ಗದಾಧರ ಸಿಂಹ

ವಿಕಿಪೀಡಿಯ ಇಂದ
Jump to navigation Jump to search

ಗದಾಧರ ಸಿಂಹ( 1681-1696). ಅಸ್ಸಾಮನ್ನಾಳಿದ 29ನೆಯ ಅಹೋಂ ದೊರೆ. ಈತ ರಾಜನಾದಮೇಲೆ ಮಾಡಿದ ಮೊದಲನೆಯ ಕೆಲಸವೆಂದರೆ ಗೌಹಾತಿಯನ್ನು ಮೊಗಲರ ಆಕ್ರಮಣದಿಂದ ಬಿಡಿಸಿಕೊಂಡದ್ದು. ಈತ ಬಹಬಾರಿ ಮತ್ತು ಕಾಜಲ್ ಬಳಿ ಮೊಗಲರ ಸೈನ್ಯವನ್ನು ಸೋಲಿಸಿ ಓಡಿಸಿದ. ಮೋನಸ್ ನದಿಯನ್ನು ಮೊಗಲ್ ಮತ್ತು ಅಹೋಂ ರಾಜ್ಯಗಳ ನಡುವಣ ಗಡಿಯೆಂದು ಔರಂಗಜೇಬ್ ಒಪ್ಪಿಕೊಳ್ಳಬೇಕಾಯಿತು. ಆಂತರಿಕ ಭದ್ರತೆಯನ್ನೂ ಈತ ಸ್ಥಾಪಿಸಿದ. ಅಲ್ಲಿಯ ಶ್ರೀಮಂತರು ಅನೇಕ ಬಾರಿ ಗಧಾದರ ಸಿಂಹನ ವಿರುದ್ಧ ದಂಗೆ ಎದ್ದರು. ಆ ವಿರೋಧಗಳನ್ನೆಲ್ಲ ಈತ ಅಡಗಿಸಿದ. ವಿರೋಧಿಗಳಲ್ಲಿ ಅನೇಕರನ್ನು ಕೊಲ್ಲಿಸಿದ. ಮಿರಿ ಮತ್ತು ನಾಗಾ ದಂಗೆಕೋರರನ್ನು ಹತ್ತಿಕ್ಕಿದ.

ಗದಾಧರ ಸಿಂಹ ಅನೇಕ ಸುಧಾರಣೆಗಳನ್ನು ಕೈಗೊಂಡ. ಈತನ ಕಾಲದಲ್ಲಿ ಕೆರೆಗಳ ದುರಸ್ತಿಯಾಯಿತು. ಹೆದ್ದಾರಿಗಳು ನಿರ್ಮಾಣವಾದವು. ಈತ ಭೂಹಿಡುವಳಿಯ ವ್ಯಾಪಕ ಸರ್ವೇಕ್ಷಣೆ ಮಾಡಿಸಿದ.

ಗದಾಧರ ಸಿಂಹ ಶಾಕ್ತೇಯನಾಗಿದ್ದ. ಈತ ವೈಷ್ಣವರಿಗೆ ಕಿರುಕುಳ ಕೊಟ್ಟನೆಂದೂ ವೈಷ್ಣವಗುರುಗಳ ಹಕ್ಕುಗಳನ್ನು ಮೊಟಕುಮಾಡಿದನೆಂದೂ ತಿಳಿದುಬರುತ್ತದೆ. ಗೌಹಾತಿಯ ಕಚೇರಿಘಾಟ್ ಎದುರಿಗೆ ಬ್ರಹ್ಮಪುತ್ರಾ ನದಿಯ ದ್ವೀಪವೊಂದರ ಮೇಲೆ ಈತ ಉಮಾನಂದ ದೇವಸ್ಥಾನವನ್ನು ಕಟ್ಟಿಸಿದ. ಈತ ಬ್ರಾಹಣರಿಗೂ ದೇವಸ್ಥಾನಗಳಿಗೂ ಭೂಮಿಯನ್ನು ಕೊಟ್ಟನೆಂದು ಗೊತ್ತಾಗುತ್ತದೆ.