ವಿಷಯಕ್ಕೆ ಹೋಗು

ಕೈಗಾರಿಕೆಯ ಸ್ಥಿತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇಂಗ್ಲೆಂಡ್ ನ ಕೈಗಾರಿಕೆಯ ವ್ಯವಸ್ಥೆ ಕ್ರಮಕ್ರಮವಾಗಿ ಅನೇಕ ಘಟ್ಟಗಳನ್ನು ದಾಟಿತು. ಇವುಗಳಲ್ಲಿ ಪ್ರಮುಖವಾದುವೆಂದರೆ 1. ಕುಟುಂಬ ವ್ಯವಸ್ಥೆ, 2. ವೃತ್ತಿಸಂಘ ವ್ಯವಸ್ಥೆ, 3. ಹೊರಗೆಲಸ ಕೊಡುವ ವ್ಯವಸ್ಥೆ, 4. ಕಾರ್ಖಾನೆ ವ್ಯವಸ್ಥೆ.ಕುಟುಂಬ ವ್ಯವಸ್ಥೆಯೊಂದಿಗೆ ಕೈಗಾರಿಕೆಯ ಬೀಜಾಂಕುರವಾಯಿತೆನ್ನಬಹುದು. ಈ ಸ್ಥಿತಿಯ ಉತ್ಪಾದನೆಯಲ್ಲಿ ಮಾರುಕಟ್ಟೆಯ ಪ್ರಶ್ನೆ ಇರಲಿಲ್ಲ. ಪ್ರತಿಯೊಂದು ಕುಟುಂಬವೂ ತನ್ನ ಆವಶ್ಯಕತೆಗಳನ್ನು ಪುರೈಸಿಕೊಳ್ಳುವುದಕ್ಕಾಗಿ ಮಾತ್ರ ಪದಾರ್ಥ ತಯಾರಿಸುತ್ತಿತ್ತು. ಹೊರಗಿನ ಪೇಟೆಗಾಗಿ ಪದಾರ್ಥ ತಯಾರಿಕೆಯ ಕೆಲಸ ನಡೆಯುತ್ತಿರಲಿಲ್ಲ.

ಇತಿಹಾಸ

[ಬದಲಾಯಿಸಿ]

12 ಮತ್ತು 13ನೆಯ ಶತಮಾನದಲ್ಲಿ ಪ್ರಾರಂಭವಾದ ವೃತ್ತಿಸಂಘಗಳು ಕೈಗಾರಿಕೆಗೆ ಒಂದು ವಿಶಿಷ್ಟಸ್ಥಾನವನ್ನು ಕಲ್ಪಿಸಿಕೊಟ್ಟವೆಂದು ಹೇಳಬಹುದು. ಇವು ಕೈಗಾರಿಕಾ ರಂಗಕ್ಕೆ ಕೃಷಿ ಹಾಗೂ ವಾಣಿಜ್ಯ ರಂಗಕ್ಕಿಂತ ವಿಭಿನ್ನವಾದ ಆರ್ಥಿಕ ಸ್ಥಾನವನ್ನು ಗಳಿಸಿಕೊಟ್ಟವು. ಸ್ಥಳೀಯ ಮಾರುಕಟ್ಟೆಗಳು ಆರಂಭವಾದವು. ಮಧ್ಯಯುಗದ ಪುರ್ವದಲ್ಲಿನ ಮುಖ್ಯ ಕಸುಬು ಕೃಷಿಯಾಗಿತ್ತು. ಒರಟಾದ ಬಟ್ಟೆಗಳನ್ನು ಮತ್ತು ತಮಗೆ ಅಗತ್ಯವಾದ ಸಾಧನಗಳನ್ನು ಕೃಷಿಕರೇ ತಯಾರಿಸಿಕೊಳ್ಳುತ್ತಿದ್ದರು. ಆದರೆ ವೃತ್ತಿಸಂಘಗಳ ಆವಿರ್ಭಾವದಿಂದ ಇಂಥ ವಸ್ತುಗಳ ಉತ್ಪಾದನೆಗೆ ಮೀಸಲಾದ ಜನರ ವರ್ಗವೊಂದು ಪ್ರಾರಂಭವಾಯಿತು.ವೃತ್ತಿಸಂಘವೆಂದರೆ ಒಂದು ವಸ್ತುವಿನ ತಯಾರಿಕೆಯಲ್ಲಿ ತೊಡಗಿಕೊಳ್ಳುವ ಕುಶಲ ಕಾರ್ಮಿಕರ ಸಂಘ. ಇಂಗ್ಲೆಂಡಿನಲ್ಲಿ ನೇಕಾರರಲ್ಲಿ ಪ್ರಥಮವಾಗಿ ಈ ರೀತಿಯ ವೃತ್ತಿಸಂಘ ಪ್ರಾರಂಭವಾಯಿತು. ಅನಂತರ ಎಲ್ಲ ವಸ್ತುಗಳ ಉತ್ಪಾದನೆಗೂ ಇದು ಹರಡಿತು. ಇವು ಪ್ರಾರಂಭವಾದಾಗ ಜನಗಳಿಗೆ ವೃತ್ತಿಸಂಘಗಳ ಬಗ್ಗೆ ವಿಶೇಷ ಗೌರವವಿತ್ತು. ಈ ವೃತ್ತಿಸಂಘಗಳು ಕಾರ್ಮಿಕರಿಗೆ ಸಮಾಜದಲ್ಲಿ ಉತ್ತಮ ಸ್ಥಾನವನ್ನು ದೊರಕಿಸಿಕೊಟ್ಟುವು. ವೃತ್ತಿಸಂಘಗಳ ನಿಯಮಬದ್ಧತೆಯಿಂದ ಮೇನರ್ ಪದ್ಧತಿಯಲ್ಲಿ ಬೆಳೆದಿದ್ದ ನೌಕರರಿಗೆ ಶಿಸ್ತು ದೊರಕಿತು. 14ನೆಯ ಶತಮಾನದ ಅನಂತರ ಪಟ್ಟಣಗಳಲ್ಲಿ ವೃತ್ತಿಸಂಘಗಳು ಕೈಗಾರಿಕೆಯ ವ್ಯವಸ್ಥೆಯನ್ನು ಹೆಚ್ಚಿನ ರೀತಿಯಲ್ಲಿ ಸಂಘಟಿಸುವುದಕ್ಕೆ ಪ್ರಾರಂಭಿಸಿದವು. ಹೀಗೆ ವೃತ್ತಿಸಂಘಗಳು ಪಟ್ಟಣ ವ್ಯವಸ್ಥೆಯ ಅವಿಭಾಜ್ಯ ಅಂಗಗಳಾದವು. 14ನೆಯ ಶತಮಾನದ ಕೊನೆಯ ವೇಳೆಗೆ ಲಂಡನ್ ಮತ್ತು ಇತರ ಮುಖ್ಯ ಪಟ್ಟಣಗಳಲ್ಲಿ ಇವು ಪ್ರಮುಖವಾಗಿ ಹರಡಿದ್ದವು.

ವೃತ್ತಿಸಂಘಗಳ ಮುಖ್ಯ ಗುರಿ

[ಬದಲಾಯಿಸಿ]

ವೃತ್ತಿಸಂಘಗಳ ಮುಖ್ಯ ಗುರಿಯೆಂದರೆ, ವಸ್ತುಗಳ ಉತ್ಪಾದನೆಯಲ್ಲಿ ಒಳ್ಳೆಯ ಕುಶಲತೆಯನ್ನು ಉಳಿಸಿಕೊಳ್ಳುವುದು ಮತ್ತು ವಸ್ತುಗಳ ಬೆಲೆಯನ್ನು ನ್ಯಾಯದರದಲ್ಲಿ ಕಾಪಾಡಿಕೊಳ್ಳುವುದು. ವೃತ್ತಿಸಂಘಗಳು ತಮ್ಮ ಸದಸ್ಯರ ಕಾರ್ಯನಿರ್ವಹಣೆಯ ಪರಿಶೀಲನೆಗಾಗಿ ಮೇಲ್ವಿಚಾರಕರನ್ನು ನೇಮಕ ಮಾಡುತ್ತಿದ್ದವು. ಮೇಲ್ವಿಚಾರಕರಿಗೆ ಯಾವ ಉತ್ಪಾದನಾ ಸಂಸ್ಥೆಗಾಗಲಿ ಭೇಟಿ ನೀಡುವ ಮತ್ತು ಅದರ ಕೆಲಸಗಳನ್ನು ಪರಿಶೀಲಿಸುವ ಹಕ್ಕಿತ್ತು. ವೃತ್ತಿಸಂಘದ ಎಲ್ಲ ಸದಸ್ಯರ ಸಭೆಗಳು ಪದೇ ಪದೇ ಕೂಡಿ ಮುಖ್ಯವಾದ ವಿಷಯಗಳನ್ನು ಚರ್ಚಿಸುತ್ತಿದ್ದುವು. ಅನೇಕ ವೃತ್ತಿಸಂಘಗಳಲ್ಲಿ ಮಂಡಲಿಗಳಿದ್ದುವು. ಇವು ತಮ್ಮ ಸದಸ್ಯರ ಕಾರ್ಯಚಟುವಟಿಕೆಗಳನ್ನು ನಿಗದಿಮಾಡುತ್ತಿದ್ದುವು. ಇವೇ ಮೇಲ್ವಿಚಾರಕರನ್ನೂ ಚುನಾಯಿಸುತ್ತಿದ್ದವು.ಪ್ರತಿ ವೃತ್ತಿಸಂಘದಲ್ಲೂ ಮೂರು ರೀತಿಯ ಸದಸ್ಯರಿರುತ್ತಿದ್ದರು. ಕಸಬುದಾರ ಧಣಿ, ಕಾರೇಗಾರರು (ಜರ್ನಿಮೆನ್) ಮತ್ತು ಅಭ್ಯಾಸಿಗಳು. ಕಸಬುದಾರ ಧಣಿಗಳು ಸಂಸ್ಥೆಗಳನ್ನು ಅಥವಾ ಸಣ್ಣ ಉದ್ಯಮಗಳನ್ನು ಸ್ವಂತವಾಗಿ ಪ್ರಾರಂಭಿಸಿ ಕಾರೇಗಾರರು ಹಾಗೂ ಅಭ್ಯಾಸಿಗಳೊಂದಿಗೆ ತಾವೂ ಸೇರಿ ವಸ್ತುಗಳನ್ನು ಉತ್ಪಾದಿಸುತ್ತಿದ್ದರು. ಕಾರೇಗಾರರು ತರಬೇತಿ ಪಡೆದ ಕಾರ್ಮಿಕರಾಗಿದ್ದು ಕೂಲಿಯ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು. ಅಭ್ಯಾಸಿಗಳು ಯಾವ ವಿಧವಾದ ಕೂಲಿಯನ್ನೂ ಪಡೆಯದೆ ಕಲಿಕೆಗಾಗಿ ಕೆಲಸ ಮಾಡುತ್ತಿದ್ದರು.ಅಂದರೆ ಇವರು ಮೂರು ವರ್ಗದ ಜನರಾಗಿದ್ದರೆಂದಲ್ಲ; ಜೀವನ ಕ್ರಮದ ಮೂರು ಹಂತಗಳಲ್ಲಿದ್ದ ಜನರಾಗಿದ್ದರು. ಕಾರೇಗಾರರಿಗೆ ಸಾಕಷ್ಟು ಬಂಡವಾಳ ಸಿಕ್ಕೊಡನೆ ಅವರು ತಮ್ಮದೇ ಉದ್ಯಮ ಪ್ರಾರಂಭಿಸುತ್ತಿದ್ದು, ಹಾಗೆಯೇ ತಮ್ಮ ತರಬೇತಿ ಮುಗಿದ ತಕ್ಷಣ ಅಭ್ಯಾಸಿಗಳು ಕಾರೇಗಾರರಾಗುತ್ತಿದ್ದರು.


ವೃತ್ತಿಸಂಘಗಳು

[ಬದಲಾಯಿಸಿ]

15 ಮತ್ತು 16ನೆಯ ಶತಮಾನಗಳ ಅವಧಿಯಲ್ಲಿ ವೃತ್ತಿಸಂಘಗಳು ಕ್ಷೀಣವಾಗಲು ಪ್ರಾರಂಭಿಸಿದವು. ಕೈಗಾರಿಕೆಯಲ್ಲಿ ಪ್ರಗತಿಯಾದಂತೆಲ್ಲ ಹೆಚ್ಚಿನ ಜನ ವೃತ್ತಿಸಂಘಗಳ ಸದಸ್ಯತ್ವಕ್ಕಾಗಿ ಬೇಡಿಕೆ ಸಲ್ಲಿಸಲು ಪ್ರಾರಂಭಿಸಿದರು. ತಮ್ಮ ಹಿತರಕ್ಷಣೆಯ ದೃಷ್ಟಿಯಿಂದ ಈ ಸಂಘಗಳು ಸದಸ್ಯತ್ವಕ್ಕಾಗಿ ತೀವ್ರವಾದ ನಿಬಂಧನೆ ವಿಧಿಸಲಾರಂಭಿಸಿದವು. ಆಂತರಿಕವಾಗಿ ವೃತ್ತಿಸಂಘಗಳ ಆಡಳಿತ ವ್ಯವಸ್ಥೆ ಸಡಿಲವಾಗಲಾರಂಭಿಸಿತು. ಕೇವಲ ಕೆಲವು ಜನ ವೃತ್ತಿಸಂಘಗಳಲ್ಲಿ ತಮ್ಮ ಹಿತ ಸಾಧಿಸುವುದಕ್ಕೆ ಪ್ರಾರಂಭಮಾಡಿದರು. ಕೆಲವು ವೃತ್ತಿಸಂಘಗಳು ಸದಸ್ಯತ್ವ ಶುಲ್ಕವನ್ನು ತೀರ ಹೆಚ್ಚಿನ ಮಟ್ಟದಲ್ಲಿಟ್ಟು ಸದಸ್ಯತ್ವವೇ ಅಸಾಧ್ಯವಾಗುವಂತೆ ಮಾಡಲಾರಂಭಿಸಿದವು. ಮೂಲಸಂಖ್ಯೆ ಹೆಚ್ಚಾಗದಂತೆ ನೋಡಿಕೊಳ್ಳಲು ಕಾರೇಗಾರರು ಮಾಲೀಕರಾಗುವುದನ್ನು ತಡೆಯುವ ನಿಬಂಧನೆಗಳನ್ನು ಮಾಡಲಾಯಿತು. ತಾವೇ ಮಾಲೀಕರಾಗುವುದು ಅಸಾಧ್ಯವೆಂಬುದನ್ನು ಮನಗಂಡ ಕಾರೇಗಾರರು ಹೆಚ್ಚಿನ ಕೂಲಿ ಬೇಡಲಾರಂಭಿಸಿದರು ಮತ್ತು ಮಾಲೀಕರನ್ನು ತಮಗಿಂತ ಹೆಚ್ಚಿನ ಮಟ್ಟದ ಜನ ಎಂಬ ಭಾವನೆಯಿಂದ ನೋಡಲಾರಂಭಿಸಿದರು. ಅಸೂಯೆ ಹುಟ್ಟಿತು. ಅನೇಕ ಪಟ್ಟಣಗಳಲ್ಲಿ ಕಾರೇಗಾರರು ತಮ್ಮದೇ ಆದ ಸಂಘಗಳನ್ನು ಕಾರೇಗಾರರ ವೃತ್ತಿಸಂಘ ಎಂಬ ಹೆಸರಿನಿಂದ ಪ್ರಾರಂಭಿಸಿದರು. ವರ್ಗಸಂಘರ್ಷ ಅಸ್ತಿತ್ವಕ್ಕೆ ಬರಲಾರಂಭಿಸಿತು. ಬಂಡವಾಳಗಾರರು ಉತ್ಪಾದನೆಯ ರಂಗದಲ್ಲಿ ಏಕಸ್ವಾಮ್ಯ ಪಡೆದುಕೊಳ್ಳುವ ಪ್ರಯತ್ನ ಆರಂಭಿಸಿದರು. ಅವರು ವಿಶಿಷ್ಟ ಪೋಷಾಕು ಧರಿಸಲಾರಂಭಿಸಿ ತಾವು ಶ್ರೀಮಂತ ವರ್ಗಕ್ಕೆ ಸೇರಿದವರೆಂಬುದನ್ನು ಪ್ರದರ್ಶಿಸಹತ್ತಿದರು. ಈ ಬೆಳವಣಿಗೆಯಿಂದಾಗಿ ಕೆಲಸಗಾರರ ಹಾಗೂ ಬಂಡವಾಳಗಾರರ ನಡುವಣ ಅಂತರ ಹೆಚ್ಚಿತು. ವೃತ್ತಿಸಂಘದ ಉತ್ಪಾದಕ ಕೇವಲ ಕೂಲಿಗಾರನಾಗುವ ಸಂದರ್ಭ ಬಂತು. ಹೀಗಾಗಿ ವೃತ್ತಿಸಂಘಗಳು ಕ್ಷೀಣಗೊಳ್ಳಲಾರಂಭಿಸಿದವು.[]

ಗೃಹಕೈಗಾರಿಕಾ ವ್ಯವಸ್ಥೆ

[ಬದಲಾಯಿಸಿ]

ವೃತ್ತಿಸಂಘಗಳು ಕ್ಷಯಿಸಿದಂತೆಲ್ಲ ಗೃಹಕೈಗಾರಿಕಾ ವ್ಯವಸ್ಥೆ ಜಾರಿಗೆ ಬರಲಾರಂಭಿಸಿತು. ಈ ವ್ಯವಸ್ಥೆಯ ಮುಖ್ಯ ಅಂಶವೆಂದರೆ ಬಂಡವಾಳಕ್ಕೆ ಇದರಲ್ಲಿ ಹೆಚ್ಚಿನ ಪ್ರಾಶಸ್ತ್ಯ ಸಿಗಲಾರಂಭಿಸಿತು. ಬಂಡವಾಳ ಉಳ್ಳವರು ಉತ್ಪಾದನೋದ್ಯಮಗಳ ಮೇಲೆ ಹೆಚ್ಚಿನ ಹಿಡಿತವನ್ನಿಟ್ಟುಕೊಳ್ಳಲಾರಂಭಿಸಿದರು. ಕೈಗಾರಿಕೆಯ ರಂಗದಲ್ಲಿ ಬಂಡವಾಳಸ್ಥರ ಸ್ಥಾನ ಹಿರಿದಾಗಲು ಮೊದಲಾಯಿತು.ಮುಂದಿನ ಘಟ್ಟದಲ್ಲಿ, ಬಂಡವಾಳ ಉಳ್ಳ ಈ ಮಧ್ಯಮವರ್ಗದ ಜನ ಹೆಚ್ಚು ಹೆಚ್ಚು ಜನಗಳನ್ನು ಕೂಲಿಗೆ ನೇಮಿಸಿಕೊಂಡು ತಮ್ಮವೇ ಕಾರ್ಖಾನೆಗಳನ್ನು ಪ್ರಾರಂಭಿಸಿದರು. ಕಾರ್ಖಾನೆ ವ್ಯವಸ್ಥೆ ಜಾರಿಗೆ ಬಂತು. ಕೈಗಾರಿಕಾ ಕ್ರಾಂತಿಯವರೆಗೆ ಮುಖ್ಯವಾಗಿ ಹೊರಗುತ್ತಿಗೆ ಕೊಡುವ ವ್ಯವಸ್ಥೆ ಜಾರಿಯಲ್ಲಿತ್ತು. ಕೈಗಾರಿಕಾ ವ್ಯವಸ್ಥೆ ಪ್ರಾರಂಭವಾದ ಅನಂತರ ಉತ್ಪಾದನೆಗೆ ವಿದ್ಯುತ್ತನ್ನು ಬಳಸಿಕೊಳ್ಳಲಾರಂಭಿಸಿದರು.

ಉಲ್ಲೇಖಗಳು

[ಬದಲಾಯಿಸಿ]