ಕೊಡಗು ಭಾಷೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೈಸೂರು ಪ್ರಾಂತ್ಯದ ಕೊಡಗು ಜಿಲ್ಲೆಯಲ್ಲಿ ವ್ಯವಹಾರದಲ್ಲಿರುವ ಭಾಷೆ. 1961ರ ಜನಗಣತಿಯ ಪ್ರಕಾರ 78,202ಕ್ಕಿಂತ ಹೆಚ್ಚು ಜನ ಇದನ್ನು ಬಳಸುತ್ತಿದ್ದರು ಎಂದು ತಿಳಿದುಬಂದಿದೆ. ಈ ಭಾಷೆಯ ಕ್ಷೇತ್ರ ಮಲಯಾಳಿ, ಕನ್ನಡ ಮತ್ತು ತುಳು ಭಾಷೆಗಳ ಆವರಣದೊಳಗಿರುವುದರಿಂದ, ಈ ಮೂರು ಭಾಷೆಗಳ ದಟ್ಟ ಪ್ರಭಾವ ಇದರ ಮೇಲೆ ಆಗಿರುವುದನ್ನು ಕಾಣಬಹುದು. ಇದು ದ್ರಾವಿಡ ಭಾಷಾ ಪರಿವಾರದಲ್ಲಿ ದಕ್ಷಿಣ ದ್ರಾವಿಡ ಭಾಷಾವರ್ಗಕ್ಕೆ ಸೇರುತ್ತದೆ.

ತಮಿಳು ಭಾಷೆಗೆ ತೊದ ಮತ್ತು ಕೊತ ಉಪಭಾಷೆಗಳಿರುವಂತೆ, ಕನ್ನಡಕ್ಕೆ ಬಡಗ ಮತ್ತು ಕೊಡಗು ಉಪಭಾಷೆಗಳು ಎಂಬ ಅಭಿಪ್ರಾಯವನ್ನೊಪ್ಪಿದ ಕಾಲ್ಡ್‍ವೆಲ್ ಇದರ ವಿವರಣೆಯನ್ನು ಕನ್ನಡದಲ್ಲಿಯೇ ಸೇರಿಸಿದ್ದಾನೆ. ಇದು ತುಳುವಿನ ಉಪಭಾಷೆ ಎಂಬ ಅಭಿಪ್ರಾಯವೂ ಇದೆ. ಕನ್ನಡಕ್ಕಿಂತಲೂ ಇದು ತಮಿಳು ಮಲಯಾಳಂ ಭಾಷೆಯನ್ನೇ ಹೆಚ್ಚು ಹೋಲುತ್ತದೆ ಎಂದು ಮೋಗ್ಲಿಂಗನ ಅಭಿಪ್ರಾಯ. ಕನ್ನಡಕ್ಕೆ ಇದು ಹೆಚ್ಚು ಹತ್ತಿರವಾಗಿದೆಯೆಂದು ಆಧುನಿಕ ಭಾಷಾಶಾಸ್ತ್ರಜ್ಞರ ಅಭಿಪ್ರಾಯ. ಕೊಡಗು ಭಾಷೆಗೆ ಲಿಪಿ ಇಲ್ಲವಾಗಿ ಬರೆಯಲು ಮಲಯಾಳಿ ಮತ್ತು ಕನ್ನಡ ಲಿಪಿಗಳೆರಡನ್ನೂ ಬಳಸಲಾಗುತ್ತಿದೆ. ಧ್ವನಿವ್ಯವಸ್ಥೆ, ಆಕೃತಿಮಾರಚನೆ, ವಾಕ್ಯರಚನೆ ಮತ್ತು ವ್ಯಾಕರಣಾಂಶಗಳಲ್ಲಿ ಇದು ದಕ್ಷಿಣ ದ್ರಾವಿಡ ಭಾಷೆಗಳ ಗುಂಪಿಗೆ ಸೇರಿದ್ದು ಎಂಬುದು ನಿರ್ವಿವಾದ ವಿಷಯ.

ಕೊಡಗು ಭಾಷೆಯನ್ನು ಕೂರ್ಗಿಭಾಷೆ ಎಂದು ಕರೆಯುವ ರೂಢಿಯುಂಟು. ಕುಡ, ಕುಡಗು, ಕೊಡಗು, ಕೊಡಗರು, ಕೊಡವ, ಕೂರ್ಗಿ ಇತ್ಯಾದಿ ಪದಗಳು ಬೇರೆ ಬೇರೆ ಆಕರಗಳಲ್ಲಿ ಕಂಡುಬರುತ್ತವೆ. 1174ರ ಹುಣಸೂರು ಶಾಸನದಲ್ಲಿ ಕುಡ, ಕೊಡವ, ಕೊಡಗ ಇತ್ಯಾದಿ ಪದಗಳು ಇರುವುದನ್ನು ಕೆಲವು ವಿದ್ವಾಂಸರು ಗಮನಿಸಿ ಬಹುಶಃ ಇದೇ ಮೊಟ್ಟ ಮೊದಲ ಉಲ್ಲೇಖವಿರಬಹುದೆಂದು ಹೇಳುತ್ತಾರೆ. ಆದರೆ ಇವುಗಳ ಅರ್ಥ ಇನ್ನೂ ಸ್ಪಷ್ಟವಾಗಿಲ್ಲ.

ಕೊಡಗು ಭಾಷೆಯಲ್ಲಿ ಮೊಟ್ಟಮೊದಲ ವ್ಯಾಕರಣವನ್ನು ರಚಿಸಿದ ಕೀರ್ತಿ ಕೋಲ್ ಎಂಬಾತನಿಗೆ ಸಲ್ಲಬೇಕು. ಇದಕ್ಕಿಂತಲೂ ಮೊದಲು ಕಾಲ್ಡ್‍ವೆಲ್ ಮತ್ತು ಗ್ರೆಟರ್ ಮುಂತಾದ ವಿದ್ವಾಂಸರು ಈ ಭಾಷೆಯ ಪರಿಚಯ ಮಾಡಿಕೊಟ್ಟಿದ್ದರು. ಕೋಲ್ ಮಹಾಶಯ ತನ್ನ ವ್ಯಾಕರಣದಲ್ಲಿ ಮಲಯಾಳಿ, ತುಳು ಮತ್ತು ಕನ್ನಡ ಭಾಷೆಗಳೊಡನೆ ಕೊಡಗು ಭಾಷೆಯನ್ನು ಹೋಲಿಸುವ ಯತ್ನ ಮಾಡಿದ್ದಾನೆ. ಈ ಭಾಷೆಯ ಬಗ್ಗೆ ಅಮೆರಿಕದ ಪ್ರಮುಖ ದ್ರಾವಿಡ ಭಾಷಾವಿಜ್ಞಾನಿ ಎಂ.ಬಿ.ಎಮೆನೊ ಕೂಡ ಕೆಲಸ ಮಾಡಿದ್ದಾನೆ.

ಕೊಡಗು ಭಾಷೆಯನ್ನು ಕನ್ನಡ ಭಾಷೆಯೊಡನೆ ಹೋಲಿಸಿದಾಗ ಎರಡಕ್ಕೂ ಧ್ವನಿವ್ಯವಸ್ಥೆ, ಆಕೃತಿಮಾರಚನೆ, ವಾಕ್ಯರಚನೆ ಮತ್ತು ವ್ಯಾಕರಣಾಂಶಗಳಲ್ಲಿ ಹೆಚ್ಚಿನ ಹೋಲಿಕೆ ಕಾಣಿಸುತ್ತದೆ. ಆದ್ದರಿಂದ ಇದು ಕನ್ನಡ ಭಾಷೆಯ ಉಪಭಾಷೆ ಎಂದು ಕೆಲವು ವಿದ್ವಾಂಸರ ಅಭಿಪ್ರಾಯವಾಗಿತ್ತು. ಈಗ ಇದು ಒಂದು ಸ್ವತಂತ್ರ ಭಾಷೆಯಾಗಿ ನಿಲ್ಲಬಲ್ಲ ಶಕ್ತಿ ಪಡೆದುಕೊಂಡಿದೆ ಎಂದು ಭಾಷಾ ವಿಜ್ಞಾನಿಗಳು ಮನಗಂಡಿದ್ದಾರೆ. ಇಲ್ಲಿ ತಮಿಳು ಮತ್ತು ಮಲಯಾಳಿ ಭಾಷೆಗಳ ಪದಸಮೂಹಗಳಂತೆ ವ್ಯಂಜನಾಂತ್ಯಗಳೇ ಹೆಚ್ಚು. ಅಲ್ಲದೆ, ಕೆಲವು ಪದಗಳ ಕೊನೆಯಲ್ಲಿ ಅನುನಾಸಿಕತೆಯೂ ಎದ್ದು ಕಾಣುತ್ತದೆ.

ಕನ್ನಡ ಭಾಷೆಯ ಕೆಲವು ಪದಗಳಲ್ಲಿ ಮೂಲದ್ರಾವಿಡ ಧ್ವನಿಗಳ ಕಕಾರ ಚಕಾರವಾಗಿಯೂ ಪಕಾರ ಹಕಾರವಾಗಿಯೂ ಮತ್ತು ಚಕಾರ ಸಕಾರವಾಗಿಯೂ ಪರಿವರ್ತನೆಗೊಂಡಿರುವಂತೆ ಕೊಡಗುಭಾಷೆಯಲ್ಲಿ ಆಗಿಲ್ಲ.[೧]

ಸ್ವರಗಳು[ಬದಲಾಯಿಸಿ]

ಇ ಈ ಉ ಊ ಎ ಏ ಒ ಓ ಅ ಆ (ಅನುನಾಸಿಕತೆಯೂ ಇಲ್ಲಿ ಸಾರ್ಥಕ ಧ್ವನಿಮಾ).

ವ್ಯಂಜನಗಳು[ಬದಲಾಯಿಸಿ]

ಪ ಬ ತ ದ ಟ ಡ ಚ ಜ ಕ ಗ ಮ ನ ಣ ಞ ಙ ಸ ಲ ಳ ರ ವ ಯ.

ಉದಾಹರಣೆಗಳು[ಬದಲಾಯಿಸಿ]

ಕೊಡಗು ಭಾಷೆಯ ಲಿಂಗ, ವಚನ, ವಿಭಕ್ತಿ, ಪ್ರತ್ಯಯಗಳು, ನಾಮಪದ ಸರ್ವನಾಮ, ಸಂಖ್ಯಾವಾಚಕ, ಗುಣವಾಚಕ, ಕ್ರಿಯಾಪದ, ಕ್ರಿಯಾವಿಶೇಷಣ ಇತ್ಯಾದಿ ಅಂಶಗಳು ತಮಿಳು, ಮಲಯಾಳಿ, ಕನ್ನಡ ಮತ್ತೂ ತುಳುವನ್ನೇ ಪ್ರಧಾನವಾಗಿ ಹೋಲುವುದೆಂಬ ಅಭಿಪ್ರಾಯ ಪದೇ ಪದೇ ವ್ಯಕ್ತವಾಗಿದೆ. ಕನ್ನಡಕ್ಕೆ ಸಂಬಂಧಿಸಿದಂತೆ ಇಲ್ಲಿ ಕೆಲವು ಉದಾಹರಣೆಗಳನ್ನು ಮಾತ್ರ ಕೊಟ್ಟಿದೆ.

ಕೊಡಗು ಭಾಷೆಯಲ್ಲಿ ಪಕಾರ ಹಕಾರವಾಗಿ ಪರಿವರ್ತನೆಗೊಳ್ಳದೆ ಹಾಗೆಯೇ ಉಳಿದಿರುವ ಕೆಲವು ಪದಗಳಿವು.

ಕನ್ನಡ ಕೊಡಗು
ಹೂವು ಪೂವ್
ಹಾಲು ಪಾಲ್
ಹುಳು ಪುಳು
ಹಂದಿ ಪಂದಿ

ಕೆಲವು ಸರ್ವನಾಮಗಳು[ಬದಲಾಯಿಸಿ]

ಕನ್ನಡ ಕೊಡಗು
ನಾನು ನಾನ್
ನಾವು ನಾಂಗ, ನಂಗ
ನೀನು ನೀನ್
ನೀವು ನೀಂಗ, ನಿಂಗ
ಅದು ಅದ್

ಕೆಲವು ಸಂಖ್ಯಾವಾಚಕಗಳು[ಬದಲಾಯಿಸಿ]

ಕನ್ನಡ ಕೊಡಗು
ಒಂದು ಒಂದ್
ಎರಡು ದಂಡ್
ಮೂರು ಮೂಂಡ್
ನಾಲ್ಕು ನಾಲ್
ಐದು ಅಂಜಿ
ಆರು ಆರ್
ಏಳು ಏಳ್
ಹತ್ತು ಪತ್ತ್

ಉಲ್ಲೇಖಗಳು[ಬದಲಾಯಿಸಿ]

  1. http://www.wikiwand.com/kn/%E0%B2%95%E0%B3%8A%E0%B2%A1%E0%B2%97%E0%B3%81_%E0%B2%9C%E0%B2%BF%E0%B2%B2%E0%B3%8D%E0%B2%B2%E0%B3%86