ಗೃಹಪದ್ಧತಿ
ಇಂಗ್ಲೆಂಡಿನ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿ ಚಟುವಟಿಕೆಗಳಿಗಾಗಿ ಇರುವ ಒಂದು ಸಾಮಾಜಿಕ ವ್ಯವಸ್ಥೆ (ದಿ ಹೌಸ್ ಸಿಸ್ಟಮ್). ಇದನ್ನು ಯುವಜನರ ಆವಶ್ಯಕತೆಗಳಿಗೆ ಹೊಂದಿಕೊಳ್ಳುವಂತೆ ನಿರ್ದಿಷ್ಟವಾಗಿ ಅಳವಡಿಸಲಾಗಿದೆ. ಇದರ ಉಪಯುಕ್ತತೆಯನ್ನತು ಇದನ್ನು ಇತರ ವಸತಿ ಪ್ರೌಢಶಾಲೆಗಳಲ್ಲೂ ಸಾಮಾನ್ಯ ಪ್ರೌಢಶಾಲೆಗಳಲ್ಲೂ ಅಳವಡಿಸಿಕೊಳ್ಳಲಾಗಿದೆ.
ವ್ಯವಸ್ಥೆ
[ಬದಲಾಯಿಸಿ]ಪಬ್ಲಿಕ್ ಶಾಲೆಯ ಪ್ರತಿ ವಿದ್ಯಾರ್ಥಿಯೂ ಎರಡು ಗುಂಪುಗಳ ಸದಸ್ಯನಾಗಿರುತ್ತಾನೆ. ಪಾಠಪ್ರವಚನಗಳು ನಡೆಯುವಾಗ ಆತ ತನ್ನ ತರಗತಿಗೆ ಸೇರಿರುತ್ತಾನೆ. ಪಾಠಪ್ರವಚನಗಳ ಅನಂತರ ಆತ ತನ್ನ ಗೃಹಕ್ಕೆ ಸೇರಿರುತ್ತಾನೆ. ಇಲ್ಲಿ ಗೃಹವೆಂದರೆ ವಿದ್ಯಾರ್ಥಿಯ ಸ್ವಂತ ಮನೆಯಲ್ಲ; ಶಾಲೆಯಲ್ಲಿ ಆತನ ಊಟೋಪಚಾರ, ಕ್ರೀಡೆ, ವ್ಯಾಸಂಗಾದಿಗಳಿಗಾಗಿ ಗೊತ್ತುಪಡಿಸಿದ ಜಾಗ, ಅಷ್ಟೆ. ಇಂಥ ಗೃಹದಲ್ಲಿ ಸಾಮಾನ್ಯವಾಗಿ ಐವತ್ತು ವಿದ್ಯಾರ್ಥಿಗಳಿರುತ್ತಾರೆ. ಶಾಲೆಯ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಒಂದು ಶಾಲೆಯಲ್ಲಿ ಐದೋ ಹತ್ತೋ ಹನ್ನೆರಡೋ ಗೃಹಗಳಿರಬಹುದು. ಪ್ರತಿಗೃಹದ ಮೇಲ್ವಿಚಾರಣೆಯನ್ನು ಒಬ್ಬ ಉಪಾಧ್ಯಾಯ ನೋಡಿಕೊಳ್ಳುತ್ತಾನೆ. ವಿದ್ಯಾರ್ಥಿ ಶಾಲೆಯ ಹೊರಗೆ ಹೇಗೆ ಕ್ರಮಬದ್ಧವಾದ ಜೀವನವನ್ನು ನಡೆಸಬೇಕೆಂಬ ವಿಷಯದಲ್ಲಿ ಈ ಗೃಹವ್ಯವಸ್ಥೆ ಮಾರ್ಗದರ್ಶನ ನೀಡುತ್ತದೆ. ಗೃಹಾಧಿಪತಿ ತನ್ನ ಕಿರಿಯ ಸ್ನೇಹಿತರಲ್ಲಿ ವೈಯಕ್ತಿಕವಾಗಿ ಆಸಕ್ತಿಯುಳ್ಳವನಾಗಿದ್ದು ಅವರಲ್ಲಿರುವ ಅತಿ ತೀವ್ರತರವಾದ ಸಾಂಘಿಕ ಶಕ್ತಿಗಳನ್ನು ಹೊರಹೊಮ್ಮಿಸಿ ಅವರ ಅನೇಕ ಸಾಮಾಜಿಕ ಚಟುವಟಿಕೆಗಳಿಗೆ ಬಹಿದಾರ್ವ್‌ರಗಳನ್ನು ಸೃಷ್ಟಿಸಿ ತನ್ಮೂಲಕ ಅವರನ್ನು ಒಂದು ಸ್ಥಿಮಿತಕ್ಕೆ ತರಲು ಪ್ರಯತ್ನಿಸುತ್ತಾನೆ. ಪ್ರತಿ ಗೃಹದಲ್ಲೂ ಸದಸ್ಯರ ಅನುಕೂಲಕ್ಕಾಗಿ ಆಟೋಟಗಳು, ವ್ಯಾಯಾಮ, ಸಂಗೀತ ಮತ್ತು ಚರ್ಚಾಕೂಟಗಳೇ ಆದಿಯಾಗಿ ಎಲ್ಲ ತರಹದ ಸಾಮಾಜಿಕ ಚಟುವಟಿಕೆಗಳಿಗೂ ಅವಕಾಶವಿದೆ. ಗೃಹಪದ್ಧತಿಯ ಮಾನಸಿಕ ಮೌಲ್ಯವನ್ನು ಕಂಡುಕೊಂಡು ಅಭಿವೃದ್ಧಿಪಡಿಸಿದವರಲ್ಲಿ ಥಾಮಸ್ ಆರ್ನಲ್ಡ್ ಮತ್ತು ಅವನ ಸಮಕಾಲೀನರು ಮುಖ್ಯರು.
ಗೃಹ ಗೃಹಗಳ ನಡುವೆ ಕಾಲಕಾಲಕ್ಕೆ ಸ್ಪರ್ಧೆಗಳು ಏರ್ಪಡುವುದರಿಂದ ವಿದ್ಯಾರ್ಥಿಗಳ ಪ್ರತಿಭೆಗೆ ಕೈಚಳಕಕ್ಕೆ ವ್ಯಾಸಂಗಕ್ಕೆ ಸದವಕಾಶ ಒದಗಿದಂತಾಗುತ್ತದೆ. ಅತಿ ಚತುರರೆನಿಸಿದ ವಿದ್ಯಾರ್ಥಿಗಳನ್ನೆಲ್ಲ ಒಂದೇ ಗೃಹಕ್ಕೆ ಸೇರಿಸುವ ಬದಲು ಅವರನ್ನು ಎಲ್ಲ ಗೃಹಗಳಿಗೂ ಸಮಾನವಾಗಿ ಹಂಚುತ್ತಾರಾಗಿ ಈ ವ್ಯವಸ್ಥೆ ಇನ್ನೂ ಚೆನ್ನಾಗಿ ಕೆಲಸ ಮಾಡಲು ಅವಕಾಶ ದೊರೆತಿದೆ.
ತನ್ನ ಒಟ್ಟಾರೆ ಕೀರ್ತಿಗೆ ಗಮನ ಕೊಡುವ ರೀತಿಯಲ್ಲಿ ಪ್ರತಿಯೊಂದು ಗೃಹವೂ ತನ್ನದೇ ಆದ ಪ್ರತಿಷ್ಠೆಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತದೆ. ಪಬ್ಲಿಕ್ ಶಾಲೆಗಳಲ್ಲಿ ಕ್ರೀಡೆಗಳಿಗೆ ಹೆಚ್ಚಿನ ಪ್ರಾಮುಖ್ಯವಿದೆಯಾಗಿ ಗೃಹಗಳು ತಮ್ಮ ತಮ್ಮಲ್ಲೇ ಸ್ಪರ್ಧಿಸುವಂತೆ ಕ್ರೀಡಾ ಚಟುವಟಿಕೆಗಳನ್ನು ಏರ್ಪಡಿಸಲಾಗುತ್ತದೆ. ನ್ಯಾಯನಿಷ್ಠೆ, ಒಳ್ಳೆಯ ನಡತೆ, ತನ್ನ ಗುಂಪಿನ ಅಭಿಮಾನ ಮುಂತಾದ ಉತ್ತಮ ಗುಣಗಳನ್ನು ವಿದ್ಯಾರ್ಥಿ ವೃದ್ಧಿಸಿ ಕೊಳ್ಳಲು ಇಲ್ಲಿ ಅವಕಾಶವಿದೆ.