ಗಾರ್ಷಿನ್, ಫಸೀವಲಟ್, ಮಿಖೈಲೊವಿಚ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗಾರ್ಷಿನ್, ಫಸೀವಲಟ್, ಮಿಖೈಲೊವಿಚ್[ಬದಲಾಯಿಸಿ]

Илья Репин - Портрет Всеволод Михайлович Гаршин.jpg

ಗಾರ್ಷಿನ್, ಫಸೀವಲಟ್, ಮಿಖೈಲೊವಿಚ್ 1855-88. ರಷ್ಯನ್ ಕತೆಗಾರ ಮತ್ತು ಕಾದಂಬರಿಕಾರ.

ಬದುಕು ಮತ್ತು ಬರಹ[ಬದಲಾಯಿಸಿ]

ತಂದೆ ನಿವೃತ್ತ ಸೈನ್ಯಾಧಿಕಾರಿ. ರಷ್ಯ-ತುರ್ಕಿ ಯುದ್ಧದಲ್ಲಿ ಗಾರ್ಷಿನ್ ಸೈನಿಕನಾಗಿ ಭಾಗವಹಿಸಿದ. ಈ ಅನುಭವ ಇವನ ಇಡೀ ಜೀವನದ ಮೇಲೆ ಪ್ರಭಾವ ಬೀರಿತು. ಇವನ ಮೊದಲನೆಯ ಕತೆ, ನಾಲ್ಕು ದಿನಗಳು (1877) ಈ ಯುದ್ಧಕ್ಕೆ ಸಂಬಂಧಿಸಿದುದು. ಯುದ್ಧದ ವಿಷಯದಲ್ಲಿ ಇವನ ಜುಗುಪ್ಸೆ ಇಲ್ಲಿ ವ್ಯಕ್ತವಾಗುತ್ತದೆ. ಇವನದು ವಿಷಣ್ಣತೆಯ ಅತಿಸೂಕ್ಷ್ಮ ಮನಃಸ್ಥಿತಿ. ನ್ಯಾಯಕ್ಕಾಗಿ ತೀವ್ರ ಬಂiÀÄಕೆ, ಅನುಕಂಪ, ಎಲ್ಲ ದುಷ್ಟತನವನ್ನೂ ತೊಡೆದುಹಾಕುವ ಛಲ- ಇವು ಇವನ ಕತೆಗಳಲ್ಲಿ ಎದ್ದು ಕಾಣುತ್ತವೆ. ಕಡೆಯ ವರ್ಷಗಳಲ್ಲಿ ಇವನ ಮನಸ್ಸು ಅಸ್ವಸ್ಥವಾಗಿತ್ತು. ಕೆಂಪು ಹೂ (1883) ಎಂಬ ಕತೆಯಲ್ಲಿ ತನ್ನ ಅನುಭವದ ಆಧಾರದಿಂದ ಹುಚ್ಚನೊಬ್ಬನ ಭಯಂಕರ ಚಿತ್ರವನ್ನು ಕೊಟ್ಟಿದ್ದಾನೆ. ಇವನ ಮೇಲೆ ಟಾಲ್ಸ್ಟಾಯ್ ಪ್ರಭಾವ ವಿಶಿಷ್ಟವಾಗಿತ್ತು. ತನ್ನ 33ನೆಯ ವಯಸ್ಸಿನಲ್ಲಿ ದೈಹಿಕ ಮತ್ತು ಮಾನಸಿಕ ಯಾತನೆಯನ್ನು ತಡೆಯಲಾರದೆ ಗಾರ್ಷಿನ್ ಆತ್ಮಹತ್ಯೆ ಮಾಡಿಕೊಂಡ.

ಈತ ಬರೆದದ್ದು ಸ್ವಲ್ಪ. ಆದರೆ ಕತೆಗಳಲ್ಲಿ ವಿಷಣ್ಣತೆ ನಿರಾಸೆಗಳಿದ್ದರೂ ಅನುಕಂಪ ಉದಾತ್ತತೆಗಳಿಂದ ಅವಕ್ಕೆ ಸೊಗಸು ಬರುತ್ತದೆ. ಇವನ ಬರೆಹಗಳಿಂದ ರಷ್ಯನ್ ಬರೆಹಗಾರರಿಗೆ ಸಣ್ಣ ಕತೆಯಲ್ಲಿ ಆಸಕ್ತಿ ಬೆಳೆಯುವಂತಾಯಿತು. ದಿನಚರಿ ಮತ್ತು ಪತ್ರಗಳನ್ನು ಬಳಸುವ ಕಥಾತಂತ್ರ ಇವನಿಗೆ ಬಹುಪ್ರಿಯ ಎನಿಸಿತ್ತು.