ವಿಷಯಕ್ಕೆ ಹೋಗು

ಕ್ರಿಕೆಟ್‌ನ ನಿಯಮಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕ್ರಿಕೆಟ್ ನಿಯಮಗಳು ಮೆರಿಲಿಬೋನ್ ಕ್ರಿಕೆಟ್ ಕ್ಲಬ್ (MCC) ಸ್ಥಾಪಿಸಿದ ಕ್ರಿಕೆಟ್ ಆಟ ಆಡುವವರು ಜಗತ್ತಿನಾದ್ಯಂತ ಬಳಸಬಲ್ಲ ಸೂತ್ರಗಳ ಸಂಗ್ರಹವಾಗಿದ್ದು, ಇದು ಕ್ರಿಕೆಟ್‌ಅನ್ನು ವಿಶ್ವದಲ್ಲೆಲ್ಲಾ ಒಂದೇ ರೀತಿಯಲ್ಲಿ ಮತ್ತು ನ್ಯಾಯಯುತವಾಗಿ ಆಡಲು ಸಹಾಯಕವಾಗಿವೆ. ಸಧ್ಯದಲ್ಲಿ ಒಟ್ಟಾರೆ ೪೨ ನಿಯಮಗಳಿದ್ದು, ಇವು ಕ್ರೀಡೆಯನ್ನು ಆಡುವುದರಿಂದ ಹಿಡಿದು, ಆಟವನ್ನು ತಂಡವು ಯಾವ ರೀತಿ ಗೆಲ್ಲುತ್ತದೆ, ಬ್ಯಾಟ್ಸ್ ಮನ್ ಗಳು ಔಟ್ ಆಗುವುದು ಹೇಗೆ, ಆಡುವ ಪಿಚ್ ಅನ್ನು ಹೇಗೆ ತಯಾರಿಸಬೇಕು ಮತ್ತು ಹೇಗೆ ಸಂರಕ್ಷಿಸಬೇಕು, ಇತ್ಯಾದಿ ವಿಷಯಗಳ ಬಗ್ಗೆ ವಿಧಿವಿಧಾನಗಳನ್ನು ಸೂಚಿಸುತ್ತವೆ. MCC ಒಂದು ಖಾಸಗಿ ಕ್ಲಬ್ ಆಗಿದ್ದು, ಇದು ಇಂಗ್ಲೆಂಡ್ ನ ಲಂಡನ್ ನಲ್ಲಿದೆ ಹಾಗೂ ಈಗ ಅದು ಕ್ರಿಕೆಟ್ ಆಟದ ಆಡಳಿತವನ್ನು ನಡೆಸುವಂತಹ ಸಂಸ್ಥೆಯಾಗಿಲ್ಲ; ಆದಾಗ್ಯೂ ಇಂದಿಗೂ MCCಯೇ ಕ್ರಿಕೆಟ್ ನ ನಿಯಮಗಳ ಕಾಪಿರೈಟ್ (ಸ್ವಾಮ್ಯ) ಹೊಂದಿದೆ ಹಾಗೂ ಕೇವಲ MCC ಮಾತ್ರ ನಿಯಮಗಳನ್ನು ಬದಲಾಯಿಸುವ ಹಕ್ಕನ್ನು ಹೊಂದಿದೆ; ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಈ ಕ್ರೀಡೆಯನ್ನು ವಿಶ್ವಮಟ್ಟದಲ್ಲಿ ನಿಯಂತ್ರಿಸುವ ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ICC)ನೊಡನೆ ಚರ್ಚಿಸಿದ ನಂತರವೇ ನಿಯಮಗಳಲ್ಲಿ ಬದಲಾವಣೆಗಳನ್ನು ತರಲಾಗುತ್ತಿದೆ.

ಆಟವಾಡುವ ಕ್ರಮಗಳನ್ನು 'ಸೂತ್ರಗಳು' ಅಥವಾ 'ವಿಧೇಯಕಗಳು' ಎನ್ನದೆ 'ನಿಯಮಗಳು' ಎಂದು ಕರೆಯುವ ಕೆಲವೇ ಕ್ರೀಡೆಗಳಲ್ಲಿ ಕ್ರಿಕೆಟ್ ಒಂದಾಗಿದೆ. ಆದರೆ ಕೆಲವು ಸ್ಪರ್ಧೆಗಳಲ್ಲಿ ನಿಯಮಗಳನ್ನು ಬದಲಾಯಿಸಲು ಅಥವಾ ಬೇರೆ ಕ್ರಮದಲ್ಲಿ ಅಳವಡಿಸಿಕೊಳ್ಳಲು ಒಪ್ಪಂದಗಳನ್ನು ಮಾಡಿಕೊಳ್ಳಬಹುದು.

ಇತಿಹಾಸ

[ಬದಲಾಯಿಸಿ]

ಕ್ರಿಕೆಟ್ ನ ಮೂಲ ಚರ್ಚಾಸ್ಪದವಾಗಿಯೇ ಇದೆ, ಆದರೆ ಚೆಂಡನ್ನು ಬ್ಯಾಟ್ ಅಥವಾ ಕೋಲಿನಿಂದ ಹೊಡೆಯುವಂತಹ ಹಲವಾರು ಕ್ರೀಡೆಗಳು ಮತ್ತು ಆಟಗಳ ಪೈಕಿ ಯಾವುದೋ ಒಂದರಿಂದ ಪ್ರಾಯಶಃ ಈ ಕ್ರೀಡೆಯ ಉಗಮವಾಗಿದೆ. (ಹಿಸ್ಟರಿ ಆಫ್ ಕ್ರಿಕೆಟ್ ನೋಡಿ). ಹದಿನೆಂಟನೆಯ ಶತಮಾನದಲ್ಲಿ, ವಿಶೇಷವಾಗಿ ಬ್ರಿಟಿಷ್ ದೊರೆಗಳ ಮಟ್ಟದಲ್ಲಿ, ಅದು ಬಾಜಿ ಕಟ್ಟುವ ಆಟವಾಗಿ ವಿಸ್ತೃತಗೊಂಡು ಜನಪ್ರಿಯತೆ ಪಡೆಯಿತು. ಬಹಳಷ್ಟು ಹಣವನ್ನು ಬಾಜಿ ಕಟ್ಟುವ ಈ ಆಟದ ನಿಯಂತ್ರಣಕ್ಕಾಗಿ ಮೊದಮೊದಲ ನಿಯಮಗಳನ್ನು ಆ ಪರಿಸ್ಥಿತಿಗೆ ತಕ್ಕಂತೆ ರೂಪಿಸಲಾಯಿತು. ೧೭೪೪ರಲ್ಲಿ ಆರ್ಟಿಲರಿ ಮೈದಾನವನ್ನು ಕ್ರಿಕೆಟ್ ಆಡಲು ಬಳಸಿದ 'ನೋಬಲ್ ಮೆನ್ ಮತ್ತು ಜೆಂಟಲ್ ಮೆನ್' ಎಂದು ಕರೆಸಿಕೊಳ್ಳುವವರು ಕ್ರಿಕೆಟ್ ನ ಮೊಟ್ಟಮೊದಲ ಹಾಗೂ ಇಂದಿಗೂ ದೊರೆಯುವಂತಿರುವ ನಿಯಮಗಳನ್ನು ರೂಪಿಸಿದರು. ೧೭೫೫ ರಲ್ಲಿ ಈ ನಿಯಮಗಳನ್ನು 'ಹಲವಾರು ಕ್ರಿಕೆಟ್ ಕ್ಲಬ್ ಗಳು, ಪ್ರಮುಖವಾಗಿ ಪಾಲ್ ಮಾಲ್ ನಲ್ಲಿನ ಸ್ಟಾರ್ ಮತ್ತು ಗಾರ್ಟರ್' ಕ್ಲಬ್ ಗಳು ಮರುಪರಿಶೀಲಿಸಿದವು ಹಾಗೂ ನಂತರ ಕೆಂಟ್, ಹ್ಯಾಂಪ್ ಷೈರ್, ಸರ್ರೇ, ಸಸೆಕ್ಸ್, ಮಿಡ್ಲ್ ಸೆಕ್ಸ್ ಮತ್ತು ಲಂಡನ್ ನ ನೋಬಲ್ ಮೆನ್ ಮತ್ತು ಜೆಂಟನ್ ಮನ್ ಗಳು ಸ್ಟಾರ್ ಮತ್ತು ಗಾರ್ಟರ್ ನಲ್ಲಿ" ೧೭೭೪ ರಲ್ಲಿ ಸೇರಿ ಈ ವಿಧೇಯಕಗಳನ್ನು ಪುನರಾವರ್ತಿಸಿದರು. ಈ ನಿಉಮಗಳನ್ನು ಮುದ್ರಿತ ರೂಪದಲ್ಲಿ ೧೭೭೫ ರಲ್ಲಿ ಪ್ರಕಟಿಸಲಾಯಿತು ಮತ್ತು ಈ ನಿಯಮಗಳಿಗೆ ಮತ್ತಷ್ಟು ಪುನರಾವತಱನೆಗಳು, ತಿದ್ದುಪಡಿಗಳನ್ನು ೧೭೮೬ ರಲ್ಲಿ ಇದೇ ರೀತಿ ಸೇರಿದ ಕೆಂಟ್, ಹ್ಯಾಂಪ್ ಷೈರ್, ಸರ್ರೇ, ಸಸೆಕ್ಸ್, ಮಿಡಲ್ ಸೆಕ್ಸ್ ಮತ್ತು ಲಂಡನ್ ನ ನೋಬಲ್ ಮೆನ್ ಮತ್ತು ಜೆಂಟಲ್ ಮನ್ ಗಳ ಮಂಡಳಿಯು ಕೈಗೊಂಡಿತು.

ಆದರೆ, ಈ ನಿಯಮಗಳನ್ನು ಜಾಗತಿಕವಾಗಿ ಅನುಸರಿಸಲಾಗಲಿಲ್ಲ, ವಿವಿಧ ಆಟಗಳನ್ನು ವಿವಿಧ ಕಟ್ಟಳೆಗಳಿಗೆ ಅನುಸಾರವಾಗಿ ಆಡುವುದು ಮುಂದುವರಿಯಿತು. ೩೦ ಮೇ, ೧೭೮೮ ರಂದು ಮೆರಿಲಿಬೋನ್ ಕ್ರಿಕೆಟ್ ಕ್ಲಬ್ ಎಂಬ, ಒಂದು ವರ್ಷದ ಹಿಂದೆ ಪ್ರಮುಖ ನೋಬಲ್ ಮೆನ್ ಮತ್ತು ಜೆಂಟಲ್ ಮನ್ ಗಳು ಸೇರಿ ಸ್ಥಾಪಿಸಿದ ಕ್ರಿಕೆಟ್ ಸಂಸ್ಥೆಯು ತನ್ನ ಮೊದಲ ನಿಯಮಾವಳಿಗಳ ಹೊತ್ತಿಗೆಯನ್ನು ಹೊರತಂದಿತು. MCC ಯ ಈ ನಿಉಮಾವಳಿಗಳ ಪ್ರಕಾರವು ಜಗದಾದ್ಯಂತ ತಕ್ಷಣವೇ ಅಂಗೀಕೃತವಾಗದಿದ್ದರೂ, ಅಥವಾ ಕೂಡಲೆ ಅನುಷ್ಠಾನಕ್ಕೆ ತರಲಿಲ್ಲವಾದರೂ, ಈ ನಿಯಮಾವಳಿಗಳ ಮುಂದುವರಿದ ಅಂಶಗಳೇ ಇಂದಿನ ಕ್ರೀಡೆಯನ್ನು ನಿಯಂತ್ರಿಸುತ್ತಿದೆ. ೧೮೦೯ ರಲ್ಲಿ ಮಾಡಿದ ಪ್ರಮುಖ ಬದಲಾವಣೆಯ ರೀತ್ಯಾ ಚೆಂಡಿನ ತೂಕವು ೫ ಮತ್ತು ೬ ಔನ್ಸ್ ಗಳವರೆಗೆ (೧೪೨ ರಿಂದ ೧೭೦ ಗ್ರಾಂ)ಇರಬಹುದುಎಂದಿದ್ದುದನ್ನು ೫.೫ ಮತ್ತು ೫.೭೫ ಔನ್ಸ್ ಗಳು(೧೫೬ ರಿಂದ ೧೬೩ ಗ್ರಾಂ) ವರೆಗೆ ಇರಬಹುದೆಂದು ಬದಲಾಯಿಸಲಾಯಿತು ಹಾಗೂಕ್ರಿಕೆಟ್ ಬ್ಯಾಟ್ ನ ಅಗಲವನ್ನು ಮೊದಲ ಬಾರಿಗೆ ಇಂತಿಷ್ಟೇ ಎಂದು ನಿಖರಗೊಳಿಸಲಾಯಿತು. ಬ್ಯಾಟ್ಸ್ ಮನ್ ಹೊಡೆದ ಚೆಂಡು ಎದುರಿನ ವಿಕೆಟ್ ಗೆ ಬಡಿದಾಗ ರನ್ ಗಿಟ್ಟಿಸಿಕೊಳ್ಳುವುದಕ್ಕೆ ಅನುವಾಗಿದ್ದ ನಿಯಮವನ್ನು ತೆಗೆದುಹಾಕರಾಯಿತು ಮತ್ತು ಗೂಟ(ಸ್ಟಂಪ್)ಗಳ ಉದ್ದವನ್ನು ೨೨ ರಿಂದ ೨೪ ಇಂಚ್ ಗಳಿಗೆ ಏರಿಸಲಾಯಿತುಹಾಗೂ ಬೇಲ್ಸ್ ಅನ್ನು ೬ ರಿಂದ ೭ ಇಂಚ್ ಗಳಿಗೆ ಏರಿಸುವುದರ ಮೂಲಕ ಬೋಲರ್ ಗಳಿಗೆ ಹೆಚ್ಚು ನೆರವು ನೀಡಿದಂತಾಯಿತು; ಅಂಪೈರುಗಳ ಪ್ರಾಮುಖ್ಯತೆಯನ್ನು ಮತ್ತಷ್ಟು ಹೆಚ್ಚಿಸಲಾಯಿತು. ಕಡೆಯದಾಗಿ, ಬ್ಯಾಟ್ಸ್ ಮನ್ ನನ್ನು ಔಟ್ ಮಾಡುವ ನವೀನ ವಿಧಾನವೊಂದನ್ನು ಪರಿಚಯಿಸಲಾಯಿತು. ಹಿಂದಿನ ದಿನಗಳಲ್ಲಿ, ಕ್ರಿಕೆಟ್ ನಲ್ಲಿ ಗಟ್ಟಿಯಾದ ಚೆಂಡನ್ನು ಬಳಸುತ್ತಿದ್ದುದರಿಂದಲೂ ಮತ್ತು ಲೆಗ್-ಪ್ಯಾಡ್ ಗಳನ್ನು ಬಳಸುತ್ತಿರಲಿಲ್ಲವಾದುದರಿಂದಲೂ ಆಟಗಾರರು ತಮ್ಮ ಕಾಲುಗಳನ್ನು ವಿಕೆಟ್ ನಿಂದ ದೂರವಿರಿಸಿಕೊಂಡೇ ಬ್ಯಾಟಿಂಗ್ ಮಾಡುತ್ತಿದ್ದರು. ಬ್ಯಾಟ್ಸ್ ಮನ್ ಗಳು ಪ್ಯಾಡ್ ಗಳನ್ನು ಬಳಸಲಾರಂಭಿಸಿದ ನಂತರ, ಚೆಂಡು ವಿಕೆಟ್ ಗೆ ತಗುಲಿ ಅವರು ಬೋಲ್ಡ್ ಆಗುವುದನ್ನು ತಪ್ಪಿಸಿಕೊಳ್ಳಲು ತಮ್ಮ ಪ್ಯಾಡ್ ಕಟ್ಟಿದ ಕಾಲುಗಳನ್ನು ಬಳಸಿ ವಿಕೆಟ್ ಗೆ ಚೆಂಡು ಹೋಗುವುದನ್ನು ತಡೆಯಲು ವಿಕೆಟ್ ಗೆ ಅಡ್ಡಲಾಗಿ ನಿಲ್ಲಲಾರಂಭಿಸಿದರು. ಆದ್ದರಿಂದ "ಲೆಗ್ ಬಿಫೋರ್ ವಿಕೆಟ್" ನಿಯಮವನ್ನು ಪರಿಚಯಿಸಲಾಯಿತು; ಈ ನಿಯಮದ ಪ್ರಕಾರ ತನ್ನ ಕಾಲುಗಳಿಂದ ವಿಕೆಟ್ ನತ್ತ ಸಾಗುವ ಚೆಂಡನ್ನು ತಡೆದ ಬ್ಯಾಟ್ಸ್ ಮನ್ ಅನ್ನು ಔಟ್ ಎಂದು ಘೋಷಿಸಲಾಗುತ್ತದೆ.

೧೮೨೯ ರಲ್ಲಿ ಸ್ಟಂಪ್ ಗಳ ಉದ್ದವು 24 to 27 inches (610 to 690 millimetres) ಕ್ಕಿಂತಲೂ ಹೆಚ್ಚಾಯಿತು ಮತ್ತು ಬೇಲ್ಸ್ ಗಳ ಉದ್ದವೂ 7 to 8 inches (180 to 200 millimetres) ಗಿಂತಲೂ ಹೆಚ್ಚಾಯಿತು; ಇದೂ ಸಹ ಬೋಲರ್ ಗಳ ಅನುಕೂಲಕ್ಕೆಂದೇ ಮಾಡಿದ ಬದಲಾವಣೆ. ಮೊಟ್ಟಮೊದಲ ಬಾರಿಗೆ ಸ್ಟಂಪ್ ಗಳ ದಪ್ಪ ಎಷ್ಟಿರಬೇಕೆಂಬುದನ್ನು ಉಲ್ಲೇಖಿಸಲಾಯಿತು. ೧೯ ಮೇ ೧೮೩೫ ರಂದು MCC ಸಮಿತಿಯು ಹೊಸ ನಿಯಮಗಳ ಸಂಹಿತೆಯನ್ನು ಪರಿಚಯಿಸಿತು ಮತ್ತು ಇನ್ನೊಂದು ಸಂಹಿತೆಯನ್ನು ೨೧ ಏಪ್ರಿಲ್ ೧೮೮೪ ರಂದು ಪರಿಚಯಿಸಿತು. ೧೮೮೪ ರಲ್ಲಿ ಮೊದಲ ಬಾರಿಗೆ ತಂಡದಲ್ಲಿರಬೇಕಾದ ಸದಸ್ಯರ ಸಂಖ್ಯೆಯನ್ನು ನಿರ್ದಿಷ್ಟಗೊಳಿಸಲಾಯಿತು (ತಂಡಕ್ಕೆ ಹನ್ನೊಂದು ಜನರಂತೆ), ಹಾಗೂ ಚೆಂಡಿನ ಅಳತೆಯನ್ನೂ ಮೊದಲ ಬಾರಿಗೆ ನಿಷ್ಕರ್ಷೆಗೊಳಿಸಲಾಯಿತು. ಫಾಲೋ-ಆನ್ ನಿಯಮವನ್ನು ಪರಿಚಯಿಸಲಾಯಿತು. ಇದನ್ನು ಪರಿಚಯಿಸಲು ಕಾರಣವೆಂದರೆ ಪಂದ್ಯವನ್ನು ಗೆಲ್ಲಬೇಕಾದರೆ ಒಂದು ತಂಡವು ತನ್ನ ಎದುರಾಳಿ ತಂಡವನ್ನು ಎರಡು ಬಾರಿ ಆಲೌಟ್ ಮಾಡಬೇಕಿತ್ತು. ಮೊದಲು ಬ್ಯಾಟ್ ಮಾಡಿದ ತಂಡವು ಚೆನ್ನಾಗಿ ರನ್ ಗಳಿಸಿ ಪಂದ್ಯದಲ್ಲಿ ಮೇಲುಗೈ ಸಂಪಾದಿಸಿದ್ದರೂ, ಅದು ತಾನು ಎರಡನೆಯ ಬಾರಿಯೂ ಸಂಪೂರ್ಣವಾಗಿ ಔಟ್ ಆಗುವವರೆಗೆ ಕಾದಿದ್ದು, ನಂತರ ಎದುರಾಳಿ ತಂಡವನ್ನು ಆಲೌಟ್ ಮಾಡುವ ಯತ್ನ ಮಾಡಬೇಕಾಗಿತ್ತು. ಕ್ರಿಕೆಟ್ ಸಮಯ-ನಿಯಂತ್ರಿತ ಆಟವಾದುದರಿಂದ, ತನ್ನ ಎದುರಾಳಿ ತಂಡಕ್ಕಿಂತಲೂ ಬಹಳವೇ ಮಿಂಚಿದ ತಂಡವು ಪಂದ್ಯ ಗೆಲ್ಲುವುದರ ಬದಲು, ಸಮಯಾಭಾವದಿಂದ ಡ್ರಾ ಮಾಡಿಕೊಳ್ಳುವ ಸಂದರ್ಭವೇ ಹೆಚ್ಚಾಗಿ ಒದಗಿಬರುತ್ತಿತ್ತು. ಮೊದಲಿಗೆ ಪರಿಚಯಿಸಿದ ಫಾಲೋ-ಆನ್ ನಿಯಮವು ದೋಷಭರಿತವಾಗಿತ್ತು, ಏಕೆಂದರೆ ಒಂದು ತಂಡವು ಮತ್ತೊಂದು ತಂಡಕ್ಕಿಂತಲೂ ಸ್ಕೋರ್ ನಲ್ಲಿ ಹಿಂದೆ ಇದ್ದಾಗ ಮಾತ್ರ ಫಾಲೋ-ಆನ್ ಪಡೆಯಬಹುದಾಗಿತ್ತು. ಇದನ್ನು ಕೆಲವು ತಂಡಗಳು ತಮ್ಮ ಉಪಯೋಗಕ್ಕೆ ಬಳಸಿಕೊಂಡವು; ತಂಡವು ತನ್ನ ಕಡೆಯ ವಿಕೆಟ್ ಗಳನ್ನು ಬೇಕೆಂದೇ ಕಳೆದುಕೊಂಡು, ಎದುರಾಳಿಯ ಸ್ಕೋರಿಗಿಂಗಲೂ ಕಡಿಮೆಗೆ ಔಟ್ ಆಗಿ, ಫಾಲೋ-ಆನ್ ಪಡೆದು ಬ್ಯಾಟ್ ಮಾಡುವುದರ ಮೂಲಕ ಬಿಗಡಾಯಿಸುತ್ತಿರುವ ಪಿಚ್ ನಲ್ಲಿ ಕೊನೆಯಲ್ಲಿ ಬ್ಯಾಟ್ ಮಾಡುವ ಅಪಾಯದಿಂದ ಮತ್ತು ಸಂಕಷ್ಟದಿಂದ ಪಾರಾಗುತ್ತಿದ್ದವು. ನಂತರ ಫಾಲೋ-ಆನ್ ನಿಯಮವನ್ನು ಬದಲಾಯಿಸಿ ಸಾಕಷ್ಟು ರನ್ ಗಳಿಂದ ಮುಂದೆ ಇರುವ ತಂಡವು ತನ್ನ ಎದುರಾಳಿ ತಂಡದ ಮೇಲೆ ಫಾಲೋ-ಆನ್ ಹೇರುವ ಅಥವಾ ಹೇರದಿರುವ ನಿರ್ಣಯವನ್ನು ತೆಗೆದುಕೊಳ್ಳಲು ಅನುವು ಮಾಡಿಕೊಟ್ಟಿತು.

೧೯೪೭ ರ ಮೇ ೭ ರಂದು ಒಂದು ಹೊಸ ಸಂಹಿತೆಯನ್ನು MCC ಸಮ್ಮತಿಸಿತು. ೧೯೭೯ ರಲ್ಲಿ, ಈ ೧೯೪೭ ರ ಸಂಹಿತೆಗೆ ಹಲವಾರು ಪುಟ್ಟ ಬದಲಾವಣೆಗಳನ್ನು ಮಾಡಿ, ಅದೇ ವರ್ಷದ ನವೆಂಬರ್ ೨೧ ರಂದು MCC ಯ ವಿಶೇಷ ಸರ್ವಸದಸ್ಯರ ಸಭೆಯಲ್ಲಿ ಒಂದು ಹೊಸ ಸಂಹಿತೆಯನ್ನು ಅನುಮೋದಿಸಲಾಯಿತು. ಇದನ್ನು ೧೯೮೦ ರ ಸಂಹಿತೆ ಎಂದು ಕರೆಯಲಾಗುತ್ತದೆ. ಬದಲಾವಣೆಗಳ ಪೈಕಿ, ಎಲ್ಲೆಲ್ಲಿ ಅಳತೆಗಳನ್ನು ನಮೂದಿಸಬೇಕಾಗುವುದೋ ಅಲ್ಲೆಲ್ಲಾ ಮೆಟ್ರಿಕ್ ಯುನಿಟ್ ಗಳನ್ನು ಬಳಸಲಾಗಿದೆ.

೧೯೯೨ ರಲ್ಲಿ ೧೯೮೦ ರ ಸಂಹಿತೆಯ ಎರಡನೆಯ ಆವೃತ್ತಿಯನ್ನು ಬಿಡುಗಡೆ ಮಾಡಲಾಯಿತು. ಮೇ ೩, ೨೦೦೦ ದಂದು ಸ್ಪಿರಿಟ್ ಆಫ್ ಕ್ರಿಕೆಟ್ (ಕ್ರಿಕೆಟ್ ನ ನಿಜಾರ್ಥ) ನ ಪ್ರಸ್ತಾಪವನ್ನು ಮೊದಲ ಬಾರಿಗೆ ಅಳವಡಿಸಲಾಯಿತು ಮತ್ತು ಮೇಲ್ಕಂಡ ದಿನದಂದು ಅನುಮೋದಿಸಲಾಯಿತು. ಈ ಸಂಹಿತೆಯನ್ನು ಸರಳ ಇಂಗ್ಲಿಷ್ ನಲ್ಲಿ ಬರೆಯಲಾಯಿತು ಹಾಗೂ ಹಿಂದಿನ ಸಂಹಿತೆಗಳಿಗಿಂತಲೂ ಇದು ಹೆಚ್ಚು ಅರ್ಥವಾಗುವ ರೀತಿಯಲ್ಲಿದೆ. ಓವರ್ ನ ಎಸೆತಗಳ ಸಂಖ್ಯೆಯನ್ನು ಅಧಿಕೃತವಾಗಿ ಎಲ್ಲಾ ಪಂದ್ಯಗಳಲ್ಲೂ ಆರೇ ಇರಬೇಕೆಂದು ದೃಢೀಕರಿಸಲಾಯಿತು, ವಾಸ್ತವವಾಗಿ ಓವರ್ ಗೆ ಆರು ಬಾಲ್ ಗಳೆಂಬುದು ೨೦ ವರ್ಷಗಳಿಗೂ ಹೆಚ್ಚಿನ ಕಾಲದಿಂದ ರೂಢಿಯಲ್ಲಿದ್ದಿತು. ೨೦೦೩ ರಲ್ಲಿ ೨೦೦೦ ದ ಸಂಹಿತೆಯ ಎರಡನೆಯ ಆವೃತ್ತಿಯನ್ನು ಬಿಡುಗಡೆ ಮಾಡಲಾಯಿತು ಮತ್ತು ಇದರಲ್ಲಿ ೨೦೦೦ ದ ಸಂಹಿತೆಯಲ್ಲಿನ ಕೆಲವು ಅಳವಡಿಕೆಗಳನ್ನು ಅನುಷ್ಠಾನಗೊಳಿಸಿದಾಗ ಕಂಡುಬಂದ ಕೆಲವು ಅಂಶಗಳ ಅನಾನುಕೂಲತೆಗಳನ್ನು ನಿವಾರಿಸುವ ತಿದ್ದುಪಡಿಗಳಿದ್ದವು.

೧೮೨೯ ರಲ್ಲಿ ಮೊದಲ ಬಾರಿಗೆ ಚೆಂಡನ್ನು ಎಸೆಯುವುದನ್ನು ನಿಯಮಿತ ಗೊಳಿಸಲಾಯಿತು. ೧೮೬೪ ರಲ್ಲಿ ಓವರ್ ಆರ್ಮ್ ಬೋಲಿಂಗ್ (ಭುಜದ ಮೇಲಿನಿಂದ ಕೈಯನ್ನು ತಂದು ಚೆಂಡನ್ನು ಎಸೆಯುವಿಕೆ) ಅನ್ನು ಒಪ್ಪಿಕೊಳ್ಳಲಾಯಿತು.

೧೮೮೯ ರಲ್ಲಿ ಓವರ್ ನ ದೀರ್ಘತೆಯು ನಾಲ್ಕು ಎಸೆತಗಳಿಂದ ಐದು ಎಸೆತಗಳಿಗೆ ಏರಿತು. ೧೯೦೦ ರಲ್ಲಿ ಓವರ್ ಎಂದರೆ ಆರು ಎಸೆತಗಳು ಎಂಬುದು ಜಾರಿಗೆ ಬಂದಿತು. ೧೯೨೨ ರಲ್ಲಿ ಓವರ್ ನ ದೀರ್ಘತೆಯಲ್ಲಿ ವ್ಯತ್ಯಾಸಗಳನ್ನು ಹೊಂದಲು ಅನುಮತಿಸಲಾಯಿತು (ಆಸ್ಟ್ರೇಲಿಯಾದಲ್ಲಿ ಓವರ್ ಒಂದಕ್ಕೆ ಎಂಟು ಎಸೆತಗಳು ಎಂಬುದನ್ನು ಒಪ್ಪಲಾಯಿತು). ೧೯೪೭ ರ ಸಂಹಿತೆಯು ಓವರ್ ನಲ್ಲಿ ಆರು ಅಥವಾ ಎಂಟು ಎಸೆತಗಳಿರಬಹುದೆಂದು ತಂಡಗಳ ನಾಯಕರು "ಮೊದಲೇ ಒಪ್ಪಂದ ಮಾಡಿಕೊಂಡು" ಆಡಬಹುದೆಂದು ಘೋಷಿಸಿತು.

ಇಂದಿನ ನಿಯಮಗಳು

[ಬದಲಾಯಿಸಿ]

ಕ್ರಿಕೆಟ್ ಅನ್ನು ನಡೆಸುವ ಕಟ್ಟಳೆಗಳನ್ನು ರಚಿಸುವ ಸಂಸ್ಥೆಯೇ ಮೆರಿಲಿಬೋನ್ ಕ್ರಿಕೆಟ್ ಕ್ಲಬ್. ಈ ನಿಯಮಾವಳಿಗಳು ಎಲ್ಲಾ ಎರಡು ಇನಿಂಗ್ಸ್ ಗಳ ಪಂದ್ಯಗಳಿಗೂ ಅನ್ವಯಿಸಬೇಕೆಂಬುದು ಅದರ ಆಶಯ. ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ "ಸ್ಟಾಂಡರ್ಡ್ ಪ್ಲೇಯಿಂಗ್ ಕಂಡೀಷನ್ಸ್ ಫಾರ್ ಟೆಸ್ಟ್ ಮ್ಯಾಚಸ್" ಮತ್ತು "ಸ್ಟಾಂಡರ್ಡ್ ಪ್ಲೇಯಿಂಗ್ ಕಂಡೀಷನ್ಸ್ ಫಾರ್ ಒನ್ ಡೇ ಇಂಟರ್ನ್ಯಾಷನಲ್ಸ್" ಎಂಬ ಪಂದ್ಯಗಳನ್ನಾಡಲು ಅನುಸರಿಸಬೇಕಾದ ಕಟ್ಟಳೆಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಕ್ರಿಕೆಟ್ ನಿಯಮಗಳಿಗೆ ಪುಷ್ಟಿ ನೀಡಿದೆ. ಅಂತೆಯೇ. ಪ್ರತಿ ಕ್ರಿಕೆಟ್ ಆಡುವ ದೇಶವೂ ತನ್ನ ದೇಶದಲ್ಲಿ ಆಡುವ ಸ್ವದೇಶಿ ಪಂದ್ಯಗಳನ್ನು ನಿಯಂತ್ರಿಸಲು ಆಡುವ ನಿಯಮಗಳನ್ನು ಅಳವಡಿಸಿಕೊಂಡಿದೆ. ಏಕದಿವಸೀಯ, ನಿಯಮಿತ ಓವರ್ ಗಳ ಕ್ರಿಕೆಟ್ (ಟ್ವೆಂಟಿ೨೦ ಯನ್ನೂ ಒಳಗೊಂಡಂತೆ) ಪಂದ್ಯಗಳನ್ನು ಈ ನಿಯಮಗಳು ಅನುಮತಿಸುತ್ತವೆ; ಪ್ರತಿ ತಂಡಕ್ಕೆ ಇಂತಿಷ್ಟು ಇನಿಂಗ್ಸ್ (ಒಂದು ಅಥವಾ ಎರಡು), ಪ್ರತಿ ಇನಿಂಗ್ಸ್ ಗೆ ಗರಿಷ್ಠ ಇಂತಿಷ್ಟು ಓವರ್ ಗಳು ಅಥವಾ ಇಂತಿಷ್ಟು ಗರಿಷ್ಠ ಸಮಯ ಎಂದು ಈ ನಿಯಮಗಳು ಸೂಚಿಸುತ್ತವೆ.

ಈ ನಿಯಮಗಳು ಮೆಟ್ರಿಕ್ ಅಳತೆಗಳನ್ನು ಹೊಂದುವುದಲ್ಲದೆ ಮೂಲದಲ್ಲಿದ್ದ ಇಂಪೀರಿಯಲ್ ಯುನಿಟ್ ಗಳನ್ನೂ ಹಾಗೆಯೇ ಉಳಿಸಿಕೊಂಡಿವೆ.

ಈ ನಿಯಮಗಳು ಮುನ್ನುಡಿ, ಪ್ರಸ್ತಾವನೆ, ನಲವತ್ತೆರಡು ನಿಯಮಗಳು, ಮತ್ತು ನಾಲ್ಕು ಅನುಬಂಧಗಳಾಗಿ ವಿಂಗಡಿತವಾಗಿವೆ. ಮುನ್ನುಡಿಯಲ್ಲಿ ಮೆರಿಲಿಬೋನ್ ಕ್ರಿಕೆಟ್ ಕ್ಲಬ್ ಮತ್ತು ನಿಯಮಗಳ ಇತಿಹಾಸಕ್ಕೆ ಸಂಬಂಧಿಸಿದ ವಿಷಯಗಳಿವೆ. ಪ್ರಸ್ತಾವನೆಯು ಇದಕ್ಕೆ ಹೊಸ ಸೇರ್ಪಡೆಯಾಗಿದದು ಇದರಲ್ಲಿ "ಕ್ರಿಕೆಟ್ ನ ನಿಜಾರ್ಥ" (ಕ್ರಿಕೆಟ್ ಯಾವ ಮನೋಭಾವದಲ್ಲಿ ಆಡಬೇಕೆಂಬುದು)ಕ್ಕೆ ಸಂಬಂಧಿಸಿದ ವಿಷಯಗಳಿವೆ. ದಿನೇ ದಿನೇ ಹೆಚ್ಚುತ್ತಿರುವ ಅಸಭ್ಯ ನಡವಳಿಕೆಗಳನ್ನು ನಿಯಂತ್ರಿಸಲು ಈ ನಿಯಮವನ್ನು ಪರಿಚಯಿಸಲಾಯಿತು.

ಕೆಟ್ಟ ಬೆಳಕು (ಮಬ್ಬು ಬೆಳಕು), ಟಾಸ್, ಕ್ರಿಕೆಟ್ ನ ನಿಜಾರ್ಥ, ಅಭ್ಯಾಸದ ಅವಧಿಗಳು, ಫೀಲ್ಡಿಂಗ್ ಕಸರತ್ತುಗಳು ಮತ್ತು ವ್ಯಾಯಾಮಗಳು, ಮತ್ತು ಅಪರೂಪದ ಔಟ್ ಆಗುವ ರೀತಿಗಳನ್ನು ಕುರಿತು ಎಂಟು ತಿದ್ದುಪಡಿಗಳನ್ನು ಸೆಪ್ಟೆಂಬರ್ ೩೦, ೨೦೧೦ ರಂದು ಮಾಡಲಾಯಿತು ಹಾಗೂ ಇವು ಅಕ್ಟೋಬರ್ ೧, ೨೦೧೦ ರಿಂದ ಜಾರಿಗೆ ಬಂದವು. ಎಲ್ಲಾ ಇತ್ತೀಚಿನ ತಿದ್ದುಪಡಿಗಳನ್ನು ಇಲ್ಲಿArchived 2013-07-09 ವೇಬ್ಯಾಕ್ ಮೆಷಿನ್ ನಲ್ಲಿ. ಓದಬಹುದು.

ನಿಯಮಗಳೇ ಈ ಕೆಳಕಂಡ ವಿಷಯಗಳ ಬಗ್ಗೆ ಪ್ರಸ್ತಾಪ ಮಾಡುತ್ತವೆ:

ಆಟಗಾರರು ಮತ್ತು ಅಧಿಕಾರಿಗಳು

[ಬದಲಾಯಿಸಿ]

ಮೊದಲ ನಾಲ್ಕು ನಿಯಮಗಳು ಆಟಗಾರರು, ತೀರ್ಪುಗಾರರು ಮತ್ತು ಸ್ಕೋರರ್ ಗಳಿಗೆ ಸಂಬಂಧಿತವಾಗಿವೆ.

ನಿಯಮ ೧: ಆಟಗಾರರು. ಒಂದು ಕ್ರಿಕೆಟ್ ತಂಡದಲ್ಲಿ, ನಾಯಕನೂ ಸೇರಿದಂತೆ, ಒಟ್ಟು ಹನ್ನೊಂದು ಆಟಗಾರರಿರುತ್ತಾರೆ. ಅಧಿಕೃತ ಪಂದ್ಯಗಳ ಹೊರತಾದ ಪಂದ್ಯಗಳಲ್ಲಿ ತಂಡಗಳು ಹನ್ನೊಂದಕ್ಕಿಂತಲೂ ಹೆಚ್ಚಿನ ಸದಸ್ಯರನ್ನು ತಂಡದಲ್ಲಿ ಸೇರಿಸಿಕೊಳ್ಳಲು ಪರಸ್ಪರ ಒಪ್ಪಬಹುದು, ಆದರೆ ಹನ್ನೊಂದಕ್ಕಿಂತಲೂ ಹೆಚ್ಚು ಮಂದಿ ಕ್ಷೇತ್ರರಕ್ಷಣೆಯಲ್ಲಿ ಭಾಗವಹಿಸುವಂತಿಲ್ಲ.

ನಿಯಮ ೨: ಬದಲಿ ಆಟಗಾರರು. ಕ್ರಿಕೆಟ್ ನಲ್ಲಿ ಗಾಯಗೊಂಡ ಕ್ಷೇತ್ರರಕ್ಷಕನ ಸ್ಥಾನದಲ್ಲಿ ಬದಲಿ ಆಟಗಾರನನ್ನು ಕರೆದುಕೊಳ್ಳಬಹುದು. ಆದರೆ ಬದಲಿ ಆಟಗಾರನು ಬ್ಯಾಟಿಂಗ್ ಮತ್ತು ಬೋಲಿಂಗ್ ಮಾಡುವಂತಿಲ್ಲ, ವಿಕೆಟ್ ಕೀಪಿಂಗ್ ಮಾಡುವಂತಿಲ್ಲ ಹಾಗೂ ನಾಯಕನಾಗಿ ವರ್ತಿಸುವಂತಿಲ್ಲ. ಮೂಲ ಆಟಗಾರನು, ಚೇತರಿಸಿಕೊಂಡಿದ್ದ ಪಕ್ಷದಲ್ಲಿ, ಮೈದಾನಕ್ಕೆ ಮರಳಬಹುದು. ಓಡಲು ಸಾಧ್ಯವಾಗದ ಬ್ಯಾಟ್ಸ್ ಮನ್ ಬೇಕಾದರೆ ರನ್ನರ್ ಅನ್ನು ಹೊಂದಬಹುದು, ಬ್ಯಾಟ್ಸ್ ಮನ್ ಬ್ಯಾಟಿಂಗ್ ಮಾಡುವಾಗ ಓಡಬೇಕಾದ ರನ್ ಗಳನ್ನು ರನ್ನರ್ ಓಡತಕ್ಕದ್ದು. ಪರ್ಯಾಯವಾಗಿ, ಬ್ಯಾಟ್ಸ್ ಮನ್ ಗಾಯಗೊಂಡು ಅಥವಾ ಹುಷಾರಿಲ್ಲವೆಂದು ವಿಶ್ರಮಿಸಲು ತೆರಳಬಹುದು ಹಾಗೂ, ಚೇತರಿಸಿಕೊಂಡರೆ, ನಂತರ ಬಂದು ತನ್ನ ಇನ್ನಿಂಗ್ಸ್ ಅನ್ನು ಮುಂದುವರಿಸಬಹುದು.

ನಿಯಮ೩: ತೀರ್ಪುಗಾರರು(ಅಂಪೈರ್ ಗಳು). ಪ್ರತಿ ಪಂದ್ಯದಲ್ಲಿ ಇಬ್ಬರು ಅಂಪೈರ್ (ತೀರ್ಪುಗಾರರು) ಇರುತ್ತಾರೆ; ಇವರು ನಿಯಮಗಳನ್ನು ಜಾರಿಗೊಳಿಸುತ್ತಾರೆ, ಅವಶ್ಯಕವಾದ ಎಲ್ಲಾ ನಿರ್ಣಯಗಳನ್ನು ತೆಗೆದುಕೊಳ್ಳುತ್ತಾರೆ ಮತ್ತು ಆ ನಿರ್ಣಯಗಳನ್ನು ಸ್ಕೋರರ್ ಗಳಿಗೆ ರವಾನೆ ಮಾಡುತ್ತಾರೆ. ಕ್ರಿಕೆಟ್ ನಿಯಮಾವಳಿಗಳ ರೀತ್ಯಾ ಅಗತ್ಯವಿಲ್ಲವಾದರೂ, ಮೇಲ್ದರ್ಜೆಯ ಕ್ರಿಕೆಟ್ ನಲ್ಲಿ ಒಬ್ಬ ಮೂರನೆಯ ಅಂಪೈರ್ (ಇವರು ಮೈದಾನದಿಂದ ಹೊರಗಿರುತ್ತಾರೆ ಮತ್ತು ಮೈದಾನದಲ್ಲಿರುವ ಅಂಪೈರ್ ಗಳಿಗೆ ಸಹಾಯಕವಾಗಿರುತ್ತಾರೆ) ಅನ್ನು ಗೊತ್ತುಪಡಿಸಿದ ಪಂದ್ಯ ಅಥವಾ ಪಂದ್ಯಾವಳಿಯ ನಿರ್ದಿಷ್ಟವಾದ ಆಟದ ಹಂತಗಳಲ್ಲಿ ಬಳಸಿಕೊಳ್ಳಬಹುದಾಗಿದೆ.

ನಿಯಮ ೪: ಸ್ಕೋರರ್ ಗಳು. ಅಂಪೈರ್ ನೀಡುವ ಸೂಚನೆಗಳ ರೀತ್ಯಾ ಸ್ಕೋರ್ ಗಳನ್ನು ದಾಖಲಿಸಿಕೊಳ್ಳಲು ಇಬ್ಬರು ಸ್ಕೋರರ್ ಗಳು ಇರುತ್ತಾರೆ.

ಸಲಕರಣೆಗಳು ಮತ್ತು ಪಿಚ್ ಅನ್ನು ಸಿದ್ಧಗೊಳಿಸುವಿಕೆ

[ಬದಲಾಯಿಸಿ]

ಆಟಗಾರರ ವಿಷಯದ ನಂತರ ನಿಯಮಗಳು ಸಲಕರಣೆಗಳು ಮತ್ತು ಪಿಚ್ ನ ಬಗ್ಗೆ ನಿರ್ದಿಷ್ಟವಾದ ವಿಧಿಗಳನ್ನು ರೂಪಿಸುವತ್ತ ಸಾಗುತ್ತವೆ; ಇದರಲ್ಲಿ ವಿಕೆಟ್ ಕೀಪರ್ ಧರಿಸುವ ಗ್ಲೌಸ್ ಗಳ ಬಗ್ಗೆ ಮಾತ್ರ ಉಲ್ಲೇಖವಿರುವುದಿಲ್ಲ. ಅದು ನಿಯಮ ೪೦ರಲ್ಲಿ ದಾಖಲಾಗಿದೆ. ಈ ನಿಯಮಗಳಿಗೆ ಅನುಗುಣವಾಗಿ ಅನುಬಂಧ A ಮತ್ತು B ಗಳಿವೆ(ಕೆಳಗೆ ನೋಡಿ).

ನಿಯಮ ೫: ಚೆಂಡು. ಕ್ರಿಕೆಟ್ ಚೆಂಡಿನ ಸುತ್ತಳತೆ ೮ ೧೩/೧೬ ಮತ್ತು ೯ ಇಂಚ್ ಗಳ (೨೨.೪ ಸೆಂಟಿಮೀಟರ್ ಮತ್ತು ೨೨.೯ ಸೆಂಟಿಮೀಟರ್) ಗಳ ಅಂತರದಲ್ಲಿರುತ್ತದೆ ಮತ್ತು ಅದರ ತೂಕವು ಸುಮಾರು ೫.೫ ರಿಂದ ೫.೭೫ ಔನ್ಸ್ ಗಳಷ್ಟಿರುತ್ತದೆ (೧೫೫.೯ಗ್ರಾಂ ನಿಂದ ೧೬೩ಗ್ರಾಂ). ಒಮ್ಮೆಗೆ ಒಂದೇ ಚೆಂಡನ್ನು ಬಳಸಲಾಗುತ್ತದೆ ಹಾಗೂ ಅದು ಕಳೆದುಹೋದ ಪಕ್ಷದಲ್ಲಿ ಅಷ್ಟೇ ಹಳೆಯದಾದ ಚೆಂಡನ್ನು ಅದರ ಬದಲಿಗೆ ಆಯ್ದುಕೊಳ್ಳಲಾಗುತ್ತದೆ. ಪ್ರತಿ ಇನಿಂಗಸ್ ನ ಆರಂಭದಲ್ಲಿ ಹೊಸ ಚೆಂಡನ್ನೇ ತೆಗೆದುಕೊಳ್ಳಲಾಗುತ್ತದೆ ಹಾಗೂ, ಫೀಲ್ಡಿಂಗ್ ಮಾಡುವ ತಂಡದ ನಾಯಕನು ಬಯಸಿದಲ್ಲಿ, ಆ ಚೆಂಡಿನ ಬದಲಿಗೆ, ಕೆಲವು ಓವರ್ ಗಳಾದ ನಂತರ, ಹೊಸ ಚೆಂಡನ್ನು ನೀಡಲಾಗತ್ತದೆ (ಟೆಸ್ಟ್ ಪಂದ್ಯಗಳಲ್ಲಿ ೮೦ ಓವರ್ ಗಳ ನಂತರ, ಓಡಿಐಗಳಲ್ಲಿ ೩೪ ಓವರ್ ಗಳ ನಂತರ). ಇನಿಂಗ್ಸ್ ಮುಂದುವರಿದಂತೆ ಚೆಂಡು ಕ್ರಮೇಣ ಹಳತಾಗುವುದು ಸಹ ಆಟದ ಒಂದು ಮುಖ್ಯ ಅಂಶವಾಗಿದೆ.

ನಿಯಮ ೬: Tಬ್ಯಾಟ್. ಬ್ಯಾಟ್ 38 inches (97 centimetres) ಗಿಂತ ಉದ್ದ ಇರಬಾರದು ಮತ್ತು 4.25 inches (10.8 centimetres) ಗಿಂತ ಅಗಲ ಇರಬಾರದು. ಬ್ಯಾಟ್ ಅನ್ನು ಹಿಡಿದಿರುವ ಗ್ಲೌವ್ (ಗವುಸು) ಅಥವಾ ಹಸ್ತವನ್ನೂ ಬ್ಯಾಟ್ ನ ಒಂದು ಅಂಶವೆಂದೇ ಪರಿಗಣಿಸಲಾಗುತ್ತದೆ. ಡೆನಿಸ್ ಲಿಲ್ಲಿ ಒಂದು ಅಲ್ಯುಮಿನಿಯಂ ಬ್ಯಾಟ್ ಅನ್ನು ಅಂತರರಾಷ್ಟ್ರೀಯ ಪಂದ್ಯವೊಂದರಲ್ಲಿ ಹೊರತಂದು ಅದನ್ನು ಬಳಸುವುದರ ಮೂಲಕ ಅದಕ್ಕೆ ಬಹಳವೇ ಪ್ರಚಾರ ದೊರಕಿಸಿಕೊಟ್ಟ 'ಹೆವಿ ಮೆಟಲ್' ಪ್ರಕರಣದ ನಂತರ, ನಿಯಮಗಳು ಬ್ಯಾಟ್ ಮರದಿಂದಲೇ ಮಾಡಿರುವುದಾಗಿರಬೇಕು ಎಂದು ಸ್ಪಷ್ಟವಾಗಿ ಹೇಳಿವೆ (ಹಾಗೂ ಸಾಮಾನ್ಯವಾಗಿ ಬ್ಯಾಟ್ ಗಳನ್ನು ಬಿಳಿಯ ವಿಲ್ಲೋ ಮರದಿಂದ ತಯಾರಿಸುವುದು ರೂಢಿಯಲ್ಲಿದೆ).

ನಿಯಮ ೭: ಪಿಚ್. ಮೈದಾನದಲ್ಲಿನ 22 yards (20 m) ಉದ್ದ ಮತ್ತು 10 ft (3.0 m) ಅಗಲದವಾದ ಆಯತಾಕಾರದ ಪ್ರದೇಶಕ್ಕೆ ಪಿಚ್ ಎನ್ನುತ್ತಾರೆ. ಆ ಮೈದಾನದ ಅಧಿಕಾರಿಗಳು ಪಿಚ್ ನ ಜಾಗವನ್ನು ಆಯ್ಕೆ ಮಾಡಿ ಪಿಚ್ ಅನ್ನು ಸಿದ್ಧಪಡಿದುತ್ತಾರೆ; ಆಟ ಶುರುವಾದಾಗಿನಿಂದ ಅಂಪೈರ್ ಗಳು ಪಿಚ್ ಮೇಲೆ ನಡೆಯುವ ಸಕಲ ಚಟುವಟಿಕೆಗಳನ್ನೂ ನಿಯಂತ್ರಿಸುತ್ತಾರೆ. ಪಿಚ್ ಆಡಲು ಯೋಗ್ಯವಾದುದೋ ಇಲ್ಲವೋ ಎನ್ನುವುದನ್ನೂ ಅಂಪೈರ್ ಗಳೇ ನಿರ್ಧರಿಸುತ್ತಾರೆ ಹಾಗೂ ಅವರು ಪಿಚ್ ಆಡಲು ಯೋಗ್ಯವಾದುದಲ್ಲವೆಂದು ನಿರ್ಧರಿಸಿದರೆ, ಎರಡೂ ತಂಡಗಳ ನಾಯಕರ ಅಭಿಮತವನ್ನು ಪಡೆದು, ಆಟವನ್ನು ಬೇರೆ ಪಿಚ್ ನಲ್ಲಿ ಆಡಲಾಗುತ್ತದೆ. ವೃತ್ತಿಪರ ಕ್ರಿಕೆಟ್ ಸಾಮಾನ್ಯವಾಗಿ ಹುಲ್ಲು ಬೆಳೆದಿರುವ ಪಿಚ್ ಮೇಲೆಯೇ ಆಡಲ್ಪಡುತ್ತದೆ. ಆದರೆ, ಒಂದು ವೇಳೆ ಹುಲ್ಲಿಲ್ಲದ ಪಿಚ್ ನಲ್ಲಿ ಪಂದ್ಯ ಆಡುವುದಾದರೆ, ಆ ಕೃತಕ ಮೈ ಹೊಂದಿರುವ ಪಿಚ್ ನ ಅಳತೆಯು ಕಡಿಮೆಯೆಂದರೆ 58 ft (18 m) ಉದ್ದ ಮತ್ತು ಕನಿಷ್ಠ 6 ft (1.8 m) ಅಗಲ ಇರಬೇಕು..

ನಿಯಮ ೮: ವಿಕೆಟ್ ಗಳು. ವಿಕೆಟ್ ಮೂರು 28 ಇಂಚು(ಭೂ ಮಟ್ಟದಿಂದ ಮೇಲೆ) ಎತ್ತರದ ಮೂರು ಗೂಟಗಳನ್ನು ಒಳಗೊಂಡಿರುತ್ತದೆ. ಈ ಗೂಟಗಳನ್ನು ಬ್ಯಾಟಿಂಗ್ ಕ್ರೀಸ್ ನ ಗುಂಟ ಇಡಲಾಗುತ್ತದೆ ಹಾಗೂ ಪ್ರತಿ ಗೂಟದ ಮಧ್ಯೆ ಇರುವ ಅಂತರವು ಸಮನಾಗಿರುತ್ತದೆ. ಈ ಗೂಟಗಳನ್ನು 9 inches (23 centimetres) ಅಗಲ ಬರುವಂತೆ ನೆಡಲಾಗುತ್ತವೆ. ಈ ಗೂಟಗಳ ಮೇಲೆ ಎರಡು ಮರದ ಬೇಲ್ಸ್ ಗಳನ್ನು ಇಡಲಾಗುತ್ತದೆ. ಹೀಗೆ ಇರಿಸಲ್ಪಟ್ಟ ಬೇಲ್ಸ್ ಗಳು ಗೂಟದಿಂದ 0.5 inches (1.3 centimetres) ಗಿಂತ ಮೇಲೆ ಇರಬಾರದು ಹಾಗೂ, ಪುರುಷರ ಕ್ರಿಕೆಟ್ ನಲ್ಲಿ 4+516 inches (10.95 centimetres) ಉದ್ದ ಇರಲೇಬೇಕು. ಬೇಲ್ಸ್ ಗಳ ಸುತ್ತಳತೆ ಮತ್ತು ಬೆಣೆಗಳೂ ಇಂತಿಷ್ಟೇ ಉದ್ದ ಇರಬೇಕೆಂಬ ನಿಯಮಗಳಿವೆ. ಜೂನಿಯರ್ ಕ್ರಿಕೆಟ್ ನಲ್ಲಿ ಬಳಸುವ ವಿಕೆಟ್ ಗಳು ಮತ್ತು ಬೇಲ್ಸ್ ಗಳಿಗೆ ಬೇರೆಯವೇ ಆದ ನಿರ್ದಿಷ್ಟ ಅಳತೆಗಳಿವೆ. ಪರಿಸ್ಥಿತಿ ಪ್ರತಿಕೂಲವಾಗಿದ್ದರೆ ಅಂಪೈರ್ ಗಳು ಬೇಲ್ಸ್ ಇಲ್ಲದೆಯೇ ಆಟ ಮುಂದುವರಿಸುವ ನಿರ್ಣಯವನ್ನು ತೆಗೆದುಕೊಳ್ಳಬಹುದು (ಎಂದರೆ ಗಾಳಿ ಬಹಳ ಇದ್ದು ಬೇಲ್ಸ್ ಗಾಳಿಗೆ ಬಿದ್ದುಹೋಗುವಂತಿರುವ ಸಂದರ್ಭಗಳಲ್ಲಿ). ವಿಕೆಟ್ ಗಳ ಬಗ್ಗೆ ಮತ್ತಷ್ಟು ನಿರ್ದೇಶಭರಿತ ನಿಯಮಗಳನ್ನು ಅನುಬಂಧ A ಯಲ್ಲಿ ನೀಡಲಾಗಿದೆ.

ನಿಯಮ ೯: ಬೋಲಿಂಗ್, ಪಾಪಿಂಗ್ ಮತ್ತು ರಿಟರ್ನ್ ಕ್ರೀಸ್ ಗಳು. ಈ ನಿಯಮವು ಕ್ರೀಸ್ ಗಳ ಅಳತೆಗಳು ಮತ್ತು ಸ್ಥಾನಗಳನ್ನು ನಿರೂಪಿಸುತ್ತದೆ. ಬೋಲಿಂಗ್ ಕ್ರೀಸ್ ರೇಖೆಯು ಗೂಟಗಳನ್ನು ನೆಟ್ಟಿರುವ ರೇಖೆಯ ಸಾಲಿನಲ್ಲೇ ಮುಂದುವರಿದು ಪಿಚ್ ನ ಎರಡೂ ಭಾಗಗಳಿಗೆ ವಿಸ್ತರಿಸಲ್ಪಡುತ್ತದೆ; ಈ ಸಾಲು ಮತ್ತು ಮೂರೂ ಗೂಟಗಳನ್ನು ನೆಟ್ಟಿರುವ ವಿಕೆಟ್ ನ ಸಾಲು ಎರಡೂ ಸಮರೇಖೆಯಲ್ಲಿರುತ್ತವೆ (ಮತ್ತು ಸಾಂದರ್ಭಿಕವಾಗಿ ಅದು ಎರಡೂ ಕಡೆಯಲ್ಲಿ ನೆಟ್ಟ ಮಧ್ಯದ ಗೂಟ (ಮಿಡಲ್ ಸ್ಟಂಪ್)ಗಳನ್ನು ಸೇರಿಸುವ ಕಲ್ಪಿತ ರೇಖೆಗೆ ಲಂಬವಾಗಿರುತ್ತದೆ). ಪ್ರತಿ ಬೋಲಿಂಗ್ ಕ್ರೀಸ್ ನ ಉದ್ದ 8 feet 8 inches (2.64 metres) ಇರಬೇಕು, ಇದರ ಮಧ್ಯಬಿಂದುವು ಎರಡೂ ತುದಿಗಳ ಮಿಡಲ್ ಸ್ಟಂಪ್ ಇರುವ ಸ್ಥಳವಾಗಿರುತ್ತದೆ ಮತ್ತು ಪ್ರತಿ ಬೋಲಿಂಗ್ ಕ್ರೀಸ್ ಒಂದು ರಿಟರ್ನ್ ಕ್ರೀಸ್ ನಲ್ಲಿ ಕೊನೆಗೊಳ್ಳುತ್ತದೆ. ಪಾಪಿಂಗ್ ಕ್ರೀಸ್ ಬ್ಯಾಟ್ಸ್ ಮನ್ ತನಗೆ ನಿರ್ಧರಿಸಿದ ನಿರ್ದಿಷ್ಟ ನೆಲೆಯಲ್ಲಿ ಇದ್ದಾನೆಯೋ ಇಲ್ಲವೋ ಎಂಬುದನ್ನು ನಿಶ್ಚಯಿಸುತ್ತದೆ ಹಾಗೂ ಈ ಕ್ರೀಸ್ ಅನ್ನು ಮುಂಗಾಲಿನ ನೋಬಾಲ್ ಗಳನ್ನು ನಿರ್ಧರಿಸಲು ಬಳಸಲಾಗುತ್ತದೆ. (ನಿಯಮ ೨೪ ನೋಡಿರಿ). ಈ ಕ್ರೀಸ್ ಅನ್ನು ಎರಡೂ ಜೊತೆ ಗೂಟಗಳ ಮುಂಭಾಗದಲ್ಲಿ ಪಿಚ್ ನ ಎರಡೂ ಭಾಗಗಳಲ್ಲಿ ಎಳೆಯಲಾಗುತ್ತದೆ. ಪಾಪಿಂಗ್ ಕ್ರೀಸ್ ಬೋಲಿಂಗ್ ಕ್ರೀಸ್ ನ ಮುಂದೆ 4 feet (1.2 metres) ಇರಬೇಕು ಮತ್ತು ಅದಕ್ಕೆ ಸಮಾನಾಂತರವಾಗಿರಬೇಕು. ಈ ಕ್ರೀಸ್ ಅನಿಯಮಿತ ಉದ್ದವನ್ನು ಹೊಂದಿರುವುದೆಂದು ಪರಿಗಣಿಸಲಾದರೂ, ಪಾಪಿಂಗ್ ಕ್ರೀಸ್ ಅನ್ನು ಕನಿಷ್ಠ 6 feet (1.8 metres) ವರೆಗೆ ಮಿಡಲ್ ಸ್ಟಂಪ್ ಗಳ ಮಧ್ಯಭಾಗವನ್ನು ಸೇರಿಸುವ ಕಾಲ್ಪನಿಕ ರೇಖೆಯ ಎರಡೂ ಬದಿಗಳಲ್ಲಿ ಗುರುತಿಸಬೇಕು. ಬೋಲರ್ ಚೆಂಡನ್ನು ಎಸೆಯುವ ಹಂತದಲ್ಲಿ ಯಾವ ಸೀಮೆಯಲ್ಲಿ ಇರಲೇಬೇಕೋ ಅವೇ ರಿಟರ್ನ್ ಕ್ರೀಸ್ ಗಳೆಂದು ಕರೆಯಲಾಗುತ್ತವೆ ಹಾಗೂ ಇವನ್ನು ಸ್ಟಂಪ್ ಗಳ ಜೋಡಿಗಳ ಎರಡೂ ಕಡೆಯಲ್ಲಿ, ಪಿಚ್ ನ ಎರಡೂ ಬದಿಗಳಲ್ಲಿ ಎಳೆಯಲಾಗುತ್ತವೆ (ಹೀಗಾಗಿ ಒಟ್ಟು ನಾಲ್ಕು ರಿಟರ್ನ್ ಕ್ರೀಸ್ ಗಳಿರುತ್ತವೆ - ಎರಡೂ ಸ್ಟಂಪ್ ಗಳ ಜೊತೆಗಳ ಎರಡೂ ಪಾರ್ಶ್ವಗಳಲ್ಲಿ). ರಿಟರ್ನ್ ಕ್ರೀಸ್ ಗಳು ಪಾಪಿಂಗ್ ಕ್ರೀಸ್ ಗೆ ಮತ್ತು ಬೋಲಿಂಗ್ ಕ್ರೀಸ್ ಗೆ ಲಂಬವಾಗಿರುತ್ತವೆ , 4 feet 4 inches (1.32 metres) ಎರಡೂ ಪಾರ್ಶ್ವಗಳಲ್ಲಿರುತ್ತವೆ ಮತ್ತು ಮಿಡಲ್ ಸ್ಟಂಪ್ ಗಳ ಮಧ್ಯರೇಖೆಗಳನ್ನು ಸೇರಿಸುವ ಕಾಲ್ಪನಿಕ ರೇಖೆಗೆ ಸಮಾನಾಂತರ ರೇಖೆಯಲ್ಲಿರುತ್ತವೆ.

ಪ್ರತಿ ರಿಟರ್ನ್ ಕ್ರೀಸ್ ಪಾಪಿಂಗ್ ಕ್ರೀಸ್ ನ ಒಂದು ತುದಿಯಲ್ಲಿ ಕೊನೆಗೊಳ್ಳುತ್ತದೆ, ಆದರೆ ಮತ್ತೊಂದು ತುದಿಯು ಅನಿಯಮಿತವಾದ ಉದ್ದವನ್ನು ಹೊಂದಿದೆ ಎಂದು ಪರಿಗಣಿಸಲಾಗುತ್ತದೆ ಹಾಗೂ ಪಾಪಿಂಗ್ ಕ್ರೀಸ್ ನಿಂದ ಕನಿಷ್ಠ 8 feet (2.4 metres) ವರೆಗೆ ಗುರುತು ಹಾಕಿರಬೇಕಾಗುತ್ತದೆ.

ನಿಯಮ ೧೦: ಆಡುವ ಪ್ರದೇಶವನ್ನು ಸಿದ್ಧಗೊಳಿಸುವಿಕೆ ಮತ್ತು ಸಂರಕ್ಷಣೆ. ಕ್ರಿಕೆಟ್ ನಲ್ಲಿ ಚೆಂಡನ್ನು ಬೋಲ್ ಮಾಡಿದಾಗ, ಅದು ಸರ್ವೇಸಾಮಾನ್ಯವಾಗಿ ಪಿಚ್ ಮೇಲೆ ಪುಟಿದೇಳುತ್ತದೆ ಮತ್ತು ಚೆಂಡು ಯಾವ ರೀತಿ ವರ್ತಿಸುತ್ತದೆ ಎಂಬುದು ಪಿಚ್ ನ ಸ್ಥಿತಿಯ ಮೇಲೆ ಅವಲಂಬಿತವಾಗಿರುತ್ತದೆ. ಆದ್ದರಿಂದ ಪಿಚ್ ಬಗ್ಗೆಯೇ ಸವಿವರ ನಿಯಮಗಳು ಅವಶ್ಯಕವಾಗಿವೆ. ಈ ನಿಯಮವು ಪಿಚ್ ಗಳನ್ನು ಸಿದ್ಧಪಡಿದುವ ರೀತಿ, ಹುಲ್ಲನ್ನು ಕೊಯ್ಯುವ ಬಗೆ, ಪಿಚ್ ಮೇಲೆ ರೋಲರ್ ಬಳಸಿ ರೋಲ್ ಮಾಡುವ ಬಗೆ, ಇತ್ಯಾದಿಗಳನ್ನು ನಿಖರವಾಗಿ ತಿಳಿಸುತ್ತದೆ.

ನಿಯಮ ೧೧: ಪಿಚ್ ಹೊದಿಸುವಿಕೆ. ಪಿಚ್ ಗೆ ಹೊದಿಕೆ ಹೊದಿಸುವುದರಿಂದ ಚೆಂಡು ಅದರ ಮೇಲೆ ಪುಟಿದಾಗ ವರ್ತಿಸುವುದರ ಮೇಲೆ ಪರಿಣಾಮ ಉಂಟಾಗುತ್ತದೆ. ಉದಾಹರಣೆಗೆ, ಒದ್ದೆಯಾದ ಪಿಚ್ ಮೇಲೆ ಪುಟಿಯುವ ಚೆಂಡು ಒಣಗಿದ ಪಿಚ್ ಮೇಲೆ ಪುಟಿಯುವ ಚೆಂಡಿಗಿಂತಲೂ ವಿಭಿನ್ನವಾಗಿ ವರ್ತಿಸುತ್ತದೆ. ಪಿಚ್ ಅನ್ನು ಮುಚ್ಚಿಡುವ ಬಗ್ಗೆ ಮೊದಲೇ ಸಮ್ಮತಿ ಹೊಂದಿರಬೇಕೆಂದು ಈ ನಿಯಮವು ಸಾರುತ್ತದೆ. ಬೋಲರ್ ಗಳು ಜಾರಿ ಬೀಳದಿರಲೆಂದ ಉದ್ದೇಶದಿಂದ ಬೋಲರ್ ಗಳು ಓಡಿ ಬರುವ ದಾರಿಯಾದ ರನ್ ಅಪ್ ಸಹ ಒಣಗಿದ ಸ್ಥಿತಿಯಲ್ಲಿರಬೇಕೆಂದು ನಿಯಮ ಹೇಳುತ್ತದೆ. ಆದ್ದರಿಂದ ತೇವವಾದ ವಾತಾವರಣದಲ್ಲಿ ಈ ರನ್ ಅಪ್ ಗಳನ್ನೂ ಸಾಧ್ಯವಾದಷ್ಟು ಮಟ್ಟಿಗೆ ಮುಚ್ಚಿರಬೇಕೆಂದು (ಹೊದಿಸಿರಬೇಕೆಂದು) ನಿಯಮಗಳು ನಿರ್ದೇಶಿಸುತ್ತವೆ.

ಆಟದ ಸ್ವರೂಪ

[ಬದಲಾಯಿಸಿ]

೧೨ ರಿಂದ ೧೭ ರವರೆಗಿನ ನಿಯಮಗಳು ಈ ಆಟದ ಸ್ವರೂಪವನ್ನು ನಿರೂಪಿಸುತ್ತವೆ.

ನಿಯಮ ೧೨: ಇನಿಂಗ್ಸ್. ಪಂದ್ಯ ಆರಂಭವಾಗುವ ಮುನ್ನ ಎರಡೂ ತಂಡಗಳು ಅದು ಒಂದು ಇನಿಂಗ್ಸ್ ನ ಪಂದ್ಯವೋ ಅಥವಾ ಎರಡು ಇನಿಂಗ್ಸ್ ನದ್ದೋ ಎಂಬುದರ ಬಗ್ಗೆ ಒಮ್ಮತಕ್ಕೆ ಬರುತ್ತವೆ; ಆ ಇನಿಂಗ್ಸ್/ಇನಿಂಗ್ಸ್ ಗಳು ಕಾಲಾವಧಿ ಅಥವಾ ಓವರ್ ಗಳ ಲೆಕ್ಕದಲ್ಲಿ ಸೀಮಿತಗೊಳಿಸಲ್ಪಡಬೇಕೋ ಇಲ್ಲವೋ ಎಂಬುದೂ ಪೂರ್ವನಿರ್ಣಯಿತವಾಗುತ್ತವೆ. ಪದ್ಧತಿಯ ಪ್ರಕಾರ, ಪಂದ್ಯಕ್ಕೆ ಮುಂಚೆ ಒಮ್ಮತಕ್ಕೆ ಬರುವುದಕ್ಕಿಂತಲೂ, ಈ ನಿರ್ಣಯಗಳು ಪಂದ್ಯಾವಳಿಯ ವಿಧೇಯಕಗಳಲ್ಲಿಯೇ ಸೇರಿಹೋಗಿರುತ್ತವೆ. ಎರಡು ಇನಿಂಗ್ಸ್ ಗಳ ಪಂದ್ಯಗಳಲ್ಲಿ, ಫಾಲೋ ಆನ್ (ನಿಯಮ ೧೩) ಹೊರತಾದ ಎಲ್ಲಾ ಸಂದರ್ಭಗಳಲ್ಲಿ ಎರಡೂ ತಂಡಗಳು ಒಂದರ ನಂತರ ಒಂದು ತಮ್ಮ ಇನಿಂಗ್ಸ್ ಅನ್ನು ಆಡುತ್ತವೆ. ಎಲ್ಲಾ ಬ್ಯಾಟ್ಸ್ ಮನ್ ಗಳು ಔಟ್ ಆದಾಗ, ಇನ್ನಾವ ಬ್ಯಾಟ್ಸ್ ಮನ್ನೂ ಆಡುವ ಸ್ಥಿತಿಯಲ್ಲಿಲ್ಲದಿರುವಾಗ, ಇನಿಂಗ್ಸ್ ಡಿಕ್ಲೇರ್ ಮಾಡಿದಾಗ ಅಥವಾ ಬ್ಯಾಟಿಂಗ್ ತಂಡದ ನಾಯಕ ಇನಿಂಗ್ಸ್ ಅನ್ನು ಬಿಟ್ಟುಕೊಟ್ಟುಬಿಟ್ಟಾಗ, ಅಥವಾ ನಿಗದಿತ ಅವಧಿ ಅಥವಾ ಓವರ್ ಗಳು ಮುಗಿದಾಗ 'ಇನಿಂಗ್ಸ್ ಮುಕ್ತಾಯವಾಯಿತು' ಎನ್ನಲಾಗುತ್ತದೆ. ನಾಣ್ಯವನ್ನು ಚಿಮ್ಮಿ ಟಾಸ್ ಗೆದ್ದ ನಾಯಕನು ಮೊದಲು ಬ್ಯಾಟಿಂಗ್ ಆಡಬೇಕೋ ಅಥವಾ ಫೀಲ್ಡಿಂಗ್ ಮಾಡಬೇಕೋ ಎಂದು ನಿರ್ಧರಿಸುವ ಅವಕಾಶವಿರುತ್ತದೆ.

ನಿಯಮ ೧೩: ಫಾಲೋ-ಆನ್. ಎರಡು ಇನಿಂಗ್ಸ್ ಗಳ ಪಂದ್ಯದಲ್ಲಿ, ಎರಡನೆಯ ಬಾರಿ ಬ್ಯಾಟ್ ಮಾಡಿದ ತಂಡವು ಮೊದಲನೆಯ ಬಾರಿ ಬ್ಯಾಟ್ ಮಾಡಿದ ತಂಡಕ್ಕಿಂತಲೂ ಬಹಳ ಕಡಿಮೆ ರನ್ ಗಳನ್ನು ಗಳಿಸಿ ಆಲೌಟ್ ಆದ ಪಕ್ಷದಲ್ಲಿ, ಮೊದಲು ಬ್ಯಾಟ್ ಮಾಡಿದ ತಂಡವು ನಂತರ ಬ್ಯಾಟ್ ಮಾಡಿದ ತಂಡವನ್ನು ಕೂಡಲೆ ಮತ್ತೆ ಬ್ಯಾಟ್ ಮಾಡಲು ಬಲವಂತ ಹೇರಬಹುದು. ಫಾಲೋ-ಆನ್ ನೀಡಿದ ತಂಡವು ಮತ್ತೆ ಬ್ಯಾಟ್ ಮಾಡುವ ಅವಕಾಶವನ್ನು ಬದಿಗೊತ್ತುವುದಕ್ಕೆ ಸಿದ್ಧವಾರಿರಬೇಕಾಗುತ್ತದೆ; ಹೀಗಾಗಿ ಗೆಲ್ಲುವ ಸಾಧ್ಯತೆಗಳನ್ನೂ ಪಡೆಯಲೂ ಬಹುದು, ಪಡೆಯದಿರಲೂಬಹುದು ಎಂಬ ಪರಿಸ್ಥಿತಿ ಉದ್ಭವಿಸುತ್ತದೆ.

ಐದು ಅಥವಾ ಅದಕ್ಕಿಂತಲೂ ಹೆಚ್ಚಿನ ಪಂದ್ಯಗಳಲ್ಲಿ ಫಾಲೋ-ಆನ್ ಹೇರಬೇಕಾದ ತಂಡ ಇತರ ತಂಡಕ್ಕಿಂತಲೂ ಕನಿಷ್ಠ ೨೦೦ ರನ್ ಗಳ ಮುನ್ನಡೆ ಪಡೆದಿರುಬೇಕು; ಮೂರು ದಿನಗಳ ಪಂದ್ಯದಲ್ಲಿ ಮುಂಬಡ್ತಿ ೧೫೦ ರನ್ ಗಳು, ಎರಡು ದಿನದ ಪಂದ್ಯಕ್ಕೆ ನೂರು ರನ್ ಗಳು ಮತ್ತು ಒಂದು ದಿನದ ಪಂದ್ಯಕ್ಕೆ ೭೫ ರನ್ ಗಳ ಮುಂಬಡ್ತಿ ಇರಬೇಕಾದುದು ಅವಶ್ಯಕ.  ಆಟವು ವಾಸ್ತವವಾಗಿ ಆರಂಭವಾದಾಗಿನಿಂದ ಎಷ್ಟು ನಿಗದಿತ ದಿನಗಳು ಉಳಿದಿದೆ ಎಂಬುದರ ಮೇಲೆ ಆಟದ ಅವಧಿಯ ದೀರ್ಘತೆಯನ್ನು ನಿಶ್ಚಯಿಸಲಾಗುತ್ತದೆ.

ನಿಯಮ೧೪: ಇನಿಂಗ್ಸ್ ಘೋಷಣೆ ಮತ್ತು ಬಿಟ್ಟುಕೊಡುವಿಕೆ. ಚೆಂಡು ಡೆಡ್ ಆಗಿರುವ ಯಾವುದೇ ವೇಳೆಯಲ್ಲಿ ಬ್ಯಾಟಿಂಗ್ ತಂಡದ ನಾಯಕನು ತನ್ನ ತಂಡದ ಇನಿಂಗ್ಸ್ ಮುಗಿಯಿತೆಂದು ಡಿಕ್ಲೇರ್(ಘೋಷಣೆ) ಮಾಡಬಹುದು. ಇನಿಂಗ್ಸ್ ಆರಂಭಕ್ಕೆ ಮುನ್ನವೇ ನಾಯಕನು ಇನಿಂಗ್ಸ್ ಅನ್ನು ಬಿಟ್ಟುಕೊಡಲೂಬಹುದು.

ನಿಯಮ ೧೫: ಮಧ್ಯಂತರಗಳು. ಪ್ರತಿ ದಿನದ ಆಟದಲ್ಲೂ ಮಧ್ಯಂತರಗಳು/ವಿರಾಮಗಳು ಇದ್ದೇ ಇರುತ್ತವೆ; ಎರಡು ಇನಿಂಗ್ಸ್ ಗಳ ನಡುವೆ ಹತ್ತು ನಿಮಿಷಗಳ ವಿರಾಮ, ಊಟ, ಟೀ ಮತ್ತು ಪಾನೀಯ ವಿರಾಮಗಳು ದಿನದ ಆಟದ ಅವಿಭಾಜ್ಯ ಅಂಗಗಳಾಗಿವೆ. ಈ ಮಧ್ಯಂತರಗಳು ಯಾವ ಸಮಯದಲ್ಲಿರಬೇಕು ಮತ್ತು ಎಷ್ಟು ಹೊತ್ತು ಎಂಬುದನ್ನು ಪಂದ್ಯ ಆರಂಭವಾಗುವುದಕ್ಕೆ ಮುಂಚೆಯೇ ನಿಷ್ಕರ್ಷೆ ಮಾಡಿಕೊಳ್ಳಬೇಕು. ಕೆಲವು ಸಂದರ್ಭಗಳಲ್ಲಿ ಈ ಮಧ್ಯಂತರದ ಸಮಯವನ್ನು ಮತ್ತು ಅವಧಿಯನ್ನು ಬದಲಾಯಿಸಲು ಅವಕಾಶವಿದೆ; ಪ್ರಮುಖವಾಗಿ, ಎದುರಾಳಿ ತಂಡದ ಒಂಬತ್ತು ವಿಕೆಟ್ ಗಳು ಬಿದ್ದಿದ್ದರೆ, ವಿಕೆಟ್ ಬೀಳುವವರೆಗೆ ಅಥವಾ ಮೂವತ್ತು ನಿಮಿಷಗಳವರೆಗೆ (ಇದರಲ್ಲಿ ಯಾವುದು ಮೊದಲಾಗುವುದೋ ಅಲ್ಲಿಯವರೆಗೆ) ಟೀ ವಿರಾಮವನ್ನು ಮುಂದೂಡಲು ಅವಕಾಶವಿದೆ.

ನಿಯಮ ೧೬: ಆಟದ ಆರಂಭ, ಆಟದ ನಿಲುಗಡೆ. ವಿರಾಮದ ನಂತರ ಅಂಪೈರ್ "ಪ್ಲೇ" ಎಂದು ಕೂಗುವುದರ ಮೂಲಕ ಆಟವು ಆರಂಭವಾಗುತ್ತದೆ; ಅವಧಿಯು ಮುಗಿದಾಗ ಅಂಪೈರ್ "ಟೈಂ" ಎಂದು ಕೂಗುತ್ತಾರೆ. ಪಂದ್ಯದ ಕೊನೆಯ ಗಂಟೆಯಲ್ಲಿ ಕನಿಷ್ಠ ೨೦ ಓವರ್ ಗಳನ್ನು ಮಾಡಬೇಕು, ಒಂದುವೇಳೆ ನಿಗದಿರ ಸಮಯದಲ್ಲಿ ೨೦ ಓವರ್ ಗಳು ಮುಗಿಯದಿದ್ದರೆ ೨೦ ಓವರ್ ಗಳು ಮುಗಿಯುವವರೆಗೆ ಆಟವನ್ನು ಮುಂದುವರಿಸಬೇಕು.

ನಿಯಮ ೧೭: ಮೈದಾನದಲ್ಲಿ ಅಭ್ಯಸಿಸುವಿಕೆ. ದಿನದ ಆಟದ ಆರಂಭಕ್ಕೆ ಮುನ್ನ ಮತ್ತು ದಿನದ ಆಟ ಮುಗಿದ ನಂತರವಲ್ಲದೆ ಇತರ ಸಮಯಗಳಲ್ಲಿ ಪಿಚ್ ಮೇಲೆ ಬ್ಯಾಟಿಂಗ್ ಅಥವಾ ಬೋಲಿಂಗ್ ಅಭ್ಯಾಸವನ್ನು ಮಾಡುವಂತಿಲ್ಲ. ಬೋಲರ್ ಗಳು ತಮ್ಮ ರನ್ ಅಪ್ ನ ಪ್ರಯೋಗಗಳನ್ನು, ಅದರಿಂದ ಸಮಯ ವ್ಯರ್ಥವಾಗುವುದಿಲ್ಲವೆಂದು ಅಂಪೈರ್ ಗಳು ಅಭಿಪ್ರಾಯ ಪಟ್ಟಲ್ಲಿ, ಕೈಗೊಳ್ಳಬಹುದು.

ಸ್ಕೋರ್ ಮಾಡುವಿಕೆ ಮತ್ತು ಗೆಲ್ಲುವಿಕೆ

[ಬದಲಾಯಿಸಿ]

ನಿಯಮಗಳು ಮುಂದುವರಿದು ರನ್ ಗಳನ್ನು ಸ್ಕೋರ್ ಮಾಡುವ ಬಗೆ ಮತ್ತು ಒಂದು ತಂಡವು ಪಂದ್ಯವನ್ನು ಗೆಲ್ಲುವ ಬಗೆಯನ್ನು ಚರ್ಚಿಸುತ್ತವೆ.

ನಿಯಮ೧೮: ರನ್ ಗಳನ್ನು ಗಳಿಸುವಿಕೆ. ಇಬ್ಬರು ಬ್ಯಾಟ್ಸ್ ಮನ್ ಗಳೂ ಪರಸ್ಪರರ ಪಿಚ್ ನತ್ತ ಸಾಗಿ ತಲುಪಿದಾಗ ರನ್ ಗಳನ್ನು ಗಳಿಸಲಾಯಿತೆಂದು/ಸ್ಕೋರ್ ಮಾಡಲಾಯಿತೆಂದು ಹೇಳಲಾಗುತ್ತದೆ. ಒಂದು ಎಸೆತದಿಂದ ಹಲವಾರು ರನ್ ಗಳನ್ನು ಸ್ಕೋರ್ ಮಾಡಬಹುದು.

ನಿಯಮ ೧೯: ಸೀಮಾರೇಖೆಗಳು. ಆಟದ ಮೈದಾನದ ಸುತ್ತಲೂ ಒಂದು ಸೀಮಾರೇಖೆಯನ್ನು ಎಳೆಯಲಾಗಿರುತ್ತದೆ/ ಗುರುತು ಮಾಡಲಾಗಿರುತ್ತದೆ. ಈ ಸೀಮಾರೇಖೆಯನ್ನು ತಾಗುವಂತೆ ಅಥವಾ ದಾಟುವಂತೆ ಚೆಂಡನ್ನು ಹೊಡೆದರೆ ನಾಲ್ಕು ರನ್ ಸ್ಕೋರ್ ಗೆ ಸೇರ್ಪಡೆಯಾಗುತ್ತದೆ, ಅಂತಹ ಚೆಂಡು ಸೀಮಾರೇಖೆಯನ್ನು ದಾಟುವ ಮುನ್ನ ಮೈದಾನದಲ್ಲೆಲ್ಲೂ ಪುಟ ಬಿದ್ದಿಲ್ಲದಿದ್ದರೆ ಸಿಕ್ಸರ್ (ಆರು ತನ್ ಗಳು) ಎಂದು ಸೂಚಿಸಲಾಗುತ್ತದೆ.

ನಿಯಮ ೨೦: ಕಳೆದುಹೋದ ಚೆಂಡು. ಆಟದಲ್ಲಿನ ಚೆಂಡು ಕಳೆದುಹೋದರೆ ಅಥವಾ ಮರಳಿ ಪಡೆಯಲು ಸಾಧ್ಯವಾಗದಿದ್ದರೆ, ಫೀಲ್ಡಿಂಗ್ ತಂಡವು "ಚೆಂಡು ಕಳೆದಿದೆ" ಎಂದು ಕರೆ ನೀಡಬಹುದು. ಬ್ಯಾಟಿಂಗ್ ತಂಡವು ಅಂತಹ ಸಂದರ್ಭದಲ್ಲಿ ದಂಡವಾಗಿ ನೀಡಲ್ಪಟ್ಟ ರನ್ ಗಳನ್ನು ಹೊಂದುತ್ತದೆ (ನೋ-ಬಾಲ್ ಗಳು, ವೈಡ್ ಗಳು, ಇತ್ಯಾದಿ) ಹಾಗೂ ಆರು ರನ್ ಗಳಲ್ಲಿ ಅಧಿಕವಾದುದನ್ನು ಮತ್ತು ವಾಸ್ತವವಾಗಿ ಓಡಿದ ರನ್ ಗಳನ್ನು ಹೊಂದುತ್ತದೆ.

ನಿಯಮ ೨೧: ಫಲಿತಾಂಶ. ಯಾವ ತಂಡವು ಅತಿ ಹೆಚ್ಚು ರನ್ ಗಳನ್ನು ಹೊಡೆಯುವುದೋ ಆ ತಂಡವು ಪಂದ್ಯ ಗೆಲ್ಲುತ್ತದೆ. ಎರಡೂ ತಂಡಗಳು ಒಂದೇ ಮೊತ್ತವನ್ನು ಕಲೆಹಾಕಿದರೆ, ಪಂದ್ಯವು ಟೈ ಆಯಿತು ಎನ್ನಲಾಗುತ್ತದೆ. ಆದರೆ, ಎಲ್ಲಾ ಇನಿಂಗ್ಸ್ ಗಳು ಮುಗಿಯುವುದಕ್ಕೆ ಮುಂಚೆಯೇ ಪಂದ್ಯದ ಅವಧಿ ಮುಗಿದುಹೋಗಬಹುದು. ಅಂತಹ ಸಂದರ್ಭಗಳಲ್ಲಿ ಪಂದ್ಯವು ಡ್ರಾ ಆಯಿತು ಎಂದು ಹೇಳಲಾಗುತ್ತದೆ.

ನಿಯಮ ೨೨: ಓವರ್. ಓವರ್ ಎಂದರೆ, ನೋ ಬಾಲ್ ಗಳು ಮತ್ತು ವೈಡ್ ಗಳ ಹೊರತಾಗಿ ಬೋಲ್ ಮಾಡಲ್ಪಟ್ಟ ಆರು ಎಸೆತಗಳು. ಸತತವಾದ ಓವರ್ ಗಳನ್ನು ಪಿಚ್ ನ ವಿರುದ್ಧ ತುದಿಗಳಿಂದ ಮಾಡಲಾಗುತ್ತದೆ. ಯಾವುದೇ ಬೋಲರ್ ಎರಡು ಸತತ ಓವರ್ ಗಳನ್ನು ಮಾಡುವಂತಿಲ್ಲ.

ನಿಯಮ ೨೩: ಡೆಡ್ ಬಾಲ್. ಬೋಲರ್ ತನ್ನ ರನ್ ಅಪ್ ಅನ್ನು (ಚೆಂಡು ಎಸೆಯಲು ಓಟವನ್ನು) ಆರಂಭಿಸಿದಾಗ ಚೆಂಡು ಆಟದಲ್ಲಿ ಸೇರುತ್ತದೆ ಮತ್ತು ಆ ಚೆಂಡಿನಿಂದ ಆಗುವಂತಹ ಚಟುವಟಿಕೆಗಳೆಲ್ಲಾ ಆದನಂತರ ಅದು ಡೆಡ್ ಬಾಲ್ ಆಗುತ್ತದೆ. ಬಾಲ್ ಒಮ್ಮೆ ಡೆಡ್ ಆದ ನಂತರ ಯಾವುದೇ ರನ್ ಅನ್ನು ಹೊಡೆಯುವಂತಿಲ್ಲ ಮತ್ತು ಯಾವುದೇ ಬ್ಯಾಟ್ಸ್ ಮನ್ ಅನ್ನು ಔಟ್ ಮಾಡಲು ಆಗುವುದಿಲ್ಲ. ಚೆಂಡು ಹಲವಾರು ಕಾರಣಗಳಿಂದ ಡೆಡ್ ಎಂದು ಘೋಷಿತವಾಗುತ್ತದೆ; ಅದರಲ್ಲಿ ಸಾಮಾನ್ಯವಾದುವೆಂದರೆ, ಬ್ಯಾಟ್ಸ್ ಮನ್ ಒಬ್ಬನು ಔಟ್ ಮಾಡಲ್ಪಟ್ಟನಂತರ, ಬೌಂಡರಿ ಹೊಡೆದಾಗ, ಮತ್ತು ಚೆಂಡು ಕಡೆಗೆ ವಿಕೆಟ್ ಕೀಪರ್ ಅಥವಾ ಬೋಲರ್ ನ ಕೈ ಸೇರಿದಾಗ.

ನಿಯಮ ೨೪: ನೋ ಬಾಲ್. ಚೆಂಡು ಹಲವಾರು ಕಾರಣಗಳಿಂದ ನೋ ಬಾಲ್ ಆಗಬಹುದು: ಬೋಲರ್ ತಪ್ಪು ಜಾಗದಿಂದ ಚೆಂಡನ್ನು ಬೋಲ್ ಮಾಡಿದರೆ, ಅಥವಾ ಎಸೆಯುವ ಸಮಯದಲ್ಲಿ ಮೊಣಕೈಯನ್ನು ನೇರಗೊಳಿಸಿದರೆ, ಅಥವಾ ಬೋಲಿಂಗ್ ಅಪಾಯಕಾರಿಯಾಗಿದ್ದರೆ; ಅಥವಾ ಚೆಂಡು ಎರಡು ಬಾರಿಗಿಂತಲೂ ಹೆಚ್ಚು ಬಾರಿ ಪುಟ ಬಿದ್ದರೆ, ಅಥವಾ ಬ್ಯಾಟ್ಸ್ ಮನ್ ಅನ್ನು ತಲುಪುವ ಮೊದಲು ನೆಲದಲ್ಲಿ ಉರುಳಿಕೊಂಡುಹೋದರೆ; ಅಥವಾ ಫೀಲ್ಡರ್ ಗಳು ನಿಯಮ ಬಾಹಿರವಾದ ಸ್ಥಳಗಳಲ್ಲಿ ನಿಂತಿದ್ದರೆ. ನೋ ಬಾಲ್ ಬ್ಯಾಟಿಂಗ್ ತಂಡದ ಸ್ಕೋರ್ ಗೆ ಒಂದು ರನ್ ಕೊಡಮಾಡುತ್ತದೆ; ಅದಲ್ಲದೆ ಆ ಚೆಂಡಿಗೆ ಬಾರಿಸಿದ ರನ್ ಗಳೂ ಸೇರ್ಪಡೆಯಾಗುತ್ತವೆ; ನೋ ಬಾಲ್ ನಿಂದ ಬ್ಯಾಟ್ಸ್ ಮನ್ ಅನ್ನು ಈ ಕೆಳಕಂಡ ವಿಧಾನಗಳಲ್ಲದೆ ಇತರ ವಿಧಾನಗಳಲ್ಲಿ ಔಟ್ ಮಾಡಲಾಗುವುದಿಲ್ಲ - ರನ್ ಔಟ್, ಹ್ಯಾಂಡ್ಲಿಂಗ್ ದ ಬಾಲ್, ಚೆಂಡನ್ನು ಎರಡು ಬಾರಿ ಹೊಡೆಯುವಿಕೆ, ಮತ್ತು ಫೀಲ್ಡ್ ಗೆ ಅಡಚಣೆ ಉಂಟುವಾಡುವಿಕೆ.

ನಿಯಮ ೨೫: ವೈಡ್ ಬಾಲ್. ಬೋಲ್ ಮಾಡಿದ ಚೆಂಡಿನಿಂದ ಬ್ಯಾಟ್ಸ್ ಮನ್ ಸ್ಕೋರ್ ಮಾಡಲು ಸಾಧ್ಯವಾಗದ ರೀತಿಯಲ್ಲಿ ಎಸೆಯಲ್ಪಟ್ಟಾಗ (ಸಿಗದಷ್ಟು ದೂರ ಅಥವಾ ಎತ್ತರ) ಮತ್ತು ಅಂಪೈರ್ ಆ ಚೆಂಡು ಸ್ಕೋರ್ ಮಾಡಲು ಕನಿಷ್ಠ ಅವಕಾಶವನ್ನೂ ನೀಡುವ ಮಟ್ಟದಲ್ಲಿರಲಿಲ್ಲವೆಂದು ಅಭಿಪ್ರಾಯ ಪಟ್ಟಾಗ, ಅಂತಹ ಚೆಂಡನ್ನು ಅಂಪೈರ್ 'ವೈಡ್' ಎಂದು ಕರೆಯಬಹುದು. ಬೋಲರ್ ಬೋಲ್ ಮಾಡಿದ ಚೆಂಡು ಬ್ಯಾಟ್ಸ್ ಮನ್ ತಲೆಯ ಮೇಲೆ ಹೋದರೆ ಆ ಚೆಂಡನ್ನು ವೈಡ್ ಎಂದು ಕರೆಯಲಾಗುತ್ತದೆ. ವೈಡ್ ಮೂಲಕ ಬ್ಯಾಟಿಂಗ್ ತಂಡಕ್ಕೆ ಒಂದು ರನ್ ದೊರಕುತ್ತದೆ; ಆ ಚೆಂಡಿಗೆ ಬಾರಿಸಿದ ರನ್ ಗಳೂ ಸ್ಕೋರ್ ಗೆ ಸೇರ್ಪಡೆಯಾಗುತ್ತವೆ. ವೈಡ್ ಬಾಲ್ ನಿಂದ ಬ್ಯಾಟ್ಸ್ ಮನ್ ಕೇವಲ ಈ ಕೆಳಕಂಡ ವಿಧಾನಗಳಲ್ಲಿ ಔಟ್ ಆಗಬಹುದು: ರನ್ ಔಟ್ , ಸ್ಟಂಪ್ಡ್, ಹ್ಯಾಂಡ್ಲಿಂಗ್ ದ ಬಾಲ್, ಚೆಂಡನ್ನು ಎರಡು ಬಾರಿ ಹೊಡೆಯುವಿಕೆ, ಮತ್ತು ಫೀಲ್ಡ್ ಗೆ ಅಡಚಣೆ ಉಂಟುವಾಡುವಿಕೆ.

ನಿಯಮ ೨೬: ಬೈ ಮತ್ತು ಲೆಗ್ ಬೈ. ನೋ ಬಾಲ್ ಅಥವಾ ವೈಡ್ ಅಲ್ಲದೆ ಚೆಂಡು ಸ್ಟ್ರೈಕರ್ ಅನ್ನು ದಾಟಿ ಹೋಗಿ, ತನ್ಮೂಲಕ ರನ್ ಗಳು ಸ್ಕೋರ್ ಮಾಡಲ್ಪಟ್ಟರೆ ಅವುಗಳನ್ನು ಬೈ ಗಳೆಂದು ಕರೆಯುತ್ತಾರೆ. ನೋ ಬಾಲ್ ಅಲ್ಲದ ಚಿಂಡು ಸ್ಟ್ರೈಕರ್ ಗೆ ತಗುಲಿ, ಬ್ಯಾಟ್ ಗೆ ತಗುಲದ ಪಕ್ಷದಲ್ಲಿ ಮತ್ತು ಅಂತಹ ಸಂದರ್ಭದಲ್ಲಿ ರನ್ ಗಳನ್ನು ಸ್ಕೋರ್ ಮಾಡಲ್ಪಟ್ಟ ಪಕ್ಷದಲ್ಲಿ ಆ ರನ್ ಗಳನ್ನು ಲೆಗ್ ಬೈ ಗಳೆಂದು ಕರೆಯುತ್ತಾರೆ. ಆದರೆ, ಸ್ಟ್ರೈಕರ್ ತನಗೆ ಪೆಟ್ಟು ಬೀಳುವುದನ್ನು ತಪ್ಪಿಸಿಕೊಳ್ಳಲು ಹೆಣಗುತ್ತಿಲ್ಲವಾದರೆ ಅಥವಾ ಆ ಎಸೆತಕ್ಕೆ ಯಾವುದೇ ಹೊಡೆತವನ್ನು ಬಾರಿಸಲು ಯತ್ನಿಸುತ್ತಿಲ್ಲದಿದ್ದರೆ ಲೆಗ್ ಬೈ ಅನ್ನು ಸ್ಕೋರ್ ಮಾಡುವಂತಿಲ್ಲ. ಬೈ ಗಳು ಮತ್ತು ಲೆಗ್ ಬೈಗಳು ತಂಡದ ಮೊತ್ತಕ್ಕೆ ಸೇರ್ಪಡೆಯಾಗುತ್ತದೆ, ಆದರೆ ಬ್ಯಾಟ್ಸ್ ಮನ್ ನ ಸ್ಕೋರ್ ಗೆ ಸೇರ್ಪಡೆಯಾಗುವುದಿಲ್ಲ.

ಔಟ್ ಮಾಡಲು ಅನುಸರಿಸಬೇಕಾದ ಕ್ರಮಗಳು

[ಬದಲಾಯಿಸಿ]

೨೭ ರಿಂದ ೨೯ ರವರೆಗಿನ ನಿಯಮಗಳು ಬ್ಯಾಟ್ಸ್ ಮನ್ ಅನ್ನು ಔಟ್ ಮಾಡಲು ಅನುಸರಿಸಬೇಕಾದ ವಿಧಿವಿಧಾನಗಳ ಮೇಲೆ ಬೆಳಕು ಚೆಲ್ಲುತ್ತವೆ.

ನಿಯಮ ೨೭: ಅಪೀಲ್ ಗಳು (ಮನವಿಗಳು). ಫೀಲ್ಡರ್ ಗಳು ಒಂದು ವೇಳೆ ಬ್ಯಾಟ್ಸ್ ಮನ್ ಔಟ್ ಆಗಿದ್ದಾನೆ ಎಂದು ಅಭಿಪ್ರಾಯ ಹೊಂದಿದಲ್ಲಿ ಅವರು ಅಂಪೈರ್ ಅನ್ನು "ಹೌ ಈಸ್ ದಟ್?" ಎಂದು ಕೇಳಬಹುದು; ಹೀಗೆ ಕೇಳುವಾಗ ಸಾಮಾನ್ಯವಾಗಿ ಕೈಗಳನ್ನು ಮೇಲೆತ್ತಿ ಜೋರಾಗಿ ಕಿರುಚಿ ಕೇಳುವುದು ವಾಡಿಕೆಯಲ್ಲಿದೆ. ಹೀಗೆ ಮನವಿ ಸಲ್ಲಿಸುವುದನ್ನು ಮುಂದಿನ ಎಸೆತವನ್ನು ಬೋಲ್ ಮಾಡುವ ಮುನ್ನ ಸಲ್ಲಿಸಬೇಕು. ಮನವಿ ಕೇಳಿದ ಅಂಪೈರ್ ಬ್ಯಾಟ್ಸ್ ಮನ್ ಔಟೋ ಇಲ್ಲವೋ ಎಂದು ನಿರ್ಧರಿಸುತ್ತಾರೆ. ನಿಯಮದ ಪ್ರಕಾರ ಫೀಲ್ಡಿಂಗ್ ತಂಡವು ಬೋಲ್ಡ್ ನಂತಹ ಸುಸ್ಪಷ್ಟವಾದ ಔಟ್ ಆಗುವ ರೀತಿಯಿಂದ ಹಿಡಿದು ಎಲ್ಲಾ ವಿಧದ ಔಟ್ ಮಾಡಿಸುವಿಕೆಗೂ ಮನವಿಯನ್ನು ಸಲ್ಲಿಸಬೇಕು. ಆದರೆ, ಸಾಮಾನ್ಯವಾಗಿ ಹಾಗೆ ಸುಸ್ಪಷ್ಟವಾಗಿ ಔಟ್ ಆದ ಬ್ಯಾಟ್ಸ್ ಮನ್ ಮನವಿಗೂ, ಅಂಪೈರ್ ನ ನಿರ್ಣಯಕ್ಕೂ ಕಾಯದೆ, ಮೈದಾನದಿಂದ ಹೊರನಡೆಯುತ್ತಾನೆ.

ನಿಯಮ ೨೮: ವಿಕೆಟ್ ಪತನ. ವಿಕೆಟ್ ಉರುಳಿದಾಗ ಹಲವಾರು ವಿಧದ ಔಟ್ ಆಗುವಿಕೆಗಳು ಸಂಭವಿಸುತ್ತವೆ. ಎಂದರೆ ವಿಕೆಟ್ ಚೆಂಡಿನ ಹೊಡೆತಕ್ಕೆ ಗುರಿಯಾಗಿದೆ, ಅಥವಾ ಬ್ಯಾಟ್ಸ್ ಮನ್ ನ ತಗುಲುವಿಕೆಯಿಂದ ಬಿದ್ದಿದೆ, ಅಥವಾ ಫೀಲ್ಡರ್ ಒಬ್ಬನು ಚೆಂಡನ್ನು ಕೈಯಲ್ಲಿ ಹಿಡಿದಂತೆಯೇ ಕನಿಷ್ಠ ಒಂದು ಬೇಲ್ ಅನ್ನಾದರೂ ತೆಗೆದಿದ್ದಾನೆ ಎಂದು ಅರ್ಥವಾಗುತ್ತದೆ.

ನಿಯಮ ೨೯: ಬ್ಯಾಟ್ಸ್ ಮನ್ ತನ್ನ ನೆಲೆಯಿಂದ ಹೊರಗೆ. ಬ್ಯಾಟ್ಸ್ ಮನ್ ತಮ್ಮ ನೆಲೆಯಲ್ಲಿಲ್ಲದಿದ್ದರೆ ಅವನು ಸ್ಟಂಪ್ಡ್ ಆಗಿ ಅಥವಾ ರನ್ ಔಟ್ ಆಗಿ ಔಟ್ ಆಗಬಹುದು. ಬ್ಯಾಟ್ಸ್ ಮನ್ ನ ಬ್ಯಾಟ್ ನ ಯಾವುದೇ ಭಾಗವು ಪಾಪಿಂಗ್ ಕ್ರೀಸ್ ನ ಹಿಂಭಾಗದ ನೆಲಕ್ಕೆ ತಗುಲಿಕೊಂಡಿದ್ದರೆ ಅಥವಾ ಅವನ ದೇಹದ/ವಸ್ತ್ರದ ಯಾವುದೇ ಭಾಗವು ಪಾಪಿಂಗ್ ಕ್ರೀಸ್ ನ ಹಿಂಭಾಗದ ನೆಲಕ್ಕೆ ತಗುಲಿಕೊಂಡಿದ್ದರೆ ಬ್ಯಾಟ್ಸ್ ಮನ್ ತನ್ನ ನೆಲೆಯಲ್ಲಿದ್ದಾನೆಂದರ್ಥ. ವಿಕೆಟ್ ಉರುಳಿಸಿದಾಗ, ಒಂದು ವೇಳೆ ಇಬ್ಬರು ಬ್ಯಾಟ್ಸ್ ಮನ್ ಗಳೂ ಪಿಚ್ ನ ಮಧ್ಯಭಾಗದಲ್ಲಿದ್ದರೆ , ಯಾವು ತುದಿಯಲ್ಲಿ ವಿಕೆಟ್ ಉರುಳಿಸಲ್ಪಟ್ಟಿತೋ ಆ ತುದಿಗೆ ಹತ್ತಿರದಲ್ಲಿರುವ ಬ್ಯಾಟ್ಸ್ ಮನ್ ಔಟ್ ಎಂದು ಪರಿಗಣಿಸಲಾಗುತ್ತದೆ.

ಔಟ್ ಆಗುವ ವಿಧಾನಗಳು

[ಬದಲಾಯಿಸಿ]

೩೦ ರಿಂದ೩೯ ರವರೆಗಿನ ನಿಯಮಗಳು ಬ್ಯಾಟ್ಸ್ ಮನ್ ನನ್ನು ಔಟ್ ಮಾಡುವ ಹಲವಾರು ವಿಧಾನಗಳನ್ನು ಚರ್ಚಿಸುತ್ತವೆ. ಈ ಕೆಳಕಂಡ ೧೦ ವಿಧಗಳಲ್ಲದೆ, ಬ್ಯಾಟ್ಸ್ ಮನ್ ಗಾಯಗೊಂಡು ನಿವೃತ್ತನಾಗಬಹುದು. ಆ ಅನುಕೂಲತೆಯನ್ನು ನಿಯಮ ೨ ರಲ್ಲಿ ನೀಡಲಾಗಿದೆ. ಈ ಹತ್ತರ ಪೈಕಿ ಕಾಟ್ (ಕ್ಯಾಚ್ ಕೊಟ್ಟು ಔಟಾಗುವುದು)/೦} ಸಾಮಾನ್ಯವಾಗಿ ಔಟ್ ಆಗುವ ಮಾದರಿ; ಇತರ ಸಾಮಾನ್ಯ ಮಾದರಿಗಳೆಂದರೆ ಬೋಲ್ಡ್, ಲೆಗ್ ಬಿಫೋರ್ ವಿಕೆಟ್, {೩ರನ್ ಔಟ್{/3} ಮತ್ತು ಸ್ಟಂಪ್ಡ್. ಇತರ ವಿಧಾನಗಳಲ್ಲಿ ಔಟ್ ಆಗುವುದು ಬಹಳ ಅಪರೂಪ.

ನಿಯಮ ೩೦: ಬೋಲ್ಡ್. ಬೋಲರ್ ಎಸೆದ ಚೆಂಡಿನಿಂದ ಬ್ಯಾಟ್ಸ್ ಮನ್ ನಿಂತಿರುವ ಕಡೆಯ ವಿಕೆಟ್ ಪತನವಾದರೆ ಬ್ಯಾಟ್ಸ್ ಮನ್ ಔಟ್ ಎಂದು ನಿರ್ಣಯಿಸಲಾಗುತ್ತದೆ. ಚೆಂಡು ಬ್ಯಾಟ್, ಗ್ಲೌವ್ಸ್, ಅಥವಾ ಬ್ಯಾಟ್ಸ್ ಮನ್ ನ ಯಾವುದೇ ಭಾಗವನ್ನು ತಗುಲಿ ನಂತರ ವಿಕೆಟ್ ಗೆ ಬಿದ್ದು ವಿಕೆಟ್ ಪತನವಾದರೆ, ಚೆಂಡು ಎಲ್ಲಿಗೆ ತಗುಲಿ ಮುಂದುವರಿಯಿತು ಎಂಬುದು ಅಪ್ರಸ್ತುತವಾಗುತ್ತದೆ; ಆದರೆ ವಿಕೆಟ್ ಗೆ ಬೀಳುವ ಮುನ್ನ ಅದು ಮತ್ತೊಬ್ಬ ಆಟಗಾರನನ್ನಾಗಲೀ, ಅಂಪೈರ್ ನನ್ನಾಗಲೀ ತಗುಲಿ, ನಂತರ ವಿಕೆಟ್ ಗೆ ಬಿದ್ದರೆ ಔಟ್ ಎಂದು ಪರಿಗಣಿಸಲಾಗುವುದಿಲ್ಲ.

ನಿಯಮ ೩೧: ಟೈಮ್ಡ್ ಔಟ್. ಕ್ರೀಸ್ ಗೆ ಬಂದ (ಒಳಬಂದ) ಬ್ಯಾಟ್ಸ್ ಮನ್ ಚೆಂಡನ್ನು ಎದುರಿಸಲು (ಅಥವಾ ತನ್ನ ಜೊತೆಗಾರನು ಚೆಂಡನ್ನು ಎದುರಿಸಲು ಅನುವಾಗುವ ರೀತಿಯಲ್ಲಿ ಕ್ರೀಸ್ ನಲ್ಲಿ ತಲುಪಿರಬೇಕು) ಹೊರಹೋದ (ಔಟ್ ಆದ) ಬ್ಯಾಟ್ಸ್ ಮನ್ ಔಟ್ ಆದ ಮೂರು ನಿಮಿಷದಲ್ಲಿ ಕ್ರೀಸ್ ನಲ್ಲಿರಬೇಕು; ವಿಳಂಬವಾದಲ್ಲಿ ಒಳಬರುವ ಬ್ಯಾಟ್ಸ್ ಮನ್ ಅನ್ನು ಔಟ್ ಎಂದು ತೀರ್ಮಾನಿಸಲಾಗುತ್ತದೆ.

ನಿಯಮ೩೨: ಕಾಟ್ (ಕ್ಯಾಚ್ ಹಿಡಿಯಲ್ಪಟ್ಟು ಔಟ್). ಚೆಂಡು ಬ್ಯಾಟ್ ಗೆ ಅಥವಾ ಬ್ಯಾಡನ್ನು ಹಿಡಿದ ಹಸ್ತಕ್ಕೆ/ಗ್ಲೌಸ್ ಗೆ ತಗುಲಿ, ಪುಟ ಬೀಳುವ ಮುನ್ನವೇ ಎದುರು ತಂಡದವರಿಂದ, ಆಟಕ್ಕೆ ಗುರುತುಪಡಿಸಿದ ಕ್ರೀಡಾಂಗಣದ ಎಲ್ಲೆಯಲ್ಲಿ ಹಿಡಿಯಲ್ಪಟ್ಟರೆ, ಬ್ಯಾಟ್ಸ್ ಮನ್ ಔಟ್ ಆಗುತ್ತಾನೆ.

ನಿಯಮ ೩೩: ಹ್ಯಾಂಡಲ್ಡ್ ದ ಬಾಲ್ (ಚೆಂಡನ್ನು ಕೈಯಲ್ಲಿ ಹಿಡಿದರು). ಎದುರಾಳಿಗಳ ಸಮ್ಮತಿಯಿಲ್ಲದೆ ಬ್ಯಾಟ್ಸ್ ಮನ್ ಒಬ್ಬನು ತನ್ನ ಬ್ಯಾಟ್ ಹಿಡಿದಿಲ್ಲದ ಕೈಯಿಂದ ಚೆಂಡನ್ನು ಬೇಕೆಂದೇ ಹಿಡಿದುಕೊಂಡಲ್ಲಿ ಆ ಬ್ಯಾಟ್ಸ್ ಮನ್ ಔಟ್ ಎಂದು ತೀರ್ಪು ನೀಡಲಾಗುತ್ತದೆ.

ನಿಯಮ೩೪: ಚೆಂಡನ್ನು ಎರಡು ಬಾರಿ ಹೊಡೆದರು. ಯಾವುದೇ ಬ್ಯಾಟ್ಸ್ ಮನ್ ತನ್ನ ವಿಕೆಟ್ ಅನ್ನು ಕಾಪಾಡಿಕೊಳ್ಳುವ ಏಕೈಕ ಕಾರಣಕ್ಕಲ್ಲದೆ, ಅಥವಾ ಎದುರಾಳಿಗಳ ಒಪ್ಪಿಗೆ ಇಲ್ಲದೆ, ಚೆಂಡನ್ನು ಎರಡು ಬಾರಿ ಹೊಡೆದರೆ, ಆ ಬ್ಯಾಟ್ಸ್ ಮನ್ ಔಟ್ ಎಂದು ನಿರ್ಣಯಿಸಲ್ಪಡುತ್ತಾನೆ.

ನಿಯಮ ೩೫: ಹಿಟ್ ವಿಕೆಟ್. ಬೋಲರ್ ತನ್ನ ಎಸೆತವನ್ನು ಬೀರುವ ಹೆಜ್ಜೆ ಮುಂದಿಟ್ಟಾಗ ಹಾಗೂ ಚೆಂಡು ಆಟದಲ್ಲಿ ಇರುವಾಗ, ಬ್ಯಾಟ್ಸ್ ಮನ್ ತನ್ನ ದೇಹದ ಯಾವುದೇ ಭಾಗದಿಂದ ಅಥವಾ ಬ್ಯಾಟ್ ನಿಂದ ವಿಕೆಟ್ ಅನ್ನು ಅಲುಗಿಸಿ, ಅದರ ಪತನಕ್ಕೆ ಕಾರಣವಾದರೆ, ಅವನು ಔಟ್. ಮೊದಲ ರನ್ ತೆಗೆದುಕೊಳ್ಳಲು ಓಡತೊಡಗಿದಾಗ ತನ್ನ ದೇಹದಯಾವುದೇ ಭಾಗ ಅಥವಾ ಬ್ಯಾಟ್ ತಗುಲಿ ವಿಕೆಟ್ ಬಿದ್ದರೂ ಸ್ಟ್ರೈಕರ್ ಬ್ಯಾಟ್ಸ್ ಮನ್ ಔಟ್ ಆಗುತ್ತಾನೆ. "ದೇಹ" ಎಂದರೆ ಬ್ಯಾಟ್ಸ್ ಮನ್ ನ ವಸ್ತ್ರ ಮತ್ತು ಸಲಕರಣೆಗಳನ್ನು ಒಳಗೊಳ್ಳುತ್ತದೆ.

ನಿಯಮ ೩೬: ಲೆಗ್ ಬಿಫೋರ್ ವಿಕೆಟ್ {ವಿಕೆಟ್ ಗೆ ಅಡ್ಡಲಾಗಿ ಕಾಲು} (LBW). ಚೆಂಡು ಬ್ಯಾಟ್ ಗೆ ತಗುಲುವ ಮುನ್ನ ಬ್ಯಾಟ್ಸ್ ಮನ್ ಗೆ ತಗುಲಿದರೆ, ಹಾಗೂ ಬ್ಯಾಟ್ಸ್ ಮನ್ ಅಲ್ಲಿಲ್ಲದಿದ್ದಲ್ಲಿ ಚೆಂಡು ನೇರವಾಗಿ ವಿಕೆಟ್ ಗೆ ತಗುಲುವಂತೆ ಸಾಗುತ್ತಿದ್ದ ಪಕ್ಷದಲ್ಲಿ, ಮತ್ತು ಚೆಂಡು ಪಿಚ್ ನ ಲೆಗ್ ಸೈಡ್ ನಲ್ಲಿ ಪುಟಬೀಳದಿದ್ದ ಪಕ್ಷದಲ್ಲಿ, ಬ್ಯಾಟ್ಸ್ ಮನ್ ಔಟ್ ಎಂದು ಪರಿಗಣಿಸಲಾಗುತ್ತದೆ. ಆದರೆ, ಚೆಂಡು ಬ್ಯಾಟ್ಸ್ ಮನ್ ಅನ್ನು ಆಫ್-ಸ್ಟಂಪ್ ನ ರೇಖೆಯ ಹೊರಭಾಗದಲ್ಲಿ ತಗುಲಿದಲ್ಲಿ, ಹಾಗೂ ಬ್ಯಾಟ್ಸ್ ಮನ್ ಹೊಡೆತವೊಂದನ್ನು ಹೊಡೆಯುವ ಪ್ರಯತ್ನದಲ್ಲಿ ಇದ್ದಲ್ಲಿ, ಬ್ಯಾಟ್ಸ್ ಮನ್ ಔಟ್ ಇಲ್ಲವೆಂದು ತೀರ್ಮಾನಿಸಲಾಗುತ್ತದೆ.

ನಿಯಮ ೩೭: ಅಬ್ಸ್ ಸ್ಟ್ರಕ್ಟಿಂಗ್ ದ ಫೀಲ್ಡ್(ಕ್ಷೇತ್ರರಕ್ಷಕರಿಗೆ ಅಡಚಣೆ). ಬ್ಯಾಟ್ಸ್ ಮನ್ ಇಚ್ಛಾಪೂರ್ವಕವಾಗಿ ಎದುರಾಳಿಗಳಿಗೆ ಮಾತಿನಿಂದ ಅಥವಾ ಕೃತಿಯಿಂದ ಅಡಚಣೆ ಉಂಟುಮಾಡಿದರೆ ಅಂತಹ ಬ್ಯಾಟ್ಸ್ ಮನ್ ಔಟ್ ಎಂದು ತೀರ್ಮಾನಿಸಲಾಗುತ್ತದೆ.

ನಿಯಮ ೩೮: ರನ್ ಔಟ್. ಚೆಂಡು ಆಟದಲ್ಲಿ ಇದ್ದಾಗಲೇ ಬ್ಯಾಟ್ಸ್ ಮನ್ ಬ್ಯಾಟ್ ಆಗಲೀ, ಅಥವಾ ಅವನ ದೇಹದ ಯಾವುದೇ ಭಾಗವಾಗಲೀ ಪಾಪಿಂಗ್ ಕ್ರೀಸ್ ನ ಹಿಂಭಾಗದಲ್ಲಿ ನೆಲಕ್ಕೆ ಆತು ಇಲ್ಲದಿದ್ದಲ್ಲಿ, ಮತ್ತು ಅದೇ ವೇಳೆಯಲ್ಲಿ ಎದುರಾಳಿಗಳು ಬ್ಯಾಟ್ಸ್ ಮನ್ ನಿಂತಿರುವ ಕಡೆಯ ವಿಕೆಟ್ ಅನ್ನು ಪಲ್ಲಟಗೊಳಿಸಿದಲ್ಲಿ, ಆ ಬ್ಯಾಟ್ಸ್ ಮನ್ ಔಟ್ ಆಗುತ್ತಾನೆ.

ನಿಯಮ ೩೯: ಸ್ಟಂಪ್ಡ್. ಬ್ಯಾಟ್ಸ್ ಮನ್ ತನ್ನ ಕ್ರೀಸ್ ನಿಂದ ಹೊರಗಿದ್ದು, ಯಾವುದೇ ರನ್ ಕದಿಯಲು ಯತ್ನಿಸುತ್ತಿಲ್ಲದ ಸಂದರ್ಭದಲ್ಲಿ, ವಿಕೆಟ್ ಕೀಪರ್ ಚೆಂಡಿನಿಂದ ವಿಕೆಟ್ ಗೆ ಹೊಡೆದು (ಅಥವಾ ಚೆಂಡನ್ನು ಕೈಯಲ್ಲಿ ಹಿಡಿದು ಬೇಲ್ಸ್ ಹಾರಿಸಿದರೆ) (ನೋಡಿ ನಿಯಮ ೪೦) ಬ್ಯಾಟ್ಸ್ ಮನ್ ಔಟ್ ಆಗುತ್ತಾನೆ.

ಕ್ಷೇತ್ರರಕ್ಷಕರು

[ಬದಲಾಯಿಸಿ]

ನಿಯಮ ೪೦: ವಿಕೆಟ್ ಕೀಪರ್. ಬ್ಯಾಟ್ಸ್ ಮನ್ ನಿಂತುಕೊಊಉಕ್ಜ್ಬ್ನ್ಕ್ಝ್ಬ್ಕ್ಜ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಬ್ಳ್ಳುವ ಸ್ಟಂಪ್ ನ ಹಿಂಭಾಗದಲ್ಲಿ ನಿಲ್ಲಲೆಂದೇ ಬೋಲಿಂಗ್ ತಂಡವು ಗೊತ್ತುಪಡಿಸಿದ ಆಟಗಾರನೇ ವಿಕೆಟ್ ಕೀಪರ್. ಗ್ಲೌಸ್ ಮತ್ತು ಹೊರ ಲೆಗ್ ಗಾರ್ಡ್ ಗಳನ್ನು ಧರಿಸಲು ಅನುಮತಿಸಲ್ಪಟ್ಟ ಬೋಲಿಂಗ್ ತಂಡದ ಏಕೈಕ ಆಟಗಾರನೇ ವಿಕೆಟ್ ಕೀಪರ್.

ನಿಯಮ ೪೧: ಫೀಲ್ಡರ್ (ಕ್ಷೇತ್ರರಕ್ಷಕ). ಫೀಲ್ಡರ್ (ಕ್ಷೇತ್ರರಕ್ಷಕ) ಬೋಲಿಂಗ್ ತಂಡದ ಹನ್ನೊಂದು ಸದಸ್ಯರ ಪೈಕಿ ಒಬ್ಬನಾಗಿರುತ್ತಾನೆ. ಫೀಲ್ಡರ್ ಗಳನ್ನು ಚೆಂಡನ್ನು ಫೀಲ್ಡ್ ಮಾಡಲು, ರನ್ ಗಳು ಮತ್ತು ಬೌಂಡರಿ (ನಾಲ್ಕು ರನ್) ಗಳನ್ನು ತಡೆಯಲುಮತ್ತು ಕಾಚ್ ಹಿಡಿದು ಅಥವಾ ರನ್ ಔಟ್ ಮೂಲಕ ಬ್ಯಾಟ್ಸ್ ಮನ್ ಅನ್ನು ಔಟ್ ಮಾಡುವ ಸಲುವಾಗಿ ಮೈದಾನದಲ್ಲಿ ಆಯಕಟ್ಟು ಜಾಗಗಳಲ್ಲಿ ನಿಲ್ಲಿಸಲಾಗುತ್ತದೆ.

ನ್ಯಾಯಬದ್ಧವಾದ ಮತ್ತು ಮೋಸದ ಆಟ

[ಬದಲಾಯಿಸಿ]

ನಿಯಮ ೪೨: ನ್ಯಾಯಬದ್ಧವಾದ ಮತ್ತು ಮೋಸದ ಆಟ.

ಅನುಬಂಧಗಳು

[ಬದಲಾಯಿಸಿ]

ನಿಯಮಗಳಿಗೆ ಸಂಬಂಧಿಸಿದಂತೆ ಇರುವ ಐದು ಅನುಬಂಧಗಳು ಈ ಕೆಳಕಂಡಂತಿವೆ:

ಅನುಬಂಧ A: ಚೆಂಡು ಮತ್ತು ವಿಕೆಟ್ ಗಳ ಹಾಗೂ ಬೇಲ್ಸ್ ಗಳ ನಿರ್ದಿಷ್ಟ ಅಳತೆ ಆಕಾರಗಳ ಮಾಹಿತಿ ಮತ್ತು ಅವುಗಳ ಚಿತ್ರಗಳು
ಅನುಬಂಧ B: ಪಿಚ್ ಮತ್ತು ಕ್ರೀಸ್ ಬಗ್ಗೆ ನಿರ್ದಿಷ್ಟ ವಿವರಗಳು ಮತ್ತು ಚಿತ್ರಗಳು
ಅನುಬಂಧ C: ಗ್ಲೌವ್ಸ್ ಬಗ್ಗೆ ನಿರ್ದಿಷ್ಟ ವಿವರಗಳು ಮತ್ತು ಚಿತ್ರಗಳು
ಅನುಬಂಧ D: ವ್ಯಾಖ್ಯೆಗಳು
ಅನುಬಂಧ E: ಬ್ಯಾಟ್
ಅನುಬಂಧ ‍F: ಲೇಗ ಬೈ ವಿಕೇಟ

ಇವನ್ನೂ ಗಮನಿಸಿ‌

[ಬದಲಾಯಿಸಿ]

ಟೆಂಪ್ಲೇಟು:Portal

ಉಲ್ಲೇಖಗಳು‌

[ಬದಲಾಯಿಸಿ]

ಬಾಹ್ಯ ಕೊಂಡಿಗಳು‌

[ಬದಲಾಯಿಸಿ]