ವಿಷಯಕ್ಕೆ ಹೋಗು

ಕುಳಿಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಂಚುಳ್ಳ ಕುಳಿಗಳು

ವ್ಯಾಸ್ಕುಲರ್ (ನಾಳಮಯ) ಸಸ್ಯಗಳಲ್ಲಿನ ಕೆಲವು ಬಗೆಯ ಜೀವಕೋಶಗಳ ಆನುಷಂಗಿಕ ಕೋಶಭಿತ್ತಿಯಲ್ಲಿ ಕಾಣಬರುವ ವಿಶೇಷ ರೀತಿಯ ಗುಂಡಿಗಳು (ಪಿಟ್ಸ್). ಕಾಲೆಂಕಿಮ, ಸ್ಕ್ಲೀರೆಂಕಿಮ, ನೀರ್ನಾಳ ಹಾಗೂ ನೀರ್ನಳಿಕೆ(ವೆಸಲ್ ಮತ್ತು ಟ್ರೆಕೀಡ್), ಆಹಾರನಾಳಗಳಲ್ಲಿನ ನಾರುಗಳು ಮುಂತಾದ ಜೀವಕೋಶಭಿತ್ತಿಯ (ಪ್ರೈಮರಿ ವಾಲ್) ಮೇಲೆ ಆನುಷಂಗಿಕ (ಸೆಕೆಂಡರಿ) ಕೋಶಭಿತ್ತಿ ಸಂಗ್ರಹಗೊಳ್ಳುತ್ತದೆ. ಆಗ ಕೋಶಭಿತ್ತಿಯ ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಈ ಸಂಗ್ರಹ ಇರುವುದಿಲ್ಲ. ಇಂಥ ಪ್ರದೇಶಗಳು ನಿರ್ದಿಷ್ಟ ಆಕಾರದ ತಗ್ಗು ಪ್ರದೇಶಗಳಾಗಿ ಉಳಿದು ಕುಳಿಗಳೆನಿಸಿಕೊಳ್ಳುತ್ತದೆ. ಈ ಕುಳಿಗಳ ಮೂಲಕ ಅಕ್ಕಪಕ್ಕದ ಜೀವಕೋಶಗಳಿಗೆ ಪರಸ್ಪರ ಸಂಪರ್ಕ ಕಲ್ಪಿತವಾಗಿ ನೀರು ಮತ್ತು ಕರಗಿದ ಲವಣ ಹಾಗೂ ಇತರ ವಸ್ತುಗಳು ಕೋಶದಿಂದ ಕೋಶಕ್ಕೆ ಹಾಯ್ದುಹೋಗಲು ಅನುಕೂಲವಾಗುತ್ತದೆ. ಒಂದೊಂದು ಕುಳಿಯಲ್ಲೂ ಮಧ್ಯದಲ್ಲಿ ಆನುಷಂಗಿಕ ಕೋಶಭತ್ತಿ ಸಂಗ್ರಹಗೊಳ್ಳದ ತೆಳುವಾದ ಭಾಗವಿದೆ. ಇದಕ್ಕೆ ಕುಳಿಕ್ಷೇತ್ರವೆಂದು ಹೆಸರು. ಈ ಕ್ಷೇತ್ರದಲ್ಲಿ ಪ್ರಥಮ ಕೋಶಭತ್ತಿ ಹಾಗೂ ಮಧ್ಯಪದರ ಮಾತ್ರ ಇವೆ. ಇವೆರಡನ್ನೂ ಒಟ್ಟಾಗಿ ಕುಳಿಪೂರೆ ಎನ್ನಲಾಗುತ್ತದೆ. ಸಾಮಾನ್ಯವಾಗಿ ಅಕ್ಕಪಕ್ಕದ ಏರಡು ಜೀವಕೋಶಗಳ ಕುಳಿಗಳು ಒಂದು ಜೀವಕೋಶದ ಕಡೆಗೆ ಒಂದು ಇನ್ನೊಂದರ ಕಡೆಗೆ ಇನ್ನೊಂದು ಹೀಗೆ ಜೊತೆಯಾಗಿರುತ್ತವೆ. ಇವನ್ನು ಕುಳಿಜೋಡಿ ಎನ್ನಲಾಗುತ್ತದೆ. ಕುಳಿಪೊರೆಯಿಂದ ಮುಂದಕ್ಕೆ ಚಾಚಿದ ಸೂಕ್ಷ್ಮವಾದ ಕುಳಿ ಅವಕಾಶ ಅಥವಾ ಕೋಣೆಯೂ ಅದರ ಹೊರಭಾಗದಲ್ಲಿ ಕುಳಿದ್ವಾರವೂ ಇವೆ.

ಮುಖ್ಯ ವಿಧಗಳು

[ಬದಲಾಯಿಸಿ]

ಕುಳಿಗಳಲ್ಲಿ ಸರಳ ಕುಳಿಗಳು (ಸಿಂಪಲ್ ಪಿಟ್ಸ್) ಮತ್ತು ಅಂಚುಳ್ಳ ಕುಳಿಗಳು (ಬಾರ್ಡರ್ಡ್‍ಪಿಟ್ಸ್) ಎಂದು ಎರಡು ಬಗೆಗಳಿವೆ. ಸರಳ ಕುಳಿಗಳಲ್ಲಿ ಕುಳಿಯ ಅವಕಾಶ ತನ್ನ ಅಗಲದಲ್ಲಿ ಏಕಪ್ರಕಾರವಾಗಿದೆ. ಸರಳ ಕುಳಿಯ ಆಕಾರ ದುಂಡು ಅಂಡದಂತೆ ಬಹುಮೂಲೆಯಂತೆ ಉದ್ದುದ್ದವಾಗಿ ಇರಬಹುದು. ಇಲ್ಲವೆ ನಿರ್ದಿಷ್ಟ ಆಕಾರವಿಲ್ಲದಿರಬಹುದು. ಕುಳಿಪೂರೆ ಒಂದೇ ಸಮವಾಗಿದ್ದು ಎಲ್ಲಿಯೂ ಉಬ್ಬಿರುವುದಿಲ್ಲ. ಕುಳಿಯ ದ್ವಾರದ ಮತ್ತು ಕುಳಿ ಅವಕಾಶದ ಅಗಲ ಒಂದೇ. ಪರೆಂಕಿಮ, ಕಾಲೆಂಕಿಮ, ಆಹಾರವಾಹಕ ಅಂಗಾಂಶದ ನಾರುಗಳು, ಕಲ್ಲುಕೋಶಗಳು (ಸ್ಕ್ಲೀರಿಡ್ಸ್), ಹೂ ಬಿಡುವ ಸಸ್ಯಗಳ ನೀರ್ನಾಳ ಹಾಗೂ ನೀರ್ನಳಿಕೆಗಳು ಮುಂತಾದ ಜೀವಕೋಶಗಳಲ್ಲಿ ಅಲ್ಲಲ್ಲಿ ಸೂಕ್ಷ್ಮವಾದ ನಾಳಗಳಂತೆ ಚಾಚಿ ಕವಲೊಡೆದಿರುತ್ತವೆ. ಇವಕ್ಕೆ ಕುಳಿ ಕಾಲುವೆಗಳೆಂದು (ಪಿಟ್ ಕೆನಾಲ್ಸ್) ಹೆಸರು. ಅಂಚುಳ್ಳ ಕುಳಿಗಳು ಜಟಿಲ ಬಗೆಯವು. ಇವು ಸರಳ ಕುಳಿಗಳಿಂದ ಹಲವು ಲಕ್ಷಣಗಳಲ್ಲಿ ಭಿನ್ನವಾಗಿವೆ. ಕುಳಿಯ ಅವಕಾಶ ಏಕಪ್ರಕಾರವಾಗಿಲ್ಲದೆ ಒಂದು ರೀತಿಯ ಆಲಿಕೆಯಂತಿದೆ. ಕುಳಿಪೊರೆಯ ಸಮೀಪದಲ್ಲಿ ಅವಕಾಶ ಅಗಲವಾಗಿಯೂ ದ್ವಾರದ ಬಳಿ ಕಿರಿದಾಗಿಯೂ ಇದೆ. ಆನುಷಂಗಿಕ ಕೋಶಭಿತ್ತಿ ಕುಳಿಯ ಅವಕಾಶದ ಸುತ್ತ ಬಾಗಿದ ಕಮಾನಿನಂತೆ ಚಾಚಿಕೊಂಡಿದ್ದು ಒಂದು ಬಗೆಯ ಅಂಚನ್ನು ನಿರ್ಮಿಸಿದೆ. ಇದರಿಂದಲೇ ಈ ರೀತಿಯ ಕುಳಿಗೆ ಅಂಚುಳ್ಳ ಕುಳಿ ಎಂದು ಹೆಸರು. ಕುಳಿಪೊರೆಯೂ ಏಕಪ್ರಕಾಶವಾಗಿರದೆ ಕುಳಿದ್ವಾರಕ್ಕೆ ಅಭಿಮುಖವಾಗಿ ಕೇಂದ್ರ ಭಾಗದಲ್ಲಿ ಕೊಂಚ ಉಬ್ಬಿಕೊಂಡಿದೆ. ಉಬ್ಬಿರುವ ಈ ಭಾಗಕ್ಕೆ ಟೋರಸ್ ಎಂದು ಹೆಸರು. ಟೋರಸಿಗೆ ಆಚೀಚೆ ಚಲಿಸುವ ಶಕ್ತಿಯಿದ್ದು ಇದು ಕೋಶದಿಂದ ಕೋಶಕ್ಕೆ ದ್ರವಸಾಗಣೆಯನ್ನು ನಿಯಂತ್ರಿಸುತ್ತದೆ. ಕುಳಿಪೊರೆಯ ಸುತ್ತಲೂ ಒತ್ತಡ ಒಂದೇ ಸಮವಾಗಿದ್ದಿರೆ ಮಾತ್ರ ಟೋರಸ್ ಕೇಂದ್ರ ಭಾಗದಲ್ಲಿದ್ದು ದ್ರವಗಳ ವಹನ ಸರಾಗವಾಗಿ ನಡೆಯಬಲ್ಲುದು. ಹಾಗಲ್ಲದೆ ಒತ್ತಡ ಒಂದು ಕಡೆಗೆ ಹೆಚ್ಚಾದರೆ ಟೋರಸ್ ಒಂದು ಕಡೆವಾಲಿಕೊಂಡು ದ್ರವವಹನ ಕುಂಠಿತವಾಗುವಂತೆ ಮಾಡುತ್ತದೆ. ಅನಾವೃತ ಹಾಗೂ ಆವೃತಬೀಜ ಸಸ್ಯಗಳ ನೀರ್ನಾಳಗಳಲ್ಲೂ ಅಂಚುಳ್ಳ ಕುಳಿಗಳಿವೆ. ಟೆರಿಡೊಫೈಟ್ ಸಸ್ಯಗಳಲ್ಲೂ ಇವು ಕಾಣಬರುತ್ತವೆ.[೧]

ಇತರೆ ವಿಧಗಳು

[ಬದಲಾಯಿಸಿ]

ಕೆಲವು ಬಗೆಯ ಜೀವಕೋಶಗಳಲ್ಲಿ ಅಕ್ಕಪಕ್ಕದ ಜೀವಕೋಶಗಳಲ್ಲಿ ಒಂದು ಜೀವಕೋಶದಬದಿಗೆ ಅಂಚುಳ್ಳ ಕುಳಿಯೂ ಇನ್ನೊಂದು ಜೀವಕೋಶದ ಬದಿಗೆ ಸರಳಕುಳಿಯೂ ಇರುತ್ತವೆ. ಇಂಥ ಕುಳಿ ಜೋಡಿಗೆ ಅರೆಅಂಚುಳ್ಳ ಕುಳಿ ಎಂದು ಹೆಸರು. ಕುಳಿಯ ರಚನೆಯ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಸಲುವಾಗಿ ಎಲೆಕ್ಟ್ರಾನ್ ಸೂಕ್ಷ್ಮದರ್ಶಕ ಅಧ್ಯಯನವೂ ನಡೆದಿದೆ. ಫ್ರೆವೈಸ್ಲಿಂಗ್ ಎಂಬಾತ 1956ರಲ್ಲಿ ಈ ದಿಶೆಯಲ್ಲಿ ಹೆಚ್ಚಿನಅಧ್ಯಯನ ನಡೆಸಿ ಕುಳಿಪೊರೆ ಸೂಕ್ಷ್ಮವಾದ ಎಳೆಗಳಿಂದ ರಚಿತವಾದ ಪದರವೆಂದು ಈ ಎಳೆಗಳು ಅನಿರ್ದಿಷ್ಟ ಕ್ರಮದಲ್ಲಿ ಒಂದರೊಡನೊಂದು ಹೆಣೆದುಕೊಂಡಿವೆಯೆಂದೂ ತಿಳಿಸಿದ್ದಾರೆ. ಈ ರೀತಿಯ ಹೆಣೆಯುವಿಕೆಯಿಂದ ಒಂದು ಬಗೆಯ ಬಲೆಯುಂಟಾಗಿ ಅದರ ರಂಧ್ರಗಳ ಮೂಲಕ ದ್ರವವಸ್ತುವಿನ ಚಲನೆ ಸಾಗುತ್ತದೆಯೆಂದೂ ಹೇಳಿದ್ದಾರೆ.

ಉಲ್ಲೇಖ

[ಬದಲಾಯಿಸಿ]
  1. [೧] Simple and Bordered Pits
"https://kn.wikipedia.org/w/index.php?title=ಕುಳಿಗಳು&oldid=787997" ಇಂದ ಪಡೆಯಲ್ಪಟ್ಟಿದೆ