ವಿಷಯಕ್ಕೆ ಹೋಗು

ಕೆರೆಮನೆ ಶಿವರಾಮ ಹೆಗಡೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೆರೆಮನೆ ಶಿವರಾಮ ಹೆಗಡೆ
ಜನನಜೂನ್ ೨೧, ೧೯೦೮
ವೃತ್ತಿ(ಗಳು)ಯಕ್ಷಗಾನ ವಿದ್ವಾಂಸರು, ಯಕ್ಷಗಾನದಲ್ಲಿ ಪ್ರಸಿದ್ಧವಾದ 'ಶ್ರೀ ಇಡುಗಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಸ್ಥಾಪಕರು

ಯಕ್ಷಗಾನ ಲೋಕದಲ್ಲಿ ಪ್ರಧಾನವಾಗಿ ಕಾಣುವ ಹೆಸರು ಕೆರೆಮನೆ ಶಿವರಾಮ ಹೆಗಡೆ ಕೆರೆಮನೆ ಶಿವರಾಮ ಹೆಗಡೆಯವರು ಜೂನ್ ೨೧, ೧೯೦೮ರಂದು ಉತ್ತರಕನ್ನಡದ ಹೊನ್ನಾವರ ತಾಲ್ಲೂಕಿನ ಕೆರೆಮನೆಯಲ್ಲಿ ಜನಿಸಿದರು.

ಶ್ರೀ ಇಡುಗಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ[ಬದಲಾಯಿಸಿ]

ಶಿವರಾಮ ಹೆಗಡೆ ಹೆಗಡೆಯವರು ಯಕ್ಷಗಾನ ಲೋಕಕ್ಕೆ ಕಲಶಪ್ರಾಯವೆನಿಸಿರುವ ‘ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ’ಯನ್ನು ೧೯೩೪ರಲ್ಲಿ ಪ್ರಾರಂಭಿಸಿದರು. ಅದು ಇಂದೂ ದೃಢವಾಗಿ ಮುನ್ನಡೆಯುತ್ತಿದೆ.. ಈ ಮೇಳವನ್ನು ಎತ್ತರಕ್ಕೆ ಬೆಳೆಸಿದವರು ಶಿವರಾಮರ ಪುತ್ರ ಕೆರೆಮನೆ ಶಂಭು ಹೆಗಡೆ. ಈ ಮಂಡಳಿಯ ವರಬಲದಂತಿದ್ದವರು ಮಹಾಬಲ ಹೆಗಡೆಯವರು.

ಆದರ್ಶ, ಮೌಲ್ಯ, ಕಲಾತ್ಮಕ ಧೋರಣೆ, ಸುಧಾರಣೆಯ ವಿಷಯದಲ್ಲಿ ಕೆರೆಮನೆ ಮೇಳವೇ ಮಾದರಿ. ಅದು ಇಂದಿಗೂ ಉಳಿದಿದ್ದರೆ ಶಿವರಾಮ ಹೆಗಡೆ ಹಾಕಿದ ಅಡಿಪಾಯ, ಶಂಭು ಹೆಗಡೆಯವರ ಶ್ರಮವೇ ಕಾರಣ. ‘ಕೆರೆಮನೆ ಮೇಳದ ಚೌಕಿಯಲ್ಲಿ (ಗ್ರೀನ್ ರೂಮ್) ಹೆಣ್ಣು ಮಕ್ಕಳು ಯಾವ ತೊಂದರೆಯಿಲ್ಲದೆ ಮಲಗಿಕೊಳ್ಳಬಹುದು’ ಎನ್ನುವ ಮಾತೊಂದಿದೆ. ಇದು ಉತ್ಪ್ರೇಕ್ಷೆಯದ್ದೇನೂ ಅಲ್ಲ. ಮೇಳ ಮರ್ಯಾದಸ್ಥರದ್ದು ಎನ್ನಲು ಅನುಭವಿಗಳು ಕೊಟ್ಟ ಪ್ರಶಸ್ತಿ ಇದೆನ್ನಲಡ್ಡಿಯಿಲ್ಲ. ಅಂದರೆ ಆಟಕ್ಕೆ ಹೋದ ಚಿಕ್ಕ ಮಕ್ಕಳ ತಾಯಂದಿರು ಹಾಲುಣಿಸಲು, ಅನಾರೋಗ್ಯಕ್ಕೆ ತುತ್ತಾದವರು ಚೌಕಿಗೆ ಹೋಗಿ ವಿಶ್ರಾಂತಿ ಮಾಡಿದ ನಿದರ್ಶನಗಳಿವೆ.

ದೂರದರ್ಶನದಲ್ಲಿ ಮೊದಲ ಬಾರಿ ಪ್ರದರ್ಶನ, ವಿದೇಶ ಯಾತ್ರೆ ಸೇರಿದಂತೆ ಹಲವು ಪ್ರಥಮಗಳಿಗೆ ಕಾರಣವಾಗಿದ್ದು ಕೆರೆಮನೆ ಮೇಳ. ಮೇಳ ಜನ್ಮವೆತ್ತಲು ಶಿವರಾಮರ ಹಠದ ಸ್ವಭಾವವೇ ಪ್ರೇರಣೆ. ಅವರು ವೇಷಧಾರಿಯಾಗಿ ಬೆಳಕಿಗೆ ಬರುತ್ತಿದ್ದಾಗ ವಿಶೇಷವಾಗಿ ಉತ್ತರ ಕನ್ನಡದಲ್ಲಿ ಯಕ್ಷಗಾನಕ್ಕೊಂದು ವ್ಯವಸ್ಥಿತ ಸಂರಚನೆಯೇ ಇರಲಿಲ್ಲ. ಒಮ್ಮೆ ಮುರ್ಡೇಶ್ವರದಲ್ಲಿ ಹತ್ತಾರು ಆಟ ಆಡಲು ಹೋಗಿದ್ದರಂತೆ. ಅವರನ್ನು ಕರೆದುಕೊಂಡು ಹೋಗಿದ್ದ ಸ್ತ್ರೀವೇಷಧಾರಿ ಮೂರ್ನಾಲ್ಕು ಪ್ರದರ್ಶನವಾಗುತ್ತಿದ್ದಂತೆ, ಹೆಚ್ಚಿನ ವೇತನದ ಆಸೆಗೆ ಬಿದ್ದು, ಗುಂಡಬಾಳಕ್ಕೆ ಹೊರಟರಂತೆ. ಇದನ್ನೊಂದು ಆಭಾಸ, ಅಪಮಾನವೆಂದೇ ಭಾವಿಸಿದ ಹೆಗಡೆ ಅಂದೇ ಸ್ವಂತ ಮೇಳಕ್ಕೆ ಅಡಿಗಲ್ಲು ಹಾಕಿದರು. ಆ ಕಾಲದ ಶ್ರೇಷ್ಠ ಭಾಗವತ ವೆಂಕಟರಮಣ ಯಾಜಿ ಜೀವದ ಗೆಳೆಯನಂತೆ ಬೆನ್ನಿಗೆ ನಿಂತರು.

ಅಪ್ರತಿಮ ಛಲವಂತ[ಬದಲಾಯಿಸಿ]

ಅದು ಸೂರ್ಯೋದಯದ ಸಮಯ. ಶರಾವತಿ ನದಿ ದಂಡೆಯಲ್ಲಿ ನಿಂತು ಕಿಸೆಗೆಕೈಹಾಕಿದರೆ ಒಂದು ಪಾವಲಿಯೂ ಇಲ್ಲ. ಆ ಕಾಲದಲ್ಲಿ ಹೊಳೆ ದಾಟಲುದೋಣಿಯವನಿಗೆ ಒಂದಾಣೆ ಕೊಡಬೇಕಿತ್ತು.

ಆ ವ್ಯಕ್ತಿ ಚಿಂತಿಸಲಿಲ್ಲ. ನೇರ ದುರ್ಗಾಕೇರಿಯ (ಹೊನ್ನಾವರ) ಕಾಸಿಂ ಸಾಹೇಬನ ಬೀಡಿ ಅಂಗಡಿಗೆ ತೆರಳಿ ಬಾಗಿಲು ತಟ್ಟಿದ. ವಿಷಯ ತಿಳಿಸಿದಾಗ ಕಾಸಿಂ ದುಡ್ಡು ತೆಗೆದಿಟ್ಟ. ಸಾಮಾನ್ಯರಾಗಿದ್ದರೆ ಅದನ್ನು ಎತ್ತಿಕೊಂಡು ಹೊರಡುತ್ತಿದ್ದರು.

ಆದರೆ ಹಣದ ಅಗತ್ಯವಿದ್ದವ ಅಪ್ಪಟ ಸ್ವಾಭಿಮಾನಿ. ಬ್ಯಾಡ್ವೋ ಸೈಬ. ಒಂದಾಣೆಯಷ್ಟು ಬೀಡಿ ಕಟ್ಟಿ ಕೊಡ್ತೇನೆ ಎಂದ. ಬೀಡಿ-ಗೀಡಿ ಏನೂ ಬ್ಯಾಡ ಮಾಣಿ, ರೊಕ್ಕ ತಗಂಡು ಹೋಗೆಂದು ಕಾಸಿಂ ಜಬರ್‌ದಸ್ತ್ ಮಾಡಿದ. ಈ ಮನುಷ್ಯ ಬಿಡಬೇಕಲ್ಲ... ಹಠಮಾರಿಯೂ ಹೌದು. ಬೀಡಿ ಸುತ್ತುವುದಕ್ಕೇ ಕುಳಿತ. ಹತ್ತು ಜಾಸ್ತಿಯೇ ಬೀಡಿ ಕಟ್ಟಿದ. ನಂತರ ದುಡ್ಡು ತೆಗೆದುಕೊಂಡು ದೋಣಿ ಏರಿದ.

ಹೀಗೆ ತಾಪತ್ರಯ ಪಟ್ಟುಕೊಂಡೂ ತನ್ನತನ ಉಳಿಸಿಕೊಂಡವರು ಯಕ್ಷಗಾನದ ‘ಲೆಜೆಂಡ್’ ಕೆರೆಮನೆ ಶಿವರಾಮ ಹೆಗಡೆ. ಶಿವರಾಮ ಹೆಗಡೆ ನೆನಪಾದಾಗ ಸ್ವಾತಂತ್ರ್ಯ ಪೂರ್ವದ ಈ ಘಟನೆಯನ್ನು ಉತ್ತರ ಕನ್ನಡದ ಹಳಬರು ಈಗಲೂ ಮೆಲುಕು ಹಾಕುತ್ತಾರೆ. ಜತೆಗೇ ಅವಂಗೆ ಸಿಕ್ಕಾಪಟ್ಟೆ ‘ಶರ್ಕೆ’ (ಹಠ) ಇತ್ತು. ಎಂತಹ ಮೇಳ ಕಟ್ಟಿದ. ರಾಷ್ಟ್ರಪ್ರಶಸ್ತಿಗೂ ಭಾಜನನಾದ ಎಂದು ಸೇರಿಸುತ್ತಾರೆ.

ಮಹಾನ್ ಸಾಧನೆ[ಬದಲಾಯಿಸಿ]

ಶಿವರಾಮ ಹೆಗಡೆ ಕಾಲದಲ್ಲಿ ಮೇಳದ ಬಹುದೊಡ್ಡ ಸಾಧನೆಯೆಂದರೆ ಸುಸಂಸ್ಕೃತರು, ವಿದ್ವಾಂಸರು, ಯಕ್ಷಗಾನೇತರ ಕ್ಷೇತ್ರದ ಸಹೃದಯರನ್ನು ಈ ಕಲೆಯೆಡೆಗೆ ಎಳೆತಂದಿದ್ದು. ಈ ಮೂಲಕ ಯಕ್ಷಗಾನಕ್ಕೊಂದು ಗೌರವದ ಕವಚ ತೊಡಿಸಿದ್ದು. ಶಿವರಾಮರ ಪುತ್ರ ಶಂಭು ಹೆಗಡೆ ಇದನ್ನು ವಿಸ್ತರಿಸುತ್ತ ಹೋದರು. ಕಲಾವಿದ, ಯಜಮಾನ, ಹೊಸತನದ ಆವಿಷ್ಕಾರದ ಸೃಜನಶೀಲರಾಗಿ ಬಡಗು ತಿಟ್ಟಿನ ಸೊಬಗನ್ನು ಶಿಸ್ತುಬದ್ಧಗೊಳಿಸಿದರು. ಮಹಾಬಲ ಹೆಗಡೆ, ಗಜಾನನ ಹೆಗಡೆ, ನೆಬ್ಬೂರು ಭಾಗವತರೊಂದಿಗಿನ ಶಂಭು ಹೆಗಡೆಯವರ ಮೇಳ ಸುವರ್ಣ ಯುಗ ಕಂಡಿದೆ. ಯಕ್ಷಗಾನದ ಅಗ್ರೇಸರನಾಗಿ ಮೇಳವನ್ನು ಮುನ್ನಡೆಸಿದ ಶಂಭು ಹೆಗಡೆ, ಗುಣವಂತೆಯಲ್ಲಿ 'ದಿ. ಶಿವರಾಮ ಹೆಗಡೆ ರಂಗಮಂದಿರ' ಕಟ್ಟಿದ್ದಾರೆ. ಯಕ್ಷಗಾನ ಶಾಲೆಯೂ ಇದೆ. ಈ ಎಲ್ಲದರ ವಾರಸುದಾರಿಕೆಯೀಗ ಶಂಭು ಹೆಗಡೆಯವರ ಪುತ್ರ ಕೆರೆಮನೆ ಶಿವಾನಂದ ಹೆಗಡೆಯವರ ಹೆಗಲೇರಿದೆ. ಅವರೂ ತಮ್ಮ ಅಜ್ಜನವರು ಮತ್ತು ತಂದೆಯವರು ಹಾಕಿಕೊಟ್ಟ ಯಕ್ಷಮಾರ್ಗದಲ್ಲಿ ಸಾಕಷ್ಟು ದೂರ ಸಾಗಿ ಅವರಿಬ್ಬರ ಹೆಸರನ್ನು ಅಜರಾಮರಗೊಳಿಸಿದ್ದಾರೆ.

ಮನೆತನದ ಮೂವರಿಗೆ ಅಕಾಡೆಮಿ ಪ್ರಶಸ್ತಿ[ಬದಲಾಯಿಸಿ]

ಇಡಗುಂಜಿ ಮೇಳದ ಬಗ್ಗೆ ಸಂಶೋಧನಾ ಗ್ರಂಥ (ಡಾ. ರಾಮಕೃಷ್ಣ ಜೋಶಿ ಅವರಿಂದ) ಬಂದಿದೆ. ಶಂಭು ಹೆಗಡೆಯವರ ಕುರಿತೇ ಡಾ.ಜಿ.ಎಸ್. ಭಟ್ಟರು ಅಧ್ಯಯನ ಗ್ರಂಥ ಬರೆದಿದ್ದಾರೆ. ಮನೆತನದ ಮೂವರು ಮೇರು ಕಲಾವಿದರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಸಂದಿದೆ. ಮಂಡಳಿ ತನ್ನ ಪ್ರತಿ ಹೆಜ್ಜೆ ಗುರುತನ್ನೂ ದಾಖಲಿಸುತ್ತಿದೆ. ಯಕ್ಷಗಾನದ ಇತಿಹಾಸದಲ್ಲೇ ಇದೊಂದು ಮೈಲುಗಲ್ಲು..

ಮಾಹಿತಿ ಕೃಪೆ[ಬದಲಾಯಿಸಿ]

ಶಶಿಧರ ಹೆಗಡೆ ನಂದಿಕಲ್ ಅವರ ಲೇಖನ

ಯಕ್ಷಗಾನ ಕಲಾವಿದರು