ಗಾಗಾಭಟ್ಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗಾಗಾಭಟ್ಟನು ೧೭ನೇ ಶತಮಾನದ ಬ್ರಾಹ್ಮಣ ಪಂಡಿತ , ಮೀಮಾಂಸಕ. ಭಾಟ್ಟಚಿಂತಾಮಣಿಯ ಕರ್ತೃ. ಮರಾಠಾ ರಾಜ ಶಿವಾಜಿಯ ಪಟ್ಟಾಭಿಷೇಕ ಮಾಡಿದನೆಂದು ಪ್ರಸಿದ್ಧನಾಗಿರುವವನು. ಪೈಠಣದಿಂದ ಬಂದ ವಿಶ್ವಾಮಿತ್ರ ಗೋತ್ರದ ಕುಟುಂಬಕ್ಕೆ ಸೇರಿದವನು.[೧]

ಈತನ ನಿಜನಾಮಧೇಯ ವಿಶ್ವೇಶ್ವರ, ತಂದೆ ದಿನಕರಭಟ್ಟ. ಪಿತಾಮಹ ರಾಮಕೃಷ್ಣ ಭಟ್ಟ. ಭಟ್ಟ ನಾರಾಯಣ ಈತನ ಮೂಲಪುರುಷನೆಂದೂ ಈತ ಸಂನ್ಯಾಸಾಶ್ರಮ ಸ್ವೀಕರಿಸಿದ್ದರೂ ಛತ್ರಪತಿ ಶಿವಾಜಿಯ ಪ್ರಾರ್ಥನೆ ಮೇರೆಗೆ ಅದನ್ನು ತ್ಯಜಿಸಿದನೆಂದೂ ಈತನ ಗ್ರಂಥದಿಂದ ತಿಳಿದುಬರುತ್ತದೆ.

ಈತನ ಭಾಟ್ಟಚಿಂತಾಮಣಿ ಗ್ರಂಥವು[೨] ಪೂರ್ವಮೀಮಾಂಸಾ ಸೂತ್ರದ ವ್ಯಾಖ್ಯಾನ ರೂಪವಾಗಿದ್ದು ಕೇವಲ ತರ್ಕಪಾದ ಮಾತ್ರ ಉಪಲಬ್ಧವಿದೆ. ವಿಚಾರಸರಣಿ ಯಲ್ಲಿ ಈತ ಕುಮಾರಿಲಭಟ್ಟನನ್ನು ಅನುಕರಿಸಿದ್ದಾನೆಂಬುದು ಗ್ರಂಥ ವಿಷಯದಿಂದ ಸ್ಪಷ್ಟವಾಗುತ್ತದೆ. ಜೈಮಿನೀಯ ಸೂತ್ರಗಳಿಗೆ ಕುಸುಮಾಂಜಲಿ ಎಂಬ ವೃತ್ತಿಗ್ರಂಥವನ್ನೂ ಶಿವಾಜಿಯನ್ನು ಕುರಿತಂತೆ ಶಿವಾರ್ಕೋದಯವೆಂಬ ಗ್ರಂಥವನ್ನೂ ಈತ ಬರೆದಿದ್ದಾನೆಂದು ಈತನ ಮಾತಿನಿಂದಲೇ ತಿಳಿದುಬರುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. Chhatrapati Shivaji By Bhawan Singh . Page 78.
  2. Nārāyaṇa Bhaṭṭa (1985). Richard Salomon (ed.). The Bridge to the Three Holy Cities. Delhi: Motilal Banarsidass. pp. xxvi–xxvii. ISBN 978-0-89581-647-4. Retrieved 16 June 2013.