ಕುಶ ಲವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸೀತಾ ಮತ್ತು ರಾಮನ ಅವಳಿ ಪುತ್ರರಾದ ಲಾವಾ ಮತ್ತು ಕುಶ್ ಅವರೊಂದಿಗೆ ಸೆರೆಹಿಡಿದ ಕುದುರೆ (1910 ರ ಚಿತ್ರಕಲೆ)

ಕುಶ ಲವ - ಸೀತಾಮಾತೆಯ ಅವಳೀ ಮಕ್ಕಳು. ಕುಶ ಹಿರಿಯವ, ಲವ ಕಿರಿಯವ. ಲೋಕಾಪವಾದಕ್ಕೆ ಹೆದರಿದ ಶ್ರೀರಾಮ ಗರ್ಭಿಣಿಯಾದ ಸೀತೆಯನ್ನು ಕಾಡಿಗಟ್ಟಿದನಷ್ಟೆ. ತನ್ನ ದುರವಸ್ಥೆಗಾಗಿ ಶೋಕಿಸುತ್ತಿದ್ದ ಸೀತೆಯನ್ನು ವಾಲ್ಮೀಕಿ ಮಹರ್ಷಿ ಗುರುತಿಸಿ ತನ್ನ ಆಶ್ರಮಕ್ಕೆ ಕರೆದೊಯ್ದು ಸಂತೈಸಿದ. ಅಲ್ಲಿ ಸೀತೆ ಅವಳಿ ಮಕ್ಕಳನ್ನು ಪಡೆದಳು. ಹರ್ಷಭರಿತನಾದ ವಾಲ್ಮೀಕಿ ಸೀತೆಯಲ್ಲಿಗೆ ಬಂದು ಕುಶ ಮುಷ್ಟಿಯಿಂದ ಒಂದು ಮಗುವನ್ನೂ ಲವ ಮುಷ್ಟಿಯಿಂದ ಮತ್ತೊಂದನ್ನೂ ರಕ್ಷೆಮಾಡಿ ಇಬ್ಬರಿಗೂ ಕುಶ, ಲವರೆಂದು ನಾಮಕರಣ ಮಾಡಿದ. ಮಕ್ಕಳಿಬ್ಬರೂ ಸಕ್ರಮವಾಗಿ ವಾಲ್ಮೀಕಿ ಮುನಿಯಿಂದ ಅನ್ನಪ್ರಾಸನಾದಿ ಸಂಸ್ಕಾರಗಳನ್ನು ಪಡೆದು ವಿದ್ಯಾಸಂಪನ್ನರಾದರು. ಆ ಬಳಿಕ ತಾನು ರಚಿಸಿದ 24 ಸಾವಿರ ಗ್ರಂಥ ಪರಿಮಿತಿಯುಳ್ಳ ರಾಮಾಯಣವನ್ನು ವಾದ್ಯಸಹಿತ ಸುಶ್ರಾವ್ಯವಾಗಿ ಹಾಡುವುದನ್ನು ವಾಲ್ಮೀಕಿ ಆ ಮಕ್ಕಳಿಗೆ ಕಲಿಸಿದ. ಇಬ್ಬರೂ ಆ ಕಾವ್ಯವನ್ನು ಅಲ್ಲಲ್ಲಿ ಗಾಯನಮಾಡಿ ಎಲ್ಲರನ್ನೂ ಸಂತೋಷಗೊಳಿಸುತ್ತಿದ್ದರು. ಅತ್ತ ಶ್ರೀರಾಮ ಅಶ್ವಮೇಧ ದೀಕ್ಷೆಯನ್ನು ವಹಿಸಿ, ಕುದುರೆಯ ಅಂಗರಕ್ಷಕನಾಗಿ ಲಕ್ಷ್ಮಣನನ್ನು ಕಳುಹಿಸಿದ. ಕುದುರೆ ನಿರುಪಾಧಿಕವಾಗಿ ಹಿಂತಿರುಗಿತು. ನೈಮಿಶಾರಣ್ಯದಲ್ಲಿ ನಡೆದ ಯಜ್ಞಕ್ಕೆ ವಾಲ್ಮೀಕಿ ಶಿಷ್ಯರೊಂದಿಗೆ ಹೋಗಿ ಸತ್ಕುøತನಾದ. ಮರುದಿನ ಯಜ್ಞವಾಟಿಕೆಯಲ್ಲಿ ಕುಶ, ಲವರು ರಾಮಾಯಣವನ್ನು ಹಾಡತೊಡಗಿದರು. 20 ಸರ್ಗಗಳ ವರೆಗೆ ಕೇಳಿದ ಶ್ರೀರಾಮ ಲಕ್ಷ್ಮಣನನ್ನು ಕರೆದು ಇಬ್ಬರು ಗಾಯಕರಿಗೂ ಪ್ರತ್ಯೇಕವಾಗಿ 18 ಸಹಸ್ರ ವರಹಗಳನ್ನೂ ಜೊತೆಗೆ ಅಪೇಕ್ಷಿತ ವಸ್ತುಗಳನ್ನೂ ಕೊಟ್ಟು ಗೌರವಿಸುವಂತೆ ಹೇಳಿದ. ಆದರೆ ಆ ಬಾಲಕರು ತಾಪಸರಾದ ತಮಗೆ ದ್ರವ್ಯದ ಅಗತ್ಯವಿಲ್ಲವೆಂದೂ ಲಾಲಿಸುವುದಾದರೆ ಸಂಪೂರ್ಣ ರಾಮಾಯಣವನ್ನು ಹಾಡುವುದಾಗಿಯೂ ರಾಮನಿಗೆ ತಿಳಿಸಿದರು. ಮಕ್ಕಳ ಕೋರಿಕೆಗೆ ಶ್ರೀರಾಮ ಸಮ್ಮತಿಸಿದ. ಅಂದು ಕುಶ, ಲವರು ಸೀತಾ ಪರಿತ್ಯಾಗದವರೆಗೆ ಹಾಡಿ ನಿಲ್ಲಿಸಿದರು. ಮರುದಿನ ಪ್ರಾತಃಕಾಲ ಎಲ್ಲರೂ ಯಜ್ಞವಾಟಿಕೆಯಲ್ಲಿ ಸೇರಿದಾಗ ವಾಲ್ಮೀಕಿ ಸೀತೆ ಮತ್ತು ಕುಶ, ಲವರನ್ನು ಹಿಂದಿಟ್ಟುಕೊಂಡು ಬಂದು ಸೀತೆಯನ್ನು ಪರಿಗ್ರಹಿಸೆಂದು ರಾಮನಿಗೆ ಹೇಳಿ ಅಲ್ಲಿನ ವರೆಗೂ ನಡೆದ ವೃತ್ತಾಂತವನ್ನು ತಿಳಿಸಿದ. ರಾಮ ಸಮ್ಮತಿಸಿದ. ನೆರೆದ ಸಮೂಹ ಆನಂದಭರಿತವಾಯಿತು. ಆದರೆ ಸೀತೆ ರಾಮನ ಸಂಗವನ್ನು ಮತ್ತೆ ಬಯಸದೆ ತಾನು ಪರಿಶುದ್ಧಳಾಗಿದ್ದರೆ ಭೂದೇವಿ ತನ್ನನ್ನು ಐಕ್ಯಗೊಳಿಸುವಂತೆ ಬೇಡಿದಳು. ಒಡನೆಯೇ ಭೂಮಾತೆ ಅನುಗ್ರಹಿಸಲಾಗಿ ಸೀತೆ ಕಣ್ಮರೆಯಾದಳು. ರಾಮನ ಯಜ್ಞ ಸಂಪೂರ್ಣವಾದ ಬಳಿಕ ಎಲ್ಲರೂ ಅಯೋಧ್ಯೆಗೆ ಹಿಂತಿರುಗಿದರು. ಇದು ರಾಮಾಯಣದಿಂದ ತಿಳಿದುಬರುವ ವೃತ್ತಾಂತ.[೧]

ಶತ್ರುಘ್ನನು ಲಾವಾ-ಕುಶಾರನ್ನು ಮಾತನಾಡಿಸುವ ಸಂದರ್ಭ

ಪಟ್ಟಾಭಿಷೇಕ

ಲಕ್ಷ್ಮಣನಿರ್ಯಾಣಾನಂತರ ರಾಮ ಪ್ರಿಯಪುತ್ರರಾದ ಕುಶ ಮತ್ತು ಲವರಿಗೆ ಪಟ್ಟಾಭಿಷೇಕ ಮಾಡಿ, ವಿಂಧ್ಯಪರ್ವತದ ಬಳಿ ಕುಶಾವತಿ, ಶ್ರಾವಸ್ತಿ ಎಂಬ ಪಟ್ಟಣಗಳನ್ನು ನಿರ್ಮಿಸಿ ಅಲ್ಲಿ ಅವರನ್ನು ನಿಲ್ಲಿಸಿದ. ಕುಶನಿಗೆ ಚಂಪಕಾ, ಕುಮುದ್ವತಿ ಎಂಬ ಪತ್ನಿಯರಿದ್ದರೆಂದು ಉತ್ತರ ರಾಮಚರಿತ್ತೆಯಿಂದ ತಿಳಿದು ಬರುತ್ತದೆ.[೨]

ಕಾವ್ಯಗಳಲ್ಲಿ ಕುಶ ಲವರು

ಲಕ್ಷ್ಮೀಶನ ಪ್ರಸಿದ್ಧ ಕಾವ್ಯವಾದ ಜೈಮಿನಿ ಭಾರತದಲ್ಲಿ ರಾಮ ಕುಶ, ಲವರ ಕಾಳಗವನ್ನು ವಿಸ್ತಾರವಾಗಿ ವರ್ಣಿಸಲಾಗಿದೆ. ಅಲ್ಲಿ ಉಕ್ತವಾಗಿರುವಂತೆ ಶ್ರೀರಾಮ ಅಶ್ವಮೇಧ ಯಜ್ಞದೀಕ್ಷೆ ತೊಟ್ಟು ಶತ್ರುಘ್ನನನ್ನು ಯಜ್ಞಾಶ್ವದ ಅಂಗರಕ್ಷಕನಾಗಿ ನಿಯಮಿಸಿ ಕುದುರೆಯನ್ನು ಭೂಪ್ರದಕ್ಷಿಣೆಗೆ ಬಿಟ್ಟ. ಅದು ಸಂಚರಿಸಿ ವಾಲ್ಮೀಕಿಯ ಆಶ್ರಮವನ್ನು ಹೊಕ್ಕಿತು. ಲವ ಆ ಕುದುರೆಯನ್ನು ಹಿಡಿದು ಕಟ್ಟಿಹಾಕಿ ಶತ್ರುಘ್ನನೊಂದಿಗೆ ಯುದ್ಧ ಮಾಡಿ ಮೂರ್ಛಿತನಾದ. ಆಗ ಶತ್ರುಘ್ನ ಮೂರ್ಛೆಗೊಂಡ ಲವನನ್ನು ರಥದ ಮೇಲೆ ಇಟ್ಟುಕೊಂಡು ಯಜ್ಞಾಶ್ವದ ಜೊತೆಗೆ ಅಯೋಧ್ಯಾಭಿಮುಖಕನಾದ. ಇದನ್ನು ತಿಳಿದ ಕುಶ ಧನುರ್ಬಾಣಧರನಾಗಿ ಬಂದು ಶತ್ರುಘ್ನನನ್ನು ಇದಿರಿಸಿ, ಸೋಲಿಸಿ, ಮೂರ್ಛೆಗೊಳಿಸಿ ಲವನನ್ನು ಬಿಡಿಸಿಕೊಂಡು ಹೋದ. ಈ ಸುದ್ದಿ ತಿಳಿದು ರಾಮ ಅಯೋಧ್ಯೆಯಿಂದ ಲಕ್ಷ್ಮಣನನ್ನು ಸೇನೆಯ ಸಮೇತ ಕಳುಹಿಸಿದ. ಲಕ್ಷ್ಮಣನೂ ಮೂರ್ಛಿತನಾಗಲು, ಭರತ ಯುದ್ಧ ರಂಗಕ್ಕೆ ಬಂದ. ಅವನಿಗೂ ಅದೇ ಗತಿಯಾಯಿತು. ಕಡೆಗೆ ಶ್ರೀರಾಮನೇ ಸ್ವತಃ ಬಂದು ಯುದ್ಧಮಾಡಬೇಕಾಯಿತು. ರಾಮ ಈ ತರಳರನ್ನು ನೋಡಿದಾಗ ಆಂತರಿಕ ಸ್ನೇಹಭಾವ ಮೂಡಿತು. ಉದಾಸೀನಗೊಂಡ ರಾಮ ಯುದ್ದದಲ್ಲಿ ನಿರಾಸಕ್ತಿ ತೋರಿದ. ಅದೇ ಸಮಯದಲ್ಲಿ ಕುಶಲವರು ರಾಮನ ಮೇಲೆ ಯುದ್ಧ ಹೂಡಿ ಅವನನ್ನು ಮೂರ್ಛೆಗೆಡಹಿದರು. ಅಷ್ಟರಲ್ಲಿ ಯಜ್ಞಾರ್ಥವಾಗಿ ಹೋಗಿದ್ದ ವಾಲ್ಮೀಕಿಮುನಿ ಆಶ್ರಮಕ್ಕೆ ನಡೆದ ಸಮಾಚಾರ ತಿಳಿದು ಭಯಭೀತನಾಗಿ ರಣರಂಗಕ್ಕೆ ಬಂದು ತನ್ನ ಅಮೃತಮಯ ದೃಷ್ಟಿಯಿಂದ ರಾಮಾದಿಗಳನ್ನು ಬದುಕಿಸಿ ಸೀತೆಯನ್ನೂ ಕುಶಲವರನ್ನೂ ರಾಮನಿಗೆ ಒಪ್ಪಿಸಿದ. ರಾಮ ವಾಲ್ಮೀಕಿ ಮುನಿಗೆ ವಂದಿಸಿ ಪತ್ನೀಪುತ್ರ ಸೋದರರೊಡನೆ ಅಯೋಧ್ಯೆಗೆ ಹಿಂತಿರುಗಿದ.

ಜನಪದದಲ್ಲಿ ಕುಶಲವರು

ಲವಕುಶರ ಕಾಳಗದ ಬಗ್ಗೆ ಅನೇಕ ಯಕ್ಷಗಾನ ಬಯಲಾಟಗಳಿವೆ.

ಉಲ್ಲೇಖ

  1. https://www.holybooks.com/ramayana/
  2. https://books.google.com/books?id=4Wzg6wFJ5xwC&pg=PR21&dq=RAMAYANA+TOOK+PLACE+IN+TRETA+YUG&hl=en&sa=X&redir_esc=y#v=onepage&q=RAMAYANA%20TOOK%20PLACE%20IN%20TRETA%20YUG&f=false
"https://kn.wikipedia.org/w/index.php?title=ಕುಶ_ಲವ&oldid=948796" ಇಂದ ಪಡೆಯಲ್ಪಟ್ಟಿದೆ