ಕೊಟ್ಟಿಗೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಕೊಟ್ಟಿಗೆ ಎಂಬುದು ಜಾನುವಾರುಗಳನ್ನು ಕಟ್ಟಿ ಸಾಕಲು ಮಾಡಿರುವ ಒಂದು ವಸತಿ ವ್ಯವಸ್ಥೆ. ಎತ್ತು, ದನ, ಎಮ್ಮೆ, ಕುರಿಗಳಂತಹ ಪಶು ಸಾಂಗೋಪನೆಯಲ್ಲಿ ತೊಡಗಿರುವವರು, ಅವುಗಳನ್ನು ಕಟ್ಟಿ ಸಲಹುವ ತಾಣ ಕೊಟ್ಟಿಗೆಯಾಗಿದೆ. ಹಟ್ಟಿ, ದೊಡ್ಡಿ ಎಂದೂ ಇದನ್ನು ಕರೆಯುತ್ತಾರೆ.


ಕೊಟ್ಟಿಗೆಯೊಂದರ ನೋಟ

ಸ್ಥಳೀಯ ಹವಾಮಾನ ಮತ್ತು ಮನೆಯವರ ಆರ್ಥಿಕ ಸ್ಥಿತಿಗೆ ತಕ್ಕಂತೆ ಕೊಟ್ಟಿಗೆಯ ರೂಪು ಇರುತ್ತದೆ. ಕೊಟ್ಟಿಗೆಯ ನೆಲಹಾಸಿಗೆ ಚಪ್ಪಡಿ ಕಲ್ಲು, ಸಿಮೆಂಟ್ ಅಥವಾ ಗೊಚ್ಚು ಮಣ್ಣು ಬಳಸುವುದು ರೂಢಿ. ಹಾಗೆಯೇ ಜಾನುವಾರುಗಳನ್ನು ಮಳೆ ಮತ್ತು ಬಿಸಿಲಿನಿಂದ ರಕ್ಷಿಸಲು ಮೇಲೆ ಛಾವಣಿಯೂ, ಸುತ್ತಲೂ ಗೋಡೆಯೂ ಇರುತ್ತದೆ. ಗೋಡೆಯ ಬದಲಿಗೆ ಕೆಲ ಭಾಗಗಳಲ್ಲಿ ಬಿದಿರನ ತಡಿಕೆ ನಿರ್ಮಿಸುವುದೂ ಇದೆ. ಜಾನುವಾರುಗಳನ್ನು ಕಟ್ಟಿ ಹಾಕಲು ಕೊಟ್ಟಿಗೆಯಲ್ಲಿ ಅಲ್ಲಲ್ಲಿ ಕಂಬ ಅಥವಾ ಕಬ್ಬಿಣದ ಕೊಂಡಿಗಳನ್ನು ಇರಿಸಲಾಗಿರುತ್ತದೆ. ಈ ಕಂಬ ಅಥವಾ ಕೊಂಡಿಗೆ ಜಾನುವಾರುಗಳನ್ನು ಕಣ್ಣಿಯ ಮೂಲಕ ಬಂಧಿಸಲಾಗುತ್ತದೆ. ಕಟ್ಟಿಹಾಕಿದ ಜಾನುವಾರುಗಳ ಮೂತ್ರವು ಸಾಗಿ ಹೊರಗೆ ಹೋಗುವಂತೆ ಕೊಟ್ಟಿಗೆಯಲ್ಲಿ ಒಂದು ಓಣಿ ಇರುತ್ತದೆ. ಜಾನುವಾರುಗಳ ಮೇವು ಹಾಗೂ ಹಿಂಡಿಯಂತಹ ತಿನಿಸುಗಳನ್ನು ಸಂಗ್ರಹಿಸಿಡಲೂ ಕೊಟ್ಟಿಗೆಯಲ್ಲಿ ಸ್ಥಳ ಕಲ್ಪಿಸಲಾಗಿರುತ್ತದೆ.


ಕೊಟ್ಟಿಗೆಯ ನೆಲಹಾಸಿಗೆ ಸೊಪ್ಪು ಅಥವಾ ಒಣ ಹುಲ್ಲು ಹಾಸುವ ಪದ್ಧತಿ ಕೆಲ ಭಾಗಗಳಲ್ಲಿ ಇದೆ. ಪ್ರತಿ ದಿನ ಕೊಟ್ಟಿಗೆಯನ್ನು ಶುಚಿಗೊಳಿಸುವ ಮುನ್ನ ಈ ಸೊಪ್ಪು ಅಥವಾ ಒಣ ಹುಲ್ಲನ್ನು ಬಾಚಿ ಗೊಬ್ಬರದ ಗುಂಡಿಗೆ ಹಾಕುವುದರ ಮೂಲಕ ಜಾನುವಾರುಗಳ ಸಗಣಿ ಮತ್ತು ಮೂತ್ರಗಳಲ್ಲಿರುವ ಸಾರವು ನಷ್ಟವಾಗದಂತೆ ತಡೆಯುವುದು ಹಾಗೂ ಜಾನುವಾರುಗಳಿಗೆ ಮಲಗಲು ಮೆತ್ತನೆಯ, ಸುಖಕರವಾದ ನೆಲ ಒದಗಿಸುವುದು ಇದರ ಉದ್ದೇಶವಾಗಿದೆ. [೧]


ಸಾಮಾನ್ಯವಾಗಿ ಹಳ್ಳಿವಾಸಿಗಳಲ್ಲಿ ಕೊಟ್ಟಿಗೆಯು ಮನೆಯ ಅವಿಭಾಜ್ಯ ಅಂಗವೇ ಆಗಿರುತ್ತದೆ. ಪಶು ಸಾಂಗೋಪನೆಯ ಭಾಗಗಳಾಗಿರುವ ಹಾಲು ಕರೆಯುವುದು, ಜಾನುವಾರುಗಳಿಗೆ ಮೇವು-ತಿಂಡಿ-ನೀರು ಒದಗಿಸುವುದು, ಜಾನುವಾರುಗಳಿಗೆ ಸ್ನಾನ ಮಾಡಿಸುವುದು, ಕೊಟ್ಟಿಗೆಗೆ ಸೊಪ್ಪು ಹಾಸುವುದು, ಕೊಟ್ಟಿಗೆಯನ್ನು ಪ್ರತಿದಿನ ಶುಚಿಗೊಳಿಸುವುದು ಇವೆಲ್ಲ ಕೊಟ್ಟಿಗೆಗೆ ಹೊಂದಿಕೊಂಡಂತೆ ನಡೆಯುವ ಕಾರ್ಯಗಳು.


ಆಕರಗಳು:[ಬದಲಾಯಿಸಿ]

  1. http://www.prajavani.net/article/%E0%B2%B9%E0%B2%B8%E0%B3%81%E0%B2%B5%E0%B2%BF%E0%B2%97%E0%B3%82-%E0%B2%AE%E0%B3%86%E0%B2%A4%E0%B3%8D%E0%B2%A4%E0%B2%A8%E0%B3%86%E0%B2%AF-%E0%B2%B8%E0%B3%81%E0%B2%AA%E0%B3%8D%E0%B2%AA%E0%B2%A4%E0%B3%8D%E0%B2%A4%E0%B2%BF%E0%B2%97%E0%B3%86