ಗಾಂಧೀಯವರ ಅನಾಸಕ್ತಿಯೋಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅನಾಸಕ್ತಿಯೋಗವು ಭಗವದ್ಗೀತೆಯಲ್ಲಿ ಗಾಂಧೀಜಿಯವರು ತಾವು ಕಂಡ ತಾತ್ತ್ವಿಕ ಸ್ವರೂಪವೇನೆಂಬುದನ್ನು ವಿವರಿಸುವಾಗ ವಿಶಿಷ್ಟವಾಗಿ ಬಳಸಿದ ಶಬ್ದವಾಗಿದೆ

ಗಾಂಧೀಜಿಯವರ ಜೀವನದರ್ಶನವನ್ನು ಒಂದು ಮಾತಿನಲ್ಲಿ ಹೇಳಬೇಕೆಂದರೆ ಅದನ್ನು ಅನಾಸಕ್ತಿಯೋಗ ಎಂದೇ ಕರೆಯಬಹುದಾದರೂ ಈ ಮಾತನ್ನು ಅವರು ಒಂದು ನಿರ್ದಿಷ್ಟವಾದ ಅರ್ಥದಲ್ಲಿ ಬಳಸಿದ್ದಾರೆ.

ಗಾಂಧಿ ಮತ್ತು ಭಗವದ್ಗೀತೆ[ಬದಲಾಯಿಸಿ]

ತಮ್ಮ ಧಾರ್ಮಿಕ, ರಾಜಕೀಯ ಹಾಗೂ ಸಾಮಾಜಿಕ ಜೀವನದಲ್ಲಿ ತಮ್ಮ ನಡೆ ನುಡಿಯ ಕೈಪಿಡಿಯಂತಿದ್ದು ತಮಗೆ ಮಾರ್ಗದರ್ಶನವಿತ್ತ ಭಗವದ್ಗೀತೆಯ ವಿಚಾರದಲ್ಲಿ ಗಾಂಧೀಯವರಿಗೆ ಅಪಾರ ಗೌರವ, ಅದರ ವಿಚಾರದಲ್ಲಿ ತಮಗಿದ್ದ ಭಕ್ತಿಗೌರವಗಳನ್ನು ವಿವರಿಸಲು ಅತ್ಯಂತ ಗಂಭೀರ ವಾದ ಹಾಗೂ ಮನಮುಟ್ಟುವಂಥ ರೂಪಕಗಳನ್ನವರು ಬಳಸುತ್ತಾರೆ. ತಮ್ಮ ಭೌತ ಶರೀರಕ್ಕೆ ಜನ್ಮವಿತ್ತು ಸಲಹಿದ ತಾಯಿ ಹೇಗೋ ಹಾಗೆಯೇ ತಮ್ಮ ಆಂತರಿಕ ವ್ಯಕ್ತಿತ್ವಕ್ಕೆ ಪೋಷಣೆಯಿತ್ತು, ಅವರ ಧಾರ್ಮಿಕ ಶ್ರದ್ಧೆಗೆ ನೀರೆರೆದು ಬೆಳೆಸಿದ ಭಗವದ್ಗೀತೆ ಅವರಿಗೆ ಜೀವಂತ ಮಾತೆ. ಆ ಕಾರಣದಿಂದ ಅವರು ಗೀತೆಯನ್ನು ಗೀತಾಮಾತೆ ಎಂದು ಸಂಭೋಧಿಸಿದರು. ಪ್ರಯೋಗಾತ್ಮಕವಾಗಿ ಬಾಳಿದ ತಮ್ಮ ದೈನಂದಿನ ಬದುಕಿನಲ್ಲಿ ತಮಗೊದಗಿದ ಧಾರ್ಮಿಕ ಸಮಸ್ಯೆಗಳಿಗೆಲ್ಲಾ ಗೀತೆಯಲ್ಲಿ ತಪ್ಪದೇ ಪರಿಹಾರ ದೊರೆತದ್ದರಿಂದ ಅದು ಅವರ ಭಾಗದ ಕಾಮಧೇನು. ಅಷ್ಟೇ ಏಕೆ, ಅದು ಅವರ ಧಾರ್ಮಿಕ ಸಮಸ್ಯೆಗಳ ಅರ್ಥಕೋಶ. ಆತ್ಮದರ್ಶನಕ್ಕೆ ಭಗವದ್ಗೀತೆಯಲ್ಲಿ ಅದ್ವಿತೀಯ ಮಾರ್ಗ ಒಂದಿದೆ ಎಂಬುದನ್ನು ಅವರು ಚೆನ್ನಾಗಿ ಗ್ರಹಿಸಿದ್ದರೆಂಬುದಕ್ಕೆ ಈ ಮಾತುಗಳೇ ಸಾಕ್ಷಿ.

ಗೀತೆಯಲ್ಲಿ ಆಸಕ್ತಿಯ ಉದಯ[ಬದಲಾಯಿಸಿ]

ವೈಜ್ಞಾನಿಕದಯುಗದ ಶಿಶುವಾದ ಯುವಕ ಗಾಂಧಿ ಇಂಗ್ಲೆಂಡಿನಲ್ಲಿ ವಿದ್ಯಾರ್ಥಿ ಯಾಗಿದ್ದಾಗ ಥಿಯಾಸಫಿಸ್ಟ್ ಸೋದರರಿಬ್ಬರಿಂದಾಗಿ ಮೊಟ್ಟಮೊದಲಿಗೆ ಭಗವದ್ಗೀತೆ ಯನ್ನು ಓದಿ ಅದರಿಂದ ಸ್ವಲ್ಪಮಟ್ಟಿಗೆ ಪ್ರಭಾವಿತರಾದರು. ದಿನಕಳೆದಂತೆಲ್ಲ ಅವರಿಗೆ ಗೀತೆಯ ಆಕರ್ಷಣೆ ಹೆಚ್ಚುತ್ತ ಬಂದು ಕೊನೆಗೆ ತತ್ತ್ವಜ್ಞಾಕ್ಕೆ ಅದೇ ಸರ್ವೋತ್ತಮ ಗ್ರಂಥ ಎಂದೆನ್ನುವಂತಾಯಿತು. ಈ ರೀತಿಯ ವಿಶಿಷ್ಟವಾದ ಅನುಭವಕ್ಕೆ ಅವರಿಗೆ ಸ್ವಭಾವಜನ್ಯವಾಗಿ ಬಂದಿದ್ದ ಧಾರ್ಮಿಕ ತೃಷೆಯೇ ಬಹುಮಟ್ಟಿಗೆ ಕಾರಣವೆನ್ನಬಹುದು. ಗೀತೆಯ ಸಾರಸರ್ವಸ್ವವನ್ನೂ ತಿಳಿಯಬೇಕೆಂಬ ದಾಹ ಹೆಚ್ಚುತ್ತ ಬಂದಂತೆ, ಅದರ ವಿಚಾರದಲ್ಲಿ ಸಂಪ್ರದಾಯಬದ್ಧವಾದ ಭಾಷ್ಯಗಳೇ ಅಲ್ಲದೆ ಟಿಳಕರಂಥ ಪ್ರಾಜ್ಞರ ಪಾಂಡಿತ್ಯಪೂರ್ಣ ವ್ಯಾಖ್ಯೆಗಳನ್ನು ಓದು ನೋಡಿದರು. ಭಗವದ್ಗೀತೆಯನ್ನು ಪಂಡಿತರ ಭಾಷ್ಯಗಳೊಂದಿಗೆ ಓದಿದಾಗ ಗಾಂಧಿಗೆ ಅಷ್ಟೊಂದು ತೃಪ್ತಿ ದೊರೆತಂತೆ ಕಾಣಲಿಲ್ಲ. ಆದ್ದರಿಂದ ಪಾಂಡಿತ್ಯದ ಭಾರವನ್ನು ತೊರೆದು ಕೇವಲ ಉಪಾಸಕನಾಗಿ ಅತ್ಯಂತ ನಮ್ರತೆಯಿಂದ ಗೀತೆಯನ್ನು ಮೊರೆಹೊಕ್ಕಾಗ ಅದರಷ್ಟು ಸುಲಭಸಾಧ್ಯವಾದ ಧಾರ್ಮಿಕ ಗ್ರಂಥ ಮತ್ತೊಂದಿಲ್ಲ ಎಂಬುದು ಅವರಿಗೆ ಅರಿವಾಯಿತು.

ಭಗವದ್ಗೀತೆ[ಬದಲಾಯಿಸಿ]

ಸ್ಥೂಲವಾಗಿ ನೋಡಿದರೆ, ಯುದ್ಧದಿಂದ ವಿಮುಖನಾದ ಕ್ಷತ್ರಿಯ ಶ್ರೇಷ್ಠನಾದ ಅರ್ಜುನನನ್ನು ಯುದ್ಧೋನ್ಮುಖವಾಗಿ ಮಾಡಲು ಭಗವಾನ್ ಶ್ರೀಕೃಷ್ಣ ಕೊಟ್ಟ ಸಂದೇಶವೇ ಭಗವದ್ಗೀತೆ. ಕರ್ತವ್ಯ ವಿಮೂಢನಾಗಿದ್ದ ವೀರನಲ್ಲಿ ಕರ್ತವ್ಯದ ಸ್ಮರಣೆಯನ್ನು ಮೂಡಿಸಿ ಅವನನ್ನು ಕಾರ್ಯಪ್ರವೃತ್ತನನ್ನಾಗಿ ಮಾಡಲು, ಭಗವಂತ ಒಟ್ಟು ಸೃಷ್ಟಿಯ ರಹಸ್ಯ ಮತ್ತು ಉದ್ದೇಶ, ಅದರಲ್ಲಿ ಮಾನವನ ಪಾತ್ರ, ಧರ್ಮಾಧರ್ಮಗಳ ನೈಜಸ್ವರೂಪವೇ ಮುಂತಾದ ಉಪನಿಷತ್ತಿನ ಸಾರಸರ್ವಸ್ವವಾದ ದಾರ್ಶನಿಕ ತತ್ತ್ವಗಳನ್ನೆಲ್ಲ ಪ್ರಾಸಂಗಿಕವಾಗಿ ವಿವರಿಸುತ್ತಾನೆ. ಗೀತಾಚಾರ್ಯನ ಈ ವಿವರಣೆಯಲ್ಲಿ ಭಕ್ತಿ, ಕರ್ಮ,ಜ್ಞಾನ ಹಾಗೂ ಅಭ್ಯಾಸಯೋಗಗಳು ಹಾಸುಹೊಕ್ಕಾಗಿ ಬೆಳೆದು ಬರುತ್ತವೆ.

ಗಾಂಧಿಯವರ ಅಧ್ಯಯನ ಮತ್ತು ವಿವರಣೆ[ಬದಲಾಯಿಸಿ]

ಅರ್ಜುನನಲ್ಲಿ ಕರ್ತವ್ಯಸ್ಮರಣೆಯನ್ನುಂಟುಮಾಡುವುದೇ ಗೀತೆಯ ಪರಮ ಧ್ಯೇಯವಾದ್ದರಿಂದ ಇದು ಕರ್ಮಯೋಗದ ಒಂದು ವ್ಯಾಖ್ಯಾನ ಎಂದು ಟಿಳಕ ಮುಂತಾದವರು ಮಾಡಿದ ಸಿದ್ಧಾಂತವನ್ನು ಗಾಂಧಿ ಗೌರವದಿಂದಲೇ ಓದಿ ತಿಳಿದುಕೊಂಡರು. ಆದರೆ ತಾವು ತಮ್ಮ ಜೀವನಪರ್ಯಂತ ಸಾಧಿಸುತ್ತ ಬಂದ ಅಹಿಂಸೆಯ ಸಂದೇಶವನ್ನು ಭಗವದ್ಗೀತೆಯಲ್ಲಿ ಕಂಡದ್ದು ಅವರ ಒಂದು ವೈಶಿಷ್ಟ್ಯ. ತಮ್ಮ ಈ ಅನುಭವವನ್ನು ವಿವರಿಸಲು ಅಲ್ಲೊಂದು ಇಲ್ಲೊಂದು ಗೀತಾ ಶ್ಲೋಕಗಳನ್ನು ಅವರು ಉದಾಹರಿಸುತ್ತಿದ್ದುದುಂಟು. ಇದನ್ನು ಕಂಡ ಇವರ ಮಿತ್ರರು, ಅದರಲ್ಲಿಯೂ ಮುಖ್ಯವಾಗಿ ಅವರ ಆತ್ಮಕಥನವನ್ನು ಬರೆಯಲು ಪ್ರೇರೇಪಿಸಿದ ಸ್ವಾಮಿ ಆನಂದರು ಗಾಂಧೀಜಿ ತಾವು ಕಂಡ ರೀತಿಯಲ್ಲಿ ಇಡೀ ಭಗವದ್ಗೀತೆಯನ್ನು ಏಕೆ ವಿವರಿಸಬಾರದು ಎಂಬ ಸೂಚನೆಯನ್ನು ಕೊಟ್ಟರು. ಅದರ ಫಲವಾಗಿ ಗಾಂಧೀಜಿ ಭಗವದ್ಗೀತೆಗೆ ಅತ್ಯಂತ ಸುಲಭವಾದ ರೀತಿಯಲ್ಲಿ, ಗುಜರಾತಿಭಾಷೆಯಲ್ಲಿ ಅರ್ಥವಿವರಣೆ ಬರೆದರು. ಗೀತೆಗೆ ಈ ರೀತಿ ವಿವರಣೆ ಬರೆಯಲು ತಮಗೆ ಪಾಂಡಿತ್ಯದ ಅರ್ಹತೆ ಏನೂ ಇಲ್ಲವೆಂಬುದನ್ನು ಚೆನ್ನಾಗಿ ಮನಗಂಡಿದ್ದ ಅವರು, ಗೀತೆಯ ಮಾರ್ಗದರ್ಶನದಲ್ಲಿ ತಾವು ಬದುಕಿದ ನಲವತ್ತುವರ್ಷಗಳ ಪ್ರಯೋಗಾತ್ಮಕ ಜೀವನದ ಅನುಭವದ ಹಿನ್ನೆಲೆಯಲ್ಲಿ ಈ ಪ್ರಯತ್ನ ಮಾಡಿದ್ದೇನೆಂದು ಸ್ಪಷ್ಟಪಡಿಸಿದ್ದಾರೆ.

ಗೀತೆಯಲ್ಲಿ ಯುದ್ಧಕ್ಕೆ ಪ್ರೇರಣೆಯೇ ಅಥವಾ ಅಹಿಂಸೆಯ ಪ್ರತಿಪಾದನೆಯೇ ?[ಬದಲಾಯಿಸಿ]

ಮಹಾಭಾರತವನ್ನು ಶ್ರದ್ಧೆಯಿಂದ ಓದಿ, ಮಹಾಭಾರತದ ಕರ್ತೃ ಭೌತಿಕ ಯುದ್ಧದ ನಿರರ್ಥಕತೆಯನ್ನು ಸಿದ್ಧಾಂತಪಡಿಸುವಲ್ಲಿ ಪೂರ್ಣ ಯಶಸ್ವಿಯಾಗಿದ್ದಾನೆಂಬುದನ್ನು ಗಾಂಧೀಜಿ ಮನಗಂಡರು. ಮಹಾಭಾರತದ ಕೊನೆಯಲ್ಲಿ ವ್ಯಾಸರು ಗೆದ್ದವರನ್ನು ಅಳಿಸಿ ಅದಕ್ಕಾಗಿ ಅವರು ಪಶ್ಚಾತ್ತಾಪ ಪಡುವಂತೆ ಮಾಡಿದ್ದಾರೆ. ಸೋತು ಸತ್ತವರಿಗಿಂತಲೂ ಗೆದ್ದು ಉಳಿದವರೇನು ಹೆಚ್ಚು ಸುಖಪಟ್ಟಂತೆ ಕಾಣುವುದಿಲ್ಲ. ಅಂದ ಮೇಲೆ ಮಹಾಭಾರತಕ್ಕೆ ಮಕುಟಪ್ರಾಯವಾದ ಭಗವದ್ಗೀತೆಯಲ್ಲಿ, ದಾರ್ಶನಿಕ ಕವಿ ವ್ಯಾಸರು, ಅರ್ಜುನನನ್ನು ಇಂಥ ನಿರರ್ಥಕವಾದ ಭೌತಿಕ ಯುದ್ಧಕ್ಕೆ ಧರ್ಮದ ಹೆಸರಿನಲ್ಲಿ ಪ್ರಚೋದಿಸಿದರೆಂಬುದು ಮೂಲ ಗ್ರಂಥದ ಧ್ವನಿ ನಿರೂಪಣೆಗೆ ಸರಿ ಹೊಂದುವಂತೆ ಗಾಂಧೀಜಿಗೆ ಕಾಣಲಿಲ್ಲ. ಆದ್ದರಿಂದ ಗೀತೆಯ ಮೊದಲ ಅಧ್ಯಾಯದಲ್ಲಿ ಬರುವ ಕುರುಕ್ಷೇತ್ರದ ರಣರಂಗ ಕವಿಯ ಒಂದು ಉಪಮೆ ಮಾತ್ರವಾಗಿ ಗಾಂಧೀಜಿಗೆ ಕಂಡಿತು. ಅಷ್ಟೇ ಅಲ್ಲ ರಣರಂಗದಲ್ಲಿ ಕಾದಲು ನಿಂತ ಇಕ್ಕೆಲದ ಸೇನೆಗಳೂ ಸಾಂಕೇತಿಕ ವೆಂದೇ ಅವರು ಗ್ರಹಿಸಿದರು. ಗೀತೆಯಲ್ಲಿ ಎಲ್ಲೆಲ್ಲಿ ಸಂಹಾರದ ಪ್ರಸ್ತಾಪ ಬರುತ್ತದೋ ಅಲ್ಲೆಲ್ಲ ಬೇರೆ ಅರ್ಥವಿರಬೇಕೆಂಬ ಮನವರಿಕೆ ಅವರಿಗಾಯಿತು. ಪ್ರತಿ ಮಾನವನ ಹೃದಯದಲ್ಲಿಯೂ ಸದಾ ಒಳ್ಳಿತು ಕೆಟ್ಟದು, ಯುಕ್ತ ಅಯುಕ್ತ, ಧರ್ಮ ಅಧರ್ಮಗಳ ನಡುವೆ ಹೋರಾಟ ನಡೆಯುತ್ತಲೇ ಇರುತ್ತದೆ. ಈ ಹೋರಾಟದಲ್ಲಿ ಕೊನೆಗಂತೂ ಧರ್ಮಕ್ಕೆ ಜಯ ಖಂಡಿತ. ಈ ಸಂದೇಶವನ್ನು ಸಾರುವುದೇ ಗೀತೆಯ ಉದ್ದೇಶ. ಇದಕ್ಕಾಗಿ ಕುರುಕ್ಷೇತ್ರದಂಥ ಒಂದು ರೂಪಕವನ್ನು ಬಳಸಿಕೊಂಡು ಬಹು ಮಾರ್ಮಿಕ ವಾಗಿ ಈ ಉದ್ದೇಶವನ್ನು ವ್ಯಾಸರು ಸಾಧಿಸಿದ್ದಾರೆಂಬುದು ಗಾಂಧೀಜಿ ಮತ.

ಈ ಹಿನ್ನೆಲೆಯಲ್ಲಿ ನೋಡಿದಾಗ ಶ್ರೀಕೃಷ್ಣ ಅರ್ಜುನನಿಗೆ ಬೋಧಿಸಿದ ಕರ್ತವ್ಯ ಪ್ರಜ್ಞೆಯ ಸ್ವರೂಪವೇ ಬೇರೆಯಾಗಿ ಕಾಣುತ್ತದೆ. ಈ ಬೋಧನೆಯಲ್ಲಿ ಗಾಂಧೀಜಿಯವರಿಗೆ ಅಹಿಂಸೆಯೇ ಮೂರ್ತಿವೆತ್ತಂತಿದೆ. ಇದನ್ನು ತಿಳಿಯಬೇಕಾದರೆ ಶಸ್ತ್ರ ಸಂನ್ಯಾಸ ಮಾಡಿನಿಂತ ಅರ್ಜುನನ ಮಾನಸಿಕ ಸ್ಥಿತಿಯನ್ನು ಸ್ವಲ್ಪ ಅರ್ಥಮಾಡಿಕೊಳ್ಳಬೇಕಾಗುತ್ತದೆ. ಹುಟ್ಟುವೀರನಾದ ಅರ್ಜುನ ಯುದ್ಧಕ್ಕೆ ಹೊಸಬನಲ್ಲ; ಮಾನವರ ಮೇಲೆ ಏಕೆ, ಪರಮೇಶ್ವರನೊಂದಿಗೆ ಕಾದಿ ಪಾಶುಪತಾಸ್ತ್ರವನ್ನು ಪಡೆದ ಕಡುಗಲಿ. ಅಂದರೆ ಹಿಂಸೆಗೆ ಹೆದರುವ ಸ್ವಭಾವ ಇವನದಲ್ಲ. ಅಹಿಂಸೆ ಇವನ ಜಾಯಮಾನದಲ್ಲಿ ಈವರೆಗೂ ಕಂಡುಬಂದಿಲ್ಲ. ಕುರುಕ್ಷೇತ್ರದ ರಣರಂಗದಲ್ಲಿ ತನ್ನೆದುರಿಗೆ ಹೋರಾಡಲು ನಿಂತ ಕೌರವಸೇನೆಯಲ್ಲಿ ತನ್ನ ಗುರುಹಿರಿಯರಾದ ದ್ರೋಣ. ಭೀಷ್ಮ ಮುಂತಾದವರನ್ನು ಕಂಡು ಇವನು ಶಸ್ತ್ರಸಂನ್ಯಾಸದ ಮಾತನ್ನಾಡುತ್ತಾನೆ. ಇವನು ಕೇವಲ ತನ್ನ ಬಂಧು ಬಾಂಧವರನ್ನು ಕೊಲ್ಲಲು ಹಿಂದೆಗೆಯುತ್ತಾನೆಯೆ ಹೊರತು ಹಿಂಸೆಗೆ ಮನ ಒಗ್ಗದೆ ಯುದ್ಧದಿಂದ ವಿಮುಖನಾಗುತ್ತಿಲ್ಲ. ಆದ್ದರಿಂದ ಅರ್ಜುನನಲ್ಲಿ ಕಾಣುವ ವಿಷಾದ ಅಹಿಂಸೆಯಿಂದ ಅಥವಾ ವಿರಾಗದಿಂದ ಮೂಡಿಬಂದ ವಿಷಾದವಲ್ಲ. ಅದು ಒಂದು ರೀತಿಯ ವ್ಯಾಮೋಹದಿಂದ ಮೂಡಿಬಂದಿದೆ. ಇಂಥ ಹೃದಯದೌರ್ಬಲ್ಯದವನಿಗೆ ಅಹಿಂಸೆ ಸಾಧ್ಯವಿಲ್ಲ. ಅರ್ಜುನನಲ್ಲಿ ಕಂಡ ಈ ಕ್ಷಿಪ್ರವೈರಾಗ್ಯ ಗಂಟೆಗೆ ಅರವತ್ತು ಕಿಲೋಮೀಟರ್ ವೇಗದಲ್ಲಿ ಓಡುವ ರೈಲಿನಲ್ಲಿ ಕುಳಿತವನು ಪ್ರವಾಸಕ್ಕೆ ಬೇಸತ್ತು ಓಡುವ ಗಾಡಿಯಿಂದ ದುಮುಕುವವನ ಸ್ಥಿತಿಯಂತೆ - ಎಂದು ಗಾಂಧೀಜಿ ವಿವರಿಸುತ್ತಾರೆ. ಈ ಕಾರಣದಿಂದ ನಿಜವಾದ ಅಹಿಂಸೆ ಅಥವಾ ವೈರಾಗ್ಯ ಸಾಧ್ಯವಾಗದ ಅರ್ಜುನನಿಗೆ ನಿಜವಾದ ನಿಷ್ಕಾಮ ಕರ್ಮದ ಸ್ವಭಾವವೇನೆಂಬುದನ್ನು ಶ್ರೀಕೃಷ್ಣ ಬೋಧಿಸಿರುವುದು, ಗಾಂಧೀಜಿಗೆ ಅತಿಸೂಕ್ತವಾಗಿ ಕಂಡಿತು.

ನಿಷ್ಕಾಮ ಕರ್ಮ ಮತ್ತು ಅನಾಸಕ್ತಿಯೋಗ[ಬದಲಾಯಿಸಿ]

ನಿಷ್ಕಾಮ ಕರ್ಮಕ್ಕೆ ಗಾಂಧೀಜಿ ಕೊಡುವ ವ್ಯಾಖ್ಯಾನ ಬಹು ವಿಶಿಷ್ಟವಾದದ್ದು, ಗೀತೆಯಲ್ಲಿ ಬೋಧಿಸುವ ನಿಷ್ಕಾಮಕರ್ಮ ನಿಜವಾಗಿಯೂ ಕಾರ್ಯಸಾಧ್ಯವೇ ಎಂದು, ಬಾಳಪರ್ಯಂತ ಮಾನವಸೇವೆಗೆ ತಮ್ಮನ್ನು ಮುಡಿಪಿಟ್ಟಂಥ ಅನೇಕ ಮಾನವತಾವಾದಿಗಳು ಅನುಮಾನಪಟ್ಟಿದ್ದಾರೆ. ಫಲಾಪೇಕ್ಷೆ ಇಲ್ಲದೆ ಕಾರ್ಯ ಮಾಡಬೇಕೆಂಬ ಗೀತಾಸಂದೇಶ ಅವ್ಯವಹಾರಿಕವೆಂದು ಅನೇಕರಿಗೆ ಕಂಡಿದ್ದರೂ ಗಾಂಧೀಜಿಗೆ ಅದರಲ್ಲಿ ಕ್ಲಿಷ್ಟತೆಯೂ ಕಾಣಬರಲಿಲ್ಲ. ಏಕೆಂದರೆ ನಿಷ್ಕಾಮಕರ್ಮಕ್ಕೆ ಆಧಾರವಾದ ಧರ್ಮದ ವಿಚಾರದಲ್ಲಿ ಗಾಂಧೀಜಿಗೆ ನಿಚ್ಚಳವಾದ ಅರಿವಿತ್ತು. ಅವರ ಅನಾಸಕ್ತಿಯೋಗವನ್ನು ನಾವು ಗುರತಿಸಬೇಕಾದದ್ದು ಇಲ್ಲಿಯೇ.

ಯಾವ ಕಾರ್ಯವನ್ನು ಮಾಡುವಾಗ ಅದರ ಫಲಾಪೇಕ್ಷೆ ನಮ್ಮನ್ನು ಸಹಜವಾಗಿ ಬಾಧಿಸುವುದಿಲ್ಲವೋ ಅದೇ ನಿಷ್ಕಾಮಕರ್ಮ. ಅಂದ ಮೇಲೆ ಫಲಾಸಕ್ತಿ ಅಥವಾ ಅನಾಸಕ್ತಿಯ ಬೇರು ಕಾರ್ಯದ ಸ್ವರೂಪದಲ್ಲಿಯೇ ಇರುತ್ತದೆ. ಆದ್ದರಿಂದ ಅನಾಸಕ್ತಿಯನ್ನು ಪ್ರೇರಿಸುವ ಕಾರ್ಯಗಳನ್ನು ಆರಿಸಿಕೊಂಡು ಫಲಾಸಕ್ತಿ ಪ್ರೇರಕವಾದ ಕಾರ್ಯಗಳನ್ನು ವರ್ಜಿಸುವುದಷ್ಟೇ ಮಾನವನ ಹೊಣೆಗಾರಿಕೆ. ಸುಳ್ಳು ಹೇಳುವುದು, ಕಳ್ಳತನ ಮಾಡುವುದು, ಸ್ವಾರ್ಥ - ಸ್ವಭಾವತಃ ನಮ್ಮಲ್ಲಿ ಅಪೂರ್ಣ ಫಲದ ಬಗ್ಗೆ ಆಸಕ್ತಿಯನ್ನು ಕೆರಳಿಸುತ್ತದೆ. ಇಂಥ ಕಾರ್ಯಗಳನ್ನು ಮಾಡಿದಮೇಲೆ ಅವನ್ನು ಮರೆಯುವಂತಿಲ್ಲ. ಮಾಡುವ ಮುನ್ನವೇ ಅವುಗಳ ಫಲದ ವಿಚಾರದಲ್ಲಿ ಇಲ್ಲದ ಆಶೆ ಆಕಾಂಕ್ಷೆಗಳು ನಮ್ಮಲ್ಲಿ ಮೂಡಿರುತ್ತವೆ. ಮಾಡಿ ಆದಮೇಲೆ ಅದರಿಂದ ಬರುವ ಫಲದಿಂದಾಗಿ ಸುಖದುಃಖದ ರೂಪದಲ್ಲಿ ನಾವು ಸಮ್ಮೋಹಿತರಾಗುತ್ತೇವೆ. ಈ ಕ್ರಿಯೆ ಕೊನೆ ಮೊದಲಿಲ್ಲದೆ ನಡೆದು ಕೊನೆಗೊಮ್ಮೆ ನಮ್ಮನ್ನು ವಿನಾಶದಲ್ಲಿಗೆ ಕೊಂಡೊಯ್ಯುತ್ತದೆ. ಇದೇ ಸಕಾಮಕರ್ಮದ ಸ್ವಭಾವ. ನಿಷ್ಕಾಮಕರ್ಮಗಳಾದರೋ ನಾವು ಕಣ್ಣಿನ ರೆಪ್ಪೆಮಿಡಿಯುವ ರೀತಿಯಲ್ಲಿದ್ದು ಕೇವಲ ಸಹಜ ಕರ್ಮಗಳಾಗಿರುತ್ತವೆ. ಈ ರೀತಿಯ ಸಹಜಕರ್ಮಗಳನ್ನು ಮಾಡುವಾಗ ಯಾವ ಫಲಾಪೇಕ್ಷೆಯೂ ಇಲ್ಲದಿರುವುದರಿಂದ, ಅವುಗಳ ಆಚರಣೆ ಅನಾಸಕ್ತಿಯೋಗವೆನಿಸುತ್ತದೆ.

ಆಸಕ್ತಿಯಿಂದ ಮಾಡುವ ಕರ್ಮಗಳು ಲಾಭ ನಷ್ಟ, ಸುಖದುಃಖ, ಜಯಾಪಜಯ ಗಳ ರೂಪದಲ್ಲಿ ನಮ್ಮನ್ನು ಅಂಥ ಕೆಲಸಗಳಲ್ಲಿ ಮತ್ತಷ್ಟು ಆಸಕ್ತರಾಗುವಂತೆ ಮಾಡುತ್ತವೆ. ಒಂದು ಕಾರ್ಯ ಮತ್ತೊಂದು ಕಾರ್ಯಕ್ಕೆ ಬೀಜರೂಪದಲ್ಲಿದ್ದು ನಾವು ಅದಕ್ಕೆ ದಾಸರಾಗುವಂತೆ ಮಾಡುತ್ತವೆ. ಈ ರೀತಿ ಫಲಾಸಕ್ತರಾಗಿ ಕಾರ್ಯ ಮಾಡುವವರು ದಿನದಿನಕ್ಕೂ ತಮ್ಮ ಮಾನಸಿಕ ಸ್ತಿಮಿತತೆಯನ್ನು ಕಳೆದುಕೊಳ್ಳ್ಳುತ್ತಾರೆ. ತಮ್ಮ ಬಯಕೆಯ ವಿಚಾರದಲ್ಲಿ ಮೋಹ, ಅದು ಕೈಗೂಡದಿದ್ದರೆ ಕೋಪ, ಅನಂತರ ಸ್ಮೃತಿವಿಭ್ರಮೆ, ಹಾಗೆಯೇ ವ್ಯಕ್ತಿಯ ಸರ್ವನಾಶ. ಅಂದ ಮೇಲೆ ಆಸಕ್ತಿಯಲ್ಲಿಯೇ ವಿನಾಶದ ಬೀಜವೂ ಇದೆ. ಆದ್ದರಿಂದ ಗಾಂಧೀಜಿಯವರು ಅನಾಸಕ್ತಿಯಿಂದ ಮಾತ್ರ ಸ್ಥಿತಪ್ರಜ್ಞೆೆತೆ ಸಾಧ್ಯ ಎಂಬುದನ್ನ ಚೆನ್ನಾಗಿ ಮನಗಂಡರು. ಅಷ್ಟೇ ಅಲ್ಲದೆ ಅನಾಸಕ್ತಿಯೋಗ ಕೈಗೂಡದ ಹೊರತು ಭಗವಂತನಲ್ಲಿ ಪುರ್ಣ ಭಕ್ತಿ ಸಾಧ್ಯವಾಗದೆಂಬುದು ಅವರ ಮತ. ಅನಾಸಕ್ತಯೋಗಿಯೇ ನಿಜವಾದ ಭಕ್ತ ಹಾಗೂ ಜ್ಞಾನಿಯೆನಿಸುತ್ತಾನೆ.

ಗಾಂಧೀಜಿಯವರ ಅನಾಸಕ್ತಿಯೋಗ[ಬದಲಾಯಿಸಿ]

ಗಾಂಧೀಜಿಯವರ ಅನಾಸಕ್ತಿಯೋಗ ನಿಷ್ಕ್ರಿಯೆಯನ್ನು ಬೋಧಿಸುತ್ತದೆಂದು ತಿಳಿದುಕೊಳ್ಳಬಾರದು. ಫಲದ ವಿಚಾರದಲ್ಲಿ ಇಲ್ಲದ ಆಸಕ್ತಿಯನ್ನು ಕೆರಳಿಸಿದಂಥ ಕಾರ್ಯಗಳನ್ನು ಮಾಡುವಾಗ ಸಹಜವಾಗಿ ಆಸಕ್ತಿಯೆಲ್ಲ ಕಾರ್ಯ ಮಾಡುವುದರಲ್ಲಿಯೇ ವಿನಿಯೋಗವಾಗುತ್ತದೆ. ಮೋಹ ಮಾತ್ಸರ್ಯಗಳ ಹೊರೆ ಮನಸ್ಸಿನ ಮೇಲಿಲ್ಲವೆಂದಾಗ ಮನಸ್ಸು ಸದಾ ಪ್ರಫುಲ್ಲವಾಗಿದ್ದು ಶಾಂತವಾಗಿರುತ್ತದೆ. ಅನಾಸಕ್ತಿಯಿಂದ ಮಾಡಿದ ಕೆಲಸಗಳು ಗುಣದಲ್ಲಿ ಕಡಿಮೆ ಇರುವುದಿಲ್ಲ. ಇಲ್ಲವೆ ಅವುಗಳಿಂದ ಬರಬೇಕಾದ ಫಲವೂ ಕಡಿಮೆಯಾಗುವುದಿಲ್ಲ - ಎಂಬುದೇ ಭಗವಂತನ ಆಶ್ವಾಸನೆ. ಅದರ ಫಲ ಕಡಿಮೆಯಾಗುವ ಬದಲು ನೂರ್ಮಡಿ ಹೆಚ್ಚುತ್ತದೆ, ಏಕೆಂದರೆ ನಿರಹಂಕಾರದಿಂದ ಮಾಡಿದ ಕೆಲಸದಲ್ಲಿ ಭಗವಂತನ ಕೃಪೆಗೆ ಪುರ್ಣ ಅವಕಾಶವಿರುತ್ತದೆ. ಆಕಾರಣದಿಂಲೇ ಭಗವದ್ಗೀತೆಯಲ್ಲಿ ಶ್ರೀಕೃಷ್ಣ, ನಿಷ್ಕಾಮ ಕರ್ಮಕ್ಕೆ ಯಥೇಚ್ಛವಾಗಿ ಫಲಕೊಡುವ ಹೊಣೆಯನ್ನು ತಾನೇ ವಹಿಸಿಕೊಂಡಿದ್ದಾನೆ. ಭಕ್ತನಾದ ಅನಾಸಕ್ತಿಯೋಗಿಗೆ ಈ ಅಭಯ ಒಂದು ವರವಿದ್ದಂತೆ.

ಗಾಂಧೀಜಿಯವರಿಗೆ ಅನಾಸಕ್ತಿಯೆಂಬುದು ಭಕ್ತಿ, ಜ್ಞಾನ,ಧ್ಯಾನ, ಯೋಗಗಳಿಗೆ ಹೊರತಾದ ಆತ್ಮಸಾಕ್ಷಾತ್ಕಾರದ ಬೇರೊಂದು ಮಾರ್ಗ ಎಂದು ಕಾಣಲಿಲ್ಲ. ಅವರ ಅನಾಸಕ್ತಿಯೋಗದಲ್ಲಿ ಭಕ್ತಿ, ಧ್ಯಾನ, ಮತ್ತು ಜ್ಞಾನಗಳು ಸಮಪ್ರಮಾಣದಲ್ಲಿ ಸಮನ್ವಯಗೊಳ್ಳುತ್ತವೆ. ಈ ಎಲ್ಲ ಯೋಗಗಳ ಸಾಮರಸ್ಯವಾದಾಗ ಮಾತ್ರ ಅನಾಸಕ್ತಿಯೋಗ ಸಿದ್ಧಿಸುತ್ತದೆಂಬ ದಿವ್ಯತತ್ತ್ವವನ್ನು ಗೀತಾ ಸಂದೇಶದಲ್ಲಿ ಕಂಡುಕೊಂಡು ಅದನ್ನು ತಮ್ಮ ಜೀವನಪರ್ಯಂತ ಬಾಳಲು ಗಾಂಧೀಜಿ ತಪಿಸಿದರು.