ಗೃಹವಿಜ್ಞಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗೃಹವಿಜ್ಞಾನ ಕೌಟುಂಬಿಕ ಜೀವನಕ್ಕೆ ಸಂಬಂಧಪಟ್ಟಂತೆ ಗೃಹಿಣಿಯಾದವಳು ಗೃಹವನ್ನು ಯಾವ ರೀತಿ ಓರಣವಾಗಿಟ್ಟುಕೊಳ್ಳಬೇಕೆಂಬುದನ್ನು ಕುರಿತು ಇರುವ ವಿಜ್ಞಾನ (ಹೋಮ್ ಸೈನ್ಸ್‌). ಈ ವಿಜ್ಞಾನವನ್ನೀಗ ವೈಜ್ಞಾನಿಕವಾಗಿ ಪರಿಶೀಲಿಸಿ, ಕ್ರಮ ಬದ್ಧಗೊಳಿಸಿ ಶಾಲಾ ಕಾಲೇಜುಗಳಲ್ಲಿ ಮಹಿಳೆಯರಿಗೆ ಕಲಿಸಲಾಗುತ್ತಿದೆ. ಇದರಲ್ಲಿ ಮುಖ್ಯವಾಗಿ, ಕುಟುಂಬದ ಸದಸ್ಯರು ಸೇವಿಸುವ ಆಹಾರ ಯಾವ ಬಗೆಯದ್ದಾಗಿರಬೇಕು, ಯಾವ ಆಹಾರ ಎಷ್ಟು ಪರಿಮಾಣದಲ್ಲಿರಬೇಕು, ಸೇವಿಸುವ ಆಹಾರ ಪುಷ್ಟಿಕರವಾದದ್ದೇ ಅಲ್ಲವೆ ಮುಂತಾದ ವಿಚಾರಗಳನ್ನೊಳಗೊಂಡ ಪಾಕಶಾಸ್ತ್ರಕ್ಕೆ ಹೆಚ್ಚಿನ ಮಹತ್ವವಿದ್ದರೂ ಕುಟುಂಬ ಸದಸ್ಯರ ಇತರ ಅಗತ್ಯಗಳಾದ ಉಡುಪು, ಆಯವ್ಯಯ ಮೊದಲಾದ ವಿಷಯಗಳಿಗೂ ಗಮನ ನೀಡಲಾಗುವುದು. ಮನೆಯಲ್ಲಿ ಬೆಳೆಯುವ ಮಕ್ಕಳ ಬೌದ್ಧಿಕ ಮತ್ತು ಮಾನಸಿಕ ಬೆಳೆವಣಿಗೆಗೆ ಗೃಹವಿಜ್ಞಾನದ ಅನ್ವಯ ಬಹುಮಟ್ಟಿಗೆ ಸಹಕಾರಿ ಯಾಗುತ್ತದೆ. ಮಕ್ಕಳ ಪಾಲನೆ, ಪೋಷಣೆಗಳಿಗೆ ಗೃಹವಿಜ್ಞಾನದಲ್ಲಿ ಹೆಚ್ಚಿನ ಪ್ರಾಶಸ್ತ್ಯವಿದೆ.

ಅಮೆರಿಕದಲ್ಲಿ[ಬದಲಾಯಿಸಿ]

A home economics class in 1911 in Toronto

18ನೆಯ ಶತಮಾನದಲ್ಲಿ ಅಮೆರಿಕ ಸಂಯುಕ್ತಸಂಸ್ಥಾನಗಳ ಬಾಸ್ಟನ್ ಪಬ್ಲಿಕ್ ಶಾಲೆಯಲ್ಲಿ ಗೃಹವಿಜ್ಞಾನ ತರಗತಿಗಳನ್ನು ತೆರೆದು ಗೃಹವನ್ನು ಓರಣವಾಗಿಟ್ಟು ಕೊಳ್ಳುವುದರ ಬಗ್ಗೆ ಮಾಹಿತಿ ನೀಡಲಾಗುತ್ತಿತ್ತು. 1798ರ ವೇಳೆಗೆ ಶಾಲೆಯ ಉಪಾಧ್ಯಾಯಿನಿ ಯರು ಎರಡು ಮತ್ತು ಮೂರನೆಯ ತರಗತಿಯ ಹೆಣ್ಣುಮಕ್ಕಳಿಗೆ ಹೊಲಿಗೆ ಮತ್ತು ಕಸೂತಿಯನ್ನು ಕಲಿಸಲಾರಂಭಿಸಿದರು. 85 ವರ್ಷಗಳ ಅನಂತರ ಶಾಲೆಯ ಒಂದು ಭಾಗವನ್ನು ಪಾಕಶಾಲೆಯನ್ನಾಗಿ ಪರಿವರ್ತಿಸಿ ಪಾಕಶಾಸ್ತ್ರದ ವಿಷಯಗಳನ್ನು ಬೋಧಿಸ ತೊಡಗಿದರು. ಈ ಶಿಕ್ಷಣ ತೃಪ್ತಿಕರವಾಗಿ ಕಂಡುಬಂದದ್ದರಿಂದ ಶಾಲೆಯಲ್ಲಿ ಪಾಕಶಾಸ್ತ್ರಾಧ್ಯಯನಕ್ಕೆ ಒಂದು ಸ್ಥಿರವ್ಯವಸ್ಥೆಯೇ ಏರ್ಪಾಡಾಯಿತಲ್ಲದೆ ಮುಂದೆ ಪಾಕಶಾಸ್ತ್ರ ಗೃಹವಿಜ್ಞಾನದ ಒಂದು ಮುಖ್ಯ ವಿಷಯವಾಗಲು ಅವಕಾಶವಾಯಿತು.

1869ನೆಯ ಇಸವಿಯಲ್ಲಿ ಅಯೋವ ಸ್ಟೇಟ್ ಕಾಲೇಜಿನ ವಿದ್ಯಾರ್ಥಿನಿಲಯದ ಮೇಲ್ವಿಚಾರಿಕೆಯೊಬ್ಬಳು ಮೌಂಟ್ ಹೋಲ್ಯೋಕ್ ಪ್ಲಾನ್ ಎಂಬ ಯೋಜನೆಯನ್ನು ಜಾರಿಗೆ ತಂದಳು. ಇದರ ಪ್ರಕಾರ ಆ ಕಾಲೇಜಿನಲ್ಲಿ ಓದುತ್ತಿರುವ ಎಲ್ಲ ಹೆಣ್ಣುಮಕ್ಕಳೂ ದಿನಕ್ಕೆ ಎರಡು ಗಂಟೆಯ ಕಾಲ ಅಡುಗೆ ಮಾಡುವುದು, ಊಟ ಬಡಿಸುವುದು, ಪಾತ್ರೆ ತೊಳೆಯುವುದು ಮುಂತಾದ ಗೃಹಕೆಲಸಗಳನ್ನು ಒಬ್ಬ ಉಪಾಧ್ಯಾಯಿನಿಯ ಮೇಲ್ವಿಚಾರಣೆಯಲ್ಲಿ ಮಾಡಬೇಕಾಗಿತ್ತು. ಇದು ಕಾರ್ಯಗತವಾದ ಮೂರು ವರ್ಷಗಳಲ್ಲಿ ಅಂದರೆ, 1872 ರಲ್ಲಿ ಶಾಲಾ ಪಠ್ಯಕ್ರಮದಲ್ಲಿ ಗೃಹವಿಜ್ಞಾನವನ್ನು ಒಂದು ವಿಷಯವನ್ನಾಗಿ ಸೇರಿಸಲಾಯಿತು. ಜೂನಿಯರ್ ಕಾಲೇಜಿನ ವಿದ್ಯಾರ್ಥಿನಿಯರಿಗೆ ಗೃಹಾಡಳಿತ, ಗೃಹನಿರ್ವಹಣೆ, ಗೃಹದ ಆರ್ಥಿಕತೆ ಮುಂತಾದ ವಿಷಯಗಳಲ್ಲಿ ಉಪನ್ಯಾಸಗಳನ್ನು ಏರ್ಪಡಿಸಲಾಯಿತು. ಐದು ವರ್ಷಗಳ ಅನಂತರ ಅಡುಗೆಯ ವಿಷಯದಲ್ಲಿ ತರಬೇತಿ ಶಿಕ್ಷಣವನ್ನೂ ಜಾರಿಗೆ ತರಲಾಯಿತು. ಪಾಕಶಾಸ್ತ್ರದಲ್ಲಿ ನೀಡುತ್ತಿದ್ದ ಶಿಕ್ಷಣ ವಿದ್ಯಾರ್ಥಿನಿಯರನ್ನಲ್ಲದೆ ಇತರರನ್ನೂ ತನ್ನ ಕಡೆ ಸೆಳೆಯಿತು. ಅಂತೆಯೇ ವಿದ್ಯಾರ್ಥಿನಿಯರಿಗಾಗಿ ಮೀಸಲಾದ ಈ ಶಾಲೆಯಲ್ಲಿ ಬೇರೆಯವರಿಗೂ ಶಿಕ್ಷಣ ನೀಡಲು ಒಂದು ಯೋಜನೆ ತಯಾರಾಯಿತು. ಹೊಲಿಗೆ ಮತ್ತು ಬಟ್ಟೆ ಚಲುವೆ ಮಾಡುವ ವಿಷಯಗಳ ಬಗ್ಗೆ ಜನಗಳ ಆಸಕ್ತಿ ಅಷ್ಟಾಗಿ ಇರಲಿಲ್ಲವಾದ ಕಾರಣ ಬಹುಬೇಗ ಆ ವಿಷಯಗಳ ಮೇಲಿನ ಬೋಧನೆ ರದ್ದಾಯಿತು.


ಹೊಲಿಗೆ ತರಗತಿಯನ್ನು ನಡೆಸುತ್ತಿದ್ದ ಕ್ಯಾನ್ಸಸ್ನ ಕೃಷಿ ಕಾಲೇಜು ಗೃಹವಿಜ್ಞಾನವನ್ನೂ ಬೋಧಿಸಲು ಪ್ರಾರಂಭಮಾಡಿತು (1873). ಆಹಾರದ ಪ್ರಾಮುಖ್ಯ ಮತ್ತು ಅಡುಗೆಯ ಶಾಸ್ತ್ರೀಯ ಕ್ರಮವಿಧಿಗಳ ಬಗ್ಗೆ ಅಲ್ಲಿ ಆಗಾಗ ಪರಿಣತರಿಂದ ಉಪನ್ಯಾಸಗಳನ್ನು ನಡೆಸಲಾ ಗುತ್ತಿತ್ತು. ಅಡುಗೆಗೆ ಸಂಬಂಧಿಸಿದಂತೆ ಪ್ರಾಯೋಗಿಕ ಶಿಕ್ಷಣ ಪ್ರಾರಂಭವಾದ್ದು 1877ರಲ್ಲಿ.

ಇಲಿನಾಯ್ ವಿಶ್ವವಿದ್ಯಾಲಯ 1874ರಲ್ಲಿ ಒಂದು ಗೃಹವಿಜ್ಞಾನ ಮತ್ತು ಕಲಾಶಾಲೆಯನ್ನು ತೆರೆಯಿತು. ತಾಯಿಯಾಗಿ ಗೃಹಿಣಿ ನಿರ್ವಹಿಸಬೇಕಾದ ಕರ್ತವ್ಯ ಮತ್ತು ಗೃಹನಿರ್ವಹಣೆಗಳ ಬಗೆಗೆ ಆ ಶಾಲೆಯಲ್ಲಿ ಕಲಿಸಲಾಗುತ್ತಿತ್ತಲ್ಲದೆ ರಸಾಯನ ವಿಜ್ಞಾನ, ಜೀವವಿಜ್ಞಾನ, ಮಾನವವಿಜ್ಞಾನ, ಭೌತವಿಜ್ಞಾನ, ಕಲೆ, ಭಾಷಾವಿಜ್ಞಾನ, ಮನಃವಿಜ್ಞಾನ, ಶರೀರವಿಜ್ಞಾನ ಮುಂತಾದ ವಿಷಯಗಳ ಬೋಧನೆಯೂ ನಡೆಯುತ್ತಿತ್ತು. ಇವುಗಳ ಜೊತೆಗೆ ಗೃಹಶಿಲ್ಪಶಾಸ್ತ್ರ, ಗೃಹನೈರ್ಮಲ್ಯ, ಆಹಾರವಸ್ತುಗಳ ಆಯ್ಕೆ ಮತ್ತು ಆಹಾರವನ್ನು ತಯಾರುಮಾಡುವ ವಿಧಾನಗಳು, ರೋಗಿಗೆ ಬೇಕಾದ ಆಹಾರ ತಯಾರಿಕೆ, ಆಹಾರದ ಯುಕ್ತ ಉಪಯೋಗ ಮುಂತಾದ ವಿಷಯಗಳನ್ನು ಪಠ್ಯಕ್ರಮದಲ್ಲಿ ಸೇರಿಸಲಾಯಿತು (1900). ಅದೇ ವರ್ಷ ಹೋಮ್ ಎಕನಾಮಿಕ್ಸ್‌ ಕ್ಲಬ್ ಎಂಬ ಸಂಘ ರೂಪಿತಗೊಂಡಿತಲ್ಲದೆ ಒಂದು ಪ್ರಾಯೋಗಿಕ ವಸತಿಗೃಹವೂ ಪ್ರಾರಂಭವಾಯಿತು.

ವಿಶ್ವವಿದ್ಯಾಲಯದ ಮಟ್ಟದಲ್ಲಿ ಗೃಹವಿಜ್ಞಾನವನ್ನು ಅಧ್ಯಯನ ವಿಷಯವನ್ನಾಗಿ ಮಾಡಿದ ತರುಣದಲ್ಲಿಯೇ ಜೂಲಿಯೆಟ್ ಕಾರ್ಸನ್ ಎಂಬ ಮಹಿಳೆಯು ಮಹಿಳಾ ಉಚಿತ ತರಬೇತಿ ಯೋಜನೆಯ ಅಂಗವಾಗಿ, ವಯಸ್ಕರಿಗೆ ನ್ಯೂಯಾರ್ಕ್ ನಗರದಲ್ಲಿ ಪಾಕಶಾಸ್ತ್ರದಲ್ಲಿ ತರಬೇತಿ ಕೊಡಲು ಪ್ರಾರಂಭಿಸಿದಳು (1874). ಅನಂತರ ನ್ಯೂಯಾರ್ಕ್ ಕುಕಿಂಗ್ ಸ್ಕೂಲ್ ಎಂಬ ಪ್ರಾಯೋಗಿಕ ಅಡುಗೆಶಾಲೆಯನ್ನು ತನ್ನ ಮನೆಯಲ್ಲಿಯೇ ತೆರೆದಳು. ಉದ್ಯೋಗಸ್ಥ ತಂದೆತಾಯಿಯರಿಗೆ ಮತ್ತು ನೆಮ್ಮದಿಯಿಂದ ಜೀವನ ನಡೆಸಬಲ್ಲವರ ಮಕ್ಕಳಿಗೆ ಶಿಕ್ಷಣ, ಹೆಂಗಸರು ಮತ್ತು ಗಂಡಸರು ಪ್ರಧಾನ ಅಡುಗೆಯವರಾಗಿ ದೊಡ್ಡ ಭೋಜನಶಾಲೆಗಳಲ್ಲಿ ಮತ್ತು ಉಪಾಹಾರಗೃಹಗಳಲ್ಲಿ ಉದ್ಯೋಗ ದೊರಕಿಸಿಕೊಳ್ಳಲು ಬೇಕಾದ ತರಬೇತಿ - ಇವಕ್ಕೆ ಆ ಶಾಲೆಯಲ್ಲಿ ಅವಕಾಶವಿತ್ತಲ್ಲದೆ ಪಾಕಶಾಸ್ತ್ರದ ಮೂಲ ಶಿಕ್ಷಣವನ್ನು ತಾವು ಕಲಿತು ಇತರರಿಗೆ ಕಲಿಸಿಕೊಡಲು ಆಸಕ್ತಿ ಇರುವಂಥವರಿಗೂ ಪ್ರವೇಶದ ಅವಕಾಶವಿತ್ತು.

ಅಡುಗೆಯಲ್ಲಿ ಉಪಯೋಗಿಸಲಾಗುವ ತರಕಾರಿಗಳನ್ನು ಸಾಧ್ಯವಾದಮಟ್ಟಿಗೂ ಮನೆಯ ಹಿತ್ತಲಲ್ಲೇ ಬೆಳೆಸಿ, ಮನೆಯ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವುದರೊಂದಿಗೆ ಆರೋಗ್ಯ ದೃಷ್ಟಿಯಿಂದ ಮನೆ ಸುತ್ತಮುತ್ತಲ ವಾತಾವರಣವನ್ನು ಹಿತವಾಗಿಸುವಂಥ ಕೈತೋಟದ (ಕಿಚನ್ ಗಾರ್ಡನ್) ಅಗತ್ಯವನ್ನು ಐಮಿಲಿ ಹನ್ಬೆಂಗ್ಟನ್ ಎಂಬುವಳು ತೋರಿಸಿದಳು. ಅವಳ ಪ್ರಯತ್ನದಿಂದ ಕಿಚನ್ ಗಾರ್ಡನ್ ಅಸೋಸಿಯೇಷನ್ ಆಫ್ ನ್ಯೂಯಾರ್ಕ್, ಅನಂತರ ಇಂಡಸ್ಟ್ರಿಯಲ್ ಅಸೋಸಿಯೇಷನ್ - ಈ ಸಂಘಗಳು ಸ್ಥಾಪನೆಯಾದುವು. ಟೀಚರ್ಸ್‌ ಕಾಲೇಜ್ ಆಫ್ ಕೊಲಂಬಿಯದ ಮೇಲೆ ಕಿಚನ್ ಗಾರ್ಡನ್ ಚಳವಳಿಯಿಂದಾದ ಪರಿಣಾಮ ಅಪಾರ. ನ್ಯೂ ಇಂಗ್ಲೆಂಡ್ ಕಿಚನ್ ಸಂಸ್ಥೆಯಲ್ಲಿ ತಯಾರಾದ ಆಹಾರ ಪದಾರ್ಥಗಳು ಬಾಸ್ಟನ್ ಪಬ್ಲಿಕ್ ಶಾಲೆಯ ಮಕ್ಕಳಿಗೆ ದೊರಕುವಂತಾದದ್ದು ಈ ಚಳವಳಿಯ ಪ್ರಭಾವದಿಂದಲೇ.

ಹದಿನೆಂಟನೆಯ ಶತಮಾನದ ಕೊನೆಯ ದಶಕ ಮತ್ತು ಹತ್ತೊಂಬತ್ತನೆಯ ಪ್ರಾರಂಭದಲ್ಲಿ ಅಮೆರಿಕದ ಜನಜೀವನದಲ್ಲಿ ಅನೇಕ ಹೊಸ ಮಾರ್ಪಾಡುಗಳುಂಟಾದುವು. ಸ್ತ್ರೀಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಮಹಿಳೆಯರು ಪ್ರತ್ಯೇಕ ಮಹಿಳಾಸಂಘಗಳನ್ನು ರಚಿಸಿಕೊಂಡು ಸಮಾಜದಲ್ಲಿ ತಮ್ಮ ಸ್ಥಾನಮಾನಗಳನ್ನು ಕುರಿತಂತೆ ಹೋರಾಟ ನಡೆಸಿದರು. ಆಗ ಪ್ರಾರಂಭಗೊಂಡ ಸಂಘಗಳಲ್ಲಿ ಗೃಹಾಡಳಿತ, ಗೃಹಾಲಂಕರಣ ಮುಂತಾದ ವಿಷಯಗಳನ್ನು ಕುರಿತು ವಿಚಾರವಿನಿಮಯಗಳು ನಡೆದವು. ಅದರಿಂದಾಗಿ ಗೃಹವಿಜ್ಞಾನ ವಿಷಯದಲ್ಲಿ ಆಸಕ್ತಿ ಇರುವಂಥ ಹನ್ನೊಂದು ಮಂದಿ, ನ್ಯೂಯಾರ್ಕ್ ಸ್ಟೇಟ್ ಲೇಕ್ ಪ್ಲಾಸಿಡ್ ಕ್ಲಬ್ ಎಂಬ ಸಂಘದಲ್ಲಿ ಗೃಹವಿಜ್ಞಾನ ಸಮ್ಮೇಳನವೊಂದನ್ನು ನಡೆಸಲು ತೀರ್ಮಾನಿಸಿದರು. ಸಮ್ಮೇಳನದಲ್ಲಿ ಆಧುನಿಕ ಸಮಾಜದಲ್ಲಿ ಗೃಹವಿಜ್ಞಾನದ ಪಾತ್ರವನ್ನು ಕುರಿತಂತೆ ಅನೇಕ ಉಪಯುಕ್ತ ಸಲಹೆಗಳು ಬಂದವು. ಲೇಕ್ ಪ್ಲಾಸಿಡ್ ಗೃಹವಿಜ್ಞಾನ ಸಮ್ಮೇಳನದ ಫಲವಾಗಿ ಗೃಹವಿಜ್ಞಾನದ ಕ್ರಮಬದ್ಧ ಅಧ್ಯಯನ ಪ್ರಾರಂಭವಾಯಿತು. ಸಮ್ಮೇಳನದ ಪ್ರಥಮ ಅಧ್ಯಕ್ಷೆಯಾಗಿದ್ದ ಎಲೆನ್ ರಿಚಡ್ರ್ಸ್‌ ಎಂಬುವಳು ಸೂಚಿಸಿದ ಹೋಂ ಎಕನಾಮಿಕ್ಸ್‌ ಎಂಬ ಶಬ್ದ ಸರ್ವಜನಪ್ರಿಯವಾಗಿ ಮನೆಯ ಸದಸ್ಯರ ಕ್ಷೇಮಾಭ್ಯುದಯಕ್ಕೆ ಮತ್ತು ಗೃಹಾಡಳಿತಕ್ಕೆ ಸಂಬಂಧಿಸಿದ ಗೃಹವಿಜ್ಞಾನದ ಅಭ್ಯಾಸಕ್ಕೆ ಪೋಷಕವಾಯಿತು. 1903ರಲ್ಲಿ ಸೂಚಿತವಾದ ಹೋಂ ಎಕನಾಮಿಕ್ಸ್‌ ಎಂಬ ವಿಷಯವನ್ನು ಅಮೆರಿಕದ ಸಂಯುಕ್ತ ಸಂಸ್ಥಾನದ ಎಲ್ಲ ಮುಖ್ಯ ವಿಶ್ವವಿದ್ಯಾಲಯಗಳಲ್ಲೂ ಸ್ನಾತಕೋತ್ತರ ತರಗತಿಗಳಲ್ಲೂ ಈಗ ಬೋಧಿಸಲಾಗುತ್ತಿದೆ.

ಮೆಲ್ವಿಲ್ ಡ್ಯೂಯಿ ದಂಪತಿಗಳು ಅಮೆರಿಕದ ಪುಸ್ತಕ ಭಂಡಾರಗಳಲ್ಲಿ ಕೆಲಸಮಾಡಿ ಗಳಿಸಿದ್ದ ಅನುಭವಗಳನ್ನು ಲೇಕ್ ಪ್ಲಾಸಿಡ್ ಗೃಹವಿಜ್ಞಾನ ಸಮ್ಮೇಳನದಲ್ಲಿ ತಿಳಿಸಿದ್ದರು. ಅವರು ಗೃಹಅರ್ಥಶಾಸ್ತ್ರದ ನಾನಾ ವಿಷಯಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಸಂಗ್ರಹಿಸಿ ಅವನ್ನು ವರ್ಗೀಕರಣ ಮಾಡುವ ವಿಧಾನವೊಂದನ್ನು ಬೆಳೆಸಿದರು. 1850 ರಿಂದ ಇಂಗ್ಲಿಷ್ನಲ್ಲಿ ಸಿದ್ಧವಾದ 1500 ಪುಸ್ತಕಗಳ ಪಟ್ಟಿಯೊಂದನ್ನು ಶ್ರೀಮತಿ ಡ್ಯೂಯಿ ತಯಾರಿಸಿದಳು. ಶಿಶುಸಂರಕ್ಷಣೆ, ಅಡುಗೆ ಮಾಡುವ ವಿಧಾನ, ನೀತಿಶಾಸ್ತ್ರ, ಸಮಾಜಮರ್ಯಾದೆ, ಬೇಸಾಯ, ತೋಟಗಾರಿಕೆ, ಆಹಾರ, ಗೃಹಕೈಗಾರಿಕೆ, ಗೃಹಜೀವನ, ಕುಟುಂಬ ಕಲೆ, ಗೃಹಕಾರ್ಯನಿರ್ವಹಣೆ, ಆರೋಗ್ಯವಿಜ್ಞಾನ, ಶರೀರವಿಜ್ಞಾನ, ಭೌತವಿಜ್ಞಾನ, ರಾಸಾಯನವಿಜ್ಞಾನ, ಶುಚಿತ್ವ, ಆಶ್ರಯ ಮತ್ತು ಸಮಾಜಶಾಸ್ತ್ರ - ಹೀಗೆ ಆ ಪುಸ್ತಕಗಳ ವರ್ಗೀಕರಣ ಸಾಗಿತ್ತು. ಇವೇ ಮುಂದೆ ಗೃಹವಿಜ್ಞಾನಕ್ಕೆ ಸಂಬಂಧಿಸಿದ ಅಭ್ಯಾಸ ವಿಷಯಗಳಾದವು.

ಸಾರ್ವಜನಿಕ ವಿದ್ಯಾಶಾಲೆಗಳಲ್ಲಿ ಗೃಹ ಅರ್ಥಶಾಸ್ತ್ರದ ಅವಶ್ಯಕತೆ, ಅದರ ಗುರಿ ಮತ್ತು ವ್ಯಾಪ್ತಿಗಳನ್ನು ಕುರಿತಂತೆ ಮತ್ತು ಶಾಲೆಗಳಲ್ಲಿ ಅದನ್ನು ಬೋಧಿಸುವ ವಿಧಾನ, ತಗಲುವ ವೆಚ್ಚಗಳ ವಿಷಯವಾಗಿ ಲೇಕ್ ಪ್ಲಾಸಿಡ್ ಸಮ್ಮೇಳನದಲ್ಲಿ ದೀರ್ಘಚರ್ಚೆ ನಡೆಯಿತು. ಯಾವ ತರಗತಿಗಳಿಗೆ ಗೃಹ ಅರ್ಥಶಾಸ್ತ್ರದ ವಿಷಯದ ಬೋಧನೆ ಅಗತ್ಯ ಎಂಬುದರ ಬಗ್ಗೆಯೂ ಚರ್ಚೆ ನಡೆಯಿತು. ಈ ವಿಷಯವನ್ನು ಬೋಧಿಸುವುದರಲ್ಲಿ ಪ್ರೌಢಶಾಲೆಗಳಲ್ಲಿ ಇರುವ ಅನುಕೂಲಗಳನ್ನು ಪರಾಮರ್ಶಿಸಲಾಯಿತು. ಲೇಕ್ ಪ್ಲಾಸಿಡ್ ಸಮ್ಮೇಳನ ಮಾಡಿದ ಕೆಲವು ಶಿಫಾರಸ್ಸುಗಳು ಹೀಗಿವೆ :

ವಿದ್ಯಾರ್ಥಿಗಳಲ್ಲಿ ಪರೀಕ್ಷಿಸುವ ಮನೋಭಾವ ಬೆಳೆಸುವುದು ಗೃಹಅರ್ಥಶಾಸ್ತ್ರದ ವಿಷಯಗಳನ್ನು ಬೋಧಿಸುವುದರ ಗುರಿ. ಕಾಲೇಜುಗಳಲ್ಲಿ ಗೃಹಅರ್ಥಶಾಸ್ತ್ರದ ವಿದ್ಯಾಭ್ಯಾಸ ಕ್ರಮದಲ್ಲಿ ಆಹಾರ ತಯಾರಿಕೆ, ಬಟ್ಟೆ ಹೊಲಿಯುವಿಕೆ ಮತ್ತು ನೇಯ್ಗೆ ಮುಂತಾದ ವಿಷಯದಲ್ಲಿ ಪ್ರಾಯೋಗಿಕ ಶಿಕ್ಷಣ ಕೊಡುವುದು. ಕಾಲೇಜಿನ ಎಲ್ಲ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೂ ಗೃಹ ಅರ್ಥಶಾಸ್ತ್ರದ ಸಾಮಾನ್ಯ ಶಿಕ್ಷಣ ಕೊಡುವುದು. ಯಾವ ಕಾಲೇಜಿನಲ್ಲಿ ಗೃಹಅರ್ಥಶಾಸ್ತ್ರಕ್ಕೆ ಪ್ರತ್ಯೇಕ ಶಾಖೆಗಳಿಲ್ಲವೋ ಆ ಶಾಲೆಗಳಲ್ಲಿ ಗೃಹ ಮತ್ತು ಗೃಹಜೀವನಕ್ಕೆ ಸಂಬಂಧಪಟ್ಟ ವಿಷಯಗಳನ್ನು ರಸಾಯನವಿಜ್ಞಾನ, ಅರ್ಥಶಾಸ್ತ್ರ, ಸಮಾಜವಿಜ್ಞಾನ ಮತ್ತು ಕಲೆ ಈ ಶಾಖೆಗಳ ಮೂಲಕ ಬೋಧಿಸಲು ಅನುಕೂಲ ಮಾಡಿಕೊಡುವುದು. ಲೇಕ್ ಪ್ಲಾಸಿಡ್ ಸಮ್ಮೇಳನ ಶಿಫಾರಸ್ಸುಗಳನ್ನು ಅಂಗೀಕರಿಸಿ ಕೆಲವು ಶಾಲೆಗಳು ಮತ್ತು ಕಾಲೇಜುಗಳು ಗೃಹ ವಿಜ್ಞಾನಕ್ಕೆ ಸಂಬಂಧಿಸಿದಂತೆ ಗೃಹ ಅರ್ಥಶಾಸ್ತ್ರದಲ್ಲಿ ಶಿಕ್ಷಣವನ್ನು ಕೊಟ್ಟವು. ತರಬೇತಿ ತರಗತಿಗಳ ಅವಧಿ ಒಂದರಿಂದ ನಾಲ್ಕು ವರ್ಷಗಳವರೆಗೂ ಬೋಧನೆಯ ಶಿಕ್ಷಣದ ಅವಧಿ ಹತ್ತು ವಾರಗಳಿಂದ ಎರಡು ವರ್ಷಗಳವರೆಗೂ ಇತ್ತು.

ವಯಸ್ಕರಿಗೂ ಗೃಹ ಅರ್ಥಶಾಸ್ತ್ರದ ಪರಿಚಯವನ್ನು ಮಾಡಿಕೊಡಬೇಕೆಂಬುದು ಲೇಕ್ ಪ್ಲಾಸಿಡ್ ಸಮ್ಮೇಳನದ ಉದ್ದೇಶವಾಗಿತ್ತು. ಅದರಂತೆ ಸಂಚಾರಿ ಗ್ರಂಥಾಲಯಗಳಿಂದ ನ್ಯೂಯಾರ್ಕ್ ರಾಜ್ಯದ ಮನೆಗಳಿಗೆ ಪುಸ್ತಕಗಳು ಎರವಲಾಗಿ ಬರಹತ್ತಿದವು. ಬಾಸ್ಟನ್ ಶಾಲೆಯಲ್ಲಿ ಗೃಹ ಅರ್ಥಶಾಸ್ತ್ರವನ್ನು ಮಕ್ಕಳಿಗೆ ಬೋಧಿಸಲಾಯಿತಲ್ಲದೆ ಒಂದು ಸಂಘವೂ ಸ್ಥಾಪನೆಯಾಯಿತು. ಆ ಸಂಘ ಸಣ್ಣ ವಯಸ್ಸಿನ ಮಕ್ಕಳಿಗೆ ಸೂಕ್ಷ್ಮಪ್ರಮಾಣದ ಉಪಕರಣಗಳಿಂದ ಸಾಮಾನ್ಯ ಆಹಾರವನ್ನು ತಯಾರಿಸುವುದು, ಊಟ ಬಡಿಸುವ ಉಪಕರಣಗಳನ್ನು ಅಚ್ಚುಗಟ್ಟಾಗಿ ಇಡುವುದು, ಊಟ ಬಡಿಸುವುದು, ಒಳ್ಳೆಯ ರೀತಿಯಲ್ಲಿ ನಡೆದುಕೊಳ್ಳುವುದು, ಕೆಲಸದ ಅನಂತರ ಉಪಕರಣಗಳನ್ನು ಶುಚಿಮಾಡುವುದು, ಗೃಹ ಕಾರ್ಯನಿರ್ವಹಣೆ, ಗೃಹವನ್ನು ಪೀಠೋಪಕರಣಗಳಿಂದ ಸಜ್ಜುಗೊಳಿಸುವುದು, ಅಲಂಕರಿಸುವುದು - ಮುಂತಾದವನ್ನು ಹೇಳಿಕೊಡುವ ಆವಶ್ಯಕತೆಯನ್ನು ಎತ್ತಿ ತೋರಿಸಿತು. ಅಲ್ಲದೆ ಮಕ್ಕಳು ಶುಚಿಯಾಗಿರಲು ಬೇಕಾದ ಎಲ್ಲ ಕ್ರಮಗಳ ಬಗ್ಗೆಯೂ ಅರಿವು ಕೊಡುವ ಕಿಂಡರ್ಗಾರ್ಟನ್ ವಿದ್ಯಾಭ್ಯಾಸ ಪದ್ಧತಿಯನ್ನು ಜಾರಿಗೆ ತಂದಿತು. ಮನೆಯ ಒಳಾಂಗಣ ಮತ್ತು ಹೊರಾಂಗಣವನ್ನು ಚೊಕ್ಕಟವಾಗಿಟ್ಟುಕೊಳ್ಳುವುದರ ಬಗ್ಗೆ ಅನುಸರಿಸಬೇಕಾದ ವಿಧಾನಗಳು, ಒಗೆದ ಬಟ್ಟೆಗಳನ್ನು ಜೋಪಾನವಾಗಿಡುವುದು ಮುಂತಾದ ವಿಷಯಗಳ ಮೇಲೆ ಆಗಾಗ ಪ್ರದರ್ಶನಗಳು ಏರ್ಪಾಡಾಗುತ್ತಿದ್ದುವು. ಹೀಗೆ ಅಲ್ಪ ಪರಿಮಾಣದಲ್ಲಿ ರೂಪುಗೊಂಡ ಗೃಹವಿಜ್ಞಾನ ಕ್ರಮೇಣ ಹೆಚ್ಚು ವ್ಯಾಪಕವಾಗಿ ಬೆಳೆದು ಬಹು ವಿಷಯ ಪರಿಪ್ಲುತವೂ ಶಾಸ್ತ್ರೀಯವೂ ಆಗಿ ಮಾರ್ಪಟ್ಟಿತು.

ಭಾರತದಲ್ಲಿ[ಬದಲಾಯಿಸಿ]

ಕುಟುಂಬದಲ್ಲಿರುವ ಹೆಣ್ಣುಮಕ್ಕಳು ತಾವು ಯಾವ ರೀತಿಯಲ್ಲಿ ಮನೆಯನ್ನು ಶುಭ್ರವಾಗಿಟ್ಟುಕೊಂಡು, ಚಿಕ್ಕಮಕ್ಕಳ ವಿದ್ಯಾಭ್ಯಾಸ, ಅವರ ಆಹಾರ ಮುಂತಾದ ವಿಚಾರಗಳಿಗೆ ಗಮನ ಕೊಡಬೇಕು ಎಂಬುದರ ಬಗ್ಗೆ ಅರಿವು ಕೊಡುವಂಥ ಮಹಿಳಾ ಸಮಾಜಗಳು ಈಗ ಭಾರತದಲ್ಲಿ ಹೇರಳವಾಗಿವೆ. ಹೊಲಿಗೆ, ಕಸೂತಿ, ಪಾಕಶಾಸ್ತ್ರ, ಗೃಹಾಲಂಕರಣ, ಮಕ್ಕಳ ಪೋಷಣೆ ಮುಂತಾದ ವಿಷಯಗಳಲ್ಲಿ ಇವು ತರಬೇತಿ ನೀಡುತ್ತವೆ. ಈಚೆಗೆ ಗೃಹವಿಜ್ಞಾನ ಬೋಧನೆ ಭಾರತದ ಶಾಲಾ ಕಾಲೇಜುಗಳ ಪಠ್ಯಕ್ರಮದಲ್ಲಿ ಸೇರಿಹೋಗಿ, ಈ ವಿಷಯದಲ್ಲಿ ಪ್ರೌಢ, ಸ್ನಾತಕ ಮತ್ತು ಸ್ನಾತಕೋತ್ತರ ಪರೀಕ್ಷೆಗಳು ನಡೆಯುತ್ತಿವೆ.

ಭಾರತದಲ್ಲಿ ನೀಡಲಾಗುತ್ತಿರುವ ಗೃಹವಿಜ್ಞಾನದ ಶಿಕ್ಷಣದಲ್ಲಿ ಆಹಾರ ಮತ್ತು ಪುಷ್ಟಿ, ಬಟ್ಟೆ ಮತ್ತು ಉಡುಪು, ಮನೆಗೆಲಸದ ನಿರ್ವಹಣೆ, ಕುಟುಂಬದ ಸದಸ್ಯರ ಆರೋಗ್ಯ, ಚಿಕ್ಕಮಕ್ಕಳ ಬೆಳೆವಣಿಗೆ ಮತ್ತು ಮಾನವಸಂಬಂಧ ವಿಷಯಗಳು ಮುಖ್ಯವಾಗಿ ಸೇರಿವೆ. ಇವುಗಳ ಸೂಕ್ಷ್ಮ ಪರಿಚಯವನ್ನು ಇಲ್ಲಿ ಕೊಟ್ಟಿದೆ.

ಆಹಾರ ಮತ್ತು ಪುಷ್ಟಿ[ಬದಲಾಯಿಸಿ]

ರಾಷ್ಟ್ರೀಯ ಆಹಾರ ಸಮಸ್ಯೆ, ಆಹಾರ ಸಮಸ್ಯೆಯಿಂದ ರಾಷ್ಟ್ರದ ಮೇಲೆ ಆಗುವ ಪರಿಣಾಮಗಳು, ಆಹಾರ ವಿಷಯವಾಗಿ ವಿಜ್ಞಾನದಿಂದ ಕಂಡುಹಿಡಿಯಲ್ಪಟ್ಟ ವಾಸ್ತವಾಂಶ, ದೇಹದ ಬೆಳೆವಣಿಗೆಗೆ ಮತ್ತು ದೇಹದ ಭಾಗಗಳ ಕಾರ್ಯಚಟುವಟಿಕೆಗೆ ಬೇಕಾದ ಪೌಷ್ಟಿಕ ಆಹಾರ, ಬೆಳವಣಿಗೆಯ ನಾನಾ ಹಂತಗಳಲ್ಲಿ ದೇಹಕ್ಕೆ ಬೇಕಾಗುವ ಆಹಾರ, ಪೌಷ್ಟಿಕ ಆಹಾರದ ಕೊರತೆಯಿಂದುಂಟಾಗುವ ರೋಗಗಳು ಮತ್ತು ಅವನ್ನು ತಡೆಗಟ್ಟುವ ರೀತಿ, ಸರಿಯಾದ ತಯಾರಿಕೆಯಿಂದ ಆಹಾರದಲ್ಲಿರುವ ಆಹಾರಾಂಶಗಳ ಗುಣ, ರುಚಿ ಮತ್ತು ಸುವಾಸನೆಗಳನ್ನು ಕಾಪಾಡುವುದು, ಕಡಿಮೆ ವೆಚ್ಚದಲ್ಲಿ ಒಳ್ಳೆಯ ಆಹಾರ ಪದಾರ್ಥಗಳನ್ನು ಕೊಳ್ಳುವುದು, ಆಹಾರ ಕೆಡದಂತೆ ರಕ್ಷಿಸುವುದು, ಹಿತಮಿತವಾದ ಆಹಾರ ಸೇವನೆ - ಮುಂತಾದ ವಿಷಯಗಳ ಅಧ್ಯಯನಕ್ಕೆ ಈ ವಿಭಾಗದಲ್ಲಿ ಅವಕಾಶವಿದೆ.

ಬಟ್ಟೆ ಮತ್ತು ಉಡುಪು[ಬದಲಾಯಿಸಿ]

ಉಡುಪಿನ ತಯಾರಿಕೆ ಮತ್ತು ಬಟ್ಟೆಗಳನ್ನು ಜಾಗರೂಕತೆಯಿಂದ ನೋಡಿಕೊಳ್ಳುವ ವಿಧಾನ, ಉಡುಪುಗಳಿಗೆ ತಗಲುವ ವೆಚ್ಚ, ಬಟ್ಟೆಗಳ ಮೇಲೆ ವಿವಿಧ ರಸಾಯನಿಕ ವಸ್ತುಗಳು ಹೇಗೆ ವರ್ತಿಸುತ್ತವೆಂಬ ವಿಷಯ, ವಿವಿಧ ನೆಯ್ಗೆಗಳು, ಬಟ್ಟೆಯ ಗುಣ, ಗಾಢತೆ, ಕುಗ್ಗುವಿಕೆ, ಬಾಳಿಕೆ, ರೇಶ್ಮೆ, ವುಲ್ಲನ್, ಹತ್ತಿ, ಲಿನನ್ ಮುಂತಾದವುಗಳಿಂದ ತಯಾರಾದ ಉಡುಪಿನ ಸ್ವಭಾವ, ಕೃತಕ ಬಟ್ಟೆಗಳಾದ ರೆಯಾನ್, ನೈಲಾನ್ ಮುಂತಾದವುಗಳ ಸ್ವಭಾವ - ಇವನ್ನು ಕುರಿತ ಅಧ್ಯಯನಕ್ಕೆ ಇಲ್ಲಿ ಅವಕಾಶವಿದೆ. ಬಟ್ಟೆಯನ್ನು ಕೊಳ್ಳುವಾಗ ಮತ್ತು ಉಡುಪುಗಳನ್ನು ತಯಾರು ಮಾಡುವಾಗ ಸಂಸಾರದ ಸಂಪಾದನೆ, ತೊಡುವವರ ವಯಸ್ಸು, ಕೆಲಸ ಮತ್ತು ಸಮಯಕ್ಕೆ ತಕ್ಕ ಕೊಡುಗೆ, ವಿವಿಧ ಬಣ್ಣಗಳು, ಚಿತ್ರಗಳು, ಉಡುಪುಗಳನ್ನು ಸ್ವತಃ ತಯಾರಿಸುವುದರಲ್ಲಿ ಇರುವ ಅನುಕೂಲಗಳು, ಉಡುಪಿನಿಂದ ರಾಷ್ಟ್ರೀಯ ಗುಣಗಳನ್ನು ಎತ್ತಿತೋರುವ ಚಾರಿತ್ರಿಕ ಹಿನ್ನೆಲೆ, ಬಟ್ಟೆಗಳನ್ನು ಮಡಿ ಮಾಡುವ ವಿಧಾನ, ಹರಿದಿರುವ ಉಡುಪುಗಳನ್ನು ರಿಪೇರಿ ಮಾಡುವ ರೀತಿ, ಉಡುಪುಗಳನ್ನು ಜೋಪಾನ ಮಾಡುವ ಬಗೆ - ಮುಂತಾದವುಗಳ ಶಾಸ್ತ್ರೀಯ ಅಭ್ಯಾಸ ಇಲ್ಲಿ ಸಾಗುತ್ತದೆ.

ಗೃಹ ಮತ್ತು ಗೃಹಾಡಳಿತ[ಬದಲಾಯಿಸಿ]

ಗೃಹಸ್ಥನಾದವನ ಅಗತ್ಯಗಳೇನು ಎಂಬುದನ್ನು ಗಮನದಲ್ಲಿಟ್ಟುಕೊಂಡು ಅದಕ್ಕೆ ಅನುಗುಣವಾದ ರೀತಿಯಲ್ಲಿ ಗೃಹವನ್ನು ಅಣಿಗೊಳಿಸಿ ಅವನ ಬೌದ್ಧಿಕ ಹಾಗೂ ಮಾನಸಿಕ ಶಾಂತಿಯನ್ನು ಕಾಪಾಡಿಕೊಂಡು ಬರಲು ಪೋಷಕವಾಗುವಂಥ ಗೃಹಕೃತ್ಯಗಳನ್ನು ಹೇಗೆ ನಡೆಸಬೇಕು ಎಂಬ ವಿಚಾರದಲ್ಲಿ ಶಿಕ್ಷಣವೀಯಲಾಗುತ್ತದೆ. ಮನೆಯೊಡೆಯನ ಸಂಪಾದನೆ, ಜೀವನ ನಿರ್ವಹಣೆಯ ಖರ್ಚು - ಇವೆರಡನ್ನೂ ಸರಿದೂಗಿಸುವ ಜಾಣ್ಮೆ, ಸಂಪಾದಿಸುವ ಹಣದಲ್ಲಿ ಮಕ್ಕಳ ಭವಿಷ್ಯಕ್ಕೆ ಹಣವನ್ನು ಕೂಡಿಟ್ಟು ಚೊಕ್ಕ ಸಂಸಾರ ನಡೆಸುವ ರೀತಿ, ಗೃಹಕೃತ್ಯದ ಕೆಲಸಗಳನ್ನು ಸುಗಮ ಮಾಡಿಕೊಳ್ಳುವಿಕೆ, ಆಧುನಿಕ ಗೃಹೋಪಕರಣಗಳ ಬಳಕೆ - ಈ ವಿಚಾರಗಳು ಇಲ್ಲಿ ಬರುತ್ತವೆ.

ಆರೋಗ್ಯ[ಬದಲಾಯಿಸಿ]

ಕುಟುಂಬದ ಸದಸ್ಯರ ಆರೋಗ್ಯವನ್ನು ಕಾಪಾಡಿಕೊಂಡು ಬರುವ ವಿಚಾರದಲ್ಲಿ ಗೃಹನೈರ್ಮಲ್ಯ, ದೇಹಾರೋಗ್ಯ, ರೋಗಬರದಂತೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದು, ದೊರೆಯುವ ಉಚಿತ ವೈದ್ಯಕೀಯ ಸೇವೆಯನ್ನು ಹಿಂಜರಿಯದೆ ಪಡೆದುಕೊಳ್ಳುವುದು - ಮುಂತಾದವನ್ನು ಇಲ್ಲಿ ತಿಳಿಸಿಕೊಡಲಾಗುತ್ತದೆ.

ಚಿಕ್ಕ ಮಕ್ಕಳ ಬೆಳೆವಣಿಗೆ[ಬದಲಾಯಿಸಿ]

ಮಕ್ಕಳ ದೈಹಿಕ ಹಾಗೂ ಏಳಿಗೆಗೆ ಯಾವ ಅಂಶಗಳು ಪೋಷಕವಾಗುತ್ತವೆ ಎಂಬುದನ್ನು ಇಲ್ಲಿ ಹೇಳಿಕೊಡಲಾಗುತ್ತದೆ. ಬೆಳೆವ ಮಕ್ಕಳಲ್ಲಿ ಮೂಡುವ ವಿಚಿತ್ರ ಸಂದೇಹಗಳು, ಅವಕ್ಕೆ ಒದಗಿಸಬೇಕಾದ ಪರಿಹಾರಗಳು ಇವೆಲ್ಲದರ ಬಗ್ಗೆಯೂ ವಿವರ ನೀಡಲಾಗುತ್ತದೆ. ಸಣ್ಣ ಮಕ್ಕಳ ಅಗತ್ಯಗಳು ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಅವರಲ್ಲಿ ಆಗುವ ಬದಲಾವಣೆಗಳು, ಆಹಾರ, ಉಡುಗೆತೊಡಿಗೆಗಳು, ವಿದ್ಯಾಭ್ಯಾಸ, ಆರೋಗ್ಯ, ಆಟಪಾಟಗಳು - ಈ ವಿಷಯವಾಗಿ ತಿಳಿದುಕೊಳ್ಳಲು ಇಲ್ಲಿ ಅನುಕೂಲವಿದೆ.

ಮಾನವ ಸಂಬಂಧ[ಬದಲಾಯಿಸಿ]

ಮನುಷ್ಯ ಸಂಘಜೀವಿಯಾದ ಕಾರಣ ತನ್ನ ಕಷ್ಟಸುಖಗಳನ್ನು ತನ್ನ ಮಿತ್ರರೊಡನೆ ಹೇಳಿಕೊಂಡು ಮನಸ್ಸಿನ ದುಗುಡವನ್ನು ಲಘು ಮಾಡಿಕೊಳ್ಳ ಬಯಸುತ್ತಾನೆ. ಆದ್ದರಿಂದ ಪರಿಸ್ಥಿತಿಗೆ ತಕ್ಕಂತೆ ಅವನಲ್ಲಿ ಆಗುವ ಮನೋವೃತ್ತೀಯ ಬದಲಾವಣೆಗಳನ್ನು ಗಮನಿಸಿ, ಅವಕ್ಕೆ ಸೂಕ್ತ ಅಗತ್ಯತೆಗಳನ್ನು ಒದಗಿಸಿ ಅವನ ಚಿತ್ತ ಧೃತಿಗೆಡದಂತೆ ನೋಡಿಕೊಳ್ಳುವುದು ಗೃಹಿಣಿಯ ಕರ್ತವ್ಯವಾಗುತ್ತದೆ. ನಾಲ್ಕು ಜನ ಯಾವ ರೀತಿ ಸಮಾಜದಲ್ಲಿ ಬಾಳ್ವೆ ನಡೆಸುತ್ತಿದ್ದಾರೆ ಎಂಬುದನ್ನು ಮನಗಂಡು, ಸಮಾಜದ ಕಟ್ಟುಪಾಡುಗಳಿಗೆ ಒಳಗಾಗಿ, ಕುಟುಂಬವನ್ನು ಯಾವ ರೀತಿ ಸಾಗಿಸಬೇಕು ಎಂಬುದನ್ನು ಈ ವಿಭಾಗದಲ್ಲಿ ತಿಳಿಸಲಾಗುತ್ತದೆ. ಮಾನವ-ಮಾನವ ಸಂಬಂಧದ ತಾತ್ತ್ವಿಕ ನಿರೂಪಣೆಯನ್ನು ಇಲ್ಲಿ ವಿಶದಪಡಿಸಲಾಗುತ್ತದೆ. ಜೀವನಸಾಮರಸ್ಯ ಮತ್ತು ಏಕತೆಯ ಬಗ್ಗೆಯೂ ಅರಿವು ಮೂಡಿಸಲಾಗುತ್ತದೆ.

ಭಾರತದಲ್ಲಿ ಇತ್ತೀಚೆಗೆ ಬಾಲವಾಡಿಗಳಲ್ಲೂ ಶಿಶುವಿಹಾರಗಳಲ್ಲೂ ಕಿಂಡರ್ ಗಾರ್ಟನ್ ಶಾಲೆಗಳಲ್ಲೂ ಗೃಹವಿಜ್ಞಾನವನ್ನು ಮಕ್ಕಳಿಗೆ ಕಲಿಸಲಾಗುತ್ತಿದೆ. ಮಾಧ್ಯಮಿಕ ಶಾಲೆ ಮತ್ತು ಪ್ರೌಢಶಾಲೆಗಳಲ್ಲೂ ಗೃಹವಿಜ್ಞಾನಕ್ಕೆ ಸಂಬಂಧಪಟ್ಟಂತೆ ಪಾಠ ಪ್ರವಚನಗಳು ನಡೆಯುತ್ತಿವೆ. ಗೃಹವಿಜ್ಞಾನವನ್ನು ಪ್ರತ್ಯೇಕ ಬೋಧನ ವಿಷಯವನ್ನಾಗಿ ಮಾಡಿದ ಕೀರ್ತಿ ಹಿಂದಿನ ಮದರಾಸು ರಾಜ್ಯಕ್ಕೆ ಸಲ್ಲುತ್ತದೆ. ಭಾರತ ಸರ್ಕಾರ 1956ರಲ್ಲಿ ಮೂರು ವರ್ಷಗಳ ಪಠ್ಯಕ್ರಮವನ್ನು ತಯಾರಿಸಿ ಅದರಲ್ಲಿ ಶಿಕ್ಷಣವನ್ನೀಯಲು ಮಾಡಿದ ಆದೇಶದಿಂದಾಗಿ ಬಹುತೇಕ ರಾಜ್ಯದ ಶಿಕ್ಷಣ ಇಲಾಖೆಗಳ ವತಿಯಲ್ಲಿ ಗೃಹವಿಜ್ಞಾನದ ಶಾಲೆಗಳನ್ನೂ ಕಾಲೇಜುಗಳನ್ನೂ ಈಗ ತೆರೆಯಲಾಗಿದೆ. ಗೃಹವಿಜ್ಞಾನದ ಜೊತೆಗೆ ಕಲೆ, ಸಮಾಜಶಾಸ್ತ್ರ ಮುಂತಾದ ಸಾಮಾನ್ಯ ವಿಷಯಗಳನ್ನೂ ಬೋಧಿಸಲಾಗುತ್ತದೆ. ಇಂಥದೊಂದು ಸಂಸ್ಥೆ ಕೊಯಮತ್ತೂರಿನ ಅವಿನಾಶ ಲಿಂಗಮ್ ಹೋಮ್ ಸೈನ್ಸ್‌ ಕಾಲೇಜು.

ಗೃಹವಿಜ್ಞಾನ ವಿಷಯದ ವ್ಯಾಸಂಗಕ್ರಮ ಆಯಾ ಕಾಲೇಜು ಮತ್ತು ವಿಶ್ವ ವಿದ್ಯಾಲಯದ ಇಚ್ಛೆಗೆ ತಕ್ಕಂತೆ ರೂಪುಗೊಂಡಿದೆ. ಕ್ರಮ ಬೇರೆಯಾದರೂ ಮುಖ್ಯವಾಗಿ ಮೂರು ವಿಭಾಗಗಳನ್ನು ಗಮನಿಸಬಹುದು:

  • ವಿಜ್ಞಾನ ವಿಷಯಗಳು,
  • ಲಲಿತ ವಿದ್ಯೆಗಳು,
  • ಕುಶಲಕಲೆಗಳು.

ಭಾರತದಲ್ಲಿ ಸದ್ಯಕ್ಕೆ ಉಪಾಧ್ಯಾಯ ತರಬೇತಿ ಕಾಲೇಜುಗಳಲ್ಲಿ, ಸ್ನಾತಕೋತ್ತರ ಮಟ್ಟದಲ್ಲಿ ಉಪಾಧ್ಯಾಯರ ಶಿಕ್ಷಣವನ್ನು ಕೊಡುವುದರ ಜೊತೆಗೆ ಗೃಹವಿಜ್ಞಾನದಲ್ಲಿ ಶಿಕ್ಷಣ ಕೊಟ್ಟು ಆ ವಿಭಾಗದಲ್ಲಿ ಪದವಿ ಪರೀಕ್ಷೆಯನ್ನು ಕಟ್ಟಲು ಅವಕಾಶ ಕಲ್ಪಿಸಲಾಗಿದೆ. ಇಂಥ ಶಿಕ್ಷಣವನ್ನು ಪಡೆದ ಉಪಾಧ್ಯಾಯರು ಪ್ರೌಢ ಶಾಲೆಗಳಲ್ಲಿ ಗೃಹವಿಜ್ಞಾನ ಪಾಠ ನಡೆಸಲು ಅರ್ಹರಾಗುತ್ತಾರೆ. ಕೇವಲ ಪಟ್ಟಣ ಮತ್ತು ನಗರಗಳಲ್ಲಿ ಮಾತ್ರವಲ್ಲದೆ ಗ್ರಾಮಾಂತರ ಪ್ರದೇಶಗಳಲ್ಲೂ ಗೃಹ ವಿಜ್ಞಾನ ಶಿಕ್ಷಣ ದೊರೆಯಲು ಭಾರತ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಭಾರತ ಮುಖ್ಯವಾಗಿ ಬೇಸಾಯಾಧರಿತ ದೇಶವಾದ್ದರಿಂದ ನಾಡಿನಲ್ಲಿರುವ ಕೃಷಿ ವಿಶ್ವವಿದ್ಯಾಲಯಗಳ ವತಿಯಲ್ಲಿ ಗೃಹವಿಜ್ಞಾನ ತರಬೇತಿ ಕೇಂದ್ರಗಳು ಸ್ಥಾಪನೆಗೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಭಾರತದ ಬಹುಪಾಲು ವಿಶ್ವವಿದ್ಯಾನಿಲಯಗಳಲ್ಲಿ ಗೃಹವಿಜ್ಞಾನ ಅಧ್ಯಯನ ವಿಭಾಗಗಳನ್ನು ತೆರೆಯಲಾಗಿದೆ. ಗೃಹವಿಜ್ಞಾನ ವಿಷಯಗಳಿಗೆ ಸಂಬಂಧಿಸಿದ ಅಧ್ಯಯನ, ಬೋಧನೆ, ಸಂಶೋಧನೆಗಳು ನಡೆಯುತ್ತಿವೆ. ಸ್ನಾತಕ ಮತ್ತು ಸ್ನಾತಕೋತ್ತರ ಮಟ್ಟದಲ್ಲಿ ಪದವಿಗಳನ್ನು ನೀಡಲಾಗುತ್ತಿದೆ.

ಭಾರತದ ಗೃಹವಿಜ್ಞಾನ ಮಂಡಲಿ[ಬದಲಾಯಿಸಿ]

1951ರ ಆಗಸ್ಟ್‌ ತಿಂಗಳಲ್ಲಿ ಗೃಹವಿಜ್ಞಾನ ಉಪಾಧ್ಯಾಯಿನಿಯರ ಸಮ್ಮೇಳನವೊಂದನ್ನು ಬರೋಡ ವಿಶ್ವವಿದ್ಯಾಲಯ ನಡೆಸಿತು. ಶ್ರೀಮತಿ ಪ್ಲೆಮ್ಮೀ ಕಿಚಲ್ ಮತ್ತು ಶ್ರೀಮತಿ ಮೆಹತಾ (ಆಗಿನ ಬರೋಡ ವಿಶ್ವವಿದ್ಯಾಲಯದ ಕುಲಪತಿಗಳು) ಇಬ್ಬರೂ ಮುತುವರ್ಜಿ ವಹಿಸಿ ಅಖಿಲ ಭಾರತ ವ್ಯಾಪ್ತಿಯ ಗೃಹವಿಜ್ಞಾನ ಮಂಡಲಿಯ ಸ್ಥಾಪನೆಗೆ ಅಸ್ತಿಭಾರ ಹಾಕಿದರು. ಮೊದಲನೆಯ ಅಖಿಲಭಾರತ ಗೃಹವಿಜ್ಞಾನ ಸಮ್ಮೇಳನ 1952ರ ಸೆಪ್ಟೆಂಬರ್ ತಿಂಗಳಿನಲ್ಲಿ ಮದ್ರಾಸಿನಲ್ಲಿ ನಡೆಯಿತು. ನೂರ ಐವತ್ತು ವಿದ್ಯಾರ್ಥಿನಿಯರು, ಉಪಾಧ್ಯಾಯಿನಿಯರು, ವಿಸ್ತರಣಾ ಕೆಲಸಗಾರರು, ಗೃಹವಿಜ್ಞಾನದಲ್ಲಿ ಆಸಕ್ತಿ ಇರುವ ಇತರ ಕೆಲವರು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಗೃಹವಿಜ್ಞಾನ ವಿಷಯವನ್ನು ಮುಂದುವರಿಸಲು ಮತ್ತು ವಿಕಾಸಗೊಳಿಸಲು ಅನುಕೂಲವಾಗುವಂಥ ಕೆಲವು ಸೂತ್ರಗಳನ್ನು ಇಲ್ಲಿ ರಚಿಸಲಾಯಿತು.

1954ರ ಸೆಪ್ಟೆಂಬರ್ ತಿಂಗಳಿನಲ್ಲಿ ದೆಹಲಿಯ ಲೇಡಿ ಇರ್ವಿನ್ ಕಾಲೇಜಿನಲ್ಲಿ ಎರಡನೆಯ ಸಮ್ಮೇಳನ ನಡೆಯಿತು. ಈ ಸಮ್ಮೇಳನದ ಹೊತ್ತಿಗೆ ಅಖಿಲಭಾರತ ಗೃಹವಿಜ್ಞಾನ ಸಂಸ್ಥೆ ನೋಂದಣಿಯಾದ ಸಂಸ್ಥೆಯಾಗಿ ರೂಪುಗೊಂಡಿದ್ದೆ ಅಲ್ಲದೆ ಅಂತಾರಾಷ್ಟ್ರೀಯ ಗೃಹವಿಜ್ಞಾನ ಸಂಯುಕ್ತ ಸಂಘದ ಅಂಗ ಸಂಸ್ಥೆಯಾಗಿ ದಾಖಲಾಗಿತ್ತು.

ಅಲಹಬಾದಿನಲ್ಲಿ ಸೇರಿದ (1956) ಮೂರನೆಯ ಸಮ್ಮೇಳನದಲ್ಲಿ ಮೊದಲನೆಯ ನಿರ್ಣಯವಾಗಿ ಪ್ರಯೋಗಶಾಲೆಗಳ ವಿನ್ಯಾಸ ಹಾಗೂ ಪಠ್ಯಕ್ರಮದ ಸಿದ್ಧತೆಗಳ ಬಗ್ಗೆ ಸಲಹೆ ನೀಡಲು ವಿವಿಧ ರಾಜ್ಯಗಳಿಗೆ ಸೇರಿದ ಹತ್ತು ಜನ ಗೃಹವಿಜ್ಞಾನ ಪರಿಣತರ ಒಂದು ಸಮಿತಿಯನ್ನು ರಚಿಸಲಾಯಿತು.

ಇದೇ ಸಮಯದಲ್ಲಿ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯಗಳ ಜೊತೆಗೆ ಭಾರತ ಗೃಹವಿಜ್ಞಾನ ಮಂಡಲಿಯ ಸಂಬಂಧ ಇನ್ನೂ ಹೆಚ್ಚಿತು. ಇದರಿಂದಾಗಿ ಟೆನಿಸಿ ವಿಶ್ವವಿದ್ಯಾಲಯ ಆರು ಜನ ಗೃಹವಿಜ್ಞಾನ ಪರಿಣತರನ್ನು ಭಾರತದ ಆರು ಕಾಲೇಜುಗಳಿಗೆ ಕಳುಹಿಸಿತಲ್ಲದೆ ಸಹಸ್ರರೂಪಾಯಿ ಬೆಲೆಬಾಳುವ ಪುಸ್ತಕಗಳು, ಪ್ರಾಯೋಗಿಕ ಶಾಲಾಸಾಮಗ್ರಿಗಳು ಮುಂತಾದವನ್ನು ಉಚಿತವಾಗಿ ಕೊಟ್ಟಿತು. ಈ ಆರು ಕಾಲೇಜುಗಳಿಂದ ಹಲವು ಉಪಾಧ್ಯಾಯಿನಿಯರು ತಮ್ಮ ತಮ್ಮ ಐಚ್ಛಿಕ ವಿಷಯಗಳಲ್ಲಿ ಹೆಚ್ಚಿನ ತರಬೇತಿ ಪಡೆಯಲು ಅಮೆರಿಕದ ವಿಶ್ವವಿದ್ಯಾಲಯಗಳಿಗೆ ಹೋದರು.

ಫೋರ್ಡ್ ಫೌಂಡೇಷನ್ನಿನ ಕೊಡುಗೆ[ಬದಲಾಯಿಸಿ]

ಫೋರ್ಡ್ ಪ್ರತಿಷ್ಠಾನದ ಸಹಾಯ ದೊರೆಯಿತಾಗಿ ಭಾರತದಲ್ಲಿ ಸ್ನಾತಕೋತ್ತರ ಪದವಿಯ ಶಿಕ್ಷಣ ಕೊಡಲು ಮತ್ತು ಸಂಶೋಧನೆಯಲ್ಲಿ ಮಾರ್ಗದರ್ಶನ ನೀಡಲು ಬರೋಡ ವಿಶ್ವವಿದ್ಯಾಲಯವನ್ನು ಆರಿಸಿಕೊಳ್ಳಲಾಯಿತು. ಅಯೋವ ಸ್ಟೇಟ್ ಕಾಲೇಜಿನಿಂದ ಪ್ರಾಧ್ಯಾಪಕರುಗಳನ್ನು ಇಲ್ಲಿಗೆ ಬರಮಾಡಿಕೊಳ್ಳುವುದಲ್ಲದೇ ಭಾರತದ ವಿವಿಧ ವಿಶ್ವವಿದ್ಯಾಲಯಗಳಿಂದ ಪದವಿ ಪಡೆದ ವಿದ್ಯಾರ್ಥಿನಿಯರಿಗೆ ಸ್ನಾತಕೋತ್ತರ ತರಗತಿಗಳಲ್ಲಿ ವಿದ್ಯಾಭ್ಯಾಸ ಮುಂದುವರಿಸಲು ವಿದ್ಯಾರ್ಥಿವೇತನವನ್ನೂ ಮತ್ತು ಸಂಶೋಧನ ಸಹಾಯಧನವನ್ನೂ ಕೊಡಬೇಕೆಂದು ನಿರ್ಣಯಿಸಲಾಯಿತು. ಮೊದಲಿಗೆ ಕರ್ನಾಟಕಕ್ಕೆ ಸೇರಿದ ಆರು ಕಾಲೇಜುಗಳಲ್ಲಿ ಪ್ರಿ-ಯೂನಿವರ್ಸಿಟಿ, ಪದವಿ ಮತ್ತು ಸ್ನಾತಕೋತ್ತರ ತರಗತಿಗಳಲ್ಲಿ ಗೃಹವಿಜ್ಞಾನವನ್ನು ಬೋಧಿಸಲಾಗುತಿತ್ತು. ಈಗ ಅನೇಕ ಕಾಲೇಜುಗಳಲ್ಲಿ ಗೃಹವಿಜ್ಞಾನವನ್ನು ಬೋಧಿಸಲಾಗುತ್ತಿದೆ.

1970ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಗೃಹವಿಜ್ಞಾನದಲ್ಲಿ (ಆಹಾರ ಮತ್ತು ಪೌಷ್ಠಿಕತೆ) ಸ್ನಾತಕೋತ್ತರ ತರಗತಿಗಳನ್ನು ಆರಂಭಿಸಿತು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

Colleges and High Schools departments[ಬದಲಾಯಿಸಿ]

Societies and associations[ಬದಲಾಯಿಸಿ]

Family and Consumer Sciences resources[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: