ಗಾಂಫ್ರಿನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಗಾಂಫ್ರಿನ[ಬದಲಾಯಿಸಿ]

ಅಮರ್ಯಾಂತೇಸೀ ಕುಟುಂಬಕ್ಕೆ ಸೇರಿದ ಒಂದು ಅಲಂಕಾರ ಸಸ್ಯ. ಅನೇಕ ಪ್ರಬೇಧಗಳನ್ನು ಒಳಗೊಂಡಿದೆ. ಇವುಗಳಲ್ಲೆಲ್ಲ ಉದ್ಯಾನಗಾರಿಕೆ ದೃಷ್ಟಿಯಿಂದ ಅತ್ಯಂತ ಮುಖ್ಯವಾದುದು ಗ್ಲೋಬೋಸ ಎಂಬುದು. ಇದಕ್ಕೆ ಸಾಮಾನ್ಯ ಬಳಕೆಯ ಇಂಗ್ಲಿಷಿನಲ್ಲಿ ಗ್ಲೋಬ್ ಅಮರ್ಯಾಂತ್ ಮತ್ತು ಬ್ಯಾಚಲರ್ಸ್ ಬಟನ್ ಎಂಬ ಹೆಸರುಗಳಿವೆ. ನೆಲದ ಮೇಲೆಯೆ ಹಬ್ಬಿ ಇಲ್ಲವೆ ನೇರವಾಗಿ 30-45 ಸೆ.ಮೀ ಎತ್ತರಕ್ಕೆ ಬೆಳೆಯುವ ಏಕವಾರ್ಷಿಕ ಮೂಲಿಕೆ ಸಸ್ಯ ಇದು. ಎಲೆಗಳು ಉದ್ದುದ್ದವಾಗಿ ಇಲ್ಲವೆ ಅಂಡಾಕಾರ ವಾಗಿವೆ. ಒಂದು 2.5 ಸೆಂಮೀ ವ್ಯಾಸದ ವರ್ಣರಂಜಿತವಾದ ಹೂಗೊಂಚಲುಗಳಿಂದಾಗಿ ಈ ಗಿಡ ಬಲು ಪ್ರಸಿದ್ದವಾಗಿದೆ. ಗೊಂಚಲುಗಳು ಗುಂಡಗೆ ಕೋಟಿನ ಗುಂಡಿಯಂತೆ ಕಾಣುವುದರಿಂದ ಇದಕ್ಕೆ ಬ್ಯಾಚಲರ್ಸ್ ಬಟನ್ ಎಂಬ ಹೆಸರು ಬಂದಿರಬೇಕು. ಹೂಗಳಿಗೆ ಬಣ್ಣವಿಲ್ಲದಿದ್ದರೂ ಅವನ್ನು ಆವರಿಸುವ ಬ್ರ್ಯಾಕ್ಸ್ಟಗಳಿಗೆ ನೇರಳೆ, ಊದಾ, ಕಡುಗೆಂಪು, ಬಿಳಿ, ಮುಂತಾದ ಬಣ್ಣಗಳಿರುವುದರಿಂದ ಬಲು ಆಕರ್ಷಕವಾಗಿ ಕಾಣುತ್ತವೆ.

ಈ ಸಸ್ಯವನ್ನು ಮಡಿಗಳಲ್ಲಾಗಲಿ, ಕುಂಡಗಳಲ್ಲಾಗಲಿ ಬೆಳೆಸಬಹುದು. ಬೇಕೆಂದ ಸ್ಥಳಗಳಲ್ಲಿ ಬೀಜಗಳನ್ನು ಬಿತ್ತಿ ಬೆಳೆಸಬಹುದು ಇಲ್ಲವೆ ಮೊದಲು ಒಟ್ಲುಪಾತಿಯಲ್ಲಿ ಬೀಜಗಳನ್ನು ಬಿತ್ತಿಸಸಿಗಳನ್ನು ಬೆಳೆಸಿಕೊಂಡು ಅನಂತರ ಅಪೇಕ್ಷಿತ ಸ್ಥಳಗಳಿಗೆ ವರ್ಗಾಯಿಸಬಹುದು. ಮಡಿಗಳಲ್ಲಿ ಬೆಳೆಸುವಾಗ ಸಸಿಯಿಂದ ಸಸಿಗೆ 30-40 ಸೆ.ಮೀ ಅಂತರವಿರುವಂತೆ ನೋಡಿಕೊಳ್ಳಬೇಕು. ಇದರಿಂದ ಗಿಡಗಳು ಅಗಲವಾಗಿ ಹರಡಿ ಕೊಂಡು ಬೆಳೆಯಲು ಅನುಕೂಲ. ಬಿತ್ತಿದ 3 ತಿಂಗಳ ಅನಂತರ ಗಿಡ ಹೂ ಬಿಡಲು ಪ್ರಾರಂಭಿಸುತ್ತದೆ. ಹೂಗಳು ಅರಳಿದ ಮೇಲೆ 11/2-2 ತಿಂಗಳವರೆಗೂ ಬಾಡದೆ ಗಿಡದಲ್ಲೇ ಉಳಿಯುವುದರಿಂದ ಗಾಂಫ್ರಿನ ಗಿಡ ಬಲು ಜನಪ್ರಿಯವಾಗಿದೆ.