ವಿಷಯಕ್ಕೆ ಹೋಗು

ಗಿರಕಿ ರೋಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Different forms of coenurus in sheep and rabbits and an adult worm

ಗಿರಕಿ ರೋಗ ಕುರಿ, ದನ, ಮೇಕೆ ಮುಂತಾದ ಸಾಕುಪ್ರಾಣಿಗಳ ಮಿದುಳಿನ ರೋಗ (ಗಿಡ್). ತಲೆತಿರುಗು ರೋಗ, ತತ್ತರ ರೋಗ ಇದರ ಪರ್ಯಾಯನಾಮಗಳು. ಇಂಗ್ಲಿಷಿನಲ್ಲಿ ಟರ್ನ್ಸಿಕ್, ಸ್ಟರ್ಡಿ, ಬ್ಲಾಬ ಹ್ವಿರ್ಲ್, ಪಂಟ್ ಮುಂತಾದ ಹೆಸರುಗಳಿವೆ.

ಕಾರಣ[ಬದಲಾಯಿಸಿ]

ಸೆಸ್ಟೋಡ ಗಣದ ಟೀನಿಯ ಮಲ್ಟಿಸೆಪ್ಸ್ ಅಥವಾ ಮಲ್ಟಿಸೆಪ್ಸ್ ಎಂಬ ಲಾಡಿಹುಳುವಿನ ಡಿಂಬಾವಸ್ಥೆಯಾದ ಸೀನ್ಯೂರಸ್ ಸೆರಬ್ರಾಲಿಸ್ ಎಂಬುದರಿಂದ ಈ ರೋಗ ಉಂಟಾಗುತ್ತದೆ. ಇದು ಪ್ರಮುಖವಾಗಿ ಕುರಿ, ದನ ಮುಂತಾದವುಗಳ ರೋಗವಾದರೂ ರೋ, ಜಿಂಕೆ, ಗೆಜ಼ೆಲ್ ಮುಂತಾದ ಕಾಡುಪ್ರಾಣಿಗಳಲ್ಲೂ ಒಂಟೆ, ಕುದುರೆಗಳಲ್ಲೂ ಅಪೂರ್ವವಾಗಿ ಮನುಷ್ಯನಲ್ಲೂ ಕಾಣಬರುವುದುಂಟು.

ಬೆಳವಣಿಗೆ[ಬದಲಾಯಿಸಿ]

ಮಲ್ಟಿಸೆಪ್ಸ್ ಹುಳು ತನ್ನ ಜೀವನಚಕ್ರವನ್ನು ಎರಡು ಭಿನ್ನ ಆತಿಥೇಯ ಪ್ರಾಣಿಗಳಲ್ಲಿ ನಡೆಸುತ್ತದೆ. ಇದರ ಪ್ರೌಢಹುಳು ನಾಯಿ, ನರಿ ಮುಂತಾದ ಮಾಂಸಹಾರಿ ಪ್ರಾಣಿಗಳ ಕರುಳಿನಲ್ಲೂ ಡಿಂಬ ಕುರಿ, ಮೇಕೆ, ದನ ಮುಂತಾದ ಸಸ್ಯಹಾರಿ ಪ್ರಾಣಿಗಳ ದೇಹದಲ್ಲೂ ಕಾಣಬರುತ್ತವೆ. ಪ್ರೌಢಹುಳು ಸುಮಾರು 100ಸೆಂಮೀ. ಉದ್ದವಿದ್ದು ಸುಮಾರು 200 ಖಂಡಗಳನ್ನೂ ಒಳಗೊಂಡಿದೆ. ಇದರ ತಲೆಯ ಭಾಗದಲ್ಲಿ (ಸ್ಕೋಲೆಕ್ಸ್) 22-32 ದೊಡ್ಡ ಹಾಗೂ ಚಿಕ್ಕ ಮುಳ್ಳುಗಳಿವೆ. ಇವುಗಳ ಸಹಾಯದಿಂದ ಆತಿಥೇಯ ಪ್ರಾಣಿಯ ಕರುಳಿನ ಒಳಭಿತ್ತಿಗೆ ಹುಳು ಅಂಟಿರುತ್ತದೆ. ಹುಳುವಿನ ದೇಹದ ಹಿಂತುದಿಯ ಖಂಡಗಳಲ್ಲೆಲ್ಲ ಫಲವಂತಿ ಕೋಶಗಳಿದ್ದು ಅವು ಅಸಂಖ್ಯಾತ ಮೊಟ್ಟೆಗಳನ್ನು ಉತ್ಪಾದಿಸುತ್ತವೆ. ಪ್ರಾಣಿಗಳ ಮಲದೊಂದಿಗೆ ಹೊರಬರುವ ಈ ಮೊಟ್ಟೆಗಳು ಹುಲ್ಲು ಮುಂತಾದ ಗಿಡಗಳ ಮೇಲೆಲ್ಲ ಹರಡಿರುತ್ತವೆ. ಕುರಿ, ದನಗಳು ಹುಲ್ಲನ್ನು ತಿಂದಾಗ ಮೊಟ್ಟೆಗಳು ಅವುಗಳೊಳಕ್ಕೆ ಹೋಗಿ ದೇಹದ ವಿವಿಧ ಭಾಗಗಳಲ್ಲಿ ಪಸರಿಸಿ ಆಂಕೊಸ್ಫಿಯರುಗಳೆಂಬ ಡಿಂಬಗಳನ್ನು ಉತ್ಪಾದಿಸುತ್ತವೆ. ಇವು ಕ್ರಮೇಣ ಮಿದುಳು ಮತ್ತು ಬೆನ್ನು ಹುರಿಗಳನ್ನು ಸೇರಿಕೊಂಡು ಸೀನ್ಯೂರಸ್ ಡಿಂಬಗಳಾಗಿ ಬೆಳೆಯುತ್ತವೆ. ಒಂದೊಂದು ಡಿಂಬವೂ ಒಂದು ಬಗೆಯ ಗುಂಡನೆಯ ಇಲ್ಲವೆ ಕೊಳವೆಯಂಥ ಚೀಲದಂತಿದ್ದು ಅನೇಕ ಸ್ಕೋಲೆಕ್ಸ್ ತಲೆಗಳನ್ನು ಒಳಗೊಂಡಿದೆ. ಪ್ರತಿ ಸ್ಕೋಲೆಕ್ಸ್ ತಲೆಯೂ ಒಂದು ಲಾಡಿ ಹುಳುವಾಗಿ ಬೆಳೆಯಬಲ್ಲದು. ಡಿಂಬ ಈ ಹಂತಕ್ಕೆ ಬರುವ ವೇಳೆಗೆ ಆತಿಥೇಯ ಪ್ರಾಣಿ ವಿಶಿಷ್ಟ ರೋಗಲಕ್ಷಣಗಳನ್ನು ಪ್ರದರ್ಶಿಸುತ್ತಿದ್ದು ಕೊನೆಗೆ ಸತ್ತು ಹೋಗುತ್ತದೆ. ಹೀಗೆ ಸತ್ತ ಪ್ರಾಣಿಯ ಮಿದುಳನ್ನು ಮತ್ತೆ ನಾಯಿಯೋ, ನರಿಯೊ ತಿಂದಾಗ ಅದರಲ್ಲಿನ ಡಿಂಬದ ತಲೆಭಾಗ ಪ್ರೌಢಹುಳುವಾಗಿ ಬೆಳೆದು ಮತ್ತೆ ಮೊಟ್ಟೆಗಳನ್ನು ಉತ್ಪಾದಿಸತೊಡಗುತ್ತದೆ.


ರೋಗ ಲಕ್ಷಣಗಳು[ಬದಲಾಯಿಸಿ]

ಜಾಡ್ಯ ತಗುಲಿದ ಪ್ರಾಣಿಗಳಲ್ಲಿ ಸಾಮಾನ್ಯವಾಗಿ ಮೊದಲು 1-3 ವಾರಗಳ ತನಕ ಜ್ವರ ಬರುತ್ತದೆ. ಅಲ್ಲದೆ ಮಿದುಳು ಪೊರೆಯು ಉರಿಯೂತದ (ಕಾರ್ಟಿಕಲ್ ಎನ್ಸೆಫಲೈಟಿಸ್) ಲಕ್ಷಣಗಳು ತೋರುತ್ತವೆ. ಕೆಲವೊಮ್ಮೆ ರೋಗದ ಈ ಪ್ರಥಮ ಲಕ್ಷಣಗಳು ಕಾಣದೇ ಹೋಗುವುದುಂಟು. ಸೋಂಕು ತಗುಲಿದ 2-7 ತಿಂಗಳುಗಳ ಅನಂತರ ರೋಗದ ಇತರ ಲಕ್ಷಣಗಳು ಕಾಣತೊಡುಗುತ್ತವೆ. ಪ್ರಾಣಿ ಆಹಾರಸೇವೆಯನ್ನು ನಿಲ್ಲಿಸಿ ಜಡವಾಗುತ್ತದೆ. ತನ್ನ ತಲೆಯನ್ನು ಒಂದು ದಿಕ್ಕಿನಲ್ಲಿ (ಮಿದುಳಿನ ಯಾವ ಭಾಗದಲ್ಲಿ ಡಿಂಬ ಸೇರಿಕೊಂಡಿದೆಯೋ ಆ ದಿಕ್ಕಿನಲ್ಲಿ) ವಾಲಿಸುವುದಲ್ಲದೆ ಅದೇ ದಿಕ್ಕಿನಲ್ಲಿ ಸುತ್ತು ಹಾಕುತ್ತಾ ನಡೆದಾಡುತ್ತದೆ. ಈ ರೀತಿ ಸುತ್ತು ಹಾಕುವಾಗ ಮತ್ತೊಂದು ದಿಕ್ಕಿಗೆ ದೃಷ್ಟಿಯನ್ನು ಬೀರುವುದೇ ಇಲ್ಲ. ಆಗಿಂದಾಗ್ಗೆ ಸೆಡೆತಕ್ಕ ಈಡಾದಂತೆ ಅಡ್ಡಡ್ಡವಾಗಿ ತಲೆಯನ್ನು ಚಲಿಸುವುದೂ ಉಂಟು. ಉಳಿದ ಸಮಯದಲ್ಲಿ ತಲೆಯನ್ನು ತಗ್ಗಿಸಿ ನಿಶ್ಚೇಷ್ಟವಾಗಿ ನಿಂತುಬಿಡುತ್ತದೆ. ಡಿಂಬ ಮಿದುಳಿನ ಮುಂಭಾಗದಲ್ಲಿದ್ದರೆ ತಲೆಯನ್ನು ಎದೆಗೆ ಒತ್ತುಕೊಂಡು ನೆಗೆಯುವುದುಂಟು. ಈ ಸ್ಥಿತಿಯಲ್ಲಿ ಎದುರಿಗೆ ಕಲ್ಲು, ಮರದ ಕಂಬ ಮುಂತಾದ ವಸ್ತುಗಳು ಸಿಕ್ಕಿದರೆ ಅವಕ್ಕೆ ಗಟ್ಟಿಯಾಗಿ ಹಾಯುವುದು, ಹಲ್ಲು ಮಸೆಯುವುದು ಮುಂತಾದವನ್ನು ಮಾಡುತ್ತದೆ. ಆಗಿಂದಾಗ್ಗೆ ಜೊಲ್ಲು ಸುರಿಯುತ್ತಾ ಇರುತ್ತದೆ. ಕ್ರಮೇಣ ಪ್ರಾಣಿಗೆ ಸರಿಯಾಗಿ ನಿಲ್ಲುವುದಕ್ಕಾಗಲಿ ಆಹಾರವನ್ನು ಅಗಿಯುವುದಕ್ಕಾಗಲಿ ಆಗುವುದೇ ಇಲ್ಲ. ರೋಗ ಪೀಡಿತ ಪ್ರಾಣಿ ತನ್ನ ಗುಂಪಿನಿಂದ ಬೇರೆ ಯಾಗಲು ಇಚ್ಚಿಸುತ್ತದೆ. ಹೀಗೆ ಒಂಟಿಯಾಗಿ ಹಲವಾರು ರೀತಿಯಲ್ಲಿ ನರಳಿ, ಆಹಾರ ಸೇವನೆಯಿಲ್ಲದೆ ಕೃಶವಾಗಿ ಕೊನೆಗೆ ಸತ್ತು ಹೋಗುತ್ತದೆ.


ಮಲ್ಟಿಸೆಪ್ಸ್ ಮಲ್ಟಿಸೆಪ್ಸ್ ಹುಳುವನ್ನೇ ಹೋಲುವ ಮ.ಗೈಗರಯ್ ಎಂಬ ಇನ್ನೊಂದು ಬಗೆಯ ಲಾಡಿಹುಳುವಿನ ಡಿಂಬ ಮೇಕೆಗಳಲ್ಲಿ ರೋಗವನ್ನು ಉಂಟು ಮಾಡುತ್ತದೆ. ಡಿಂಬದ ಹೆಸರು ಸೀನ್ಯೂರಸ್ ಗೈಗರಯ್. ಭಾರತ, ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ಈ ರೋಗ ಬಲುಸಾಮಾನ್ಯ. ಡಿಂಬ ಸಿ.ಸೆರೆಬ್ರಾಲಿಸ್ ರೀತಿಯಂತೆ ನರಮಂಡಲಕ್ಕೆ ಮಾತ್ರ ಮೀಸಲಾಗಿಲ್ಲ. ತೊಡೆಯ ಅಂಗಾಂಶ, ನಡುವಿನ ಭಾಗ, ವಪೆ, ಮೂತ್ರಪಿಂಡ, ಹೃದಯ, ಉದರ ಪರಿವೇಷ್ಟನ ಪಟಲ, ಕಿಬ್ಬೊಟ್ಟೆಗಳಲ್ಲಿ ಕಂಡುಬರುತ್ತದೆ. ಈ ರೋಗದ ಬಗೆಗೆ ಭಾರತದಲ್ಲಿ ಮಾಥೂರ್ ಮತ್ತು ದತ್ (1969), ರಹಮುದ್ದೀನ್ (1941) ಬಾಳೇರಾಯರು(1939) ಸಂಶೋಧನೆ ನಡೆಸಿದ್ದಾರೆ.


ರೋಗ ಚಿಕಿತ್ಸೆ ಹಾಗೂ ತಡೆಗಟ್ಟುವ ಕ್ರಮಗಳು[ಬದಲಾಯಿಸಿ]

ಗಿರಕಿ ರೋಗಕ್ಕೆ ಸರಿಯಾದ ಔಷಧಿಗಳಿಲ್ಲ. ಕೆಲವೊಮ್ಮೆ ಶಸ್ತ್ರಚಿಕಿತ್ಸೆಯಿಂದ ಗುಣಪಡಿಸಬಹುದಾದರೂ ತಡೆಗಟ್ಟುವಿಕೆಯೇ ಅತ್ಯುತ್ತಮ ಮಾರ್ಗ. ಡಿಂಬ ನಿಯತ ಜೀವಿಯ ಸಂಪರ್ಕ ಹೊಂದದಂತೆ ಮಾಡುವುದರಿಂದ ಈ ರೋಗವನ್ನು ತಡೆಗಟ್ಟಬಹುದು. ನಾಯಿ, ನರಿಗಳು ರೋಗಪೀಡಿತ ಪ್ರಾಣಿಗಳನ್ನು ತಿನ್ನದಂತೆ ನೋಡಿಕೊಳ್ಳಬೇಕು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: