ವಿಷಯಕ್ಕೆ ಹೋಗು

ಕೆಲಸದ ಹಾಡುಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೆಲಸದ ಸಮಯಗಳಲ್ಲಿ ಶ್ರಮವನ್ನು ಹಗುರ ಮಾಡಿಕೊಳ್ಳುವುದಕ್ಕೂ ಉತ್ಸಾಹ ಪಡೆವುದಕ್ಕೂ ಗ್ರಾಮೀಣ ಜನ ಬಳಸುವ ಹಾಡುಗಳು (ವರ್ಕ್ ಸಾಂಗ್ಸ್). ಇಲ್ಲಿ ಕೆಲಸ ಎಂಬ ಪದ ಜನಬಳಕೆಯಲ್ಲಿರುವ ವಿವಿಧ ಕಾಯಕಗಳನ್ನು ಸೂಚಿಸುತ್ತಾದ್ದರಿಂದ ಈ ಹಾಡುಗಳನ್ನು ಕಾಯಕ ಗೀತೆಗಳು ಎಂದೂ ಕರೆವುದಿದೆ.

ಇತಿಹಾಸ[ಬದಲಾಯಿಸಿ]

ಕೆಲಸದ ಹಾಡುಗಳ ಬಳಕೆ ಜನಪದದಲ್ಲಿ ಆದಿಯಿಂದಲೂ ರೂಢಿಯಲ್ಲಿದೆ. ಇವನ್ನು ವ್ಯಕ್ತಿಗಳು ಒಂಟಿಯಾಗಿಯೂ ಗುಂಪಾಗಿಯೂ ಹಾಡುವುದುಂಟು. ಹಳ್ಳಿಗರಲ್ಲಿ ಮಾತ್ರವಲ್ಲದೆ, ಮುಂದುವರಿದ, ನಾಗರಿಕರೆನಿಸಿಕೊಂಡವರಲ್ಲಿಯೂ ಈ ಗೀತೆಗಳನ್ನು ಕ್ವಚಿತ್ತಾಗಿ ಕಾಣಬಹುದು. ಇವು ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನ ಎಲ್ಲ ರಾಷ್ಟ್ರಗಳಲ್ಲಿಯೂ ಕಂಡುಬರುತ್ತವೆ. ವೈಜಾÐನಿಕವಾಗಿ ಮುಂದುವರಿದ ಯಂತ್ರೋಪಕರಣಗಳ ಸೌಲಭ್ಯ ಹೆಚ್ಚಿದಂತೆ, ನಾಗರಿಕತೆ ಬೆಳೆದಂತೆ ಇಂಥ ಹಾಡುಗಳ ಬಳಕೆ ಕಡಿಮೆಯಾಗುತ್ತ ಬರುತ್ತಿದೆ. ಈ ಹಾಡುಗಳನ್ನು ಎಲ್ಲ ವೃತ್ತಿಯವರೂ ಬಳಸುತ್ತಾರೆ. ಎಲ್ಲರ ಉದ್ದೇಶವೂ ಒಂದೆ. ಆದರೆ ಆಯಾ ಕೆಲಸಕ್ಕನುಗುಣವಾಗಿ ಹಾಡುವ ಗೀತೆಗಳಿಗೆ ಆಯಾ ಕೆಲಸದ ಹೆಸರೇ ಬರಬಹುದು. ಉದಾಹರಣೆಗೆ, ರಾಗಿ ಬೀಸುವ ಸಮಯದಲ್ಲಿ ಹಾಡುವ ಪದಗಳನ್ನು ರಾಗಿಕಲ್ಲಿನ ಪದಗಳು ಎಂದೂ ಗಾಡಿಹೊಡೆಯುವಾಗಿನ ಪದಗಳನ್ನು ಗಾಡೀ ಪದಗಳೆಂದೂ ಕರೆಯುವುದು ವಾಡಿಕೆಯಾಗಿದೆ.

ಕಾಲಗಳಿ[ಬದಲಾಯಿಸಿ]

ಮನೆಗೆಲಸಗಳಿಗೆ, ಬೇಸಾಯಕ್ಕೆ, ಗೃಹಕೈಗಾರಿಕೆಗಳಿಗೆ ಮತ್ತು ಇತರ ನಾನಾ ವೃತ್ತಿಗಳಿಗೆ ಸಂಬಂಧಿಸಿದಂತೆ ಈ ಕೆಲಸದ ಹಾಡುಗಳು ಕಂಡುಬರುತ್ತವೆ. ರಾಗಿ ಬೀಸುವಾಗ, ಬತ್ತಕುಟ್ಟುವಾಗ, ಹೊಲದಲ್ಲಿ ಕಳೆಕೀಳುವಾಗ, ನಾಟಿಮಾಡುವಾಗ, ಧಾನ್ಯಗಳನ್ನು ಒನೆಯುವಾಗ, ನೆಲಗಡಲೆ ಸುಲಿಯುವಾಗ, ಕಣದಲ್ಲಿ ದವಸಧಾನ್ಯಗಳನ್ನು ತೂರುವಾಗ ಸ್ತ್ರೀಯರು ಹಾಡುಗಳನ್ನು ಹೇಳಿಕೊಂಡು ತಮ್ಮ ಕೆಲಸದ ಶ್ರಮವನ್ನು ಕಡಿಮೆಮಾಡಿಕೊಳ್ಳುತ್ತಾರೆ. ರಾಗಿ ಬೀಸುವಾಗ ಸ್ತ್ರೀ ಒಬ್ಬಂಟಿಗಳಾಗಿಯೂ ಕೆಲವು ಸಮಯಗಳಲ್ಲಿ ಇಬ್ಬರು ಜೊತೆಯಾಗಿಯೂ ಹಾಡುವುದುಂಟು. ಹಿಂದೆ ಯಂತ್ರಸೌಕರ್ಯವಿರಲಿಲ್ಲವಾಗಿ ಸ್ತ್ರೀಯರು ಮುಂಜಾನೆ ನಾಲ್ಕು ಗಂಟೆಗೇ ಎದ್ದು ಬೆಳಕು ಹರಿಯುವ ವರೆಗೆ ಬೀಸುತ್ತಿದ್ದರು. ಅಂಥ ಸಂದರ್ಭದಲ್ಲಿನ ಒಂದೆರಡು ಗೀತೆಗಳನ್ನಿಲ್ಲಿ ನೋಡಬಹುದು:

ಹಾಡು[ಬದಲಾಯಿಸಿ]

ಮೂಡು ಮುಂದಾಗಿ ಹೂಡೇವು ರಾಗೀ ಕಲ್ಲು ರೂಢಿಗೆ ಈಶ್ವರನ ಮಡದೀಯ-ಗೌರಮ್ಮನ ಹೂಡೇವು ಹೊನ್ನ ಗೆರಸೀಯ 1 ಕಲ್ಲು ಹಿಡಿದಾಗ ಒಳ್ಳೊಳ್ಳೆ ನುಡಿ ನುಡಿಯೆ ಸೊಲ್ಲು ಸೊಲ್ಲಿಗೆ ಶಿವ ಬರಲಿ-ಈ ಮನೆ ಮಲ್ಲಯ್ಯ ಬರಲಿ ಮನದಾಗೆ 2 ಬಿದಿರೆ ಬೆಟ್ಟದ ಮೇಲೆ ಚದುರೆ ರಾಗಿಯ ಕಲ್ಲೆ ಮದನಾರಿ ನೊಂಬೊ ಹಿಡಿಗೂಟ-ಹಿಡುಕೊಂಡು ಮೊದಲೇ ಸಿರಿಗೌರಿ ನೆನೆದೇವು 3 ಕಲ್ಲು ಬಿಟ್ಟೇವೆಂದು ಎಲ್ಲರೂ ಕೇಳಿರಿ ಕುಕ್ಕೇಲಿ ರಾಗಿ ಬಿಳಿ ಎಲೆ-ತಕ್ಕೊಂಡು ಮತ್ತೆ ರಾತ್ರೀಕೆ ಬರುತೀವಿ 4

ಉಳಿದ ಸಮಯಗಳಲ್ಲಿ ಗೀತೆಗಳನ್ನು ಗುಂಪಾಗಿಯೇ ಹಾಡುತ್ತಿರುತ್ತಾರೆ. ಹೀಗೆ ಗುಂಪಾಗಿ ಹಾಡುವಾಗ ಮುಮ್ಮೇಳ ಹಿಮ್ಮೇಳಗಳು ಕಂಡುಬರುತ್ತದೆ. ಮುಮ್ಮೇಳ ಎಂದರೆ ಮೊದಲು ಹಾಡುವವರ ಗುಂಪು. ಅವರು ಗೀತೆಯಲ್ಲಿನ ಕಥೆಯನ್ನು ಮುಂದುವರಿಸಿಕೊಂಡು ಹೋಗುತ್ತಾರೆ ಅಥವಾ ಗೀತೆಯ ಮುಕ್ತಾಯದತ್ತ ಸಾಗುತ್ತಾರೆ. ಹಿಮ್ಮೇಳದವರು ಮೊದಲು ಹಾಡಿದವರ ಪಲ್ಲವಿಯನ್ನು ಮಾತ್ರ ಪುನರುಚ್ಚರಿಸಿಕೊಂಡು ಹೋಗುತ್ತಾರೆ.

ಇನ್ನು ಪುರುಷರು ಗಾಡಿ ಹೊಡೆಯುವಾಗ, ಬತ್ತದ ಹುಲ್ಲನ್ನು ಒಕ್ಕುವಾಗ, ರೋಣುಗಲ್ಲು ಹೊಡೆಯುವಾಗ, ದನಕಾಯುವಾಗ, ಹುಟ್ಟುಹಾಕುವಾಗ, ಮೀನು ಹಿಡಿಯುವಾಗ, ಮನೆಕಟ್ಟುವಾಗ, ಗದ್ದೆಕೆಲಸ ಮಾಡುವಾಗ, ಹೊಲ ಉಳುವಾಗ ಹಾಡುಗಳನ್ನು ಹೇಳುವುದರ ಮೂಲಕ ತಮ್ಮ ಬೇಸರಿಕೆಯನ್ನು ಕಳೆದುಕೊಳ್ಳುವುದನ್ನು ಗಮನಿಸಬಹುದು. ಕಾಯಕದ ದೈಹಿಕ ಶ್ರಮಕ್ಕನುಗುಣವಾಗಿ ಗೀತೆಗಳ ರಾಗ, ಲಯ ಗತಿಗಳನ್ನು ಏರಿಸಿ, ಇಳಿಸುವುದು ಅನಿವಾರ್ಯವಾಗುತ್ರದೆ. ಕಾಯಕದ ಹಾಡುಗಳಲ್ಲಿ ಪ್ರೇಮಗೀತೆಗಳು, ಶೋಕಗೀತೆಗಳು, ದೈವಿಕ ಆವರಣಕ್ಕೆ ಒಳಪಟ್ಟ ಗೀತೆಗಳು, ಸೂತ್ರ ರೂಪದ ಗೀತೆಗಳು. ಮಿಶ್ರಗೀತೆಗಳು, ಕಥನಗೀತೆಗಳು, ಹಾಸ್ಯಗೀತೆಗಳು ಕಂಡು ಬರುತ್ತವೆಯಾದರೂ ಸಾಮಾನ್ಯವಾಗಿ ಪ್ರೇಮಗೀತೆಗಳೇ ಹೆಚ್ಚು. ಹಿಂದೆ ಒಂದೂರಿಂದ ಮತ್ತೊಂದು ಊರಿಗೆ ನೂರಾರು ಮೈಲಿಗಳ ದೂರ ಪ್ರಯಾಣವನ್ನೂ ಗಾಡಿಗಳಲ್ಲಿ ಮಾಡುತ್ತಿದ್ದುದುಂಟು. ಆ ಸಮಯದಲ್ಲಿ ಗಟ್ಟಿಯಾಗಿ ಪದಗಳನ್ನು ಹೇಳುತ್ತ ಗಾಡಿ ಹೊಡೆಯುತ್ತಿದ್ದರೆ ದಾರಿಸಾಗಿದ್ದೆ ತಿಳಿಯುತ್ತಿರಲಿಲ್ಲ. ಹಾಡಿನಿಂದ ಎತ್ತುಗಳಿಗೂ ಹಿತವೆನಿಸುತ್ತಿತ್ತೆಂದು ತೋರುತ್ತದೆ. ಅನೇಕ ಗಾಡಿಗಳು ಒಟ್ಟಿಗೆ ಹೋಗುತ್ತಿದ್ದರೆ, ಒಂದು ಗಾಡಿಯವರು ಮತ್ತೊಂದು ಗಾಡಿಯವನನ್ನೋ ದಾರಿಯಲ್ಲಿ ಕಂಡ ಹೆಣ್ಣುಗಳನ್ನೊ ಅಥವಾ ಮತ್ತೇನನ್ನೋ ಕುರಿತು ಹಾಡುಕಟ್ಟಿ ಹೇಳುವುದು ವಾಡಿಕೆ ಆಗಿತ್ತು.

ಬಂಡಿ ಹೊಡೆಯೋನ ಬಂಡಾಟ ನೋಡಿರೊ
ಬಾರುಕೋಲೈದು ಬಲಗೈಲಿ-ಹಿಡಕೊಂಡು
ಬೋರಾಡಿ ಘಟ್ಟ ಇಳಿಸ್ಯಾನು 1
ಕಬ್ಬು ಕಡಿಯೋನೆ ಉಬ್ಬು ನೇರುಳ್ಳೋನೆ
ಗೊಬ್ಬರದ ಗಾಡಿ ಹೊಡೆಯೋನೆ-ತಮ್ಮಯ್ಯನ
ಉಬ್ಬು ತಿದ್ಯವಳೆ ಶ್ರೀಗೌರಿ 2
ಹಾಡು ಬಂದರೆ ಹಾಡು ಗಾಳಿ ಬಂದರೆ ತೂರೋ
ಹಾಡೇಳೊ ಗೆಣಯ ನನದ್ಯೂಲಿ-ಬಲ್ಲಂಥ
ಜಾಣ ನೀ ಒಡದ್ಹೇಳೊ 3
ಹೋರಿಯ ಹೊಡಕಂಡು ಕೋರ್ ಹುಡುಗಿ ನಾ ಕಂಡೆ
ಗೋರಿಕಾಯಂತ ಎದೆಯೋಳ-ನಾ ಕಂಡು
ಹೋರಿ ಹೊಡೆಯಾಕೆ ಮನಸ್ಸಿಲ್ಲ 4
ಕೆಂಪಾನೆ ಹೆಣ್ಣಿಗೂ ಸಂಪಿಗೆ ಹೂವಿಗೂ
ಅಂತರದಲ್ಲಾಡೊ ಹುಣುಸೇಯ-ದೋರ್ಹಣ್ಣಿಗೂ
ಎಂತೋರು ಬಾಯಿ ಬಿಡುತಾರೆ

ಅಮೆರಿಕದ ತೋಟಗಳಲ್ಲಿ ಕೂಲಿಗಳಾಗಿ ಕೆಲಸ ಮಾಡುವ ನಿಗ್ರೋಗಳಲ್ಲಿ ಹೆಚ್ಚಾಗಿ ಈ ಕೆಲಸದ ಹಾಡುಗಳ ಬಳಕೆಯಿತ್ತು. ಫ್ರಾನ್ಸ್ ದೇಶದಲ್ಲಿ ಕೆಲಸದ ಸಮಯದಲ್ಲಿ ಸ್ತ್ರೀಪುರುಷರು ಒಟ್ಟಾಗಿ ಪ್ರೇಮಗೀತೆಗಳನ್ನು ಹಾಡುತ್ತಿದ್ದರು. ಜಪಾನಿನಲ್ಲಿ ಹಗ್ಗಹೊಸೆಯುವ ಸಮಯಗಳಲ್ಲಿ ಇಂಥ ಹಾಡುಗಳ ಬಳಕೆ ಇತ್ತು. ಹಿಂದೆ ಸಮುದ್ರದಲ್ಲಿ ಯಾನಮಾಡುತ್ತಿದ್ದ ನಾವಿಕರು ತಮ್ಮ ಬೇಸರಿಕೆಯನ್ನು ಕಳೆಯುವುದಕ್ಕಾಗಿ ಗೀತೆಗಳನ್ನು ಹಾಡಿಕೊಳ್ಳುತ್ತಿದ್ದರು. ಕೇರಳದಲ್ಲಿ ಈಗಲೂ ದೋಣಿಗಳನ್ನು ನಡೆಸುವ ಸ್ಪರ್ಧೆಗಳೇರ್ಪಟ್ಟಾಗ ಅಲ್ಲದೆ ಮಿಕ್ಕ ಕಾಲಗಳಲ್ಲಿ ಕೂಡ ಗುಂಪುಗುಂಪಾಗಿ ಗೀತೆಗಳನ್ನು ಹೇಳಿಕೊಂಡು ಹುರುಪಿನಿಂದ ಹುಟ್ಟುಹಾಕುವುದನ್ನು ಕಾಣಬಹುದು.

(ಎಂ.ಸಿ.ವಿ.)