ವಿಷಯಕ್ಕೆ ಹೋಗು

ರಾಣಿ ಚೆನ್ನಭೈರಾದೇವಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಾಣಿ ಚೆನ್ನಭೈರಾದೇವಿ
Born(೧೫೩೬-೦೧-೦೧)೧ ಜನವರಿ ೧೫೩೬
Died1 January 1606(1606-01-01) (aged 70)
ಕೆಳದಿ, ಶಿವಮೊಗ್ಗ
Other namesಕರಿಮೆಣಸಿನ ರಾಣಿ, ಕಾಳು ಮೆಣಸಿನ ರಾಣಿ, ಗೇರುಸೊಪ್ಪೆಯ ರಾಣಿ ಚೆನ್ನಭೈರಾದೇವಿ, ನಗಿರೆಯ ರಾಣಿ ಚೆನ್ನಭೈರಾದೇವಿ, ಅವ್ವರಸಿ

ಚೆನ್ನಭೈರಾದೇವಿಯು ಸಾಳುವ ವಂಶಕ್ಕೆ ಸೇರಿದ ಒಬ್ಬ ರಾಣಿ. ೧೬ನೇ ಶತಮಾನದಲ್ಲಿ ಆಳ್ವಿಕೆ ನಡೆಸಿದ ಈ ರಾಣಿಯು ೫೪ ವರ್ಷಗಳ ಕಾಲ ರಾಜ್ಯಭಾರ ಮಾಡಿದ್ದಳು. ಪ್ರಸ್ತುತ ಭಟ್ಕಳ ತಾಲೂಕಿನಲ್ಲಿರುವ []ಹಾಡವಳ್ಳಿ (ಸಂಗೀತಪುರ) ಮತ್ತು ಗೇರುಸೊಪ್ಪ ಪ್ರಾಂತ್ಯವನ್ನು ಆಳುತ್ತಿದ್ದ ಈಕೆಯನ್ನು ಗೇರುಸೊಪ್ಪೆಯ ರಾಣಿ ಎಂದು ವರ್ಣಿಸಲಾಗಿದೆ. ಕರಾವಳಿ ಮತ್ತು ಮಲೆನಾಡಿನ ಪ್ರದೇಶದಲ್ಲಿ ವ್ಯಾಪಕವಾಗಿ ಬೆಳೆಯುತ್ತಿದ್ದ ಕಾಳುಮೆಣಸನ್ನು ಯುರೋಪಿಗೆ ರಫ್ತು ಮಾಡುತ್ತಿದ್ದ ಈಕೆಗೆ ಕರಿಮೆಣಸಿನ/ಕಾಳುಮೆಣಸಿನ ರಾಣಿ [] ಎಂದೂ ಕರೆಯಲಾಗಿದೆ. ಪೋರ್ಚುಗೀಸರು, ಕೆಳದಿ ಅರಸರು ಮತ್ತು ಬಿಜಾಪುರದ ಸುಲ್ತಾನರ ನಡುವಿನ ಯುದ್ಢಗಳನ್ನು ತನ್ನ ಜಾಣ್ಮೆಯಿಂದ ನಿರ್ವಹಿಸಿದ ಈಕೆ 1552-1606 ರ ನಡುವಿನ ಐವತ್ನಾಲ್ಕು ವರ್ಷಗಳ ಕಾಲ [] ರಾಜ್ಯಭಾರ ನಡೆಸಿದಳು. ಗೇರುಸೊಪ್ಪೆಯಲ್ಲಿ ಅಲ್ಲಿನ ನಾಡವರು ಮತ್ತು ಖಾರ್ವಿಗಳು "ಅವ್ವರಸಿ" ಎಂದು ಪೂಜಿಸುವ ರಾಣಿ ಚೆನ್ನಭೈರಾದೇವಿಯ ದೇವಸ್ಥಾನವಿದೆ. ಈಕೆಗೆ ಪೋರ್ಚುಗೀಸರು "ರೈನಾ ದೆ ಪಿಮೆಂಟಾ" [] ಎಂಬ ಹೆಸರು ಕೊಟ್ಟಿದ್ದರು.

ನಗಿರೆಯ ರಾಣಿ

[ಬದಲಾಯಿಸಿ]

ಶರಾವತಿಯ ಒಂದು ದಂಡೆಯಲ್ಲಿರುವ ಗ್ರಾಮವನ್ನು ಗೇರುಸೊಪ್ಪೆ ಎಂದು ಕರೆದರೆ ಮತ್ತೊಂದು ಬದಿಯ ಹಳ್ಳಿಯನ್ನು ನಗಿರೆ ಬಸ್ತಿಕೇರಿ ಎಂದು ಕರೆಯುತ್ತಿದ್ದರು. ಅಲ್ಲಿ ಜೈನರ ಬಸದಿಗಳು ಇರುವುದರಿಂದಲೇ ಅದು ಆ ಹೆಸರನ್ನು ಪಡೆಯಿತು. ಚೆನ್ನಭೈರಾದೇವಿ ನಗಿರೆಯನ್ನೂ ಆಳುತ್ತಿದ್ದರಿಂದ ಆಕೆಗೆ ನಗಿರೆಯ ರಾಣಿ ಎಂಬ ಹೆಸರೂ ಇತ್ತು.

ಇತಿಹಾಸ

[ಬದಲಾಯಿಸಿ]

ವಿಜಯನಗರದ ಸಾಳುವ ವಂಶದ ಒಂದು ಶಾಖೆಯ ಅರಸರು ಗೇರುಸೊಪ್ಪೆಯನ್ನು ಆಳುತ್ತಿದ್ದರೆ ಮತ್ತೊಂದು ವಂಶದವರು ಹಾಡುವಳ್ಳಿಯನ್ನು ಆಳುತ್ತಿದ್ದರು. ಗೇರುಸೊಪ್ಪೆಯ ಅರಸ ಇಮ್ಮಡಿ ದೇವರಾಯ (1515-50) ಪೋರ್ಚುಗೀಸರ ಮೇಲೆ ಯುದ್ಧಮಾಡಿದ. ಮಡಗೋವೆಯ ಬಳಿ ೧೫೪೨ರಲ್ಲಿ ನಡೆದ ಭೀಕರ ಯುದ್ಧದಲ್ಲಿ ಆತ ಸೋಲನ್ನಪ್ಪಿದ ಬಳಿಕ ಪೋರ್ಚುಗೀಸರು ಆತನ ರಾಜಧಾನಿ ಭಟ್ಕಳವನ್ನು ಸುಟ್ಟು ಹಾಕಿದರು. ಆತನ ಪತ್ನಿ ಚೆನ್ನಾದೇವಿ[]ಯ ತಂಗಿಯೇ ಚೆನ್ನಭೈರಾದೇವಿ. ಪೋರ್ಚುಗೀಸರ ಜೊತೆಗಿನ ಒಪ್ಪಂದದಂತೆ ಕಪ್ಪವನ್ನು ಕೊಡಲಿಲ್ಲವೆಂದು, ಕಾರ್ಟಜ್ ಪಡೆಯದ ಮಹಮದ್ದೀಯರ ಹಡಗುಗಳಿಗೆ ಭಟ್ಕಳ ಬಂದರಿನಲ್ಲಿ ಆಶ್ರಯ ಕೊಟ್ಟಿರುವಳೆಂದು ಆರೋಪಿಸಿ, ಪೋರ್ಚುಗೀಸ್ ಕಪ್ತಾನ ಆಲ್ಫನ್ಸೋ ಡಿಸೋಜಾ ಭಟ್ಕಳವನ್ನು ಮುತ್ತಿ ರಾಣಿಯನ್ನು ಸೋಲಿಸಿ ಭಟ್ಕಳವನ್ನು ಸುಟ್ಟುಹಾಕಿದ.[]. ಅಕ್ಕನ ನಂತರ ತಂಗಿ ಚೆನ್ನಭೈರಾದೇವಿಗೆ ಹಾಡುವಳ್ಳಿಯ ಜೊತೆಗೆ ಗೇರುಸೊಪ್ಪೆಯ ಅಧಿಕಾರವೂ ದೊರಕಿತು.

ಆಡಳಿತ

[ಬದಲಾಯಿಸಿ]

ಚೆನ್ನಭೈರಾದೇವಿಯ ರಾಜ್ಯ ದಕ್ಶಿಣ ಗೋವೆಯಿಂದ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಭಟ್ಕಳ, ಮಲ್ಪೆ,ಹೊನ್ನಾವರ, ಮಿರ್ಜಾನ್, ಅಂಕೋಲಾ, ಬೈಂದೂರು, ಕಾರವಾರಗಳನ್ನೊಳಗೊಂಡಿತ್ತು. [] ಈ ಕರಾವಳಿಯ ಜೊತೆಗೆ ಘಟ್ಟದ ಮೇಲಿನ ಭಾರಂಗಿ, ಮರಬಿಡಿ, ಕರೂರು,ಹನ್ನಾರ, ಬಿದನೂರು, ಸೌಳನಾಡು, ಆವಿನಹಳ್ಳಿ ಸೀಮೆಗಳು ಚೆನ್ನಭೈರಾದೇವಿಯ ಆಡಳಿತಕ್ಕೆ ಒಳಪಟ್ಟಿದ್ದವು. ಈಕೆಯ ಆಳ್ವಿಕೆಯಲ್ಲಿ ಯುರೋಪಿನ ರಾಷ್ಟ್ರಗಳಿಗೆ ಕಾಳುಮೆಣಸು, ದಾಲ್ಚಿನ್ನಿ, ಅಡಿಕೆ, ಶುಂಠಿ, ಗಂಧಗಳನ್ನು ರಫ್ತು ಮಾಡಲಾಗುತ್ತಿತ್ತು. ಈಕೆಯ ಕಾಲದಲ್ಲಿನ ಮಿರ್ಜಾನ್ ಕೋಟೆ, ಕಾನೂರು ಕೋಟೆಗಳನ್ನೂ ಈಗಲೂ ಕಾಣಬಹುದು. ಈಕೆ ೧೫೬೨ರಲ್ಲಿ ಕಾರ್ಕಳದಲ್ಲಿನ ಚತುರ್ಮುಖ ಬಸದಿಯನ್ನು ಕಟ್ಟಿಸಿದಳು. ಪೋರ್ಚುಗೀಸರ ಮತಾಂತರದಿಂದ ತಪ್ಪಿಸಿಕೊಳ್ಳಲು ಚೆನ್ನಭೈರಾದೇವಿಯ ರಾಜ್ಯಕ್ಕೆ ಆಶ್ರಯ ಕೋರಿ ಬಂದ ಸಾರಸ್ವತ ಬ್ರಾಹ್ಮಣರು ಮತ್ತು ಕೊಂಕಣಿಗರಿಗೆ ರಾಣಿ ತನ್ನ ರಾಜ್ಯದಲ್ಲಿ ಆಶ್ರಯ ಕೊಟ್ಟಳು. ಜೈನ ಮತದವಳಾದ ರಾಣಿ ಅನೇಕ ಶೈವ, ವೈಷ್ಣವ ಮತ್ತು ಶಕ್ತಿ ದೇಗುಲಗಳನ್ನು ಕಟ್ಟಲು, ಜೀರ್ಣೋದ್ದಾರಕ್ಕೂ ನೆರವು ನೀಡಿದ್ದಳು. ಬಿದರೂರು ಅಥವಾ ವೇಣುಪುರದ ಯೋಗಾನರಸಿಂಹ ಸ್ವಾಮಿ ದೇಗುಲ ಮತ್ತು ವರ್ಧಮಾನ ಬಸದಿಗಳ ಜೀರ್ಣೋದ್ದಾರಕ್ಕೂ ರಾಣಿ ನೆರವು ನೀಡಿದ್ದಳು. "ಕರ್ನಾಟಕ ಶಬ್ದಾನುಶಾಸನ " ಎಂಬ ವ್ಯಾಕರಣ ಗ್ರಂಥ ರಚನಾಕಾರ, ಸ್ವಾದಿ ದಿಗಂಬರ ಜೈನ ಮಠದ ಯತಿ ಅಭಿನವ ಭಟ್ಟಾಕಲಂಕರು ಈ ರಾಣಿಯ ಆಶ್ರಯದಲ್ಲಿದ್ದರು. ಪೋರ್ಚುಗೀಸರ ವಶದಲ್ಲಿದ್ದ ಕೊಚ್ಚಿನ್ ಬಂದರಿನ ಕ್ಯಾಪ್ಟನ್ ಆಲ್ಫನ್ಸೋ ಮೆಕ್ಸಿಯ ಪೋರ್ಚುಗೀಸ್ ರಾಜನಿಗೆ "ಬಟಿಕಳ(ಭಟ್ಕಳ) ಮತ್ತು ಗೋವಾಗಳ ನಡುವೆ ಒನೋರ್(ಕಾನೂರು),ಮರ್ಜೆನ್(ಮಿರ್ಜಾನ್) ಮತ್ತು ಅಂಕೋಲಾಗಳೆಂಬ ಜಾಗಗಳಿವೆ. ಅವುಗಳಿಂದ ವಾರ್ಷಿಕ ೫೦೦೦ ಕ್ರೂಜೇಡೋಸ್(ಹದಿನೈದನೆದ ಶತಮಾನದಲ್ಲಿದ್ದ ಪೋರ್ಚುಗೀಸ್ ಬಂಗಾರದ ನಾಣ್ಯ)ಗಳಷ್ಟು ಕಾಳು ಮೆಣಸು ವಾರ್ಷಿಕವಾಗಿ ರಫ್ತಾಗುತ್ತಿದೆ ಎಂದು ನಾನು ಕೇಳಿದ್ದೇನೆ. ಈ ಜಾಗಗಳು ಗೇರುಸೊಪ್ಪೆಯ ರಾಣಿ(ಚೆನ್ನಭೈರಾದೇವಿ)ಯ ಆಳ್ವಿಕೆಗೆ ಒಳಪಟ್ಟಿದೆ. ಈ ಕಾಳುಮೆಣಸು ಕೊಚ್ಚಿನ್ನಿನ ಕಾಳುಮೆಣಸಿಗಿಂತ ದಪ್ಪವೂ, ಕಮ್ಮಿ ತೂಕ ಮತ್ತು ಖಾರದ್ದೂ ಆಗಿವೆ. ಈ ಜಾಗಗಳನ್ನು ನಮ್ಮ ವಶಕ್ಕೆ ಪಡೆಯಬೇಕು" ಎಂದು ಬರೆಯುತ್ತಾನೆ. []. ೧೬೦೬ರಲ್ಲಿ ಕೆಳದಿ ಮತ್ತು ಬಿಳಗಿ ಅರಸರು ಒಟ್ಟುಗೂಡಿ ಗೇರುಸೊಪ್ಪೆಯ ಮೇಲೆ ಆಕ್ರಮಣ ಮಾಡುತ್ತಾರೆ. ಆ ಯುದ್ಢದಲ್ಲಿ ತನ್ನ ಸೇನಾಪತಿ ಗೊಂಡನಾಯಕನ ಮೋಸದಿಂದ ವೃದ್ಢರಾಣಿ ಚೆನ್ನಭೈರಾದೇವಿ ಸೋಲುವ ಮೂಲಕ ಗೇರುಸೊಪ್ಪೆ ಕೆಳದಿ ಸಾಮ್ರಾಜ್ಯದ ಭಾಗವಾಗುತ್ತದೆ.

ಪಾಶ್ವಾತ್ಯ ಇತಿಹಾಸಕಾರರ ದೃಷ್ಠಿಯಲ್ಲಿ ರಾಣಿ ಚೆನ್ನಭೈರಾದೇವಿ

[ಬದಲಾಯಿಸಿ]

ಅಮೇರಿಕಾದ ಟೆಕ್ಸಾಸ್ ಯೂನಿವರ್ಸಿಟಿಯಲ್ಲಿ ಆಂಗ್ಲಭಾಷಾ ಪ್ರಾದ್ಯಾಪಕಿ ಮತ್ತು ದಕ್ಷಿಣ ಏಷ್ಯಾ ಇನ್ಸ್ಟಿಟ್ಯೂಟಿನಲ್ಲಿ ತೌಲನಿಕ ಸಾಹಿತ್ಯ ಮುಖ್ಯಸ್ಥೆಯಾಗಿರುವ ಡಾ ಹನ್ನಾಚಾಪೆಲ್ಲೆ ವೋಜಿಹೋಸ್ಕಿ(Dr. Hannachapelle Wohciehowski)[] ಅವರು ತಮ್ಮ ಪ್ರಬಂಧದಲ್ಲಿ "ಚೆನ್ನಭೈರಾದೇವಿಯು ಇಂಗ್ಲೇಂಡಿನ ರಾಣಿ ಎಲಿಜಬೆತ್ತಳ ಸಮಕಾಲೀನಳು ಮತ್ತು ಅನೇಕ ವಿಷಯಗಳಲ್ಲಿ ಅವಳಿಗೆ ಸರಿಮಿಗಿಲಾಗಿದ್ದವಳು. ಚೆನ್ನಭೈರಾದೇವಿಯು ತನಗೆ ಎದುರಾದ ಅನೇಕ ಬಗೆಯ ವೈರುಧ್ಯಗಳನ್ನು ಚಾಣಾಕ್ಷ ಮೈತ್ರಿಗಳ ಮೂಲಕ ದಿಟ್ಟತನದಿಂದ ನಿಭಾಯಿಸುತ್ತ ತನ್ನ ರಾಜಕೀಯ, ಸಾಂಸ್ಕೃತಿಕ ಮತ್ತು ಆರ್ಥಿಕ ಮೇಲುಗೈಯನ್ನು ಬಿಟ್ಟುಕೊಡದೆ ಐವತ್ತು ವರ್ಷಗಳಿಗೂ ಹೆಚ್ಚು ಕಾಲ ತನ್ನ ರಾಜ್ಯವನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಂಡು ಸಮರ್ಥವಾಗಿ ಆಳುವಲ್ಲಿ ಯಶಸ್ವಿಯಾಗಿದ್ದಳು" [೧೦] ಎಂದು ಬರೆದಿದ್ದಾರೆ.

ಪೋರ್ಚುಗೀಸರ ವಿರುದ್ಧದ ಯುದ್ಧಗಳು

[ಬದಲಾಯಿಸಿ]

೧೫೫೯ ಮತ್ತು ೧೫೭೦ರಲ್ಲಿ ಪೋರ್ಚುಗೀಸರ ವಿರುದ್ಧ ನಡೆದ ಹೋರಾಟ ನಡೆಸಿ ಎರಡೂ ಯುದ್ಧಗಳನ್ನು ಗೆದ್ದಳು. 1671ರ ಸಂಯುಕ್ತ ಸೇನೆಯ ನಾಯಕತ್ವವೂ ಸಹ ಇವಳೇ ವಹಿಸಿದ್ದಳು. ಇದರಲ್ಲಿ ಗುಜರಾತಿನ ಸುಲ್ತಾನರು, ಬೀದರ್‌ನ ಸುಲ್ತಾನರು, ಬಿಜಾಪುರದ ಆದಿಲ್ ಶಾಹಿಗಳು ಹಾಗು ಕೇರಳದ ಜಾಮೋರಿನ್ ದೊರೆಗಳನ್ನು ಒಳಗೊಂಡಂತೆ ಹಲವು ಜನ ರಾಜರು ಈ ಸೇನೆಯಲ್ಲಿದ್ದರು. [೧೧]

ಕೆಳದಿ ಅರಸರ ವಿರುದ್ಧದ ಯುದ್ಧಗಳು

[ಬದಲಾಯಿಸಿ]

೧೬೨೩ ರಲ್ಲಿ ಭಾರತಕ್ಕೆ ಬಂದ ಪೋರ್ಚುಗೀಸ್ ಪ್ರವಾಸಿಗ ಪೀಟ್ರೋ ಡೆಲ್ಲಾವಿಲ್ಲೆ [೧೨] ತಾನು ಹದಿನೆಂಟು ದಿನಗಳ ಕಾಲ ಕೆಳದಿಯ ಅರಸರ ಆಸ್ಥಾನದಲ್ಲಿ ಇದ್ದಾಗ ಕೇಳಿದ ಕೆಳದಿಯ ವೈರಿ ಚೆನ್ನಭೈರಾದೇವಿಯ ಕತೆಗಳನ್ನು ತನ್ನ ಪ್ರವಾಸಕಥನದಲ್ಲಿ ದಾಖಲಿಸುತ್ತಾನೆ. ಚೆನ್ನಭೈರಾದೇವಿ ಸತ್ತು ಹದಿನೇಳು ವರ್ಷಗಳ ನಂತರ ಆಕೆಯ ವೈರಿಯ ಸಂಸ್ಥಾನದಲ್ಲಿ ತಾನು ಕೇಳಿದ ಕತೆಗಳನ್ನು ಬರೆಯಿಸುವ ಮೂಲಕ, ಚೆನ್ನಭೈರಾದೇವಿಯ ಆಸ್ಥಾನಕ್ಕೆ ಎಂದೂ ಭೇಟಿಕೊಡದ ಡೆಲ್ಲಾವಿಲ್ಲೆ ಎಂಬ ವಿದೇಶೀ ಪ್ರವಾಸಿಗ ಬರೆದ ಕತೆಗಳನ್ನೇ ನಂತರ ಇತಿಹಾಸವೆಂದು ಪರಿಗಣಿಸಿ ರಾಣಿಗೆ ತನ್ನ ಸೇನಾಧಿಪತಿ ಚೆನ್ನಗೊಂಡನಾಯಕಯೊಂದಿಗೆ ಅನೈತಿಕ ಸಂಬಂಧವಿತ್ತೆಂದೂ ಅದರಿಂದಲೇ ಆಕೆ ಕೆಳದಿ ಅರಸರೊಂದಿಗಿನ ಯುದ್ಢದಲ್ಲಿ ಸೋಲನ್ನಪ್ಪಿದಳೆಂದೂ ಕೆಲ ಇತಿಹಾಸಕಾರರು ದಾಖಲಿಸುತ್ತಾರೆ. ಕೆಳದಿಯ ರಾಜ ಹಿರಿಯ ವೆಂಕಟಪ್ಪನಾಯಕ ಎಪ್ಪತ್ತು ವರ್ಷದ ವೃದ್ಧ ರಾಣಿ ಚೆನ್ನಭೈರಾದೇವಿಯನ್ನು ಮೋಸದಿಂದ ಸೆರೆಹಿಡಿದು ನಗಿರೆಯ ಸೆರೆಮನೆಯಲ್ಲಿ ಆಕೆಯ ಸಾವಿನವರೆಗೂ ಹಿಡಿದಿಟ್ಟ ಎಂದೂ, ತಮಗೆ ಸಹಾಯ ಮಾಡಿದ ಗೊಂಡನಾಯಕನನ್ನು ಕೊಲ್ಲಿಸಿದ ಎಂದು ಲೇಖಕ ಡಾ| ಗಜಾನನ ಶರ್ಮ ಅವರು ತಮ್ಮ ಪುಸ್ತಕ [೧೩] ದಲ್ಲಿ ಅಭಿಪ್ರಾಯಪಡುತ್ತಾರೆ.

ಉಲ್ಲೇಖಗಳು

[ಬದಲಾಯಿಸಿ]
  1. https://vismaya24x7.com ತಾಣದಲ್ಲಿ "ಸಂಗೀತಪುರ"ದ ಉಲ್ಲೇಖ
  2. "ಕರಿಮೆಣಸಿನ/ಕಾಳುಮೆಣಸಿನ ರಾಣಿ ಚೆನ್ನಭೈರಾದೇವಿ | ಪುರಾತತ್ವ.ಇನ್ ತಾಣದಲ್ಲಿನ ಲೇಖನ". Archived from the original on 2021-09-06. Retrieved 2021-09-06.
  3. ಐವತ್ನಾಲ್ಕು ವರ್ಷಗಳ ಕಾಲ ರಾಜ್ಯವಾಳಿದ ಕರಿಮೆಣಸಿನ ರಾಣಿ ಚೆನ್ನಭೈರಾದೇವಿ| ಇಂಡಿಯನ್ ಎಕ್ಸ್ ಪ್ರೆಸ್ಸಿನ ಲೇಖನ
  4. ರೈನಾ ದೆ ಪಿಮೆಂಟಾ (ಕರಿಮೆಣಸಿನ ರಾಣಿ)
  5. ಡಾ. ಗಜಾನನ, ಶರ್ಮ. ಚೆನ್ನಭೈರಾದೇವಿ : ಕರಿಮೆಣಸಿನ ರಾಣಿಯ ಅಕಳಂಕ ಚರಿತೆ. ಅಂಕಿತ ಪುಸ್ತಕ. p. 11. ISBN 9788195113125.
  6. ಡಾ. ಗಜಾನನ, ಶರ್ಮ. ಚೆನ್ನಭೈರಾದೇವಿ : ಕರಿಮೆಣಸಿನ ರಾಣಿಯ ಅಕಳಂಕ ಚರಿತೆ. ಅಂಕಿತ ಪುಸ್ತಕ. p. 14. ISBN 9788195113125.
  7. www.bangalorefirst.in ತಾಣದಲ್ಲಿನ ಚೆನ್ನಭೈರಾದೇವಿಯ ಬಗೆಗಿನ ಮಾಹಿತಿ ಮತ್ತು ಲೋಹದ ಪ್ರತಿಮೆ
  8. https://www.bangalorefirst.in ನಲ್ಲಿನ ಚೆನ್ನಭೈರಾದೇವಿಯ ಆಳ್ವಿಕೆಯ ಬಗೆಗಿನ ಮಾಹಿತಿ
  9. Dr Hannah Chapelle Wojciehowski | ಟೆಕ್ಸಾಸ್ ವಿಶ್ವವಿದ್ಯಾನಿಲಯದಲ್ಲಿನ ಡಾ ವೋಜಿವೋಸ್ಕಿಯವರ ಪರಿಚಯಪುಟ
  10. Brinda S. Charry and Gitanjali Shahani. Aldershot, Hants, England. The Queen of Onor and Her Emissaries: Fernão Mendes Pinto’s Dialogue with India,” Emissaries in Early Modern Literature and Culture—Mediation, Tranmission, Traffic : 1550-1700. Ashgate.{{cite book}}: CS1 maint: multiple names: authors list (link)
  11. https://www.thebetterindia.com ತಾಣದಲ್ಲಿ ಚೆನ್ನಭೈರಾದೇವಿಯ ಪೋರ್ಚುಗೀಸರ ವಿರುದ್ಧದ ಯುದ್ಧಗಳ ಉಲ್ಲೇಖ
  12. Edward, Grey. The Travels of Pietro della Valle in India: From the old English Translation of 1664, by G. Havers. In Two Volumes Volume I (Hakluyt Society, First Series). Routeledge. ISBN 978-1409413516.
  13. ಡಾ. ಗಜಾನನ, ಶರ್ಮ. ಚೆನ್ನಭೈರಾದೇವಿ : ಕರಿಮೆಣಸಿನ ರಾಣಿಯ ಅಕಳಂಕ ಚರಿತೆ. ಅಂಕಿತ ಪುಸ್ತಕ. p. 10. ISBN 9788195113125.


ಬಾಹ್ಯ ಸಂಪರ್ಕ ಕೊಂಡಿಗಳು

[ಬದಲಾಯಿಸಿ]