ಕೈಗಾರಿಕಾ ಮಂಡಳಿಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೈಗಾರಿಕೆಗಳ ಯಜಮಾನರು ಮತ್ತು ಉದ್ಯೋಗಿಗಳಲ್ಲಿ ಕ್ರಮಬದ್ಧವಾಗಿ ಪರಸ್ಪರ ವಿಚಾರವಿನಿಮಯವನ್ನೇರ್ಪಡಿಸಿ, ಕೈಗಾರಿಕಾ ಸಂಬಂಧಗಳನ್ನು ಉತ್ತಮಗೊಳಿಸುವ ಉದ್ದೇಶದಿಂದ ರಚಿತವಾದ ಮಂಡಳಿಗಳು(ಇಂಡಸ್ಟ್ರಿಯಲ್ ಕೌನ್ಸಿಲ್ಸ್). ಇಂಗ್ಲೆಂಡಿನಲ್ಲಿ ಕಾರ್ಮಿಕ-ಮಾಲೀಕ ಸೌಹಾರ್ದ ಬೆಳೆಸುವ ಮಾರ್ಗವನ್ನು ಸೂಚಿಸುವಂತೆ ಅಲ್ಲಿಯ ಸರ್ಕಾರ 1916ರಲ್ಲಿ ಒಂದು ಸಮಿತಿಯನ್ನು ನೇಮಿಸಿತ್ತು. ಹ್ವಿಟ್ಲಿಯ ಅಧ್ಯಕ್ಷತೆಯಲ್ಲಿ ರಚಿತವಾಗಿದ್ದ ಈ ಸಮಿತಿ 1917ರಲ್ಲಿ ತನ್ನ ವರದಿ ಒಪ್ಪಿಸಿ, ಪ್ರತಿ ಸಂಘಟಿತ ಕೈಗಾರಿಕೆಯಲ್ಲೂ ಒಂದು ಕೈಗಾರಿಕಾ ಮಂಡಳಿಯನ್ನು ನೇಮಿಸಬೇಕೆಂದು ಸಲಹೆ ನೀಡಿತು. ಈ ಮಂಡಳಿಯಲ್ಲಿ ಉದ್ಯಮಿಗಳ ಮತ್ತು ಕಾರ್ಮಿಕರ ಪ್ರತಿನಿಧಿಗಳಿರಬೇಕೆಂದೂ ಕೈಗಾರಿಕೆಯ ಬೆಳೆವಣಿಗೆಯ ಮೇಲೆ ಪ್ರಭಾವ ಬೀರಬಹುದಾದ ಅಂಶಗಳ ಮೇಲೆ ಚರ್ಚೆ ನಡೆಸಿ ಉದ್ಯಮ ಸಂಸ್ಥೆಗೆ ಈ ಮಂಡಳಿ ತನ್ನ ಸಲಹೆಗಳನ್ನು ಕೊಡತಕ್ಕದ್ದೆಂದೂ ಸಮಿತಿ ಸೂಚಿಸಿತು. ಈ ವ್ಯವಸ್ಥೆಗೆ ಕಾಲಕ್ರಮದಲ್ಲಿ ಹ್ವಿಟ್ಲಿ ಕ್ರಮವೆಂದು (ಹ್ವಿಟ್ಲಿ ಸ್ಕೀಂ), ಹ್ವಿಟ್ಲಿ ಮಂಡಳಿಯೆಂದು ಹೆಸರು ಬಂತು.[೧]

ಕಾರ್ಮಿಕರ ಉದ್ಯಮದ ನಿರ್ವಹಣೆ[ಬದಲಾಯಿಸಿ]

ಈ ವ್ಯವಸ್ಥೆಯ ಪ್ರಕಾರ ಕಾರ್ಮಿಕರೂ ಉದ್ಯಮದ ವ್ಯವಸ್ಥಾಪನದಲ್ಲಿ ಭಾಗವಹಿಸುವಂತಾಯಿತು. ಅವರಿಗೂ ಉದ್ಯಮದ ಆಗುಹೋಗುಗಳ ಪರಿಚಯ ಮಾಡಿಕೊಟ್ಟು ಅದರ ಮುನ್ನಡೆಗೆ ಅಗತ್ಯವಾದ, ಅವರ ಸಹಕಾರವನ್ನು ಪಡೆಯುವುದಲ್ಲದೆ ಉದ್ಯಮಿಗಳೊಡನೆ ಅವರ ಸಂಬಂಧವನ್ನು ಉತ್ತಮಗೊಳಿಸುವುದು ಇದರ ಗುರಿ. ಕಾರ್ಮಿಕರು ಉದ್ಯಮದ ನಿರ್ವಹಣೆಯಲ್ಲಿ ಅನೇಕ ಬಗೆಯಲ್ಲಿ ಭಾಗವಹಿಸಬಹುದು. ಅವುಗಳಲ್ಲಿ ಮುಖ್ಯವಾದುವು ಎರಡು. ಒಂದನೆಯದು ಜಂಟಿ ಸಮಾಲೋಚನೆ, ಇಲ್ಲಿ ಕಾರ್ಮಿಕರ ಹಿತಾಸಕ್ತಿಯ ಮೇಲೆ ಪ್ರತ್ಯಕ್ಷವಾಗಿ ಪರಿಣಾಮ ಬೀರುವ ಸಮಸ್ಯೆಗಳ ವಿಷಯದಲ್ಲಿ, ಎಂದರೆ ಉದ್ಯೋಗಿಗಳಿಗೆ ಸಂಬಂಧಿಸಿದ ನೀತಿ ನಡಾವಳಿ, ಶಿಷ್ಟತಾಪಾಲನೆಯ ವ್ಯವಸ್ಥೆ, ಕೈಗಾರಿಕಾ ಸುಧಾರಣೆ, ಸ್ವಯಂಚಾಲನ (ಆಟೊಮೇಷನ್) ಮುಂತಾದ ವಿಚಾರಗಳಲ್ಲಿ ಕಾರ್ಮಿಕರ ಸಲಹೆ ಪಡೆಯಲಾಗುತ್ತದೆ. ಕಾರ್ಮಿಕರು ಉದ್ಯಮದಲ್ಲಿ ಭಾಗವಹಿಸುವ ಮತ್ತೊಂದು ಬಗೆಯೆಂದರೆ, ನೇರ ಸಹಭಾಗಿತ್ವ(ಡೈರೆಕ್ಟ್ ಪಾರ್ಟಿಸಿಪೇಷನ್), ಇಲ್ಲಿ ಕಾರ್ಮಿಕರ ಪ್ರತಿನಿಧಿಗಳು ನಿರ್ದೇಶಕರ ಮಂಡಳಿಗೆ ನೇಮಕವಾಗಿ, ಉದ್ಯಮದ ನಿರ್ವಹಣೆಗೆ ಸಂಬಂಧಿಸಿದ ಎಲ್ಲ ವಿಚಾರಗಳಲ್ಲೂ ಭಾಗವಹಿಸುವರು. ಇಂಗ್ಲೆಂಡ್, ಸ್ವೀಡನ್ ಮತ್ತು ಸಂಯುಕ್ತಸಂಸ್ಥಾನಗಳಲ್ಲಿಯ ಕಾರ್ಮಿಕರು ಈ ವ್ಯವಸ್ಥೆಯನ್ನು ನಿರಾಕರಿಸಿದ್ದಾರೆ. ಕಾರ್ಮಿಕ ನಾಯಕರು ಉದ್ಯಮದ ನಿರ್ವಹಣೆಯಲ್ಲಿ ನೇರವಾಗಿ ಭಾಗವಹಿಸುವುದರಿಂದ ಉದ್ಯಮದ ಆಗುಹೋಗುಗಳ ಜವಾಬ್ದಾರಿಯನ್ನು ಹೊತ್ತುಕೊಂಡಂತಾಗಿ, ಸಾಮುದಾಯಿಕ ಚೌಕಾಸಿಯಲ್ಲಿ ತಾವು ದುರ್ಬಲರಾಗಬೇಕಾಗುತ್ತದೆಂಬುದೇ ಅವರ ಈ ತೀರ್ಮಾನಕ್ಕೆ ಕಾರಣ, ತಮ್ಮ ಹಿತಗಳ ಮೇಲೆ ಪ್ರತ್ಯಕ್ಷ ಪರಿಣಾಮ ಬೀರುವ ಸಮಸ್ಯೆಗಳ ಇತ್ಯರ್ಥಕ್ಕಾಗಿ ಜಂಟಿ ಸಮಾಲೋಚನೆಯಲ್ಲಿ ಭಾಗವಹಿಸಲು ಮಾತ್ರ ಅವರ ಒಪ್ಪಿಗೆಯುಂಟು. ಆದರೆ ಬೆಲ್ಜಿಯಂ, ಕೆನಡ, ಫ್ರಾನ್ಸ್, ಇಟಲಿ, ನಾರ್ವೇ, ಸ್ವಿಟ್‍ಜರ್ಲೆಂಡ್, ಪೂರ್ವಜರ್ಮನಿ, ಯೂಗೊಸ್ಲಾವಿಯಗಳಲ್ಲಿ ಕಾರ್ಮಿಕರು ನೇರಸಹಭಾಗಿತ್ವದ ಕ್ರಮವನ್ನು ಒಪ್ಪಿಕೊಂಡು ನಿರ್ದೇಶಕರ ಮಂಡಳಿಯ ಸದಸ್ಯರಾಗಿದ್ದಾರೆ.[೨]

ಭಾರತದಲ್ಲಿ ಕಾರ್ಮಿಕರು ಉದ್ಯಮದ ನಿರ್ವಹಣೆ[ಬದಲಾಯಿಸಿ]

ಭಾರತದಲ್ಲಿ ಕಾರ್ಮಿಕರು ಉದ್ಯಮದ ನಿರ್ವಹಣೆಯಲ್ಲಿ ಭಾಗವಹಿಸುವ ವ್ಯವಸ್ಥೆ 1920ರಿಂದ ಜಾರಿಯಲ್ಲಿದೆ. ತಾತಾ ಕಬ್ಬಿಣ-ಉಕ್ಕು ಸಂಸ್ಥೆಯಲ್ಲಿ ಜಂಟಿ ಸಮಾಲೋಚನೆಯ ವ್ಯವಸ್ಥೆಯನ್ನು 1920ರಲ್ಲಿ ಆಚರಣೆಗೆ ತರಲಾಯಿತು. ಇದನ್ನು ಕಾರ್ಯಗತಗೊಳಿಸಿರುವ ಇನ್ನೆರಡು ಉದ್ಯಮಗಳೆಂದರೆ ದೆಹಲಿ ಬಟ್ಟೆ ಗಿರಣಿ ಮತ್ತು ಭಾರತೀಯ ಅಲ್ಯೂಮಿನಿಯಂ ಕೈಗಾರಿಕೆ. ಈ ವ್ಯವಸ್ಥೆ ಅಷ್ಟು ಯಶಸ್ವಿಯಾಗಲಿಲ್ಲವಾದ್ದರಿಂದ ಇತರ ಉದ್ಯಮಿಗಳು ಇದರಲ್ಲಿ ಹೆಚ್ಚು ಆಸಕ್ತಿ ವಹಿಸಲಿಲ್ಲ. ಭಾರತದಲ್ಲಿ ಯೋಜನೆ ಯಶಸ್ವಿಯಾಗಬೇಕಾದರೆ ಉದ್ಯಮಿಗಳಲ್ಲೂ ಕಾರ್ಮಿಕರಲ್ಲೂ ಸಹಕಾರ ಇರಬೇಕಾದ್ದು ಅತ್ಯಗತ್ಯವೆಂಬ ಭಾವನೆ ಎರಡನೆಯ ಪಂಚವಾರ್ಷಿಕ ಯೋಜನೆಯ ಕಾಲದಲ್ಲಿ ಬೆಳೆದುಬಂತು. ಇದಕ್ಕಾಗಿ ಉದ್ಯಮಗಳಲ್ಲಿ ಕಾರ್ಮಿಕರು, ಉದ್ಯಮಿಗಳು ಮತ್ತು ತಜ್ಞರನ್ನೊಳಗೊಂಡ ಉದ್ಯಮ ಮಂಡಳಿಗಳನ್ನು ಸ್ಥಾಪಿಸಬೇಕೆಂಬುದಾಗಿ ಯೋಜನಾ ಆಯೋಗ ಸಲಹೆ ನೀಡಿತು. ಇದರಂತೆ 1956ರಲ್ಲಿ ಕಾರ್ಮಿಕರ, ಉದ್ಯಮಿಗಳ ಮತ್ತು ಸರ್ಕಾರದ ಪ್ರತಿನಿಧಿಗಳನ್ನೊಳಗೊಂಡ ಒಂದು ಆಯೋಗವನ್ನು ಭಾರತದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ನೇಮಿಸಿತು. ಈ ಆಯೋಗ ಐರೋಪ್ಯ ದೇಶಗಳಲ್ಲಿ ಪ್ರವಾಸಮಾಡಿ, ಅಲ್ಲಿ ಈ ಬಗ್ಗೆ ಜಾರಿಯಲ್ಲಿರುವ ಅನೇಕ ಕ್ರಮಗಳನ್ನು ಅಧ್ಯಯನಮಾಡಿ ಭಾರತದಲ್ಲಿ ಜಂಟಿ ವ್ಯವಸ್ಥಾಪನ ಮಂಡಳಿಗಳನ್ನು ರಚಿಸಬಹುದೆಂದು ಸಲಹೆ ನೀಡಿತು. ಕಾರ್ಮಿಕರ, ಉದ್ಯಮಿಗಳ ಮತ್ತು ಸರ್ಕಾರ ಪ್ರತಿನಿಧಿಗಳನ್ನೊಳಗೊಂಡ ಭಾರತೀಯ ಕಾರ್ಮಿಕ ಸಮ್ಮೇಳನ 1957ರಲ್ಲಿ ಸಮಾವೇಶಗೊಂಡು, ಆಯೋಗದ ಸಲಹೆಗಳನ್ನು ಪರಿಶೀಲಿಸಿ ಜಂಟಿ ಆಡಳಿತ ಮಂಡಳಿಗಳನ್ನು ಸ್ಥಾಪಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿತು. ಇದರ ಮೇರೆಗೆ ಸರ್ಕಾರ ಪ್ರಾಯೋಗಿಕವಾಗಿ ಮೊದಲಿಗೆ ಹಲವು ಖಾಸಗಿ ಮತ್ತು ಸರ್ಕಾರಿ ಉದ್ಯಮಗಳಲ್ಲಿ ಜಂಟಿ ವ್ಯವಸ್ಥಾಪನ ಮಂಡಳಿಗಳನ್ನು ಸ್ಥಾಪಿಸಲು ಪ್ರೋತ್ಸಾಹ ಕೊಟ್ಟಿತು. ಕ್ರಮೇಣ ಇವುಗಳ ಸಂಖ್ಯೆ ಹೆಚ್ಚಿತು. 1965ರ ಹೊತ್ತಿಗೆ 36 ಸರ್ಕಾರಿ ಉದ್ಯಮಗಳಲ್ಲೂ, 61 ಖಾಸಗಿ ಉದ್ಯಮಗಳಲ್ಲೂ ಈ ವ್ಯವಸ್ಥೆ ಜಾರಿಯಲ್ಲಿತ್ತು.ಭಾರತದ ಜಂಟಿ ವ್ಯವಸ್ಥಾಪನ ಮಂಡಳಿಗಳಿಗೆ ಸಾಮಾನ್ಯವಾಗಿ ಕಾರ್ಮಿಕರ ಮತ್ತು ಉದ್ಯಮಿಗಳ ಪ್ರತಿನಿಧಿಗಳು ಸಮಪ್ರಾತಿನಿಧ್ಯದ ಆಧಾರದ ಮೇಲೆ ಆಯ್ಕೆಯಾಗಿರುತ್ತಾರೆ. ಪ್ರತಿಯೊಂದು ಮಂಡಳಿಯಲ್ಲೂ 6 ರಿಂದ 12 ಮಂದಿ ಸದಸ್ಯರಿರುವುದುಂಟು. ಈ ಮಂಡಳಿಗಳ ಕಾರ್ಯಭಾರಗಳು ಮೂರು : ಮೊದಲನೆಯದಾಗಿ ಇದು ಉದ್ಯಮದ ಆಗುಹೋಗುಗಳ ಪರಿಚಯ ಮಾಡಿಕೊಳ್ಳುವ ದೃಷ್ಟಿಯಿಂದ ಉದ್ಯಮಿಗಳಿಂದ ಉದ್ಯಮದ ಆರ್ಥಿಕ ಪರಿಸ್ಥಿತಿ, ಉತ್ಪನ್ನ, ವಿಕ್ರಯ, ಉತ್ಪಾದನ ಕ್ರಮಗಳು, ವಾರ್ಷಿಕ ಆಸ್ತಿ-ಹೊಣೆ ಪಟ್ಟಿ, ಲಾಭ ನಷ್ಟ ತಃಖ್ತೆ ಅಲ್ಲದೆ ಭವಿಷ್ಯತ್ ವಿಕಾಸದ ಯೋಜನೆ ಮುಂತಾದವನ್ನು ಕುರಿತು ವಿಷಯ ಸಂಗ್ರಹಿಸಿಕೊಳ್ಳುತ್ತದೆ. ಜಂಟಿ ಸಮಾಲೋಚನೆ ಇದರ ಎರಡನೆಯ ಕಾರ್ಯಭಾರ. ಉದ್ಯಮಿಗಳು ಅನೇಕ ಸಮಸ್ಯೆಗಳ ವಿಷಯದಲ್ಲಿ ಮಂಡಳಿಯ ಸದಸ್ಯರ ಸಲಹೆ ಕೇಳುತ್ತಾರೆ. ಉದ್ಯೋಗದ ಬಗ್ಗೆ ಸ್ಥಾಯೀ ನಿಯಮಾವಳಿಯ ಜಾರಿ, ಹೊಸ ಉತ್ಪಾದನ ಕ್ರಮಗಳ ಅನುಷ್ಠಾನ, ಯಾವುದೇ ಕ್ರಿಯೆಯನ್ನು ಕೊನೆಗೊಳಿಸುವುದು ಇಲ್ಲವೇ ಖೋತಾ ಮಾಡುವುದು ಮುಂತಾದವುಗಳ ಬಗ್ಗೆ ಮಂಡಳಿಯಲ್ಲಿ ಸಮಾಲೋಚನೆ ನಡೆಯುತ್ತದೆ. ಮೂರನೆಯದಾಗಿ, ಕಾರ್ಮಿಕರ ಕ್ಷೇಮ ಸುರಕ್ಷತೆಯ ಕ್ರಮಗಳ ಪಾಲನೆ, ಕೆಲಸದ ವೇಳಾಪಟ್ಟಿ ಮತ್ತು ರಜಾದಿನಗಳ ಪಟ್ಟಿಗಳ ತಯಾರಿಕೆ, ಉತ್ತಮವಾದ ಸಲಹೆಗಳನ್ನು ಕೊಟ್ಟ ಕಾರ್ಮಿಕರಿಗೆ ಬಹುಮಾನ ವಿನಿಯೋಗ ಮುಂತಾದ ಜವಾಬ್ದಾರಿಗಳನ್ನೂ ಇದು ನಿರ್ವಹಿಸುತ್ತದೆ.

ಜಂಟಿ ವ್ಯವಸ್ಥಾಪನ ಮಂಡಳಿಗಳ ಕಾರ್ಯಭಾರ[ಬದಲಾಯಿಸಿ]

ಜಂಟಿ ವ್ಯವಸ್ಥಾಪನ ಮಂಡಳಿಗಳ ಕಾರ್ಯಭಾರಗಳನ್ನು ಗಮನಿಸಿದರೆ ಇಲ್ಲಿ ಜಂಟಿ ಸಮಾಲೋಚನೆಯ ಜೊತೆಗೆ ಕಾರ್ಮಿಕರು ಉದ್ಯಮದ ವ್ಯವಸ್ಥಾಪನದಲ್ಲೂ ನೇರವಾಗಿ ಸಹಭಾಗಿಗಳಾಗುವ ಅವಕಾಶ ಇರುವುದು ವ್ಯಕ್ತವಾಗುತ್ತದೆ. ಕಾರ್ಮಿಕರು ನಿರ್ದೇಶಕ ಮಂಡಳಿಗೆ ಆಯ್ಕೆಯಾಗದೆಯೆ ಉದ್ಯಮದ ವ್ಯವಸ್ಥಾಪನದಲ್ಲಿ ಭಾಗಿಗಳಾಗುತ್ತಾರೆ. ಆದರೆ ಉದ್ಯಮದ ಕೇವಲ ಸಣ್ಣ ಪುಟ್ಟ ನೀತಿಗಳನ್ನು ಪಾಲಿಸುವುದರಲ್ಲಿ ಮಾತ್ರ ಕಾರ್ಮಿಕರಿಗೆ ಅವಕಾಶವುಂಟೇ ಹೊರತು ಪ್ರಮುಖ ನೀತಿಗಳ-ಎಂದರೆ ಉತ್ಪನ್ನ, ವಿಕ್ರಯ, ಉತ್ಪಾದನ ಕ್ರಮ, ಉದ್ಯಮ ವಿಕಾಸ ಮೊದಲಾದ ವಿಷಯಗಳ - ಪರಿಶೀಲನೆಗೆ ಅವರಿಗೆ ಅವಕಾಶವಿಲ್ಲ. ಈ ಮಂಡಳಿಗಳು ಯಶಸ್ವಿಯಾಗಿ ಕೆಲಸ ಮಾಡುತ್ತಿರುವ ಉದ್ಯಮಗಳಲ್ಲಿ ಅನೇಕ ಅನುಕೂಲಗಳು ಕಂಡು ಬಂದಿವೆ. ಉತ್ಪಾದನ ಸಾಧನ ಸಾಮರ್ಥ್ಯ ಗಳು ವ್ಯರ್ಥವಾಗುತ್ತಿದ್ದದ್ದು ತಗ್ಗಿದೆ; ಕಾರ್ಮಿಕರ ಮತ್ತು ಉದ್ಯಮಿಗಳ ನಡುವೆ ಒಳ್ಳೆಯ ಸಂಬಂಧ ಬೆಳೆದು ಬಂದಿದೆ. ಆದರೆ ಹಲವು ಕಡೆ ಇವು ಅಷ್ಟಾಗಿ ಫಲಕಾರಿಯಾಗಿಲ್ಲ. ಉದ್ಯಮದ ವ್ಯವಸ್ಥಾಪಕ ವರ್ಗ ಇದರ ವಿಷಯದಲ್ಲಿ ಹೆಚ್ಚು ಆಸಕ್ತಿವಹಿಸದಿರುವುದು ಇದಕ್ಕೆ ಒಂದು ಕಾರಣ. ಕಾರ್ಮಿಕ ಸಂಘಗಳಲ್ಲಿಯ ಒಳಜಗಳಗಳಿಂದಾಗಿ ಮಂಡಳಿಗಳಿಗೆ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ವಿಷಯದಲ್ಲಿ ಕೆಲವು ಕಡೆ ತೊಂದರೆ ಉದ್ಭವಿಸಿ ಅವು ಕೊನೆಗೊಂಡಿರುವ ಸಂದರ್ಭಗಳೂ ಉಂಟು.

ಉಲ್ಲೇಖಗಳು[ಬದಲಾಯಿಸಿ]

  1. "ಆರ್ಕೈವ್ ನಕಲು". Archived from the original on 2016-11-14. Retrieved 2016-11-05.
  2. http://vijaykarnataka.indiatimes.com/lavalavk/property/-/articleshow/45914177.cms