ಗರಗಸ ಮಂಡಲ
ಗರಗಸ ಮಂಡಲ (Saw scaled Viper, Carpet Viper) ಎಂಬ ಹಾವು ವಿಷಪೂರಿತ ಮಂಡಲ ಹಾವುಗಳ ಗುಂಪಿಗೆ ಸೇರಿದ ಸರೀಸೃಪ. ಇವುಗಳು ಸಾಮಾನ್ಯವಾಗಿ ಆಫ್ರಿಕಾ, ಮಧ್ಯ ಏಷ್ಯಾ, ಭಾರತ, ಪಾಕಿಸ್ತಾನ, ಶ್ರೀಲಂಕಾ ದೇಶಗಳಲ್ಲಿ ಕಂಡುಬರುತ್ತವೆ. ಇವುಗಳು ತಮ್ಮ ದೇಹವನ್ನು ಉಜ್ಜಿಕೊಳ್ಳುವುದರ ಮೂಲಕ ಶತ್ರುಗಳಿಗೆ ತಮ್ಮ ಇರುವಿಕೆಯನ್ನು ತೋರಿಸುತ್ತವೆ. ಇದರ ವೈಜ್ಞಾನಿಕ ಹೆಸರು "ಇಚಿಸ್" (Echis). ಈ ಹೆಸರು ಲ್ಯಾಟಿನ್ ಭಾಷೆಯಿಂದ ಬಂದಿದೆ. ಲ್ಯಾಟಿನ್ ಭಾಷೆಯಲ್ಲಿ ಇಚಿಸ್ ಎಂದರೆ ಮಂಡಲ ಹಾವು ಎಂದು ಅರ್ಥ. ಸಾಮಾನ್ಯವಾಗಿ ಇದನ್ನು ಗರಗಸ ಮಂಡಲ ಎಂದು ಕರೆಯುತ್ತಾರೆ. ಇದು ಜಗತ್ತಿನಲ್ಲಿಯೇ ಅತಿ ಹೆಚ್ಚು ಹಾಗೂ ಭಾರತದಲ್ಲಿ ೪ನೇ ಸ್ಥಾನಿಯಾಗಿ ಹಾವು ಹಾವುಕಡಿತಗಳಿಗೆ ಕಾರಣವಾಗಿದೆ.
ವಿವರಣೆ
[ಬದಲಾಯಿಸಿ]ಗರಗಸ ಮಂಡಲ ಹಾವುಗಳು ಗಾತ್ರದಲ್ಲಿ ಚಿಕ್ಕ ಹಾವುಗಳು. ಇವುಗಳಲ್ಲಿ ಕೆಲವು ಹಾವಿನ ಗಾತ್ರ ೯೦ ಸೆಂ.ಮೀಗಳ ವರೆಗೆ ಇರುತ್ತವೆ. ಇವುಗಳಲ್ಲಿ ಚಿಕ್ಕದು ಎಂದರೆ ೩೦ ಸೆಂ.ಮೀಗಳಷ್ಟು ಬೆಳೆಯುತ್ತವೆ. ಇವುಗಳ ತಲೆ ಚಿಕ್ಕದಾಗಿದ್ದು ತ್ರಿಕೋನ ಆಕಾರದಲ್ಲಿ ಇರುತ್ತದೆ. ಕುತ್ತಿಗೆ ಭಾಗಕ್ಕೆ ಹೋಲಿಸಿದರೆ ತಲೆ ಸ್ವಲ್ಪ ದೊಡ್ಡದು. ಇವುಗಳ ಕಣ್ಣು ದೊಡ್ಡದಾಗಿದೆ. ದೇಹವು ತೆಳುವಾಗಿ ಮತ್ತು ದುಂಡಾಕಾರದಲ್ಲಿದೆ. ಬಾಲವು ಚಿಕ್ಕದಾಗಿದೆ. ಇದರ ದೇಹದ ಚರ್ಮವು ಒರಟಾಗಿದ್ದು ಮುಳ್ಳು ಮುಳ್ಳಾಗಿದೆ. ಹೀಗಾಗಿ ಇವು ಶತ್ರುಗಳನ್ನು ಕಂಡಾಗ ತಮ್ಮ ದೇಹವನ್ನು ದುಂಡಾಗಿಸಿ ಉಜ್ಜಿಕೊಂಡು "ಸ್ಸ್‌ಸ್ಸ್" ಎಂಬ ಶಬ್ದವನ್ನು ಮಾಡಿ ಶತ್ರುಗಳನ್ನು ಭಯಪಡಿಸುತ್ತದೆ ಹಾಗೂ ತನ್ನ ಇರುವಿಕೆಯನ್ನೂ ಹೇಳಿತ್ತದೆ.
ಭೌಗೋಳಿಕ ವ್ಯಾಪ್ತಿ
[ಬದಲಾಯಿಸಿ]ಈ ಜಾತಿಯ ಹಾವುಗಳು ಸಾಮಾನ್ಯವಾಗಿ ಪಾಕಿಸ್ತಾನ, ಭಾರತದ ಮಹಾರಾಷ್ಟ್ರ, ರಾಜಸ್ಥಾನ, ಪಂಜಾಬ್, ಉತ್ತರ ಪ್ರದೇಶದ ಕಲ್ಲುಗಳನ್ನು ಒಳಗೊಂಡ ಒಣ ಪ್ರದೇಶದಲ್ಲಿ ಕಂಡುಬರುತ್ತವೆ. ಕರ್ನಾಟಕದಲ್ಲಿಯೂ ಈ ಹಾವುಗಳು ಕಂಡುಬರುತ್ತವೆ. ಭಾರತವಲ್ಲದೇ ಇವುಗಳು ಶ್ರೀಲಂಕಾ, ಮಧ್ಯ ಏಷ್ಯಾ, ಆಫ್ರಿಕಾದ ದಕ್ಷಿಣ ಭಾಗದಲ್ಲಿಯೂ ಕಂಡುಬರುತ್ತವೆ.
ವರ್ತನೆ
[ಬದಲಾಯಿಸಿ]ಈ ಗುಂಪಿಗೆ ಸೇರಿದ ಎಲ್ಲಾ ಹಾವುಗಳು ಅಪಾಯ ಎದುರಾದಾಗ ತನ್ನ ದೇಹವನ್ನೇ C ಆಕಾರದಲ್ಲಿ ಅನೇಕ ಸುತ್ತುಗಳನ್ನು ಸುತ್ತಿಕೊಂಡು ತಲೆಯನ್ನು ಆ ಸುತ್ತುಗಳ ಮಧ್ಯದಲ್ಲಿ ಇರಿಸುತ್ತದೆ. ಈ ರೀತಿಯಲ್ಲಿ ಅದು ಇರುವಾಗ ಯಾವಗ ಬೇಕಾದರೂ ಕಚ್ಚಬಹುದು. ಇವುಗಳು ಈ ರೀತಿಯಲ್ಲಿ ಸುರುಳಿ ಸುತ್ತಿಕೊಂಡು ಅದರ ದೇಹದ ಚರ್ಮವನ್ನು ಸುತ್ತಿಕೊಳ್ಳುತ್ತಾ ಉಜ್ಜಿಕೊಳ್ಳುತ್ತಾ ಸ್ವರ ಮಾಡಿ ಹೆದರಿಸಲು ಪ್ರಯತ್ನಿಸುತ್ತದೆ. ಅದು ಏನೂ ಫಲಕಾರಿಯಾಗದಿದ್ದರೆ ಕಚ್ಚುತ್ತವೆ. ಕೆಲವೊಂದು ಬುಸುಗುಟ್ಟುವ ಉದಾಹರಣೆಗಳೂ ಇವೆ.
ಆಹಾರ
[ಬದಲಾಯಿಸಿ]ಇವು ಸಾಮಾನ್ಯವಾಗಿ ಕಪ್ಪೆ, ಟೋಡ್, ಜೇಡ, ಹಲ್ಲಿ, ಚೇಳುಗಳನ್ನು ಹಿಡಿದು ತಿನ್ನುತ್ತವೆ.
ಸಂತಾನೋತ್ಪತ್ತಿ
[ಬದಲಾಯಿಸಿ]ಆಫ್ರಿಕಾದಲ್ಲಿ ಕಂಡುಬರುವ ಹಾವುಗಳು ಮೊಟ್ಟೆಗಳನ್ನಿಟ್ಟು ಮರಿ ಮಾಡುತ್ತವೆ. ಆಫ್ರಿಕಾದ ಹೊರಗೆ, ಭಾರತದಲ್ಲಿ ಕಂಡುಬರುವವು ನೇರವಾಗಿ ಮರಿಗಳನ್ನು ಇಡುತ್ತವೆ.
ವಿಷ
[ಬದಲಾಯಿಸಿ]ಇವು ಹಿಮೋಟಾಕ್ಸಿನ್ ಎಂಬ ವಿಷವನ್ನು ಹೊಂದಿರುತ್ತದೆ. ಈ ಹಾವುಗಳ ವಿಷವು ಕೆಂಪು ರಕ್ತಕಣಗಳಿಗೆ ನೇರವಾದ ಹಾನಿಯನ್ನು ಉಂಟುವಾಡುತ್ತವೆ. ರಕ್ತವನ್ನು ಹೆಪ್ಪುಗಟ್ಟಿಸುವುದರ ಮೂಲಕ ಶತ್ರುಗಳನ್ನು ಕೊಲ್ಲುತ್ತವೆ. ಮನುಷ್ಯರಲ್ಲಿ ಹಾವು ಕಚ್ಚಿದ ೪೦ ನಿಮಿಷಗಳಲ್ಲಿ ಪರಿಣಾಮಗಳು ಕಾಣಿಸುತ್ತವೆ. ತಕ್ಷಣದ ಚಿಕಿತ್ಸೆ ಸಿಗದಿದ್ದರೆ ಸಾವು ಸಂಭವಿಸುತ್ತದೆ.