ಗಿಲ್ಗಮೆಷ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗಿಲ್ಗಮೆಷ್ ಸುಮೇರಿಯನ್ನರ ಅತಿಪ್ರಾಚೀನ ಸಂಪ್ರದಾಯಕ್ಕೆ ಸೇರಿದ, ಮೆಸಪೊಟೇಮಿಯದ ಪೌರಾಣಿಕ ಜನಪದ ಮಹಾಕಾವ್ಯವೊಂದರ ನಾಯಕ. ಈ ಮಹಾಕಾವ್ಯ ಅಕ್ಕೇಡಿಯನ್ ಭಾಷೆಯಲ್ಲಿಯೇ ಒಂದು ಬಹು ಮುಖ್ಯವಾದ ಸಾಹಿತ್ಯ ಕೃತಿ ಮತ್ತು ಇದರ ನಾಯಕ ಗಿಲ್ಗಮೆಷ್ ಸುಮೇರಿಯನ್ ನಾಯಕರಲ್ಲೆಲ್ಲ ಅಗ್ರಗಣ್ಯ. ಈ ಕಥೆ ಪ್ರ.ಶ.ಪು. 3000 ವರ್ಷಗಳ ಹಿಂದೆ ದಕ್ಷಿಣ ಮೆಸಪೊಟೇಮಿಯದಲ್ಲಿದ್ದ ನಾಗರಿಕತೆಯ ಸ್ವರೂಪವನ್ನು ತಿಳಿಸುತ್ತದೆ. ಗಿಲ್ಗಮೆಷ್ ವಿಷಯದಲ್ಲಿ ಹುಟ್ಟಿಕೊಂಡಿರುವಷ್ಟು ಕಥೆಗಳು ಇತರರ ವಿಷಯದಲ್ಲಿಲ್ಲ. ಅಲ್ಲದೆ ಇವನು ತನ್ನ ಸ್ನೇಹಿತ ಎಂಕಿಡುವಿನೊಂದಿಗೆ ಸೇರಿ ತೋರಿಸಿದ ಸಾಹಸ ಬೇರೆಯವರಲ್ಲಿ ಕಂಡುಬರದು. ಸುಮೇರಿಯದಲ್ಲಿನ ಈತನ ಕಥೆಯ ಮೂಲವನ್ನು ಪ್ರ.ಶ.ಪು. 1500ಕ್ಕಿಂತ ಹಿಂದಕ್ಕೆ ಒಯ್ಯಬಹುದು. ನಿನೆವದಲ್ಲಿ ಅಸ್ಸೀರಿಯದ ದೊರೆ ಅಷೂರ್ಬನಿಪಾಲನ (ಪ್ರ.ಶ.ಪು. 669-630?) ಗ್ರಂಥ ಭಂಡಾರದಲ್ಲಿ ಈ ಕಥೆಯ ಅಪೂರ್ಣಪಾಠ (ಕೇವಲ 12 ಫಲಕಗಳು ಮಾತ್ರ) ದೊರೆತಿವೆ. ಹಿಟೈಟ್ ಮತ್ತು ಹುರಿಯನ್ ಭಾಷೆಗಳಲ್ಲಿ ಏಷ್ಯ ಮೈನರಿನಲ್ಲಿ ಕೆಲವು ಬದಲಾವಣೆಗಳೊಂದಿಗೆ ಪ್ರಚಲಿತವಿದ್ದ ಈ ಕಥೆ ಗ್ರೀಕರ ಒಡಿಸ್ಸಿಯ ಮೇಲೆ ಪ್ರಭಾವ ಬೀರಿರಬಹುದು. ಹೋಮರನಿಗಿಂತ 1500 ವರ್ಷಗಳಷ್ಟು ಹಿಂದೆಯೇ ಇದ್ದ ಅತ್ಯಂತ ಪ್ರಾಚೀನ ಮಹಾಕಾವ್ಯ ಈ ಗಿಲ್ಗಮೆಷ್ ಇತಿಹಾಸ.

ಗಿಲ್ಗಮೇಷನದೆಂದು ನಂಬಲಾದ ಚಿತ್ರಣ

ಗಿಲ್ಗಮೆಷ್ ಕಥೆ[ಬದಲಾಯಿಸಿ]

  • ಈ ಕಥೆಯಲ್ಲಿ ಮಾನವ ಮತ್ತು ಪ್ರಕೃತಿ, ಪ್ರೀತಿ ಮತ್ತು ಸಾಹಸ, ಸ್ನೇಹ ಮತ್ತು ಯುದ್ಧ ಮುಂತಾದ ಪ್ರಾಪಂಚಿಕ ವಿಷಯಗಳನ್ನು ಅಪರಿಹಾರ್ಯವಾದ ಸಾವಿನ ಹಿನ್ನಲೆಯಲ್ಲಿ ವಿವರಿಸಿದೆ. ಸಾವಿನ ವಿಷಯದಲ್ಲಿ ಆಗಿನ ಜನತೆಯಲ್ಲಿದ್ದ ನಂಬಿಕೆಯನ್ನು ಇದು ವ್ಯಕ್ತಪಡಿಸುತ್ತದೆ. ಈ ಮಹಾಕಾವ್ಯದ ಗಿಲ್ಗಮೆಷ್ ಬಹುಶಃ ಪ್ರ.ಶ.ಪು. 3000 ವರ್ಷಗಳ ಹಿಂದೆ ಕಿಷ್ನಲ್ಲಿದ್ದ ಅಗ್ಗನ ಸಮಕಾಲೀನನಾಗಿ ಉರುಕ್ನಲ್ಲಿ ಆಳುತ್ತಿದ್ದವನೆನ್ನಲಾಗಿದೆ. ಗಿಲ್ಗಮೆಷ್ ಎಂಬ ಸುಮೇರಿಯನ್ ಭಾಷೆಯ ಹೆಸರನ್ನು ತಂದೆ ವೀರ, ಪುರಾತನ ವೀರ ಎಂದು ಮುಂತಾಗಿ ಅರ್ಥೈಸಿದ್ದಾರೆ.
  • ಕಾವ್ಯ, ಕಥೆಗಳಲ್ಲಿ ವಿವರಿಸಿರುವ ಈತನ ಸಾಹಸ ಕಾರ್ಯಗಳಿಗೆ ಚಾರಿತ್ರಿಕಾಧಾರಗಳೇನೂ ಇಲ್ಲ. ಹಾಗೆಯೆ ಸ್ನೇಹಿತ ಮತ್ತು ಸಂಗಾತಿ ಎಂಕಿಡುವಿನ ಹೆಸರೂ ಬೇರೆಲ್ಲಿಯೂ ಇಲ್ಲ. ಈ ಕಥೆ ಮುಖ್ಯವಾಗಿ ಗಿಲ್ಗಮೆಷ್ ಮತ್ತು ಎಂಕಿಡು ಇವರ ಸ್ನೇಹ ಬಂಧನವನ್ನು ಕುರಿತದ್ದು. ಇಬ್ಬರೂ ವೀರಾಧಿವೀರರು. ಗಿಲ್ಗಮೆಷ್ ಶೌರ್ಯದ ಉನ್ನತ ಆದರ್ಶವುಳ್ಳವ, ಕೀರ್ತಿ ತರುವ ಕಾರ್ಯಕ್ಕಾಗಿ ಏನನ್ನೇ ಆಗಲಿ, ಪ್ರಾಣವನ್ನು ಕೂಡ ತ್ಯಾಗ ಮಾಡಲು ಸಿದ್ಧನಾಗಿದ್ದವ.
  • ಅರೆದೈವತ್ವ ಅರೆ ಮಾನವತ್ವವನ್ನು ಪಡೆದಿದ್ದ ಗಿಲ್ಗಮೆಷನಿಗೆ ಭೂಮಿ, ಸಾಗರಗಳ ಮೇಲಿನ ಎಲ್ಲ ವಿಷಯಗಳೂ ತಿಳಿದಿದ್ದವು. ಅನು ದೇವತೆ ಇವನ ದರ್ಪವನ್ನಡಗಿಸಲು ಎಂಕಿಡುವನ್ನು ಸೃಷ್ಟಿಸುತ್ತಾನೆ. ಗಿಲ್ಗಮೆಷ್ನಿಗೂ ಇವನಿಗೂ ನಡೆದ ಶಕ್ತಿ ಪ್ರದರ್ಶನ ದಲ್ಲಿ ಗಿಲ್ಗಮೆಷ್ ಜಯಶಾಲಿಯಾಗು ತ್ತಾನೆ. ಮುಂದೆ ಇಬ್ಬರೂ ನಿಕಟವರ್ತಿಗಳಾಗಿ ಹುಂಬಾಬನ ಮೇಲೆ ಯುದ್ಧ ಹೂಡುತ್ತಾರೆ. ತನ್ನನ್ನು ಮದುವೆಯಾಗಲು ನಿರಾಕರಿಸಿದ ಗಿಲ್ಗಮೆಷ್ನ ಮೇಲೆ ಇಷ್ಟಾರ್ ದೇವತೆ ದೇವಲೋಕದ ಗೂಳಿಯನ್ನು ನುಗ್ಗಿಸಿದಾಗ ಎಂಕಿಡುವಿನ ಸಹಾಯದಿಂದ ಅದನ್ನು ಗಿಲ್ಗಮೆಷ್ ಕೊಲ್ಲುತ್ತಾನೆ.
  • ಇದರಿಂದ ಕುಪಿತಗೊಂಡ ಅನು ಮೊದಲಾದ ದೇವತೆಗಳು ಎಂಕಿಡು ಸಾಯಬೇಕೆಂದು ನಿರ್ಧರಿಸುತ್ತಾರೆ. ರೋಗ ಬಂದು ಎಂಕಿಡು ಸಾಯುತ್ತಾನೆ. ಸ್ನೇಹಿತನ ಸಾವಿನ ದುಃಖದಿಂದ ಪರಿತಪಿಸುತ್ತಿದ್ದ ಗಿಲ್ಗಮೆಷ್ ನಿಗೆ ಸಾವನ್ನೇ ಎದುರಿಸಬೇಕೆಂಬ ಸಂಕಲ್ಪ ಉಂಟಾಗುತ್ತದೆ; ಪ್ರಳಯದಿಂದ ಪಾರಾಗಿ ಸಾವನ್ನು ಗೆದ್ದ ಉತ್ನಪಿಷ್ಟಿಮನನ್ನು ಹುಡುಕಿ ಕೊಂಡು ಹೋಗುತ್ತಾನೆ. ಆಪತ್ಕಾರಕವಾದಾಗ ನಿಡುಪಯಣದ ಅನಂತರ ಉತ್ನಪಿಷ್ಟಿಮನ ದರ್ಶನವಾಗುತ್ತದೆ. ಆತನಿಂದ ಪ್ರಳಯದ ಕಥೆಯನ್ನು ತಿಳಿದು ನವ ಯೌವನವನ್ನುಂಟು ಮಾಡುವ ಗಿಡವೊಂದನ್ನು ಪಡೆಯುತ್ತಾನೆ;
  • ಜೊತೆಗೆ ಅಮರತ್ವ ದೇವತೆಗಳಿಗೆ ಮಾತ್ರ ಎಂಬ ಎಚ್ಚರಿಕೆಯನ್ನೂ ಉತ್ನಪಿಷ್ಟಿಮ್ ಕೊಡುತ್ತಾನೆ. ಮುಂದೆ ಆ ಗಿಡವನ್ನು ಸರ್ಪವೊಂದು ಅಪಹರಿಸುತ್ತದೆ. ಮತ್ತೊಂದು ಐತಿಹ್ಯದಂತೆ ಇಷ್ಟಾರ್ ಗಿಲ್ಗಮೆಷನಿಗೆ ಕೊಟ್ಟಿದ್ದ ಪುಕ್ಕು, ಮಿಕ್ಕು ಎಂಬ ಪದಾರ್ಥಗಳು (ಬಹುಶಃ ಡೋಲು ಮತ್ತು ಅದರ ಕೋಲು) ಕಳೆದು ಹೋದಂತೆಯೂ ಮತ್ತೆ ಬದುಕಿಬಂದ ಎಂಕಿಡು ಅವನ್ನು ಹುಡುಕಿ ತರುವುದಾಗಿ ಮಾತು ಕೊಟ್ಟು ಮೃತ್ಯುಲೋಕದ ಗಂಭೀರವರದಿಯನ್ನು ಒಪ್ಪಿಸಿದಂತೆಯೂ ತಿಳಿದುಬರುತ್ತದೆ.