ಗದ್ದಗಿಮಠ, ಬಿ.ಎಸ್
ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |
ಡಾ. ಗದ್ದಗಿಮಠ ಬಿ.ಎಸ್ [1917-1960]. ಕನ್ನಡ ಜಾನಪದ ಕ್ಷೇತ್ರದಲ್ಲಿ ಕೆಲಸ ಮಾಡಿದ ಆದ್ಯರಲ್ಲೊಬ್ಬರು. ಬಿಜಾಪುರ ಜಿಲ್ಲೆ ಕೆರೂರಿನಲ್ಲಿ 1917 ಜನವರಿ 17ರಂದು ಜನಿಸಿದರು. ಇವರ ತಂದೆ ಜನಪದ ಗೀತೆಗಳನ್ನು ಹಾಡುವುದರಲ್ಲಿ ಪ್ರಸಿದ್ಧರಾಗಿದ್ದರು. ಇಂಥ ಪರಿಸರದಲ್ಲಿ ಬೆಳೆದ ಇವರನ್ನು ಜಾನಪದ ಕ್ಷೇತ್ರ ಆಕರ್ಷಿಸಿತು. ಕನ್ನಡದಲ್ಲಿ ಎಂ.ಎ. ಪದವಿ ಪಡೆದ ಮೇಲೆ, ಉತ್ತರ ಕರ್ನಾಟಕದ ನಾನಾ ಭಾಗಗಳಲ್ಲಿ ಸಂಚರಿಸಿ ಕ್ಷೇತ್ರಕಾರ್ಯ ಮಾಡುತ್ತಾ ಜನಪದ ಗೀತೆಗಳನ್ನು ಸಂಶೋಧಿಸಿ, ಸಂಗ್ರಹಿಸಿ "ಕನ್ನಡ ಜನಪದ ಗೀತೆಗಳು" ಎಂಬ ಪ್ರೌಢ ಪ್ರಬಂಧವನ್ನು ಬರೆದು ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದರು. (1955). ಕರ್ನಾಟಕದಲ್ಲಿ ಜಾನಪದ ಕ್ಷೇತ್ರದಲ್ಲಿ ಪಿಎಚ್.ಡಿ. ಪದವಿ ಪಡೆದ ಪ್ರಥಮರೂ ಇವರೇ. ಜನಪದ ಸಾಹಿತ್ಯ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲು ಇವರು ಬಹುವಾಗಿ ಶ್ರಮಿಸಿದರು. ಜನಪದ ಗೀತೆಗಳನ್ನು, ನಾಡಪದಗಳನ್ನು ಸಂಗ್ರಹಿಸಿ ಪ್ರಕಟಿಸಿದರು. ಅದಕ್ಕಾಗಿ 'ಜನಪದ ಕಾವ್ಯಮಾಲೆ' ಎಂಬ ಒಂದು ಮಾಲೆಯನ್ನು ಆರಂಭಿಸಿದರು. ಇವರು ಸ್ವತಃ ಜನಪದ ದಾಟಿಯಲ್ಲಿ ಗೀತೆಗಳನ್ನು ಸೊಗಸಾಗಿ ಹಾಡುತ್ತಿದ್ದರು.
ಕೃತಿಗಳು
[ಬದಲಾಯಿಸಿ]ಇವರು ಪ್ರಕಟಿಸಿರುವ ಗ್ರಂಥಗಳೆಂದರೆ:
- ನಾಲ್ಕು ನಾಡ ಪದಗಳು,
- ಕಂಬಿಯ ಹಾಡುಗಳು,
- ಜನತಾಗೀತಗಳು
- ಲೋಕಗೀತಗಳು,
- ಕುಮಾರರಾಮನ ದುಂದುಮೆಗಳು.
ಇವರು ಬೆಳಗಾಂವಿಯ ಲಿಂಗರಾಜ ಕಾಲೇಜಿನಲ್ಲಿ ವ್ಯಾಯಾಮ ಶಿಕ್ಷಕರಾಗಿ ಸ್ವಲ್ಪಕಾಲ ಕೆಲಸಮಾಡಿದರು. ಅನಂತರ ಕರ್ನಾಟಕ ವಿಶ್ವವಿದ್ಯಾಲಯದ ಪ್ರಕಟಣ ವಿಭಾಗದಲ್ಲಿ ಸಹಾಯಕ ನಿರ್ದೇಶಕರಾಗಿ ನೇಮಕಗೊಂಡರು. ಆ ಹುದ್ದೆಯಲ್ಲಿದ್ದಾಗಲೇ 1960ರ ಅಕ್ಟೋಬರ್ 30ರಂದು ಹೃದಯಾ ಘಾತದಿಂದ ನಿಧನಹೊಂದಿದರು. ಕನ್ನಡ ಜನಪದ ಗೀತಗಳು ಎಂಬ ಇವರ ಪ್ರೌಢಪ್ರಬಂಧವನ್ನು ಇವರ ನಿಧನಾನಂತರ ಕರ್ನಾಟಕ ವಿಶ್ವವಿದ್ಯಾಲಯ ಪ್ರಕಟಿಸಿತು (1963). ತರೀಕೆರೆಯಲ್ಲಿ 1967ರಲ್ಲಿ ನಡೆದ ಅಖಿಲ ಕರ್ನಾಟಕ ಪ್ರಥಮ ಜಾನಪದ ಸಮ್ಮೇಳನದ ಸಭಾಮಂಟಪಕ್ಕೆ ಇವರ ಹೆಸರಿಡಲಾಗಿತ್ತು.