ವಿಷಯಕ್ಕೆ ಹೋಗು

ಗುಡಿಬಂಡೆ ರಾಮಾಚಾರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗುಡಿಬಂಡೆ ಬಿ. ಎಸ್.ರಾಮಾಚಾರ್
Bornಸೆಪ್ಟೆಂಬರ್ ೧೪, ೧೯೧೭
ಚಿಕ್ಕಬಳ್ಳಾಪುರಯ ಜಿಲ್ಲೆಯ ಗುಡಿಬಂಡೆ
Diedಡಿಸೆಂಬರ್ ೧೧, ೨೦೧೦
Known forಸುಗಮ ಸಂಗೀತ, ಲಾವಣಿ, ತತ್ವಪದ ಗಾಯನ, ಕಾವ್ಯವಾಚನ

ಗುಡಿಬಂಡೆ ರಾಮಾಚಾರ್ (ಸೆಪ್ಟೆಂಬರ್ ೧೪, ೧೯೧೭ - ಡಿಸೆಂಬರ್ ೧೧, ೨೦೧೦) ಊರಿಂದೂರಿಗೆ ತಿರುಗುತ್ತ ಜನರಲ್ಲಿ ಹಾಡಿನ ಮೂಲಕ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ಸುಗಮ ಸಂಗೀತ, ಲಾವಣಿ, ತತ್ತ್ವಪದ ಗಾಯಕರಾಗಿ ಮತ್ತು ಗಮಕಿಗಳಾಗಿ ಪ್ರಸಿದ್ಧಿ ಪಡೆದಿದ್ದಾರೆ.

ರಾಮಾಚಾರ್ಯರು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ(ತಾಲೂಕು ಕೇಂದ್ರ)ಯಲ್ಲಿ ಸೆಪ್ಟೆಂಬರ್ ೧೪, ೧೯೧೭ರಂದು ಜನಿಸಿದರು. ತಂದೆ ಶ್ರೀನಿವಾಸಾಚಾರ್ಯರು ಮತ್ತು ತಾಯಿ ಸೀತಮ್ಮನವರು. ಅವರದ್ದು ವೈದಿಕ ಹಾಗೂ ಕಲಾವಿದರ ಮನೆತನ. ಮುತ್ತಾತ ಕಂದಾಳ ವೆಂಕಟಾಚಾರ್ಯರು ಸಂಸ್ಕೃತ ಪಂಡಿತರಾಗಿದ್ದರು. ತಂದೆ-ತಾಯಿ ಅಜ್ಜಿ ಎಲ್ಲರೂ ಸುಶ್ರಾವ್ಯವಾಗಿ ದೇವರನಾಮಗಳನ್ನು ಹಾಡುತ್ತಿದ್ದರು.

ಸಂಗೀತ ವಿದ್ವಾಂಸ ವೆಂಕೋಬಾಚಾರ್ಯರಲ್ಲಿ ಸಂಗೀತದ ಪ್ರಥಮ ಪಾಠ ಪಡೆದ ರಾಮಾಚಾರ್ಯರು ಬೆಳಕವಾಡಿ ಶ್ರೀನಿವಾಸ ಅಯ್ಯಂಗಾರ್ಯರಲ್ಲಿ ಉನ್ನತ ಸಂಗೀತ ಶಿಕ್ಷಣ ಪಡೆದರು. ವ್ಯವಸಾಯ ಕ್ಷೇತ್ರದಲ್ಲಿ ಕೃಷಿ ವಿಜ್ಞಾನದ ಪದವಿ ಪಡೆದಿದ್ದರೂ ಇವರು ಮಾಡಿದ್ದು ಗಾಯನ ಕ್ಷೇತ್ರದಲ್ಲಿನ ಕೃಷಿ.

ಅಪ್ರತಿಮ ಗಾನ ಸಾಧನೆ

[ಬದಲಾಯಿಸಿ]

ಕನ್ನಡ ಭಾವಗೀತೆ, ಜನಪದಗೀತೆ, ಲಾವಣಿ, ರಗಳೆ, ಕಾವ್ಯ ವಾಚನ ಕ್ಷೇತ್ರಗಳನ್ನು ಇವರು ಪೋಷಿಸಿ ಬೆಳೆಸಿದರು. ೧೯೩೮ರಲ್ಲಿ ರಾಷ್ಟ್ರಕವಿ ಕುವೆಂಪುರವರ ’ದೋಣಿ ಸಾಗಲಿ’ ಕವನದೊಂದಿಗೆ ಇವರ ಕಾರ್ಯಕ್ರಮ ಆರಂಭಗೊಂಡಿತು. ಅಲ್ಲಿಂದ ಇವರು ಹಿಂದಿರುಗಿ ನೋಡಿದವರಲ್ಲ. ಒಮ್ಮೆ ದ. ರಾ. ಬೇಂದ್ರೆಯವರು ಚಿತ್ರದುರ್ಗಕ್ಕೆ ಬಂದಿದ್ದಾಗ ಅಲ್ಲಿ ಪ್ರಾರ್ಥನೆ ಮಾಡಿದ ರಾಮಾಚಾರ್ಯರ ಕಂಠ ಮಾಧುರ್ಯಕ್ಕೆ ಮನಸೋತು ಕನ್ನಡ ಗೀತೆಗಳನ್ನು ಹಾಡಲು ಪ್ರೇರೇಪಿಸಿದರು. ಸಿದ್ಧವನಹಳ್ಳಿ ಕೃಷ್ಣಶರ್ಮರೂ ಒತ್ತಾಸೆ ನೀಡಿದರು. ಇದರ ಜೊತೆಗೆ ಭಾರತದ ಬಿಂದೂರಾಯರು, ಕೃಷ್ಣಗಿರಿ ಕೃಷ್ಣರಾಯರು ಹಾಗೂ ಕಳಲೆ ಸಂಪತ್ಕುಮಾರಾಚಾರ್ಯರ ಗಮಕ ವಾಚನದ ಪ್ರಭಾವ ಇವರ ಮೇಲೆ ಸಾಕಷ್ಟು ಪ್ರಭಾವ ಬೀರಿ ಕಾವ್ಯಗಾಯನದ ಕಡೆಯೂ ಒಲವು ಮೂಡಿತು.

ರಾಮಾಚಾರ್ಯರು ಬಿಜಾಪುರದ ತೋರವೇ ನರಸಿಂಹನಗುಡಿ, ಧರ್ಮಸ್ಥಳದ ಸರ್ವಧರ್ಮ ಸಮ್ಮೇಳನದಲ್ಲಿ “ಇಳಿದುಬಾ ತಾಯೆ….” ಹಾಡಿದಾಗ ಕಾಕತಾಳೀಯವೆಂಬಂತೆ ಮಳೆ ಸುರಿಯಿತು. ಹೀಗಾಗಿ ಅವರಿಗೆ ‘ಋಷ್ಯಶೃಂಗ’ರೆಂಬ ಬಿರುದು ಪ್ರಾಪ್ತವಾಯಿತು. ರಾಮಾಚಾರ್ಯರು ಊರೂರು ಸುತ್ತಿ ಸ್ವಾತಂತ್ರ್ಯದ ಗೀತೆ, ಲಾವಣಿ, ತತ್ವಪದ ಹಾಡುವುದರ ಜೊತೆಗೆ ಪಿಟೀಲು, ಮ್ಯಾಂಡೊಲಿನ್‌ ವಾದನಗಳಲ್ಲೂ ಪರಿಣಿತರಾಗಿದ್ದರು. ಸರಕಾರದ ಪ್ರಚಾರ ಇಲಾಖೆ ವತಿಯಿಂದ ಕುಟುಂಬಯೋಜನೆ, ಉಳಿತಾಯ ಯೋಜನೆಗಾಗಿ ಪ್ರಚಾರ ಗೀತೆಗಳನ್ನೂ ಹಾಡಿದರು. ಮನೆಮನೆಯಲ್ಲೂ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟದ್ದುಂಟು. ಕಾಸರಗೋಡಿನ ಕಕ್ಕಿಲಾಯರ ಮನೆ, ಅಮೆರಿಕನ್ ಎಂಬೆಸಿ (ಮುಂಬಯಿ), ಪುಣೆಯ ಓಣಂ ಸಂದರ್ಭ, ಕೋಲ್ಕತ್ತದ ಗೌಡೀಯ ಮಠ, ಸಂಗೀತ ನಿರ್ದೇಶಕರಾದ ಪಂಕಜ್‌ ಮಲ್ಲಿಕ್‌, ಭೂಪೇನ್ ಹಜಾರಿಕಾ ಅವರುಗಳ ಮುಂದೆ ಹಾಡಿದ ಬಂಗಾಳಿ ಗೀತೆ ಅವರನ್ನು ಪ್ರಸಿದ್ಧಿಪಡಿಸಿದ್ದವು. ಬಿಸ್ರಾ ಹೆಸರಿನಲ್ಲಿ ಕೊರವಂಜಿ ಹಾಸ್ಯ ಪತ್ರಿಕೆಗೆ ಅನೇಕ ಅಣಕು ಹಾಡುಗಳನ್ನು ಬರೆಯುತ್ತಿದ್ದರು.

ಪುಂಖಾನು ಪುಂಖವಾಗಿ ಕನ್ನಡ ಗೀತೆಗಳು, ಲಾವಣಿಗಳು ರಾಮಾಚಾರ್ಯರ ಕಂಠಶ್ರೀಯಿಂದ ಹೊರಬಂತು. ವರಕವಿ ಬೇಂದ್ರೆಯವರ ಗಂಗಾವತರಣ, ಹರಿಹರನ ಗುಂಡಯ್ಯನ ರಗಳೆ, ಪು.ತಿ.ನ. ಅವರ ‘ಗೋಕುಲ ನಿರ್ಗಮನ’ ರಾಮಾಚಾರ್ಯರ ಅಚ್ಚುಮೆಚ್ಚಿನ ಗೀತೆಗಳು. ತಾವೇ ಸೃಜಿಸಿದ ಮ್ಯಾಂಡೊಲಿನ್ ವಾದ್ಯದಲ್ಲಿ ಹಲವಾರು ವಾದ್ಯಗಳ ನಾದ ತುಂಬಿದ್ದರು. ಆಡು ಮುಟ್ಟದ ಸೊಪ್ಪಿಲ್ಲ – ಆಕಳು ತುಳಿಯದ ಹಾದಿಯಿಲ್ಲ ಎಂಬ ಮಾತು ರಾಮಾಚಾರ್ಯರಿಗೆ ಅನ್ವರ್ಥ. ಇವರು ಹಾಡದ ವೇದಿಕೆಯಿಲ್ಲ ಕೇಳದ ಶ್ರೋತೃಗಳಿಲ್ಲ. ನಾಲ್ಕು ದಶಕಗಳಿಗೂ ಹೆಚ್ಚು ಸುದೀರ್ಘ ಕಾಲ ಧರ್ಮಸ್ಥಳದ ಸರ್ವಧರ್ಮ ಸಮ್ಮೇಳನಕ್ಕೆ ಇವರದ್ದೇ ಪ್ರಾರ್ಥನಾ ಗೀತೆ.

ಪ್ರಶಸ್ತಿ ಗೌರವಗಳು

[ಬದಲಾಯಿಸಿ]

ರಾಮಾಚಾರ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ, ೨೦೦೧-೦೨ ರ ಸಾಲಿನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಸಂದಿತ್ತು ಕೈವಾರದಲ್ಲಿ ನಡೆದ ಜಿಲ್ಲಾ ಮಟ್ಟದ ಗಮಕ ಸಮ್ಮೇಳನದ ಅಧ್ಯಕ್ಷತೆಯ ಗೌರವ ರಾಮಾಚಾರ್ ಅವರನ್ನರಸಿ ಬಂದಿತ್ತು. ಕರ್ನಾಟಕ ಗಾನ ಕಲಾ ಪರಿಷತ್ತಿನ ಸಂಗೀತ ವಿದ್ವಾಂಸರ ಸಮ್ಮೇಳನದ ವಿದ್ವತ್ಗೋಷ್ಠಿಯಲ್ಲಿ ಸನ್ಮಾನ ಸಂದಿತು. ಗಮಕ ಕಲಾ ಸೇವೆಗೂ ಅಕಾಡೆಮಿ ಗೌರವ ಪ್ರಾಪ್ತವಾಯಿತು.

ವಿದಾಯ

[ಬದಲಾಯಿಸಿ]

ಈ ಮಹಾನ್ ಸಾಧಕರು ಡಿಸೆಂಬರ್ ೧೧, ೨೦೧೦ರಂದು ಈ ಲೋಕವನ್ನಗಲಿದರು.

ಮಾಹಿತಿ ಕೃಪೆ

[ಬದಲಾಯಿಸಿ]

ಕಣಜ Archived 2014-04-03 ವೇಬ್ಯಾಕ್ ಮೆಷಿನ್ ನಲ್ಲಿ.