ಗುಂಡುಸ್ತರಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

೨೦೩.೨ ಮಿ.ಮೀ.ಗಳಿಗಿಂತ ಹೆಚ್ಚು ಉದ್ದ ವ್ಯಾಸವಿರುವ ಬೌಲ್ಡರ್ ಜಾತಿಯ ಗುಂಡುಶಿಲೆಗಳ ಹರವಿನಿಂದ ಉಂಟಾದ ನದೀ ಪಾತಳಿಗಳು (ಬೌಲ್ಡರ್ ಬೆಡ್ಸ್). ಇವು ಬಲುಮಟ್ಟಿಗೆ ನದಿಯ ಕಾರ್ಯಾಚರಣೆಯಿಂದಾದವು. ಸಾಮಾನ್ಯವಾಗಿ ಇವನ್ನು ಪರ್ವತಗಳ ತಪ್ಪಲು ಪ್ರದೇಶದಲ್ಲಿ ಕಾಣಬಹುದು. ಅದರಲ್ಲೂ ನದಿಗಳು ಪರ್ವತಗಳ ಪ್ರಪಾತಗಳಲ್ಲಿ, ಕಣಿವೆ ಕಂದರಗಳಲ್ಲಿ ರಭಸದಿಂದ ಹರಿದು ಕೆಳಮಟ್ಟದಲ್ಲಿರುವ ಮೈದಾನಪ್ರದೇಶವನ್ನು ಸಂಧಿಸುವ ಸ್ಥಳದಲ್ಲಿ ಗುಂಡುಸ್ತರಗಳು ಶೇಖರವಾಗುತ್ತವೆ. ಅಲ್ಲಿ ನದಿಯ ವೇಗ ಹಠಾತ್ತನೇ ಕಡಿಮೆಯಾಗುವುದೇ ಇದಕ್ಕೆ ಮುಖ್ಯ ಕಾರಣ. ಇಲ್ಲಿ ನದಿಯ ಮೆಕ್ಕಲೂ ಶೇಖರವಾಗಿ ವಿಶಾಲವಾದ ಪ್ರದೇಶದಲ್ಲಿ ಹರಡಿರುತ್ತದೆ. ವಿಹಂಗಮ ನೋಟದಲ್ಲಿ ಈ ಪ್ರದೇಶ ಬೀಸಣಿಗೆಯಾಕಾರವನ್ನು ತಳೆದಿರುತ್ತದೆ. ಇದನ್ನು ಅಲ್ಯೂವಿಯಲ್ ಫ್ಯಾನ್ ಎನ್ನುತ್ತಾರೆ. ಅನೇಕ ವೇಳೆ ಅಕ್ಕಪಕ್ಕದ ಮೆಕ್ಕಲುಮೈದಾನಗಳು ಒಂದುಗೂಡಿ ಇಡೀ ಪರ್ವತಶ್ರೇಣಿಯ ತಪ್ಪಲಿನುದ್ದಕ್ಕೂ ಗುಂಡುಸ್ತರಗಳ ಶಿಲಾಶ್ರೇಣಿಯನ್ನು ಕಾಣಬಹುದು. ಅನೇಕ ವೇಳೆ ಇವು ನೂರಾರು ಇಲ್ಲವೆ ಸಾವಿರಾರು ಮೀಟರುಗಳಷ್ಟು ಮಂದವಾಗಿದ್ದು ಹತ್ತಾರು ಅಥವಾ ನೂರಾರು ಕಿ.ಮೀ. ವಿಸ್ತಾರವಾದ ಪ್ರದೇಶವನ್ನು ಆಕ್ರಮಿಸಿರುತ್ತವೆ.


ಗುಂಡುಸ್ತರ ಮುಖ್ಯವಾದ ಜಲಜಶಿಲೆ. ಈ ಸ್ತರ ಗುಂಡನೆಯ ನುಣುಪಾದ ನಾನಾ ಗಾತ್ರದ ಶಿಲೆಗಳಿಂದ ಕೂಡಿರುತ್ತದೆ. ಇವುಗಳ ಆಕಾರ ವೈವಿಧ್ಯಮಯ. ಇವು ಅಗ್ನಿಶಿಲೆ, ಜಲಜಶಿಲೆ, ಮತ್ತು ರೂಪಾಂತರಿತ ಶಿಲೆಗಳಿಂದ ಉಂಟಾದವು. ಈ ಶಿಲೆಗಳು ವಿಧ್ವಂಸಕ ಕಾರ್ಯಾಚರಣೆಗೆ ಒಳಗಾಗಿ ಛಿದ್ರಗೊಂಡು ಬೀಸುವ ಗಾಳಿಯಿಂದಲೋ ಹರಿಯುವ ನೀರಿನಿಂದಲೋ ದೂರದ ಸ್ಥಳಗಳಿಗೆ ಒಯ್ಯಲ್ಪಡುತ್ತವೆ. ಈ ಸಾಗಾಣಿಕೆಯಲ್ಲಿ ಶಿಲಾಛಿದ್ರಗಳು ಪರಸ್ಪರ ತೇಯಲ್ಪಟ್ಟು ಅಥವಾ ನದಿಯ ಪಾತ್ರದಲ್ಲಿ ತೆವಳಿ ಹೋಗುವಾಗ ಆ ಗಡುಸಾದ ಭೂಭಾಗಕ್ಕೆ ಉಜ್ಜಲ್ಪಟ್ಟು ಅಂಕು ಡೊಂಕುಗಳೆಲ್ಲ ಸವೆದು ಹೊರಮೈ ನುಣುಪಾಗುತ್ತದೆ. ಹಿಮನದಿಯ ಕಾರ್ಯಾಚರಣೆಯಿಂದಲೂ ಇದೇ ರೀತಿಯ ಗುಂಡುಶಿಲೆಗಳುಂಟಾಗುತ್ತವೆ. ಆದರೆ ಅವುಗಳ ಮೈಮೇಲೆ ಅಸಂಖ್ಯಾತ ಬಹುಸೂಕ್ಷ್ಮವಾದ ಸಮಾಂತರ ಗೀರುಗಳನ್ನು ಕಾಣಬಹುದು.


ಗುಂಡುಶಿಲೆಗಳ ವ್ಯಾಸ ೨೦೩.೨ ಮಿ.ಮೀ. ಅಂಗುಲಕ್ಕೂ ಹೆಚ್ಚಾದಾಗ ಬೌಲ್ಟರ್ ೨೦೩.೨ಮಿಮೀ ರಿಂದ ೫೧ ಮಿಮೀಗಳಿದ್ದಲ್ಲಿ ಕಾಬ್ಲ್ ೫೧ ಮಿಮೀಗೂ ಕಡಿಮೆಯಿದ್ದಲ್ಲಿ ಪೆಬ್ಲ್ ಎಂದು ವರ್ಗೀಕರಿ¸ಲಾಗಿದೆ. ಈ ಶಿಲಾಗುಂಡುಗಳನ್ನು ಯಾವುದೋ ಒಂದು ಬಂಧಕ ವಸ್ತು ಒಟ್ಟುಗೂಡಿಸಿ ಶಿಲೆಯಾಗಿ ಮಾರ್ಪಡಿಸುತ್ತದೆ. ಇದು ಸಿಲಿಕ, ಸುಣ್ಣ ಅಥವಾ ಜೇಡುವಸ್ತುವಾಗಿರುತ್ತವೆ. ಹೀಗುಂಟಾದ ಶಿಲೆಯಲ್ಲಿ ಬೌಲ್ಡರುಗಳೇ ಹೆಚ್ಚು ಮೊತ್ತದಲ್ಲಿ ಇದ್ದಾಗ ಆ ಶಿಲೆಯನ್ನು ಗುಂಡುಸ್ತರ ಎನ್ನುತ್ತಾರೆ.