ವಿಷಯಕ್ಕೆ ಹೋಗು

ಗುಂಡಿಗೆ ಸುತ್ತುಪೊರೆಯ ರೋಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗುಂಡಿಗೆಯ ಆಕುಂಚನ ಹಾಗೂ ಸಂಕುಚನ ಕ್ರಿಯೆ ಸರಾಗವಾಗಿ ನಡೆಯಲೋಸುಗ ಗುಂಡಿಗೆ ಒಂದು ಸೂಕ್ಷ್ಮವೂ ನಯವುಳ್ಳದ್ದೂ ಆದ ಚೀಲವೊಂದರಲ್ಲಿ ಅಡಕವಾಗಿದೆ. ಶೀತಸ್ರಾವದ ಒಗ್ಗದಿಕೆ, ಕ್ಷಯಾಣು, ಕೀವು ಉತ್ಪಾದಕ ಜೀವಾಣುಗಳು ಮತ್ತು ವಿಷಾಣುಗಳು ಇವುಗಳ ಪ್ರಭಾವಕ್ಕೆ ಒಳಗಾಗಿ ಈ ಚೀಲದಲ್ಲಿ ಊತ ಉಂಟಾಗಬಹುದು. ಆಗ ಇದರ ಎರಡೂ ಪದರುಗಳು ತಮ್ಮ ಹೊಳಪನ್ನು ನಯವನ್ನು ಕಳೆದುಕೊಂಡು ಒರಟಾಗಿ ಅಲ್ಲಿ ಒಸರಿದ ದ್ರವ ಬ್ರೆಡ್ಡಿಗೆ ಬೆಣ್ಣೆ ಹಚ್ಚಿದಂತೆ ತೋರಿಬರುತ್ತದೆ. ಈ ಪ್ರತಿಕ್ರಿಯೆ ಮುಂದುವರಿದು ಅಲ್ಲಿ ಜಲ, ಕೀವು ಇಲ್ಲವೇ ರಕ್ತ ಸಂಚಯನಗೊಳ್ಳಬಹುದು. ಹೃದಯಾಘಾತದ ಬಳಿಕ, ಗುರಾಣಿ ಗ್ರಂಥಿಯ ರಸದೂತದ ಅಭಾವ ರೋಗದಲ್ಲಿ, ಮೂತ್ರ ಜನಕಾಂಗದ ಕ್ರಿಯಾವೈಫಲ್ಯದ ಅಂತಿಮ ಕಾಲದಲ್ಲಿ ಗುಂಡಿಗೆಯ ಮೇಲೆ ತೀವ್ರವಾದ ಪೆಟ್ಟು ಬಿದ್ದಾಗ ಅಥವಾ ಏಡಿಗಂತಿ ರೋಗದ ಫಲವಾಗಿ ಮುಂತಾದ ಸಂದರ್ಭಗಳಲ್ಲಿ ಗುಂಡಿಗೆಯ ಸುತ್ತುಪೊರೆಯ ಚೀಲದ ಊತ ತೋರಿಬರಬಹುದು.


ದೇಹದಲ್ಲಿ ಕಂಡುಬರುವ ಅನೇಕ ತೆರನಾದ ರೋಗಗಳ ಫಲವಾಗಿ ಈ ಚೀಲದ ಊತ ಉಂಟಾದರೂ ಅದಕ್ಕೆ ಎಲ್ಲ ಸಂದರ್ಭಗಳಲ್ಲೂ ತನ್ನದೇ ಆದ ಕೆಲವು ವಿಶಿಷ್ಟ ಗುಣಲಕ್ಷಣಗಳಿರುವವು. ಪ್ರಾರಂಭದಲ್ಲಿ ಎದೆಮೂಳೆಯ ಪ್ರದೇಶದಲ್ಲಿ ನೋವು ಅಥವಾ ಏನೋ ತೂಕದ ವಸ್ತುವನ್ನು ಇಟ್ಟ ಭಾವನೆ ಉಂಟಾಗುತ್ತದೆ. ಎದೆದರ್ಶಕದ ನೆರವಿನಿಂದ ಗುಂಡಿಗೆ ಇರುವ ಸ್ಥಳವನ್ನು ಆಲಿಸಿದಾಗ ಕೆರೆದಂತೆ ಪರಪರ ಶಬ್ದ ಕೇಳಿಬರುವುದು. ಆ ಶಬ್ದ ಗುಂಡಿಗೆಯ ಶಬ್ದಗಳಿಂದ ಬೇರೆಯಾಗಿ ಕೇಳಿಸುತ್ತದೆ. ರೋಗದ ಮುಂದುವರಿಕೆಯ ಫಲವಾಗಿ ಜಲಸಂಚಯನವಾದಾಗ ಗುಂಡಿಗೆಯ ಪ್ರದೇಶದ ಮೇಲೆ ಬೆರಳಿನಿಂದ ಬಡಿದು ನಿರ್ಣಯಿಸಬಹುದಾದ ಮಂದಶಬ್ದದ ಪ್ರದೇಶ ವಿಸ್ತಾರವಾಗುತ್ತದೆ. ಗುಂಡಿಗೆಯ ಶಬ್ದಗಳು ಅಸ್ಪಷ್ಟವಾಗಿ ಕೇಳಿ ಬರುತ್ತವೆ. ಜಲಸಂಚಯನದಿಂದ ಹಿಗ್ಗಿದ ಗುಂಡಿಗೆ ಚೀಲ ಸುತ್ತಲಿನ ಫುಪ್ಪುಸದ ಮೇಲೆ ಒತ್ತಡವನ್ನು ಬೀರಿ ಉಬ್ಬಸ, ಕೆಮ್ಮು ಉಂಟುಮಾಡುವುದು. ಇದು ಅತಿಯಾದಾಗ ಗುಂಡಿಗೆಯ ಕಾರ್ಯಚಟುವಟಿಕೆ ತೀವ್ರ ವ್ಯತ್ಯಸ್ತಗೊಂಡು ಗುಂಡಿಗೆ ಹಿಗ್ಗುವ ಕಾಲದಲ್ಲಿ ಅದರೊಳಕ್ಕೆ ರಕ್ತ ಹರಿದು ಬರಲು ಅಡ್ಡಿಯಾಗುತ್ತದೆ. ಇದರ ಫಲವಾಗಿ ಅಲ್ಲಿಂದ ಹೊರಹೊಮ್ಮುವ ರಕ್ತದ ಮೊತ್ತ ಕಡಿಮೆಯಾಗುತ್ತದೆ. ನಾಡಿ ಬಡಿತ ತೀವ್ರಗೊಳ್ಳುತ್ತದೆ. ಅಪಧಮನಿಗಳಲ್ಲಿ ರಕ್ತದ ಒತ್ತಡ ಕಡಿಮೆಯಾಗಿ ಕತ್ತಿನ ಅಭಿಧಮನಿಗಳಲ್ಲಿ ಅದರ ಒತ್ತಡ ಹೆಚ್ಚುತ್ತದೆ. ಎಕ್ಸ್ ಕಿರಣ ಚಿತ್ರವನ್ನು ಪರೀಕ್ಷಿಸಿದರೆ ಗುಂಡಿಗೆ ತನ್ನ ಆಕೃತಿಯನ್ನು ಕಳೆದುಕೊಂಡಿರುವುದು ವಿಸ್ತಾರವಾಗಿರುವುದೂ ಕಾಣಿಸುತ್ತದೆ. ಎಲೆಕ್ಟ್ರೊಕಾರ್ಡಿಯೊಗ್ರಾಫಿನಲ್ಲಿ ಹೃತ್ಕುಕ್ಷಿಯ ಸಂಕುಚನದ ಮುಖ್ಯ ಅಲೆ ತಗ್ಗಾಗಿರುತ್ತದೆ. ಎಸ್ಟಿ ರೇಖೆ ಮೇಲಕ್ಕೆ ಬಾಗಿ, ಟಿ ಅಲೆ ಅಧೋಮುಖಿಯಾಗಿರುತ್ತದೆ. ಎಕೋಕಾರ್ಡಿಯೋಗ್ರಾಫಿ ರೋಗನಿದಾನದಲ್ಲಿ ತುಂಬ ಉಪಯುಕ್ತ. ಅದರಿಂದ ಸಂಚಯಗೊಂಡ ದ್ರವದ ಪ್ರಮಾಣ ಮತ್ತು ಅದರ ಸ್ಥಳವನ್ನು ಗುರುತಿಸಬಹುದು. ಗುಂಡಿಗೆಯ ಸುತ್ತುಪೊರೆ ಚೀಲದಲ್ಲಿ ಹೆಚ್ಚು ಜಲ ಸಂಚಯನಗೊಂಡು ಗುಂಡಿಗೆಯ ಮೇಲೆ ತುಂಬ ಒತ್ತಡ ಉಂಟಾದಾಗ ಚೀಲದೊಳಗೆ ಸೂಜಿಯನ್ನು ಹಾಕಿ ಅಲ್ಲಿರುವ ದ್ರವವನ್ನು ಹೊರಕ್ಕೆ ತೆಗೆಯಬೇಕು. ಶೀತಸ್ರಾವದಿಂದ ರೋಗ ಬಂದಿದ್ದರೆ ಗುಂಡಿಗೆಯ ಒಳಪದರಗಳು ಮತ್ತು ಕವಾಟಗಳು ಊತದಲ್ಲಿ ಪಾಲ್ಗೊಂಡು ಮರ್ಮರ ಶಬ್ದಗಳನ್ನು ಹೊರಡಿಸುತ್ತವೆ. ಕ್ಷಯರೋಗದಲ್ಲಿ ಗುಂಡಿಗೆಚೀಲ ದಪ್ಪವಾಗಿ ಒರಟಾಗಿ ಅದರ ಕುಗ್ಗುವಿಕೆಗೆ ತಡೆಯನ್ನು ಉಂಟುಮಾಡಬಲ್ಲದು. ರಾಸಾಯನಿಕ ಚಿಕಿತ್ಸೆಯಿಂದ ಕ್ಷಯ ಮತ್ತು ಕೀವುಜನ್ಯ ರೋಗಾಣುಗಳು ದೂರವಾಗುತ್ತವೆ.


ಹೃದಯಾಘಾತದ ಅನಂತರ ಮತ್ತು ಮೂತ್ರಜನಕಾಂಗದ ಕ್ರಿಯಾವೈಫಲ್ಯದ ಫಲವಾಗಿ ತೋರಿಬರುವ ಗುಂಡಿಗೆ ಚೀಲದ ಊತದಲ್ಲಿ ನೋವು ಗೋಚರಿಸುವುದಿಲ್ಲ. ಏಡಿಗಂತಿ ರೋಗದ ಫಲವಾಗಿ ರೋಗೋತ್ಪನ್ನವಾದಾಗ ರಕ್ತ ಸಂಚಯನಗೊಳ್ಳುತ್ತದೆ. ಕ್ಷಯ ಮತ್ತು ಕೀವುಜನ್ಯ ರೋಗಾಣುಗಳಿಂದ ಬಂದ ಗುಂಡಿಗೆ ಚೀಲದ ಊತದ ಪ್ರಮುಖ ತೊಡಕಾಗಿ ದೀರ್ಘಕಾಲಿಕ ಹಿಸುಕಿದ ಗುಂಡಿಗೆ ಚೀಲದ ತಡೆ ಉಂಟಾಗಬಲ್ಲದು. ಅಲ್ಲಿ ಒಸರಿದ ದ್ರವ ಗಟ್ಟಿಯಾಗಿ, ನಾರೆಳೆ ಸುತ್ತ ಹರಡಿ ಗುಂಡಿಗೆ ಚೀಲದ ಪದರಗಳು ದಪ್ಪವಾಗಿ ತಮ್ಮ ಸ್ಥಿತಿಸ್ಥಾಪಕ ಶಕ್ತಿಯನ್ನು ಕಳೆದುಕೊಳ್ಳುತ್ತವೆ. ಅದರ ಮೇಲೆ ಸುಣ್ಣದ ಕಣಗಳು ನೆಲೆಸಿ ಗುಂಡಿಗೆಯ ಸುತ್ತ ಶಿಲಾರೂಪಿ ಪೊರೆಯಾಗಿ ಗುಂಡಿಗೆಯ ಹಿಗ್ಗುವಿಕೆಗೆ ನಿರಂತರ ಆತಂಕವನ್ನು ತಂದೊಡ್ಡುತ್ತವೆ. ಇದರಿಂದ ಗುಂಡಿಗೆಗೆ ಹರಿದು ಬರುವ ರಕ್ತಪ್ರವಾಹಕ್ಕೆ ಅಡ್ಡಿಯಾಗಿ ಕತ್ತಿನ ಅಭಿಧಮನಿಗಳಲ್ಲಿ ರಕ್ತದ ಒತ್ತಡ ಹೆಚ್ಚುವುದು. ಅಲ್ಲಿನ ಮಹಾ ಅಪಧಮನಿಗಳು ಅಲೆ ತೋರಿಸದೆ ದಪ್ಪವಾಗಿ ಉಬ್ಬಿರುತ್ತವೆ. ಜಲೋದರವಾಗಿ ಹೊಟ್ಟೆಯೂ ದಪ್ಪವಾಗಿರುತ್ತದೆ. ಕಾಲಲ್ಲಿ ಜಲಸಂಚಯನದ ಬಾವು ಹೆಚ್ಚಿರುವುದಿಲ್ಲ. ಕಲಿಜ ದೊಡ್ಡದಾಗಿರುವುದು. ನಾಡಿ ಬಡಿತ ತೀವ್ರಗೊಳ್ಳುತ್ತದೆ. ಉಚ್ವಾಸ ಕಾಲದಲ್ಲಿ ನಾಡಿ ಕೈಗೆ ಸಿಕ್ಕದಂತಾಗುವುದು. ಗುಂಡಿಗೆ ಸ್ಥಳದಲ್ಲಿ ಆಲಿಸಿದಾಗ ಅದರ ಶಬ್ದಗಳಲ್ಲಿ ಯಾವ ಬದಲಾವಣೆಯೂ ತಿಳಿದುಬರುವುದಿಲ್ಲ. ಗುಂಡಿಗೆಯ ಗಾತ್ರ ಹೆಚ್ಚುವುದಿಲ್ಲ. ಎಕ್ಸ್ ಕಿರಣ ಚಿತ್ರದಲ್ಲಿ ಗುಂಡಿಗೆ ಚೀಲದಲ್ಲಿ ಸುಣ್ಣಸೇರ್ಪಡೆಯಾಗಿರುವುದನ್ನು ಕಾಣಬಹುದು. ದಪ್ಪವಾದ ಹೃದಯ ಚೀಲದ ಪದರಗಳನ್ನು ಶಸ್ತ್ರಕ್ರಿಯೆಯಿಂದ ಕತ್ತರಿಸಿ ತೆಗೆದು ಹೃದಯದ ಹಿಗ್ಗುವಿಕೆಗೆ ಅನುಕೂಲ ಮಾಡಿಕೊಡುವುದು ಚಿಕಿತ್ಸೆಯ ಮುಖ್ಯ ವಿಧಾನವಾಗಿದೆ.