ವಿಷಯಕ್ಕೆ ಹೋಗು

ಗೇಬ್ರಿಯಲ್ ಫೆಲ್ಲೋಪಿಯೋ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗೇಬ್ರಿಯಲ್ ಫೆಲ್ಲೋಪಿಯೋ
ಗೇಬ್ರಿಯಲ್ ಫೆಲ್ಲೋಪಿಯೋ
ಜನನ1523
ಮೊಡೆನ
ಮರಣಒಕ್ಟೋಬರ್ 9, 1562
ಪಡುವಾ
ರಾಷ್ಟ್ರೀಯತೆಇಟಾಲಿಯನ್
ಕಾರ್ಯಕ್ಷೇತ್ರAnatomy
Medicine
ಸಂಸ್ಥೆಗಳುPisa
University of Padua
ಅಭ್ಯಸಿಸಿದ ವಿದ್ಯಾಪೀಠFerrara
ಡಾಕ್ಟರೇಟ್ ಸಲಹೆಗಾರರುAntonio Musa Brassavola
ಡಾಕ್ಟರೇಟ್ ವಿದ್ಯಾರ್ಥಿಗಳುGirolamo Fabrici
Volcher Coiter
ಪ್ರಸಿದ್ಧಿಗೆ ಕಾರಣMedicine

ಗೇಬ್ರಿಯಲ್ ಫೆಲ್ಲೋಪಿಯೋ (1523 –ಒಕ್ಟೋಬರ್r 9, 1562) ಹದಿನಾರನೆಯ ಶತಮಾನದಲ್ಲಿ ಇಟಲಿಯಲ್ಲಿದ್ದ ಅತ್ಯಂತ ಪ್ರಮುಖ ಅಂಗರಚನಾ ವಿಜ್ಞಾನಿಗಳ ಪೈಕಿ ಒಬ್ಬ. ತನ್ನ ಕಾಲದಲ್ಲಿ ಅತ್ಯಂತ ಮೇಧಾವಿ ಪ್ರಾಣಿ ವಿಜ್ಞಾನಿ ಎನಿಸಿಕೊಂಡಿದ್ದ ಕುವಿಯರನ, (1779-1882), ಅಭಿಪ್ರಾಯದಂತೆ ಫ್ಯಾಲ್ಲೋಪಿಯಸ್, ಯೂಸ್ಟೇಕಿಯಸ್ ಮತ್ತು, ವೆಸೇಲಿಯಸ್ ಇವರು ಮೂವರೂ ಹದಿನಾರನೆಯ ಶತಮಾನದಲ್ಲಿ ಅಂಗರಚನಾ ವಿಜ್ಞಾನಕ್ಕೆ ಅಧಿಕೃತದಾತರೆಂದು ನಿರ್ವಿವಾದವಾಗಿ ಪರಿಗಣಿಸಲ್ಪಡತಕ್ಕವರು.

ಬಾಲ್ಯ ಮತ್ತು ಜೀವನ

[ಬದಲಾಯಿಸಿ]
  • ಫ್ಯಾಲ್ಲೋಪಿಯಸ್ 1523ರಲ್ಲಿ ಮೊಡೆನ ಎಂಬಲ್ಲಿ ಜನಿಸಿದ. ಅಲ್ಲೆ ವಿದ್ಯಾಭ್ಯಾಸ ಮುಗಿಸಿ ಅಲ್ಲಿಯ ಮುಖ್ಯ ಆರಾಧನಾ ಮಂದಿರದ ಮಂಡಲಿಯ ಸದಸ್ಯನಾದ. ಆಸ್ತಿಕತೆಯ ಕಟ್ಟುನಿಟ್ಟುಗಳಿಗಿಂತ ಬಂಧವಿಮುಕ್ತ ಲೌಕಿಕದ ಬಗ್ಗೆ ಆದರ ಉಳ್ಳವನಾದ್ದರಿಂದ ಆ ಸ್ಥಾನದಿಂದ ಬಿಡುಗಡೆ ಹೊಂದಿ ಫೆರ್ರಾರ ಎಂಬಲ್ಲಿ ವೈದ್ಯಕೀಯ ವ್ಯಾಸಂಗ ಮಾಡಿದ. ಕೆಲಕಾಲ ಅಲ್ಲಿಯೇ ಅಂಗರಚನಾ ವಿಜ್ಞಾನಾಧ್ಯಾಪಕನಾಗಿದ್ದು ಮುಂದೆ 1548ರಲ್ಲಿ ಪೀಸಾ ವಿಶ್ವವಿದ್ಯಾಲಯದಲ್ಲಿ ನೇಮಕಗೊಂಡ.
  • ಮೂರು ವರ್ಷಗಳ ಬಳಿಕ ಪಾಡುವಾ ವಿಶ್ವವಿದ್ಯಾಲಯದಲ್ಲಿ ಅಂಗರಚನಾ ವಿಜ್ಞಾನ ಪ್ರಾಧ್ಯಾಪಕನಾಗಿ ಕೆಲಸ ಮಾಡಲು ತೆರಳಿದ. ಅಲ್ಲಿ ಇವನ ಗುರುವೂ ಅನಂತರ ಸ್ನೇಹಿತನೂ ಆಗಿದ್ದ ವೆಸೇಲಿಯಸ್, ಪ್ರಾಣಿ ಹಾಗೂ ಮಾನವಶವಗಳನ್ನು ಕೊಯ್ದು ಪ್ರತ್ಯಕ್ಷವಾಗಿ ಅಂಗ ರಚನೆಯನ್ನು ವ್ಯಾಸಂಗಿಸುವ ವಿಧಾನವನ್ನು ಆ ಹಿಂದೆಯೇ ಸ್ಥಾಪಿಸಿದ್ದ. ಅದರಂತೆ ಆತ (ವೆಸೇಲಿಯಸ್) ಗಳಿಸಿದ್ದ ಜ್ಞಾನವನ್ನು ಗ್ರಂಥೀಕರಿಸಿದ್ದಕ್ಕಾಗಿ, ಗ್ಯಾಲೆನ್ನನ ಗ್ರಂಥಗಳ ಕುರುಡುಪಾಠ ಹೇಳುತ್ತ ಅಂಗರಚನಾ ವಿಜ್ಞಾನ ಬೋಧಿಸುತ್ತಿದ್ದ.
  • ಇತರ ವಿಜ್ಞಾನಿಗಳು ತೀವ್ರ ವಿರೋಧವನ್ನು ವ್ಯಕ್ತಪಡಿಸಿ ವೆಸೇಲಿಯಸ್ ಪಾಡುವಾವನ್ನು ಬಿಟ್ಟು ಹೊರಟು ಹೋಗುವಂತೆ ಮಾಡಿದ್ದರು. ಇದಾದ ಸುಮಾರು ಐದಾರು ವರ್ಷಗಳ ತರುವಾಯ ವೆಸೇಲಿಯಸ್ಸನ ಗಾದಿ ಏರಿದ ಫ್ಯಾಲ್ಲೋಪಿಯಸ್ ಮೊದಲಿನವನ ವ್ಯಾಸಂಗಕ್ರಮವನ್ನೇ ಮುಂದು ವರಿಸಿ ಪ್ರಸಿದ್ಧಿ ಪಡೆದ. ಗ್ಯಾಲೆನ್ನನ ಗ್ರಂಥಗಳ ಕುರುಡುಪಾಠ ಮಾಡುವವರ ಅವಹೇಳನಗೈಯುವುದರಲ್ಲಿ ಫ್ಯಾಲ್ಲೋಪಿಯಸ್ ವೆಸೇಲಿಯಸ್ಸಿಗಿಂತ ಏನೂ ಕಡಿಮೆ ಇರಲಿಲ್ಲ. ಪ್ರಮುಖವಾಗಿ ಕಿವಿ ಮತ್ತು ಪ್ರಜನನಾಂಗಗಳಿಗೆ ಸಂಬಂಧಪಟ್ಟಂತೆ ಮೂಲವ್ಯಾಸಂಗಗಳನ್ನು ಮುಂದುವರಿಸುತ್ತ ಫ್ಯಾಲ್ಲೋಪಿಯಸ್ ಹನ್ನೊಂದು ವರ್ಷ ಪಾಡುವಾದಲ್ಲಿದ್ದು 1562 ಅಕ್ಟೋಬರ್ 9ರಂದು ಅಲ್ಲೆ ನಿಧನನಾದ.

ಸಾಧನೆಗಳು

[ಬದಲಾಯಿಸಿ]
  • ಕಿವಿಯೊಳಗಿರುವ ಕಾರ್ಡಟಿಂಪನಿ ನರ ಹಾಗೂ ಅರ್ಧವೃತ್ತನಾಳಗಳು (ಸೆಮಿಸಕುರ್ಯ್‌ಲರ್ ಕೆನಾಲ್ಸ್‌), ಟ್ರೈಜೆಮಿನಲ್, ಆಡಿಟರಿ ಮತ್ತು ಗ್ಲಾಸೋಫೆರಿನ್ಜಿಯಲ್ ನರಗಳು, ತಲೆಬುರುಡೆ ತಳದ ಸ್ಫೀನಾಯ್ಡ್‌ ಮೂಳೆಯ ಒಳಗಿರುವ ಡೊಗರು ಗರ್ಭಕೋಶನಾಳಗಳು, ಉದರದ ಒಳಗೆ ತೆರೆದುಕೊಳ್ಳುವ ದ್ವಾರಗಳು__ಇವುಗಳ ಇರುವಿಕೆಯನ್ನು ಫ್ಯಾಲ್ಲೋಪಿಯಸ್ ಸ್ಥಾಪಿಸಿದ. ಅಲ್ಲದೆ ಗರ್ಭಕೋಶನಾಳಗಳು (ಒವೇರಿಯನ್ ಟ್ಯೂಬ್ಸ್‌), ಯೋನಿ (ವೆಜೈನ), ಭಗಲಿಂಗ (ಕ್ಲೈಟೊರಿಸ್) ಜರಾಯು (ಪ್ಲಾಸೆಂಟ), ಒಳಕಿವಿಯ ಶಂಖಾಕಾರದ ಶ್ರವಣಭಾಗ (ಕಾಲ್ಲಿಯ) ಮುಂತಾದ ಅನೇಕ ದೇಹಭಾಗಗಳಿಗೆ ವೈಜ್ಞಾನಿಕ ಹೆಸರುಗಳನ್ನು ಕೊಟ್ಟ. ಭ್ರೂಣಧಮನಿಗಳು ಮತ್ತು ಮೂಳೆಗಳ ವಿನ್ಯಾಸವನ್ನು ಮೊತ್ತಮೊದಲಿಗೆ ವಿವರಿಸಿದ್ದು ಫ್ಯಾಲ್ಲೋಪಿಯಸ್ಸೇ.
  • ಅಂಗರಚನಾವಿಜ್ಞಾನಕ್ಕೆ ಇವನ ಈ ಕೊಡುಗೆಗಳಿಗಾಗಿ ಗರ್ಭಕೋಶ ನಾಳಗಳಿಗೆ ಫ್ಯಾಲ್ಲೋಪಿಯನ್ ಟ್ಯೂಬ್ಸ್‌ ಎಂದು ಹೆಸರಿಟ್ಟು ಮುಂದಿನ ಪೀಳಿಗೆಯವರು ಇವನನ್ನು ಗೌರವಿಸಿದ್ದಾರೆ. ಫ್ಯಾಲ್ಲೋಪಿಯಸ್ ಬರೀ ಅಂಗರಚನಾವಿಜ್ಞಾನಿ ಮಾತ್ರವಲ್ಲ. ಪಾಡುವಾ ದಲ್ಲಿ ಅವನು ಸಸ್ಯ ವಿಜ್ಞಾನಿಯೂ ಆಗಿದ್ದು ಆ ವಿಜ್ಞಾನಕ್ಕೆ ಸಂಬಂಧಪಟ್ಟ ಉದ್ಯಾನವನ್ನು ಉತ್ತಮ ಮಟ್ಟದಲ್ಲಿ ವೈಜ್ಞಾನಿಕವಾಗಿ ನಿರ್ಮಾಣ ಮಾಡಿಯೂ ಪ್ರಸಿದ್ಧಿ ಪಡೆದ.
  • ಇವನು ರಚಿಸಿದ ಅಬ್ಸರ್ವೇಷನ್ಸ್‌ ಅನಟಾಮಿಕೆ ಎಂಬ ಗ್ರಂಥ ಒಂದೇ ಇವನ ಜೀವಮಾನದ ಕಾಲದಲ್ಲಿ (1561) ಪ್ರಕಟಿಸಲ್ಪಟ್ಟು ಇವನಿಗೆ ಬಹು ಗೌರವವನ್ನೂ (ವೆಸೇಲಿಯಸ್ನಿಂದಲೂ) ಪ್ರಸಿದ್ಧಿಯನ್ನೂ ಗಳಿಸಿಕೊಟ್ಟಿತ್ತು. ಇವನ ಮರಣಾನಂತರ 1564ರಲ್ಲಿ ಪ್ರಚಾರಿತವಾದ ಡಿ ಮಾರ್ಬೋ ಗ್ಯಾಲ್ಲಿಕೊ ಎಂಬ ಗ್ರಂಥದಲ್ಲೂ ಇವನ ಲೇಖನ ಇದೆ. ಇದು ಮುಂದೆ ಪರಂಗಿ ರೋಗದ ವ್ಯಾಸಂಗಕ್ಕೆ ದಾರಿ ಮಾಡಿಕೊಟ್ಟಂತೆ ಕಾಣುತ್ತದೆ. 1584ರಲ್ಲಿ ಫ್ಯಾಲ್ಲೋಪಿಯಸ್ಸನ ಶಿಷ್ಯರು ಅವನ ಬರಹಗಳೆಂದು ಮೂರು ಸಂಪುಟಗಳನ್ನು ಪ್ರಕಟಿಸಿದರು. ಆದರೆ ಇವುಗಳಲ್ಲಿ ಎಷ್ಟು ಅಂಶ ನಿಜವಾಗಿ ಫ್ಯಾಲ್ಲೋಪಿಯಸ್ಸನದೇ ಎನ್ನುವುದು ಅನುಮಾನ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]