ವಿಷಯಕ್ಕೆ ಹೋಗು

ಗುಡಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಗುಡಾರಗಳು, ಹಗ್ಗ, ದಪ್ಪ ಬಟ್ಟೆಗಳಿಂದ ಕಟ್ಟಿ ನಿಲ್ಲಿಸಬಹುದಾದ ಮತ್ತು ಸ್ಥಳದಿಂದ ಸ್ಥಳಕ್ಕೆ ಒಯ್ಯಬಹುದಾದ ಹಂಗಾಮಿ ತಂಗುಸಾಧನ. ಡೇರೆ ಎಂದೂ ಕರೆವುದಿದೆ (ಟೆಂಟ್). ಗುಡಾರದ ಮೂಲವನ್ನು ಪ್ರಾಚೀನ ಕಾಲದಿಂದಲೂ ಮಾನವ ಬುಡಕಟ್ಟುಗಳು ನಿರ್ಮಿಸಿಕೊಳ್ಳುತ್ತ ಉಪಯೋಗಿಸುತ್ತ ಬಂದಿರುವ ಗಾಳಿತಡೆ, ನೆರಳುಮರೆ ಮುಂತಾದವುಗಳಲ್ಲಿ ಕಾಣುತ್ತೇವೆ. ಗಾಳಿತಡೆಗಳು ಹಂಬುರೆಂಬೆಗಳಿಂದ ಸುಲಭವಾಗಿಯೂ ಕ್ಷಿಪ್ರವಾಗಿಯೂ ಎಬ್ಬಿಸಬಲ್ಲಂಥವು. ಇವುಗಳ ಚಾವಣಿಗಳು ಒಪ್ಪಾರವಾಗೂ (ಚಿತ್ರ 1) ಇಪ್ಪಾರವಾಗೂ (ಚಿತ್ರ 2) ಇರುತ್ತವೆ. ಇಪ್ಪಾರವನ್ನು ಕವೆಕೋಲುಗಳಿಂದ ಭದ್ರಗೊಳಿಸಿದರೆ (ಚಿತ್ರ 3) ಮರೆಯೂ ನೆರಳೂ ಹೆಚ್ಚಾಗುತ್ತವೆಂದು ಹೇಳಬೇಕಾಗಿಲ್ಲ. ಹೆಣೆದ ಗರಿಗಳನ್ನು ಚಾವಣಿಗಳ ಮುಚ್ಚಾಗಿ ಬಳಸುವುದು ವಾಡಿಕೆಯಾಗಿದೆ. ಲ್ಯಾಪ್ಲೆಂಡಿನ ಗುಡಿಸಲುಗಳ ದೂಲಗಳ ಮಧ್ಯೆ ಎರೆಮಣ್ಣನ್ನು ಮೆತ್ತಿ ಬಿರುಕಿಲ್ಲದಂತೆ ಮಾಡಿರುತ್ತಾರೆ (ಚಿತ್ರ 4) ಬೆತ್ತದಂಥ ಸಣ್ಣರೆಂಬೆಗಳಿಂದ ಕಟ್ಟಿದ ಗುಡಿಸಲು ತೆರನ ಬಿಡಾರ (ಚಿತ್ರ 5) ಬ್ರಿಟನ್ನಿನ ವಸಾಹತುಗಳಲ್ಲಿ ಇರುತ್ತಿತ್ತು. ಬೆತ್ತ ಅಥವಾ ಬಿದಿರು ದೆಬ್ಬೆಗಳನ್ನು ಕಮಾನಾಗಿ ಬಗ್ಗಿಸಿ, ಎರಡು ಕೊನೆಯನ್ನೂ ನೆಲದೊಳಕ್ಕೆ ಹುದುಗಿಸಿ ಇಟ್ಟು, ಮೇಲೆ ನೀರು ತೂರದ ಮೇಣಗಬಟವನ್ನೊ ರಟ್ಟುಬಟ್ಟೆಯನ್ನೊ ಹೊದಿಸಿ, ಅದರ ಅಂಚುಗಳನ್ನು ದಪ್ಪ ಕಲ್ಲುಗಳ ಮೂಲಕ ನೆಲಕ್ಕೆ ಗುತ್ತಾಗಿ ಹೊಂದಿಸಿಟ್ಟು, ಕಂದಾರೆಯವರೂ ಜಿಪ್ಸಿಗಳೂ ಗಂಗೆಯ ಮಕ್ಕಳೂ ಗುಡಾರ ಮಾಡಿಕೊಳ್ಳುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ (ಚಿತ್ರ 6). ಎಸ್ಕಿಮೊ ಜನರದ್ದು ಇನ್ನೂ ಸರಳವಾದ ಉಪಾಯ. ಕೋಲನ್ನು ನಿಲ್ಲಿಸಿ ಹಗ್ಗವನ್ನು ಎಳೆದು ಚಾವಣಿಯ ಏಣು ಮಾಡಿ, ಅಗಲ ಚಕ್ಕಳವನ್ನು ಮೇಲಿನಿಂದ ಇಕ್ಕಡೆಗೂ ಇಳಿ ಬೀಳಿಸಿ, ಅಂಚಿನ ಮೇಲೆ ಭಾರದ ಕಲ್ಲುಗಳನ್ನಿಟ್ಟು ಮರೆ ಮಾಡಿಕೊಳ್ಳುತ್ತಾರೆ (ಚಿತ್ರ 7).


ಏಷ್ಯಖಂಡದ ಪಶ್ಚಿಮ ಉತ್ತರ ಮಧ್ಯೆ ಭಾಗಗಳಲ್ಲಿ ಹಲವು ತಾಂಡ್ಯಗಳು ಅನಿವಾರ್ಯವಾಗಿ ಬೀಡು ಬದಲಾಯಿಸುತ್ತ ಬದುಕಬೇಕಾಗುತ್ತಿತ್ತು. ಏತಕ್ಕೆಂದರೆ ಋತುಧರ್ಮದ ಪರಿಣಾಮವಾಗಿ ನೀರಿನ ಕೊರತೆ, ಮೇವು ಹುಲ್ಲು ಮೈದಾನ ಅಭಾವ, ಅತಿಉಷ್ಣ, ಅತಿಶೀತ, ಮೊದಲಾದುವನ್ನು ಅವರು ಎದುರಿಸಿ ಗೆಲ್ಲಬೇಕಾಗುತ್ತಿತ್ತು. ಚಿರಕಾಲದ ಅನುಭವದಿಂದ ಅವರು ಬಿಡಾರ ನಿರ್ಮಾಣದಲ್ಲಿ ನಿಪುಣರಾಗಿದ್ದಾರೆ. ಅರೇಬಿಯದ ಚರಜೀವಿಗಳ ಕುಟುಂಬ ವಸತಿಯ ಉದ್ದ 6.1ರಿಂದ 7.6 ಮೀ ಕೆಲವು ಕಡೆ 12.2ಮೀ ನಷ್ಟು ಉದ್ದವೂ ಉಂಟು. ಅವುಗಳ ಆ ಪಕ್ಕ ಈ ಪಕ್ಕದಲ್ಲಿ ಮೂರು ಮೂರು ನಿಲುಕಂಬಗಳೂ ನಡುಭಾಗದಲ್ಲಿ ಮೂರು ಹೆಚ್ಚು ಎತ್ತರದ ಕಂಬಗಳೂ ಇರುತ್ತವೆ. ಅವುಗಳ ನೆತ್ತಿಯಲ್ಲಿ ಅಡ್ಡ ತೊಲೆಗಳ ಹಾಸೊಂದುಂಟು. ನಡುವಣ ಎತ್ತರ 2.1ಮೀ ಪಾಶರ್ವ್‌ ಗೋಡೆಗಳ ಎತ್ತರ 1.5 ಮೀ ಕಡಿಮೆ ಇರುವುದಿಲ್ಲ. ಏಣಿನಿಂದ ಆ ಕಡೆಗೂ ಈ ಕಡೆಗೂ ಬಿಗಿಯಿಂದ ಇಳಿಯುವ ಕಪ್ಪು ಉಣ್ಣೆಯ ಫೆಲ್ಟು ಬಟ್ಟೆಯೇ ಮೇಲುಚಾವಣಿ; ಕೆಲವೊಮ್ಮೆ ಹೊರಗಡೆಗೆ ಬಿಳಿಯ ಪಟ್ಟೆಗಳನ್ನು ಬಳಿದಿರುವುದುಂಟು. ಪಕ್ಕದ ಗೋಡೆಗಳೂ ಫೆಲ್ಟು ಬಟ್ಟೆಯಿಂದ ಆದವು; ಅವನ್ನು ಬೇಕಾದಾಗ ಎತ್ತಿ ಕಟ್ಟಬಹುದು (ಚಿತ್ರ 8). ಬಾಗಿಲಿನ ಅವಕಾಶ ಇರುವುದು ಅಪೂರ್ವ. ಗುಡಾರದ ಒಳಗಡೆ ಎರಡು ಭಾಗ; ಹಿಂಬದಿಯದು ಅಡುಗೆ ಮನೆ, ಮಹಿಳಾವಿಲಾಸ. ಮುಂಬದಿಯದು ಪುರುಷರದ್ದು.


ಮಂಗೋಲಿಯದ ಕಿರ್ಗೀಸರ ಗರ್ ಅಥವಾ ಯೂರ್ಚ್ ಇನ್ನೂ ಅಚ್ಚು ಕಟ್ಟಾದ ಹೆಚ್ಚು ಸೌಕರ್ಯವುಳ್ಳ ಗೃಹರಚನೆ. ಕುಕ್ಕೆ ಕಡ್ಡಿ ಅಥವಾ ವಿಲೊ ಎಂಬ ಬಗೆಯ ಮೆತುಕಡ್ಡಿಗಳಿಂದ ಹೆಣೆದು ಮಾಡಿದ ಭಾಗಗಳನ್ನು ವರ್ತಳಾಕಾರವಾಗಿ ಜೋಡಿಸಿ, ಬಾಗಿಲು ಮತ್ತು ಬಾಗಿಲುವಾಡದೊಡನೆ ನೆಲದ ಮೇಲೆ ಇಡುತ್ತಾರೆ. ಮೇಲೆ ಎರಡು ಸಾಲು ಗಟ್ಟಿ ಕಡ್ಡಿಗಳನ್ನು ಇರಿಸಿ ಶಿಖರದ ಲೋಹದುಂಗುರಕ್ಕೆ ಬಿಗಿಯುತ್ತಾರೆ. ಹೀಗೆ ಒಂದು ದೈತ್ಯ ಮಂಕರಿ ಸಿದ್ಧವಾಗುತ್ತದೆ (ಚಿತ್ರ 9). ತರುವಾಯ ದಪ್ಪ ಫೆಲ್ಟು ಬಟ್ಟೆಯ ಉದ್ದಗಲದ ಹೊದಿಕೆಗಳನ್ನು ಸಮನಾಗಿ ಹೊಂದಿಸಿ, ಹಗ್ಗಗಳಿಂದ ಬಿಗಿದು ಕಟ್ಟಿ ಡೇರೆ ಮನೆಯನ್ನು ತಯಾರಿಸಿಕೊಳ್ಳುತ್ತಾರೆ (ಚಿತ್ರ 10). ಫೆಲ್ಟು ಮೇಲು ಮುಸುಕಿನ ಕೆಳಗಡೆ ಅಂಚುಗಳನ್ನು ಹೊಲಿದು ಕೂಡಿಸಬಹುದು ಅಥವಾ ಅಲ್ಲಲ್ಲಿ ಭಾರದ ಕಲ್ಲು ಹೇರಬಹುದು.


ಪಾಶ್ಚಾತ್ಯ ದೇಶಗಳಲ್ಲಿ ಸೈನಿಕರು ಪಯಣಿಗರು ಶೋಧಕರು ಪರ್ವತಾರೋಹಿಗಳು ಸ್ಕೌಟುಗಳು ಇತ್ಯಾದಿ ಪ್ರವಾಸಿಗರಿಗೆ ಸಮಂಜಸವಾದ ಗುಡಾರ ಅತ್ಯಾವಶ್ಯಕ. ಅಲ್ಲದೆ ಔತಣ ಸಮಾರಂಭಗಳಿಗೂ ಮಾರ್ಕೀ ಎಂಬ ಎತ್ತರದ ವಿಶಾಲ ಡೇರೆ ಬಹಳ ಉಪಯುಕ್ತ; ಸುತ್ತ ಎಷ್ಟು ಎತ್ತರಕ್ಕೆ ಬೇಕೊ ಅಷ್ಟು ಕನಾತು ಕಿರುಗೋಡೆಗಳನ್ನು ಕಟ್ಟಿ ಮರೆ ಮಾಡಿಕೊಳ್ಳಬಹುದು. ಬಟ್ಟೆ ಬಾವುಟ ಗೊಂಡೆ ಮುಂತಾದ ಅಲಂಕಾರ ವಸ್ತುಗಳನ್ನು ತೂಗುಬಿಟ್ಟು ಮಾರ್ಕೀಯನ್ನು ಇಷ್ಟಬಂದಂತೆ ಸಿಂಗರಿಸಲು ಬರುತ್ತದೆ. ಅದರ ಕ್ಯಾನ್ವಾಸ್ ಅಥವಾ ಲಿನೆನ್ ಬಟ್ಟೆಗೆ ಬಣ್ಣ ಬಣ್ಣದ ಉದ್ದಪಟ್ಟೆ ಬಳಿಯುವುದೂ ಉಂಟು (ಚಿತ್ರ11).


ವನಪಾಲಕರೂ ಇತರ ಸಂಚಾರಿಗಳೂ ತಾತ್ಕಾಲಿಕವಾಗಿ ನೆರಳನ್ನೂ ಮರೆಯನ್ನೂ ಸುಲಭವಾಗಿ ಮಾಡಿಕೊಳ್ಳಲು ಕ್ಯಾನ್ವಾಸ್ ಅಥವಾ ರಟ್ಟುಬಟ್ಟೆಯನ್ನು ಪರಿಸರದಲ್ಲಿಯೇ ದೊರಕುವ ಕೋಲು ಕಡ್ಡಿಗಳ ಮೇಲೆ ಹಾಸು ಬಿಟ್ಟು (ಚಿತ್ರ12). ಹುರಿಗಳಿಂದ ಭದ್ರಪಡಿಸಿ, ನೆಮ್ಮದಿ ಪಡೆಯುತ್ತಾರೆ. ಹೆಚ್ಚು ವಜನ್ನಿನ ಸಾಮಾನಾವುದೂ ಅವರಿಗೆ ಬೇಡ.

ಗುಡಾರದ ವಿವಿಧ ಬಗೆಗಳು

ಆದರೆ ವಿಶೇಷವಾಗಿ ಬಳಕೆಯಲ್ಲಿ ಇರುವ ಉಪಕರಣ ಟೆಂಟ್ದ ಆಬ್ರಿಯೆಂಬ ಸಾಮಾನ್ಯ ಗುಡಾರ; ಹಂಸಪಾದದ ಆಕಾರದಲ್ಲಿ ನಿಲ್ಲುತ್ತದೆ. ಪಕ್ಕಗಳಲ್ಲಿ ಕಿರುಗೋಡೆಯಂಥ ಬಟ್ಟೆಗಳಿರಬಹುದು (ಚಿತ್ರ 13). ಅವು ಇಲ್ಲದೆ ಮುಂದೂ ಹಿಂದೂ ತ್ರಿಕೋನಾಕಾರದ ಬಟ್ಟೆಕದ ಇರಬಹುದು (ಚಿತ್ರ 14). ನೆಲದ ಮೇಲೆ ಕಟ್ಟಿದ ಜಗಲಿಯ ಮೇಲೆ ಗುಡಾರವನ್ನು ನಿಲ್ಲಸಲೂ ಬರುತ್ತದೆ (ಚಿತ್ರ 15). ಪಕ್ಕದ ಭಿತ್ತಿ ಬಟ್ಟೆಗಳನ್ನು ಸ್ವಲ್ಪ ಎತ್ತರವಾಗಿ ಇರಿಸಿಕೊಳ್ಳುವುದೂ ಸಾಧ್ಯ (ಚಿತ್ರ 16). ಅದರಿಂದ ಒಳಗಡೆಯ ಇಕ್ಕಟ್ಟು ಕೊಂಚ ಕಡಿಮೆಯಾಗುತ್ತದೆ. ಆದರೂ ಈ ಗುಡಾರ ಆರು ಜನರಿಗೆ ಮಲಗಲೂ ಕೂರಲೂ ಅವಕಾಶ ಒದಗಿಸುವುದಕ್ಕಾಗಿ ಮಾತ್ರ ರಚಿತವಾಗಿದೆ; ಅದರ ಮಧ್ಯದಲ್ಲಿ ತಲೆಯೆತ್ತಿ ನಿಲ್ಲಬಹುದೇ ಹೊರತು ಮಿಕ್ಕ ಕಡೆ ಆಗುವುದಿಲ್ಲ. ಬಹಳ ಉಪಯುಕ್ತವೂ ವಿಶ್ವವ್ಯಾಪಿಯೂ ಆದ ಈ ಗುಡಾರದ ಅಂಗಾಂಗಗಳನ್ನು (ಚಿತ್ರ 17) ಅರಿತುಕೊಳ್ಳುವುದು ಅಗತ್ಯ.

  1. ಮೇಲ್ಚಾವಣಿ ಬಟ್ಟೆ; (ಇನ್ನೊಂದು ಕಡೆಯಲ್ಲೂ ಅದೇ ಬಗೆಯ ಇಳಿಜಾರು)
  2. ಕಿರುಗೋಡೆ ಬಟ್ಟೆ
  3. ಚಾವಣಿಯ ಏಣು
  4. ತ್ರಿಕೋಣಾಕೃತಿಯ ಬಾಗಿಲು ಬಟ್ಟೆ
  5. ನಿಲುಗಂಬ. (ಮುಂದಣ ಮತ್ತು ಹಿಂದಣ ನಿಲುಗಂಬಗಳ ಮೇಲಿರುವ ಅಡ್ಡತೊಲೆ ಕಾಣಿಸುತ್ತಿಲ್ಲ)
  6. ಬಿಗಿ ಹಗ್ಗಗಳು
  7. ಕಬ್ಬಿಣದ ಅಥವಾ ಮರದ ಗೂಟಗಳು. ಈ ಗುಡಾರವನ್ನು ಕೇವಲ ಐದಾರು ನಿಮಿಷದಲ್ಲಿ ಎತ್ತಿ ನಿಲ್ಲಿಸಬಹುದು, ಬಿಚ್ಚಿಡಬಹುದು; ಹೆಚ್ಚು ತೂಕವೂ ಇಲ್ಲದ್ದರಿಂದ ಸಾಗಾಣಿಕೆಗೆ ಅಷ್ಟೇನೂ ತ್ರಾಸ ಪಡಬೇಕಾದ್ದಿಲ್ಲ. ಕೆಲಮೊಮ್ಮೆ ಚಾವಣಿಯ ಮೇಲೆ ಇನ್ನೊಂದು ಚಾವಣಿ ಬಟ್ಟೆಯನ್ನೂ ಹರಡುತ್ತಾರೆ. ಕನಾತು ಬಟ್ಟೆಗಳ ಮೂಲಕ ಒಳಗಡೆ ಏಕಾಂತ ಕೊಠಡಿ ಏರ್ಪಡಿಸಿಕೊಳ್ಳಬಹುದು; ಆದರೆ ಅದಕ್ಕೆ ಗುಡಾರ ದೊಡ್ಡದಾಗಿ ಇರಬೇಕು. ಸೈನ್ಯದ ಕಾರ್ಯಾಚರಣೆಯಲ್ಲಿ ಟೆಂಟ್ದ ಆಬ್ರಿಗಳ ಜೊತೆಗೆ ಶಂಕುವಿನ ಆಕೃತಿಯ ಗಂಟೆ ಡೇರೆ (ಬೆಲ್ ಟೆಂಟ್) ಅಧಿಕಾರಿಗಳಿಗಾಗಿ ಇರುತ್ತವೆ. ಇದು ಒಳಗೆ ಸಾಕಷ್ಟು ಎತ್ತರವೂ ವಿಶಾಲವೂ ಆಗಿರುತ್ತದೆ. ಮಹಲಿನ ದಿವಾನಖಾನೆಯಂತೆಯೇ ಅಲ್ಲಿಯೂ ಮೇಜು ಕುರ್ಚಿ ಹಾಕಿಕೊಂಡು, ಮಾತುಕಥೆ ಮಂತ್ರಾಲೋಚನೆ ನಡೆಸಬಹುದು.


ಇವಲ್ಲದೆ ಛತ್ರಿ ಗುಡಾರ (ಅಂಬ್ರೇಲಾ ಟೆಂಟ್), ಆಕಾಶಬುಟ್ಟಿ ಗುಡಾರ (ಬಲೂನ್ ಟೆಂಟ್) ಮೊದಲಾದ ವಿರಚನೆಗಳೂ ಉಂಟು. ಅವುಗಳಲ್ಲಿ ನಿಲುಗಂಬಗಳ ಅವಶ್ಯಕತೆ ಬಹಳ ಕಡಿಮೆ. ಗೋಳಾಕಾರದ ಚಾವಣಿ ಬಟ್ಟೆಗಳನ್ನು ಬಿಗಿಯಾಗಿ ಎಳೆದು ನೆಲದ ಮೇಲೆ ಭದ್ರವಾಗಿ ಹಿಡಿದಿಡುವುದು ಸಾಧ್ಯ.


ಸರ್ಕಸ್ಸಿನವರು, ಕೆಲವೊಮ್ಮೆ ಟೆಂಟ್ ಸಿನಿಮಾದವರೂ ಊರ ಹೊರಗಿನ ಮೈದಾನದಲ್ಲಿ ದೊಡ್ಡ ಗುಡಾರ ಕಟ್ಟುವುದನ್ನು ಎಲ್ಲರೂ ಕಂಡಿದ್ದಾರೆ. ನೆಲವನ್ನು ಅಗೆದು ಕಂಬಗಳನ್ನು ನೆಡದೆ ಗುಡಾರ ಎಬ್ಬಿಸುವ ಜಾಣ್ಮೆಯನ್ನು ಸರ್ಕಸ್ಸಿನವರಲ್ಲಿ ಕಾಣಬಹುದು.


ಈಚೆಗೆ ಗುಡಾರಗಳ ಬಳಕೆ ಬಹಳ ಹೆಚ್ಚುತ್ತಿದೆ. ಸ್ಕೌಟುಗಳು, ಸೈನಿಕ ಇಲಾಖೆಯವರು, ಟೆಲಿಫೋನ್ ಕೆಲಸಗಾರರು, ವಾರಾಂತ್ಯ ವಿಹಾರಕ್ಕಾಗಿ ಹೋಗುವ ಕುಟುಂಬದವರು ಬೇಕೆಂದಲ್ಲಿ ತಮ್ಮ ಗುಡಾರಗಳನ್ನು ಎಬ್ಬಿಸುತ್ತಾರೆ. ಹೀಗೆ ಕ್ಯಾನ್ವಾಸ್ ಪ್ರಪಂಚ ವೈವಿಧ್ಯಮಯವೂ ವಿಶಾಲವೂ ಆಗಿದೆ.

"https://kn.wikipedia.org/w/index.php?title=ಗುಡಾರ&oldid=740814" ಇಂದ ಪಡೆಯಲ್ಪಟ್ಟಿದೆ