ವಿಷಯಕ್ಕೆ ಹೋಗು

ಕೇಪ್ ಟೌನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೇಪ್ ಟೌನ್
ಕೇಪ್ ಟೌನ್ ನಗರದ ಮಧ್ಯಭಾಗ
ಕೇಪ್ ಟೌನ್ ನಗರದ ಮಧ್ಯಭಾಗ
Official seal of ಕೇಪ್ ಟೌನ್
Nickname(s): 
ತಾಯಿ ನಗರ, ಕಡಲಿನ ಛತ್ರ
Motto(s): 
Spes Bona (ಲ್ಯಾಟಿನ್ ಭಾಷೆಯಲ್ಲಿ "ಒಳ್ಳೆಯ ಹಾರೈಕೆ")
ದೇಶದಕ್ಷಿಣ ಆಫ್ರಿಕಾ ದಕ್ಷಿಣ ಆಫ್ರಿಕ
ಪ್ರಾಂತ್ಯಪಶ್ಚಿಮ ಕೇಪ್
ಪುರಸಭೆಕೇಪ್ ಟೌನ್ ನಗರ
ಸ್ಥಾಪನೆ೧೬೫೨
ಪುರಸಭಾ ಸರ್ಕಾರ೧೮೩೯
ಸರ್ಕಾರ
  ಮಾದರಿನಗರಸಭೆ
  ಮೇಯರ್ಹೆಲನ್ ಜಿಲ್ಲೆ
  ನಗರ ವ್ಯವಸ್ಥಾಪಕಅಖ್ಮತ್ ಎಬ್ರಾಹಿಂ
ವಿಸ್ತಾರ
  ಒಟ್ಟು2,454.72 km2 (947.77 sq mi)
Highest elevation
1,590.4 m (5,218 ft)
ಕಡಿಮೆ   ಎತ್ತರ
0 m (0 ft)
ಜನಸಂಖ್ಯೆ
 (೨೦೦೭)[]
  ಒಟ್ಟು೩೪,೯೭,೦೯೭
  ಸಾಂದ್ರತೆ1,424.64/km2 (3,689.81/sq mi)
ಸಮಯದ ವಲಯ
ಸಮಯ ವಲಯಯುಟಿಸಿ+2 (SAST)
ಅಂಚೆ ಕೋಡ್
8000
Area code(s)+27 (0)21
ಜಾಲತಾಣwww.capetown.gov.za

ಕೇಪ್ ಟೌನ್ ದಕ್ಷಿಣ ಆಫ್ರಿಕ ದೇಶದ ೨ನೆಯ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರ. ಇದು ದಕ್ಷಿಣ ಆಫ್ರಿಕದ ಶಾಸಕಾಂಗ ರಾಜಧಾನಿ ಮತ್ತು ಪಶ್ಚಿಮ ಕೇಪ್ ಪ್ರಾಂತ್ಯದ ರಾಜಧಾನಿಯಾಗಿದೆ. ಇಲ್ಲಿ ದೇಶದ ಶಾಸನ ಸಭೆ ಮತ್ತು ಅನೇಕ ಸರ್ಕಾರಿ ಕಾರ್ಯಲಯಗಳಿದ್ದು ಇದು ದೇಶದ ಅತ್ಯಂತ ಜನಪ್ರಿಯ ಪ್ರವಾಸ ತಾಣವಾಗಿದೆ.[] ಕೇಪ್ ಪರ್ಯಾಯದ್ವೀಪದ ಉತ್ತರದ ಕೊನೆಯಲ್ಲಿದೆ. ಜನಸಂಖ್ಯೆ 34,97,097 (೨೦೦೭).[] ನಗರದ ನಡುವಣ ಭಾಗ ವ್ಯಾಪಾರಕೇಂದ್ರ. ಅದರ ಮೂರು ಪಾಶ್ರ್ವಗಳಲ್ಲಿ ಉಪನಗರಗಳು ಹಬ್ಬಿವೆ. ನಗರದ ರಸ್ತೆಗಳ ಪೈಕಿ ಆಡರ್ಲಿ ಬೀದಿ ಮುಖ್ಯವಾದ್ದು. ಹೀರೆನ್‍ಗ್ರಾಕ್ಟ್‍ನಲ್ಲಿ ಇದು ಮುಂದುವರಿದಿದೆ. ಆಡರ್ಲಿ ರಸ್ತೆಯಿಂದ ದಕ್ಷಿಣಕ್ಕೆ ಇರುವ ಸರ್ಕಾರಿ ಅವೆನ್ಯೂ ಒಂದು ಸುಂದರ ತಾಣ. ಆಚೀಚೆ ಓಕ್ ಮರಗಳಿಂದ ಕೂಡಿದ ಈ ಮಾರ್ಗದಲ್ಲಿ ವಾಹನಗಳಿಗೆ ಪ್ರವೇಶವಿಲ್ಲ. ಆಡರ್ಲಿ ಬೀದಿಯ ಪಶ್ಚಿಮಕ್ಕಿರುವ ಗ್ರೀನ್ ಮಾರ್ಕೆಟ್ ಚೌಕ ಹಿಂದೆ ನಗರದ ಕೇಂದ್ರವಾಗಿತ್ತು. ಇನ್ನೂ ಪಶ್ಚಿಮಕ್ಕಿರುವ ರೀಬೀಕ್ ಚೌಕದಲ್ಲಿ ಹಿಂದೆ ಎತ್ತುಗಳನ್ನು ನೊಗಗಳಿಂದ ಕಳಚಿ ಬಿಡುತ್ತಿದ್ದರು. ಗ್ರ್ಯಾಂಡ್ ಪೆರೇಡ್ ಒಂದು ವಿಸ್ತøತ ದೀರ್ಘಚತುರಸ್ರ ಸ್ಥಳ; ಅಂಗಡಿಗಳ ಕೇಂದ್ರ; ವಾಹನ ಬಿಡಲು ಪ್ರಶಸ್ತ.

ಕಟ್ಟಡಗಳು

[ಬದಲಾಯಿಸಿ]

ಕೇಪ್ ಟೌನಿನಲ್ಲಿರುವ ಕಟ್ಟಡಗಳ ಪೈಕಿ ಅತ್ಯಂತ ಪುರಾತನವಾದ್ದು ಅಲ್ಲಿಯ ದುರ್ಗ; ಗ್ರ್ಯಾಂಡ್ ಪೆರೇಡಿನ ಬಳಿ ಇದೆ. 1666ರಲ್ಲಿ ಇದನ್ನು ನಿರ್ಮಿಸಲಾಯಿತು. 1652ರಲ್ಲಿ ಮರ ಮತ್ತು ಮಣ್ಣಿನಿಂದ ನಿರ್ಮಿಸಿದ ಕೋಟೆಯ ಬದಲು ಇದನ್ನು ಕಟ್ಟಲಾಯಿತು. ಆಡರ್ಲಿ ಬೀದಿಯಲ್ಲಿರುವ ಡಚ್ ಸುಧಾರಿತ ಚರ್ಚು ದಕ್ಷಿಣ ಆಫ್ರಿಕದಲ್ಲಿರುವ ಈ ಪಂಗಡದ ಚರ್ಚುಗಳ ಪೈಕಿ ಅತ್ಯಂತ ಹಳೆಯದು. ಇದರ ನಿರ್ಮಾಣ ಆರಂಭವಾದ್ದು 1699ರಲ್ಲಿ. ಆಗಿನ ಭಾಗವಾಗಿ ಉಳಿದಿರತಕ್ಕದ್ದು ಗಂಟೆಯ ಗೋಪುರ ಮಾತ್ರ. ಕೇಪ್ ಟೌನಿನಲ್ಲಿ ಆಂಗ್ಲಿಕನ್ ಮತ್ತು ರೋಮನ್ ಕೆಥೊಲಿಕ್ ಚರ್ಚ್‍ಗಳೂ ಇವೆ. ಡಾರ್ಲಿಂಗ್ ಬೀದಿಯಲ್ಲಿರುವ ನಗರಭವನವನ್ನು 1905ರಲ್ಲಿ ಕಟ್ಟಲಾಯಿತು. ಅದರ ಬದಲು 1960ರಲ್ಲಿ ರಾಗೆಬಾಯಿಯಲ್ಲಿ ಆಧುನಿಕ ಪೌರಕೇಂದ್ರವೊಂದನ್ನು ನಿರ್ಮಿಸಿದೆ. ಮಹಾ ಅಂಚೆಕಚೇರಿ ಒಂದು ಎತ್ತರದ ಕಟ್ಟಡ. ಇದರ ನಿರ್ಮಾಣವನ್ನು 1942ರಲ್ಲಿ ಮುಗಿಸಲಾಯಿತು. ಸರ್ಕಾರಿ ಭವನ, ದಕ್ಷಿಣ ಆಫ್ರಿಕ ರಾಷ್ಟ್ರೀಯ ಕಲಾಕೇಂದ್ರ, ದಕ್ಷಿಣ ಆಫ್ರಿಕ ವಸ್ತುಸಂಗ್ರಹಾಲಯ, ಹಳೆಯ ಪರಮೋಚ್ಚ ನ್ಯಾಯಾಲಯ ಕಟ್ಟಡ ಇವು ಇತರ ಕೆಲವು ಪ್ರೇಕ್ಷಣೀಯ ಭವನಗಳು. ನಗರದ ಪೂರ್ವಕ್ಕೆ 3 ಮೈ. ದೂರದಲ್ಲಿ ಖಗೋಳವೀಕ್ಷಣಾಲಯ (1827-28) ಇದೆ. ದಕ್ಷಿಣಾರ್ಧಗೋಳದ ಮುಖ್ಯ ವೀಕ್ಷಣಾಲಯಗಳಲ್ಲಿ ಇದೊಂದು.

ಸಾರ್ವಜನಿಕ ಸ್ಥಳಗಳು

[ಬದಲಾಯಿಸಿ]

ಕೇಪ್‍ಟೌನ್ ವಿಶ್ವವಿದ್ಯಾಲಯ ಗುಡ್ಡದ ಮೇಲಿದೆ. 1829ರಲ್ಲಿ ಆಫ್ರಿಕನ್ ಕಾಲೇಜಾಗಿ ಪ್ರಾರಂಭವಾದ ಸಂಸ್ಥೆ 1918ರಲ್ಲಿ ವಿಶ್ವವಿದ್ಯಾಲಯದ ಸ್ಥಾನಮಾನ ಗಳಿಸಿತು. ಗ್ರೂಟ್‍ಷೂರ್‍ನಲ್ಲಿ ಪ್ರಧಾನಿಯ ಅಧಿಕೃತ ನಿವಾಸವುಂಟು. ಅದರ ಬಳಿಯಲ್ಲೇ ರ್ಹೋಡ್ಸ್ ಸ್ಮಾರಕವೂ 18ನೆಯ ಶತಮಾನದ ಡಚ್ ಗಿರಣಿಯೊಂದೂ ರಾಷ್ಟ್ರೀಯ ಸಸ್ಯಶಾಸ್ತ್ರಕ ಉದ್ಯಾನವೂ ಇವೆ. ಪೌರಸಭಾ ಸಾರ್ವಜನಿಕ ಉದ್ಯಾನ, ಕ್ಲೇರ್‍ಮಾಂಟ್ ಸಾರ್ವಜನಿಕ ಉದ್ಯಾನ, ವಿನ್‍ಬರ್ಗ್ ಪಾರ್ಕ್-ಇವು ಕೆಲವು ಮುಖ್ಯ ಉದ್ಯಾನಗಳು.

ಸಾರಿಗೆ ವ್ಯವಸ್ಥೆ

[ಬದಲಾಯಿಸಿ]

ನಗರದಲ್ಲಿ ಎರಡು ಮುಖ್ಯ ಸಾರಿಗೆ ವ್ಯವಸ್ಥೆಗಳಿವೆ. ಉಪನಗರ ವಿದ್ಯುತ್ ರೈಲ್ವೆ ಸರ್ಕಾರಿ ಒಡೆತನದ್ದು. ಕೇಪ್ ಟೌನ್ ರೈಲುನಿಲ್ದಾಣದಿಂದ ದಕ್ಷಿಣದ ಉಪನಗರವನ್ನು ಹಾದು ಸೈಮನ್‍ಟೌನ್‍ಗೆ ಒಂದು ಮಾರ್ಗವಿದೆ. ಇದಕ್ಕೆ ಹಲವು ಕವಲುಗಳು ಉಂಟು. ಬಸ್‍ಗಳು ಸಂಚರಿಸುತ್ತವೆ. ಟೇಬಲ್ ಪರ್ವತದ ತಂತಿದಾರಿ ಕೇಪ್ ಟೌನಿನ ವೈಶಿಷ್ಟ್ಯ. ಇದು ಪರ್ವತದ ಶಿಖರಕ್ಕೆ ಪ್ರೇಕ್ಷಕರನ್ನು ಕರೆದೊಯ್ಯುತ್ತದೆ. ಅಲ್ಲಿಂದ ನಗರದ ನೋಟ ಅತ್ಯಂತ ರಮಣೀಯ. ರಾಷ್ಟ್ರೀಯ ರೈಲ್ವೆ ವ್ಯವಸ್ಥೆಯ ಕೊನೆಯ ನಿಲ್ದಾಣ ಕೇಪ್‍ಟೌನ್. ಇಲ್ಲಿಂದ ದಕ್ಷಿಣ ಆಫ್ರಿಕದ ಎಲ್ಲ ಮುಖ್ಯ ಸ್ಥಳಗಳಿಗೂ ರೈಲ್ವೆ ಸಂಪರ್ಕವುಂಟು. ನಗರಕ್ಕೆ 12 ಮೈ. ದೂರದಲ್ಲಿ ವಿಮಾನ ನಿಲ್ದಾಣವುಂಟು.

ವಾಣಿಜ್ಯೋದ್ಯಮ

[ಬದಲಾಯಿಸಿ]
Cape Town's City Bowl and CBD viewed from Lion's Head in May (late autumn)

ದಕ್ಷಿಣ ಆಫ್ರಿಕದ ಮುಖ್ಯ ಬಂದರು ಕೇಪ್‍ಟೌನ್. ಚಿನ್ನ, ವಜ್ರ ಮತ್ತು ಹಣ್ಣುಗಳು ಇಲ್ಲಿಂದ ರಫ್ತಾಗುತ್ತವೆ. ವಜ್ರಗೆಲಸ, ನೌಕಾ ನಿರ್ಮಾಣ, ಫಲಸಾರ ಉತ್ಪಾದನೆ, ಸಿಮೆಂಟ್, ಕಲ್ನಾರು, ರಾಸಾಯನಿಕ ಗೊಬ್ಬರ, ಬಣ್ಣ, ಪ್ಲಾಸ್ಟಿಕ್, ಪಾದರಕ್ಷೆ, ಸಾಬೂನು, ಜವಳಿ, ಎಂಜಿನಿಯರಿಂಗ್, ವಿದ್ಯುದುಪಕರಣ, ಮದ್ಯ ಮತ್ತು ಮದ್ಯಸಾರ ಕೈಗಾರಿಕೆಗಳಿವೆ.

ಹವಾಮಾನ

[ಬದಲಾಯಿಸಿ]

ಕೇಪ್‍ಟೌನಿನ ಉಷ್ಣತೆ 52ಲಿ ಫ್ಯಾ.-68ಲಿ ಫ್ಯಾ. ವಾರ್ಷಿಕ ಸರಾಸರಿ ಮಳೆ ಸು.25. ಸೆಪ್ಟೆಂಬರ್ ತಿಂಗಳಿನಲ್ಲಿ ಕಾಡುಹೂಗಳು ಎಲ್ಲೆಲ್ಲೂ ಅರಳಿ ಕಣ್ಮನ ಸೆಳೆಯುವ ದೃಶ್ಯಗಳನ್ನು ವಿರಚಿಸುತ್ತವೆ. ಆಗ ಇಲ್ಲಿ ವಸಂತಋತು. ಸಮುದ್ರತೀರದ ನುಣ್ಣನೆಯ, ಹಳದಿ ಬಣ್ಣದ ಮರಳು ಮತ್ತು ಹಿತಕರವಾದ ಬಿಸಿಲು ಇವುಗಳಿಂದಾಗಿ ಕೇಪ್‍ಟೌನ್ ಪ್ರವಾಸಿಗಳಿಗೆ ತುಂಬ ಪ್ರಿಯವಾದ ತಾಣವಾಗಿದೆ.

ಇತಿಹಾಸ

[ಬದಲಾಯಿಸಿ]

1448ರಲ್ಲಿ ಬಾರ್ತೊಲೋಮ್ಯು ಡೀಯುಷ್ ಮತ್ತು 1497ರಲ್ಲಿ ವಾಸ್ಕೋಡಗ್ಯಾಮ ಗುಡ್‍ಹೋಪ್ ಭೂಶಿರವನ್ನು ಬಳಸಿಕೊಂಡು ಸಮುದ್ರಯಾನ ಮಾಡಿದಂದಿನಿಂದ ದೂರಪ್ರಾಚ್ಯ ರಾಷ್ಟ್ರಗಳತ್ತ ಪ್ರಯಾಣ ಮಾಡುವ ಹಡಗುಗಳಿಗೆ ಕೇಪ್‍ಟೌನ್ ತಂಗುದಾಣವಾಗಿದೆ. ಈಗ ಕೇಪ್‍ಟೌನ್ ನಗರ ಇರುವ ಸ್ಥಳಕ್ಕೆ ಡಚ್ಚರು ಮೊದಲು ವಲಸೆ ಬಂದದ್ದು 1652ರಲ್ಲಿ. ಇವರು ಟೇಬಲ್ ಖಾರಿಯ ತೀರದಲ್ಲಿ ಮಣ್ಣಿನ ಗೋಡೆಗಳ ಕೋಟೆಯಲ್ಲಿ ವಾಸಿಸತೊಡಗಿದರು. ಇಂದು ಇರುವ ವೌಬನ್ ಶೈಲಿಯ ಕೋಟೆಯ ನಿರ್ಮಾಣಕಾರ್ಯ ಮುಗಿದದ್ದು 1780ರಲ್ಲಿ. ಇಂದು ಇದು ರಕ್ಷಣಾ ಇಲಾಖೆಯ ಕೇಂದ್ರ ಕಚೇರಿಯಾಗಿದೆ. ಇದನ್ನು ಸಂರಕ್ಷಿಸಲಾಗಿದೆ. 1780ರ ಹೊತ್ತಿಗೆ, ತುಂಬ ಎಚ್ಚರಿಕೆಯಿಂದ ನಗರದ ರೂಪುರೇಷೆಗಳನ್ನು ಸಿದ್ಧಪಡಿಸಲಾಗಿತ್ತು ಹಾಗೂ ಆ ಯೋಜನೆಗನುಗುಣವಾಗಿ ನಗರನಿರ್ಮಾಣವೂ ನಡೆದಿತ್ತು. ಸೈನಿಕ ಕಾರ್ಯಾಚರಣೆಯ ನೆಲೆಯಾಗಿ ಫ್ರೆಂಚರಿಗೆ ಇದನ್ನು ಬಳಸಿಕೊಳ್ಳಲು ಸಾಧ್ಯವಾಗದಂತೆ ಮಾಡುವ ದೃಷ್ಟಿಯಿಂದ 1795ರಲ್ಲಿ ಬ್ರಿಟಿಷರು ಈ ನಗರವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರಾದರೂ ಎಂಟು ವರ್ಷಗಳ ಅನಂತರ ಇದನ್ನು ಡಚ್ಚರಿಗೇ ಹಿಂದಿರುಗಿಸಿದರು. ಮತ್ತೊಮ್ಮೆ 1814ರಲ್ಲಿ ಇದು ಬ್ರಿಟಿಷರ ಅಧಿಪತ್ಯಕ್ಕೆ ಒಳಗಾಯಿತು. ಆಗ ಈ ನಗರ ತೀವ್ರಗತಿಯಲ್ಲಿ ಬೆಳೆಯಿತು. ಬ್ರಿಟಿಷರ ಆಳ್ವಿಕೆಯಲ್ಲಿಯೂ ಇದು ಕೇಪ್ ವಸಾಹತಿನ ರಾಜಧಾನಿಯಾಗಿಯೇ ಮುಂದುವರಿಯಿತು. ಗುಲಾಮರ ವ್ಯಾಪಾರ ಇಳಿಮುಖವಾಗಿ 1876ರಲ್ಲಿ ಅದು ಬಹಿಷ್ಕøತವಾಗಿ ಪರಿಣಮಿಸಿದ್ದರಿಂದಲೂ 1869ರಲ್ಲಿ ಸೂಯೆಜ್ ಕಾಲುವೆ ಆರಂಭವಾಗಿ ಪೂರ್ವದ ರಾಷ್ಟ್ರಗಳಿಗೆ ಹತ್ತಿರದ ಸಮುದ್ರಸಂಪರ್ಕ ಸಾಧ್ಯವಾದ್ದರಿಂದಲೂ ಈ ನಗರದ ಪ್ರಾಶಸ್ತ್ಯ ಕಡಿಮೆಯಾಗುವ ಸಂಭವವಿತ್ತು. ಆದರೆ ಆ ವೇಳೆಗೆ ಚಿನ್ನದ (1866) ಮತ್ತು ವಜ್ರದ (1867) ಗಣಿಗಳನ್ನು ಪತ್ತೆಹಚ್ಚಲಾಯಿತು. 1910ರಲ್ಲಿ ರೂಪುಗೊಂಡ ದಕ್ಷಿಣ ಆಫ್ರಿಕ ಒಕ್ಕೂಟದಲ್ಲಿ ಇದು ಕೇಪ್ ಪ್ರಾಂತ್ಯದ ರಾಜಧಾನಿಯಾಗಿ ಪರಿಣಮಿಸಿದಾಗ, ಇದನ್ನು ಒಕ್ಕೂಟದ ವೈಧಾನಿಕ ರಾಜಧಾನಿಯನ್ನಾಗಿಯೂ ಸ್ವೀಕರಿಸಲಾಯಿತು. 1947ರಲ್ಲಿ 6ನೆಯ ಜಾರ್ಜ್ ದೊರೆ ಇಲ್ಲಿಗೆ ಅಧಿಕೃತ ಭೇಟಿಯಿತ್ತಾಗ ಇಲ್ಲಿಯ ಪಾರ್ಲಿಮೆಂಟಿನ ಅಧಿವೇಶನವನ್ನು ಉದ್ಘಾಟಿಸಲಾಯಿತು.

ಉಲ್ಲೇಖಗಳು

[ಬದಲಾಯಿಸಿ]
  1. Pollack, Martin (2006-05-31). "Achmat Ebrahim is the new city manager of Cape Town". City of Cape Town Metropolitan Municipality. Archived from the original on 2008-04-04. Retrieved 2007-03-25.
  2. "City of Cape Town". Municipal Demarcation Board. Retrieved 2008-03-23.
  3. 1 2 "Community Survey, 2007: Basic Results Municipalities" (PDF). Statistics South Africa. Archived from the original (PDF) on 2013-08-25. Retrieved 2008-03-23.
  4. "Why Cape Town is one of the Best Tourist and Expat Destinations".
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: