ಕೆ. ಎಸ್. ರಾಜಗೋಪಾಲ್ ಮತ್ತು ಜಯಂತಿ ರಾಜಗೋಪಾಲ್
ಉಡುಪಿಯಲ್ಲಿ ಜನಿಸಿ, ಸಂಗೀತ, ನೃತ್ಯ , ಪಕ್ಕವಾದ್ಯಗಳಲ್ಲಿ ಪರಿಣತಿಗಳಿಸಿ, ದೇಶದಾದ್ಯಂತ ಸಂಚರಿಸಿ ತಮ್ಮ ನೃತ್ಯ ಕಲಾ ಪ್ರದರ್ಶನಗಳನ್ನು ಆಯೋಜಿಸಿ, ತಮ್ಮ ಶಾಲೆಯಲ್ಲಿ ನೂರಾರು ಹೊಸ ಪ್ರತಿಭೆಗಳನ್ನು ಪೋಶಿಸಿ, ಆವರನ್ನು ಕಲಾರಂಗಕ್ಕೆ ಪರಿಚಯಿಸಿದ 'ಕೆ. ಎಸ್. ರಾಜಗೋಪಾಲ್', ಒಬ್ಬ ಕಲಾವಂತ, ಹಾಗೂ ಸಹೃದಯಿ ವ್ಯಕ್ತಿಯಾಗಿದ್ದರು. ಅವರ ಕಲಿಕೆಯ ಗುರುಗಳ ಹತ್ತಿರ ನಾಟ್ಯಕಲೆಯನ್ನು ಅಭ್ಯಾಸಮಾಡಲು ಬರುತ್ತಿದ್ದ 'ಜಯಂತಿ ವ್ಯಾಸವಿಠಲ್' ರನ್ನು ಮೆಚ್ಚಿಕೊಂಡು ಮದುವೆಯಾದರು. ಈ ದಂಪತಿಗಳಿಬ್ಬರೂ ಜೊತೆಗೂಡಿ ನೃತ್ಯ ಕಲೆಗೆ ಒಂದು ಹೊಸ ಆಯಾಮವನ್ನು ದೊರಕಿಸಿಕೊಟ್ಟರು. ಈ ಕಲಾವಂತ ದಂಪತಿಗಳಿಂದ ತರಪೇತಿಪಡೆದ ನೃತ್ಯ ಪಟುಗಳು, ತಾವು ಹೋದೆಡೆಗಳಲ್ಲೆಲ್ಲಾ, ಭರತನಾಟ್ಯ ಕಲೆಯನ್ನು ಪ್ರಸ್ತುತಪಡಿಸಿ, ನಮ್ಮ ದೇಶ ಹಾಗೂ ವಿದೇಶಗಳಲ್ಲಿ ಒಳ್ಳೆಯ ಹೆಸರನ್ನು ತಂದುಕೊಟ್ಟಿದ್ದಾರೆ. ಗಂಡು ಹೆಣ್ಣುಗಳು ಕಲೆಯನ್ನು ಕಲಿಯಲು ಬಂದಾಗ, ಒಬ್ಬರನ್ನೊಬ್ಬರು ಮೆಚ್ಚಿ ದಾಂಪತ್ಯ ಜೀವನ ಸಾಗಿಸಲು ಮುಂದುವರೆದಾಗ, ಒಟ್ಟಾಗಿ ಕೆಲಸಮಾಡಿ, ಅತ್ಯಂತ ಮಹೋನ್ನತ ವ್ಯಕ್ತಿಗಳಾಗಿ ಗುರುತಿಸಿಕೊಳ್ಳುವ ಮಟ್ಟದಲ್ಲಿ ಬೆಳೆಯಬಹುದು. ಹಾಗೆ ಹೆಸರುಗಳಿಸಿದ, ಶಾಂತಾ ಮತ್ತು ಧನಂಜಯನ್, ಯು. ಎಸ್.ಕೃಷ್ಣರಾವ್ ಮತ್ತು ಚಂದ್ರಭಾಗಾ ದೇವಿ, ಮೊದಲಾದವರು ಪ್ರಮುಖರು. ಮೈಸೂರಿನ ಶೈಲಿಯಲ್ಲಿ ತಯಾರಾಡ ನಾಟ್ಯಾಚಾರ್ಯ, ಕೆ. ಎಸ್. ರಾಜಗೋಪಾಲ್ ಹಾಗೂ ಜಯಂತಿ ದೇವಿಯವರೂ ಈ ವರ್ಗಕ್ಕೆ ಸೇರಿದ್ದಾರೆ.
ಜನನ, ನೃತ್ಯಾಭ್ಯಾಸ
[ಬದಲಾಯಿಸಿ]'ಕೆ. ಎಸ್. ರಾಜಗೋಪಾಲ'ರು ಉಡುಪಿಯಲ್ಲಿ ೧೯೨೪ ರ ಡಿಸೆಂಬರ್ ೫ರಂದು ಜನಿಸಿದರು. ತಂದೆ, ಶ್ರೀ ಶ್ರೀನಿವಾಸ ಹೆಬ್ಬಾರರು ಒಬ್ಬ ಶಿಕ್ಷಕರು ಮಗನಿಗೆ ಉತ್ತಮ ಶಿಕ್ಷಣವನ್ನು ಕೊಡಿಸಿದರು. ಮೆಟ್ರಿಕ್ ಓದುವ ಸಮಯದಲ್ಲಿ ಮಗ ರಾಜಗೋಪಾಲರು, ನಾಟ್ಯ, ಸಂಗೀತ ಕಲೆಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡರು. ಅವರಿಗೆ ನೃತ್ಯದ ಬಗ್ಗೆ ವಿಶೇಷ ಆಸಕ್ತಿಯುಂಟಾಯಿತು. ಅದಕ್ಕಾಗಿ ನಾಟ್ಯ ಶಿಕ್ಷಕರನ್ನು ಅರಸುತ್ತಾ ಮೈಸೂರಿಗೆ ಹೋದರು ಮೈಸೂರಿನಲ್ಲಿ ಆಕಾಲದಲ್ಲಿ 'ಹೆಸರಾಂತ ನಾಟ್ಯಾಚಾರ್ಯ ನಾಗಭೂಷಣ' ರವರ ಬಳಿ ಕಲಿಯಲು ಆಶೆಯಿತ್ತು. ಆದರೆ ಅವರ ಪರಿಚಯವಿರಲಿಲ್ಲ. ತಮ್ಮ ೧೬ ನೆಯ ವಯಸ್ಸಿನಲ್ಲೇ ಅದಕ್ಕಾಗಿ 'ಎಮ್. ಎ. ಮಹಾದೇವಸ್ವಾಮಿ'ಯವರ ನೆರವನ್ನು ಯಾಚಿಸಿದರು. ಶ್ರೀ. ಎಮ್. ಆರ್. ನಾಗಭೂಷಣರ ಹತ್ತಿರ 'ಪ್ರಾಥಮಿಕ ಭರತ ನಾಟ್ಯ ಕಲಿಕೆ'ಯ ನಂತರ, ನಾಟ್ಯ ಸರಸ್ವತಿ ಎಂದು ಪ್ರಸಿದ್ಧರಾಗಿದ್ದ ಜಟ್ಟಿ ತಾಯಮ್ಮ ಮತ್ತು 'ನಾಟ್ಯ ಪ್ರವೀಣೆ ಸುಂದರಮ್ಮ'ನವರ ಹತ್ತಿರ ಉನ್ನತ ಶಿಕ್ಷಣ ಪಡೆದು 'ನಾಟ್ಯಾಚಾರ್ಯ' ನೆಂದು ಹೆಸರುವಾಸಿಯಾದರು. ಮುಂದೆ, ಸುಪ್ರಸಿದ್ಧ ನಾಟಕ ಕಂಪೆನಿಯ ಮಾಲೀಕ ಗುಬ್ಬಿ ವೀರಣ್ಣ, ಹಿರಣ್ಣಯ್ಯ , ಜಟ್ಟಪ್ಪನವರ ಕಂಪೆನಿಯಲ್ಲಿ ಸ್ತ್ರೀಪಾತ್ರವಹಿಸುತ್ತಿದ್ದರು. ರಾಘವೇಂದ್ರ ಸ್ವಾಮಿಗಳ ಮೇಲೆ ಹಲವಾರು ಕೃತಿ ರಚಿಸಿದರು. ತಮಿಳು ಭಾಷೆಯಲ್ಲಿದ್ದ ಕೃತಿಯನ್ನು ತಾಯೇ ಯಶೋದೆಯ' ಕನ್ನಡಕ್ಕೆ ಅನುವಾದಿಸಿದರು.
ಜಯಂತಿಯವರ ಸ್ಥೂಲ ಪರಿಚಯ
[ಬದಲಾಯಿಸಿ]ಜಯಂತಿಯವರು, ೧೯೩೪ ರಲ್ಲಿ ಮಂಗಳೂರಿನಲ್ಲಿ ಜನಿಸಿದರು. ತಂದೆ, ಸಸ್ಯ್ಸಶಾಸ್ತ್ರ ಅಧ್ಯಾಪಕ , ಶ್ರೀ. ಬಿ. ಎಸ್. ವ್ಯಾಸವಿಠಲ್. ಅವರ ಪ್ರೋತ್ಸಾಹದಿಂದ, ನಾಟ್ಯಾಚಾರ್ಯ, ಶ್ರೀ ವಾರಿಯರ್ ಬಳಿ ಕಥಕ್ಕಳಿ ನೃತ್ಯವನ್ನು ಕಲಿಸಲು ಏರ್ಪಾಡುಮಾಡಿದರು. ಜಯಂತಿಯವರು, ನಂತರ, ಹೀರಾಲಾಲ್ ಹತ್ತಿರ ಕೆಲಕಾಲ ಕಥಕ್ ನೃತ್ಯಾಭ್ಯಾಸಮಾಡಿದರು. ಜಯಂತಿಯವರದು ಬಹುಮುಖ ಪ್ರತಿಭೆ. ವೀಣೆ, ಪಿಟೀಲು,ವಾದ್ಯಗಳಲ್ಲಿ ಪರಿಣತಿ ಹೊಂದಿ, ಸಂಗೀತ ಕಚೇರಿಗಳನ್ನು ಕೊಡುತ್ತಿದ್ದರು. ೧೯೩೮ ರಲ್ಲಿ ಮೈಸೂರಿಗೆ ಬಂದ ರಾಜ್ ಗೋಪಾಲ್, ನೃತ್ಯ ಶಿಕ್ಷಣ ಪಡೆಯುತ್ತಿದ್ದ ಗುರುಗಳ ಬಳಿಯೇ ಜಯಂತಿಯವರೂ ಬರುತ್ತಿದ್ದರು. ಪರಸ್ಪರ ಪರಿಚಯವಾಗಿ, ಅದು ಪ್ರೇಮಕ್ಕೆ ತಿರುಗಿ ಹಿರಿಯರ ಸಮ್ಮತಿಗಳಿಸಿ ೧೯೫೦ ರಲ್ಲಿ ಅವರಿಬ್ಬರೂ ಮದುವೆಯಾಗಿ ಗೃಹಸ್ಥಾಶ್ರಮವನ್ನು ಸ್ವೀಕರಿಸಿದರು. ತಮ್ಮನ್ನೇ ನಾಟ್ಯ ಕಲೆಗೆ ಅರ್ಪಿಸಿಕೊಳ್ಳಬೇಕೆಂಬ ಹಂಬಲ ಇಬ್ಬರಿಗೂ ಇತ್ತು. ಸತಿ-ಪತಿಗಳಿಬ್ಬರೂ ಸರಳ, ನಿರಾಡಂಬರ ಜೀವನದಲ್ಲಿ ಆಸಕ್ತರು. ನೃತ್ಯ ಕಲಾಸೇವೆಯನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದರು. ಒಟ್ಟಾಗಿ ಕಾರ್ಯಕ್ರಮಗಳನ್ನು ನೀಡಿ ಮೈಸೂರಿನಲ್ಲಿ ಪ್ರಸಿದ್ದಿಹೊಂದಿದರು.
ನೃತ್ಯ ಕಲಾಮಂದಿರ ಸ್ಥಾಪನೆ
[ಬದಲಾಯಿಸಿ]ಮೈಸೂರಿನಲ್ಲೇ ೧೯೪೮ ರಲ್ಲಿ, 'ಶ್ರೀ ನೃತ್ಯ ಕಲಾಮಂದಿರ' ವೆಂಬ ನೃತ್ಯ ಸಂಸ್ಥೆಯನ್ನು ಸ್ಥಾಪಿಸಿದರು. ರಾಜಗೋಪಾಲ್ ಮತ್ತು ಜಯಂತಿ ದೇವಿಯವರಿಬ್ಬರೂ ಜೊತೆಗೂಡಿ ಪ್ರದರ್ಶಿಸಿದ ಶಿವ-ಪಾರ್ವತಿ, ವಿಶ್ವಾಮಿತ್ರ-ಮೇನಕಾ, ಮತ್ತು 'ಬೆಸ್ತರ ನೃತ್ಯಗಳು', ರಾಜ್ಯದಲ್ಲಿ ಒಳ್ಳೆಯ ಹೆಸರುಮಾಡಿದವು. ಪಂಡಿತರು ಮತ್ತು ಸಾಮಾನ್ಯರು ಇದನ್ನು ಪ್ರಶಂಸಿದರು. 'ತಿಲೋತ್ತಮ' ಎಂಬ ಕನ್ನಡ ಚಿತ್ರಕ್ಕೆ ನೃತ್ಯ ನಿರ್ದೇಶನವನ್ನು ಕೊಡುವ ಅವಕಾಶವನ್ನು ಚೆನ್ನಾಗಿ ಬಳಸಿದರು. ನಾಟ್ಯದ ಜೊತೆಗೆ ,ಗಾಯನ, ವೀಣಾವಾದನ, ಪಿಟೀಲು, ಹಾಗು ಮೃದಂಗವಾದನಗಳಲ್ಲೂ ಹೆಚ್ಚಿನ ಪರಿಣತಿಯನ್ನು ಗಳಿಸಿ ಬಹುಮುಖ ನೈಪುಣ್ಯ ತೆಯನ್ನು ಉತ್ತಮಪಡಿಸಿಕೊಂಡರು. ಭಾರತದಾದ್ಯಂತ ಸಂಚರಿಸಿ, ಹಲವಾರು ಕಡೆಗಳಲ್ಲಿ ತಮ್ಮ ಅಮೋಘ ನೃತ್ಯ ಪ್ರದರ್ಶಗಳನ್ನು ಕೊಟ್ಟರು. ಅವರ 'ನೃತ್ಯ ಸಂಯೋಜನೆ'ಯ ಕಲೆಯನ್ನು ಕುರಿತು ಹಲವಾರು ಪ್ರತಿಷ್ಠಿತ ಪತ್ರಿಕೆಗಳು ಮುಕ್ತ ಕಂಠದಿಂದ ಪ್ರಶಂಸಿಸಿವೆ. ಮೈಸೂರರಮನೆಯ 'ಬ್ಯಾಂಡ್ ಸೆಟ್' ತಂಡದ ಜೊತೆಯಲ್ಲಿ ಸೇರಿ ಕೆಲವು ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಬಿರುದು, ಪ್ರಶಸ್ತಿಗಳು
[ಬದಲಾಯಿಸಿ]- ಭಾರತೀಯ ನೃತ್ಯ ಕಲಾ ಪರಿಷತ್ತಿನ “ನೃತ್ಯ ಕಲಾಶಿಲ್ಪ” ಎಂಬ ಬಿರುದು.
- ಮಂಡ್ಯದ ಶಾಂತಲಾ ನೃತ್ಯಕಲಾ ಮಂದಿರದಿಂದ “ನಾಟ್ಯ ಕಲಾರತ್ನ”,
- ಮೈಸೂರು ಮಾರುತಿ ಸೇವಾ ಸಂಘದಿಂದ “ನಾಟ್ಯ ಕಲಾ ಪ್ರವೀಣ” ಬಿರುದು.
ಶಿವ ಪಾರ್ವತಿಯರ ನೃತ್ಯ,ಜನಜನಿತ
[ಬದಲಾಯಿಸಿ]ಭಾರತೀಯ ಸಮಾಜದಲ್ಲಿ, ಆದಿ ದಂಪತಿಗಳು ಹಾಗೂ ಯುಗ ಪ್ರವರ್ತಕರೆಂದು ಕೇವಲ ಶಿವ-ಪಾರ್ವತಿಯರನ್ನು ನಂಬುವ ಪರಿಪಾಠವಿದೆ. ಈ ಮಾತಾ ಪಿತೃ ಸಮಾನರು ಜೀವನದ ಲಯ ಬದ್ಧತೆಯನ್ನು ಕಾಪಾಡುತ್ತಾ ತಮ್ಮ ಲಾಸ್ಯ-ತಾಂಡವದಿಂದ ಪ್ರಕೃತಿಯಲ್ಲಿನ ಸಮತೋಲನವನ್ನು ಹಿಡಿದಿಟ್ಟಿದ್ದಾರೆ. ಜಗತ್ತಿಗೆ ಸಂದರ್ಯವನ್ನು ಪರಿಚಯಿಸಿದ್ದಾರೆ. ಪ್ರಾಚೀನ ಶೈವಾಗಮಗ್ರಂಥ'ದಲ್ಲಿ ಶಿವ ಪಾರ್ವತಿಯರು ಒಟ್ಟಿಗೆ ನರ್ತಿಸಿದ ದಾಖಲೆಗಳಿವೆ. ಸ್ಪರ್ಧೆಗಾಗಿ ಕೆಲವು ವಾದ್ಯಗಳ ಸಂಗೀತ ಸ್ವರಗಳ ಉಗಮಕ್ಕಾಗಿ ನರ್ತಿಸಿದ ಉದಾಹರಣೆಗಳು, ದೊರೆಯುತ್ತವೆ. ನೃತ್ಯದಲ್ಲಿ ತಾಂಡವ ಶೈಲಿಯನ್ನು ನಟರಾಜನಾದ ಶಿವನೂ ಲಾಸ್ಯಪ್ರಕಾರವನ್ನು, ಪಾರ್ವತಿದೇವಿಯೂ ಪ್ರಸ್ತುತಪಡಿಸುತ್ತಾರೆ. ಭರತಮುನಿಯ ನಾಟ್ಯ ಶಾಸ್ತ್ರದಲ್ಲಿ ಬಾಣಾಸುರನ ಮಗಳಾದ ಉಷೆಯಿಂದ ಲಾಸ್ಯ ಪ್ರಕಾರವೂ, ಶಿವನ ಗಣಗಳಲ್ಲಿ ಒಬ್ಬನಾದ ತಾಂಡುವಿನಿಂದ ತಾಂಡವವೂ ಶಾಸ್ತ್ರದಲ್ಲಿ ಸೇರ್ಪಡೆಯಾದ ವಿಷಯ ಕಂಡು ಬರುತ್ತದೆ. ನಾಟ್ಯಕ್ಕೆ ಪರಿಪೂರ್ಣತೆ ಬರಬೇಕಾದರೆ, ಎರಡೂ ಬೇಕು. ಭೂಲೋಕದಲ್ಲಿ ಈ ದೈವೀ ಕಲೆಯು ಕ್ರಮೇಣ ಪ್ರಚಾರಕ್ಕೆ ಬಂತು. ಪ್ರಚಾರದಿಂದಾಗಿ ಪ್ರಾಮುಖ್ಯತೆಯನ್ನು ಗಳಿಸಿತು.
ದೇವದಾಸಿಯರ ಪಾತ್ರ
[ಬದಲಾಯಿಸಿ]'ದೇವತಾ ವಿಧಿ ವಿಧಾನ'ಗಳಾದ ಯಜ್ಞ- ಯಾಗಾದಿಗಳ ಸಮಯದಲ್ಲಿ ಶುಭ ಸಮಾರಂಭಗಳಲ್ಲಿ ನಾಟುವರಿಂದಲೂ, ದೇವದಾಸಿಯರಿಂದಲೂ ನೃತ್ಯ ಸೇವಾ ಖಡ್ಡಾಯವಾಗಿ ನಡೆಯುತ್ತಿತ್ತು. ಆ ಕಾಲದಲ್ಲಿ ಕೇವಲ ನಟುವನಾರ್, ದೇವದಾಸಿಯರ ಸೊತ್ತಾಗಿದ್ದ ನೃತ್ಯ ಕಲೆ,ಬರಬರುತ್ತಾ, ಜನಸಾಮಾನ್ಯರನ್ನೂ ಆಕರ್ಶಿಸಿ ತನ್ನ ತೆಕ್ಕೆಯಲ್ಲಿ ತೆಗೆದುಕೊಂಡು ಮುಂದುವರೆಯಿತು. ಸಮಾಜದಲ್ಲಿ ಕುಲೀನ ಮನೆತನದ ಹೆಣ್ಣು ಮಕ್ಕಳು ಸಹಿತ, ಆಸಕ್ತಿಯನ್ನು ತೋರಿಸಲು ಆರಂಬಿಸಿದರು
ನೃತ್ಯದಲ್ಲಿ ನಟರಾಜ
[ಬದಲಾಯಿಸಿ]ನೃತ್ಯ ಕಲೆ, ಸಂಗೀತ, ನಾಟಕ ಶಾಸ್ತ್ರಗಳಲ್ಲಿ ಪುರುಷರೇ ಪ್ರವರ್ತಕರಾಗಿ ಮುಂದುವರೆದ ಹಲವು ಗ್ರಂಥಗಳಲ್ಲಿ ಮತಂಗ, ರೋಹಿಲ, ದತ್ತಿಲರಂತಹ ಉದಾಹರಣೆಗಳಿವೆ. ೨೦ ನೆಯ ಶತಮಾನದ ಮಧ್ಯಭಾಗದವರೆಗೂ, ಸ್ತ್ರೀ ಪಾತ್ರಗಳನ್ನೂ ಪುರುಷರೇ ಮಾಡುವ ಪದ್ಧತಿ ರೂಢಿಯಲ್ಲಿತ್ತು. ಜೀವನ ನಿರ್ವಹಣೆಗೆ ನೆರವಾಗಿದ್ದ ಈ ತರಹದ ಕಲಾಜೀವನ ಒಂದು ಪ್ರೆತ್ಯೇಕ ಕುಲದವರೇ ವಂಶ ಪಾರಂಪರ್ಯವಾಗಿ ಮಾಡಿಕೊಂಡುಬರುತ್ತಿದ್ದರು. ಕಾಲ ಬದಲಾದಂತೆ, ಸಮಾಜದ ವ್ಯವಸ್ಥೆಯಲ್ಲಿ ತಿರುವು ಬಂದು, ಕುಲೀನ ಮನೆತನದವರೂ ಅದರಲ್ಲಿ ಪುರುಷರ ಜೊತೆಗೆ ಸ್ತ್ರೀಯರೂ, ನೃತ್ಯ ಕಲೆಯ ಸೌಂದರ್ಯ, ಹಾಗೂ ದೈವಿಕತೆಗೆ ಮಾರುಹೋಗಿ ತಾವು ಕಂಡುಕೊಂಡ ಗುರುವೊಬ್ಬರಲ್ಲಿ ಶ್ರದ್ಧಾ ಭಕ್ತಿಗಳಿಂದ ಕಲಿಯಲು ಆರಂಭಿಸಿದರು. ಕಾಲಾನುಕ್ರಮದಲ್ಲಿ ಅದಕ್ಕೆ ಮನ್ನಣೆಯೂ ದೊರೆಯಲು ಶುರುವಾಯಿತು.
ಜೊತೆ-ಜೊತೆಯಾಗಿ ನೃತ್ಯಾಭಿನಯ ಮೊದಲು ಇರಲಿಲ್ಲ
[ಬದಲಾಯಿಸಿ]ಮೊದಮೊದಲು, ಪತಿ-ಪತ್ನಿಯರು ಜೊತೆಜೊತೆಯಾಗಿ ನರ್ತಿಸುವುದು ಬಹಳ ಅಪರೂಪದ ಸಂಗತಿಯಾಗಿತ್ತು. ಆದರೆ ಕೆಲವು ಒಳ್ಳೆಯ ಅಭಿನಯ, ಭಾವರಸವನ್ನು ಸಮಯೋಚಿತವಾಗಿ ಹೆಚ್ಚು ಮುಕ್ತರೀತಿಯಲ್ಲಿ ಅಭಿಯಕ್ತಿಪಡಿಸಲು ಸಾಧ್ಯತೆಗಳು ಇವೆ. ನೃತ್ಯದಲ್ಲಿ ತಾಂಡವ ಲಾಸ್ಯಗಳನ್ನೂ ಸ್ಪಷ್ಟವಾಗಿ ಮೂಡಿಸಲು ನೃತ್ಯ ಪ್ರದರ್ಶನದ ಮುಂಚೆ ಪರಸ್ಪರ ವಿಚಾರ ವಿನಿಮಯ ಹಾಗು ನಿರಂತರ ಅಭ್ಯಾಸಗಳಿಂದ ಉತ್ತಮ ಗುಣಮಟ್ಟದ ಅದಲ್ಲದೆ ರಸಾನಂದದ ವಿವಿಧ ಮಜಲುಗಳನ್ನು ಅನುಭವಿಸಲು, ವೈಯಕ್ತಿಯ ಜೀವನದ ಕುಂದು ಕೊರತೆಗಳನ್ನು ತಮ್ಮ ಕಲಾಜೀವನದ ಸಂಭ್ರಮದಲ್ಲಿ ಮರೆಯಲು ಅನುಕೂಲ.
ಕೆ. ಎಸ್.ಆರ್.ಜಯಂತಿಯವರ ಗರಡಿಯಲ್ಲಿ ತಯಾರಾದ ಶಿಷ್ಯ ಶ್ರೇಷ್ಟರು
[ಬದಲಾಯಿಸಿ]- ವಿಷ್ಣು ದಾಸ್,
- ಪಿ. ಎನ್. ಆನಂದರಾವ್,
- ಎಮ್. ಆರ್. ರಾವ್,
- ಕೃಷ್ಣಕುಮಾರ್,
- ತುಮಕೂರು ರಾಮನ್,
- ಟಿ. ಎನ್. ಸೋಮಶೇಖರ್,
- ಕೆ. ಬಿ. ಮಾಧವ ರಾವ್
ಮಹಾರಾಜರ ಆಶೀರ್ವಾದ
[ಬದಲಾಯಿಸಿ]ಮೈಸೂರು ಮಹಾರಾಜ, ಶ್ರೀ ಜಯಚಾಮ ರಾಜೇಂದ್ರ ವೊಡಿಯರ್, ತಮ್ಮ ಲಲಿತ ಮಹಲ್ ಅರಮನೆಯ ಬದಿಯಲ್ಲಿಯೇ ೪೦-೬೫ ರ ನಿವೇಶನವನ್ನು ಉಡುಗೊರೆಯಾಗಿ ನೀಡಿ ಆಶೀರ್ವದಿಸಿದರು. ಇದಲ್ಲದೆ ಕರ್ನಾಟಕ ಸರಕಾರವು 'ಆಶ್ರಯ ಮನೆ'ಯನ್ನು ಮೈಸೂರಿನಲ್ಲಿ ಈ ದಂಪತಿಗಳಿಗೆ ನೀಡಿ ಸಹಾಯಮಾಡಿದೆ. ದೊರಕಿತು.
ಕವಿತೆ ರಚನೆಯಲ್ಲೂ ಆಸಕ್ತರು
[ಬದಲಾಯಿಸಿ]ರಾಜಗೋಪಾಲರಿಗೆ ಕವಿತಾ ರಚನೆಯನ್ನು ಮಾಡುವ ಸಾಮರ್ಥ್ಯವಿತ್ತು. ಶ್ರೀ ರಾಘವೇಂದ್ರ ಸ್ವಾಮಿಗಳ ಮೇಲೆ ೮-೧೦ ಕೃತಿಗಳನ್ನು ರಚಿಸಿದ್ದಾರೆ. ತಮಿಳಿನ ಹೆಸರಾಂತ 'ತಾಯೆ ಯಶೋದೆ ಕೃತಿ'ಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ವಯಸ್ಸಾದಂತೆ ರಾಜಗೋಪಾಲರು ಮೊದಲಿನಂತೆ ನೃತ್ಯ ಪಾಠಗಳನ್ನು ಬೋಧಿಸಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಪತಿಯ ಮಾರ್ಗದರ್ಶನದಲ್ಲಿ ಶ್ರೀಮತಿ ಜಯಂತಿಯವರು, ತಮ್ಮ ನಿವಾಸದಲ್ಲಿ ಅಲ್ಲದೆ ಕೊಡಗು ಜಿಲ್ಲೆಯ ಗೋಣಿಕೊಪ್ಪ ವಿರಾಜ ಪೇಟೆಗಳಲ್ಲಿ ಹೇಳಿಕೊಡುತ್ತಿದ್ದರು. ವೀಣೆ ,ಪಿಟೀಲು ವಾದ್ಯಗಳನ್ನು ನುಡಿಸುವ ಪಾಠಗಳನ್ನು ಆರಂಭಿಸಿ ಯಶಸ್ವಿಯಾದರು.ಈ ಸುಖೀ ದಂಪತಿಗಳಿಗೆ,. ಇಬ್ಬರು ಹೆಣ್ಣು ಮಕ್ಕಳು ಮತ್ತು ಒಬ್ಬ ಮಗ ಇದ್ದಾರೆ. ಅವರೆಲ್ಲ ಸಮಾಜಲ್ಲ್ಲಿ ಪ್ರತಿಷ್ಠಿತ ಸ್ಥಾನಗಳಲ್ಲಿ ಕೆಲಸಮಾಡುತ್ತಿದ್ದಾರೆ.