ಕೆ. ವೈ. ನಾರಾಯಣಸ್ವಾಮಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೆ.ವೈ.ಎನ್ ಎಂದು ಪ್ರಸಿದ್ದರಾಗಿರುವ ‘ಕುಪ್ಪೂರು ಯಾಲಪ್ಪ ನಾರಾಯಣಸ್ವಾಮಿ’ಯವರು ಕನ್ನಡದ ಪ್ರಖ್ಯಾತ ನಾಟಕಕಾರರು, ಕವಿಗಳು, ವಿದ್ವಾಂಸರು, ವಿಮರ್ಶಕರು ಆಗಿದ್ದಾರೆ. ಇವರು ಸದ್ಯ ಸರ್ಕಾರಿ ಕಲಾ ಕಾಲೇಜು ಬೆಂಗಳೂರಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದಾರೆ. ‘ಕಳವು’, ‘ಅನಭಿಜ್ಞ ಶಾಕುಂತಲ’, ‘ಚಕ್ರರತ್ನ’, ‘ಹುಲಿಸೀರೆ’, ಮತ್ತು ‘ವಿನುರ ವೇಮ’, ಇವರ ಕನ್ನಡದ ಪ್ರಸಿದ್ದ ನಾಟಕಗಳು. ಅಲ್ಲದೆ ‘ಕುವೆಂಪು’ರವರ ‘ಶೂದ್ರತಪಸ್ವಿ’ ನಾಟಕವನ್ನು ತೆಲುಗು ಭಾಷೆಗೆ ಭಾಷಾಂತರಿಸಿದ್ದು ಮತ್ತು ‘ಮಲೆಗಳಲ್ಲಿ ಮದುಮಗಳು’ ಬೃಹತ್ ಕಾದಂಬರಿಯನ್ನು ಒಂಬತ್ತು ಗಂಟೆಗಳ ‘ರಂಗ ರೂಪ’ಗೊಳಿಸಿದ್ದಾರೆ. ಇದು ಭಾರತಿಯ ರಂಗಭೂಮಿ ಕ್ಷೇತ್ರದಲ್ಲಿ ಹೊಸ ದಾಖಲೆಯನ್ನೆ ಸೃಷ್ಠಿಸಿದೆ. ‘ಕಳವು’ ಮತ್ತು ‘ಸೂರ್ಯಕಾಂತಿ’ ಎಂಬ ಕನ್ನಡ ಚಲನಚಿತ್ರಗಳಿಗೆ ಚಿತ್ರಕತೆ ಬರೆದಿದ್ದಾರೆ. ಕನ್ನಡ ಆಧುನಿಕ ರಂಗಭೂಮಿಯಲ್ಲಿ ಹೊಸ ಮೈಲು ಮೂಡಿಸಿದ ಇವರ ‘ಪಂಪ ಭಾರತ’ ನಾಟಕಕ್ಕೆ ‘ಸಾಹಿತ್ಯ ಅಕಾಡೆಮಿ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕನ್ನಡದ ಪ್ರಭಾವಿ ಬರಹಗಾರು ಮತ್ತು ಚಿಂತಕರಾಗಿರುವ ಇವರ ನಾಟಕಗಳು ಕನ್ನಡ ರಂಗಭೂಮಿಯಲ್ಲಿ ಹಲವು ಪ್ರಯೋಗಗಳೊಂದಿಗೆ ತನ್ನದೆಯಾದ ಹೊಸ ಗಡಿಗಳನ್ನು ಶೋಧಿಸುತ್ತಿವೆ.

ಜೀವನ ಚರಿತ್ರೆ[ಬದಲಾಯಿಸಿ]

ಕೆ.ವೈ.ಎನ್ ರವರು ಕರ್ನಾಟಕದ, ಕೋಲಾರ ಜಿಲ್ಲೆಯ, ಮಾಸ್ತಿ ಬಳಿ ಇರುವ ಮಾಲೂರು ತಾಲೋಕಿನ ‘ಕುಪ್ಪೂರು’ ಎಂಬ ಹಳ್ಳಿಯಲ್ಲಿ ಯಾಲಪ್ಪ ಮತ್ತು ಮುನಿಯಮ್ಮ ಎಂಬ ದಂಪತಿಗಳಿಗೆ 1965 ಜೂನ್ 5 ರಂದು ಜನಿಸಿದರು. ಶಾಲಾ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಮಾಸ್ತಿಯಲ್ಲಿ ಮುಗಿಸಿದ ನಂತರ ಬೆಂಗಳೂರಿಗೆ ಬಂದು ಪದವಿ ಶಿಕ್ಷಣ ಪಡೆದು ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ಎಂ.ಫಿಲ್ ಮುಗಿಸುತ್ತಾರೆ. ಇವರ ಪಿ.ಎಚ್.ಡಿ ಪ್ರಬಂಧವಾದ ‘ನೀರ ದೀವಿಗೆ’ ಈ ದೇಶದ ಸಂಸ್ಕೃತಿಯನ್ನು ‘ಅಗ್ನಿ’ ಮತ್ತು ‘ಜಲ’ದ ಮೂಲಕ ವ್ಯಾಖ್ಯಾನಿಸಿರುವುದು ಹೊಸ ಮೈಲುಗಲ್ಲಾಗಿದೆ. ಈಗ ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.

ಬರವಣಿಗೆ[ಬದಲಾಯಿಸಿ]

ಕೆ.ವೈ.ಎನ್ ರವರು ಮೊದಲು ಬೆಳಕಿಗೆ ಬಂದಿದ್ದು ‘ಪಂಪ ಭಾರತ’ ನಾಟಕದ ಮೂಲಕ.ಈ ನಾಟಕವು ಕನ್ನಡದ ಆದಿಕವಿ ‘ಪಂಪ’ನ ಮಹಾಕಾವ್ಯ ‘ವಿಕ್ರಮಾರ್ಜುನ ವಿಜಯ’ವನ್ನು ಆಧರಿಸಿದೆ.ಇಲ್ಲಿ ಪಂಪ ‘ಅರ್ಜುನನ ದೃಷ್ಠಿಕೋನ’ ದಿಂದ ಮಹಾಭಾರತವನ್ನು ನಿರೂಪಿಸಿದರೆ, ಕೆ.ವೈ.ಎನ್ ರವರು ‘ಕರ್ಣನ ದೃಷ್ಠಿಕೋನ’ದಿಂದ ಮಹಾಭಾರತವನ್ನು ನಿರೂಪಿಸಿದ್ದಾರೆ. ಮತ್ತು ಪ್ರಸ್ತುತ ವಿಚಾರಗಳ ಜೊತೆಗೆ ಸಮಕಾಲೀನ ನಿರೂಪಣೆಯಲ್ಲಿ ನಾಟಕ ಚಲಿಸುತ್ತದೆ. ಈ ನಾಟಕವು’ ಸಮುದಾಯ’ ತಂಡದಿಂದ ಸುಮಾರು ನೂರಕ್ಕೂ ಅಧಿಕ ಪ್ರದರ್ಶನವನ್ನು ಕಂಡಿದೆ. ಪಂಪಭಾರತ ನಾಟಕದ ನಂತರ ‘ಕಳವು’, ‘ಅನಭಿಜ್ಞ ಶಾಕುಂತಲ’, ‘ಮಳೆ ಮಾಂತ್ರಿಕ’, ಮತ್ತು ‘ಚಕ್ರ ರತ್ನ’, ನಾಟಕಗಳು ವ್ಯಾಪಕವಾಗಿ ಪ್ರದರ್ಶನಗೊಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿವೆ. ಪ್ರಸ್ತುತ ಇವರ ಹೊಸ ನಾಟಕ ‘ಮಲ್ಲಿಗೆ’ ಪ್ರದರ್ಶನಕ್ಕೆ ಸಿದ್ದವಾಗುತ್ತಿದೆ. 2010ರಲ್ಲಿ ಕೆ.ವೈ.ಎನ್ ರವರು‘ಕುವೆಂಪು’ರವರ ‘ಮಲೆಗಳಲ್ಲಿ ಮದುಮಗಳು’ ಬೃಹತ್ ಕಾದಂಬರಿಯನ್ನು ರಂಗರೂಪಗೊಳಿಸಿದರು. ಇದನ್ನು ಎನ್.ಎಸ್.ಡಿ ನಿರ್ದೇಶಕರಾದ ಸಿ. ಬಸವಲಿಂಗಯ್ಯನವರು ನಿರ್ದೇಶಿಸಿದರು. ಸತತ ಒಂಬತ್ತು ಗಂಟೆಗಳ ರಾತ್ರಿಯಿಡಿ ಪ್ರಯೋಗಗೊಂಡ ಈ ನಾಟಕ ಮೈಸೂರಿನಲ್ಲಿ 15 ಪ್ರದರ್ಶನ ಮತ್ತು ಬೆಂಗಳೂರಿನಲ್ಲಿ 45 ಪ್ರದರ್ಶನಗೊಂಡು ಸುಮಾರು 40000 ಪ್ರೇಕ್ಷಕರು ವೀಕ್ಷಿಸಿರುವುದು ಭಾರತೀಯ ರಂಗಭೂಮಿ ಇತಿಹಾಸದಲ್ಲೆ ಹೊಸ ದಾಖಲೆಯನ್ನು ಸೃಷ್ಟಿಸಿದೆ. ಕೆ.ವೈ.ಎನ್ ರವರು ಕನ್ನಡ ವಾರ್ತಾ ಇಲಾಖೆಯವರು ಆಯೋಜಿಸಿದ್ದ ‘ಮನುಷ್ಯ ಜಾತಿ ತಾನೊಂದೇ ವಲಂ’ ಧ್ವನಿ ಮತ್ತು ಬೆಳಕು ಕಾರ್ಯಕ್ರಮಕ್ಕೆ’ ಕೊಟಗಾನಹಳ್ಳಿ ರಾಮಯ್ಯ’, ಮತ್ತು ಲಕ್ಷ್ಮೀಪತಿ ಕೋಲಾರರೊಂದಿಗೆ ಕೃತಿಯನ್ನು ರಚಿಸಿದರು. ಇದಕ್ಕೆ ಪ್ರಸಿದ್ದ ಸಂಗೀತ ನಿರ್ದೇಶಕರಾದ ‘ಹಂಸಲೇಖ’ರವರು ಸಂಗೀತ ನೀಡಿದರು. ಮತ್ತು ಸಿ. ಬಸವಲಿಂಗಯ್ಯನವರು ನಿರ್ದೇಶಿಸಿದ್ದು ಕರ್ನಾಟಕದ ಜಿಲ್ಲಾವಾರು ಮೊದಲ ಬಾರಿಗೆ 28 ಜಿಲ್ಲೆಗಳಲ್ಲಿ, ಎರಡನೇ ಬಾರಿ 12 ಜಿಲ್ಲೆಗಳಲ್ಲಿ ಪ್ರದರ್ಶನಗೊಂಡಿತು. ಕನ್ನಡ ಚಲನಚಿತ್ರ ಕ್ಷೇತ್ರದಲ್ಲಿ ಕೆ.ವೈ.ಎನ್ ರವರು ತಮ್ಮ ನಾಟಕವಾದ ‘ಕಳವು’ ಚಲನಚಿತ್ರವಾದಾಗ ಚಿತ್ರಕತೆಯನ್ನು ಬರೆದರು ಇದಕ್ಕೆ 2014ರಲ್ಲಿ ‘ರಾಜ್ಯ ಪ್ರಶಸ್ತಿ’ ಲಭಿಸಿತು. ಮತ್ತು ‘ಸೂರ್ಯಕಾಂತಿ’ ಚಿತ್ರಕ್ಕೂ ಚಿತ್ರಕತೆ ಬರೆದಿದ್ದಾರೆ. ಪ್ರಸ್ತುತ ಹೆಸರಾಂತ ಕನ್ನಡ ಚಿತ್ರ ನಿರ್ದೇಶಕರಾದ ಟಿ.ಎಸ್. ನಾಗಾಭರಣ, ಮತ್ತು ನಾಗತಿಹಳ್ಳಿ ಚಂದ್ರಶೇಖರ್ ಜೊತೆ ಚಿತ್ರಕತೆ ಕೆಲಸದಲ್ಲಿ ತೊಡಗಿದ್ದಾರೆ. ‘ಹಂಸಲೇಖ’ ರವರ ಸಂಗೀತದಲ್ಲಿ ಮೂಡಿಬಂದ ‘ಕೋಲಾರ ದೇಸಿ ಗೋಲ್ಡ್’ ಆಲ್ಬಮ್ ಗೆ ಕೆ.ವೈ.ಎನ್ ರವರು ತೆಲುಗು ಜಾನಪದ ಗೀತೆಗಳನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಇವರ ಮತ್ತೊಂದು ಆಲ್ಬಮ್ ‘ಕೈ ಲ್ಯಾಂಪು’ ( ಕೆ.ವೈ.ಎನ್ ಪ್ರೀತಿ ಹಾಡುಗಳು) ಸಾಹಿತ್ಯಕ್ಕೆ ಇವರ ಶಿಷ್ಯರಾದ ‘ಅರವಿಂದ ಎಸ್.ಡಿ.’ಯವರು ಶಾಸ್ತ್ರೀಯ ಹಾಗು ಜನಪದ ಶೈಲಿಯಲ್ಲಿ ಸಂಗೀತ ಸಂಯೋಜಿಸಿದ್ದು ಜನಪ್ರಿಯ ಗಾಯಕರ ಕಂಠಸಿರಿಯಲ್ಲಿ ಮೂಡಿಬಂದಿದೆ. ಒಬ್ಬ ಕನ್ನಡ ಪ್ರಾಧ್ಯಾಪಕರಾಗಿ, ಕೆ.ವೈ.ಎನ್ ರವರು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಪಠ್ಯ ‘ಸಾಹಿತ್ಯ ಸಂಭವ-1’ರ ಸಂಪಾದಕರಾಗಿದ್ದಾರೆ.

ನಾಟಕಗಳು[ಬದಲಾಯಿಸಿ]

 • ಪಂಪ ಭಾರತ
 • ಕಳವು
 • ಹುಲಿಸೀರೆ
 • ಮಳೆ ಮಾಂತ್ರಿಕ (‘ರಿಚರ್ಡ್ ನ್ಯಾಶ್’ನ ‘ದಿ ರೈನ್ ಮೇಕರ್’ ನಾಟಕದ ರೂಪಾಂತರ)
 • ಅನಭಿಜ್ಞ ಶಾಕುಂತಲ
 • ಚಕ್ರರತ್ನ
 • ಮಲೆಗಳಲ್ಲಿ ಮದುಮಗಳು (‘ಕುವೆಂಪು’ರವರ ಕಾದಂಬರಿ ಆಧಾರಿತ)
 • ಮನುಷ್ಯ ಜಾತಿ ತಾನೊಂದೇ ವಲಂ ( ಧ್ವನಿ ಮತ್ತು ಬೆಳಕು ಪ್ರದರ್ಶನ, ಕೊಟಗಾನಹಳ್ಳಿ ರಾಮಯ್ಯ, ಮತ್ತು ಲಕ್ಷ್ಮಿಪತಿ ಕೋಲಾರರವರ ಜೊತೆ ಸಹ ಲೇಖಕರಾಗಿ)
 • ವಿನುರ ವೇಮ
 • ಶೂದ್ರ ತಪಸ್ವಿ (‘ಕುವೆಂಪು’ರವರ ನಾಟಕವನ್ನು ತೆಲುಗಿಗೆ ಭಾಷಾಂತರ)
 • ಕೈವಾರ ನಾರೆಯಣ

ಚಲನಚಿತ್ರಗಳು[ಬದಲಾಯಿಸಿ]

 • ಆದಿಕವಿ ಪಂಪ (ಡಾಕ್ಯುಮೆಂಟರಿಗೆ ಚಿತ್ರಕತೆ)
 • ಸೂರ್ಯಕಾಂತಿ (ಚಿತ್ರಕತೆ)
 • ಕಳವು (ಕತೆ, ಮತ್ತು ಚಿತ್ರಕತೆ)

ಸಂಗೀತ[ಬದಲಾಯಿಸಿ]

 • ಕೋಲಾರ ದೇಸಿ ಗೋಲ್ಡ್
 • ಕೈಲ್ಯಾಂಪು (ಕೆ.ವೈ.ಎನ್ ಪ್ರೀತಿ ಹಾಡುಗಳು)

ಪುಸ್ತಕಗಳು[ಬದಲಾಯಿಸಿ]

 • ಆಡುವ ಗಿಳಿಯೊಂದ ಕಳಿಸಮ್ಮ; ಕವನ ಸಂಕಲನ ಕ್ರೈಸ್ಟ್ ಕಾಲೇಜ್, ಬೆಂಗಳೂರು -2000 ಪ್ರಕಟಿತ
 • ನೀರ ದೀವಿಗೆ ; ಸಂಶೋಧನಾ ಪ್ರಬಂಧ, 1ನೇ ಆವೃತ್ತಿ ಲೋಹಿಯ ಪ್ರಕಾಶನ, ಬಳ್ಳಾರಿ-2000, 2ನೇ ಆವೃತ್ತಿ ಪ್ರಗತಿ ಗ್ರಾಫಿಕ್ಸ್, ಬೆಂಗಳೂರು-2007.
 • ತಲಪರಿಗೆ; ಡಾ. ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ಇವರಿಂದ ಪ್ರಕಟಿತ.
 • ಬಾರಮ್ಮ ಭಾಗೀರಥಿ ಮತ್ತು ಇತರ ಲೇಖನಗಳು; ಬೀದಿ ನಾಟಕಗಳು; ಶಿವರಾಜ ಪ್ರಕಾಶನ
 • ಬಾಹುಬಲಿ, ಮಕ್ಕಳ ನಾಟಕ; ಮೈಸೂರು ರಂಗಾಯಣ ಪ್ರಕಟಿತ 2 ನೇ ಆವೃತ್ತಿ- 2006
 • ನೆನೆವ ಪರಿ; ವಿಮರ್ಶಾ ಲೇಖನಗಳ ಸಂಗ್ರಹ; ಪ್ರಗತಿ ಗ್ರಾಫಿಕ್ಸ್, ಬೆಂಗಳೂರು-2010
 • ಸಹ-ಸಂಪಾದಕ. ಕರ್ನಾಟಕ ಬೆಂಗಳೂರು -2006

ಪ್ರಶಸ್ತಿಗಳು[ಬದಲಾಯಿಸಿ]

 • ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ಪಂಪ ಭಾರತ ನಾಟಕಕ್ಕೆ)
 • ಕರ್ನಾಟಕ ಇಂಟರ್ನ್ಯಾಷನಲ್ ಸಂಗೀತ ಪ್ರಶಸ್ತಿ 2013 ಮತ್ತು 2014 (ಅನಭಿಜ್ಞ ಶಾಕುಂತಲ ಮತ್ತು ಮಳೆ ಮಾಂತ್ರಿಕ ನಾಟಕಕ್ಕೆ)
 • ರಾಜ್ಯ ಪ್ರಶಸ್ತಿ 2014 ಅತ್ಯುತ್ತಮ ಚಿತ್ರಕಥೆ (ಕಳವು ಚಿತ್ರಕ್ಕೆ)
 • ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’ ನೆನೆವ ಪರಿ’ಕೃತಿಗೆ (ಪ್ರಕಟಿಸಿದ ವರ್ಷ 2010)

ಇತರೆ ಚಟುವಟಿಕೆಗಳು[ಬದಲಾಯಿಸಿ]

ಕೆ.ವೈ.ಎನ್ ರವರು’ ಬೆಸಗರಹಳ್ಳಿ ರಾಮಣ್ಣ ಟ್ರಸ್ಟ್’ ಸ್ಥಾಪಕ ಸದಸ್ಯರು. ಟ್ರಸ್ಟ್ ಮೂಲಕ ವಿದ್ಯಾರ್ಥಿವೇತನಗಳು ಮತ್ತು ಅಗತ್ಯವಿರುವ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಒದಗಿಸಲಾಗುವುದು, ಮತ್ತು ವಾರ್ಷಿಕ ಗ್ರಾಮೀಣ ಬೇಸಿಗೆ ಶಿಬಿರಗಳನ್ನು ಆಯೋಜಿಲಾಗುತ್ತದೆ. ಸರ್ಕಾರಿ ವಿಜ್ಞಾನ ಕಾಲೇಜಿನ ಇತರ ಉಪನ್ಯಾಸಕರು ಜೊತೆ ವಿದ್ಯಾರ್ಥಿಗಳು ಒಂದು ಮಧ್ಯಾಹ್ನ ಊಟ ಯೋಜನೆಯ ಆರಂಭಿಸಿದ್ದಾರೆ. ಕೆ.ವೈ.ಎನ್ ರವರು ‘ಕುವೆಂಪು ಓದು’ ಎಂಬ ಕಾರ್ಯಕ್ರಮವನ್ನು ಆರಂಭಿಸುವ ಮೂಲಕ ಕರ್ನಾಟಕದಾದ್ಯಂತ ವಿವಿಧ ಕಾಲೇಜುಗಳನ್ನು ಗುರುತಿಸಿ ಅಲ್ಲಿನ ವಿದ್ಯಾರ್ಥಿಗಳಿಗೆ ಕುವೆಂಪು ಬರಹಗಳನ್ನು, ಮತ್ತು ತತ್ವಶಾಸ್ತ್ರಗಳನ್ನು ಪರಿಚಯಿಸಲಾಗುತ್ತಿದೆ.

ಇವನ್ನೂ ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]