ಗೂಳೂರು
ಗೂಳೂರು' ಗ್ರಾಮವು ತುಮಕೂರಿನಿಂದ ಸುಮಾರು ೬ ಕಿ.ಮೀ ದೂರದಲ್ಲಿದೆ. ಸುಮಾರು 10 ರಿಂದ 12 ಶತಮಾನದಲ್ಲಿ ಈ ಗ್ರಾಮದಲ್ಲಿ ಹಸುಗಳು, ಗೂಳಿಗಳು ಹೆಚ್ಚು ಇದ್ದ ಕಾರಣ ವೃಷಭಪುರಿ ಎಂದು ಕರೆಯುತ್ತಿದ್ದರು. ಗೂಳಿಬಾಚಿದೇವ ಎಂಬ ಸಾಮಂತ ರಾಜ ಈ ಪ್ರಾಂತ್ಯವನ್ನು ಆಳ್ವಿಕೆ ಮಾಡುತ್ತಿದ್ದ. ಗೂಳಿಗಳು ಹೆಚ್ಚು ಇದ್ದ ಕಾರಣ ಮತ್ತು ಗೂಳಿಬಾಚಿದೇವ ಆಳ್ವಿಕೆ ಮಾಡುತ್ತಿದ್ದ ಕಾರಣದಿಂದ ಈ ಗ್ರಾಮವನ್ನು ಗೂಳಿಯೂರು ಎಂದು ಕರೆಯಲು ಪ್ರಾರಂಭಿಸಿದರು. ಕಾಲ ಕ್ರಮೇಣ ಜನರ ಬಾಯಿಯಲ್ಲಿ ಗೂಳೂರು ಆಗಿ ಬದಲಾಯಿತು. ಈ ಗ್ರಾಮದಲ್ಲಿ ಬಹಳ ಸುಂದರವಾದ ಗೂಳೂರು ಗಣೇಶನ ದೇವಾಲಯವಿದೆ. ಇದು ವಿಶೇಷ ಮತ್ತು ಪ್ರಸಿದ್ಧವಾದ ದೇವಸ್ಥಾನ. ಪ್ರತಿ ವರ್ಷ ಇಲ್ಲಿ ಆಚರಿಸುವ ಗಣಪತಿ ಹಬ್ಬವು ನಾಡಿನಲ್ಲೆಲ್ಲ ಹೆಸರುವಾಸಿಯಾಗಿದೆ. ತುಮಕೂರಿನಿಂದ ಕುಣಿಗಲ್ ಕಡೆಗೆ ಹೋಗುವ ರಸ್ತೆಯಲ್ಲಿ ಸುಮಾರು ೬ ಕಿ.ಮೀ ಚಲಿಸಿದರೆ ಪ್ರಸಿದ್ದವಾದ ಗೂಳೂರು ಸಿಗುತ್ತದೆ.
ಇಲ್ಲಿ ಇರುವ ಗಣೇಶನ ವಿಗ್ರಹವು ಭೃಗು ಮಹರ್ಷಿಗಳಿಂದ ಪ್ರತಿಷ್ಟಾಪಿಸಲ್ಪಟ್ಟಿದೆ ಎಂದು ಪುರಾಣಗಳಲ್ಲಿ ಉಲ್ಲೇಖವಿದೆ. ಪುರಾಣಗಳ ಪ್ರಕಾರ ಭೃಗು ಮಹರ್ಷಿಗಳು ಕಾಶಿ ಯಾತ್ರೆಯ ನಡುವೆ ಕಾರ್ತಿಕ ಮಾಸದ ಶುಕ್ಲ ಪಕ್ಷದ ದೀಪಾವಳಿ ದಿನದಂದು ಈ ಗೂಳೂರಿನಲ್ಲಿ ಇದ್ದರಂತೆ. ಆ ದಿನ ಗಣೇಶನ ಪೂಜೆ ಮಾಡಲು ತಾವೆ ತಮ್ಮ ಕೈಯ್ಯಾರ ಗಣೇಶನನ್ನು ಮಾಡಿ ಪೂಜಿಸಿದರು. ನಂತರ ಸ್ಥಳೀಯರಿಗೆ ಭಾದ್ರಪದ ಮಾಸದ ಶುಕ್ಲ ಪಕ್ಷದ ಚೌತಿಯ ದಿನದಿಂದ ಗಣೇಶನನ್ನು ಇದೆ ಗ್ರಾಮದ ಕೆರೆಯಿಂದ ತಂದ ಮಣ್ಣಿನಲ್ಲಿ ತಯಾರಿಸಲು ಶುರು ಮಾಡಿ, ಕಾರ್ತಿಕ ಮಾಸದಲ್ಲಿ ಪೂಜೆ ಮಾಡಬೇಕು ಎಂದು ಹೇಳಿದರಂತೆ. ಆದ್ದರಿಂದ ಇಲ್ಲಿ ಭಾದ್ರಪದ ಮಾಸದ ಶುಕ್ಲ ಪಕ್ಷದ ಚೌತಿಯ ದಿನದಂದು ಗಣೇಶನನ್ನು ತಯಾರಿಸಲು ಆರಂಭಿಸಿ ದೀಪಾವಳಿಯ ವೇಳೆಗೆ ಮುಗಿಸುತ್ತಾರೆ. ಗಣೆಶನ ಎತ್ತರ ೯.೫ ಅಡಿ ಮತ್ತು ಅಗಲವೂ ಕೂಡ ೯.೫ ಅಡಿ. ದೀಪಾವಳಿ ಹಬ್ಬದಿಂದ ನಿತ್ಯ ಪೂಜೆ ನಡೆಯುತ್ತದೆ. ನಂತರ ಕಾರ್ತಿಕ ಮಾಸದ ಅಮಾವಾಸ್ಯೆಯ ನಂತರ ಬರುವ ಭಾನುವಾರದಂದು ಗಣೇಶನನ್ನು ವಿಸರ್ಜಿಸುತ್ತಾರೆ.
ಈ ಗ್ರಾಮದಲ್ಲಿ ಮತ್ತೊಂದು ಪುರಾಣ ಪ್ರಸಿದ್ಧ ಶೂಲದ ಆಂಜನೇಯ ದೇವಸ್ಥಾನ ಇದೆ. ಈ ಗ್ರಾಮದಲ್ಲಿ ಇದ್ದ ಭೂತಗಳ ಹಾವಳಿ ತಡೆಯಲು ವ್ಯಾಸರಾಯರು ಇಲ್ಲಿ ಹನುಮಂತರಾಯಸ್ವಾಮಿಯನ್ನು ಪ್ರತಿಸ್ಥಾಪಿಸಿದರು ಎಂಬ ಪ್ರತೀತಿ ಇದೆ. ಈ ದೇವಸ್ಥಾನದಲ್ಲಿ ತಪ್ಪು ಮಾಡಿದವರಿಗೆ ಶೂಲಕ್ಕೆ ಏರಿಸುವ ಶಿಕ್ಷೆ ನೀಡಲಾಗುತ್ತಿತ್ತು. ಈ ಕಾರಣಕ್ಕೆ ಶೂಲದ ಹನುಮಂತರಾಯ ಎಂಬ ಹೆಸರು ಬಂದಿದೆ.
ಈ ಗ್ರಾಮಕ್ಕೆ ಸೇರಿದ ಕಲ್ಲುಮಠ ಮತ್ತು ನಡಲುಮಠ ಎಂಬ ಎರಡು ಮಠಗಳು ಇದ್ದವು ಆದರೆ ಈಗ ಈ ಮಠಗಳು ಇಲ್ಲ. ದೇವಸ್ಥಾನ ಮಾತ್ರ ಇದೆ. ನಡಲುಮಠದಲ್ಲಿ ಉಮಾಮಹೇಶ್ವರ ದೇವಸ್ಥಾನ ಇದ್ದು. ಶಿವ ಪಾರ್ವತಿ ನಂದಿಯ ಮೇಲೆ ಕುಳಿತಿರುವ ವಿಗ್ರಹ ವಿಶ್ವದಲ್ಲಿಯೇ ಕಾಣ ಸಿಗುವುದಿಲ್ಲ. ಇದನ್ನು ಈ ದೇವಸ್ಥಾನದಲ್ಲಿ ಮಾತ್ರ ನೋಡಬಹುದು. ಕಲ್ಲುಮಠದಲ್ಲಿ ವೀರಭದ್ರೇಶ್ವರ ದೇವಸ್ಥಾನ ಇದ್ದು, 10 ಅಡಿ ಎತ್ತರದ ವಿಗ್ರಹ ಇಲ್ಲಿ ಕಾಣಬಹುದು.
ಸಾಮಂತ ರಾಜನ ರಾಜಧಾನಿಯಾಗಿದ್ದ ಈ ಗ್ರಾಮ 100 ದೇವಸ್ಥಾನಗಳು ಇದ್ದ ಪುಣ್ಯಸ್ಥಳವಾಗಿತ್ತು. ವ್ಯಾಪಾರ ವಹಿವಾಟು ಮಾಡುವ ಕೇಂದ್ರವು ಆಗಿತ್ತು. ಎಲ್ಲಾ ಜಾತಿ ಜನಾಂಗದ ಜನರು ವಾಸ ಮಾಡುತ್ತಿದ್ದರು. ಶ್ರೀಮಂತರು ಹೆಚ್ಚು ಇದ್ದ ಈ ಗ್ರಾಮಕ್ಕೆ ಸನ್ಯಾಸಿ ಒಬ್ಬರು ಭಿಕ್ಷೆಗೆ ಬಂದಾಗ ಇಲ್ಲಿನ ಜನರು ದುರಂಕಾರದಿಂದ ನಡೆದುಕೊಂಡು ಭಿಕ್ಷೆ ನೀಡದೆ ಅವಮಾನಿಸಿದಕ್ಕಾಗಿ ಕೋಪಕೊಂಡು ಗೂಳಿಯೂರು ಹಾಳಾಗಲಿ ಎಂದು ಶಾಪ ನೀಡಿದರಂತೆ. ಆ ಶಾಪದಂತೆ ಕಾಲ ಕ್ರಮೇಣ ಈ ಗ್ರಾಮ ತನ್ನ ವೈಭವ ಕಳೆದುಕೊಂಡಿತು. ಭೀಕರ ಕಾಯಿಲೆಗಳಿಂದ ಜನರು ಗ್ರಾಮವನ್ನು ಬಿಟ್ಟರು ಮತ್ತು ಗ್ರಾಮದ ಮಧ್ಯದಲ್ಲಿ ನಡಲುಮಠದ ಸುತ್ತ ವಾಸವಾಗಿದ್ದವರು, ಉತ್ತರ ದಿಕ್ಕಿನ ಕಡೆ ಗ್ರಾಮದ ಪ್ರವೇಶದ್ವಾರದ ಭಾಗದಲ್ಲಿ ನೆಲೆಸಿದರು. ನಡಲುಮಠದ ಸುತ್ತ ಜನರು ಇಲ್ಲದೆ ಆ ಪ್ರದೇಶ ಕೃಷಿ ಮಾಡುವ ಪ್ರದೇಶವಾಗಿ ಬದಲಾಯಿತು ಎಂಬ ಕಥೆ ಇದೆ.
ಹತ್ತಿರದ ಐತಿಹಾಸಿಕ ಪುಣ್ಯಸ್ಥಳಗಳು: 1. ಕೈದಾಳ, 2.ಅರೆಯೂರು ಶ್ರೀ ವೈದ್ಯನಾಥೇಶ್ವರ ಸ್ವಾಮಿ