ದ ಹೊಸ ಗೂಡು ಮಾಡಲು ಸೂಕ್ತವಾದ ಮರವನ್ನೇರಿ ಅದನ್ನು ಕೊರೆದು ಒಳಗೆ ಮೊಟ್ಟೆಗಳನ್ನಿಡುತ್ತದೆ. ಮೊಟ್ಟೆಯಿಡುವ ಮುನ್ನ ಅದರ ರೆಕ್ಕೆಗಳು ಕಳಚಿಬೀಳುತ್ತವೆ. ಮೊಟ್ಟೆಗಳು ಒಡೆದು ಮರಿ ಹುಳುಗಳು ಹೊರಬರುತ್ತವೆ. ತಾಯಿ ಗೊದ್ದ ತನ್ನ ದೇಹದಿಂದ ಸ್ರವಿಸುವ ವಸ್ತುಗಳಿಂದ ಮರಿಹುಳುಗಳನ್ನು ಪೋಷಿಸುತ್ತದೆ. 2-3 ತಿಂಗಳುಗಳಲ್ಲಿ ಇವು ಕೆಲಸಗಾರ ಇರುವೆಗಳಾಗಿ ಬೆಳೆಯುತ್ತವೆ.

ಪ್ರಭೇದಗಳು

[ಬದಲಾಯಿಸಿ]

ಕ್ಯಾಂಪೊನೋಟಸ್ ವೇಗಸ್ ಎಂಬ ಪ್ರಭೇದ ಯುರೋಪ್ ಮತ್ತು ಆಫ್ರಿಕದಲ್ಲಿ ಕಂಡು ಬರುತ್ತದೆ.ಭಾರತ ಮತ್ತು ಪಾಕಿಸ್ತಾನಗಳಲ್ಲಿ ಸಾಮಾನ್ಯವಾಗಿ ಕಾಣಬರುವ ಗೊದ್ದ ಕ್ಯಾಂಪೊನೋಟಸ್ ಕಂಪ್ರೆಸಸ್ ಎಂಬುದು. ಅರಗಿನ ಕೀಟದ ಶತ್ರುಗಳನ್ನು ತಿಂದು ಹಾಕುವುದರಿಂದ ಇದು ಅರಗಿನ ಉತ್ಪಾದನೆಗೆ ಸಹಕಾರಿಯೆನ್ನಲಾಗಿದೆ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಗೊದ್ದ&oldid=1066085" ಇಂದ ಪಡೆಯಲ್ಪಟ್ಟಿದೆ