ಗೇರ್ವಿನಸ್, ಜಾರ್ಜ್ ಗಾಟ್ಫ್ರೀಡ್

ವಿಕಿಪೀಡಿಯ ಇಂದ
Jump to navigation Jump to search

1805-71. ಜರ್ಮನಿಇತಿಹಾಸಕಾರ ಮತ್ತು ಷೇಕ್ಸ್‌ಪಿಯರ್ ನಾಟಕಗಳ ವಿಮರ್ಶಕ.

ಬದುಕು[ಬದಲಾಯಿಸಿ]

1835ರಲ್ಲಿ ಗಾಟಿಂಗೆನ್ನಲ್ಲಿ ಇತಿಹಾಸದ ಪ್ರಾಧ್ಯಾಪಕನಾಗಿ ನೇಮಕಗೊಂಡ. ಹ್ಯಾನೊವರಿನ ಅರಸ ರಾಜ್ಯಾಂಗವನ್ನು ಗಣಿಸದೆ ನಿರಂಕುಶನಾಗಿ ನಡೆದನೆಂದು ಆರು ಮಂದಿ ಪ್ರಾಧ್ಯಾಪಕರೊಡನೆ ಈತನೂ ಪ್ರತಿಭಟಿಸಿದನಾಗಿ ಕೆಲಸವನ್ನು ಕಳೆದುಕೊಂಡ (1837). ಅಲ್ಲಿಂದ ಏಳು ವರ್ಷಗಳ ಕಾಲ ಹಲವು ದೇಶಗಳಲ್ಲಿ ಪ್ರವಾಸ ಮಾಡಿ, 1844ರಲ್ಲಿ ಹೈಡಲ್ಬರ್ಗ್ನಲ್ಲಿ ಇತಿಹಾಸದ ಪ್ರಾಧ್ಯಾಪಕನಾದ. ಕ್ರೈಸ್ತಮತದ ಎಲ್ಲ ಪಂಥಗಳವರೂ ಒಂದುಗೂಡುವ ಕನಸನ್ನು ಕಂಡಿದ್ದ ಈತ 1845ರಲ್ಲಿ ಜರ್ಮನಿಯ ಕೆಥೊಲಿಕರಿಗೆ ಬೆಂಬಲ ನೀಡಿದ. ಈತನೂ ಇತರೆ ಕೆಲವು ವಿದ್ವಾಂಸರೂ ಸೇರಿ ಒಂದು ನಿಯತಕಾಲಿಕವನ್ನು ನಡೆಸುತ್ತಿದ್ದರು. ಧಾರ್ಮಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಸಹನೆ, ವಿಶಾಲಮನೋಭಾವಗಳನ್ನು ಬೆಳೆಸುವುದು ಈ ಪತ್ರಿಕೆಯ ಉದ್ದೇಶವಾಗಿತ್ತು.

ಕೃತಿಗಳು[ಬದಲಾಯಿಸಿ]

1835 ರಿಂದ 1842 ರವರೆಗಿನ ಅವಧಿಯಲ್ಲಿ ಗೇರ್ವಿನಸ್ ಜರ್ಮನಿಯ ಸಾಹಿತ್ಯ ಚರಿತ್ರೆಯನ್ನು ಐದು ಸಂಪುಟಗಳಲ್ಲಿ ಪ್ರಕಟಿಸಿದ. ಇದು ಜರ್ಮನಿಯ ಮೊದಲನೆಯ ಗಮನಾರ್ಹ ಸಾಹಿತ್ಯ ಚರಿತ್ರೆ ಎನಿಸಿತು; ಈತನ ವಿಶೇಷ ವಿದ್ವತ್ತು ಇದರಲ್ಲಿ ಪ್ರಕಟವಾಯಿತು. 1849 ರಿಂದ 1852ರ ಅವಧಿಯಲ್ಲಿ ಈತನ ಮುಖ್ಯ ಕೃತಿ- ಷೇಕ್ಸ್‌ಪಿಯರ್- ನಾಲ್ಕು ಸಂಪುಟಗಳಲ್ಲಿ ಜರ್ಮನ್ ಭಾಷೆಯಲ್ಲಿ ಹೊರಬಿತ್ತು (1863ರಲ್ಲಿ ಷೇಕ್ಸ್‌ಪಿಯರ್ ಕಾಮೆಂಟರೀಸ್ ಎಂಬ ಹೆಸರಿನಲ್ಲಿ ಇದರ ಇಂಗ್ಲಿಷ್ ಅನುವಾದ ಪ್ರಕಟವಾಯಿತು). 1868ರಲ್ಲಿ ಈತ ಪ್ರಸಿದ್ಧ ಗಾಯಕ ಹ್ಯಾಂಡಲ್ ಮತ್ತು ಪ್ರಸಿದ್ಧ ನಾಟಕಕಾರ ಷೇಕ್ಸ್‌ಪಿಯರ್ ಇವರನ್ನು ಹೋಲಿಸಿ ಅಧ್ಯಯನ ನಡೆಸಿದ. ಷೇಕ್ಸ್‌ಪಿಯರ್ ಬಳಸಿದ ಪದ್ಯಮಾಧ್ಯಮದ ಆಧಾರದ ಮೇಲೆ ಈತ ಆತನ ನಾಟಕಗಳನ್ನು ಮೂರು ಗುಂಪುಗಳನ್ನಾಗಿ ವಿಭಾಗಿಸಿದ. ಷೇಕ್ಸ್‌ಪಿಯರ್ನ ಎಲ್ಲ ಕೃತಿಗಳನ್ನೂ ಅಭ್ಯಾಸ ಮಾಡಿ ಆತನ ನಾಟಕಕಲೆಯ ವಿಕಸನವನ್ನು ಗುರುತಿಸುವುದರ ಅಗತ್ಯವನ್ನು ಮೊದಲು ಸ್ಪಷ್ಟಪಡಿಸಿದ ವಿಮರ್ಶಕ ಈತ.