ಖಾಜನ್ ಸಿಂಗ್

ವಿಕಿಪೀಡಿಯ ಇಂದ
Jump to navigation Jump to search


ಖಾಜನ್ ಸಿಂಗ್ ಈಜುಗಾರಿಕೆಯಲ್ಲಿ ಭಾರತದ ಮಾಜಿ ರಾಷ್ಟ್ರೀಯ ಚಾಂಪಿಯನ್. ಸಿಯೋಲ್‌ನ 1986ರ ಏಷ್ಯನ್ ಕ್ರೀಡಾಕೂಟದಲ್ಲಿ ಅವರು ಬೆಳ್ಳಿಪದಕವನ್ನು ಗೆದ್ದರು. ಅವರಿಗೆ 1983ರಲ್ಲಿ ಅರ್ಜುನ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. 1964ರಲ್ಲಿ ಅವರು ಜನಿಸಿದರು.

ಖಾಜನ್ ಸಿಂಗ್ ಟೋಕಾಸ್ - ನಿಧಿ ಮತ್ತು ಪ್ರತಿಭೆ ಎಂದರ್ಥ ನೀಡುವ ಅವರ ಹೆಸರಿಗೆ ತಕ್ಕಹಾಗಿದ್ದರು. (ಖಾಜನ್ ಎಂದು ಕೂಡ ಉಚ್ಚರಿಸಲಾಗುವುದು) . ದೆಹಲಿಯ ಮುನಿರ್ಕಾ ಗ್ರಾಮದ ಟೋಕಾಸ್ ಈಜುಗಾರರ ಕೂಟ ತಯಾರು ಮಾಡಿದ ಮೂರು ರಾಷ್ಟ್ರೀಯ ಮಟ್ಟದ ಈಜುಗಾರರ ಪೈಕಿ ಬಹುಮುಖ ಪ್ರತಿಭೆಯ ಈಜುಗಾರರಾಗಿದ್ದರು. ಉಳಿದಿಬ್ಬರು ಧರ್ಮಪಾಲ್ ಮತ್ತು ಮೋಹಿಂದರ್.

ಇಸವಿ 1964ರ ಮೇ 6ರಂದು ಜನಿಸಿದ ಖಾಜನ್ ದೆಹಲಿಯ ಸರೋಜಿನಿ ನಗರದ ಸರ್ಕಾರಿ ಹಿರಿಯ ಪ್ರೌಢಶಾಲೆಯಲ್ಲಿ ಅಧ್ಯಯನ ಮಾಡಿದರು ಹಾಗು 1981-82ರ ರಾಷ್ಟ್ರೀಯ ಶಾಲಾ ಚಾಂಪಿಯನ್‌ಷಿಪ್‌ನಲ್ಲಿ ಐದು ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಸ್ವರ್ಧಾತ್ಮಕ ಈಜುಗಾರಿಕೆಯಲ್ಲಿ ಚೊಚ್ಚಲ ಪ್ರವೇಶ ಮಾಡಿದರು. ಆರು ಅಡಿ ಎತ್ತರದ ಖಾಜನ್ 1982ರಲ್ಲಿ ರಾಷ್ಟ್ರೀಯ ಈಜು ಚಾಂಪಿಯನ್‌ಶಿಪ್‌ಗೆ ಪ್ರವೇಶಿಸಿದರು ಮತ್ತು ಐದು ಚಿನ್ನದ ಪದಕಗಳು, ಎರಡು ಬೆಳ್ಳಿ ಮತ್ತು ಒಂದು ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ಎಲ್ಲ ಸ್ಪರ್ಧಿಗಳನ್ನು ಹಿಂದಿಕ್ಕಿದರು. ನಂತರದ ವರ್ಷ ತಿರುವನಂತಪುರದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ 7 ಚಿನ್ನದ ಪದಕಗಳು, ಎರಡು ಬೆಳ್ಳಿ ಮತ್ತು ಒಂದು ಕಂಚಿನ ಪದಕವನ್ನು ಬಾಚಿಕೊಂಡರು.

1987ರಲ್ಲಿ ಪುನಃ ಅಹ್ಮದಾಬಾದ್‌ನ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನಲ್ಲಿ, ಅವರು 7 ಪದಕಗಳನ್ನು ಗೆದ್ದರಲ್ಲದೇ 100 ಮೀಟರ್ ದೂರವನ್ನು 55 .21ಸೆಕೆಂಡುಗಳ ಅವಧಿಯಲ್ಲಿ ಫ್ರೀಸ್ಟೈಲ್(ಮುಕ್ತಶೈಲಿಯ)ನಲ್ಲಿ ಈಜಿ ರಾಷ್ಟ್ರೀಯ ದಾಖಲೆ ನಿರ್ಮಿಸಿದರು. ಕಠ್ಮಂಡುವಿನಲ್ಲಿ 1985ರ SAF ಕ್ರೀಡಾಕೂಟದಲ್ಲಿ ತಾವೇ ನಿರ್ಮಿಸಿದ್ದ 55 .34 ಸೆಕೆಂಡುಗಳ ದಾಖಲೆ ಮುರಿದರು. 1988ರಂದು ಕೊಲ್ಕತ್ತಾದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಅವರು ಎಂಟು ವೈಯಕ್ತಿಕ ಚಿನ್ನದ ಪದಕಗಳನ್ನು ಅಭೂತಪೂರ್ವವಾಗಿ ಗೆಲ್ಲುವುದರೊಂದಿಗೆ ಅನಭಿಶಕ್ತ ಸಾಮ್ರಾಟರೆನಿಸಿದರು. ಅವುಗಳಲ್ಲಿ ಐದು ಪದಕಗಳು ಹೊಸ ದಾಖಲೆಗಳ ಹೆಚ್ಚುವರಿ ಹೊಳಪಿನೊಂದಿಗೆ ಕಂಗೊಳಿಸಿದವು. ಪಾಲಿಸಿ ರಿಲೆ ತಂಡಕ್ಕೆ ಅವರು ಬೆಳ್ಳಿ ಮತ್ತು ಕಂಚಿನ ಪದಕವನ್ನು ಕೂಡ ಗೆದ್ದುಕೊಟ್ಟರು. ಅತ್ಯುತ್ತಮ ಗುಣಮಟ್ಟದ ಈಜುಗಾರ, ಫ್ರೀಸ್ಟೈಲ್ ಈಜಿನಲ್ಲಿ ಮಾಸ್ಟರ್ ಮತ್ತು 1984ರ ಅರ್ಜುನ ಪ್ರಶಸ್ತಿ ಪುರಸ್ಕೃತ ಖಾಜನ್ ಸಿಯೋಲ್‌ನ 1986ರ ಏಷ್ಯನ್ ಕ್ರೀಡಾಕೂಟದಲ್ಲಿ ಬೆಳ್ಳಿಯನ್ನು ಗೆದ್ದುಕೊಂಡರು. ಏಷ್ಯಾಡ್‌ನಲ್ಲಿ ಭಾರತ ಪದಕ ಬಾಚಿಕೊಂಡಿದ್ದು 1951ರಿಂದೀಚೆಗೆ ಮೊದಲ ಬಾರಿಯಾಗಿತ್ತು.

ದಕ್ಷಿಣ ಏಷ್ಯಾ ಒಕ್ಕೂಟ ಕ್ರೀಡಾಕೂಟಗಳಲ್ಲಿ ಅವರು ಗಮನಾರ್ಹವಾದ ಅಂತಾರಾಷ್ಟ್ರೀಯ ಸಾಧನೆ ಮೆರೆದರು. ಅವರು 1985ರಲ್ಲಿ ಕಠ್ಮಂಡುವಿನಲ್ಲಿ ಚಿನ್ನದ ಪದಕಗಳನ್ನು ಮತ್ತು 1989ರಲ್ಲಿ ಇಸ್ಲಾಮಾಬಾದ್‌ನಲ್ಲಿ 7 ಚಿನ್ನದ ಪದಕಗಳನ್ನು ಗೆದ್ದರು. ಅವರು 1988ರ ಬಿಜಿಂಗ್‌ನಲ್ಲಿ ನಡೆದ ಏಷ್ಯನ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದರು ಮತ್ತು 1988ರಲ್ಲಿ ವಿಶ್ವ ಪೊಲೀಸ್ ಕ್ರೀಡಾಕೂಟದ 100 ಮೀಟರ್ ಬಟರ್‌ಫ್ಲೈ ಈಜುಸ್ಪರ್ಧೆಯಲ್ಲಿ ಬೆಳ್ಳಿಪದಕ ವಿಜೇತರಾದರು.

ಪ್ರಸಕ್ತ ಸೆಂಟ್ರಲ್ ರಿಸರ್ವ್ ಪೊಲೀಸ್ ಪಡೆಯಲ್ಲಿ S.Oಆಗಿರುವ ಖಾಜನ್, 1982ರಲ್ಲಿ ಬ್ರಿಸ್ಬೇನ್‌ನಲ್ಲಿ ನಡೆದ 12ನೇ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ, 1982ರಲ್ಲಿ ದೆಹಲಿಯ IXth ಏಷ್ಯನ್ ಕ್ರೀಡಾಕೂಟದಲ್ಲಿ, 1984ರಲ್ಲಿ ಸಿಯೋಲ್‌ನ 2ನೇ ಏಷ್ಯನ್ ಈಜು ಚಾಂಪಿಯನ್‌ಷಿಪ್‌ನಲ್ಲಿ, 1984ರಲ್ಲಿ ಮಾಸ್ಕೊದಲ್ಲಿ ನಡೆದ ಸೌಹಾರ್ದ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಆಸ್ಟ್ರೇಲಿಯದ ಕೋಚ್ ಎರಿಕ್ ಆರ್ನಾಲ್ಡ್ ಅವರಿಂದ ತರಬೇತಾದ ಖಾಜನ್ ಸಿಂಗ್, ಸಿಯೋಲ್‌ನಲ್ಲಿ ನಡೆದ 1988ರ ಒಲಿಂಪಿಕ್‌ನಲ್ಲಿ ಕೂಡ ಭಾಗವಹಿಸಿದ್ದರು.

ಖಾಜನ್ ಸಿಂಗ್ ಟೋಕಾಸ್ ಪ್ರಸಕ್ತ CRPFನಲ್ಲಿ SO (ಕ್ರೀಡಾಧಿಕಾರಿ)ಆಗಿದ್ದಾರೆ ಹಾಗು ವಿವಾಹಿತರಾಗಿದ್ದು, ಇಬ್ಬರು ಮಕ್ಕಳಿದ್ದಾರೆ.

ಖಾಜನ್ ಸಿಂಗ್: ಸ್ಮರಣೆಯ ಅಂಚುಗಳಲ್ಲಿ ಪೆನ್ಸಿಲ್ ಚಿಹ್ನೆಗಳಂತೆ ನಮ್ಮಲ್ಲಿ ಬಹುತೇಕ ಮಂದಿಗೆ ಅವರ ಹೆಸರು ಮಾಸಿಹೋಗಿದೆ. ಸುಮಾರು 14 ವರ್ಷಗಳ ಹಿಂದೆ ಅವರ ಕುರಿತು ಸುದ್ದಿಗಳನ್ನು ಕೆದಕಿದಾಗ, ಅವರ ಹೆಸರು ವಿಶಿಷ್ಟ ವರ್ಗಕ್ಕೆ ಸೇರಿದ ಹೀರೊಗೆ ರೂಪಾಂತರ ಹೊಂದಬಹುದು. ಏಕೆಂದರೆ ಅವರು ಕ್ರೀಡಾಪಟುವಾಗಿದ್ದರು. ಭಾರತದಲ್ಲಿ ಆರಾಧ್ಯದೈವರೆನಿಸಿದ್ದ ಕ್ರಿಕೆಟ್ ಆಟಗಾರರನ್ನೂ ಕೂಡ, ಸಚಿನ್ ತೆಂಡೂಲ್ಕರ್ ಒಬ್ಬರನ್ನು ಹೊರತುಪಡಿಸಿ, ಈಗ ಹೀರೊಗಳೆಂದು ಕರೆಯಲು ಸಾಧ್ಯವಾಗುವುದಿಲ್ಲ. ಸಿಂಗ್ 1986ರ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಈಜಿನಲ್ಲಿ ಬೆಳ್ಳಿಪದಕವನ್ನು ಗೆದ್ದುಕೊಟ್ಟರು (200ಮೀ ಬಟರ್‌ಫ್ಲೈ) ನಂತರ ಎರಡು ವರ್ಷಗಳ ನಂತರ ಸಿಯೋಲ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿದರು. ‘‘ಆದರೆ ಪದಕ ಗೆಲ್ಲುವ ಭರವಸೆ ತಮಗಿರಲಿಲ್ಲ, ಏಕೆಂದರೆ ತಾವು ಸಾಕಷ್ಟು ತರಬೇತಿ ಪಡೆದಿರಲಿಲ್ಲ ಎಂದು 46 ವರ್ಷ ವಯಸ್ಸಿನ ಸಿಂಗ್ ಹೇಳುತ್ತಾರೆ.

ಸಹಸ್ರಮಾನದ ಪ್ರಥಮ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಆಡಲು ಭಾರತದ 71 ಕ್ರೀಡಾಪಟುಗಳ ಪ್ರಬಲ ತಂಡವು ಸಿಡ್ನಿಯ ದಾರಿಯನ್ನು ಹಿಡಿಯುತ್ತಿದ್ದಂತೆ, ಪ್ರತಿ ಒಲಿಂಪಿಕ್ ವರ್ಷದಲ್ಲಿ ಮಾಧ್ಯಮದ ಜನಾಭಿಪ್ರಾಯ ವಿಭಾಗಗಳ ಮೂಲಕ ದೇಶವು ತನ್ನನ್ನು ತಾನೇ ಕೇಳಿಕೊಳ್ಳುವ ಹಾಗೂ ತಲೆ ತಗ್ಗಿಸಬೇಕಾದ ಪ್ರಶ್ನೆ: ಒಂದು ಶತಕೋಟಿ ಜನರಿಂದ ಕೂಡಿದ ರಾಷ್ಟ್ರವು ಒಲಿಂಪಿಕ್ಸ್‌ನಲ್ಲಿ ಒಂದು ವೇದಿಕೆಯ ಸ್ಥಾನವನ್ನೂ ಗಳಿಸಲು ಸಾಧ್ಯವಿಲ್ಲವೇಕೆ?

ನೀವು ಖಾಜನ್ ಸಿಂಗ್ ವೃತ್ತಿಜೀವನದ ಪಥದ ಜಾಡು ಹಿಡಿದರೆ, ಇತರೆ ಭಾರತೀಯ ಕ್ರೀಡಾಪಟುಗಳ ಜತೆ ಸಮಾನಲಕ್ಷಣದ ಅನೇಕ ಬಿಂದುಗಳನ್ನು ಕಾಣಬಹುದು. ಉದಾಹರಣೆಗೆ, ಓಟದ ರಾಣಿ P. T. ಉಷಾ ಅವರಿಗೆ LAಒಲಿಂಪಿಕ್ಸ್‌ನಲ್ಲಿ 1/100ನೇ ಸೆಕೆಂಡ್‌ನಿಂದ ಕಂಚಿನ ಪದಕ ಏಕೆ ತಪ್ಪಿಹೋಯಿತು? ಎರಡು ಬಾರಿ ಮಹಿಳಾ ವಿಶ್ವ ಭಾರಎತ್ತುವ ಚಾಂಪಿಯನ್‌ಷಿಪ್‌ನಲ್ಲಿ ವಿಜೇತೆಯಾದ ಕರ್ಣಮ್ ಮಲ್ಲೇಶ್ವರಿ ಒಲಿಂಪಿಕ್ಸ್‌ಗೆ ಸ್ಪರ್ಧಿಸಲು ನಾಲ್ಕು ವರ್ಷಗಳ ತರಬೇತಿ ಪಡೆದ ನಂತರ, ತೂಕದ ಸಮಸ್ಯೆಗಳ ಕಾರಣದಿಂದ ಪರಿಚಯವಿಲ್ಲದ ವರ್ಗದಲ್ಲಿ ಸ್ಪರ್ಧಿಸಬೇಕಾಗಿರುವುದು ಏಕೆ? ತಂಡದ ಆಟವಾದ ಹಾಕಿಯನ್ನು ಗಮನಿಸಿದರೆ ಕೂಡ, ಆಮ್‌ಸ್ಟರ್‌ಡ್ಯಾಂ,ಲಂಡನ್, ಹೆಲ್ಸಿಂಕಿ ಮತ್ತು ಮೆಲ್ಬೋರ್ನ್ ಒಲಿಂಪಿಕ್ಸ್(1928-1956)ಗಳಲ್ಲಿ ಸಂಪಾದಿಸಿದ್ದ ಅಗ್ರಶ್ರೇಣಿಯಿಂದ 1992ರ ಬಾರ್ಸೆಲೋನಾ ಒಲಿಂಪಿಕ್ಸ್‌ನಲ್ಲಿ ಕಳಪೆಯಾದ ಏಳನೇ ಸ್ಥಾನಕ್ಕೆ ಕುಸಿದ ರೀತಿಯನ್ನು ಹೇಗೆ ವಿವರಿಸುತ್ತೀರಿ? ಸಿಂಗ್ ಒಂದು ರೀತಿಯಲ್ಲಿ ಭಾರತದ ಸಣ್ಣಪಟ್ಟಣದಿಂದ ಬಂದ ಪ್ರತಿಯೊಬ್ಬ ಕ್ರೀಡಾಪಟುವಿನ ಪಡಿಯಚ್ಚು. ಪ್ರಾಮಾಣಿಕ, ಅಗಾಧ ಪ್ರತಿಭೆಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಛಾಪು ಮೂಡಿಸಲು ಸಿದ್ಧರಾಗಿದ್ದರು. ಆದರೆ ಸರಿಯಾದ ಕಾಲದಲ್ಲಿ ಸೂಕ್ತ ಮಾರ್ಗದರ್ಶನವಿಲ್ಲದೇ, ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಅವರ ಪ್ರಯತ್ನಗಳು ಕಿಟಕಿಯ ಗಾಜಿನಿಂದ ನಿಷ್ಫಲವಾಗಿ ಉರುಳಿ ಹೋಗುವ ಮಳೆಹನಿಗಳಂತೆ, ಯಾವುದೇ ಪ್ರಭಾವ ಉಂಟುಮಾಡಲಿಲ್ಲ.

ಸಿಂಗ್ ರಾಜಧಾನಿ ಕೇಂದ್ರದಲ್ಲಿ ಸ್ವಲ್ಪ ಆಚೆಯಿರುವ ಸ್ಥಳೀಯ ಊರು ಮುನಿರ್ಕಾ ಗಾಂವ್‌ನ ಪಾಚಿ ತುಂಬಿದ ಕೊಳ(ತಲಾಬ್)‌ದಲ್ಲಿ ಈಜುವುದನ್ನು ಕಲಿತರು. ಅವರ ಪ್ರತಿಭೆಯನ್ನು ಗುರುತಿಸಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಸಾಣೆಹಿಡಿಯಲಾಗಿದೆ ಎಂದು ಪರಿಗಣಿಸಿದಾಗ, ಸ್ವಯಂ ಸಿಂಗ್ ಉದ್ಗರಿಸಿದರು. ‘‘ತೀರಾ ತಡವಾಯಿತು 1982ರ ಏಷ್ಯನ್ ಕ್ರೀಡಾಕೂಟ ಸಂಭವಿಸಿದಾಗ ನನಗಾಗಲೇ 18 ವರ್ಷವಾಗಿತ್ತು. ಕಠಿಣ ತರಬೇತಿಯಿಂದ ಸಹಿಷ್ಣುತೆಯು ಸುಧಾರಣೆಯಾದರೂ, ನಾನು ಬೆಳೆಸಿಕೊಂಡ ಆಹಾರಕ್ರಮವನ್ನು ಬದಲಿಸಲು ಅಥವಾ ನನ್ನ ಸ್ಟ್ರೋಕ್‌ಗಳನ್ನು ಅಥವಾ ತಂತ್ರಗಳನ್ನು ಬದಲಿಸಲು ಯಾರಿಗೂ ಸಾಧ್ಯವಾಗುವುದಿಲ್ಲ.’’ ಸಿಂಗ್ ಅವರ ಪ್ರಕರಣವು ಕ್ರೀಡೆಗಳ ಬಗ್ಗೆ ಭಾರತದ ಅಧಿಕೃತ ಧೋರಣೆಯಲ್ಲಿನ ಎರಡು ಬಗೆಯ ಲೋಪಗಳಿಗೆ ಸೂಚಿಯಾಗಿದೆ: ದೇಶದಾದ್ಯಂತ ಸಾಕಷ್ಟು ಪ್ರತಿಭಾಶೋಧ ಕಾರ್ಯಕ್ರಮಗಳಿಲ್ಲ. ಪ್ರತಿಭಾಶೋಧವು ಅಂತಾರಾಷ್ಟ್ರೀಯ ರಂಗದಲ್ಲಿ ಸಫಲತೆ ಪಡೆಯಲು ಸಾಮರ್ಥ್ಯವಿರುವ ಕೆಲವೇ ಪುರುಷರು ಮತ್ತು ಮಹಿಳೆಯರಿಗೆ ಸಂಪನ್ಮೂಲಗಳು, ಸಾಮಗ್ರಿಗಳನ್ನು ಹಂಚಿ, ಸೂಕ್ತ ತರಬೇತಿ ನೀಡಲು ನೆರವಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಅಪಾರ ಪ್ರತಿಭೆ ಇರುವ ಕ್ರೀಡಾಪಟುಗಳು ಕೂಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನಕ್ಕೆ ಬರಲು ವಿಫಲರಾಗಿದ್ದಾರೆ. ಕಳಪೆ ಶಾರೀರಿಕ ರಚನೆ, ಅವರ ವೃತ್ತಿಜೀವನಕ್ಕೆ ಪೂರಕವಾಗುವ ಬದಲು ಹಾನಿಕಾರಕವಾದ ಆಹಾರಕ್ರಮದ ಅಭ್ಯಾಸಗಳು ಉಳಿದ ದುರಂತ ಕತೆಯನ್ನು ವಿವರಿಸುತ್ತದೆ.

ಆದರೂ, 1984ರ ಅರ್ಜುನ ಪ್ರಶಸ್ತಿ ವಿಜೇತ ಸಿಂಗ್, ಹತಾಶರಾಗುವುದಿಲ್ಲ. ‘‘ನನ್ನ ಶಕ್ತಿ ಮೀರಿ ಪ್ರಯತ್ನಿಸಿದೆ’’ ಎಂದು ಸಂಯಮದಿಂದ ಹೇಳುತ್ತಾರೆ. ಅವರು 1988ರಲ್ಲಿ ಒಲಿಂಪಿಕ್ಸ್‌ಗೆ ಕೇವಲ ಅರ್ಹತೆ ಪಡೆಯುವಕ್ಕೋಸ್ಕರ ಅತ್ಯುಚ್ಛ ಸಾಧನೆ ತೋರಿಸಬೇಕಾಯಿತು. ಆದರೆ ಸ್ವದೇಶಕ್ಕೆ ಹೊಳೆಯುವ ಪದಕವನ್ನು ತರಲು ಸಾಧ್ಯವಾಗಲಿಲ್ಲ ಎನ್ನುವುದು ಪೂರ್ವವಿದಿತ ತೀರ್ಮಾನವಾಗಿತ್ತು. ಸಿಯೋಲ್ ಸಾಧನೆಯನ್ನು ಉತ್ತಮಪಡಿಸಿಕೊಳ್ಳಲು ಸಾಧ್ಯವಿಲ್ಲವೆಂದು ಅವರು ಅರಿತಿದ್ದರಿಂದ 1992ರ ಬಾರ್ಸೆಲೋನಾ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಅವರು ನಿರಾಕರಿಸಿದರು. ‘‘ನೀವು ಗೆಲ್ಲುವುದಿಲ್ಲ ಎನ್ನುವ ಖಾತರಿ ಇರುವಾಗ ಪುನಃ ಪುನಃ ಭಾಗವಹಿಸುವುದರಲ್ಲಿ ಅರ್ಥವಿಲ್ಲ.’’ ಎಂದು ತಮ್ಮ ಇತಿಮಿತಿಗಳನ್ನು ಅರಿತುಕೊಂಡು ಹೇಳಿದರು. ಎರಡು ವರ್ಷಗಳ ನಂತರ, CRPFನಲ್ಲಿ ಹಿರಿಯ ಪೊಲೀಸ್ ಸೂಪರಿಂಟೆಂಡೆಂಟ್(SSP) ಆಗಿರುವ ಸಿಂಗ್, ಎಲ್ವಿಸ್ ಆಲಿ ಹಜಾರಿಕಾ ಮುಂತಾದ ರಾಷ್ಟ್ರೀಯ ಚಾಂಪಿಯನ್‌ರನ್ನು ಒಳಗೊಂಡ CRPF ಈಜು ತಂಡಕ್ಕೆ ತರಬೇತಿ ನೀಡುತ್ತಿದ್ದು, ತಮ್ಮ ವೃತ್ತಿಪರ ಈಜುಗಾರಿಕೆಗೆ ವಿದಾಯ ಹೇಳಿದರು. ಭಾರತದಲ್ಲಿ ಕ್ರೀಡೆಯಿಂದ ವೃತ್ತಿಜೀವನ ರೂಪಿಸುವುದು ಕಷ್ಟ (ಮತ್ತೊಮ್ಮೆ ಕ್ರಿಕೆಟ್ ಹೊರತುಪಡಿಸಿ). ಮಾಧ್ಯಮದ ಗಮನವಿಲ್ಲದೇ ಕತ್ತಲಿನಲ್ಲಿ ಉಪಸ್ಥಿತಿ, ಸರ್ಕಾರದ ನಿರ್ಲಕ್ಷ್ಯ ಮತ್ತು ಯಾವುದೇ ಕಾರ್ಪೊರೇಟ್ ಪ್ರಾಯೋಜಕತ್ವದ ಕೊರತೆಯು ಅತೀ ಪ್ರತಿಭಾಶಾಲಿ, ದೃಢಸಂಕಲ್ಪದ ಕ್ರೀಡಾಪಟುಗಳನ್ನು ಕೂಡ ಉದ್ಯೋಗ ಭದ್ರತೆಯಲ್ಲಿರಲು ಪ್ರೇರೇಪಿಸುತ್ತದೆ. ಅವರು ಕಠಿಣ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರೂ, ಯಾವುದೇ ಚಿನ್ನದ ಪದಕ ವಿಜೇತರನ್ನು ಸೃಷ್ಟಿಸಲು ಸಾಧ್ಯವಾಗಿಲ್ಲ ಎನ್ನುವುದು ಸಿಂಗ್ ಅವರಿಗೆ ವಿಷಾದವೆನಿಸಿದೆ.

ಸಂಪದ್ಭರಿತ USA 1896ರಲ್ಲಿ ಆಧುನಿಕ ಒಪಿಂಪಿಕ್ ಕ್ರೀಡಾಕೂಟಗಳ ಆರಂಭದಿಂದ ಇದುವರೆಗೂ 2004 ಪದಕಗಳನ್ನು ಗೆದ್ದುಕೊಂಡಿದ್ದು, ಇದಕ್ಕಾಗಿ ಲಕ್ಷಾಂತರ ಡಾಲರ್ ಹಣವನ್ನು ವೆಚ್ಚ ಮಾಡುತ್ತದೆ. ಕ್ರೀಡಾಪಟುಗಳಿಗೆ ಅತ್ಯಾಧುನಿಕ ಉಪಕರಣಗಳನ್ನು, ತರಬೇತಿ ಕಾರ್ಯಕ್ರಮಗಳನ್ನು ಹಾಗೂ ಕ್ರೀಡಾಂಗಣಗಳನ್ನು ಅಭಿವೃದ್ಧಿಪಡಿಸುತ್ತಿದೆ. ನಮ್ಮ ನೆರೆಯಲ್ಲಿರುವ ಚೀನಾ ಸರ್ಕಾರಕ್ಕೆ ಕ್ರೀಡೆಯಲ್ಲಿ ಇತ್ತೀಚಿನ ದಿನಗಳಲ್ಲಿ ಉದ್ದೀಪನಾ ಮದ್ದು ಸೇವನೆಯ ಭೂತ ಕಾಡಿದ್ದರೂ, ಸ್ಪರ್ಧಾತ್ಮಕ ಕ್ರೀಡೆಯಿಂದ ವೃತ್ತಿಜೀವನ ರೂಪಿಸಿಕೊಳ್ಳಲು ಚೀನಾ ಸರ್ಕಾರ ತನ್ನ ಅಥ್ಲೀಟ್‌ಗಳಿಗೆ ವಾಸ್ತವವಾಗಿ ಹಣ ಪಾವತಿ ಮಾಡುತ್ತಿದೆ. ಸಾಮಾನ್ಯವಾಗಿ, ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾರೀ ಪದಕಗಳನ್ನು ಕೊಳ್ಳೆಹೊಡೆಯುವ ರಾಷ್ಟ್ರಗಳು ಮೂರು ಅಥವಾ ನಾಲ್ಕು ಕ್ರೀಡೆಗಳಲ್ಲಿ ಅತ್ಯುತ್ತಮ ಸಾಮರ್ಥ್ಯದ ಕ್ರೀಡಾಪಟುಗಳನ್ನು ತಯಾರು ಮಾಡುತ್ತದೆ. ಆದರೆ ಭಾರತವು ಸಾಂಪ್ರದಾಯಿಕವಾಗಿ ಕ್ರೀಡಾಪಟುಗಳಿಗೆ ಸಾಮೂಹಿಕ ಆಧಾರಿತ ತರಬೇತಿ ಕಾರ್ಯಕ್ರಮಗಳನ್ನು ಅನುಸರಿಸುತ್ತದೆ.

ನಾವು ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಜಯಗಳಿಸುವ ಆಶಯ ಹೊಂದಿದ್ದರೆ, ಕೆಲವು ಕ್ರೀಡೆಗಳ ಮೇಲೆ ಮಾತ್ರ ಗಮನಹರಿಸುವುದು(ಉಪಕರಣ ಬಳಸದ ಕ್ರೀಡೆಗಳು, ಭಾರತ ಪಾಶ್ಚಿಮಾತ್ಯ ದೇಶಗಳ ಅತ್ಯುನ್ನತ ತಂತ್ರಜ್ಞಾನದ ಕ್ರೀಡಾಸಲಕರಣೆಗಳ ಜತೆ ಸ್ಪರ್ಧಿಸುವ ಭರವಸೆ ಹೊಂದಿಲ್ಲ) ಅತ್ಯಂತ ಉತ್ತಮ ಮತ್ತು ಪ್ರಾಯೋಗಿಕ ಕಾರ್ಯತಂತ್ರವಾಗಿರಬಹುದು ಎನ್ನುವುದಕ್ಕೆ ಭಾರತೀಯ ಒಲಿಂಪಿಕ್ ಒಕ್ಕೂಟದ ಹಿರಿಯ ಅಧಿಕಾರಿಗಳು ಸಮ್ಮತಿಸುತ್ತಾರೆ.

 ಅಥ್ಲೇಟ್‌ಗಳನ್ನು 12 ಸ್ಪರ್ಧೆಗಳಿಗೆ ಕಳಿಸುವ ಬದಲಿಗೆ, ಸಿಡ್ನಿ ಒಲಿಂಪಿಕ್ಸ್‌ಗೆ ಸಣ್ಣ ಮತ್ತು ಉತ್ತಮ ತರಬೇತಾದ ತಂಡವನ್ನು ಬಹುಶಃ ಕಳಿಸಿದ್ದರೆ, ಭಾರತದ ನೀರಸ ಪದಕದ ಟ್ಯಾಲಿ ವಿರುದ್ಧ ನೆರವಾಗುತ್ತಿತ್ತು. ನಂತರ, ಕ್ರೀಡಾಪಟುಗಳಿಗೆ ಅಗತ್ಯವಾದ ವೃತ್ತಿಪರರ  ನಿರ್ಣಾಯಕ ಗುಂಪಾದ ವೈದ್ಯರು, ಅಂಗಮರ್ಧಕರು ಮತ್ತು ಆಹಾರ ವಿಜ್ಞಾನಿಗಳ ತಂಡವು ಒಲಿಂಪಿಕ್‌ಗೆ ತೆರಳುವುದು ವಿರಳ. ‘‘ ಸಿಯೋಲ್‌ನಲ್ಲಿ ಇಡೀ ಒಲಿಂಪಿಕ್ ತಂಡಕ್ಕೆ ಕೇವಲ ಒಬ್ಬರು ಅಂಗಮರ್ಧಕರಿದ್ದರು. ಉಳಿದ ರಾಷ್ಟ್ರಗಳು ಪ್ರತಿಯೊಂದು ಕ್ರೀಡೆಗೆ ಪ್ರತ್ಯೇಕ ಅಂಗಮರ್ಧಕರನ್ನು ಹೊಂದಿತ್ತು’’ ಎನ್ನುತ್ತಾರೆ ಸಿಂಗ್‌‌. ಈ ವರ್ಷ ಭಾರತದ ಒಲಿಂಪಿಕ್ ತಂಡಕ್ಕೆ 14 ಕೋಚ್‌ಗಳು (ತರಬೇತುದಾರರು) ಮತ್ತು ಇಬ್ಬರು ವೈದ್ಯರು ಜತೆಗೂಡಿದ್ದರು.

ಆದರೆ ಆ ಗೋಳನ್ನು ಕೇಳುವವರಾರು? ‘‘ನೀವು ಅವರ ವಿರುದ್ಧ ಮಾತನಾಡಿದರೂ (ಕ್ರೀಡಾ ಆಡಳಿತಗಾರರು) ಅಥವಾ ಅವರ ಪರವಾಗಿ ಮಾತನಾಡಿದರೂ ಅವರು ಲಕ್ಷ್ಯ ವಹಿಸುವುದಿಲ್ಲ ’’ಎಂದು ಸಿಂಗ್ ಹೇಳಿದರು. ಸಿಂಗ್ ಮತ್ತು ಇಬ್ಬರು ಭಾರತೀಯ ಈಜುಗಾರರನ್ನು 1985ರಲ್ಲಿ ತರಬೇತಿ ಕಾರ್ಯಕ್ರಮಕ್ಕಾಗಿ ಆಸ್ಟ್ರೇಲಿಯದ ಕೋಚ್ ಆಯ್ಕೆ ಮಾಡಿದಾಗ, ಸರ್ಕಾರ ಅವರಿಗೆ ಪ್ರಾಯೋಜಕತ್ವ ವಹಿಸಲು ನಿರಾಕರಿಸಿತು. ‘‘ ಇದು ಅತ್ಯಂತ ವೆಚ್ಚದಾಯಕವೆಂದು ಹೇಳಿದ ಸರ್ಕಾರ ಅವರ ವಿಮಾನ ಪ್ರಯಾಣದರವನ್ನು ಮಾತ್ರ ಭರಿಸಲು ಒಪ್ಪಿಕೊಂಡಿತು. ನಮ್ಮ ಕೋಚ್ ಸ್ವಲ್ಪ ಹಣ ನೀಡಿದರು ಮತ್ತು ಉಳಿದ ಹಣವನ್ನು ನಮ್ಮ ಜೇಬಿನಿಂದಲೇ ನೀಡಿದೆವು.’’ ಕ್ರೀಡಾ ಕೂಟಗಳಿಗೆ ಪ್ರಾಯೋಜಕತ್ವಕ್ಕೆ ಇಚ್ಛಿಸುವ ಕಾರ್ಪೊರೇಟ್‌‌ಗಳಿಗೆ ತೆರಿಗೆ ವಿನಾಯಿತಿ ನೀಡುವುದಾಗಿ ಸರ್ಕಾರ ಇತ್ತೀಚೆಗೆ ಪ್ರಕಟಿಸಿದ್ದರೂ, ತರಬೇತಿ ಕೇಂದ್ರಗಳು, ಕೋಚಿಂಗ್ ಕ್ಯಾಂಪ್‌ಗಳ ಅಭಿವೃದ್ಧಿಗೆ ನಿಧಿ ತೊಡಗಿಸುವ ಬದಲಿಗೆ ಪೇಜ್ 3 ಪ್ರಸಾರಕ್ಕಾಗಿ ಗೊತ್ತಾದ ಕ್ರೀಡಾಕೂಟಗಳ ಪ್ರಾಯೋಜಕತ್ವಕ್ಕೆ ಹಣ ಹರಿದುಹೋಗುತ್ತದೆ. ‘‘ ಇನ್ನು ಎರಡು ವರ್ಷಗಳಲ್ಲಿ ತಾವು CRPFನಿಂದ ನಿವೃತ್ತರಾದ ನಂತರ ಈಜು ಅಕಾಡೆಮಿ ಆರಂಭಿಸಲು ಇಚ್ಛಿಸಿದ್ದೇನೆ. ಆದರೆ ಸರ್ಕಾರ ಭೂಮಿಗಾಗಿ ಅಥವಾ ಮೂಲಸೌಲಭ್ಯಕ್ಕೆ ಹಣ ನೀಡುತ್ತದೆಂದು ಭಾವಿಸಿದರೆ ಅದು ಅಪ್ರಾಯೋಗಿಕ, ’’ಎಂದು ಹೇಳುತ್ತಾರೆ. ಅವರು 1986ರ ಏಷ್ಯನ್ ಕ್ರೀಡಾಕೂಟದಲ್ಲಿ ಬೆಳ್ಳಿಪದಕವನ್ನು ಗೆದ್ದ ನಂತರ, ಸರ್ಕಾರವು ಅವರಿಗೆ 75,000 ರೂ. ಅರ್ಹ ನಗದು ಬಹುಮಾನ ನೀಡಿತು. ಆದರೆ ಕ್ರೀಡಾಕೂಟಕ್ಕೆ ಮುನ್ನವೇ ಹಣ ನೀಡುವುದಿಲ್ಲವೇಕೆ, ಹಾಗೆ ಮಾಡಿದ್ದರೆ ತಾವು ಉತ್ತಮ ತರಬೇತಿ ಪಡೆದು ಚಿನ್ನ ಗೆಲ್ಲುತ್ತಿದ್ದೆ?’’ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಾರೆ.

ಆ ರೀತಿಯ ಸಂಪ್ರದಾಯ ಈಗ ಸ್ವಲ್ಪ ಬದಲಾಗಿರಬಹುದು. ಸರ್ಕಾರ ಇಬ್ಬರು ಭಾರತೀಯ ಈಜುಪಟುಗಳಿಗೆ ವಿದೇಶಿ ತರಬೇತಿ ಕಾರ್ಯಕ್ರಮಗಳ ಪ್ರಾಯೋಜಕತ್ವಕ್ಕೆ 10 ಲಕ್ಷಗಳನ್ನು ಖರ್ಚು ಮಾಡಿದೆ. ಆದರೆ ಇದರಲ್ಲಿ ಉತ್ತರವಾದಿತ್ವವಿಲ್ಲವೆಂದು ಸಿಂಗ್ ಅಸಮಾಧಾನ ವ್ಯಕ್ತಪಡಿಸುತ್ತಾರೆ. ‘‘ ಅವರಷ್ಟೇ ಅರ್ಹತೆ ಹೊಂದಿರುವ ಇನ್ನೂ ಅನೇಕ ಈಜುಪಟುಗಳಿರುವಾಗ, ಅವರಿಬ್ಬರಿಗೆ ಮಾತ್ರ ಪ್ರಾಯೋಜಕತ್ವ ಏಕೆ ನೀಡಲಾಯಿತು‘‘ ಎಂದು ಪ್ರಶ್ನಿಸಿದ್ದಾರೆ. ಈ ಸಂಕಟವು ಇತರೆ ಕ್ರೀಡೆಗಳಲ್ಲೂ ತುಂಬಿಕೊಂಡಿದೆ. ಮಹಿಳೆಯ ಭಾರಎತ್ತುವ ಪಂದ್ಯದಲ್ಲಿ ಹಿರಿಯ ಕ್ರೀಡಾಳು ಕುಂಜುರಾಣಿ ದೇವಿ ಅವರನ್ನು 2000ನೇ ವರ್ಷದ ತಂಡದಿಂದ ಯಾವುದೇ ಕಾರಣ ನೀಡದೇ ಕೊನೆ ಗಳಿಗೆಯಲ್ಲಿ ತಂಡದಿಂದ ಕೈಬಿಡಲಾಯಿತು. ಕ್ರೀಡಾ ಒಕ್ಕೂಟಗಳಲ್ಲಿ ಇಣುಕಿರುವ ಪ್ರಾದೇಶಿಕ ಪೂರ್ವಗ್ರಹಗಳು ಮತ್ತು ವೈಯಕ್ತಿಕ ಆದ್ಯತೆಗಳು ಅಥ್ಲೀಟ್ ತಂಡದ ಆಯ್ಕೆಯಲ್ಲಿ ಪ್ರಾಬಲ್ಯ ಮೆರೆದಿವೆ.

ಭಾರತದ ಕ್ರೀಡಾ ಉತ್ಸಾಹಿಗಳಿಗೆ ಒಲಿಂಪಿಕ್ಸ್ ಕ್ರೀಡಾಕೂಟ ಪುಳಕಿತಗೊಳಿಸುವುದಿಲ್ಲ ಎನ್ನುವುದು ಸ್ಪಷ್ಟ. ಈ ಕಾರಣಗಳಿರುವಾಗ ಯಾರನ್ನು ದೂರುವುದು? ಒಲಿಂಪಿಕ್ ಕ್ರೀಡಾಕೂಟದಲ್ಲಿ ಗೆಲ್ಲಲೇಬೇಕು ಎನ್ನುವ ಮನೋಭಾವ ಬದಲಿಸಿಕೊಳ್ಳದೇ ಕೇವಲ ಭಾಗವಹಿಸಿದ್ದೇ ಹೆಗ್ಗಳಿಕೆ ಎನ್ನುವಂತೆ ಸ್ವತಃ ಬೆನ್ನುತಟ್ಟಿಕೊಂಡರೆ, ಭಾರತದ ಕ್ರೀಡಾಪಟುಗಳಿಗೆ ವಿದೇಶದಲ್ಲಿ ಸೋಲಿನ ರುಚಿ ಅನುಭವಿಸುವುದು ಮುಂದುವರಿಯುತ್ತದೆ. ಇದು ಒಂದು ರೀತಿಯಲ್ಲಿ ಟ್ರೆಡ್‌ಮಿಲ್‌‌ನಲ್ಲಿ ಹೆಜ್ಜೆ ಇರಿಸಿದ ಹಾಗೆ. ನಾವು ದಶಕಗಳ ಹಿಂದೆ ಇದ್ದ ಸ್ಥಳದಲ್ಲೇ ಈಗಲೂ ಹೆಣಗುತ್ತಿದ್ದೇವೆ. ನೀವು ಇದಕ್ಕೆ ಹೇಗೆ ವಿವರಣೆ ನೀಡುತ್ತೀರಿ: ಸಿಂಗ್ ಅವರು 14ವರ್ಷಗಳ ಹಿಂದೆ ಸ್ಥಾಪಿಸಿದ 100 ಮೀ ಮತ್ತು 200ಮೀ ಬಟರ್‌ಫ್ಲೈ ಈಜಿನಲ್ಲಿ ರಾಷ್ಟ್ರೀಯ ದಾಖಲೆಗಳನ್ನು ಈಗಲೂ ಉಳಿಸಿಕೊಂಡಿದ್ದಾರೆ.

ಆದಾಗ್ಯೂ, ಇದು ಸಿಂಗ್ ಅವರಿಗೆ ಹೆಮ್ಮೆಯ ವಿಷಯವೇನಲ್ಲ. ದೆಹಲಿಯ ತಾಲ್ಕತೋರಾ ಕ್ರೀಡಾಂಗಣದಲ್ಲಿ ಬೆಳಿಗ್ಗೆ ಮತ್ತು ಸಂಜೆಗಳು ತಂಡಕ್ಕೆ ತರಬೇತಿ ನೀಡುವುದರಲ್ಲಿ ಸಮಯ ಕಳೆಯುವ ಅವರು, ಈ ಮಧ್ಯೆ ಅವರ ಅತ್ತೆ (ಕಾಂಗ್ರೆಸ್ MP ) ಮತ್ತು ಪತ್ನಿ (ಏಷ್ಯನ್ ಕ್ರೀಡಾಕೂಟದ ಮಾಜಿ ಶೂಟರ್ (ಗುರಿಕಾರ್ತಿ) ಮತ್ತು ಮಹಾರಾಷ್ಟ್ರದ ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷೆ) ರಾಜಕೀಯ ವೃತ್ತಿಜೀವನದಲ್ಲಿ ತೊಡಗಿಕೊಳ್ಳಲು ನೆರವಾಗುತ್ತಿದ್ದಾರೆ. ‘‘ಇದು ನನ್ನ ಜೀವನ, ಈಗ ಅದನ್ನು ಬದಲಿಸಲು ಸಾಧ್ಯವಾಗುವುದಿಲ್ಲ, ಎಂದು ತಮ್ಮ ಒಂದು ವರ್ಷ ವಯಸ್ಸಿನ ಹೆಣ್ಣುಮಗುವನ್ನು ತೋಳಿನಲ್ಲಿ ಹಿಡಿದು, ನಿಯತಿವಾದಿಯಂತೆ ನುಡಿಯುತ್ತಾರೆ. ಆ ಮಗು ತನ್ನ ಸುತ್ತ ಡ್ಯಾಡಿ(ತಂದೆ)ಯ ಪದಕಗಳ ಹೊಳಪಿಲ್ಲದೇ ಬೆಳೆಯುತ್ತಿದೆ, ಆ ಪದಕಗಳು ಮುನಿರಿಕಾದ ಅವರ ತವರು ಮನೆಯಲ್ಲಿ ಹರಡಿಕೊಂಡು ಬಿದ್ದಿವೆ. ಅವರ ಅರ್ಜುನ ಪ್ರಶಸ್ತಿಯನ್ನು ಬೇರೆಲ್ಲೊ ಕಾನ್‌ಸ್ಟೇಬಲ್ (ಪೊಲೀಸ್ ಪೇದೆ) ಕಾಯುತ್ತಿರುವುದು ಇದು ಯಾವುದೂ ಸಿಂಗ್‌ಗೆ ಚಿಂತೆ ಉಂಟುಮಾಡಿದಂತೆ ಕಾಣುತ್ತಿಲ್ಲ

ಉಲ್ಲೇಖಗಳು[ಬದಲಾಯಿಸಿ]