ಗುರು ಬಸದಿ, ಮೂಡುಬಿದಿರೆ
ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿಯನ್ನು ಗುರು ಬಸದಿ ಎಂದು ಕರೆಯುತ್ತಾರೆ. ಈ ಜೈನ ಬಸದಿಯು ಅತ್ಯಂತ ಪ್ರಾಚೀನ ಜಿನಾಲಯಗಳಲ್ಲೊಂದು. ಇದು ಜೈನಕಾಶಿ ಮೂಡುಬಿದಿರೆಯ ಹದಿನೆಂಟು ಬಸದಿಗಳಲ್ಲಿ ಹಳೆಯ ಬಸದಿಯಾಗಿದೆ.[೧]
ಇತಿಹಾಸ
[ಬದಲಾಯಿಸಿ]ಈ ಪ್ರದೇಶವು ಅನೇಕ ವಷಗಳ ಹಿಂದೆ ಬಿದಿರಿನಿಂದ ಆವೃತ್ತವಾದ ಪ್ರದೇಶವಾಗಿತ್ತು. ಒಂದು ಬಾರಿ ಶ್ರವಣಬೆಳಗೊಳದಿಂದ ಬಂದ ದಿಗಂಬರ ಮುನಿಯೋರ್ವರು, ಈ ಪ್ರದೇಶದ ಬಿದಿರ ಮೆಳೆಯನ್ನು ಸರಿಸಿ ಭೂಮಿ ಅಗೆದಾಗ ೧೨ ಅಡಿಯ ಕೃಷ್ಣ ಶಿಲೆಯ ಚಂಡೋಗ್ರ ಪಾರ್ಶ್ವನಾಥ ಸ್ವಾಮಿಯ ಸುಂದರ ಮೂರ್ತಿಯೊಂದು ಕಂಡು ಬಂತು. ನಂತರ ಇಲ್ಲಿ ಬಸದಿಯನ್ನು ನಿರ್ಮಿಸಲಾಯಿತು ಎಂದು ಹೇಳಲಾಗುತ್ತದೆ. ೧೪ನೇ ಶತಮಾನದ ಚೋಳಶೆಟ್ಟಿ ಎಂಬ ವ್ಯಾಪಾರಿ ರತ್ನ ಚಿತ್ತಾರಗಳಿಂದ ಅಲಂಕೃತವಾದ ಕಲ್ಲಿನ ಮಂಟಪವನ್ನು ಇಲ್ಲಿಗೆ ಕೊಡುಗೆ ನೀಡುತ್ತಾನೆ.
ವಾಸ್ಟುಶಿಲ್ಪ
[ಬದಲಾಯಿಸಿ]ಈ ಬಸದಿಯಲ್ಲಿ ಒಟ್ಟು ಆರು ಮಂಟಪಗಳಿವೆ. ಮಾನಸ್ತಂಭದಿಂದ ಪ್ರವೇಶದ್ವಾರ, ಕಲ್ಲಿನ ಚಂದ್ರ ಶಾಲೆ (ಗೋಪುರ), ಗದ್ದುಗೆ ಮಂಟಪವನ್ನು ಪ್ರವೇಶಿಸಿ ಮುಂದುವರಿದಾಗ ತೀರ್ಥಂಕರರ ಮಂಟಪವಿದ್ದು, ಅದನ್ನು ದಾಟಿ ಮುಂದುವರೆದಾಗ ರಸಭಾವಿ, ನಿತ್ಯ ಅಭಿಷೇಕ ಮಂಟಪ, ಕಲಶ ಮಂಟಪವಿದೆ. ಗುರು ಬಸದಿಯಲ್ಲಿ ಸುಮಾರು ೭ನೇ ಶತಮಾನದಲ್ಲಿ ಮೂರ್ತಿ ನಿರ್ಮಾಣದ ಉಲ್ಲೇಖವಿದೆ. ಕಂಬಗಳಲ್ಲಿ ಶಿಲಾ ಶಾಸನಗಳಿದ್ದು. ಸಾವಿರ ಕಂಬದ ಬಸದಿಯನ್ನು ಹೊರತು ಪಡಿಸಿ ಅತೀ ಹೆಚ್ಚು ಶಿಲಾ ಶಾಸನಗಳಿರುವುದು ಇಲ್ಲಿಯೇ ಎನ್ನುವುದು ವಿಶೇಷ.
ಆರಾಧನೆ
[ಬದಲಾಯಿಸಿ]ಇಲ್ಲಿ ಆರಾಧಿಸುವ ಭಗವಂತನು ಪಶ್ಚಿಮಾಭಿಮುಖವಾಗಿದ್ದು, ಎಡಭಾಗದಲ್ಲಿ ೨೪ ತೀರ್ಥಂಕರರ ಕೃಷ್ಣ ಶಿಲೆಯ ೩ ಅಡಿಯ ಮೂರ್ತಿಗಳಿವೆ. ಇದರೊಂದಿಗೆ ಸರಸ್ವತಿ, ಪದ್ಮಾವತಿ ದೇವಿಯ ಕುಳಿತ ಭಂಗಿಗಳ ವಿಶಿಷ್ಟ ಶಿಲ್ಪದ ಮೂರ್ತಿಗಳಿವೆ. ಗಂಧಕುಟಿಯಲ್ಲಿ ಸರಸ್ವತಿ, ೨೪ ತೀರ್ಥಂಕರರು, ಗಣಧರ ಪಾದುಕೆ, ಗುರುಗಳ ಪಾದುಕೆ ಪ್ರತಿದಿನ ಪೂಜಿಸಲ್ಪಡುತ್ತವೆ.
ಶಿಲ್ಪಕಲೆ
[ಬದಲಾಯಿಸಿ]ಗುರು ಬಸದಿಯ ಪಶ್ಚಿಮದ ಮುಖ್ಯದ್ವಾರದ ಇಕ್ಕೆಲಗಳಲ್ಲಿ ಇಬ್ಬರು ದ್ವಾರ ಪಾಲಕರ ಔಷಧೀಯ ಸಸ್ಯಗಳಿಂದ ತಯಾರಿಸಿದ ಬಣ್ಣದ ಚಿತ್ರಿಕೆಗಳು ಇವೆ. ಪ್ರವೇಶದ್ವಾರದ ಮಂಟಪದಲ್ಲಿ ಅನೇಕ ದೇವರುಗಳ, ಜೈನ ಪುರಾಣ, ರಾಮಾಯಣಕ್ಕೆ ಸಂಬಂಧಿಸಿದ ಶಿಲ್ಪ ಚಿತ್ರಿಕೆಗಳು ಇವೆ. ಶಾರದೂಲ, ಸಿಂಹ, ಅಲಂಕೃತ ಆನೆ, ಹಂಸ, ನವಿಲು, ನೃತ್ಉಗಾರರು, ಪಶುಪಕ್ಷಿ,ಹಂಸ ಮುಂತಾದ ಕಲಾಕೃತಿಗಳೂ ಇವೆ.