ಗುಂಗ್ರಾಲ್ ಛತ್ರ
ಗುಂಗ್ರಾಲ್ ಛತ್ರ
[ಬದಲಾಯಿಸಿ]ಸ್ಥಳನಾಮ ನಿಷ್ಪತ್ತಿ, ಐತಿಹಾಸಿಕ ಹಿನ್ನೆಲೆ, ಹಾಗೂ ಭೌಗೋಳಿಕ ವಿವರಗಳು
[ಬದಲಾಯಿಸಿ]ಒಂದು ಗ್ರಾಮದ ಸ್ಥಳನಾಮದ ನಿಷ್ಪತ್ತಿಯನ್ನು ತಿಳಿಯುವುದು ಅಷ್ಱು ಸುಲಭದ ವಿಚಾರವಲ್ಲ. ಯಾವುದೇ ಒಂದು ಗ್ರಾಮದ ಸ್ಥಳನಾಮವು ತನ್ನದೇ ಆದಂತಹ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುತ್ತದೆ. "ಐತಿಹಾಸಿಕ ದಾಖಲೆಗಳು ಮೌನವಹಿಸಿದಾಗ ಸ್ಥಳನಾಮಗಳು ಮಾತನಾಡುತ್ತವೆ" ಎಂಬ ಪ್ರಸಿದ್ಧೋಕ್ತಿ ಇದೆ. ಹಾಗೆ ಹೆಸರಿಲ್ಲದ ಗ್ರಾಮ, ದೇಶವಿಲ್ಲ ಎನ್ನಬಹುದು. ಪ್ರತಿಯೊಂದಕ್ಕೂ ಸಂಬಂಧಪಟ್ಟಂತೆ ತನ್ನದೇ ಆದಂತಹ ಹೆಸರು ಇರುತ್ತದೆ. ಕೆಲವು ಗ್ರಾಮಗಳು ಐತಿಹಾಸಿಕ ಮಹತ್ವವನ್ನು ಪಡೆದುಕೊಂಡರೆ ಕೆಲವು ಗ್ರಾಮಗಳು ಸಾಮಾನ್ಯ ಹೆಸರಿನಿಂದ ಕೂಡಿರುತ್ತವೆ.
ಗುಂಗ್ರಾಲ್ ಛತ್ರ ಗ್ರಾಮದ ಸ್ಥಳನಾಮ ನಿಷ್ಪತ್ತಿಯು ವಿಶೇಷತೆಯಿಂದ ಕೂಡಿದ್ದಾಗಿದೆ ಮತ್ತು ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. ಈ ಗ್ರಾಮದ ಸ್ಥಳನಾಮಕ್ಕೆ ಗುಂಗ್ರಾಲ್ ಛತ್ರ ಎಂದು ಹೆಸರು ಬರಲು ಮುಖ್ಯವಾದಂತಹ ಹಿನ್ನೆಲೆಯೆಂದರೆ ಈ ಗ್ರಾಮದ ಗಂಗರಾಜ ಎಂಬುವವನು ಈ ಪ್ರದೇಶದಲ್ಲಿ ಆಳ್ವಿಕೆ ನಡೆಸಿದ್ದನು. ಈ ಗ್ರಾಮಕ್ಕೆ ಈತನ ಹೆಸರು ಬರಲು ಈತ ಈ ಪ್ರದೇಶದ ಮೊದಲ ಆಡಳಿತಗಾರನಾಗಿದ್ದಿರಬೇಕು. ಆದ್ದರಿಂದಾಗಿಯೇ ಈತನ ಹೆಸರಿನಲ್ಲಿ ಈ ಗ್ರಾಮವು ಉಳಿದುಕೊಂಡು ಬಂದಿದೆ. ಗುಂಗ್ರಾಲ್ ಛತ್ರ ಎಂಬ ಹೆಸರಿಗೆ ತಕ್ಕಂತೆ ಗಂಗೂರಾಲ್ ಛತ್ರ, ಗಂಗ್ರಾಜ ಛತ್ರ, ಗಂಗರಾಜ ಛತ್ರ, ಗಂಗುರಾಲ್ ಛತ್ರ, ಗಂಗೂರಾಯರ ಛತ್ರ ಈ ಎಲ್ಲಾ ರೀತಿಯ ಪ್ರಯೋಗಗಳು ಕಂಡುಬಂದಿದ್ದು ಕೊನೆಗೆ ಗುಂಗ್ರಾಲ್ ಛತ್ರ ಎಂಬುದಾಗಿದೆ. ಗುಂಗ್ರಾಲ್ ಎಂಬುದು ಗಂಗರಾಜರ ನೆನಪಿಗೆ ಬಂದದ್ದಾಗಿದೆ. ಹಾಗೆಯೇ ಛತ್ರ ಎಂಬ ಹೆಸರು ಅನ್ನ ಛತ್ರಗಳು, ಧರ್ಮಛತ್ರಗಳನ್ನು ಸ್ಥಾಪಿಸಿದ್ದರಿಂದಾಗಿ ಛತ್ರ ಎಂಬ ಹೆಸರು ಬಂದಿದೆ. ನಂತರ ಗುಂಗ್ರಾಲ್ ಜೊತೆಗೆ ಛತ್ರ ಎಂಬ ಹೆಸರು ಉಳಿದುಕೊಂಡಿದೆ. ಈ ಗುಂಗ್ರಾಲ್ ಛತ್ರ ಎಂಬ ಹೆಸರು ಜನಪದ ವೀರ ಕಾವ್ಯ "ಪಿರಿಯಾಪಟ್ಟಣದ ಕಾಳಗ" ಎಂಬ ಗ್ರಂಥದಲ್ಲಿಯೂ ಉಲ್ಲೇಖಿತವಾಗಿದೆ.[೧]
ಗುಂಗ್ರಾಲ್ ಛತ್ರ ಗ್ರಾಮದ ಐತಿಹಾಸಿಕ ಹಿನ್ನೆಲೆ
[ಬದಲಾಯಿಸಿ]ಗುಂಗ್ರಾಲ್ ಛತ್ರ ಗ್ರಾಮವು ತನ್ನದೇ ಆದಂತಹ ಐತಿಹಾಸಿಕ ಮಹತ್ವವನ್ನು ಹೊಂದಿದೆ. ಈ ಪ್ರದೇಶವು ಮೈಸೂರಿನಿಂದ ೨೨ ಕಿ.ಮೀ ದೂರದಲ್ಲಿದೆ ಹಾಗೆಯೇ ಈ ಪ್ರದೇಶವು ಕಾವೇರಿ ನದಿಯಿಂದ ೪ ಕಿ.ಮೀ ದೂರದಲ್ಲಿದೆ ಮತ್ತು ಮೈಸೂರಿನ ಮಹಾರಾಜರು ಬೇಟೆಗೆ ಬಂದಾಗ ತಂಗಲು ನಿರ್ಮಿಸಿದಂತಹ 'ಅಲೋಕ' ಎಂಬ ಸುಂದರ ಭವ್ಯ ಕಟ್ಟಡವೊಂದು ಈ ಗ್ರಾಮದಿಂದ ಕೇವಲ ೮ ಕಿ.ಮೀ ದೂರದಲ್ಲಿದೆ. ಇಂತಹ ಸುಂದರ ಪರಿಸರದಲ್ಲಿ ಗುಂಗ್ರಾಲ್ ಛತ್ರ ಗ್ರಾಮವಿದೆ. ಇಲ್ಲಿನ ದೇವಾಲಯವು ಕೂಡ ಇತಿಹಾಸವನ್ನು ಸಾರುವಂತಹ ದೇವಾಲಯಗಳಾಗಿವೆ. ಈ ಗ್ರಾಮದಲ್ಲಿರುವ ಈಶ್ವರ, ಬಸವೇಶ್ವರ, ಹಾಗೂ ಸಿದ್ದೇಶ್ವರ ದೇವಾಲಯಳು ಪ್ರಮುಖ ಐತಿಹಾಸಿಕ ಮಹತ್ವವನ್ನು ಹೊಂದಿದೆ. ಇಲ್ಲಿ ಆಳ್ವಿಕೆ ನಡೆಸಿದ ಚೋಳರು ಈ ದೇವಾಲಯಗಳನ್ನು ಒಂದೇ ರಾತ್ರಿಯಲ್ಲಿ(೬ತಿಂಗಳು ಹಗಲು ೬ ತಿಂಗಳು ರಾತ್ರಿ) ದೇವಾಲಯಗಳನ್ನು ಕಟ್ಟಿ ಎಳ್ಳನ್ನು ಬೆಳೆದು ದೀಪ ಹಚ್ಚಿ ಹೋಗುತಿದ್ದರು ಎಂದು ಸ್ಥಳೀಯ ಹಿರಿಯರು ಹೇಳುತ್ತಾರೆ.
ಗುಂಗ್ರಾಲ್ ಛತ್ರಕ್ಕೆ ಇರುವ ಪ್ರಮುಖ ಐತಿಹಾಸಿಕ ಹಿನ್ನೆಲೆ ಎಂದರೆ ಮೈಸೂರಿನ ಮಹಾರಾಜ ದಳವಾಯಿಗೂ ಹಾಗೂ ಪಿರಿಯಾಪಟ್ಟಣದ ಪಾಳೆಗಾರ ಚೆಂಗಾಳ್ವ ವೀರರಾಜನಿಗೂ ತಮ್ಮ ಸಂಬಂಧದಲ್ಲಿ ಕಲಹ ಉಂಟಾಗಿ ಯುದ್ಧ ನಿರ್ಣಯವಾಯಿತು. ನಂತರ ಮೈಸೂರಿನ ರಾಜಧಾನಿ ಶ್ರೀರಂಗಪಟ್ಟಣದಿಂದ ದಳವಾಯಿ ಅವರು ಪಿರಿಯಾಪಟ್ಟಣಕ್ಕೆ ದಂಡಿನ ಸಮೇತ ಯುದ್ಧಕ್ಕೆ ಹೊರಟರು. ಪಾಲಹಳ್ಳಿ ಮಾರ್ಗವಾಗಿ ಕನ್ನಂಬಾಡಿ ಗನ್ನಂಬಾಡಿಗಳ ನಡುವೆ ಹಾದು ಗಂಗರಾಜರ ಛತ್ರವನ್ನು ಸೇರಿತು.
"ಆಲತ್ತೂರ ಬ್ವಾರೆಯ ದಾಟುಕೊಂಡು ಮೈಸೂರ ರಾಣ್ಯ ಗಂಗರಾಜರ ಛತ್ರಕೆ ಬಂದಿತು"
ಈ ಗುಂಗ್ರಾಲ್ ಛತ್ರದಲ್ಲಿ ಸಕಲ ಸಾಮಾಗ್ರಿಗಳ ಸರಬರಾಜು ಕೇಂದ್ರವಾಗಿ ಒಂದು ಅಂಟುಕ್ವಾಟೆಯನ್ನು ಕಟ್ಟಿಕೊಂಡರು. ಅಂಟುಕ್ವಾಟೆ ಎಂದ್ರೆ ಬಿಡಾರಕ್ಕಾಗಿ ಮಾಡಿಕೊಂಡ ಕೋಟೆ, ತಾತ್ಕಾಲಿಕ ಬಿಡಾರ.
ದಳವಾಯಿ ಮಹಾರಾಜರು ಪಿರಿಯಾಪಟ್ಟಣಕ್ಕೆ ಯುದ್ಧಕ್ಕೆ ಹೋಗುವ ಸಂದರ್ಭದಲ್ಲಿ ಮಹಾರಾಜರ ಕುಲದೇವತೆ ಬೆಟ್ಟದ ಚಾಮುಂಡಿಯನ್ನು ನೆನೆಯದೆ ಪಿರಿಯಾಪಟ್ಟಣದ ಮಸಣಿಕಮ್ಮನಿಗೆ ಪಿರಿಯಾಪಟ್ಟಣ ನನ್ನ ವಶವಾಗಲಿ ಎಂದು ನೆನೆದಿದ್ದಕ್ಕೆ ಚಾಮುಂಡಿ ಯುದ್ಧದಲ್ಲಿ ದಳವಾಯಿ ಅವರಿಗೆ ಸಹಾಯ ಮಾಡಲಿಲ್ಲ ಇದರಿಂದಾಗಿ ದಳವಾಯಿ ಸೈನ್ಯವನ್ನು ಕಳೆದುಕೊಳ್ಳುತಿದ್ದನು ಸೋಲು ಕಚಿತವೆಂದು ಮನವರಿಕೆಯಾದಾಗ ಬೆಟ್ಟದ ಚಾಮುಂಡಿಯನ್ನು ನೆನೆಯದಿದ್ದುದು ಮಹಾಪರಾಧವಾಯಿತೆಂದು ತಪ್ಪು ಹರಕೆ ಕಟ್ಟಿಕೊಂಡ ಮೇಲೆ ಮೈಸೂರಿನಿಂದ ಚಾಮುಂಡಿ ತನ್ನೆಲ್ಲಾ ಬಳಗದೊಡನೆ ಬಂದು ದಳವಾಯಿಗೆ ನೆರವಾಗಿ ನಿಂತಳು. ಈ ಸಲ ದಳವಾಯಿ ಚಿಲ್ಕುಂದದ ಮೇಲೆ ಕೊಮ್ಮಾರರಸನನ್ನು ನೇರವಾಗಿ ಎದುರಿಸಿದ. ಚಿಲ್ಕುಂದದವರು ಮಹಾ ಪರಾಕ್ರಮಿಗಳೆಂದು ಅರಿತ ಚಾಮುಂಡಿ ಅವರನ್ನು ಗೆಲ್ಲಲು ಒಂದು ತಂತ್ರವನ್ನು ಮಾಡಿದಳು. ಚಿಲ್ಕುಂದದ ದಂಡಿಗೆ ಹುಚ್ಚು ಆವೇಶವನ್ನು ಕೊಟ್ಟಳು. ಆ ದಂಡು ಮೈಸೂರು ಸೈನ್ಯವನ್ನು ಗುಂಗ್ರಾಲ್ ಛತ್ರದ ತನಕವೂ ಅಟ್ಟಿಸಿಕೊಂಡು ಬಂದಿತು. ಹೀಗೆ ಅಟ್ಟಿಸಿಕೊಂಡು ಬಂದ ಚದುರಂಗ ಬಲವನ್ನೆಲ್ಲಾ ಈ ಗ್ರಾಮದಲ್ಲಿ ಬಂಡೆಗಳನ್ನಾಗಿಸಿ ನಿಲ್ಲಿಸಿದಳು. ಆದರೆ ಗುಂಗ್ರಾಲ್ ಛತ್ರದ ಗ್ರಾಮಸ್ಥರು ಹೇಳುವ ಕಥೆ ಎಂದರೆ ಗುಂಗ್ರಾಲ್ ಛತ್ರದ ಮೇಲೆ ಪಿರಿಯಾಪಟ್ಟಣದ ದಂಡು ಗುಂಗ್ರಾಲ್ ಛತ್ರದ ಕೊಟೆಯ ಮೇಲೆ ೧೬ ವರ್ಷದ ಯೌವನವತಿಯಾಗಿ ತಲೆಯನ್ನು ಬಾಚುತ್ತಿರುತ್ತಾಳೆ. ಇವಳನ್ನು ನೋಡಿದ ಪಿರಿಯಾಪಟ್ಟಣದ ರಾಜ ಯುದ್ಧವನ್ನು ಗೆಲ್ಲುವುದಕ್ಕಿಂತ ಈಕೆಯನ್ನೆ ಅಪಹರಿಸಿಕೊಂಡು ಹೋಗೋಣ ಎಂದು ಹೇಳುತ್ತಾನೆ. ಇವರ ಮರ್ಮವನ್ನು ಅರಿತ ಲಕ್ಷ್ಮಿದೇವಿಯು ನೀವಿದ್ದ ಸ್ಥಳದಲ್ಲಿಯೆ ಬಂಡೆಗಳಾಗಿ ಎಂದು ಶಾಪಕೊಟ್ಟಳಂತೆ ಅದರಂತೆಯೇ ಅವರೆಲ್ಲಾ ಕಲ್ಲು ಬಂಡೆಗಳಾದರು. ಈ ಕಲ್ಲು ಬಂಡೆಗಳು ಇಂದಿಗೂ ಸಹ ಗುಂಗ್ರಾಲ್ ಛತ್ರ ಗ್ರಾಮದಲ್ಲಿರುವುದು ಇತಿಹಾಸಗಳನ್ನು ತಿಳಿಸುವ ಅಂಶಗಳಾಗಿವೆ. ಮೈಸೂರಿನ ದಳವಾಯಿ ಪುಟ್ಟರಸು ಅವರು
ವೀರರಾಜನು ಅಪ್ರತಿಮ ಪರಾಕ್ರಮಿ, ಗಂಡು ಮೆಟ್ಟಿದ ನಾಡಿನವನು. ಯುದ್ಧದಲ್ಲಿ ತಾನು ಮಡಿಯುವುದು ನಿಶ್ಚಿತವೆಂದು ತಿಳಿದ ಮೇಲೆ ತನ್ನ ಪ್ರೀತಿಯ ಮಡದಿಯರನ್ನು ತವರಿಗೆ ಹೋಗಿ ಜೀವ ಉಳಿಸಿಕೊಳ್ಳಿ ಎಂದು ಹೇಳುತ್ತಾನೆ. ಇದಕ್ಕೆ ಪ್ರತ್ಯುತ್ತರವಗಿ ನಾವು ವೀರನ ಮಡದಿಯರೆ ಹೊರತು ಹೇಡಿಯ ಹೆಂಡತಿಯರಲ್ಲ! ತಮ್ಮನ್ನು ಕತ್ತರಿಸಿ ಅನಂತರ ಯುದ್ಧಕ್ಕೆ ಹೋಗಲು ಹೇಳುತ್ತಾರೆ. ಬೇರೆ ದಾರಿಯೇ ಇಲ್ಲದಿದ್ದ ವೀರರಾಜ ತನ್ನ ಸತಿಯರನ್ನು ಕೊಂದು ರಣರಂಗಕ್ಕೆ ಬಂದು ಯುದ್ಧಮಾಡುತ್ತಿರುವಾಗ, ಪರಮ ವೈರಿ ದಳವಾಯಿಯನ್ನು ಗುಂಗ್ರಾಲ್ ಛತ್ರದಲ್ಲಿ ಎದುರಾಗುತ್ತಾನೆ. ಮೈಸೂರು ಸೈನ್ಯವನ್ನು ದಿಕ್ಕು ಪಾಲು ಮಾಡಿ ದಳವಾಯಿಗೆ ಮುಖಾಮುಖಿಯಾಗಿ ನಿಲ್ಲುತ್ತಾನೆ. ಅಷ್ಟು ಹೊತ್ತಿಗೆ ಬಂದ ಚಾಮಾಯಿ ವೀರರಾಜನ ಇರಿತಕ್ಕೆ ಒಳಗಾಗಬೇಕಿದ್ದ ದಳವಾಯಿಯನ್ನು ರಕ್ಷಿಸುತ್ತಾಳೆ.
ಹೀಗೆ ದಳವಾಯಿ ಹಾಗೂ ವೀರರಾಜನಿಗೂ ನಡೆದ ಕಾಳಗದಲ್ಲಿ ಗುಂಗ್ರಾಲ್ ಛತ್ರವು ಪ್ರಸ್ತಾಪವಾಗುತ್ತದೆ. ಅಲ್ಲದೆ ಈ ಗ್ರಾಮದಲ್ಲಿ ದಳವಾಯಿ ಅವರು ಯುದ್ಧ ಸಾಮಗ್ರಿಗಳನ್ನು ಇಟ್ಟುಕೊಳ್ಳಲು ಅಂಟುಕ್ವಾಟೆಯನ್ನು ನಿರ್ಮಿಸಿದ್ದರು. ಹೀಗಾಗಿ ಈ ಗ್ರಾಮವು ತನ್ನದೇ ಆದಂತಹ ಐತಿಹಾಸಿಕ ಮಹತ್ವವನ್ನು ಪಡೆದುಕೊಂಡಿದೆ ಎಂದು ಹೇಳಬಹುದು.
ಭೌಗೋಳಿಕ ಹಿನ್ನೆಲೆ
[ಬದಲಾಯಿಸಿ]'ಅರಮನೆಗಳ ನಗರಿ' 'ಸಾಂಸ್ಕೃತಿಕ ರಾಜಧಾನಿ' ಎಂದೇ ಜಗತ್ ಪ್ರಸಿದ್ಧಿಯನ್ನು ಪಡೆದಿರುವ ಮೈಸೂರು ಕರ್ನಾಟಕದ ಸಂಸ್ಕೃತಿಯ ತವರೂರು ಎಂದರೆ ತಪ್ಪಾಗಲಾರದು. ಇಂತಹ ಸುಂದರ ಜಿಲ್ಲೆಯಲ್ಲಿ 'ಗುಂಗ್ರಾಲ್ ಛತ್ರ' ಗ್ರಾಮವಿದೆ. ಈ ಗ್ರಾಮದಿಂದ ಐದು ಕಿ.ಮೀ ದೂರದಲ್ಲಿ ಲಕ್ಷ್ಮಣತೀರ್ಥ, ಕಾವೇರಿ ಹೊಳೆಗಳ ಸಂಗಮವಾಗಿ ಕಾವೇರಿ ನದಿ ಹರಿಯುತ್ತದೆ. ಹಾಗೆಯೇ ಈ ಗ್ರಾಮದಿಂದ ೮ ಕಿ.ಮೀ ದೂರದಲ್ಲಿ ಇತಿಹಾಸ ಪ್ರಸಿದ್ಧವಾದ ಜೈನ ಧಾರ್ಮಿಕ ಕೇಂದ್ರ ಗೊಮ್ಮಟಗಿರಿ ಕ್ಷೇತ್ರವಿದೆ. ಇಲ್ಲಿ ಏಕಶಿಲೆಯಲ್ಲಿ ಕೆತ್ತಿರುವ ಗೊಮ್ಮಟೇಶ್ವರನ ಸುಂದರ ಮೂರ್ತಿ ಇದೆ ಮತ್ತು ೨೪ ತೀರ್ಥಂಕರರ ಪಾದಗಳಿವೆ. ಈ ಮೂಲಕ ತಿಳಿಯುವ ಒಂದು ಮುಖ್ಯವಿಚಾರವೆಂದರೆ ಮೈಸೂರಿನ ಹಲವಾರು ಪ್ರಾಂತ್ಯಗಳು ಜೈನಧರ್ಮದ ಪ್ರಭಾವಕ್ಕೆ ಒಳಗಾಗಿತ್ತು ಎಂಬುದು.
ದೇವಾಲಯಗಳ ಅಧ್ಯಯನ
[ಬದಲಾಯಿಸಿ]ಒಂದು ಗ್ರಾಮದಲ್ಲಿರುವ ದೇವಾಲಯಗಳು ಅಂದಿನ ಸಂಸ್ಕೃತಿ, ಜನಜೀವನ, ಇತಿಹಾಸ ಮುಂತಾದ ಅಂಶಗಳನ್ನು ಪ್ರತಿಪಾದಿಸುತ್ತವೆ. ಗುಂಗ್ರಾಲ್ ಛತ್ರ ಗ್ರಾಮದಲ್ಲಿರುವ ದೇವಾಲಯಗಳು ಸಹ ತುಂಬಾ ಪ್ರಾಚೀನವಾದಂತಹ ಅವಶೇಷಗಳನ್ನು ಹೊಂದಿವೆ. ಒಂದು ರಾಜ ಮನೆತನ ದೇವಾಲಯವನ್ನು ನಿರ್ಮಿಸಿದರೆ ಆ ನಂತರ ಬಂದ ಮತ್ತೊಂದು ರಾಜಮನೆತನವು ಆ ದೇವಾಲಯಕ್ಕೆ ಹಲವಾರು ಬದಲಾವಣೆಗಳನ್ನು ಮಾಡಿ ತಮ್ಮ ಧರ್ಮದ ಪ್ರಭಾವ ಅ ದೇವಾಲಯದ ಮೇಲೆ ಆಗುವಂತೆ ನೋಡಿಕೊಳ್ಳುತ್ತದೆ.
ಈ ಗ್ರಾಮದಲ್ಲಿರುವ ದೇವಾಲಯಗಳ ವಿವರಗಳನ್ನು ಈ ಕೆಳಕಂಡಂತೆ ನೋಡಬಹುದು.
- ಕೊಂಗನ ಕೇತಿ
- ಬಳ್ಳಾರ್ಕಮ್ಮ
- ಕಾಡ್ ಬಸಪ್ಪನ ಗುಡಿ
- ಮಕ್ಳ ತಿಮ್ಮಪ್ಪ
ಈ ನಾಲ್ಕು ದೇವಾಲಯಗಳನ್ನು ಈ ಗ್ರಾಮದ ನಾಲ್ಕು ದಿಕ್ಕಿನಲ್ಲೂ ಸ್ಥಾಪಿಸಲಾಗಿದ್ದು, ಇವು ಗ್ರಾಮದ ಒಳಿತಿಗಾಗಿ ರಾಜರ ಕಾಲದಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯಗಳು ಕಟ್ಟಡಗಳನ್ನು ಹೊಂದಿಲ್ಲ. ಕೆತ್ತನೆಯನ್ನು ಹೊಂದಿಲ್ಲ. ಮೂರು ಕಲ್ಲಿನ್ನು ನಿಲ್ಲಿಸಿ ಅದರ ಮೇಲೆ ಒಂದು ಅಗಲವಾದ ಚಪ್ಪಡಿ ಕಲ್ಲನ್ನು ಇಡಲಾಗಿದೆ.
ಪ್ರಾಚೀನ ದೇವಾಲಯಗಳು
- ಶ್ರೀ ಲಕ್ಷ್ಮೀ ದೇವಿ ದೇವಸ್ಥಾನ
- ಈಶ್ವರ ದೇವಾಲಯ
- ಬಸವೇಶ್ವರ ದೇವಾಲಯ
- ಸಿದ್ದೇಶ್ವರ ದೇವಾಲಯ
- ಮಾರಮ್ಮನ ಗುಡಿ
ಶ್ರೀ ಲಕ್ಷ್ಮೀ ದೇವಿ ದೇವಸ್ಥಾನ
ಶ್ರೀ ಲಕ್ಷ್ಮೀದೇವಿಯು ಗುಂಗ್ರಾಲ್ ಛತ್ರದ ಗ್ರಾಮದೇವತೆಯಾಗಿದೆ. ಈ ದೇವರಿನ ಮೂಲ ನೆಲೆ ಕೃಷ್ಣರಾಜನಗರ ತಾಲೋಕಿನ ಮಿರ್ಲೆ ಗ್ರಾಮವಾಗಿದೆ. ಮಿರ್ಲೆ ಗ್ರಾಮದಲ್ಲಿ ನಡೆದ ಯಾವುದೋ ಕಲಹದಿಂದಾಗಿಯೋ ಏನೋ ಆಕೆ ಈ ಗ್ರಾಮವನ್ನು ತೊರೆದಿರಬೇಕು. ಈ ತಾಯಿಯು ಸಾಲಿಗ್ರಾಮದಿಂದ ಹೊರಟು ಯಲಚನಹಳ್ಳಿ (ಇದು ಗುಂಗ್ರಾಲ್ ಛತ್ರ ಗ್ರಾಮದ ಪಕ್ಕದ ಗ್ರಾಮ) ಗ್ರಾಮಕ್ಕೆ ಬಂದಳಂತೆ. ಆದರೆ ಅಲ್ಲಿನ ಪ್ರದೇಶ ಚಿಕ್ಕದು ಎಂಬ ಕಾರಣಕ್ಕೆ ಮುಂದಕ್ಕೆ ಒಂದು ಹೆಜ್ಜೆ ಹಾಕಿದಾಗ ಸಿಕ್ಕಿದ ಗ್ರಾಮವೇ ಗುಂಗ್ರಾಲ್ ಛತ್ರ. ಈ ಗ್ರಾಮ ಉತ್ತಮ ಎಂದು ಇದೇ ಗ್ರಾಮದಲ್ಲಿ ನೆಲೆಸಲು ನಿರ್ಧರಿಸಿದಳಂತೆ.
ಈ ದೇವಾಲಯದ ಎಲ್ಲಾ ಗೋಡೆಗಳು ಕೇವಲ ಮಣ್ಣಿನಿಂದ ಮಾತ್ರ ನಿರ್ಮಿಸಲಾಗಿದೆ. ದೇಗುಲದ ಗರ್ಭಗುಡಿಯಲ್ಲಿ ಯಾವುದೇ ರೀತಿಯ ವಿಗ್ರಹಗಳಿಲ್ಲ ಕೇವಲ ಹುತ್ತ ಮಾತ್ರ ಬೆಳೆಯುತ್ತಲಿರುತ್ತದೆ. ಈ ಹುತ್ತವನ್ನು ಕತ್ತರಿಸಿ ದೇವಾಲಯದ ಗೋಡೆಗಳಿಗೆ ಹುತ್ತದ ಮಣ್ಣನ್ನು ಕಲಸಿ ಬಳೆಯಲಾಗುತ್ತದೆ. ಈ ದೇವಾಲಯದ ಬಾಗಿಲನ್ನು ವರ್ಷಕ್ಕೆ ಕೇವಲ ಒಂದು ಬಾರಿ ಮಾತ್ರ ತೆಗೆಯುವುದು ಈ ದೇವಾಲಯದ ಒಂದು ವಿಶೇಷತೆ ಈ ರೀತಿ ವರ್ಷಕ್ಕೆ ಒಂದು ಬಾರಿ ಮಾತ್ರ ಬಾಗಿಲು ತೆಗೆಯುವ ಕರ್ನಾಟಕದ ಮತ್ತೊಂದು ದೇವಾಲಯವೆಂದರೆ ಹಾಸನ ಜಿಲ್ಲೆಯ ಹಾಸನಾಂಭ ದೇವಾಲಯ. ಹಾಸನಾಂಭ ದೇವಾಲಯವು ಕೂಡ ಮಣ್ಣಿನಿಂದಲೇ ಮಾಡಿದಂತಹ ದೇವಾಲಯವಾಗಿದೆ. ಮುಖ್ಯವಾಗಿ ಈ ದೇವಾಲಯದಲ್ಲಿ ಎರಡು ದೇವಾಲಯಗಳಿವೆ ದೊಡ್ಡಮ್ಮ ಮತ್ತು ಚಿಕ್ಕಮ್ಮ. ದೊಡ್ಡಮ್ಮನೆ ಲಕ್ಷ್ಮೀದೇವಿ ಈಕೆ ಚಿನ್ನಾಭರಣಗಳ ಪ್ರಿಯೆ ಹಾಗೂ ಚಿಕ್ಕಮ್ಮ ಮಕ್ಕಳ ಪ್ರಿಯೆ. ಈ ದೇವಾಲಯದ ಗರ್ಭಗುಡಿಯ ಒಳಗೆ ಎರಡು ಗೋಡೆಗಳನ್ನು ಹಾಕಲಾಗಿದೆ. ಏಕೆಂದರೆ ದೊಡ್ಡಮ್ಮ ಚಿಕ್ಕಮ್ಮ ಅಕ್ಕ ತಂಗಿಯರು. ಇವರು ಜವಗಳವಾಡಿಕೊಂಡು ಒಬ್ಬರ ಮುಖ ಒಬ್ಬರು ನೋಡಬಾರದೆಂದು ಈ ರೀತಿ ಗೋಡೆಗಳನ್ನು ಹಾಕಲಾಗಿದೆ.
- ಲಕ್ಷ್ಮಿಯ ವಿಗ್ರಹ
ಲಕ್ಷ್ಮೀಯ ವಿಗ್ರಹವನ್ನು ವರ್ಷಕ್ಕೆ ಒಂದು ಬಾರಿ ಮಾತ್ರ ದೇವಸ್ಥಾನಕ್ಕೆ ತರಲಾಗುತ್ತದೆ. ಈ ವಿಗ್ರಹವು ಅತ್ಯಂತ ಚಿಕ್ಕದಾಗಿದ್ದು ಒಂದು ಅಡಿಗಿಂತ ಸ್ವಲ್ಪ ಎತ್ತರವಾಗಿದೆ. ಹಾಗಾಗಿ ಇದು ಕೂಡ ಹಳೆಯ ವಿಗ್ರಹವೆಂದು ತಿಳಿಯುತ್ತದೆ.
- ಕಲ್ಲಿನ ತೇರು
ಹಿಂದೆ ಲಕ್ಷ್ಮೀದೇವಿಗೆ ಜಾತ್ರೆಯ ಸಮಯದಲ್ಲಿ ತೇರು ಹರಿಯುತಿತ್ತಂತೆ ಈ ತೇರು ಹರಿಯುವ ಸಂದರ್ಭದಲ್ಲಿ ಜನಗಳು ಜಗಳವಾಡುತ್ತಿದರಂತೆ. ಪ್ರತೀ ವರ್ಷವೂ ಈ ರೀತಿ ನಡೆಯುತಿತ್ತಂತೆ. ಆದ್ದರಿಂದಾಗಿಯೆ ತೇರು ಎಳೆಯುವುದನ್ನು ನಿಲ್ಲಿಸಲಾಯಿತು ಎಂದು ಹೇಳುತ್ತಾರೆ. ನಂತರ ಈ ರೀತಿಯ ತೇರು ನಿಂತ ಮೇಲೆ ಮತ್ತೊಂದು ತೇರು ನಿರ್ಮಾಣವಾಯಿತು. ಅದೇ ಕಲ್ಲಿನ ತೇರು, ಅಂದರೆ ನಾಲ್ಕು ಮೂಲೆಯಲ್ಲಿಯೂ ನಾಲ್ಕು ಕಲ್ಲಿನ ಕಂಬಗಳನ್ನು ನಿಲ್ಲಿಸಿ ಅದರ ಮೇಲೆ ಮರದಿಂದ ತೇರನ್ನು ಕಟ್ಟಲಾಯಿತು. ಈ ತೇರು ೨೦೦೦ ಇಸವಿಯ ವರೆಗೂ ಇತ್ತು ನಂತರ ಗ್ರಾಮದ ರಸ್ತೆ ಅಭಿವೃದ್ಧಿಯಲ್ಲಿ ಕಿತ್ತು ಹಾಕಲಾಯಿತು. ಇಲ್ಲಿ ಸಂಸ್ಕೃತಿಯ ಪ್ರತೀಕವಾಗಿದ್ದ ಕಲ್ಲಿನ ತೇರು ನಾಶವಾದದ್ದು ಮುಂದಿನ ಪೀಳಿಗೆಗೆ ತುಂಬಲಾರದ ನಷ್ಟವಾಗಿದೆ. ಇದರ ಮತ್ತೊಂದು ವೈಶಿಷ್ಟ್ಯವೆಂದರೆ ಇದೊಂದು ನಿಂತ ತೇರಾಗಿತ್ತು.
- ಕೊಳ
ಈ ಕೊಳವು ಗ್ರಾಮದಿಂದ ನೂರು ಮೀಟರ್ ದೂರದಲ್ಲಿದೆ. ಈ ಕೊಳವು ಗಂಗರಾಜರ ಕಾಲದಲ್ಲಿ ನಿರ್ಮಾಣ ಮಾಡಲಾಗಿದೆ. ಇದರ ಮುಂದೆ ೨೫೦ ವರ್ಷದಷ್ಟು ಹಳೆಯದಾದ ಅರಳಿ ಮರವೊಂದಿದೆ. ಇದರ ಸುತ್ತಲೂ ವೀರಗಲ್ಲುಗಳನ್ನು ನಿಲ್ಲಿಸಲಾಗಿತ್ತು. ಸದ್ಯಕ್ಕೆ ಶಿವನ ಮತ್ತು ಬಸವನ ಮೂರ್ತಿ ಇರುವ ಒಂದು ಕಲ್ಲು ಮಾತ್ರ ಈಗಲೂ ಅಸ್ತಿತ್ವದಲ್ಲಿದೆ. ಉಳಿದವು ಕಾಲಾನಂತರ ಕಣ್ಮರೆಯಾಗಿವೆ ಎಂದು ಹೇಳಬಹುದು.
ಗಂಗರಾಜನು ಬೇಟೆಗೆ ಹೋದಾಗ ಪ್ರಾಣಿ ಪಕ್ಷಿಗಳಿಗೆ ಕುಡಿಯಲು ನೀರಿಲ್ಲದಿದ್ದನ್ನು ಅರಿತು ತನ್ನ ದಳಪತಿಗೆ ಹೇಳಿ ಕೊಳವನ್ನು ನಿರ್ಮಿಸಿದನಂತೆ.ಈ ಗ್ರಾಮದ ಜನ ಕುಡಿಯಲು ಕೂಡ ಈ ಕೊಳವನ್ನೆ ಆಶ್ರಯಿಸಿದ್ದುದು ತಿಳಿದುಬರುತ್ತದೆ. ನಂತರ ಲಕ್ಷ್ಮೀದೇವಿಯ ದೇವಾಲಯದ ಸತ್ತಿಗೆಗಳನ್ನು ಈ ಕೊಳದ ಬಳಿಯೆ ತೊಳೆಯಲಾಗುತಿತ್ತು. ಆದರೆ ಹಲವಾರು ವರ್ಷಗಳಿಂದ ಮಳೆ ಬೀಳದೆ ಕೊಳ ಬತ್ತಿ ಹೋಯಿತು. ನಂತರ ಇದರ ಸುತ್ತಲಿನ ಪರಿಸರವು ನಾಶವಾಗಿ ಮರ ಗಿಡಗಳು ಬೆಳೆದು ಕೊಳ ಹಾಳಾಗಿದೆ.
ಈಶ್ವರ ದೇವಾಲಯ
ಈ ಗ್ರಾಮದಲ್ಲಿರುವಂತಹ ಈಶ್ವರ ದೇವಾಲಯವು ತುಂಬಾ ಪ್ರಾಚೀನವಾದಂತಹ ಇತಿಹಾಸವನ್ನು ಹೊಂದಿದೆ. ಈ ದೇವಾಲಯವು ಗಂಗರ ಕಾಲದಲ್ಲಿ ನಿರ್ಮಾಣವಾಗಿದ್ದು ಕ್ರಿ.ಶ. ಸುಮಾರು ೧೦ ಶತಮಾನ ಇದರ ಕಾಲವಾಗಿದೆ. ಇಲ್ಲಿನ ಶಿವಲಿಂಗವು ಬಹಳ ಆಕರ್ಷಕವಾಗಿದ್ದು ಈ ಶಿವಲಿಂಗದ ಮುಖದ ಮೇಲೆ ಉದ್ದನೆಯ ಗೆರೆ ಇದೆ ಇದನ್ನು 'ಬ್ರಹ್ಮ ಸೂತ್ರ' ಎಂದು ಕರೆಯುತ್ತಾರೆ. ಈ ಶಿವಲಿಂಗವು ಬ್ರಹ್ಮ ಭಾಗ, ವಿಷ್ಣು ಭಾಗ, ಹಾಗೂ ರುದ್ರಭಾಗ ಎಂಬ ಮೂರು ಭಾಗಗಳನ್ನು ಹೊಂದಿದೆ. ಈ ದೇವಾಲಯದಲ್ಲಿ ಒಂದು ಬಾವಿ ಕೂಡ ಇತ್ತು ಇದರೊಳಗೆ ಒಂದು ಬಿಂದಿಗೆ ಹೋಗುವಷ್ಟು ಮಾತ್ರ ಸ್ಥಳವಿತ್ತು. ಈ ಬಾವಿಯಿಂದ ನೀರನ್ನು ತೆಗೆದು ಶಿವಲಿಗಂಗಕ್ಕೆ ಅಭಿಷೇಕ ಮಾಡಲಾಗುತಿತ್ತು. ಆದರೆ ಇತ್ತೀಚಿಗೆ ಈ ಬಾವಿಯನ್ನು ಚಪ್ಪಡಿ ಕಲ್ಲಿನಿಂದ ಮುಚ್ಚಲಾಗಿದೆ.
ಈ ದೇವಾಲಯದ ಬಲಭಾಗದಲ್ಲಿ ಗಣೇಶ ವಿಗ್ರಹವನ್ನು ಹೊಂದಿದೆ. ಇದರ ಎಡ ಭಾಗದಲ್ಲಿ ನಾಗರ ಕಲ್ಲುಗಳನ್ನು ಹೊಂದಿದೆ. ಈ ಮೂರು ವಿಗ್ರಹಗಳು ವಿಜಯನಗರ ಕಾಲದ್ದಾಗಿದೆ. ಈ ವಿಗ್ರಹಗಳ ಕಾಲ ಸು. ಕ್ರಿ.ಶ ೧೫೦೦. ಎಡ ಭಾಗದಲ್ಲಿ ವಿಷ್ಣು ಮತ್ತು ಸೂರ್ಯನ ವಿಗ್ರಹಗಳಿವೆ. ಇವು ಶಂಖ, ಚಕ್ರ, ಗದೆಗಳನ್ನು ಹಿಡಿದುಕೊಂಡಿವೆ. ಈ ದೇವರುಗಳನ್ನು ಈಶ್ವರನ ಪರಿವಾರ ದೇವತೆಗಳು ಎಂದು ಕರೆಯಲಾಗಿದೆ. ಈ ವಿಗ್ರಹಗಳನ್ನು ಕಲ್ಲಿನಿಂದ ಕೆತ್ತಲಾಗಿದೆ. ಇವು ಸು.೧೦೦೦ ವರ್ಷದಷ್ಟು ಹಳೆಯ ವಿಗ್ರಹಗಳೆಂದು ಅಂದಾಜಿಸಲಾಗಿದೆ. ಶಿವನ ವಾಹನ ನಂದಿ ಹಾಗಾಗಿ ಈಶ್ವರ ದೇವಸ್ಥಾನದ ಶಿವಲಿಂಗದ ಮುಂದೆ ನಂದಿ ವಿಗ್ರಹ ಇದ್ದು ಇದು ಅತ್ಯಂತ ಆಕರ್ಷಕವಾದ ಕೆತ್ತನೆಯನ್ನು ಹೊಂದಿದೆ.
- ನಂದಿ ಕಂಬದ ಮೇಲಿರುವ ಶಿವಲಿಂಗ: ಈ ನಂದಿ ಕಂಬದ ಮೇಲೆ ಒಂದು ಶಿವಲಿಂಗವನ್ನು ಕೆತ್ತಲಾಗಿದೆ. ಅದರ ಬಲಭಾಗದಲ್ಲಿ ಭಕ್ತನೊಬ್ಬ ನಿಂತಿದ್ದಾನೆ. ಈತನು ನಂದಿ ಕಂಬವನ್ನು ಕೆತ್ತಿದ ಶಿಲ್ಪಿಯೋ ಅಥವಾ ಈ ದೇವಾಲಯವನ್ನು ನಿರ್ಮಿಸಿದ ಮಹಾ ಭಕ್ತನೋ ಇರಬೇಕು.
- ಏಕಶಿಲಾ ನಂದಿ ಕಂಬ
ಈಶ್ವರ ದೇವಾಲಯದ ಮುಂದೆ ನಂದಿ ಕಂಬವನ್ನು ಏಕಶಿಲೆಯಲ್ಲಿ ಕೆತ್ತಿ ನಿಲ್ಲಿಸಲಾಗಿದೆ ಇದನ್ನು ನಂದಿ ಕಂಬ ಅಥವಾ ದೀಪದ ಕಂಬ ಎಂದು ಕರೆಯಲಾಗುತ್ತದೆ. ಈ ನಂದಿ ಕಂಬದಲ್ಲಿ ೧೬ ಮುಖಗಳಿರುವುದು ಕಂಡು ಬರುತ್ತದೆ. ಈ ಕಂಬದಲ್ಲಿ ನಂದಿ ವಿಗ್ರಹ, ಶಿವಲಿಂಗ ಹಾಗೂ ಭಕ್ತನೊಬ್ಬನ ವಿಗ್ರಹವನ್ನು ಕಾಣಬಹುದಾಗಿದೆ.
- ಬಿಳಿಯ ಶಿವಲಿಂಗ
ಇದು ಅಪರೂಪದ ಬಿಳಿಯ ಕಲ್ಲಿನ ಶಿವಲಿಂಗವಾಗಿದೆ. ಇದರಲ್ಲಿ ವಿಭೂತಿ ಕಣ್ಣುಗಳು ಎದ್ದು ಕಾಣುತ್ತವೆ. ಆದ್ದರಿಂದಾಗಿ ಇದೂ ಕೂಡ ೧೦೦೦ ವರ್ಷಗಳ ಹಿಂದಿನ ಪ್ರಾಚೀನ ಶಿವಲಿಂಗವಾಗಿದೆ. ಈ ಲಿಂಗದಲ್ಲೂ ಬ್ರಹ್ಮಸೂತ್ರ ಇರುವುದು ಕಂಡುಬರುತ್ತದೆ.
- ಆಟದ ಕಲ್ಲು
ಹಬ್ಬದ ದಿನಗಳಲ್ಲಿ ಆಡಲೆಂದು ಈ ಕಲ್ಲುಗಳನ್ನು ದೇವಾಲಯದ ಮುಂದೆ ಇಡಲಾಗಿದೆ. ಈ ಕಲ್ಲಿನ ಮೇಲಿರುವ ಮನೆಗಳನ್ನು ಪಗಡೆ ಆಟದ ಶೈಲಿಯಲ್ಲಿ ಚಿತ್ರಿಸಲಾಗಿದೆ. ಇದರ ಕಾಲ ನಿರ್ಣಯ ತಿಳಿಯದಾಗಿದೆ. ಆದರೂ ಅಂದಾಜಿನ ಪ್ರಕಾರ ಇದಕ್ಕೆ ೨೦೦ ವರ್ಷಗಳ ಇತಿಹಾಸವಿದೆ ಎಂಬುದು ತಿಳಿಯುತ್ತದೆ.
- ಭದ್ರಕಾಳಿ ವಿಗ್ರಹ
ಇದೂ ಕೂಡ ಈಶ್ವರ ದೇವಾಲಯದ ಮುಂಭಾಗ ಇದೆ ಇದೊಂದು ಪೀಠದ ಮೇಲೆ ಕುಳಿತಿರುವ ವಿಗ್ರಹವಾಗಿದೆ. ಇದಕ್ಕೆ ನಾಲ್ಕು ಕೈಗಳಿವೆ ಎಡದ ಕೈಯಲ್ಲಿ ಕಮಲದ ಹೂ, ಬಲದ ಕೈಯಲ್ಲಿ ಖಡ್ಗವಿದೆ. ಉಳಿದ ಎರಡು ಕೈಯಲ್ಲಿ ತ್ರಿಶೂಲ ಹಾಗೂ ಡಮರುಗವನ್ನು ಹೊಂದಿದೆ. ಈ ವಿಗ್ರಹವು ಕಿರೀಟವನ್ನು ಹೊಂದಿದ್ದು ಒಂದು ಪೀಠದ ಮೇಲೆ ಕುಳಿತಿರುವುದು ಕಂಡುಬರುತ್ತದೆ.
- ನಗ್ನ ಸನ್ಯಾಸಿಗಳು
ಈಶ್ವರ ದೇವಾಲಯದ ಕಂಬಗಳಲ್ಲಿ ಹಲವಾರು ವಿಗ್ರಹಗಳನ್ನು ಕೆತ್ತಲಾಗಿದೆ.ಇವುಗಳಲ್ಲಿ ನಗ್ನ ಸನ್ಯಾಸಿಗಳು ಪ್ರಮುಖವಾಗಿವೆ. ಈ ನಗ್ನ ಸಾಧುಗಳು ಅಲೌಕಿಕ ಶಕ್ತಿಯನ್ನು ಪಡೆದುಕೊಳ್ಳುವುದಕ್ಕೆ ನಗ್ನವಾಗಿ ಸಾಧನೆ ಮಾಡುತಿದ್ದರಂತೆ. ನಾಗಸಾಧುಗಳು, ಅಘೋರಿಗಳು ಇದ್ದಂತೆ ಇವರು ಕೂಡ ಈ ಪ್ರಕಾರಕ್ಕೆ ಬರುತ್ತಾರೆ.
- ಕಂಬದ ಮೇಲಿರುವ ಇತರ ವಿಗ್ರಹಗಳು
ಈ ಕಂಬಗಳ ಮೇಲೆ ವಿಶೇಷವಾದ ಕೆತ್ತನೆಗಳು ಇರುವುದು ಕಂಡುಬರುತ್ತದೆ.
- ಮೀನಿನ ಮೇಲೆ ಕುಳಿತಿರುವ ಕೆತ್ತನೆ ಇದೆ.
- ಜೈನ ಸನ್ಯಾಸಿ ರೂಪದ ಕೆತ್ತನೆ ಕೂಡ ಕಾಣಿಸುತ್ತದೆ. ಈತನು ತನ್ನ ಎಡಗೈನಲ್ಲಿ ಕಮಂಡಲ ಹಿಡಿದುಕೊಂಡಿದ್ದಾನೆ. ಹಾಗೆಯೇ ಈತನು ಕೂಡ ನಗ್ನವಾಗಿಯೇ ಇದ್ದಾನೆ.
ಬಸವೇಶ್ವರ ದೇವಾಲಯ
ಬಸವೇಶ್ವರ ದೇವಾಲಯವು ವಿಜಯನಗರ ಕಾಲೋತ್ತರವಾಗಿದೆ. ಸುಮಾರು ೧೫, ೧೬ ನೇ ಶತಮಾನದ ದೇವಾಲಯವಾಗಿದೆ. ದೀಪಾವಳಿ ಹಾಗೂ ಯುಗಾದಿ ಹಬ್ಬದಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗುತ್ತದೆ. ಬಸವ ಮೂರ್ತಿಯನ್ನು ಅತ್ಯಂತ ಸೊಗಸಾಗಿ ಕೆತ್ತಲಾಗಿದೆ. ಹಾಗೆಯೇ ಇದರ ಪಕ್ಕದಲ್ಲಿ ಗಣೇಶನ ವಿಗ್ರಹವೂ ಕೂಡ ಇದೆ.
- ಕಂಬದ ಮೇಲಿರುವ ಅಲಂಕಾರಿಕ ವಿಗ್ರಹಗಳು
- ಕಂಬದಲ್ಲಿ ಗಣೇಶನ ಮೂರ್ತಿಯನ್ನು ಕೆತ್ತಲಾಗಿದೆ
- ಕುಬ್ಜರ ಶಿಲ್ಪಗಳನ್ನು ಹೊಂದಿದೆ
- ಕಾಲ್ಪನಿಕ ಪ್ರಾಣಿಯ ಚಿತ್ರವೊಂದು ಗಮನ ಸೆಳೆಯುತ್ತದೆ. ಹಂಸದ ದೇಹ, ಆನೆಯ ಸೊಂಡಿಲು, ಸಿಂಹದ ದೇಹ, ಆನೆಯ ಸೊಂಡಿಲು, ಸಿಂಹದ ಮುಖ ಹಾಗೂ ನವಿಲಿನ ಪುಕ್ಕವನ್ನು ಹೊಂದಿ ಸುಂದರ ಕೆತ್ತನೆಯನ್ನು ಒಳಗೊಂಡಿದೆ
- ಟಗರಿನ ತಲೆಯನ್ನು ಹೊಂದಿರುವ ವ್ಯಕ್ತಿಯ ಚಿತ್ರವಿದೆ
- ವೀರಭದ್ರೇಶ್ವರನ ವಿಗ್ರಹವು ಅತ್ಯಂತ ಮನೋಜ್ನವಾಗಿದ್ದು ವಿಜಯನಗರ ಕಾಲದ ಕೆತ್ತನೆಯ ಶೈಲಿಯನ್ನು ಹೊಂದಿದೆ. ಇದು ನಾಲ್ಕು ಕೈಗಳನ್ನು ಹೊಂದಿದ್ದು ಗುರಾಣಿ, ಕತ್ತಿ, ಬಿಲ್ಲು ಹಾಗೂ ಬಾಣಗಳನ್ನು ಹಿಡಿದಿದ್ದಾನೆ. ಈತನು ತ್ರಿಭಂಗಿಯಲ್ಲಿ ನಿಂತಿರುವುದು ಕಂಡುಬರುತ್ತದೆ.
ಸಿದ್ದೇಶ್ವರ ದೇವಾಲಯ ಈ ದೇವಾಲಯದ ಒಂದು ವಿಶೇಷವೆಂದರೆ ಇದೊಂದು ವೀರಗಲ್ಲು, ಒಳಕಲ್ಲಿನ ಒಳಗೆ ನಿಲ್ಲಿಸಲಾಗಿದೆ. ಈ ದೇವಾಲಯವು ಕ್ರಿ.ಶ. ೧೧ ಅಥವಾ ೧೨ ನೇ ಶತಮಾನದ್ದಾಗಿದೆ. ಚೋಳರ ಕಾಲದಲ್ಲಿ ನಡೆದ ಯುದ್ಧವೊಂದರಲ್ಲಿ ಹೋರಾಡಿ ಸತ್ತ ವೀರನ ಒಂದು ಸ್ಮಾರಕವಾಗಿದೆ. ಎರಡ ಕೈಯಲ್ಲಿ ಗುರಾಣಿಯನ್ನು ಹಿಡಿದುಕೊಂಡಿದ್ದಾನೆ. ಬಲಗೈಲಿ ಚಂದ್ರಾಯುಧ ತರಹದ ಕತ್ತಿಯನ್ನು ಹಿಡಿದುಕೊಂಡಿದ್ದಾನೆ. ಸೊಂಟದಲ್ಲಿ ಕತ್ತಿಯನ್ನು ಇಡುವ ಒರೆಯನ್ನು ಹೊಂದಿದ್ದಾನೆ. ಈತ ವೀರ ಮುಡಿಯನ್ನು ಕಟ್ಟಿಕೊಂಡಿರುವ ಭಂಗಿಯಲ್ಲಿ ನಿಂತಿದ್ದಾನೆ.
ಸಿದ್ದೇಶ್ವರ ದೇವಾಲಯದ ಮುಂದೆ ಇರುವ ಕಲ್ಲಿನ ವಿಗ್ರಹ ಈ ದೇವಾಲಯದ ಮುಂದೆ ಒಂದು ಅಡಿ ಎತ್ತರದ ಕಲ್ಲಿನ ವಿಗ್ರಹವೊಂದಿದೆ ಇದೊಂದು ಕಾಳಾಮುಖ ವಿಗ್ರಹವಾಗಿದ್ದು, ಕಾಳಾಮುಖ ಪಂಥಕ್ಕೆ ಸಂಬಂಧಿಸಿದ್ದಾಗಿದೆ. ಈತ ಸನ್ಯಾಸಿಯಾಗಿರುವುದು ತಿಳಿದುಬರುತ್ತದೆ. ಇವರನ್ನು ಸಿದ್ದೇಶ್ವರ ಎಂದು ಕರೆಯಲಾಗಿದೆ. ಈತನು ಎಡದ ಕೈನಲ್ಲಿ ತಾಳೆಗರಿಯನ್ನು ಹಿಡಿದುಕೊಂಡಿದ್ದಾನೆ. ಬಲಗೈನಲ್ಲಿ ದಂಡವನ್ನು ಹಿಡಿದಿದ್ದಾನೆ, ತಲೆ ಮುಡಿಯನ್ನು ಕಟ್ಟಿಕೊಂಡು ನಿಂತಿದ್ದಾನೆ. ಇದು ಕೂಡ ತುಂಬಾ ಪ್ರಾಚೀನ ಕೆತ್ತನೆಯಾಗಿದ್ದು ಒಂದು ಸಾವಿರ ವರ್ಷದ ಇತಿಹಾಸವನ್ನು ಹೊಂದಿದೆ.
ಮಾರಮ್ಮನ ಗುಡಿ ಪ್ರತಿ ಗ್ರಾಮದಲ್ಲಿಯೂ ಮಾರಮ್ಮನ ಗುಡಿ ಇರುತ್ತದೆ. ಈ ಗ್ರಾಮದಲ್ಲಿಯೂ ಮಾರಮ್ಮನ ಗುಡಿ ಇದೆ. ಗರ್ಭಗುಡಿಯಲ್ಲಿ ಮರದಿಂದ ಕೆತ್ತಿದಂತಹ ಮಾರಮ್ಮ ಇದೆ. ಮಾರಿಹಬ್ಬದಲ್ಲಿ ವಿಶೇಷ ಪೂಜೆ ನಡೆಯುತ್ತದೆ ಹಾಗೂ ಜಾತ್ರೆಯ ಸಂದರ್ಭದಲ್ಲಿಯೂ ಪೂಜೆಗಳು ನಡೆಯುತ್ತವೆ. ಈ ಗುಡಿ ಮೊದಲು ಮಣ್ಣಿನಿಂದ ನಿರ್ಮಿಸಲಾಗಿತ್ತು. ಇತ್ತೀಚಿಗೆ ಇದನ್ನು ಆಧುನೀಕರಿಸಲಾಗಿದೆ. ಮಾರಿ ಹಬ್ಬದ ಸಮಯದಲ್ಲಿ ಮರದ ವಿಗ್ರಹಕ್ಕೆ ಮುಖವಾಡ ಹಾಕಿ ಪೂಜೆ ನಡೆಸಲಾಗುತ್ತದೆ.
ಗ್ರಾಮದಲ್ಲಿನ ವಿಶೇಷ ಸ್ಥಳಗಳು
- ಓಕಳಿ ಗುಂಡಿ
- ಕುದುರೆ ಮಂಟಿ
- ಯಣಿನ್ ಮಂಟಿ
- ಓಕಳಿ ಗುಂಡಿ
ಈ ಗ್ರಾಮದಲ್ಲಿ ಮುಂಗಾರು ಪ್ರಾರಂಭದಲ್ಲಿ ಮಳೆ ಬರದಿದ್ದರೆ ಮರದಲ್ಲಿ ಕೆತ್ತಿರುವಂತಹ ಬಸವನ ಮೇಲೆ ಕಪ್ಪೆಯನ್ನು ಕೂರಿಸಿ ಓಕಳಿ ಆಡುತ್ತಾ ಮೆರವಣಿಗೆ ಮಾಡುತ್ತಾರೆ. ರಾಜರ ಕಾಲದಲ್ಲಿ ಓಕಳಿ ಅಥವಾ ಓಳಿಯನ್ನು ಆಡುವುದಕ್ಕಾಗಿಯೆ ಇಂತಹ ಗುಂಡಿಗಳನ್ನು ನಿರ್ಮಿಸಲಾಗಿತ್ತು. ಈ ಓಕಳಿ ಗುಂಡಿಯು ಬಸವೇಶ್ವರ ದೇವಸ್ಥಾನದ ಪಕ್ಕದಲ್ಲಿತ್ತು ಆದರೆ ಇತ್ತೀಚಿಗೆ ಈ ಗುಂಡಿಯನ್ನು ಮುಚ್ಚಿಹಾಕಲಾಗಿದೆ.
- ಕುದುರೆ ಮಂಟಿ
ಪಿರಿಯಾಪಟ್ಟಣದ ರಾಜ ಗುಂಗ್ರಾಲ್ ಛತ್ರ ಗ್ರಾಮದ ಮೇಲೆ ಯುದ್ಧಕ್ಕೆ ಬರಬೇಕಾದರೆ ಗ್ರಾಮ ದೇವತೆ ಲಕ್ಷ್ಮೀದೇವಿಯು ಕೋಟೆಯ ಮೇಲೆ ತಲೆ ಬಾಚುತ್ತ ನಿಂತಿರಬೇಕಾದರೆ ಆ ರಾಜನ ಕಣ್ಣು ಈಕೆಯ ಮೇಲೆ ಬೀಳುತ್ತದೆ. ಈ ದೇವತೆಯನ್ನು ನೋಡಿದ ಮಹಾರಾಜನು ಯುದ್ಧಕ್ಕೆ ಬಂದಿದ್ದೇವೆ ಎಂಬುದನ್ನು ಮರೆತು ತನ್ನ ದಂಡಿಗೆ ಈ ಗ್ರಾಮದ ಮೇಲೆ ಯುದ್ಧ ಮಾಡುವುದು ಬೇಡ ಈಕೆಯನ್ನು ಅಪಹರಿಸೋಣ ಎನ್ನುತ್ತಾನೆ. ಇದನ್ನು ಅರಿತ ಲಕ್ಷ್ಮೀ ದೇವಿಯು ನೀವು ದಂಡಿನ ಸಮೇತ ಕಲ್ಲಾಗಿ ಎಂದು ಶಾಪ ಕೊಡುತ್ತಾಳೆ. ಕುದುರೆ, ಆನೆ, ಇದ್ದ ಹಾಗೆಯೇ ಬಂಡೆಗಳು ಇಂದಿಗೂ ಇರುವುದನ್ನು ಕಾಣಬಹುದಾಗಿದೆ.
- ಯಣಿನ್ ಮಂಟಿ
ಈ ಗ್ರಾಮದಲ್ಲಿರುವ ಮತ್ತೊಂದು ವಿಚಿತ್ರ ಹೆಸರೆಂದರೆ ಯಣಿನ್ ಮಂಟಿ. ಇದಕ್ಕೆ ಈ ಹೆಸರು ಬರಲು ಕಾರಣವೇನು ಎಂಬುದು ತಿಳಿಯದಾಗಿದೆ. ಗ್ರಾಮದ ಹಿರಿಯರು ಹೇಳುವ ಪ್ರಕಾರ ಯಾರಾದರು ಸತ್ತರೆ ಅಲ್ಲಿಗೆ ತೆಗೆದುಕೊಂಡು ಹೋಗಿ ಬಂಡೆಯ ಪಕ್ಕದಲ್ಲಿ ಗುಂಡಿ ತೆಗೆದು ಬಂಡೆಯನ್ನು ನೂಕುತಿದ್ದರಂತೆ. ಅಥವಾ ಯಾವುದೋ ಯುದ್ಧದಲ್ಲಿ ಅತಿ ಹೆಚ್ಚು ಮಂದಿ ಸಾವಿಗೀಡಾಗಿದ್ದರಿಂದ ಈ ರೀತಿ ಹೆಸರು ಬಂದಿರಬಹುದು.
ವೀರಗಲ್ಲುಗಳು
[ಬದಲಾಯಿಸಿ]ಈ ಗ್ರಾಮದಲ್ಲಿ ಒಟ್ಟು ಐದು ವೀರಗಲ್ಲುಗಳು ದೊರೆತಿವೆ.ಈ ಭೂಮಿ ದಂಡು-ದಾಳಿ ತಿರುಗಾಡಿದಂತಹ ವೀರ ಭೂಮಿಯಾಗಿದೆ. ಈ ಗ್ರಾಮದ ಜನ ಜೀವನ, ಇತಿಹಾಸ ತಿಳಿಯಲು ಈ ವೀರಗಲ್ಲುಗಳು ತುಂಬಾ ಸಹಕಾರಿಯಾಗಿವೆ.
- ಕೊಳದ ಬಳಿಯ ವೀರಗಲ್ಲು
- ಮೂರು ಹಂತದ ವೀರಗಲ್ಲು
- ನಾಯಕರ ಬೀದಿಯಲ್ಲಿರುವ ವೀರಗಲ್ಲು
- ಈಶ್ವರ ದೇವಾಲಯದ ಹಿಂದೆ ಇರುವ ವೀರಗಲ್ಲು
- ಕೊಳದ ಬಳಿಯ ವೀರಗಲ್ಲು
ಈ ವೀರಗಲ್ಲಿನಲ್ಲಿ ವ್ಯಕ್ತಿಯೊಬ್ಬ ಯುದ್ಧ ಮಾಡಿ ಸತ್ತಿದ್ದಾನೆ. ಅನಂತರ ಈತ ಕೈಲಾಸದಲ್ಲಿರುವ ಚಿತ್ರಣವನ್ನು ಕಾಣಬಹುದು.
- ಮೂರು ಹಂತದ ವೀರಗಲ್ಲು
ಈ ವೀರಗಲ್ಲಿನ ವಿಶೇಷವೆಂದರೆ ಇದು ಮೂರು ಹಂತಗಳಲ್ಲಿ ರಚನೆಯಾಗಿದೆ. ಇವುಗಳ ಎತ್ತರ ಐದು ಅಡಿಗಳಷ್ಟಿವೆ. ಮೊದಲ ಹಂತದಲ್ಲಿ ವೀರ ಯುದ್ಧ ಮಾಡುತ್ತಿರುವ ಚಿತ್ರಣ, ಎರಡನೇ ಹಂತದಲ್ಲಿ ಅಪ್ಸರೆ ಸ್ತ್ರೀಯರೊಂದಿಗೆ ಇರುವ ಚಿತ್ರ. ಮೂರನೇ ಹಂತದಲ್ಲಿ ಸ್ವರ್ಗದಲ್ಲಿರುವಂತಹ ಚಿತ್ರಣವನ್ನು ಈ ವೀರಗಲ್ಲಿನಲ್ಲಿ ಕಾಣಬಹುದಾಗಿದೆ. ಈ ಕಲ್ಲು ವಿಜಯನಗರದ್ದಾಗಿದೆ. ಕಾಲ ಸು ೧೫ನೇ ಶತಮಾನ. ಈ ವೀರಗಲ್ಲಿನ ಪಕ್ಕದಲ್ಲಿ ಮತ್ತೊಂದು ವೀರಗಲ್ಲಿದೆ ಇದರ ಮೇಲೆ ಶಿವಲಿಂಗಗಳನ್ನು, ಬಸವ ಮೂರ್ತಿಗಳನ್ನು ಕೆತ್ತಲಾಗಿದೆ. ಈ ಗ್ರಾಮದ ಮೇಲೆ ಹೆಚ್ಚು ಶೈವ ಧರ್ಮದ ಪ್ರಭಾವ ಬೀರಿರುವುದು ಸ್ಪಷ್ಟವಾಗಿದೆ.
- ನಾಯಕರ ಬೀದಿಯಲ್ಲಿ ಮತ್ತೊಂದು ವೀರಗಲ್ಲು ಇರುವುದನ್ನು ಕಾಣಬಹುದು. ಇದು ವಿಜಯನಗರ ಕಾಲದ ವೀರಗಲ್ಲಾಗಿದೆ.
- ಈಶ್ವರ ದೇವಾಲಯದ ಹಿಂದೆ ಇರುವ ವೀರಗಲ್ಲು
ಇದೊಂದು ಮೈಸೂರು ಒಡೆಯರ ಕಾಲದಲ್ಲಿ ನಡೆದಿರುವ ಯುದ್ಧದಲ್ಲಿ ಮರಣ ಹೊಂದಿದ ವೀರನ ಚಿತ್ರಣವಿದೆ. ಇದರ ಕಾಲ ಸು ೧೬೨೦. ಪಿರಿಯಾಪಟ್ಟಣ ಮತ್ತು ಒಡೆಯರ ಕಾಲದಲ್ಲಿ ನಡೆದ ಯುದ್ಧದ ವೀರನಿರಬಹುದು.
ಗ್ರಾಮದ ಹಬ್ಬಗಳು
[ಬದಲಾಯಿಸಿ]ಈ ಗ್ರಾಮದ ಹಬ್ಬಗಳು ಅತ್ಯಂತ ವಿಶಿಷ್ಟವಾದ ಆಚರಣೆ, ಸಂಪ್ರದಾಯಗಳನ್ನು ಹೊಂದಿವೆ. ಈ ಗ್ರಾಮದೆವತೆ ಎಂದಿನಿಂದ ನೆಲೆನಿಂತಳೊ ಅಂದಿನಿಂದ ಈ ಹಬ್ಬಗಳನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಗ್ರಾಮವನ್ನು ರಕ್ಷಿಸುವಂತಹ ದೇವತೆಗಳಾದ ಬನ್ನಿ ಕಾಳೇಶ್ವರಿ, ಪಟ್ಲದ ಅಮ್ಮ, ದಂಡಿನ ಮಾರಿ, ಮಾರಮ್ಮ, ಮಕ್ಳ ತಿಮ್ಮಪ್ಪ, ಬಳ್ಳಾರ್ಕಮ್ಮ, ಕೊಂಗನ ಕೇತಿ, ಕಾಡ್ ಬಸಪ್ಪ ಇವುಗಳಿಗೆ ಮೊದಲು ಪೂಜೆ ಸಲ್ಲಿಸಿದ ನಂತರ ಈ ಗ್ರಾಮದ ದೇವತೆ ಲಕ್ಷ್ಮಿದೇವಿಯ ಜಾತ್ರೆಯನ್ನು ನಡೆಸುವುದು ಸಂಪ್ರದಾಯವಾಗಿದೆ.
ಸಾರುವುದು
ಇಲ್ಲಿ ನಡೆಯುವ ಹಬ್ಬಗಳ ವೈಶಿಷ್ಟ್ಯ ಎಂದರೆ ಸಾರುವುದಾಗಿದೆ. ಅಂದರೆ ಇಂತದ್ದೇ ದಿನ ಹಬ್ಬ ನಡೆಯುತ್ತದೆ. ಎಂದು ಗ್ರಾಮದ ಮುಖಂಡರುಗಳಿಂದ ನ್ಯಾಯ ಪಂಚಾಯ್ತಿಯಲ್ಲಿ ತೀರ್ಮಾನವಾಗುತ್ತದೆ. ನಂತರ ಹಬ್ಬ ಇಂತಹ ದಿನ ನಡೆಯುತ್ತದೆ ಎಂದು ಸಾರಲಾಗುತ್ತದೆ.
ಕುಂಬಾರಕೊಪ್ಪಲಿನ ಅಮ್ಮನ ಹಬ್ಬ
ಮೈಸೂರಿನ ಕುಂಬಾರಕೊಪ್ಪಲಿನ ಬನ್ನಿಕಾಳೇಶ್ವರಿ ದೇವಾಲಯದಿಂದ ದೇವರನ್ನು ತೆಗೆದುಕೊಂಡು ಬಂದು ಅದನ್ನು ವಿಶಿಷ್ಟ ರೀತಿಯಿಂದ ದೊಡ್ಡೆ ಗೌಡನ ಕೊಪ್ಪಲು ಅಥವಾ ಛತ್ರದ ಕೊಪ್ಪಲಿನಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ಕೈಗೊಂಡು ಮೆರವಣಿಗೆಯ ನಂತರ ಗುಂಗ್ರಾಲ್ ಛತ್ರದ ದೇವಸ್ಥಾನದ ಬೀದಿಯಲ್ಲಿ ಸಾಗಿ ಬರುತ್ತದೆ. ಈ ಹಬ್ಬದ ವಿಶೇಷತೆ ಏನೆಂದರೆ ತೊಂಬಿಟ್ಟನ್ನು ದೇವರಿಗೆ ಅರ್ಪಿಸುವುದಾಗಿದೆ. ಹಾಗೆಯ ಕೋಟೆಯ ಬಾಗಿಲಿನ ಹತ್ತಿರ ವಿಶೇಷ ಪೂಜೆಯನ್ನು ಮಾಡಿ. ಕರಿಗೌಡರ ತೋಟದಲ್ಲಿ ಗದ್ದಿಗೆಯನ್ನು ಹೂಡಿ ಪೂಜೆ ಸಲ್ಲಿಸುತ್ತಾರೆ. ಈ ಹಬ್ಬದ ವಿಶೇಷವೆಂದರೆ ಇದು ಹೆಣ್ಣು ಮಕ್ಕಳನ್ನು ಕರೆಸಿ ಗ್ರಾಮದ ಮೊದಲ ಹಬ್ಬವನ್ನು ಆಚರಿಸಲಾಗುತ್ತಿದೆ.
ಪಟ್ಲದಮ್ಮನ ಹಬ್ಬ
ಈ ಹಬ್ಬವು ಗ್ರಾಮದ ಎರಡನೇ ವಿಶೇಷವಾದ ಹಬ್ಬ. ಈ ಹಬ್ಬಕ್ಕೆ ಗ್ರಾಮಸ್ಥರು ಅಕ್ಕಿ, ಬೇಳೆ, ಹಾಗೂ ಇತರೆ ಅಡುಗೆ ಸಾಮಾನುಗಳನ್ನು ಅಕ್ಪಡಿ ಎಂದು ಮಾರಿ ಪೂಜಾರರ ಮನೆಗೆ ನೀಡುತ್ತಾರೆ. ಗ್ರಾಮದ ರಕ್ಷಣೆಗಾಗಿ ಇರುವಂತಹ ಹಬ್ಬವಾಗಿದೆ. ಈ ಹಬ್ಬದ ಪ್ರಮುಖ ಕೇಂದ್ರ ವ್ಯಕ್ತಿಯೆಂದರೆ ಮಾರಿ ಪೂಜಾರಿ ಮನೆಯವರು ಇವರು ತಮ್ಮ ಮನೆಯಲ್ಲಿ ಪಟ್ಲದಮ್ಮನ ದೇವಸ್ಥಾನಕ್ಕೆ ಬೇಕಾದ ಪೂಜಾ ಸಾಮಗ್ರಿಗಳನ್ನು ಸಿದ್ಧಪಡಿಸಿಕೊಳ್ಳುತ್ತಾರೆ. ನಂತರ ದೇವಾಲಯದ ಹತ್ತಿರ ಹಾಕಿರುವ ಕೊಂಡದ ಮೇಲೆ ನಡೆದು ಎಡೆಯನ್ನು ಸಿದ್ಧಪಡಿಸಿಕೊಳ್ಳುತ್ತಾರೆ. ಹಾಗೆ ಅಲ್ಲಿ ನೆರೆದಿರುವವರು ಕೂಡ ಕೊಂಡವನ್ನು ತುಳಿಯುತ್ತಾರೆ.
ದಂಡಿನ ಮಾರಿ ಹಬ್ಬ
ದಂಡು ಅಂದರೆ ಸೈನ್ಯ ಬಂದು ನಿಂತಂತಹ ಸ್ಥಳವೇ ದಂಡಿನ ಮಾರಿ ದೇವಸ್ಥಾನವಾಗಿದೆ. ಮೂರು ಪುಟ್ಟ ಕಲ್ಲುಗಳಿಂದ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಗ್ರಾಮದ ರಕ್ಷಣೆಗಾಗಿ ಇರುವಂತಹ ದೇವರುಗಳಲ್ಲಿ ದಂಡಿನ ಮಾರಿಯೂ ಅತ್ಯಂತ ಶಕ್ತಿಯುತವಾದ, ವಿಶಿಷ್ಟವಾದ ದೇವತೆಯಾಗಿದೆ. ಈ ಹಬ್ಬವನ್ನು ನಾಯಕ ಜನಾಂಗದವರು ಮಾತ್ರ ಆಚರಿಸುತ್ತಾರಾದರೂ ಇಡೀ ಗ್ರಾಮಕ್ಕೆ ಸಂಬಂಧಿಸಿದ ಹಬ್ಬವಾಗಿದೆ. ಇದು ರಾತ್ರಿ ಸಮಯದಲ್ಲಿ ಆಚರಿಸುವ ಹಬ್ಬವಾಗಿದೆ. ದಂಡಿನ ಮಾರಿ ದೇವಸ್ಥಾನದ ಹತ್ತಿರ ಪೂಜೆ ಸಲ್ಲಿಸಲಾಗುತ್ತದೆ. ಅಲ್ಲಿ ದಂಡಿನ ಮಾರಿ ದೇವರಿಗಾಗಿಯೇ ವಿಶೇಷ ನೈವೇದ್ಯ ತಯಾರಾಗಿರುತ್ತದೆ. ಬಾಳೆ ಎಲೆಯ ಮೇಲೆ ಸುಟ್ಟಂತಹ ಸಪ್ಪೆ ರಾಗಿ ರೊಟ್ಟಿ, ಸಪ್ಪೆ ಮಾಂಸದ ತೊಳ್ಳೆ, ಸಪ್ಪೆ ಉರಳಿಕಾಳುಗಳನ್ನು ರುಚಿಯಿಲ್ಲದೆ ತಯಾರಿಸಿರುತ್ತಾರೆ. ರೊಟ್ಟಿಯನ್ನು ಬೆಂಕಿ ಮೇಲೆ ಬಾಳೆ ಎಲೆ ಇಟ್ಟು ಬೇಯಿಸಲಾಗಿರುತ್ತದೆ. ನಂತರ ಕರಿಗೌಡರ ತೋಟದ ಹತ್ತಿರ ಬಂದು ಈ ಸಪ್ಪೆ ಪ್ರಸಾದವನ್ನು ಅಲ್ಲಿ ನೆರೆದಿದ್ದವರೆಲ್ಲರೂ ಸ್ವೀಕರಿಸುತ್ತಾರೆ. ಈ ಹಬ್ಬಕ್ಕೆ ಪುರುಷರು ಮಾತ್ರ ಭಾಗವಹಿಸುತ್ತಾರೆ.
ಮಾರಿಹಬ್ಬ
ಮಾರಿಯರು ಊರಿಗೆ ನುಗ್ಗಿ ಹಲವಾರು ಖಾಯಿಲೆಗಳನ್ನು ಕೊಡುತ್ತಾರೆ. ಆದ್ದರಿಂದಾಗಿಯೇ ಇದನ್ನು ತಡೆಯಲು ಮಾರಮ್ಮನ ದೇವಸ್ಥಾನವನ್ನು ಕಟ್ಟಿರುತ್ತಾರೆ. ಈ ಹಬ್ಬದ ಪ್ರಮುಖ ವಿಶೇಷವೆಂದರೆ ಗುಂಗ್ರಾಲ್ ಛತ್ರ ಹಾಗೂ ಛತ್ರದ ಕೊಪ್ಪಲಿನವರು ಸೇರಿ ಆಚರಿಸುತ್ತಾರೆ. ತೊಂಬಿಟ್ಟನ್ನು ತಯಾರಿಸಿ ಅದಕ್ಕೆ ಕಣಗಲೆ ಹೂವನ್ನು ಮುಡಿಸಿ ಪೂಜೆ ಮಾಡಿಸಿಕೊಂಡು ಬರುತ್ತಾರೆ. ಈ ಹಬ್ಬದಲ್ಲೂ ಕೂಡ ತಮಟೆಯ ಶಬ್ಧ ಬಹಳ ಪ್ರಮುಖವಾಗಿರುತ್ತದೆ. ಬೆಳಿಗ್ಗೆ ಸಮಯದಲ್ಲಿ ಬೆಲ್ಲದನ್ನವನ್ನು ಮಾಡಿ ಚಿಕ್ಕ ಮಕ್ಕಳಿಗೆ ಬಡಿಸಲಾಗುತ್ತದೆ.
ಹರಗುಡುವುದು ಜಾತ್ರೆ ಒಂದು ವಾರ ಇದೆ ಅನ್ನುವ ಹಾಗೆ ಸತ್ತಿಗೆಗಳನ್ನು ತೊಳೆದು ಪೂಜಿಸುವ ಪದ್ಧತಿಯೆ ಹರಗುಡುವುದಾಗಿದೆ. ಕುಣಿಯುವ ಗುಡ್ಡರನ್ನು ಕರೆಸಿ, ಯಲಚನಹಳ್ಳಿಗೆ ಗ್ರಾಮದ ಯಜಮಾನರು, ಮುಖ್ಯಸ್ಥರು ಹಾಗೂ ಪೂಜಾರರು ಹೋಗುತ್ತಾರೆ. ಚಿಕ್ಕಮ್ಮ ದೇವಿಯನ್ನು ಪೂಜೆ ಮಾಡುವ ಮಲ್ಲಣ್ಣನವರ ಮನೆಯಲ್ಲಿ ಗದ್ದಿಗೆ ಊಡಿ ಪೂಜೆ ಸಲ್ಲಿಸಿ ಅಲ್ಲಿಂದ ಗುಂಗ್ರಾಲ್ ಛತ್ರ ಗ್ರಾಮದ ಬಸವೇಶ್ವರ ದೇವಸ್ಥಾನದ ಬಳಿ ಬಂದು ಮಡಿವಾಳ ಶೆಟ್ಟರು ಮಡಿ ಹಾಸಿದ ಮೇಲೆ ತುಂಬಿದ ಕೊಡ ಇಟ್ಟು ಸತ್ತಿಗೆಗಳು ಹಾಗೂ ಛತ್ರಿಗಳನ್ನು ಮಡಿಯ ಮೇಲೆ ಇಡಲಾಗುತ್ತದೆ. ಪೂಜೆ ಸಲ್ಲಿಸುವ ವೇಳೆ ಕುಣಿಯುವ ಗುಡ್ಡರ ತಮಟೆ ಸದ್ದುಗಳಲ್ಲದೆ ಹಲವಾರು ವಾದ್ಯಗಳು ಮೇಳೈಸುತ್ತಿರುತ್ತವೆ. ಇದರ ಜೊತೆಗೆ ಗುಡ್ಡರು ಕುಣಿಯುತ್ತಾರೆ. ನಂತರ ಲಕ್ಷ್ಮಿದೇವಿ ದೇವಸ್ಥಾನದ ಹತ್ತಿರ ಮಡಿಯ ಮೇಲೆ ಸತ್ತಿಗೆಗಳಿಗೆ ಪೂಜೆ ಸಲ್ಲಿಸಲಾಗುತ್ತದೆ.
ಎಂಟು ದಿನಗಳ ವಿಶೇಷ ಕುಣಿತ
ಹರಗುಡುವುದಾದ ದಿನದಿಂದ ಎಂಟುದಿನಗಳವರೆಗೆ ಅಂದರೆ ಲಕ್ಷ್ಮೀದೇವಿಯ ದೇಗುಲದ ಬಾಗಿಲನ್ನು ತೆಗೆಯುವವರೆಗೆ ೮ ದಿನಗಳ ಕಾಲ ಈ ಗ್ರಾಮದ ಶೈಲಿಯಲ್ಲಿಯೇ ಕುಣಿತವನ್ನು ಕುಣಿಯಲಾಗುತ್ತದೆ. (ಹಿಂದೆ ೧೫ ದಿನಗಳು ಕುಣಿಯುತಿದ್ದರು ಮತ್ತು ಮನೆಗೆ ಒಬ್ಬರಂತೆ ಬಂದು ಕುಣಿಯಬೇಕಿತ್ತು ಇಲ್ಲದಿದ್ದರೆ ದಂಡ ಹಾಕಲಾಗುತಿತ್ತು) ತಮಟೆಯ ತಾಳಕ್ಕೆ ತಂಕ್ಕಂತೆ ಈ ಗ್ರಾಮದ ಜನ ಕುಣಿತವನ್ನು ಕಲಿತಿದ್ದಾರೆ. ಈ ಕುಣಿತವು ಜನಪದ ಪ್ರಮುಖ ಅಂಶವಾಗಿದೆ. ಆದರೆ ಮಾನವನ ಜೀವನ ಶೈಲಿ ಬದಲಾದಂತೆ ಗ್ರಾಮೀಣ ಕಲೆ, ಸಂಸ್ಕೃತಿಗಳು ಮರೆಯಾಗುತ್ತಿವೆ.
ಗ್ರಾಮ ದೇವತೆ ಶ್ರೀ ಲಕ್ಷ್ಮೀದೇವಿ ಜಾತ್ರೆ
ಗ್ರಾಮೀಣ ಜೀವನದಲ್ಲಿ ಅನಾದಿ ಕಾಲದಿಂದಲೂ ಹಾಸುಹೊಕ್ಕು ಬೆರೆತುಬಂದಿರುವ ಗ್ರಾಮ ದೇವತೆಗಳು ಜನಪದ ಬದುಕಿನ ಒಂದು ಭಾಗವಾಗಿದೆ. ಗ್ರಾಮ ದೇವತೆಗೆ ಸಂಬಂಧಿಸಿದಂತೆ ಊರಿನ ಎಲ್ಲಾ ಜಾತಿಗಳ ಜನಕ್ಕೂ ಒಂದೊಂದು ಜವಾಬ್ಧಾರಿಯನ್ನು ನೀಡಲಾಗಿರುತ್ತದೆ. ಈ ಜವಾಬ್ಧಾರಿಯನ್ನು ಸಂಬಂಧಪಟ್ಟವರು ವಂಶಪಾರಂಪರ್ಯವಾಗಿ ನಿರ್ವಹಿಸುತ್ತಾ ಬಂದಿರುತ್ತಾರೆ. ಇಡೀ ಗ್ರಾಮದ ಐಕ್ಯತೆ, ಸಾಮರಸ್ಯದ ಜೀವಾಳ ಈ ಗ್ರಾಮ ದೇವತೆಯೆ ಆಗಿರುತ್ತದೆ.[೨]
"ಪುರಾಣಾ ಹೇಳಿದ ಕತೆಯಲ್ಲ ಅದೊಂದು ಕ್ರಿಯಾಶೀಲವಾದ ಶಕ್ತಿ" ಎನ್ನುವ ಪ್ರಸಿದ್ಧ ಮನಶಾಸ್ತ್ರಜ್ನ ಮಲಿನೋವ್ಸ್ಕಿಯವರ ಹೇಳಿಕೆ ನಮ್ಮ ಸಾಂಸ್ಕೃತಿಕ ಸಂದರ್ಭದಲ್ಲಿ ಅತ್ಯಂತ ಪ್ರಸ್ತುತವಾಗುತ್ತದೆ. ಭಾರತದ ಗ್ರಾಮೀಣ ಪ್ರದೇಶಾದಲ್ಲಿ ಕಂಡುಬರುವ ಲಕ್ಷಾಂತರ ದೇವತೆಗಳು ವೈವಿದ್ಯಮಯವಾದ ಕತೆಗಳ ಆಗರವಾಗಿದೆ. ಇವುಗಳಿಗೆ ಸಂಬಂಧಿಸಿದ ಆಚರಣೆಗಳಂತೂ ಆಳವಾದ, ಗಂಭೀರವಾದ ಅಧ್ಯಯನಕ್ಕೆ ಯೋಗ್ಯವಾಗಿದೆ.
ಈ ಗ್ರಾಮದ ವಿಶಿಷ್ಟ ಹಬ್ಬಗಳಲ್ಲಿ ಇದು ಅತ್ಯಂತ ಹೆಚ್ಚು ಪ್ರಸಿದ್ಧಿಯನ್ನು ಪಡೆದಿರುವ ಜಾತ್ರೆಯಾಗಿದೆ. ಈ ಜಾತ್ರೆಯು ಐದು ಹಬ್ಬಗಳು ನಡೆದ ನಂತರ ಜಾತ್ರೆ ಆರಂಭವಾಗುತ್ತದೆ. ಜಾತ್ರೆಯು ಆರಂಭವಾಗುವುದಕ್ಕಿಂತ ಮೊದಲು ಹಲವಾರು ಆಚರಣೆ, ಪದ್ಧತಿಗಳು ನಡೆಯುತ್ತವೆ. ಈ ದೇವಾಲಯದ ಮತ್ತೊಂದು ವೈಶಿಷ್ಟ್ಯವೆಂದರೆ ಈ ದೇವಾಲಯದ ಬಾಗಿಲನ್ನು ಕೇವಲ ವರ್ಷಕ್ಕೆ ಒಂದು ಬಾರಿ ಮಾತ್ರ ತೆರೆಯಲಾಗುತ್ತದೆ. ಪ್ರತಿ ವರ್ಷ ಮಂಗಳವಾರ ಸಂಜೆ ಬಾಗಿಲು ತೆರೆದರೆ ಶುಕ್ರವಾರ ಸೂರ್ಯೋದಯಕ್ಕಿಂತ ಮುಂಚಿತವಾಗಿ ಬಾಗಿಲನ್ನು ಹಾಕಲಾಗುತ್ತದೆ. ಪ್ರತಿ ವರ್ಷ ಫೆಬ್ರವರಿ ಅಥವಾ ಮಾರ್ಚ್ ತಿಂಗಳಿನಲ್ಲಿ ಜಾತ್ರೆ ಆರಂಭವಾಗುತ್ತದೆ. ದೇವಾಲಯದ ಬಾಗಿಲನ್ನು ತೆರೆಯುವ ದಿನ ಅಂದರೆ ಮಂಗಳವಾರ ಮೂರು ಜನ ಉಪವಾಸವಿದ್ದು ಸಂಜೆ ನಾಲ್ಕು ಘಂಟೆಯ ಸಮಯಕ್ಕೆ ಸರಿಯಾಗಿ ಯಾವುದಾದರೂ ಒಂದು ತೋಟಕ್ಕೆ ಹೋಗಿ ಅಡಕೆ ಹೊಂಬಾಳೆಯನ್ನು ಕಡಿಯಲಾಗುತ್ತದೆ. ಮೊದಲು ಮರಕ್ಕೆ ಹತ್ತುವ ಮುನ್ನ ಆ ಮರಕ್ಕೆ ವಿಶೇಷ ಪೂಜೆ ಸಲ್ಲಿಸಿ ಹತ್ತಲಾಗುತ್ತದೆ. ಈ ಹದಿನಾಲ್ಕು ಹೊಂಬಾಳೆಯನ್ನು ಎರಡು ಕಟ್ಟನ್ನು ಕಟ್ಟಿ ಇಬ್ಬರು ಮಾತ್ರ ಇದನ್ನು ಹೊತ್ತು ಊರಿಗೆ ಬರದೆ ಕರಿಗೌಡರ ತೋಟಕ್ಕೆ ಅವುಗಳನ್ನು ತೆಗೆದುಕೊಂಡು ಹೋಗಲಾಗುತ್ತದೆ. ನಂತರ ಉಪವಾಸವಿದ್ದ ಮೂವರು ಊಟ ಸೇವಿಸಿ ಮಲಗುತ್ತಾರೆ.
ಇತ್ತಕಡೆ ದೇವಾಲಯದ ಬಾಗಿಲನ್ನು ಊರಿನ ಯಜಮಾನರು, ಪೂಜಾರರು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ತೆರೆಯಲಾಗುತ್ತದೆ. ನಂತರ ಗರ್ಭಗುಡಿಯ ಕೆಲಸ ಕಾರ್ಯಗಳನ್ನು ಲಕ್ಷ್ಮೀದೇವಿಯ ಒಕ್ಕಲಿನವರು ಗರ್ಭಗುಡಿಯನ್ನು ಸ್ವಚ್ಛಗೊಳಿಸುತ್ತಾರೆ. ಲಕ್ಷ್ಮೀ ದೇವಾಲಯದಲ್ಲಿ ಪ್ರಮುಖವಾಗಿ ಎರಡು ದೇವರುಗಳಿವೆ ಅವುಗಳೆಂದರೆ ದೊಡ್ಡಮ್ಮ ಹಾಗೂ ಚಿಕ್ಕಮ್ಮ. ಬುಧವಾರ ಮುಂಜಾನೆ ನಾಲ್ಕು ಘಂಟೆಗೆ ಕರಿಗೌಡರ ತೋಟದಲ್ಲಿ ಮಲಗಿದ್ದ ಮೂವರು ಏಳುತ್ತಾರೆ. ಸ್ವಲ್ಪಜನ ಗ್ರಾಮದಿಂದ ಬಂದಿರುತ್ತಾರೆ. ಹೊಂಬಾಳೆಯನ್ನು ಹೊತ್ತು ಹತ್ತಿರದ ಬಸವೇಶ್ವರ ದೇವಾಲಯದ ಬಳಿ ಇವುಗಳನ್ನು ಇಡಲಾಗುತ್ತದೆ. ಹಾಗೂ ಅಲ್ಲಿಗೆ ಸತ್ತಿಗೆ, ಕತ್ತಿ, ಕಹಳೆಗಳನ್ನು ವಾದ್ಯಸಮೇತ ಬಸವೇಶ್ವರ ದೇವಾಲಯದ ಬಳಿ ತರುತ್ತಾರೆ. ಈ ಗ್ರಾಮದ ಕೆಲವು ಕುಟುಂಬದವರು ವಸಿ ಧೂಪವನ್ನು (ಮಲೆ ಮಹದೇಶ್ವರ ಬೆಟ್ಟದಲ್ಲೂ ವಸಿ ಧೂಪವನ್ನು ಹಾಕುತ್ತಾರೆ.) ಹಾಕುತ್ತಾರೆ. ಇವರು ಹಿಂದಿನ ತಲೆಮಾರಿನಿಂದಲೂ ವಸಿ ಧೂಪವನ್ನು ಹಾಕಿಕೊಂಡು ಬರುತಿದ್ದಾರೆ. ಇಲ್ಲಿ ಪೂಜೆ ಸಲ್ಲಿಸಿದ ನಂತರ ಹೂ ಹೊಂಬಾಳೆಯನ್ನು ಇಬ್ಬರು ಹೊರುತ್ತಾರೆ. ಉಳಿದವರು ಸತ್ತಿಗೆ, ಕತ್ತಿ, ಕಹಳೆ, ಚೌಲಿಗಳನ್ನು ತೆಗೆದುಕೊಳ್ಳುತ್ತಾರೆ. ಹೀಗೆ ಹೊತ್ತುಕೊಂಡ ಹೊಂಬಾಳೆ ಹಾಗೂ ಸತ್ತಿಗೆಗಳನ್ನು ಕ್ವಾಟೆ ಬಾಗಿಲ ಹತ್ತಿರ ತರುತ್ತಾರೆ. ಕ್ವಾಟೆ ಬಾಗಿಲಿನಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ. ಇದನ್ನು ಹೂ ಹೊಂಬಾಳೆ ಬರುವುದು ಎಂದು ಕರೆಯುತ್ತಾರೆ. ಅಂಕದ ಬಾಗಿಲಿನಲ್ಲಿ ಪೂಜೆ ಸಲ್ಲಿಸಿದ ನಂತರ ಹೂ ಹೊಂಬಾಳೆ, ಸತ್ತಿಗೆಗಳು ರಾಜಬೀದಿಯಲ್ಲಿ ಬರುತ್ತಿರಬೇಕಾದರೆ ಆ ಬೀದಿಯಲ್ಲಿರುವ ಮನೆಯವರು ಪೂಜೆ ಸಲ್ಲಿಸಿ ಮಂಗಳಾರತಿ ಬೆಳಗಿ ತಾಯಿ ಲಕ್ಷ್ಮೀದೇವಿಗೆ ಸ್ವಾಗತವನ್ನು ಕೋರುತ್ತಾರೆ. ನಂತರ ಲಕ್ಷ್ಮೀದೇವಿ ದೇವಸ್ಥಾನದ ಒಳಗಡೆ ಹೋದ ಸತ್ತಿಗೆಗಳನ್ನು ಅರ್ಚಕರು ಇಳಿಸಿಕೊಳ್ಳುತ್ತಾರೆ. ಹೊಂಬಾಳೆಯ ಕಟ್ಟನ್ನು ಬಿಚ್ಚಿ ದೇವರನ್ನು ಪ್ರತಿಷ್ಟಾಪಿಸಲಾಗುತ್ತದೆ. ಲಕ್ಷ್ಮೀದೇವಿ ದೇವಸ್ಥಾನದಲ್ಲಿರುವ ಪ್ರಮುಖ ದೇವರುಗಳೆಂದರೆ ದೊಡ್ಡಮ್ಮ ಮತ್ತು ಚಿಕ್ಕಮ್ಮ. ದೊಡ್ಡಮ್ಮನಿಗೆ ವಡವೆ ವಸ್ತ್ರಾಭರಣಗಳನ್ನು ಧರಿಸಿ ಹೊಂಬಾಳೆಯನ್ನು ಪೂಜಲಾಗಿರುತ್ತದೆ. ಚಿಕ್ಕಮ್ಮ ತಾಯಿಗೆ ಐದು ಮಕ್ಕಳು. ಆದ್ದರಿಂದ ಐದು ಹೊಂಬಾಳೆಯನ್ನು ಪೂಜಲಾಗಿರುತ್ತದೆ. ಹದಿನಾಲ್ಕು ಹೊಂಬಾಳೆಯಲ್ಲಿ ಉಳಿದ ಹೊಂಬಾಳೆಗಳನ್ನು ಗ್ರಾಮದಲ್ಲಿರುವ ದೇವಾಲಯಗಳಿಗೆ ಕೊಡಲಾಗುತ್ತದೆ.
ಹಣ್ಣೆಡ್ಗೆ ಬರುವುದು
ಅರುಸಿ ದೊಡ್ಡಮ್ಮನ ಗೆರುಸಿಲ್ಲಿ ಹೂಬಂದಿ ವರುಷಕ್ಕೆ ನೂರು ಗೊನೆಬಂದೊ ವರುಷಕ್ಕೆ ನೂರು ಗೊನೆಬಂದೊ ಲಕ್ಷ್ಮಿದೇವಿ ದೊಡ್ಡಮ್ಮಿರುವೋದು ಕೈಲಾಸ |
ಬುಧವಾರ ಮಧ್ಯಾಹ್ನ ಗುಂಗ್ರಾಲ್ ಛತ್ರ, ಹಾಗೂ ಛತ್ರದ ಕೊಪ್ಪಲು, ಈ ಗ್ರಾಮಗಳ ಪ್ರತಿಯೊಂದು ಮನೆಯಿಂದ ಬಾಳೆಗೊನೆಯನ್ನು ಬಿಡುವ ಕಾರ್ಯವಿರುತ್ತದೆ. ತಮಟೆ ಬಡಿಯುವ ವ್ಯಕ್ತಿಯು ಪ್ರತಿಯೊಂದು ಬೀದಿಗಳಿಗೂ ಹೋಗಿ ತಮಟೆಯ ಸದ್ದನ್ನು ಮಾಡಿದಾಗ ಬಾಳೆಗೊನೆಯನ್ನು ಹೊತ್ತು ದೇವಾಲಯಕ್ಕೆ ಬಿಡುತ್ತಾರೆ. ಬಾಳೆಗೊನೆಯನ್ನು ಹೊತ್ತು ಮಾರಿಗುಡಿಯ ಹತ್ತಿರ ಬರಲಾಗುತ್ತದೆ ಅಲ್ಲಿ ಪೂಜೆ ಸಲ್ಲಿಸಿ ನಂತರ ಮಾರಿಗುಡಿಯಿಂದ ಹೊರಟ ಹಣ್ಣೆಡ್ಗೆಯು ಲಕ್ಷ್ಮೀ ದೇವಿ ದೇವಸ್ಥಾನದ ಮುಂಡೆ ಬಂದು ನಿಲ್ಲುತ್ತದೆ. ಈ ದೇವಾಲಯದ ಮುಂದೆ ಒಂದು ಮರಿಯನ್ನು ನಿಲ್ಲಿಸಿ ವರವನ್ನು ಬೇಡಲಾಗುತ್ತದೆ. ಲಕ್ಷ್ಮೀದೇವಿಗೆ ಹಬ್ಬದಿಂದ ಸಂತೋಷವಾಗಿದ್ದರೆ ಬೇಗ ಮರಿ ಒದರುತ್ತದೆ. ಮರಿ ಒದರಿದ ತಕ್ಷಣ ಆ ಮರಿಯನ್ನು ಕಡಿಯಲಾಗುತ್ತದೆ. ಇದನ್ನು ದೂಳ್ ಮರಿ ಎಂದು ಕರೆಯಲಾಗುತ್ತದೆ. ಈ ದೂಳ್ ಮರಿಯನ್ನು ಮಾರಿ ಪೂಜಾರರ ಮನೆಯವರು ಮಾತ್ರ ಮಾಂಸದ ಅಡಿಗೆಯನ್ನು ಮಾಡುತ್ತಾರೆ. ಗ್ರಾಮದಲ್ಲಿ ಬೇರೆ ಯಾರು ಮಾಂಸದ ಅಡಿಗೆಯನ್ನು ಮಾಡುವ ಹಾಗಿಲ್ಲ.
ಸತ್ತಿಗೆಯ ಮೆರವಣಿಗೆ
ಬಾಳೆಗೊನೆಯನ್ನು ಬಿಟ್ಟ ನಂತರ ಸತ್ತಿಗೆಗಳನ್ನು ಮೆರೆಸುವಂತಹ ಕಾರ್ಯಕ್ರಮವಿರುತ್ತದೆ. ಬುಧವಾರ ಸಂಜೆ ೫.೩೦ ರ ನಂತರ ಲಕ್ಷ್ಮೀ ದೇವಿ ದೇವಸ್ಥಾನದಿಂದ ರಾಜ ಸಾಮಗ್ರಿಗಳನ್ನು ಹಾಗೂ ಸತ್ತಿಗೆಗಳನ್ನು ಹೊರಕ್ಕೆ ತರಲಾಗುತ್ತದೆ. ಈ ಸತ್ತಿಗೆಯನ್ನು ಬೀದಿ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಸತ್ತಿಗೆಯಲ್ಲಿ ಎರಡು ಸತ್ತಿಗೆಳಿರುತ್ತವೆ. ಒಂದು ದೊಡ್ಡಮ್ಮ ಇನ್ನೊಂದು ಚಿಕ್ಕಮ್ಮ ಈ ಸತ್ತಿಗೆಯನ್ನು ಒಬ್ಬ ವ್ಯಕ್ತಿ ಒಂದು ಮನೆಯಿಂದ ಮತ್ತೊಂದು ಮನೆಯವರೆಗೆ ಮಾತ್ರ ಹೊರಲು ಸಾಧ್ಯ ಏಕೆಂದರೆ ಅವುಗಳು ಅಷ್ಟೊಂದು ತೂಕವಾಗಿರುತ್ತವೆ. ಗುಂಗ್ರಾಲ್ ಛತ್ರದಲ್ಲಿ ಮೆರವಣಿಗೆ ಮುಗಿದ ನಂತರ ಅವುಗಳನ್ನು ಛತ್ರದಕೊಪ್ಪಲಿಗೆ ತೆಗೆದುಕೊಂದು ಹೋಗಿ ಅಲ್ಲಿಯೂ ಮೆರವಣಿಗೆ ಮಾಡಲಾಗುತ್ತದೆ. ಈ ಸತ್ತಿಗೆಗಳನ್ನು ಪುರುಷರು ಮಾತ್ರ ಹೊರುತ್ತಾರೆ.
ರಂಗಕಟ್ಟುವುದು ಬುಧವಾರ ಸಂಜೆ ಏಳು ಗಂಟೆಗೆ ಗ್ರಾಮದ ಪಕ್ಕದ ಊರಿನಲ್ಲಿರುವಂತಹ ರಟ್ನಹಳ್ಳಿಯಿಂದ ಕರೆಸಿದಂತಹ ಗುಡ್ಡರು ಲಕ್ಷ್ಮೀದೇವಿಗೆ ತಮ್ಮ ವಾದ್ಯಗಳನ್ನು ಬಡಿಯುವ ಮೂಲಕ ಹಾಡನ್ನು ಹೇಳಿ ದೇವರನ್ನು ಕರೆಯಲಾಗುತ್ತದೆ.
"ನೀಲಿಯಲ್ಲಮ್ಮೋ ನೀಲಿಯಲ್ಲಮ್ಮೋ ಚಿಕ್ಕಮ್ಮ ದೊಡ್ಡಮ್ಮ ನೀಲಿಯಲ್ಲೋ"
ಎಂಬ ಗೀತೆಯನ್ನು ಹಾಡುವ ಮೂಲಕ ದೇವರ ಕೃಪೆಗೆ ಪಾತ್ರರಾಗುತ್ತಾರೆ. ಈ ಹಾಡುಗಳಲ್ಲದೆ ಇತರೆ ಸಾಹಿತ್ಯವು ಕೂಡ ಸೃಷ್ಟಿಯಾಗಿದೆ. ಇವೆಲ್ಲವೂ ಜನಪದ ಸಾಹಿತ್ಯಕ್ಕೆ ಬಹಳ ಅತ್ಯಮೂಲ್ಯ ಕೊಡುಗೆಗಳಾಗಿವೆ.
ದೇವಾಲಯದ ಬಾಗಿಲು ಹಾಕುವ ಸಂದರ್ಭ
ಲಕ್ಷ್ಮೀದೇವಿ ದೇವಸ್ಥಾನದ ಬಾಗಿಲನ್ನು ಹಾಕುವುದು ತುಂಬಾ ವಿಶೇಷತೆಯಿಂದ ಕೂಡಿದೆ. ಏಕೆಂದರೆ ವರ್ಷದಲ್ಲಿ ಒಂದು ಬಾರಿ ಮಾತ್ರ ಬಾಗಿಲು ತೆರೆಯುವುದರಿಂದ ಬಾಗಿಲು ಹಾಕುವುದು ಬಹಳ ಮಹತ್ವವನ್ನು ಪಡೆದುಕೊಂಡಿದೆ. ಬಾಗಿಲು ತೆರೆಯುವ ಸಮಯದಲ್ಲಿ ಮಾಡಿದಂತಹ ಕೆಲಸಗಳನ್ನೆ ಹೆಚ್ಚು ಕಡಿಮೆ ಬಾಗಿಲು ಹಾಕುವಾಗಲೂ ಅದೇ ಕೆಲಸಗಳನ್ನು ನಡೆಸಲಾಗುತ್ತದೆ. ಮೈಸೂರು ತಾಲ್ಲೂಕಿನ ವರುಣಾ ಹೋಬಳಿಯಲ್ಲಿರುವ ಚೋರ್ನಹಳ್ಳಿ ಎಂಬ ಗ್ರಾಮದ ಲಕ್ಷ್ಮೀದೇವಿ ಒಕ್ಕಲಿನವರು ಪನ್ನೆ ತೋಟದಲ್ಲಿ ತೆಗೆದಂತಹ ಗುಂಡಿಯಿಂದ ನೀರನ್ನು ತಂದು ಗರ್ಭಗುಡಿಯನ್ನು ಗುಡಿಸಿ, ನೀರನ್ನು ಹಾಕಿ ಸ್ವಚ್ಛಗೊಳಿಸುತ್ತಾರೆ. ಹಾಗೆ ದೇವಾಲಯದ ಅಂಗಳವನ್ನು ಗುಡಿಸುತ್ತಾರೆ. ಶ್ರೀಲಕ್ಷ್ಮೀದೇವಿ ದೇವಸ್ಥಾನದಿಂದ ಹಿಡಿದು ಸತ್ತಿಗೆಗಳನ್ನು ಹಿಡುವಂತಹ ಮಾಳಿಗೆ ಮನೆಯವರೆಗೂ ರಂಗೋಲಿಯನ್ನು ಹಾಕಲಾಗುತ್ತದೆ. ದೇವಾಲಯದ ಒಳಗಡೆ ಎಲ್ಲಾ ಕೆಲಸ ಮುಗಿದ ಬಳಿಕ ಸತ್ತಿಗೆಗಳನ್ನು ಹೊರಗೆ ತರಲಾಗುತ್ತದೆ. ನಂತರ ಎಲ್ಲರ ಸಮ್ಮುಖದಲ್ಲಿ ದೇವಾಲಯದ ಬಾಗಿಲನ್ನು ಹಾಕಲಾಗುತ್ತದೆ. ಈಚೆ ತಂದ ಸತ್ತಿಗೆಗಳಿಗೆ ಚೋರ್ನಹಳ್ಳಿಯವರು ವಿಶೇಷ ಪೂಜೆ ಸಲ್ಲಿಸುತ್ತಾರೆ. ಪೂಜೆಯ ನಂತರ ಸತ್ತಿಗೆಗಳನ್ನು ಹೊತ್ತು ಮಾಳಿಗೆ ಮನೆಯ ಹತ್ತಿರ ಬರುತ್ತಾರೆ. ಈ ಸಂದರ್ಭದಲ್ಲಿಯೂ ಗ್ರಾಮದ ವಿಶೇಷ ಕುಣಿತವನ್ನು ಚೋರ್ನಹಳ್ಳಿಯವರು ಕುಣಿಯುತ್ತಾರೆ. ನಂತರ ಮಾಳಿಗೆ ಮನೆಗೆ ಸತ್ತಿಗೆಗಳನ್ನು ಇಡಲಾಗುತ್ತದೆ. ಇಲ್ಲಿಗೆ ಲಕ್ಷ್ಮೀದೇವಿ ಜಾತ್ರೆ ಮುಕ್ತಾಯವಾಗುತ್ತದೆ.
ಒಂದು ವಾರ ಒಗ್ಗರಣೆ ನಿಷೇಧ
[ಬದಲಾಯಿಸಿ]ಶ್ರೀ ಲಕ್ಷ್ಮೀದೇವಿ ಜಾತ್ರೆ ನಡೆದು ದೇವಾಲಯದ ಬಾಗಿಲನ್ನು ಹಾಕಿದ ನಂತರ ಒಂದು ವಾರಗಳ ಕಾಲ ಒಗ್ಗರಣೆ ಹಾಕುವುದನ್ನು ನಿಷೇಧಿಸಲಾಗಿದೆ. ಬುಧವಾರ ಜಾತ್ರೆ ನಡೆದರೆ ಆ ದಿನದಿಂದ ಐದು ದಿನಗಳ ಕಾಲ ಅಂದರೆ ಸೋಮವಾರದವರೆಗೆ ಈ ನಿಷೇಧವಿರುತ್ತದೆ. ಮಾಂಸಾಹಾರವನ್ನು ಕೂಡ ನಿಷೇಧಿಸಲಾಗಿರುತ್ತದೆ. ನಂತರ ಸೋಮವಾರ ರಾತ್ರಿ ಮರ್ಪೂಜೆ ಎಂಬ ಪೂಜೆ ಇರುತ್ತದೆ. ಇದಾದ ನಂತರ ಈ ನಿಷೇಧವನ್ನು ತೆಗೆದುಹಾಕಲಾಗುತ್ತದೆ.
ಮರಿಹಬ್ಬ ಇದು ಈ ಗ್ರಾಮದ ವಿಶೇಷ ಹಬ್ಬಗಳಲ್ಲೆ ಕೊನೆಯದಾಗಿದೆ. ಈ ಹಬ್ಬವನ್ನು ಕೂಡ ಗುಂಗ್ರಾಲ್ ಛತ್ರ ಹಾಗೂ ಛತ್ರದಕೊಪ್ಪಲು ಎರಡು ಗ್ರಾಮಗಳು ಸೇರಿ ಆಚರಿಸಲಾಗುತ್ತದೆ.
ಕೃಷಿ ಸಂಬಂಧಿತ ಆಚರಣೆಗಳು
- ಕೊಂಗಳ್ಳಿ ಮಾದಪ್ಪನ ಪರ ಅಥವಾ ಓಕಳಿ
ಇದೊಂದು ಕೃಷಿ ಸಂಬಂಧಿತ ಆಚರಣೆ ಮುಂಗಾರಿನಲ್ಲಿ ಮಳೆ ಬರದೆ ಇದ್ದಾಗ ಊರಿನಲ್ಲಿ ಅಕ್ಪಡಿ (ಅಕ್ಕಿ, ಅಸೀಟು, ಬೇಳೇ, ಇತ್ಯಾದಿ) ಎತ್ತಲಾಗುತ್ತದೆ. ಮರದಲ್ಲಿ ಮಾಡಿದಂತಹ ಬಸವನ ಮೇಲೆ ಕಪ್ಪೆಯನ್ನು ಕೂರಿಸಿ ಓಕಳಿ ಅಥವಾ ಓಳಿಯನ್ನು ಪ್ರತಿ ಬೀದಿಯಲ್ಲು ಆಚರಿಸಿ ಇಡೀ ಊರಿಗೆ ಊಟವನ್ನು ಹಾಕಿಸಲಾಗುತ್ತದೆ. ಹಾಗೂ ಗ್ರಾಮದಲ್ಲಿರುವ ಎಲ್ಲಾ ದೇವರಿಗೂ ಪೂಜೆ ಸಲ್ಲಿಸಲಾಗುತ್ತದೆ. ವಂಗೆ ಕೊನೆಯಿಂದ ಚಪ್ಪರವನ್ನು ಹಾಕಿ ದೇವರನ್ನು ಪೂಜಲಾಗುತ್ತದೆ. ನಂತರ ಓಕಳಿ ಮುಗಿದ ಮೇಲೆ ಊಟ ಹಾಕಲಾಗುತ್ತದೆ. ಈ ಆಚರಣೆಯಲ್ಲಿ ಪುರುಷರು ಮಾತ್ರ ಭಾಗವಹಿಸಬಹುದಾಗಿದೆ.
೨ ಕಾರಬ್ಬ ಈ ಹಬ್ಬವೂ ಕೃಷಿ ಸಂಬಂಧಿತ ಆಚರಣೆಯಾಗಿದೆ. ಈ ಹಬ್ಬಕ್ಕೆ ನೇಗಿಲು, ನೊಗ, ಕುಂಟೆ, ಹಲುಬೆ ಹಾಗೂ ಇತರೆ ಕೃಷಿ ಪಾರಂಪರಿಕ ವಸ್ತುಗಳನ್ನು ಇಟ್ಟು ಪೂಜಿಸಲಾಗುತ್ತದೆ.
ಜನಪದ ಸಾಹಿತ್ಯ
[ಬದಲಾಯಿಸಿ]ಹರಗುಡುವುದಾದ ಎಂಟು ದಿನಗಳ ವರೆಗೆ ಕುಣಿತ ಇರುತ್ತದೆ. ತಮಟೆ ಸದ್ದಿಗೆ ತಕ್ಕಂತೆ ವಿಶೇಷ ಕುಣಿತವನ್ನು ಕಲಿತುಕೊಂಡಿದ್ದಾರೆ. ಈ ಕುಣಿತಗಳು ಬಹಳ ಹಿಂದೆಯಿಂದಲೂ ಉಳಿದುಕೊಂಡು ಬಂದಿವೆ. ಹಿಂದೆ ಮನೆಗೆ ಒಂದಾಳು ಬಂದು ಕುಣಿಯಬೇಕಿತ್ತು. ಆದರೆ ಇಂದು ಈ ಜನಪದೀಯ ಕಲೆಗಳು ಕಣ್ಮರೆಯಾಗುತ್ತಿವೆ. ಈ ಕುಣಿತ ಕುಣಿಯಬೇಕಾದರೆ ಮಧ್ಯದಲ್ಲಿ ಮಾರಮ್ಮನ, ಮಹದೇಶ್ವರ, ನಂಜುಂಡೇಶ್ವರ ಮುಂತಾದ ಗೀತೆಗಳನ್ನು ಸ್ತುತಿಸುತ್ತಾರೆ.
ಮಾರಮ್ಮನ ಮೇಲೆ ಒಂದು ಕೂಗು
ಮಾರಮ್ನ ಮನೆ ಮುಂದೆ ಮಾರಮ್ನ ಮನೆ ಮುಂದೇ.... ಮಾರಮ್ನ ಮನೆ ಮುಂದೆ ಮಾರಮ್ನ ಮನೆ ಮುಂದೆ ನೂರೊಂದು ಇಂಬಿಗಿಡ ಹುಟ್ಟಿ ಮಾರಮ್ನ ಮನೆ ಮುಂದೆ ನೂರೊಂದು ಇಂಬಿಗಿಡ ಹುಟ್ಟಿ ಕಳ್ಳ ಕೂಯ್ವಗ ಕಸುಗಾಯಿ ಮಾರವ್ವ ಕಳ್ಳ ಕೂಯ್ವಗ ಕಸುಗಾಯಿ ಮಾರವ್ವ ನಿನಗಂಡ ಕೂಯ್ವಗ ಗದಲಿಂಬೆಯೋ .....
ಮಾದಪ್ಪನ ಮೇಲೆ ಒಂದು ಕೂಗು
ಮಳವಳ್ಳಿ ಸೀಮೆಲಿ ಮಳವಳ್ಳಿ ಸೀಮೆಲಿ ಮಳವಳ್ಳಿ ಸೀಮೆಲಿ | ಮಳವಳ್ಳಿ ಸೀಮೆಲಿ ಮಳೆ ಬಂದರೆ ಎಲ್ಲಿ ತಳಗವನೋ ಮಾದಪ್ಪ| ಮಳೆ ಬಂದರೆ ಎಲ್ಲಿ ತಳಗವನೋ ಮಾದಪ್ಪ ಅಡಕೆ ಹೊಂಬಾಳೆ ಸುಳಿಯಲ್ಲಿ ತಳಗವನೋ ....
ನಂಜುಂಡೇಶ್ವರನ ಮೇಲೆ ಒಂದು ಪದ
ಗದ್ದೆಯ ಬಡಿದಾಯ್ತು ಗೌಡನ ಬರೇಳಿ ಮುದ್ರೆ ಉಂಗ್ರಾದ ದೊರೆಮಗನ ಮುದ್ರೆ ಉಂಗ್ರಾದ ದೊರೆಮಗನ ಬರೇಳಿ ಆಳಿಗೆ ಕಂಬ್ಳಿವಳಿಏಳಿ ಗುಡು ಗುಡು ಗುಂಡಂತು ಗುಣಕಲ್ಲು ಬಡ್ಡಂತು ನಂಜನ್ಗೂಡಿಂದಾಚೆ ಮಳೆಬಿಳ್ತು ನಂಜನ್ಗೂಡಿಂದಾಚೆ ಮಳೆಬಿಳ್ತು ನಂಜಪ್ಪ ನಿನಗೊಂಬೆ ತೇರಿನ ಮೇಲೆ ಮೂರನಿಬಿದ್ದೊ ಇಂಬಿ ಹಣ್ಣಿನಂತೆ ತುಂಬಿ ಬರತೈತಿ ಗಂಗಮ್ಮ ತಾಯಿ ಎಂಬತ್ತು ಮೂಲೆ ಚೌಕಾವ ಎಂಬತ್ತು ಮೂಲೆ ಚೌಕಾ ಏರಿನ ಮೇಲೆ ಶಂಭು ಲಿಂಗಾನ ಶಿವಪೂಜೆ ನಾಗಮಂಗಲದಿಂದಾಚೆ ನಾನೊಂದು ಹೆಣ್ಣುತಂದೆ ನಾಕು ಮಾರುದ್ದ ಜಡೆಯೋಳ ನಾಕು ಮಾರುದ್ದ ಜಡೆಯೋಳ ನಾ ತಂದೆ ಆವಳ ಮೇಲೆ ನನಗೆ ಮನಸಿಲ್ಲ
ಇತರೆ ಹಾಡುಗಳು
೧ ಮೂಡಲಾಗಿ ಮೂಡವನೆ ಪಡುಲಾಗಿ ಜೋಲಾನೆ ತಾವರೆ ಕಟ್ಟೇಲಿ ತಳುಗವನೆ ತಾವರೆ ಕಟ್ಟೇಲಿ ತಳುಗವನೆ ಸೂಲೇಂದ್ರ ನಿಮ್ಮ ಮೂಡಾಲ ಮಂಜುರಿಗೊಡೆದು
೨ ಕಕ್ಕೆ ಕಾಳೆಡೆಯಲ್ಲಿ ಕುಕ್ಕೆ ಎಣಿಯವನು ಇವನ್ಯಾರೊ ಕೊಕ್ಕುರ ಹುಡುಗ ಕೊನೆ ಮೀಸೆ ಕೊಕ್ಕುರ ಹುಡುಗ ಕೊನೆ ಮೀಸೆ ಗಿನಿ ಮೀಸೆ ಇದ್ದವ್ ಎರಡ್ ಮೀಸೆ ಇಲಿ ಮೇದೊ ಹೊ ಹೊ ......
ಮಲೆ ಮಹದೇಶ್ವರನ ಪದಗಳು
[ಬದಲಾಯಿಸಿ]ಹೋದರೆ ನಾ ಬರುವೇ ಹೋದರೆ ನಾ ಬರುವೇ ಹುಬ್ಬಳ್ಳಿ ಧಾರವಾಡ ನಡುವೆ ನಂಜನಗೂಡು ಹೋದರೆ ನಾ ಬರುವೇ ಮಾದೇವ ಹೋದರೆ ನಾ ಬರುವೇ |
ಸಾಲೂರು ಮಠ ಚೆಂದ ಸಾಲೂ ಮಲ್ಲಿಗೆ ಚೆಂದ ಕರೆದ ಹಾಲೀನ ನೊರೆ ಚೆಂದ ಹೋದರೆ ನಾ ಬರುವೇ
ಹೋದರೆ ನಾ ಬರುವೇ ಹೋದರೆ ನಾ ಬರುವೇ ಹುಬ್ಬಳ್ಳಿ ಧಾರವಾಡ ನಡುವೆ ನಂಜನಗೂಡು ಹೋದರೆ ನಾ ಬರುವೇ ಮಾದೇವ ಹೋದರೆ ನಾ ಬರುವೇ |
ಕರೆದ ಹಾಲೀನ ನೊರೆ ಚೆಂದ ಮಾದೇವ ವರದೇಲುಟ್ಟಿರುವ ಮಗ ಚೆಂದ ಹೋದರೆ ನಾ ಬರುವೇ ಹೋದರೆ ನಾ ಬರುವೇ |
ವರದೇಲುಟ್ಟಿರುವ ಮಗ ಚೆಂದ ಮಾದೇವ ಅವರು ಏಳು ಮಲೆಯ ಸುತ್ತಿ ಬರುತ್ತಾರೆ ಹೋದರೆ ನಾ ಬರುವೇ|
ಹೋದರೆ ನಾ ಬರುವೇ ಹೋದರೆ ನಾ ಬರುವೇ ಹುಬ್ಬಳ್ಳಿ ಧಾರವಾಡ ನಡುವೆ ನಂಜನಗೂಡು ಹೋದರೆ ನಾ ಬರುವೇ ಮಾದೇವ ಹೋದರೆ ನಾ ಬರುವೇ |
ಏಳು ಮಲೆಯ ಸುತ್ತಿ ಬರುತ್ತಾರೆ ಮಾದೇವ ತಿಂಗಾಳ ಸೇವೆಯೇ ಗಾನು ಸೇವೆ ಹೋದರೆ ನಾ ಬರುವೇ ಹೋದರೆ ನಾ ಬರುವೇ
ತಿಂಗಾಳ ಸೇವೆ ಗಾನ ಸೇವೆ ಮಾದೇವ ನಿನ್ಗೆ ಚೆಂಡುವಿನಾರ ಗಾನವಾದ ಹೋದರೆ ನಾ ಬರುವೇ ಮಾದೇವ ಹೋದರೆ ನಾ ಬರುವೇ |
ಹುಬ್ಬಳ್ಳಿ ಧಾರವಾಡ ನಡುವೆ ನಂಜನಗೂಡು ಹೋದರೆ ನಾ ಬರುವೇ ಮಾದೇವ ಹೋದರೆ ನಾ ಬರುವೇ | ಹೋದರೆ ನಾ ಬರುವೇ ಹೋದರೆ ನಾ ಬರುವೇ ||
ಗ್ರಾಮ ದೇವತೆ ಕುರಿತ ಹಾಡುಗಳು
[ಬದಲಾಯಿಸಿ]ಕೋಟೆಯ ಬಾಗುಲಲ್ಲಿ ಕುಂತಿರೋರ್ ಇವರ್ಯಾರು ಕುಂಕುಮುದ ಸೀರೆ ನರಿಯೋಳು ಕುಂಕುಮುದ ಸೀರೆ ನರಿಯೋಳು ಲಕ್ಷ್ಮೀದೇವಿ ಕೂತಿ ನೋಡಮ್ಮ ಕುಣುತಾವ ಕುಂತಿ ನೋಡಮ್ಮ ಕುಣುತಾವ ಲಕ್ಷ್ಮಿದೇವಿ ನಿಂತಿ ನೋಡಮ್ಮ ಪರುಸೇಯ |
ಏರಿ ಮೇಲೆ ನಿಂತುಕೊಂಡು ಯಾರಾನೆ ನೋಡೀರಿ ದೂರಕೋಗವರೆ ನಿಮಮಗ ದೂರಕೋಗವರೆ ನಿಮಮಗ ಲಕ್ಷ್ಮಿದೇವಿ ನಿಮಗ್ವಾಮಕೊಂಬಳೆಯ ತರುವಾಕೆ |
ದೊಡ್ಡಮ್ಮಿರುವೋದು ಏಳು ಸುತ್ತಿನ ಕ್ವಾಟೆ ಮೇಲೆ ದಂಕಾಳಿ ಹುಲಿಮೊಕ ಮೇಲೆ ದಂಕಾಳಿ ಹುಲಿಮೊಕ ಹುಲಿ ಮೊಕ ಲಕ್ಷ್ಮಿದೇವಿ ನಿಮಗ್ವಾಮಕೊಂಬಳೆಯ ತರುವಾಕೆ |
ಏರಿಯಾ ಚೆಂದಕ್ಕೆ ನೀರಿನ ಭಾವಕ್ಕೆ ಜಾಜಿ ಹೂವಿನ ಗಮುನಾಕ್ಕೆ ಜಾಜಿ ಹೂವಿನ ಗಮನಕ್ಕೆ ದೇವಮ್ಮ ಜಾಗೊಳ್ಳೆದೆಂದು ನೆಲೆಗೊಂಡಿ ಜಾಗೊಳ್ಳೆದೆಂದು ನೆಲೆಗೊಂಡಿ ಲಕ್ಷ್ಮಿದೇವಿ ಹೂವೊಳ್ಳೆದಂದು ಮುಡಿದಾರು |
ಏರಿ ಮೇಲೆ ನಿಂತುಕೊಂಡು ಯಾರಾನೆ ನೋಡೀರಿ ದೂರಕೋಗವರೆ ನಿಮಮಗ ದೂರಕೋಗವರೆ ನಿಮಮಗ ಲಕ್ಷ್ಮಿದೇವಿ ನಿಮಗ್ವಾಮಕೊಂಬಳೆಯ ತರುವಾಕೆ | ವಾಮಕೊಂಬಳೆಯ ತರುವಾಕೆ ಲಕ್ಷ್ಮಿದೇವಿ ಈ ದೊಡ್ಡಮ್ಮಿರುವೋದು ಕೈಲಾಸ ದೊಡ್ಡಮ್ಮಿರುವೋದು ಏಳು ಸುತ್ತಿನ ಕೋಟೆ ಮೇಲೆ ದಂಕಾಳಿ ಹುಲಿಮೊಕ|
ಒಡ್ಡುಗಲ್ಲಿನು ಮ್ಯಾಲೆ ಒರುಗಿರುವ ದೊಡ್ಡಮುನ ಗುಡ್ಡಾರಿಲ್ಲದೆ ಅಳುತಾಳೆ ಗುಡ್ಡಾರಿಲ್ಲದೆ ಅಳುತಾಳೆ ದೊಡ್ಡಮ್ಮ ಗುಡ್ಡಾರು ಹೋಗಿ ಕರುತನ್ನಿ ಗುಡ್ಡಾರು ಹೋಗಿ ಕರುತನ್ನಿ ದೊಡ್ಡಮುನ ಇವಳಗ್ ವಾಮಕೊಂಬಾಳೆ ಬರುನಿಲ್ಲ |
ಪಿಲ್ಲಿಯ ಕಾಲುನವ್ರೆ ಚೆಲ್ಲಿದ ನರಿಯೋರೆ ಕಲ್ಲು ಮ್ಯಾಲೆ ಕಾಲ ತೊಳೆಯೋರೆ ಕಲ್ಲು ಮ್ಯಾಲೆ ಕಾಲ ತೊಳೆಯೋರೆ ಲಕ್ಷ್ಮಿದೇವಿ ಪಿಲ್ಲಿ ಹೊಡುದಾವು ಬಿಸುಲಿಗೆ ಪಿಲ್ಲಿ ಹೊಡುದಾವು ಬಿಸುಲೀಗೆ ದೊಡ್ಡಮ್ಮ ದೊಡ್ಡಮ್ಮಿರುವೋದು ಕೈಲಾಸ |
ಅರುಸಿ ದೊಡ್ಡಮ್ಮನಿಗೆ ಗೆರುಸಿಲ್ಲಿ ಹೂ ಬಂದೋ ವರುಷಕ್ಕೆ ನೂರು ಗೊನೆಬಂದೊ ವರುಷಕ್ಕೆ ನೂರು ಗೊನೆ ಬಂದೊ ದೊಡ್ಡಮ್ಮ ದೊಡ್ಡಮ್ಮಿರುವೋದು ಗುಡಿಯಲ್ಲಿ |
ಗೊಂಡಿ ದಾರುದು ಸೀರೆ ಬರುನಿಲ್ಲ ಅಂತೇಳಿ ಚಂಡಿ ಮಾಡುತಾಳೆ ಹೊಳೆಯಲ್ಲಿ ಚಂಡಿ ಮಾಡುತಾಳೆ ಹೊಳೆಯಲ್ಲಿ ದೊಡ್ಡಮ್ಮ ನೀವ್ ಮೆಲ್ಲಾನೆ ಗುಡುಗೆ ದಯಮಾಡಿ ಗೊಂಡೆ ದಾರುದು ಸೀರೆ ತರುವೇ ಲಕ್ಷ್ಮಿದೇವಿ ನೀವ್ ಮೆಲ್ಲಾನೆ ಗುಡುಗೆ ದಯಮಾಡಿ |
ಅರುಸಿ ದೊಡ್ಡಮ್ಮನ ಗೆರುಸಿಲ್ಲಿ ಹೂಬಂದಿ ವರುಷಕ್ಕೆ ನೂರು ಗೊನೆಬಂದೊ ವರುಷಕ್ಕೆ ನೂರು ಗೊನೆಬಂದೊ ಲಕ್ಷ್ಮಿದೇವಿ ದೊಡ್ಡಮ್ಮಿರುವೋದು ಕೈಲಾಸ |
ಮೆಲ್ಲಾನೆ ಗುಡುಗೆ ದಯಮಾಡಿ ದೊಡ್ಡಮ್ಮ ಗೊಂಡೆದಾರು ಸೀರೆ ತರುವೇನು ಗೊಂಡೆ ದಾರುದ್ ಸೀರೆ ತರುವೇನು ಲಕ್ಷ್ಮಿದೇವಿ ಮೆಲ್ಲಾನೆ ನೀವು ದಯಮಾಡಿ ||
ಪಿರಿಯಾಪಟ್ಟಣ ಕಾಳಗದಲ್ಲಿ ಗುಂಗ್ರಾಲ್ ಛತ್ರ
[ಬದಲಾಯಿಸಿ]ಚೆಂಗಾಳ್ವ ವೀರರಾಜನಿಗೂ ಮೈಸೂರಿನ ದಳವಾಯಿಗೂ ನಡೆದ ಭೀಕರ ಯುದ್ಧವನ್ನು ಚಿತ್ರಿಸುವ ಒಂದು ಅಪೂರ್ವ ಜನಪದ ವೀರ ಕಾವ್ಯ 'ಪಿರಿಯಾಪಟ್ಟಣ ಕಾಳಗ'. ಈ ಯುದ್ಧದಲ್ಲಿ ಗುಂಗ್ರಾಲ್ ಛತ್ರವೂ ಯುದ್ಧ ಭೂಮಿಯಾಗಿತ್ತು ಎಂಬುದು ತಿಳಿಯುತ್ತದೆ. ದಳವಾಯಿ ಮಹಾರಾಜರು ರಾಜಧಾನಿ ಶ್ರೀರಂಗಪಟ್ಟಣದಿಂದ ಪಿರಿಯಾಪಟ್ಟಣಕ್ಕೆ ಯುದ್ದಕ್ಕೆ ಹೋಗುವಾಗ ಗುಂಗ್ರಾಲ್ ಛತ್ರ ಗ್ರಾಮದಲ್ಲಿ ಒಂದು ಅಂಟುಕ್ವಾಟೆಯನ್ನು ನಿರ್ಮಿಸಿ ತಮ್ಮ ಯುದ್ಧ ಸಾಮಗ್ರಿಗಳನ್ನು ಅಲ್ಲಿ ಸ್ವಲ್ಪ ಇಟ್ಟು ಮುಂದೆ ಹೋಗುತ್ತಾರೆ. ಈ ಅಂಟುಕ್ವಾಟೆಯನ್ನು ಕಟ್ಟಿದ ಕಾರಣವೇನೆಂದರೆ ಯುದ್ಧದಿಂದ ತಪ್ಪಿಸಿಕೊಂಡು ಬಂದು ಇಲ್ಲಿ ತಂಗಲು. ದಳವಾಯಿಯ ಸೈನ್ಯ ಸೋಲನ್ನು ಅನುಭವಿಸಿದಾಗ ದಳವಾಯಿ ಮಹಾರಾಜರು ಗುಂಗ್ರಾಲ್ ಛತ್ರಕ್ಕೆ ಬಂದು ಶೋಕ ಮಾಡುತ್ತಿರುವಂತಹ ಸಂದರ್ಭದಲ್ಲಿ ಮಹಾರಾಜರ ಕಣ್ಣೀರು ಶ್ರೀ ಚಾಮುಂಡೇಶ್ವರಿಯ ಪಾದಕ್ಕೆ ಅರುವಾಗಿ ಗುಂಗ್ರಾಲ್ ಛತ್ರದ ಕ್ವಾಟೆಗೆ ಬಂದು ದಳವಾಯಿ ಮಹರಾಜರಿಗೆ ದರ್ಶನ ನೀಡಿ ನಿನ್ನ ಬೆನ್ನಿಂದೆ ನಾನಿದ್ದೇನೆ ಯುದ್ಧಕ್ಕೆ ಮತ್ತೆ ಸಿದ್ಧನಾಗು ಎಂದು ಬೆಟ್ಟದ ಚಾಮುಂಡಿ ಹೇಳುತ್ತಾಳೆ.
ಪಿರಿಯಾಪಟ್ಟಣ ಕಾಳಗ ಎಂಬ ಗ್ರಂಥದಲ್ಲಿ 'ಗಂಗರಾಜರ ಛತ್ರದ ಕ್ವಾಟೆಯಿಂದ' ಎಂಬ ಅಧ್ಯಾಯವೊಂದಿದೆ. ಈ ಅಧ್ಯಾಯದಲ್ಲಿ ಪಿರಿಯಾಪಟ್ಟಣ ಕಾಳಗ ಪ್ರಾರಂಭದಿಂದ ಹಿಡಿದು ಮುಕ್ತಾಯದವರೆಗೂ ಗುಂಗ್ರಾಲ್ ಛತ್ರದ ಉಲ್ಲೇಖವಿದೆ. ಈ ಅಧ್ಯಾಯವೇ ಅಲ್ಲದೆ ಹಲವಾರು ಅಧ್ಯಾಯಗಳಲ್ಲಿಯೂ ಈ ಗ್ರಾಮದ ಉಲ್ಲೇಖವಿದೆ.
ಗಂಗರಾಜರ ಛತ್ರದ ಕ್ವಾಟೆಯಿಂದ
ತಂದನ್ನೊ ತಂದಾನು ತಾನನೊ ತಂದನ್ನೊ ತಾನೊ ತಂದನ್ನೊ ತಂದಾನು ತಾನನೊ | ಸೊಲ್ಲು |
ಪಶ್ಚಿಮ ದಿಕ್ಕಿಗೆ ಮೊಕನಿಟ್ಟು
ದಳವಾಯಿಯವರು ರಂಗುಧಾಮನ ಗುಡಿಗೆ ಬಂದಾರು|
ನೂರೊಂದು ಇಡ್ಗಾಯಿ ನೂರೊಂದು ಒಡ್ಗಾಯಿ ರಂಗಧಾಮನಿಗೆ ನೂರೊಂದು ಹಣ್ಣ ಪೂಜೆ ಮಾಡಿದರು |
ಕಾಯಿ ಕರ್ಪೂರ ಈಳ್ಯವ ಮಡ್ಗಿದರು ರಂಗಧಾಮನಿಗೆ ಸಾಮ್ರಾಣಿ ಲೋಬಾನವೆತ್ತಿ ಬೆಳ್ಗಿದರು |
ಪಿರಿಯಾಪಟ್ಟಣಕೆ ಇದ್ಯಾಕೆ ಹೋಯ್ತೀನಿ ರಂಗಧಾಮ ನಮ್ಮ ಮ್ಯಾಲೆ ನಿನ್ನ ದಯವಿರಲಪ್ಪ
ಹೋದ ಕಾರ್ಯ ಜಯವಾಗದಿದ್ರೆ ಮಂಡೆ ಮ್ಯಾಗಳ್ ಮಜ್ಜಣದೂವ ವರವ ಪಾಲಿಸಪ್ಪ |
ದಳವಾಯಿಯವರ ದುಡವ ನೋಡಿದರು ರಂಗಧಾಮ ಥಟ್ಟನೆ ಬಲದಲ್ಲಿ ಹೂವ ಕೆಡಗಿದರು |
ಕೊಟ್ಟವರವ ಕಣ್ಣಿಗೊತ್ತುಕೊಂಡು ಪುಟ್ಟದಳವಾಯಿ ಮುಟ್ಟಿ ಪಾದಗಳ ಸರ್ಣು ಮಾಡಿದರು |
ದಯವಿರಲಿ ಕಾಣಪ್ಪ ಅಂತ ಹೇಳಿದರು ದಳವಾಯ್ ಪುಟ್ಟರ್ಸು ಅಲ್ಲಿಂದ ಪಕ್ಷಿವಾನ್ಯಕ್ಕೆ ಬಂದಾರು |
ಕಲ್ಯಾಣಿಯಲ್ಲಿ ಜಲನಾಡಿ ಬಂದಾರು ದಳವಾಯ್ ಪುಟ್ಟಣ್ಣ ಆಂಜನೇಸ್ವಾಮಿ ಪೂಜೆ ಮಾಡಿದರು |
ನೂರೊಂದು ಇಡ್ಗಾಯಿ ನೂರೊಂದು ಒಡುಗಾಯಿ ಆಂಜನೇಸ್ವಾಮಿಗೆ ಎಣ್ಣೆ-ಮಜ್ಜಣ ಮಾಡಿ ಧೂಪ ಬೆಳಗಿದರು |
ಜಲ್ದಿ ಜಲ್ದಿ ಸೈನ್ಯ ನಡಿಯಲಿ ಹಾಂಗಂತ ದಳವಾಯಿ ವಸ್ತ್ರ ಬೀಸಿ ಸನ್ನೆ ಮಾಡಿದರು |
ದೊರೆಯ ಸೈನ್ಯ ಅಂತೆ ನೋಡಿದರು ಮೈಸೂರ ಸೈನ್ಯ ಕುದುರೆಗೆ ಸನ್ಯ ಮಾಡಿ ಬರುತ್ತಾರೆ |
ರವುಸುನಲ್ಲಿ ಕುದುರೆ ಬಿಡುವಾಗ ಆ ರವುಸ್ಗೆ ಕೆಂಧೂಳು ಎದ್ದು ಮುಗುಲು ಮುಟ್ಟುತಾಯ್ತೆ |
ಆರಾ ಮೂರು ಒಂಬತ್ತು ಹೆಜ್ಜೆಗೆ ಮೈಸೂರ ಸೈನ್ಯ ಕರೀಮಂಟಿ ಪಾಲಳ್ಳಿಗೆ ಬಂದಿತು |
ಕಾವೇರಿ ದಡಕೆ ದಂಡು ಬಂದಿತು ಸಾಕಾಗುವಷ್ಟು ತೀರ್ಥ ಕಡಿದು ಮುಂದೆ ಸಾಗಿತು |
ರಣಗಂಬಾದ ಬ್ವಾರೆಗೆ ಬಂದರಲ್ಲ ಮೈಸೂರ ರಾಣ್ಯ ಕಂಬದ-ಆಂಜನೇಯ ಸ್ವಾಮಿ ಪೂಜೆ ಮಾಡಿದರು |
ನೂರೊಂದು ಇಡ್ಗಾಯಿ ನೂರೊಂದು ಒಡ್ಗಾಯಿ ರಣಗಂಬ ಸ್ವಾಮಿಗೆ ದೀಪ ಕಸ್ಸಿ ಧೂಪ ಬೆಳ್ಗಿದರು |
ರಣಗಂಬಾದ ಸ್ವಾಮಿಗೆ ಪೂಜೆ ಮಡಿ ದಳವಾಯಿಯವ್ರು ಏನಂತ ವರವ ಬೇಡಿದರು |
ಗಡಿಯ ಆ ಪಿರಿಯಾಪಟ್ಟಣ ರಣಗಂಬ ಸ್ವಮಿ ನನ್ನ ವಾಸ ಆದಿದ್ದೆ ಆದರೆ |
ನಿನ್ಗೆ ಚಿನ್ನದ ಕಳಸ ಎರಸಿ ಕೊಡುವೆನು ರಣಗಂಬಸ್ವಾಮಿ ಬೆಳ್ಳಿ ತೇರ ಎರಸಿ ಕೊಟ್ಟೇನು |
ಹಂಗಂದ ಮಾತ ಕೇಳಿದ ರಣಗಂಬದ ಸ್ವಾಮಿ ರಣಗಂಬದ ಸ್ವಾಮಿ ಬಲಗಡೆಗೆ ಹೂವ ಕೊಟ್ಟರು |
ದಂಡು ಸೀತ ಪುರಕೆ ಸೀದಾ ಬಂದಿತು ಮೈಸೂರ ಸೈನ್ಯ ಕಟ್ಟೇರಿ ಕಡದು ಮುಂದಕೊರಟಿತು |
ಬಲಕೆ ಬನ್ನಂಗಾಡಿ ಕಂಡರು ಬನ್ನಂತಮ್ಮುಂಗೆ ಒಂದು ಕಿರುಕಾಕಾಕಿ ಮುಂದೆ ನಡದರು |
ಕನ್ನಂಬಾಡಿಗೆ ಸಾಗಿ ಬಂದರು ಮೈಸೂರ ರಾಣ್ಯ ಕಾಳಮ್ಮ ತಾಯ ಗುಡುಗೆ ನಡದರು |
ಗಡಿಗೆ ತುಪ್ಪ ಹೆಡಗೆ ಹಣ್ಣಗಳು ಕಾಳಮ್ಮ ತಾಯ್ಗೆ ಎಡೆಯ ಪಡಿಸಿ ಕೈಯ ಮುಗಿದರು |
ನೂರೊಂದು ಒಡ್ಗಾಯಿ ನೂರೊಂದು ಇಡ್ಗಾಯಿ ಕಾಳಮ್ಮ ತಾಯ್ಗೆ ದೀಪ ಕಸ್ಸಿ ಧೂಪ ಬೆಳ್ಗಿದರು |
ಕರಗಳೆತ್ತಿ ಕೈಯ ಮುಗಿದರು ದಳವಾಯಿಯವ್ರು ಏನಂತ ವರವ ಬೇಡಿದರು |
ಪಿರಿಯಾಪಟ್ಟಣವ ನನ್ವಾಸ ಮಾಡಿದರೆ ಕಾಳಮ್ಮ ನಿನ್ಗೆ ಬೆಳ್ಳಿರಥವ ಮಾಡಿಸಿ ಕೊಡುವೆನು |
ಬೆಳ್ಳಿರಥವ ಮಾಡಿಸಿ ಕೊಡುವೆನು ಕಾಳಮ್ಮ ತಾಯೆ ಕುದುರೆ ವಾಗನ ಮಾಡಿಸಿ ಕೊಡುವೆನು |
ಹಂಗಂತ ಮಾತ ಕೇಳಿದಳು ಕಾಳಮ್ಮ ತಾಯಿ ಬಲಗಡೆಗೆ ಹೂವ ಕೊಟ್ಟಳು |
ಕೊಟ್ಟ ಹೂವ ಕಣ್ಣಿಗೊತ್ತುಕೊಂಡು ದಳವಾಯಿಯವರು ತಗದು ಮಂಡೆಗೆ ಧರಿಸಿಕೊಂಡರು |
ಕನ್ನಂಬಾಡಿಯ ಹಿಂದಕೆ ಬಿಟುಕೊಂಡು ಮೈಸೂರು ರಾಣ್ಯ ಚಿಕ್ಕನಹಳ್ಳಿ ಬ್ವಾರೆಗೆ ಬಂದಿತು |