ವಿಷಯಕ್ಕೆ ಹೋಗು

ಗೇರಿ ಶಿಕ್ಷಣಪದ್ಧತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಮೆರಿಕದ ಸಂಯುಕ್ತ ಸಂಸ್ಥಾನಗಳ ಇಂಡಿಯಾನದ ಗೇರಿ ಎಂಬಲ್ಲಿನ ಶಾಲೆಯೊಂದರಲ್ಲಿ ಶಾಲಾ ಮುಖ್ಯಾಧಿಕಾರಿಯಾಗಿದ್ದ ವಿಲಿಯಂ ಎ. ವರ್ಟ್ ಎಂಬಾತ 1908ರಲ್ಲಿ ಮೊಟ್ಟಮೊದಲು ಆಚರಣೆಗೆ ತಂದ ಒಂದು ಶಿಕ್ಷಣಪದ್ಧತಿ. ಶಾಲೆಯ ಮಕ್ಕಳಿಗೆ ಬೌದ್ಧಿಕ ಶಿಕ್ಷಣದ ಜೊತೆಗೆ ದೈಹಿಕ, ಕಲಾತ್ಮಕ ಮತ್ತು ವೈಜ್ಞಾನಿಕ ಶಿಕ್ಷಣವನ್ನೂ ನೀಡಬೇಕೆಂದು ವರ್ಟ್ ಭಾವಿಸಿದ. ಅದಕ್ಕಾಗಿ ತನ್ನ ಶಾಲೆಗೆ ಆಟದ ಮೈದಾನ, ಈಜುಕೊಳ, ತೋಟ, ವಿಜ್ಞಾನ ಪ್ರಯೋಗಾಲಯ, ಯಂತ್ರಕಾರ್ಯಾಗಾರ, ಗಾನ ಮತ್ತು ನೃತ್ಯಮಂದಿರ-ಇವನ್ನೆಲ್ಲ ನಿರ್ಮಿಸಿಕೊಂಡ. ಆಟ, ಪ್ರಯೋಗಾಲಯ ಮತ್ತು ಕಾರ್ಯಾಗಾರದ ಕೆಲಸ, ಸಾಮಾಜಿಕ ಮತ್ತು ಕ್ರಿಯಾತ್ಮಕ ಕಾರ್ಯ, ಸಾಂಪ್ರದಾಯಿಕ ವಿಷಯಗಳ ವ್ಯಾಸಂಗ-ಇವನ್ನು ಶಾಲೆಯ ಕಾರ್ಯಕ್ರಮಗಳಲ್ಲಿ ಸೇರಿಸಿದ್ದ. ಮಕ್ಕಳ ಕಾಲವನ್ನು ಫಲದಾಯಕವಾಗಿ ಬಳಸಿಕೊಳ್ಳುವುದಕ್ಕೂ ವಿರಾಮದಲ್ಲಿ ಹೊರಗೆ ಅವರು ವ್ಯರ್ಥ ಕಾಲಹರಣ ಮಾಡುವುದನ್ನು ತಪ್ಪಿಸುವುದಕ್ಕೂ ವ್ಯಾಸಂಗದ ಅನಂತರ ಆಟವನ್ನೂ ಆಟದ ಅನಂತರ ವ್ಯಾಸಂಗವನ್ನೂ ಪರ್ಯಾಯವಾಗಿ ವೇಳಾಪಟ್ಟಿಯಲ್ಲಿ ಸೇರಿಸಿದ. ಇದಕ್ಕನುಕೂಲಿಸುವಂತೆ ಇಡೀ ಶಾಲೆಯ ವಿದ್ಯಾರ್ಥಿಗಳನ್ನು ಎರಡು ಪಂಗಡಗಳಾಗಿ (ಪ್ಲಟೂನ್) ವಿಂಗಡಿಸಿದ-ತರಗತಿಯ ಪಂಗಡ ಮತ್ತು ಆಟ ಇಲ್ಲವೆ ಕೆಲಸದ ಪಂಗಡ ಎಂದು. ಮೊದಲ ಪಂಗಡ ತರಗತಿಯ ವ್ಯಾಸಂಗದಲ್ಲಿದ್ದರೆ ಎರಡನೆಯ ಪಂಗಡ ಆಟದ ಮೈದಾನದಲ್ಲೋ ಇತರ ಕಾರ್ಯಾಲಯದಲ್ಲೋ ಇರುವಂತೆ ವೇಳಾಪಟ್ಟಿಯನ್ನು ರಚಿಸಿದ. ಇದರಿಂದ ಇಡೀ ಶಾಲೆಯ ಸೌಲಭ್ಯವನ್ನು ದಿನದ ಎಲ್ಲ ವೇಳೆಯಲ್ಲೂ ಬಳಸಿಕೊಳ್ಳುವ ಅವಕಾಶವಾಗಿ, ಅಲ್ಲಿನ ಶಿಕ್ಷಣಾಧಿಕಾರಿಗಳು ಕಟ್ಟಡದ ನಿರ್ಮಾಣಕ್ಕೆ ಸಾಮಾನ್ಯಶಾಲೆಗೆ ಬೇಕಾಗುತ್ತಿದ್ದ ಹಣದಲ್ಲಿ ಅರ್ಧವನ್ನು ಮಾತ್ರ ವ್ಯಯಮಾಡಬೇಕಾಗುತ್ತಿತ್ತು. ಅಲ್ಲಿ ವಿದ್ಯಾರ್ಥಿಗಳು ಇತರರಿಗಿಂತ ಹೆಚ್ಚುಕಾಲ ಶಾಲೆಯಲ್ಲಿದ್ದು ಕಡಿಮೆ ವೆಚ್ಚದಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಕಲಿಕೆಯನ್ನು ಸಾಧಿಸುತ್ತಿದ್ದರು.


ಗೇರಿ ಶಾಲೆಯಲ್ಲಿ ಕಿಂಡರ್‍ಗಾರ್ಟನ್‍ನಿಂದ ಪ್ರೌಢಶಾಲೆಯವರೆಗಿನ ತರಗತಿ ಗಳಿರುತ್ತಿದ್ದು, ಹಿರಿಯರನ್ನು ನೋಡಿ ಕಿರಿಯರು ಕಲಿಯುವುದಕ್ಕೂ ಕಿರಿಯರ ಬಗ್ಗೆ ಹಿರಿಯರು ತಮ್ಮ ಹೊಣೆಯನ್ನು ನಿರ್ವಹಿಸುವುದನ್ನು ರೂಢಿಸಿಕೊಳ್ಳುವುದಕ್ಕೂ ಅವಕಾಶವಿತ್ತು. ವಿದ್ಯಾರ್ಥಿಗಳು ಕಲಿಯುವ ವಿಷಯಗಳನ್ನೂ ಮಾಡುವ ಕೆಲಸಗಳನ್ನೂ ಸಮಾಜ ಜೀವನದೊಡನೆ ಸಂಬಂಧಿಸಿಕೊಳ್ಳಲಾಗುತ್ತಿತ್ತು. ರಸಾಯನಶಾಸ್ತ್ರದಲ್ಲಿ ಬರುವ ನೀರು ಸರಬರಾಜು ಪಾಠವನ್ನು ಆ ಊರಿನ ಪೌರಸಭೆಯ ನೀರಿನ ಇಲಾಖೆಯ ಎಂಜಿನಿಯರೂ ಸಾಂಕ್ರಾಮಿಕ ರೋಗಗಳಿಗೆ ಸಂಬಂಧಿಸಿದ ಪಾಠವನ್ನು ಅಲ್ಲಿನ ಆರೋಗ್ಯಾಧಿಕಾರಿಯೂ ಬೋಧಿಸುವ ವ್ಯವಸ್ಥೆಯಿತ್ತು. ಹೀಗೆಯೆ ಇತರ ಪಾಠಗಳಲ್ಲಿ ಕೂಡ. ಕಾರ್ಯಾಗಾರಗಳಲ್ಲಿ ಶಾಲೆಗೆ ಬೇಕಾಗುವ ವಸ್ತುಗಳನ್ನು ಮಾಡಿಸುತ್ತಿದ್ದರು. ಗೃಹವಿಜ್ಞಾನದ ತರಗತಿಯಲ್ಲಿ ಮಧ್ಯಾಹ್ನದ ಉಪಾಹಾರ ತಯಾರಿಸಿ ಬಡಿಸುತ್ತಿದ್ದರು. ಯಂತ್ರಕಾರ್ಯಾಗಾರ, ಉಪನ್ಯಾಸ ಮಂದಿರ, ಆಟದ ಮೈದಾನ-ಇತ್ಯಾದಿಗಳಲ್ಲಿರುವಾಗ ಮಕ್ಕಳು ಊರಿನ ಹಿರಿಯರ ಸಂಪರ್ಕವನ್ನೂ ಪಡೆಯಬಹುದಾಗಿದ್ದು ಅವರ ಸಾಮಾಜಿಕ ಜೀವನ ವೃದ್ಧಿಯಾಗಲು ಅವಕಾಶವಾಗುತ್ತಿತ್ತು. ದಿನಾಚರಣೆ, ಚರ್ಚೆ, ನಾಟಕಾಭಿನಯ, ನೃತ್ಯ-ಇವುಗಳಿಗೆ ಸಿದ್ಧತೆ ಪಡೆಯುವಾಗ ಅವರ ಕಲಾಜೀವನ ವರ್ಧಿಸುತ್ತಿತ್ತು.


ಒಟ್ಟಿನಲ್ಲಿ ಈ ಶಿಕ್ಷಣಪದ್ಧತಿ ಸಾಂಪ್ರದಾಯಿಕ ಶಿಕ್ಷಣವೀಯುವುದರ ಜೊತೆಗೆ ವಿದ್ಯಾರ್ಥಿಗಳ ಪುರ್ಣ ಬೆಳೆವಣಿಗೆಗೂ ಅವಕಾಶವೀಯುತ್ತಿತ್ತು; ವಿದ್ಯಾರ್ಥಿಗಳಿಗೆ ಅಲ್ಲಿನ ಜೀವನ ಅರ್ಥಪುರ್ಣವಾಗಿರುತ್ತಿತ್ತು. ಈ ಪದ್ಧತಿ ಮೂಲರೂಪದಲ್ಲಿ ಈಗ ಅಷ್ಟಾಗಿ ಪ್ರಚಾರದಲ್ಲಿಲ್ಲದಿದ್ದರೂ ಅದರ ಉತ್ತಮಾಂಶಗಳು ಕ್ರಮಕ್ರಮವಾಗಿ ಶಿಕ್ಷಣವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತಿವೆ. ವಿದ್ಯಾರ್ಥಿಸಂಖ್ಯೆ ಅಧಿಕವಾಗಿರುವ ಭಾರತದಂಥ ದೇಶಗಳಲ್ಲಿ ಸ್ಥಳಾವಕಾಶ ದೊರಕಿಸಿಕೊಳ್ಳಲು ಇರುವ ಕಟ್ಟಡಾದಿ ಅಲ್ಪ ಸೌಲಭ್ಯಗಳನ್ನು ಸರದಿಯ ಪ್ರಕಾರ ಬಳಸಿಕೊಳ್ಳಲು ಈ ಪದ್ಧತಿ ಬೆಳಕು ನೀಡಬಲ್ಲುದು.

ಇದನ್ನು ಪ್ಲಟೂನ್ ಶಾಲೆ, ಕೆಲಸ-ವ್ಯಾಸಂಗ-ಆಟದ ಶಾಲೆ, ಪರ್ಯಾಯ ಯೋಜನೆಯ ಪಾಠಶಾಲೆ ಇತ್ಯಾದಿ ಹೆಸರುಗಳಿಂದಲೂ ಕರೆಯುವುದುಂಟು.